ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು. ಕಂದನೊಳಗಣ ಸ್ವಪ್ನ ಮುಂದುದೋರುವುದೇ ? ಚಂದ್ರಕಾಂತಶಿಲೆಯಲ್ಲಿ ರತ್ನವ ಕಂಡೆನೆಂಬ ಅಹಂಕಾರ ನಿನಗೇಕೆ ಶರಣಾ? ಕೈಯ ಕುರುಹಳಿಯದು, ಬಾಯ ಮೊರೆ ಮಿಗೆವರಿಯುತ್ತಿದೆ, ಕೂಡಲಚೆನ್ನಸಂಗಯ್ಯನಲ್ಲಿ ಬಸವನೂ ಪ್ರಭುವೂ ಇಬ್ಬರೂ ಮರುಳಾದರು.
--------------
ಚನ್ನಬಸವಣ್ಣ
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ, ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು ಬೆಳಸನೀವ ಪರಿಯಿನ್ನೆಂತೊ, ಮರುಳು ಮಾನವಾ ? ಗುರುವಿತ್ತ ಲಿಂಗವ ತೊರೆ ತೊರೆದು ಮರಳಿ ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೊ ? ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವಡೆ ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು
--------------
ಚನ್ನಬಸವಣ್ಣ
ಒಕ್ಕುದ ಮಿಕ್ಕುದ ಕೊಂಬೆನೆಂಬ ನಿಚ್ಚಳ ಶರಣನ ತೋರಾ, ಒಕ್ಕುದ ಮಿಕ್ಕುದ ಕೊಂಬೆನೆಂಬ ವಿವರವ ಬಲ್ಲಡೆ ಹೇಳಿರೆ ? ಒಕ್ಕುದೆಂಬುದೆ ಕಾಯ, ಮಿಕ್ಕುದೆಂಬುದೆ ಪ್ರಾಣ ಈ ಉಭಯವೆ ತಕ್ಕುದೆಂದರಿತುಕೊಳ್ಳ ಬಲ್ಲಡೆ ಸಿಕ್ಕುವ ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಒಮ್ಮೆಯಲ್ಲದಿಮ್ಮೆಯುಂಟೆ ಪೂಜೆ ? ಒಮ್ಮೆಯಲ್ಲದಿಮ್ಮೆಯುಂಟೆ ಅರ್ಪಿತ ? ಒಮ್ಮೆಯಲ್ಲದಿಮ್ಮೆಯುಂಟೆ ಪ್ರಸಾದ ? ತಾನರ್ಪಿತವಾದ ಬಳಿಕ ಮರಳಿ ಅರ್ಪಿತವುಂಟೆ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಒಳಗೆ ಪ್ರಾಣಲಿಂಗ, ಹೊರಗೆ ಅಂಗಲಿಂಗ ಇದೇನಯ್ಯಾ ? ಮನಕೆ ಮನ ನಾಚದು ನಾಚದು. ಎರಡರ ಬಳಿವಿಡಿದು ಮರೆಗೊಂಡಾಡುವುದೇನಯ್ಯಾ ? ಈ ಎರಡರ ನಿರ್ಣಯಕ್ಕೆ ಅದು ಒಂದೆ ಎಂದು ಅರಿದರೆ ಅದೇ ಪದ-ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಒಳಗೊಂದು ಬೆಳಗುವ ಜ್ಯೋತಿಯಂತಪ್ಪ ವಿಚಾರವಿದೇನೊ ! ಅತ್ತ ಹೊದ್ದದು ತನ್ನ ತಾನು, ಇತ್ತ ಹೊದ್ದದು ಬಾಹ್ಯವಿಚಾರವ. ವಿಚಾರಿಸುವ ವಿಚಾರ ತಾನಾಗಿದ್ದುದನರಿಯದು. ಹೊದ್ದುವ ಕಾಳಿಕೆ ಇಲ್ಲಿ ಹೊದ್ದದು, ನಿಸ್ಸಂದೇಹ. ಇಲ್ಲಿ ಹೊದ್ದಿಯೂ ಹೊದ್ದದೆ ಇದ್ದಿತ್ತು ತುದಿಯಿಲ್ಲ ಮೊದಲಿಲ್ಲ ತುದಿ ಮೊದಲೆರಡೂ ಕೂಡಿಕೊಂಡು ನಡುವೆ ಅಂತರಾತ್ಮವಾಗಿದ್ದಿತ್ತು. ಜೀವಗುಣವಳಿದು, ಪರಮಾತ್ಮನ ಮುಂದೆ ಪ್ರತಿಬಿಂಬವಾಗಿದ್ದಲ್ಲಿ ಸಂಧಾನವನರಸುತ್ತಿದ್ದೆ ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಒಕ್ಕುದ ಪ್ರಸಾದವೆಂದಿಕ್ಕುವಾತನನಾಚಾರಿ; ಕೊಂಬುವಾತ ನೆಟ್ಟನೆ ವ್ರತಗೇಡಿ. ಪ್ರಸಾದವೆಂಬುದು ಹೆಸರಿಲ್ಲದ ಘನವು ! ಪ್ರಸಾದಿಯಾದಾತ ಶೂನ್ಯಶರಣ, ಇರವೆ ಲಿಂಗೈಕ್ಯ, ಪರವೆ ಪ್ರಸಾದ ! ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಗುರುವೆಂಬ ಓಗರಕ್ಕೆ ಶಿಷ್ಯನೆಂಬ ಪ್ರಸಾದ.
--------------
ಚನ್ನಬಸವಣ್ಣ
ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟದ ಗಹ್ವರದ ನವದ್ವಾರದೊಳಗೆ ಅಡಗಿಪ್ಪ ಐವರ ಕಳ್ಳರ ತಿಳಿದು ನೋಡಿರಯ್ಯಾ. ಆ ಕಳ್ಳರು ಇಹನ್ನಕ್ಕರ ಊರಿಗುಪಟಳ ಮನೆಗೆ ಮಾರಿ, Zõ್ಞಕ ಗ್ರಾಮದ ಮಧ್ಯದವರಿಗುಳುಹಿಲ್ಲ. ತನುಪ್ರಪಂಚಿಗಳು ಮನಪ್ರಪಂಚಿಗಳು ಧನಪ್ರಪಂಚಿಗಳು ವಾದಿಗಳು ತರ್ಕಿಗಳು ನಾನಾ ಕುಟಿಲ ಕುಹಕ ಬಹುಪಾಪಿಗಳೆಲ್ಲ ನೆರೆದು, ಆ ಕ?್ಳರ ಹಿಡಿದಿಹೆವೆನುತ್ತಿಹರಯ್ಯಾ. ಅದಕ್ಕೆಂಟು ಬೀದಿ ಒಂಬತ್ತು ಓಡುಗಂಡಿ ಕಾಣಬಾರದ ಕತ್ತಲೆ, ಹೆಜ್ಜೆಯ ಹೊಲಬ ಕಂಡೆಹೆನೆಂಬನು ಭ್ರಾಂತ ನೋಡಾ ! ಓಂ ಬ್ರಹ್ಮಸ್ನಾನಂ ಪವನಜ್ಞಾನಂ ಲಿಂಗಧ್ಯಾನಂ ಸುಜ್ಞಾನದರ್ಶನಂ ಪ್ರಭಾಕರಂ ದಿವಾಕರಂ ಇಂತೀ ಶ್ರುತಿಮತದಲ್ಲಿ ತಿಳಿದು ನೋಡಲಿಕೆಯಾಗಿ ಆ ಹೆಜ್ಜೆ ಹೋಯಿತು ! ಅಂಗಸಂಗನ ಹಳ್ಳಿಯ ಒಳಗೆರೆಯ ಒಸರುಬಾವಿಯ ಲಿಂಗಗೂಡಿನ ಶಿವಪುರದ ಸೀಮೆಯ, ನಿಟಿಲಪುರದ ತಲೆವಲದಲ್ಲಿ ಸಿಕ್ಕಿದ ಕ?್ಳರ ಅಂಗದ ಮೇಲೆ ಕಟ್ಟಿತಂದು ಎನ್ನೊಡೆಯ ಪ್ರಭುರಾಯಂಗೊಪ್ಪಿಸಲು ಆ ಪ್ರಭುರಾಯ ತನ್ನವರೆಂದು ಒಕ್ಕುದ ಮಿಕ್ಕುದನಿಕ್ಕಿ ರಕ್ಷಿಸುವ ಕಾಣಿರೆ ! ಇಂತಪ್ಪ ಘಟ ಪಂಚಭೂತಂಗ? ಕಟ್ಟಿ ನಿಲಿಸಿ, ಆತ್ಮಜ್ಞಾನ ಭಕ್ತಿರಸಾಮೃತಸಾರಾಯವನುಣಬಲ್ಲವರಾರೆಂದಡೆ ಪ್ರಭುವಿನ ಬಳಿಯ ಬಸವಸಂತತಿಗಲ್ಲದೆ ಅ?ವಡದು ಮಿಕ್ಕಿನ ಪ್ರಪಂಚಿಗಳಿಗೆ ಅಸಾಧ್ಯ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಒಂದನೆಯ ಬಾಗಿಲಲ್ಲಿ ನೇಹವಿಪ್ಪುದು, ಎರಡನೆಯ ಬಾಗಿಲಲ್ಲಿ ಗುಣವಿಪ್ಪುದು, ಮೂರನೆಯ ಬಾಗಿಲಲ್ಲಿ ಧ್ಯಾನವಿಪ್ಪುದು, ನಾಲ್ಕನೆಯ ಬಾಗಿಲಲ್ಲಿ ಯೋಗವಿಪ್ಪುದು, ಐದನೆಯ ಬಾಗಿಲಲ್ಲಿ ಪಂಚೇಂದ್ರಿಯ ಗುಣವಿಪ್ಪುದು, ಆರನೆಯ ಬಾಗಿಲಲ್ಲಿ ಷಡುಸ್ಥಲಂಗಳಿಪ್ಪವು, ಏಳನೆಯ ಬಾಗಿಲಲ್ಲಿ ಸಪ್ತವ್ಯಸನಂಗಳಿಪ್ಪವು, ಎಂಟನೆಯ ಬಾಗಿಲಲ್ಲಿ ಅಷ್ಟಮದಂಗಳಿಪ್ಪವು ಒಂಬತ್ತನೆಯ ಬಾಗಿಲಲ್ಲಿ ನಾದಬಿಂದುಗಳಿಪ್ಪವು, ಹತ್ತನೆಯ ಬಾಗಿಲಲ್ಲಿ ಸುಜ್ಞಾನವಿಪ್ಪುದು, ಇಂತೀ ಒಂಬತ್ತು ಬಾಗಿಲಂ ಕಳೆದು ದಶಮಬಾಗಿಲಂ ತೆಗೆದು ಹೊಕ್ಕು ಮಹಾಸುಖಿಯಾಗಿದ್ದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಒಡಲಿಲ್ಲದಾತ ಜಂಗಮ, ಪ್ರಾಣವಿಲ್ಲದಾತ ಭಕ್ತನಯ್ಯಾ. ಆಚಾರವೆ ಜಂಗಮ, ವಿಚಾರವೆ ಭಕ್ತನಯ್ಯಾ. ಆಚಾರ-ವಿಚಾರವೆಂಬುದು ಸ್ವಾನುಭಾವ ಸಂಭಾಷಣೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ ಎಡೆವರಿಯದ ಪೂಜೆಯನವರೆತ್ತ ಬಲ್ಲರು ? ಉದಯದಲಾದ ಪೂಜೆ, ಅಸ್ತಮಾನದಲೆಂಜಲೆಂಬರು, ಇಂತೆಂಬ ಭಂಗಿತರ ಮುಖವ ನೋಡಲಾಗದು. ಅಗ್ನಿಯೆಂಜಲನುಂಡು ಲಿಂಗದಲ್ಲಿ ಸಯವನರಸುವ ಭಂಗಿತರನೇನೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಒಂದೊಂದೂ ಇಲ್ಲದಂದು, ನಂದಿವಾಹನರಿಲ್ಲದಂದು, ಹಿಂದೆ ಹದಿನಾಲ್ಕು ಭುವನಗಳಿಲ್ಲದಂದು ಅಂದಾರೂ ಲಿಂಗವ ಕಂಡವರೊಳರೆ ? ಅಂದಾರೂ ಲಿಂಗವ ಕಂಡು ಹೇಳಿದವರೊಳರೆ ? ನಿರಂಧ ತಮಂಧವಿಲ್ಲದಂದು ಕೂಡಲಚೆನ್ನಸಂಗನಲ್ಲಿ ಬಸವಣ್ಣನೊಬ್ಬನೆ ಉದಯವಾದ!
--------------
ಚನ್ನಬಸವಣ್ಣ
ಒಲ್ಲೆನೆಂದೆಡೆ ಅದೆ ಭಂಗ, ಒಲಿವೆನೆಂದಡೆ ಅದೇ ಭಂಗ. ಒಲ್ಲೆ ಒಲಿವೆನೆಂಬೆರಡನು ಅಳಿದು, ತೃಪ್ತನಾದೆನೆಂದಡೆ ಅದೇ ಕೊರತೆ. ಕೂಡಲಚೆನ್ನಸಂಗಯ್ಯ ಭಕ್ತಾಧೀನನಾಗಿ, ಇಲ್ಲಿಗೆ ನಡೆದು ಬಂದ ಬಳಿಕ ಉಪಚಾರ ಉಂಟೆ ಅಯ್ಯಾ ?
--------------
ಚನ್ನಬಸವಣ್ಣ