ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾಧೀನವಲ್ಲದೆ, ಮತ್ತೊಂದನರಿಯನು. ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ. ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತ ಬಲ್ಲರೊ ? ಜಂಗಮವೆ ಲಿಂಗವೆಂಬುದನು ಭವಭಾರಿಗಳೆತ್ತ ಬಲ್ಲರೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿ ಬಸವಣ್ಣ ಬಲ್ಲ
--------------
ಚನ್ನಬಸವಣ್ಣ
ಇಲ್ಲದ ಸಂಸಾರ ಕಣ್ಣ ಮುಂದೆ ರೂಪಾಗಿ ಕಾಡುತ್ತಿರ್ದಡೆ, ಸುಜ್ಞಾನವೆಂಬ ಅಂಜನವ ಹಚ್ಚಿ, ಸಕಲಭ್ರಮೆಯೆಂಬ ಕತ್ತಲೆಯ ಕಳೆದು, ನಿಜಲಿಂಗಸಂಬಂಧವ ನೆಲೆಗೊಳಿಸಿ, ನಿತ್ಯದಲ್ಲಿ ಅಚ್ಚೊತ್ತಿದನಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ಶ್ರೀಪಾದಕ್ಕೆ ನಮೋ ನಮೋ ಎಂಬೆನು
--------------
ಚನ್ನಬಸವಣ್ಣ
ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯ ಬಿಡಲೇತಕೊ ? ಇಲ್ಲದ ಮಾಯೆಯ ಇಲ್ಲೆನಲರಿಯದೆ ತಲ್ಲಣಿಸಿ ಬಾಯ ಬಿಡಲೇತಕೊ ? ಎಲ್ಲವ, ತನ್ನ ತಾ ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ.
--------------
ಚನ್ನಬಸವಣ್ಣ
ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ ಮೇಷದಂತೆ, ಅಂತರಂಗದ ಆತ್ಮತೀರ್ಥವನುಳಿದು ಹೊರಗಿನ ಜಡಭೌತಿಕತೀರ್ಥವ ಬೆದಕಿ ಬೆಂಡಾಗಿ ಹಲವೆಡೆಗೆ ಹರಿವ ನರಗುರಿಗಳು ಕೈಸೇರಿದ ರತ್ನವನೊಗೆದು ಕಾಜಿನ ಗುಂಡನು ಕೊಂಡ ಮರುಳನಂತಾಗಿಪ್ಪರು ನೋಡಾ ! ಆತ್ಮತೀರ್ಥಂ ಸಮುತ್ಸೃಜ್ಯ ಬಹಿಸ್ತೀರ್ಥಾಣಿ ಯೋ ವ್ರಜೇತ್ ಕರಸ್ಥಂ ಸುಮಹಾರತ್ನಂ ತ್ಯಕ್ತ್ವಾ ಕಾಚಂ ವಿಮಾರ್ಗತೇ ಎಂದುದಾಗಿ, ಕೂಡಲಚೆನ್ನಸಂಗಮದೇವಾ, ನಿಮ್ಮ ನಿಲವಿನ ಗುರುಲಿಂಗಜಂಗಮವೆ ಎನ್ನ ಸ್ವರೂಪವೆಂದರಿದೆನಾಗಿ ಆ ಗುರುಲಿಂಗಜಂಗಮದ ಪಾದೋದಕವೆ ಆತ್ಮತೀರ್ಥವಾಗಿಪ್ಪುದು ಕಾಣಾ. ಅಂತಪ್ಪ ಆತ್ಮತೀರ್ಥವ ಪಡೆದು ಪರಮಪವಿತ್ರನಾಗಿಪ್ಪೆನು.
--------------
ಚನ್ನಬಸವಣ್ಣ
ಇಲ್ಲೆಂಬುದನಿಲ್ಲೆನಬಲ್ಲಡೆ ಅರ್ಪಿತ. ಉಂಟೆಂಬುದನುಂಟೆನಬಲ್ಲಡೆ ಪ್ರಸಾದ. ಆ ಪ್ರಸಾದವ ತಾನಿಲ್ಲದೆ ಕೊಳಬಲ್ಲಡೆ ಪ್ರಸಾದಿ. ಆ ಪ್ರಸಾದಿಯ ಪರಮ ಪರಿಣಾಮವೆ ಮಹಾಪ್ರಸಾದವಾಗಿ, ಆ ಮಹಾಪ್ರಸಾದವೆ ತಾನಾಗಿ ಬೆಳಗುತಿಪ್ಪನಯ್ಯಾ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಇನಿಗಡಲ ಅಣುಗನ ಕೂಡಿದ ಪತಂಗನು ತಾಮಸದಿವಸವ ಮರೆದಂತೆ. ಸತ್ವಗುಣ ರಜದಲಡಗಿ, ರಜದ ಗುಣ ತಮದಲಡಗಿ, ತಮದ ಗುಣ ರುದ್ರನೊಳಡಗಿ. ರುದ್ರನ ಗುಣ ಅಕ್ಷರಾಕ್ಷರ ಪರಶಿವನೊಳಡಗಿ, ಅಕ್ಷರಾಣಿ ಚ ಮಾತ್ರಾಣಿ ಸರ್ವೇ ಬಿಂದುಸಮಾಶ್ರಿತಾಃ ಬಿಂದುರ್ಭಿದ್ಯತೇ ನಾದಾತ್ ಸುನಾದಸ್ತೇನಭಿದ್ಯತೇ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಲ್ಲನಲ್ಲದೆ, ಅಜ್ಞಾನಿಗಳೆತ್ತ ಬಲ್ಲರು ?
--------------
ಚನ್ನಬಸವಣ್ಣ
ಇನ್ನು ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಪ್ರಸಾದಲಿಂಗ ಸಾಹಿತ್ಯವಾದುದಿಲ್ಲ. ಇನ್ನು ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಜಂಗಮಲಿಂಗ ಸಾಹಿತ್ಯವಾದುದಿಲ್ಲ. ಇನ್ನು ಲಿಂಗವ ಬೆರಸೇನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶಿವಲಿಂಗವು ಸಾಹಿತ್ಯವಾದುದಿಲ್ಲ. ಇನ್ನು ವಿಶೇಷತ್ವವುಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶ್ರೀಗುರುಲಿಂಗವು ಸಾಹಿತ್ಯವಾದುದಿಲ್ಲ. ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಈ ಚತುರ್ವಿಧವು ಏಕೀಭವಿಸಿ ಮಹಾಲಿಂಗವಾದ ಮಹಾಮಹಿಮಂಗೆ ಇನ್ನು ಕಾಮಿಸಲಿಲ್ಲ ಕಲ್ಪಿಸಲಿಲ್ಲ ಭಾವಿಸಲಿಲ್ಲ ಚಿಂತಿಸಲಿಲ್ಲ. ಆತ ನಿಶ್ಚಿಂತ ಪರಮಸುಖಿ ಪರಿಣಾಮಿ, ಆತನಿದ್ದುದೆ ಕೈಲಾಸ, ಆತ ಸರ್ವಾಂಗಲಿಂಗಿ, ಕೂಡಲಚೆನ್ನಸಂಗಯ್ಯಾ
--------------
ಚನ್ನಬಸವಣ್ಣ
ಇಷ್ಟಲಿಂಗಮುಖದಲ್ಲಿ ಶರೀರವರ್ಪಿತ, ಪ್ರಾಣಲಿಂಗಮುಖದಲ್ಲಿ ಮನವರ್ಪಿತ, ಭಾವಲಿಂಗಮುಖದಲ್ಲಿ ಪ್ರಾಣವರ್ಪಿತ._ ಇಂತೀ ತ್ರಿವಿಧಾರ್ಪಣವಾದಡೆ, ಮಹಾಘನಲಿಂಗದಲ್ಲಿ ಸಮರಸೈಕ್ಯ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ, ಇಷ್ಟಲಿಂಗವಾವುದು ಪ್ರಾಣಲಿಂಗವಾವುದು ಬಲ್ಲರೆ ನೀವು ಹೇಳಿರೆ ? ಇಷ್ಟಲಿಂಗವೆಂಬುದು ದರ್ಪಣ, ಪ್ರಾಣಲಿಂಗವೆಂಬುದು ಪ್ರತಿಬಿಂಬ. ದರ್ಪಣ ಮಸುಳಿಸಿದಡೆ ಪ್ರತಿಬಿಂಬವ ಕಾಣಬಹುದೆ ? ಬಾರದು. ಇಷ್ಟಲಿಂಗಪೂಚೆ ಮಸುಳಿಸಿದಡೆ, ಪ್ರಾಣಲಿಂಗವ ಕಾಣಬಹುದೆ ? [ಬಾರದು]. ``ಇಷ್ಟಲಿಂಗಮವಿಶ್ವಸ್ಯ ಪ್ರಾಣಲಿಂಗಂ ನ ಪಶ್ಯತಿ ದರ್ಪಣಪ್ರತಿಬಿಂಬಸ್ತು ಯಥಾರೂಪಂ ತಥಾ ಭವೇತ್ ಇದು ಕಾರಣ- ಕೂಡಲಚೆನ್ನಸಂಗಮದೇವಾ, ಇಷ್ಟದಲ್ಲಿ ಪ್ರಾಣತೃಪ್ತಿಯಾದವರ ತೋರಿ ಬದುಕಿಸಯ್ಯಾ.
--------------
ಚನ್ನಬಸವಣ್ಣ