ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು ರುದ್ರನವತರಿಸದಂದು, ಈರೇಳುಭುವನ ನೆಲೆಗೊಳ್ಳದಂದು ಸಪ್ತಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು, ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ? ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ ಹಮ್ಮಿಲ್ಲದಿರ್ದನಂದು !
--------------
ಚನ್ನಬಸವಣ್ಣ
ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯಗುಣ. ಬೇಕೆಂಬುದು ಇನಿತಿಲ್ಲ; ಬೇಡೆಂಬುದು ಇನಿತಿಲ್ಲ. ಈ ಉಭಯವ ಅತಿಗಳೆದು ಭೋಗಿಸಬಲ್ಲಡೆ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣನೆಂಬೆ
--------------
ಚನ್ನಬಸವಣ್ಣ
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು, ಬಸವಣ್ಣನ ಲಲಾಟದಲ್ಲಿ ವೀರಗಣಂಗಳು, ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು, ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು, ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು, ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು, ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು, ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ, ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು, ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು. ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು, ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ. ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.- ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬ್ರಾಹ್ಮಣ ಭಕ್ತನಾದರೇನಯ್ಯಾ ? ಸೂತಕಪಾತಕಂಗಳ ಬಿಡ. ಕ್ಷತ್ರಿಯ ಭಕ್ತನಾದರೇನಯ್ಯಾ ? ಕ್ರೋಧವ ಬಿಡ. ವೈಶ್ಯ ಭಕ್ತನಾದರೇನಯ್ಯಾ ? ಕಪಟವ ಬಿಡ. ಶೂದ್ರ ಭಕ್ತನಾದರೇನಯ್ಯಾ ? ಸ್ವಜಾತಿಯೆಂಬುದ ಬಿಡ. ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ, ಶೂದ್ರದೇಹಿಕನಲ್ಲ, ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು. ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು. ಲೈಂಗ್ಯಪುರಾಣೇಃ `ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವೀ ಲಿಂಗಾರ್ಚಕಶ್ಚ ಶ್ವಪಚೋ ದ್ವಿಜಕೋಟಿವಿಶೇಷಿತಃ _ಎಂದುದಾಗಿ, ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ ಆತನೆ ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದುಕೋಟಿಯಾದಡೆಯೂ ಶ್ವಪಚರಿಂದ ಕರಕಷ್ಟ ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ, ಲಿಂಗವಶದಿಂದ ಬಂದುದ ಪರಿಕರಿಸದಿರ್ದಡೆ ಮಹಾಘನವು ಅವಗವಿಸದು ನೋಡಾ. ಅದೆಂತೆಂದಡೆ: ಅವ್ರತೋ ಸುವ್ರತಶ್ಚೈವ ವೇಶ್ಯಾ ದಿವ್ಯಾನ್ನಭೂಷಣಂ ಅಕಲ್ಪಿತಂ ಚ ಭೋಗಾನಾಂ ಸರ್ವಂ ಲಿಂಗಸ್ಯ ಪ್ರೇರಣಂ ಎಂದುದಾಗಿ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರ ಪರದ್ವಾರಿಗಳೆಂದು ನುಡಿದವರಿಗೆ ನಾಯಕನರಕವಯ್ಯಾ
--------------
ಚನ್ನಬಸವಣ್ಣ
ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ ಷಟ್‍ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆರಿಱ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು `` ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆರಿ' ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರುಱಱ ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟ್‍ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬೇಡುವಾತ ಕರ್ತನಲ್ಲ, ಮಾಡುವಾತ ಭಕ್ತನಲ್ಲ. ಬೇಡಬೇಕು ನೋಯದಂತೆ, ಮಾಡಬೇಕು ಮರುಗದಂತೆ. ಇದು ಕಾರಣ_ಕೂಡಲಚೆನ್ನಸಂಗಯ್ಯಾ ಈ ಉಭಯದ ನೋವು ಲಿಂಗದ್ರೋಹ
--------------
ಚನ್ನಬಸವಣ್ಣ
ಬೆನ್ನಲ್ಲಿ ಬಸವಣ್ಣನ ತೆಗೆದ, ಹೊಟ್ಟೆಯಲ್ಲಿ ಎನ್ನ ತೆಗೆದ, ಬ್ರಹ್ಮರಂಧ್ರದಲ್ಲಿ ಅಲ್ಲಮನ ತೆಗೆದ, ಸಂಗನೆ ಮಡಿವಾಳನೊ, ಮಡಿವಾಳನೆ ಸಂಗನೊ, ಎಂದು ನುಡೆಯಲಮ್ಮೆನು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳಸಾಹಿತ್ಯ ನಮ್ಮ ಬಸವಣ್ಣಂಗೆ.
--------------
ಚನ್ನಬಸವಣ್ಣ
ಬೇಕು ಬೇಡೆನ್ನದ ಪ್ರಸಾದಿಯ ಕಾಯ, ಲಿಂಗಾರ್ಪಿತ, ಆ ಅರ್ಪಿತವೆ ಪ್ರಸಾದ, ಅದೆ ಮತ್ತೆ ಮತ್ತೆ ಅರ್ಪಿತ, ದರ್ಶನದಿಂದಾಯಿತ್ತು, ಸ್ಪರ್ಶನದಿಂದಾಯಿತ್ತು. ಅರ್ಪಿಸಿ, ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು. ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕ್ಕೆಂತೊ ?
--------------
ಚನ್ನಬಸವಣ್ಣ
ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ ಮೇಲೆ ಲಿಂಗವ ಧರಿಸಿ ಗುರುಲಿಂಗಜಂಗಮವನಾರಾಧಿಸಿ, ಅವರೊಕ್ಕುದ ಕೊಂಡು ಮುಕ್ತರಾಗಲರಿಯದೆ, ಬೇರೆ ಇದಿರಿಟ್ಟು ನಂದಿ ವೀರಭದ್ರ ಮತ್ತೆ ಕೆಲವು ಲಿಂಗಂಗಳೆಂದು ಪೂಜಿಸುವ ಲಿಂಗದ್ರೋಹಿಯ ಮುಖವ ನೋಡಲಾಗದು. ಅದೇನು ಕಾರಣವೆಂದಡೆ: ಗಂಡನುಳ್ಳ ಸತಿ ಅನ್ಯಪುರುಷನನಪ್ಪುವಲ್ಲಿ ಪಾಣ್ಬರಪ್ಪರಲ್ಲದೆ ಸತ್ಯರಪ್ಪರೆರಿ ಅದು ಕಾರಣ - ಲಿಂಗವಂತನ ಕೈಯಲ್ಲಿ ಪೂಜಿಸಿಕೊಂಬ ಅನ್ಯಲಿಂಗಂಗಳೆಲ್ಲವು ಹಾದರಕ್ಕೆ ಹೊಕ್ಕ ಹೊಲೆಗೆಟ್ಟವಪ್ಪುವಲ್ಲದೆ ಅವು ಲಿಂಗಂಗಳಲ್ಲ. ತನ್ನ ಲಿಂಗದಲ್ಲಿ ಅವಿಶ್ವಾಸವ ಮಾಡಿ ಅನ್ಯಲಿಂಗಂಗಳ ಭಜಿಸುವಲ್ಲಿ ಆ ಲಿಂಗವಂತ ಕೆರ್ಪ ಕಚ್ಚಿದ ಶ್ವಾನನಪ್ಪನಲ್ಲದೆ ಭಕ್ತನಲ್ಲ. ಅದೆಂತೆಂದಡೆ: ಲಿಂಗದೇಹೀ ಶಿವಾತ್ಮಾಚ ಸ್ವಗೃಹಂ ಪ್ರತಿಪೂಜನಾತ್ (ಪೂಜನಂರಿ) ಉಭಯಂ ಪಾಪಸಂಬಂಧಂ ಶ್ವಾನಶ್ವಪಚಪಾದುಕೈಃ - ಎಂದುದಾಗಿ ಇದುಕಾರಣ, ಈ ಉಭಯವನು ಕೂಡಲಚೆನ್ನಸಂಗಯ್ಯ ಛಿದ್ರಿಸಿ ಚಿನಿಖಂಡವನಾಯ್ದು ದಿಗ್ಬಲಿ ಕೊಟ್ಟುಅಘೋರ ನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು ಸೃಷ್ಟ್ಯಸೃಷ್ಟಿಯಿಲ್ಲದಂದು, ಕಾಳಿಂಗ ಕರೆಕಂಠರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರನಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು ದೇಹಾಹಂಕಾರ ಪ್ರಕೃತಿಯಿಲ್ಲದಂದು, ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು
--------------
ಚನ್ನಬಸವಣ್ಣ
ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ ? ಅಲ್ಲ. ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು ? ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು ? ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು ? ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು ? ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ ಆತನ ತಲೆಯನರಿಯಲದೇನು ? ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು ? ಸಹಸ್ರಾರ್ಜುನ ಬಲ್ಲಿದನೆಂದಡೆ, ತೋಳು ತುಂಡಿಸಲದೇನು ? ಅಂಬುಧಿ ಬಲ್ಲಿತ್ತೆಂದಡೆ, ಅಪೋಶನಕ್ಕೊಳಗಾಗಲದೇನು ? ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು ? ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು ? ಕೃಷ್ಣ ಬಲ್ಲಿದನೆಂದಡೆ, ಬೇಡನ ಅಂಬು ತಾಗಲದೇನು ? ರವಿ ಶಶಿಗಳು ಬಲ್ಲಿದರೆಂದಡೆ, ರಾಹುಕೇತು ಗ್ರಹಿಸಲದೇನು ? ಶ್ರೀರಾಮ ಬಲ್ಲಿದನೆಂದಡೆ, ತನ್ನ ಸತಿ ಕೋಳುಹೋಗಲದೇನು ? ಪಾಂಡವರು ಬಲ್ಲಿದರೆಂದಡೆ ತಮಗೆ ಹಳುವಟ್ಟು ಹೋಗಲದೇನು ? ಹರಿಶ್ಚಂದ್ರ ಬಲ್ಲಿದನೆಂದಡೆ, ಸ್ಮಶಾನವ ಕಾಯಲದೇನು ? ಹರನೆ ನೀ ಮಾಡಲಿಕೆ ರುದ್ರರು, ನೀ ಮಾಡಲಿಕೆ ದೇವರ್ಕಳು, ನೀ ಮಾಡಲಿಕೆ ಬಲ್ಲಿದರು, ನೀ ಮಾಡಲಿಕೆ ವೀರರು, ನೀ ಮಾಡಲಿಕೆ ಧೀರರು. ಅಮೂರ್ತಿ, ಮೂರ್ತಿ, ನಿರಾಕಾರ, ನಿರ್ಮಾಯ_ ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬೀಜದಿಂದಾಯಿತ್ತು ಅಂಕುರವೆಂದೆಂಬರು, ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು. ಲಿಂಗದಿಂದಾಯಿತ್ತು ಜಂಗಮವೆಂದೆಂಬರು ಆ ಲಿಂಗಕ್ಕೆ ಜಂಗಮವೆ ಪ್ರಾಣವೆಂದರಿಯರು, ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬಿಂದುಮಧ್ಯಗತೋ ನಾದಃ ನಾದಮಧ್ಯಗತಾ ಕಲಾ ಕಲಾಮಧ್ಯಗತಂ ಶೂನ್ಯಂ ಶೂನ್ಯಮಧ್ಯಗತಃ ಶಿವಃ ಪರಾತ್ಪರಂ ಪರಂ ನಾಸ್ತಿ ಪರಮಿಚ್ಛಂತಿ [ಯೋಗಿನಃ] ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ ? ವಿಷ್ಣು ನಿಮ್ಮ ಬಲ್ಲಡೆ ಭುಜವ ಸುಡಿಸಿಕೊಂಬನೆ ? ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ ? ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ ? ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಶ್ವಯಾಗವ ಮಾಡಿ ಕುದುರೆಯ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ ಮಹಿಷಹೋಮವ ಮಾಡಿ ಕೋಣನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ಕಲಿಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಜಯಾಗವ ಮಾಡಿ ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ಬ್ರಾಹ್ಮಣನೆ ದೈವವೆಂದಾರಾಧಿಸಿ Uõ್ಞತಮ ಗೋಹಂತೃವಾದುದಿಲ್ಲವೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಪಂಚಪಾಂಡವರು ದೇಶಭ್ರಷ್ಟರಾಗರೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಹರಿಶ್ಚಂದ್ರ ಚಂಡಾಲಗೆ ಮಾರಿಸಿಕೊಳ್ಳನೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಬಲಿಚಕ್ರವರ್ತಿ ಬಂಧನಕ್ಕೊಳಗಾಗನೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಮುಕ್ತಿಗೆ ಸಂದವರಿಲ್ಲ. ಬಲ್ಲಡೆ ನೀವು ಹೇಳಿರೊ, ಅರಿಯದಿದ್ದರೆ ನೀವು ಕೇಳಿರೊ: ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ; ಬಾಹೂರ ಬೊಮ್ಮಯ್ಯಗಳು ಕಲ್ಲ ನಂದಿಗೆ ಕಬ್ಬು ಮೇಯಿಸಿದ್ದಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಗೊಬ್ಬೂರ ಬಿಬ್ಬಿಬಾಚಯ್ಯಗಳು ಪ್ರಸಾದದಿಂದ ಗೊಬ್ಬೂರ ಸುಟ್ಟುದಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ ಕೊಟ್ಟಣವ ಕುಟ್ಟಿಸಲಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಹಾವಿನಹಾಳ ಕಲ್ಲಯ್ಯಗಳು ಶ್ವಾನನ ಬಾಯಿಂದ ವೇದವನೋದಿಸಲಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿಂಧುಬಲ್ಲಾಳ ಸ್ವಯಲಿಂಗಿಯಾಗಲಿಲ್ಲವೆ ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿರಿಯಾಳಸೆಟ್ಟಿ ಕಂಚಿಪುರವ ಕೈಲಾಸಕ್ಕೆ ಕೊಂಡೊಯ್ಯಲಿಲ್ಲವೆ ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಮುಂದೆ ನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅಂಗುಳವ ಮೆಟ್ಟಿಕ್ಕುವನೆಂದ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಬೇಡಿ ಮಾಡೂದಂಗಭೋಗ, ಬೇಡದೆ ಮಾಡೂದು ಲಿಂಗಭೋಗ. ಬೇಡುವನೆ ಜಂಗಮ ? ಬೇಡಿಸಿಕೊಂಬನೆ ಭಕ್ತ ? ಕೂಡಲಚೆನ್ನಸಂಗಯ್ಯಾ ಮಾಟದಿಂದ ಕೂಟಕ್ಕಿಂಬಾಯಿತ್ತು.
--------------
ಚನ್ನಬಸವಣ್ಣ
ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ, ಬೇಡದೆ ಆ ಭಕ್ತ ಮಾಡಿದ ಮಾಟವ ಪರಿಣಾಮಿಸಬಲ್ಲಡೆ ಜಂಗಮ. ಬೇಡಿಸಿಕೊಳ್ಳದೆ ಆ ಜಂಗಮ ಇಂಗಿತವನರಿದು ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೆ ಪರಮಭಕ್ತ. ಆ ಭಕ್ತ ನನ್ನದು ನಾನೆಂದು ನುಡಿದಡೆ ನಾಯ ಮಾಂಸ, ಸತ್ತ ಹೆಣನ ಮಲವು ! ಇದು ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ ಬೇಡದೆ ಮಾಡಿಸಿಕೊಂಬುವ ಜಂಗಮಪೂರ್ವವಯ್ಯಾ.
--------------
ಚನ್ನಬಸವಣ್ಣ
ಬಾಯಿಗೆ ಬಂದಂತೆ ಬಗುಳಾಟ, ಹಸಿದಾಗ ಲಿಂಗಕ್ಕೆ ಸಿತಾಪತ್ರೆಯಂ ಕೊಟ್ಟು, ವಿಭೂತಿಯನಿಟ್ಟು, ರುದ್ರಾಕ್ಷಿಯ ತೊಟ್ಟು, ಕಂಥೆ ಬೊಂತೆಯ ಧರಿಸಿ ಪರನಿಂದೆಯಂ ಮಾಡಿ, ರುದ್ರನ ಮನೆಯ ಛತ್ರದಲುಂಡುಂಡು ಕೆಡೆವಾತನು ವೇಶಿಯ ಪುತ್ರ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ. ಆ ಪಟ್ಟಣಕ್ಕೆ ಒಡಲಿಲ್ಲದಾದ ಅರಸು ನೋಡಾ ! ಆ ಅರಸಂಗೆ ಅರುವರು ಅರಸಿಯರು; ಮೂವರು ಸುರೂಪಿಯರು ಮೂವರು ಕುರೂಪಿಯರು; ಇವರಿಗೊಬ್ಬರಿಗೊಬ್ಬರಿಗೊಂದೊಂದು ಪರಿಯ ಕೂಟ ನೋಡಾ ! ಐವರ ಕಣ್ಣ ಕಟ್ಟಿ ಒಬ್ಬಳನೆ ನೆನೆದಡೆ ಪ್ರತಿಯಿಲ್ಲದ ಸುಖವು ಸಯವಾದ ಕಾರಣ ಕೂಡಲಚೆನ್ನಸಂಗಾ, ನಿಮ್ಮ ಶರಣ ಪ್ರಭುವಿಂಗೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಬಸವಣ್ಣ ಮಾಡುವ ಮಾಟವನಾರು ಬಲ್ಲರಯ್ಯಾರಿ ಲಿಂಗವಿಲ್ಲದೆ ಮಾಡಿದನಯ್ಯಾ ಬಸವಣ್ಣನು; ಜಂಗಮವಿಲ್ಲದೆ ನೀಡಿದನಯ್ಯಾ ಬಸವಣ್ಣನು; ಪ್ರಸಾದವಿಲ್ಲದೆ ರುಚಿಸಿದನಯ್ಯಾ ಬಸವಣ್ಣನು. ಈ ಮಹಕ್ಕೆ ಬಂದು ಅನುಭಾವವ ಮಾಡಿ ಆಡಿದನಯ್ಯಾ ಬಸವಣ್ಣನು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಸಂಗ ಇಂದಿನಲಿ ಅಗಲಿತ್ತು ಕಾಣಾ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣಂಗೆ
--------------
ಚನ್ನಬಸವಣ್ಣ
ಬಂದ ಸುಖವನತಿಗಳೆಯಲಾಗದು ಶರಣಂಗೆ, ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಉಂಡು ಉಪವಾಸಿಗಳು, ಬಳಸಿ ಬ್ರಹ್ಮಚಾರಿಗಳು.
--------------
ಚನ್ನಬಸವಣ್ಣ
ಬಾಗಿಲ ಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒಡೆತನವುಂಟೆ ಅಯ್ಯಾ ? ಸೂತ್ರದ ಬೊಂಬೆಗೆ ಪ್ರಾಣವುಂಟೆ ಆಡಿಸುವ ಜಾತಿ ಉತ್ತಮಂಗಲ್ಲದೆ ? ಎನ್ನ ಭಾವಕ್ಕೆ ಮನೋಮೂರ್ತಿಯಾಗಿ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಅಗಮ್ಯವಾಗಿತ್ತು.
--------------
ಚನ್ನಬಸವಣ್ಣ
ಬರಿಯ ಬೋಳುಗಳೆಲ್ಲಾ ಜಂಗಮವೆ ? ಜಡಜೀವಿಗಳೆಲ್ಲಾ ಜಂಗಮವೆ ? ವೇಷಧಾರಿಗಳೆಲ್ಲ ಜಂಗಮವೆ ? ಇನ್ನಾವುದು ಜಂಗಮವೆಂದಡೆ: ನಿಸ್ಸೀಮನೆ ಜಂಗಮ, ನಿಜೈಕ್ಯನೆ ಜಂಗಮ ಇಂಥ ಜಂಗಮದ ಸುಳುಹ ಕಾಣದೆ ಕೂಡಲಚೆನ್ನಸಂಗಮದೇವ ತಾನೆ ಜಂಗಮವಾದ
--------------
ಚನ್ನಬಸವಣ್ಣ
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ ಕತ್ತುರಿಯ ಲೇಪನವಿತ್ತಡೇನು, ನೀರುಳ್ಳೆಯ ದುರ್ಗಂಧ ದೂರಪ್ಪುದೆ ? ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ ? ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು, ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲಚೆನ್ನಸಂಗಮದೇವಾ ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ ?
--------------
ಚನ್ನಬಸವಣ್ಣ

ಇನ್ನಷ್ಟು ...