ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊರಗನೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ, ಮನಮುಟ್ಟಿ ಮಾಡುತ್ತಿರಲು; ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು ಕನ್ನಡಿಯೊಳಗಣ ರೂಪ ತಾನೆಂದರಿವಂತೆ ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ. ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ ! ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ. ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.
--------------
ಚನ್ನಬಸವಣ್ಣ
ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ ಎನಗೆ ಕುಲದೈವ ಮನೆದೈವವಿಲ್ಲೆಂಬ ಭಂಡನ ಭಕ್ತಿಯ ಪರಿಯ ನೋಡಾ. [ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು: ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ, ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ. ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ ! ಇದು ಕಾರಣ_ಕೂಡಲಚೆನ್ನಸಂಗಯ್ಯಾ ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ.
--------------
ಚನ್ನಬಸವಣ್ಣ
ಹಸಿವು ತೃಷೆ ನಿದ್ರೆ ರೋಗಾದಿ ಬಾಧೆಗಳು ತನಗಾಗುತ್ತಿಹವೆಂಬ ಜೀವಭಾವವ ಮರೆದು, ಅವು ಲಿಂಗದ ಸದಿಚ್ಛೆಯಿಂದ ಅಂಗಕ್ಕುಂಟಾಗಿಹವೆಂಬ ಶಿವಭಾವವು ಸದಾಸನ್ನಿಹಿತವಾಗಿದ್ದಡೆ ಶರಣನ ಹಸಿವು ತೃಷೆ ಮುಂತಾದ ಸರ್ವಭಂಗವು ಲಿಂಗದಲ್ಲಿ ಲೀನವಾಗಿ, ಹುಟ್ಟುಗೆಟ್ಟು, ಸಾವಿನಸಂತಾಪವಿಲ್ಲದೆ ನಾನು ನನ್ನದೆಂಬಹಂಕಾರ ಮಮಕಾರಗಳು ಮರೆಮಾಜಿ ಸಂಚಿತ ಅಗಾಮಿ ಪ್ರಾರಬ್ಧವೆಂಬ ಕರ್ಮತ್ರಯ ಮುಂತಾದ ಪಾಶಗಳು ನಾಶವಾಗಿ, ನಿತ್ಯಮುಕ್ತಿಯಾಗುತ್ತಿಹುದಯ್ಯಾ. ಕೂಡಲಚೆನ್ನಸಂಗಮದೇವಾ, ಇದು ನಿಮ್ಮ ಭಕ್ತಿದೇವತೆಯ ಚಮತ್ಕೃತಿಯೆಂದರಿದೆನು.
--------------
ಚನ್ನಬಸವಣ್ಣ
ಹೃದಯಕಮಲ ಮಧ್ಯದ ಶುದ್ಧಾತ್ಮನನು ಸಿದ್ಧ ವಿದ್ಯಾಧರ ನಿರ್ದೇಹಿಗಳು ಬಲ್ಲರೆ ? ಕಾಯದ ಕೈಯಲಿ ಕೊಟ್ಟುದು ಮಾಯಾಮುಖದರ್ಪಿತ. ಇದಾವ ಮುಖವೆಂದರಿಯದೆ ಭ್ರಮೆ [ಗೊಂಡು]ಹೋದರು. ಕೊಂಬ ಕೊಡುವ ಎಡೆಯನಿಂಬಿನ ಗ್ರಾಹಕ ಬಲ್ಲ. ಕೂಡಲಚೆನ್ನಸಂಗನಲ್ಲಿ ಬಸವಣ್ಣಪ್ರಭು ಬಲ್ಲ.
--------------
ಚನ್ನಬಸವಣ್ಣ
ಹೊರಗನೆ ಕೊಯ್ದು ಹೊರಗನೆ ಪೂಜಿಸಿದಡೆ, ಪರಿಣಾಮವಿಲ್ಲ, ಪ್ರಯೋಜನವಿಲ್ಲ ಸುಖ ದೊರೆಕೊಳ್ಳದು ನೋಡಾ ! ಅದೆಂತೆಂದಡೆ: ಸರ್ವಜೀವಂಗಳಲ್ಲಿ ಜೀವಹಿಂಸೆಯ ಮಾಡದಿರಬಲ್ಲಡೆ ಪ್ರಥಮಪುಷ್ಪ. ಸರ್ವೇಂದ್ರಿಯಂಗಳ ನಿಗ್ರಹಿಸಿಕೊಂಡಿರಬಲ್ಲಡೆ ದ್ವಿತೀಯಪುಷ್ಪ. ಸರ್ವಾಹಂಕಾರವರತು ಶಾಂತನಾಗಿರಬಲ್ಲಡೆ ತೃತೀಯಪುಷ್ಪ. ಸರ್ವವ್ಯಾಪಾರವಳಿದು ನಿವ್ರ್ಯಾಪಾರಿಯಾಗಿರಬಲ್ಲಡೆ ಚತುರ್ಥಪುಷ್ಪ. ದುರ್ಭಾವ ಪ್ರಕೃತಿಯಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಪಂಚಮಪುಷ್ಪ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಷಷ್ಠಪುಷ್ಪ. ಅನೃತವ ಮರೆದು ಸತ್ಯವ ನುಡಿಯಬಲ್ಲಡೆ ಸಪ್ತಮಪುಷ್ಪ. ಸಕಲಪ್ರಪಂಚವಳಿದು ಶಿವಜ್ಞಾನಸಂಪನ್ನರಾಗಿರಬಲ್ಲಡೆ ಅಷ್ಟಮಪುಷ್ಪ. ಇಂತೀ ಅಷ್ಟದಳಕಮಲದಲ್ಲಿ ಸಹಜಪೂಜೆಯ ಮಾಡಬಲ್ಲ ಶರಣರು ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹವಣಿಲ್ಲದ ಶಾಖೆಯ ಕಪಿ ಕೈವಿಡಿಯಲೊಲ್ಲದು, ಗಮನವಿಲ್ಲದೆ ಪಿಕಶಿಶು ನುಡಿಯಲೊಲ್ಲದು, ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕುಟ. ಈ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪರೆಲ್ಲ. ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ನಿದ್ರೆ ಆಲಸ್ಯವುಳ್ಳನ್ನಕ್ಕರ ಅದ್ವೈತವುಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವೆಂಥದೋ ? ಸುಡು ಸುಡು ಅವರು ಗುರುದ್ರೋಹಿಗಳು, ಆಚಾರಭ್ರಷ್ಟರು. ಉಭಯ ತನುಗುಣನಾಸ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಯ್ಯನೆಂತೊಲಿವನು ?
--------------
ಚನ್ನಬಸವಣ್ಣ
ಹೋ ಹೋ ಗುರುವೆ ನಿಮ್ಮ ಚಮ್ಮಾವುಗೆಯ ಬಂಟ ನಾನಾಗಿರಲು ಅಂಜುವರೆ ? ಅಳುಕುವರೆ ? ಸಂಗಮನಾಥ ಬಂದು, ನಿಮ್ಮ ಮನವ ನೋಡಲೆಂದು ತಮ್ಮ ಮನವನಡ್ಡಲಿಕ್ಕಿದನೊಂದು ಲೀಲೆಯಿಂದ. ಅದು ನಿಮಗೆ ಸಹಜವಾಗಬಲ್ಲುದೆ ? ಮಂಜಿನ ಮೋಹರ, ರವಿಯ ಕಿರಣವ ಕೆಡಿಸಲಾಪುದೆ ? ನಿಮ್ಮ ನೆನೆವರಿಗೆ ಸಂಸಾರವಿಲ್ಲೆಂದು ಶ್ರುತಿಗಳು ಹೊಗಳುತ್ತಿರಲು ನಿಮ್ಮ ಅರುಹಿಂಗೆ ಕೇಡುಂಟೆ ? ಕೂಡಲಚೆನ್ನಸಂಗನ ಶರಣರ ಕರೆವಡೆ ಎನ್ನ ಮನವೆಂಬ ಚಮ್ಮಾವುಗೆಯ ಮೆಟ್ಟಿ ನಡೆಯಾ ಸಂಗನಬಸವಣ್ಣ
--------------
ಚನ್ನಬಸವಣ್ಣ
ಹರಿದ ಶಿರವ ಹಚ್ಚಿ ಮೆರೆದರು ನಮ್ಮ ಶರಣರು, ಭಕ್ತಿಯ ಪ್ರಭಾವದಿಂದ. ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು, ಭಕ್ತಿಯ ಪ್ರಭಾವದಿಂದ. ಪೂರ್ವಕುಲಗೋತ್ರವನಳಿದು ಪುನೀತರಾದರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ. ``ಭಕ್ತೇರಸಾಧ್ಯಂ ನ ಹಿ ಕಿಂಚಿದಸ್ತಿ ಭಕ್ತ್ಯಾ ಸರ್ವಸಿದ್ಧಯಃ ಸಿದ್ಧ್ಯಂತಿ ' ಎಂಬ ವಚನವುಂಟಾಗಿ_ಭಕ್ತಂಗೆ ಅಸಾಧ್ಯವಾವುದು ? ಅದು ಕಾರಣ, ನಿಮ್ಮಡಿಯ ಭಕ್ತಿಯನೊಂದನೆ ಕರುಣಿಸಿ ಕಾಪಾಡಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ, ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ, ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ, ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ, ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಿ[ಮಾದಗಿತ್ತಿ ?]ಯ ಮಕ್ಕಳಯ್ಯಾ, ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ, ಜಂಗಮ ಬಂದ ಬರವ, ನಿಂದ ನಿಲುಕಡೆಯ ನೋಡಿ, ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್‍ಜ್ಞಾನವನರಿವವರು ಕೂಡಲಚೆನ್ನಸಂಗನ ಶರಣರಯ್ಯಾ.
--------------
ಚನ್ನಬಸವಣ್ಣ
ಹುಸಿ ಕಳವು ಪರದಾರ ಹಿಂಸೆ ಅಧಿಕಾಶೆಗಳ ಕೂಡಿಸಿಕೊಂಡು ಇದ್ದು ಅನ್ಯ ಅನಾಚಾರದಲ್ಲಿ ವರ್ತಿಸುವವರು, ತಮ್ಮ ಅಂಗದ ಮೇಲೆ ಕಟ್ಟಿಕೊಂಡಿದ್ದ ಲಿಂಗವು ಅದು ಲಿಂಗವಲ್ಲ. ಅವರು ಮಾಡುವ ದೇವಪೂಜೆ ನಿಚ್ಚದಂಡಕ್ಕೆ ಪ್ರಾಯಶ್ಚಿತ್ತವೆಂದು ಶಿವನ ವಾಕ್ಯ ಮೊದಲಾದ ಸಕಲಪುರಾತನರ ವಚನಂಗಳು ಮುಂದೆ ಸಾರಿ ಹೇಳಿಹವು. ಅದು ಕಾರಣ_ಕೂಡಲಚೆನ್ನಸಂಗಯ್ಯಾ ಪ್ರಾಣಲಿಂಗದ ಸಂಬಂಧವಾದ ಸದ್ಭಕ್ತನು ಅನ್ಯಾಯ ಅನಾಚಾರದಲ್ಲಿ ವರ್ತಿಸುವವರ ಬಿಟ್ಟಿಹನು
--------------
ಚನ್ನಬಸವಣ್ಣ
ಹೂ-ಮಿಡಿಯ ಹರಿದು ಹಣ್ಣ ಮಾಡಿಹೆನೆಂದಡೆ ಫಲಕಾರ್ಯಂಗಳಪ್ಪುವೆ ದೇವಾ ? ಶಶಿಧರನಟ್ಟಿದ ಬೆಸನದೊಳಗೆ ಎವೆ ಮಾತ್ರ ಪ್ರಮಾಣವೆ ಪೂರೈಸಲು ? ಲಿಂಗಪ್ರಾಣ ಪ್ರಾಣಲಿಂಗದ ಭೇದವ ನೆಟ್ಟನೆ ತಿಳಿದಲ್ಲದೆ, ಸಂಗಮನಾಥ `ನೀ ಬಾರಾ' ಎಂದು ಎತ್ತಕೊಳ್ಳನು. ಕೂಡಲಚೆನ್ನಸಂಗಯ್ಯಂಗೆ ಸವೆಯದ ಮುನ್ನ ಸಯವಾಗಲುಂಟೆ ? ಹೇಳಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
ಹೊತ್ತಾರೆಯ ಪೂಜೆ, ಹಗಲಿನ ಪೂಜೆ, ಬೈಗಿನ ಪೂಜೆ, ನಿಚ್ಚಕ್ಕೆ ಪೂಜೆಯ ಮಾಡಿ ಅಚ್ಚಿಗಗೊಂಡರೆಲ್ಲರು. ನಿಶ್ಚಿಂತ ನಿರಾಳ ನಿಜೈಕ್ಯಲಿಂಗವ ಹೊತ್ತಿಂಗೆ ತರಲಹುದೆ ? ಹೊತ್ತನೆ ಪೂಜಿಸಿ, ಹೊತ್ತನೆ ಅರ್ಚಿಸಿ, ಇತ್ತಲೆಯಾದರೆಲ್ಲರು. ನಿಶ್ಚಿಂತವನರಿದು ನಿಜವನೆಯ್ದುವರೆ ಸುಚಿತ್ತ ಸಮಾಧಾನ. ಕೂಡಲಚೆನ್ನಸಂಗನೆಂಬ ಲಿಂಗ ನಿಶ್ಚಿಂತ ನಿಜೈಕ್ಯವು.
--------------
ಚನ್ನಬಸವಣ್ಣ
ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು ಹೊಲೆಯನೆಂತವನಯ್ಯಾ ? ತನ್ನ ಹೊಲೆಯ ತಾನರಿಯದೆ ಮುನ್ನಿನವರ ಹೊಲೆಯನರಸುವ ಭ್ರಷ್ಟರಿಗೆ ಏನೆಂಬೆನಯ್ಯಾ, ಮಹಾದಾನಿ ಕೂಡಲ ಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ``ಏಕೋ ದೇವೋ ನ ದ್ವಿತೀಯಃ'' ಎಂದು ಶುದ್ಧಶೈವನಿಷ್ಠಾಪರನಾಗಿ ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ ಪುರಾಣ, ಪುರಾತರ ವಚನದ ಬಹುಪಠಕರು, ಅನ್ನದಾನ, (ಹೊನ್ನದಾನ), ವಸ್ತ್ರದಾನವನೀವನ ಬಾಗಿಲ ಮುಂದೆ ಮಣ್ಣಪುತ್ಥಳಿಯಂತಿಹರು ನಿತ್ಯನೇಮದ ಹಿರಿಯರು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ಎಂಬ ಶ್ರುತಿ ದಿಟವಾಯಿತ್ತು. ಆ ಎಲ್ಲಾ ಅರಿವು?್ಳವರು ಲಕ್ಷ್ಮಿಯ ದ್ವಾರಪಾಲಕರಾದರು. ಅರಿವಿಂಗೆ ಇದು ವಿಧಿಯೆ ? ಕೂಡಲ ಚೆನ್ನಸಂಗಯ್ಯಾ ನೀ ಮಾಡಿದ ಮರಹು !
--------------
ಚನ್ನಬಸವಣ್ಣ
ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ, ಹುಸಿ ನಾಲ್ಕೆಲೆಯಾಯಿತ್ತು ಸಮ್ಮಗಾರನಲ್ಲಿ, ಹುಸಿ ಆರೆಲೆಯಾಯಿತ್ತು ಅಗಸನಲ್ಲಿ, ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ, ಹುಸಿ ಸಸಿಯಾಗಿತ್ತು ಹಾದರಿಗನಲ್ಲಿ, ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ, ಹುಸಿ ಮರವಾಯಿತ್ತು ಜೂಜುಗಾರನಲ್ಲಿ, ಹುಸಿ ಹೂವಾಯಿತ್ತು ಡೊಂಬನಲ್ಲಿ, ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ, ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ, ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ. ಇಂತೀ ಹುಸಿಯ ನುಡಿವವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕವಿಲ್ಲಾಗಿ ಮೋಕ್ಷವಿಲ್ಲ. ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು.
--------------
ಚನ್ನಬಸವಣ್ಣ
ಹಸಿವರತಲ್ಲದೆ ಪ್ರಸಾದಿವೇದಿಯಲ್ಲ, ತೃಷೆಯರತಲ್ಲದೆ ಪಾದೋದಕವೇದಿಯಲ್ಲ, ನಿದ್ರೆಯರತಲ್ಲದೆ ಭವವಿರಹಿತನಲ್ಲ. ಅನಲ ಪವನ (ಗುಣವರತಲ್ಲದೆ) ಜನನ ಮರಣ ರಹಿತನಲ್ಲಯ್ಯ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವೆಲ್ಲರಿಗೆಲ್ಲಿಯದು ?
--------------
ಚನ್ನಬಸವಣ್ಣ
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ ನಿರಾಸಕ್ತನಾಗಿ, ಭಿಕ್ಷಾಹಾರಿಯಾಗಿ ಶಿವಧ್ಯಾನಪರಾಯಣನಾಗಿಪ್ಪುದೀಗ ಪ್ರಥಮ ಬೋಳು. ಲಿಂಗಾಣತಿಯಿಂದ ಬಂದುದ ಕೈಕೊಂಡು ಲಿಂಗ ಸಾವಧಾನವಾಗಿಪ್ಪುದೀಗ ದ್ವಿತೀಯಬೋಳು. ಶರಣಸತಿ ಲಿಂಗಪತಿಯೆಂಬುಭಯವಳಿದು ಪರಮಾನಂದದಲ್ಲಿಪ್ಪುದೀಗ ತೃತೀಯಬೋಳು. ಈ ಬೋಳಿನ ಅನುವ ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯ ಬಲ್ಲ.
--------------
ಚನ್ನಬಸವಣ್ಣ
ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು, ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು, ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ. ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ, ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ. ಆಶೆ ಆಮಿಷ ತಾಮಸವೆಂಬ ತುರಗವನೇರಿ ಆತುರದ ತುರವನೆ ಕಳೆದನಯ್ಯಾ_ಈ ಮಹಾಮಹಿಮಂಗೆ, ಜಗದ ಜತ್ತಿಗೆಯ, ಹಾದರಗಿತ್ತಿಯ, ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ ? ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ. ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ. ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಜಯಜಯತು.
--------------
ಚನ್ನಬಸವಣ್ಣ
ಹಸಿವು ಹರಿದು, ತೃಷೆ ಬತ್ತಿ, ಪರಿಣಾಮವೆ ಪಥ್ಯವಾಗಿ ನಿಂದಂಗ ನೀನಾದ ಕಾರಣ, ನಿನ್ನ ಕಾರುಣ್ಯಚಕ್ಷು ಎನ್ನ ನಿರೀಕ್ಷಿಸಿದಲ್ಲಿ, ಎನ್ನ ಬಂಧ ಮೋಕ್ಷವೆಂಬುವು ಅಂದೆ ನಿಂದವು. ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಗೋಪ್ಯವಾಯಿತ್ತು.
--------------
ಚನ್ನಬಸವಣ್ಣ
ಹತ್ತರಲೊಂದು ಕಳೆದು ಅರುವತ್ತಾಯಿತ್ತು. ಸಪ್ತಕ ಸಾಧಿಸಲಾರವಶವಲ್ಲ, ಶಶಿ ಸೂರ್ಯರ ವಶವಲ್ಲ, ದಶಕೋಟಿಯೆಯ್ದೆ ಅಳಿದುದು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಹತ್ತರ ಮೇಲೆ ಹನ್ನೊಂದರಂತಿದ್ದೆನಯ್ಯಾ.
--------------
ಚನ್ನಬಸವಣ್ಣ
ಹಸು ಹಯನಾಯಿತ್ತು, ಹಸು ಮನೆಗೆ ಬಂದಿತ್ತು, ಹಸುವ ಕಟ್ಟುವರೆಲ್ಲರ ಕಟ್ಟಿ, ಕಟ್ಟ ಬಂದವರ ಒಕ್ಕಲಿಕ್ಕಿ [ತು]ಳಿಯಿತ್ತು. ನಮ್ಮ ಕೂಡಲಚೆನ್ನಸಂಗಮದೇವರಲ್ಲಿ ಹಸುವ ಕಟ್ಟಿದಾತ ನಮ್ಮ ಸಿದ್ಧರಾಮಯ್ಯದೇವರೊಬ್ಬರೆ.
--------------
ಚನ್ನಬಸವಣ್ಣ
ಹೃದಯದೊಳಿಪ್ಪ ಮಹಾಲಿಂಗಜ್ಯೋತಿಯ ಬೆಳಗು, ಪಂಚೇಂದ್ರಿಯಂಗಳಲ್ಲಿ ಪ್ರಭಾವಿಸಿ ತೋರುವ ಬೆಳಗು, ಒಂದೆ ಕಾಣಿ ಭೋ. ಒಂದು ಮೂರಾಗಿ, ಮೂರು ತಾನಾರಾಗಿ ಆರು ಮೂವತ್ತಾರಾಗಿ ಮೂವತ್ತಾರು ಇನ್ನೂರುಹದಿನಾರಾಗಿ, ಬೇರುವರಿದು ವಿಸ್ತಾರವ ಪಡೆದವಲ್ಲಾ ! ವಿಶ್ವಾಸದಿ ಬೆಳಗುವ ಬ್ರಹ್ಮಕ್ಕೂ ಗಣಿತವುಂಟೆ ? ಅಗಣಿತವೆಂದು ಅಗೋಚರವೆಂದು ಹೇಳುವರಲ್ಲದೆ, ದೃಶ್ಯವಾಗಿ ಕಾಬವರುಂಟೆ ? ದೃಗುದ್ಯಶ್ಯವಲ್ಲ ಮಹಾದಾನಿ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಾಹೇಶ್ವರನಲ್ಲ, ಆಸೆಯುಳ್ಳವ ಪ್ರಸಾದಿಯಲ್ಲ, ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ, ತನುಗುಣವುಳ್ಳವ ಶರಣನಲ್ಲ, ಜನನಮರಣವುಳ್ಳವ ಐಕ್ಯನಲ್ಲ. ಈ ಆರರ ಅರಿವಿನ ಅರ್ಕದ ಸಂಪತ್ತಿನ ಭೋಗ ಹಿಂಗಿದಡೆ ಸ್ವಯಂ ಜಾತನೆಂಬೆ._ಆ ದೇಹ ನಿಜದೇಹವೆಂಬೆ ಆ ನಿಜದೇಹ ಇರಿದರರಿಯದು, ತರಿದರರಿಯದು, ಹೊಯ್ದರರಿಯದು, ಬಯ್ದರರಿಯದು, ಸ್ತುತಿಸಿದರರಿಯದು, ನಿಂದಿಸಿದರರಿಯದು, ಪುಣ್ಯವನರಿಯದು, ಪಾಪವನರಿಯದು, ಸುಖವನರಿಯದು ದುಃಖವನರಿಯದು, ಕಾಲವನರಿಯದು, ಕರ್ಮವನರಿಯದು ಜನನವನರಿಯದು, ಮರಣವನರಿಯದು_ ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ ನಾವು ಹಿರಿಯರು ನಾವು ಗುರುಗಳು ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು ಎಂಬ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ? ಕುತ್ತಗೆಯುದ್ದ ಹೂಳಿಸಿಕೊಂಡು ಮುಗಿಲುದ್ದಕ್ಕೆ ಹಾರಲುಂಟೆ ?
--------------
ಚನ್ನಬಸವಣ್ಣ
ಹೋ ಹೋ ಗುರುವೆ, ನಿಮ್ಮ ಕರಕಮಲದಲ್ಲಿ ಉದಯಿಸಿ ಅಂಗದ ಮೇಲೆ ಲಿಂಗವ ಧರಿಸಿ, ಲಿಂಗದಲ್ಲಿ ಆಗಾಗಿ ಪ್ರಾಣಲಿಂಗ ಲಿಂಗಪ್ರಾಣ ಎಂಬುದ ನಾನು ಕಂಡೆನು. ನಿಮಗಾನು ತೋರಲು ಸಮರ್ಥನೆ ? ಆಚಾರ ಅಂಗದ ಮೇಲೆ ನೆಲೆಗೊಂಡು, ಇಷ್ಟಲಿಂಗದಲ್ಲಿ ದೃಷ್ಟಿನಟ್ಟು ಭಾವಸಂಪನ್ನವಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ? ಅನುಭಾವ ಅಂತರಂಗದಲ್ಲಿ ಎಡೆಗೊಂಡು, ಪ್ರಾಣಲಿಂಗದಲ್ಲಿ ನಿಕ್ಷೇಪವಾಗಿ, ನಿಜಲಿಂಗೈಕ್ಯನಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ? ಜ್ಞಾನಸಮಾಧಿಯೊಳಗೆ ಬಯಕೆಯಡಗಿ ಪರಿಣಾಮಲಿಂಗದಲ್ಲಿ ಮನಸ್ಸು ಲಯವಾಗಿ ನಿಜಲಿಂಗತೃಪ್ತರಾಗಿಪ್ಪಿರಿ ನೀವು; ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂಬಲ್ಲಿ ಜಂಗಮಲಿಂಗ ಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ಲಿಂಗಕ್ಕೆ ಬಂದ ಪದಾರ್ಥವನಲ್ಲದೆ ಕೊಳ್ಳೆನೆಂದು ಮನ ಮೀಸಲು, ತನುಮೀಸಲು ಮಾಡಿ, ಸರ್ವಾಂಗಸುಖವೆಲ್ಲವನು ಪ್ರಾಣಲಿಂಗದಲ್ಲಿ ಅರ್ಪಿಸಿ . ನಿರಾಭಾರಿಯಾಗಿ, ಪ್ರಸಾದಲಿಂಗಪ್ರಾಣಿಯಾಗಿಪ್ಪಿರಿ ನೀವು ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಅನಾದಿ ಶಿವಂಗೆ ಆಧಾರವಿಲ್ಲೆಂದು, ಅಖಂಡಿತನ ನಿಮ್ಮ ರೋಮದ ಕೊನೆಯಲ್ಲಿ ಧರಿಸಿ ಮಹಾಲಿಂಗಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ, ನಿಮ್ಮ ಪ್ರಾಣಲಿಂಗಸಂಬಂಧದ ಸೆರಗು ಸೋಂಕಿನ ಒಕ್ಕುಮಿಕ್ಕ ಪ್ರಸಾದಿ ನಾನು ಕಾಣಾ ಸಂಗನಬಸವಣ್ಣ.
--------------
ಚನ್ನಬಸವಣ್ಣ

ಇನ್ನಷ್ಟು ...