ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ ! ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ ! ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ, ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ ! ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನಬಸವಣ್ಣಾ !
--------------
ಚನ್ನಬಸವಣ್ಣ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ಲೋಹ ಪರುಷವ ಮುಟ್ಟುವುದಲ್ಲದೆ, ಪರುಷ ಪರುಷವ ಮುಟ್ಟುವುದೆ ಅಯ್ಯಾ ? ಅಂಗವಿಡಿದಂಗೆ ಪ್ರಸಾದವಲ್ಲದೆ ಲಿಂಗವಿಡಿದಂಗೆ ಪ್ರಸಾದವುಂಟೆ ? `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ ಕಿರಿದಿಂಗೆ ಕಿರಿದು ಹಿರಿದಕ್ಕೆ ಹಿರಿದು, ವಾಙ್ಮನಕ್ಕಗೋಚರ. ಕೂಡಲಚೆನ್ನಸಂಗಮದೇವ [ಕೇಳಯ್ಯಾ] ಸ್ವರೂಪು ಪ್ರಸಾದಿ, ನಿರೂಪು ಲಿಂಗೈಕ್ಯ !
--------------
ಚನ್ನಬಸವಣ್ಣ
ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಲಿಂಗಾರ್ಚನೆಯಂ ಮಾಡಿ, ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ ಸಹಭೋಜನವ ಮಾಡುವ ಸಮಯದಲ್ಲಿ ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆವುದು. ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು ಭೋಗಿಸಿದಡೆ, ಪ್ರಸಾದ ದ್ರೋಹ. ಪ್ರಸಾದವೆಂದು ಅರ್ಪಿತವ ಭೋಗಿಸಿ, ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ. ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ ಉಳುಮೆಯಲಿ ಉಳಿದ ತಾರಕಬ್ರಹ್ಮವಯ್ಯಾ. [ಅದೇನು ಕಾರಣವೆಂದಡೆ:] ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ ! ಆದಿಗೂ ಅನಾದಿಗೂ ನೀನೆ ! ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ ! ಕ್ರೀ ನಿಃ [ಕ್ರೀ ಗೂ ನೀನೇ]. ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ ! ದೇವ, ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ, ಸಾಕಾರ ನಿರಾಕಾರವಾದ. ಏಕ ಬ್ರ[ಹ್ಮ ಸಂ]ಗನ ಬಸವಣ್ಣ ಬಿಬ್ಬಿ ಬಾಚಯ್ಯ ಮರುಳಶಂಕರದೇವರೆಂಬ ಪರಂಜ್ಯೋತಿ ಮಹಾಲಿಂಗದಲ್ಲಿ ಏಕತೆಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗದೊಡನೆ ಸಹಭೋಜನವ ಮಾಡುವ ಅದ್ವೈತಿಗಳ ಮಾತುಕೇಳಿ, ಸಂಸಾರದೊಳಗಿರ್ದ ಭಕ್ತನು, ಆ ಲಿಂಗದೊಡನೆ ಸಹಭೋಜನವ ಮಾಡಿದಡೆ ಅಘೋರನರಕ ತಪ್ಪದು. ಅದೆಂತೆಂದಡೆ: ``ರಾಗದ್ವೇಷಮದೋನ್ಮತ್ತಸ್ತತ್ತ್ವಜ್ಞಾನಪರಾಙ್ಮುಖಃ ಸಂಸಾರಸ್ಯ ಮಹಾಪಂಕೇ ಜೀರ್ಣಾಂಗೋ ಹಿ ನಿಮಜ್ಜತಿ '' ಇದನರಿದು ಲಿಂಗದೊಡನೆ ಸಹಭೋಜನವ ಮಾಡಲಾಗದು. ಮಾಡುವ ಅಜ್ಞಾನಿಗಳು ನೀವು ಕೇಳಿರೊ: ಗುರುಲಿಂಗಜಂಗಮತ್ರಿವಿಧವನು ಏಕಾರ್ಥವ ಮಾಡದನ್ನಕ್ಕರ ಸಹಭೋಜನವುಂಟೆ ಹೇಳಿರಣ್ಣಾ ! ಇಲ್ಲವಾಗಿ. ಅದೆಂತೆಂದಡೆ: ``ಗುರುರೇಕೋ ಲಿಂಗಮೇಕಂ ಏಕಾರ್ಥೋ ಜಂಗಮಸ್ತಥಾ ತ್ರಿವಿಧೇ ಭಿನ್ನಭಾವೇನ ಶ್ವಾನಯೋನಿಷು ಜಾಯತೇ ''_ ಇಂತೆಂಬ ಶಿವನವಾಕ್ಯವನರಿಯದೆ, ನೀವೇ ಲಿಂಗವೆಂಬಿರಿ ಲಿಂಗವೆ ನೀವೆಂಬಿರಿ ಜನನ_ಮರಣ, ತಾಗು_ನಿರೋಧ ಉಳ್ಳನ್ನಕ್ಕರ ನೀವೆಂತು ಲಿಂಗವಪ್ಪಿರಿ ಹೇಳಿರಣ್ಣಾ ? ಆ ಶಿವಜ್ಞಾನದ ಮಹಾವರ್ಮವನರಿಯದೆ ಲಿಂಗದೊಡನೆ ಸಹಭೋಜನವ ಮಾಡಿದೊಡೆ ಅಘೋರನರಕದಲ್ಲಿಕ್ಕದೆ ಬಿಡುವನೆ ನಮ್ಮ ಕೂಡಲಚೆನ್ನಸಂಗಮದೇವನು ?
--------------
ಚನ್ನಬಸವಣ್ಣ
ಲಿಂಗಜಂಗಮ ಜಂಗಮಲಿಂಗದ ಮುಖವ ನೀವಲ್ಲದೆ ಇನ್ನು ಬಲ್ಲವರಾರಯ್ಯಾ ? ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದಲ್ಲಿ ಪರವಾದಿ ಬಿಜ್ಜಳನು ಒರೆದು ನೊಡಲೆಂದಟ್ಟಿದಡೆ ಹಗರಣಿಗರ ಜಂಗಮಮುಖದಲ್ಲಿ ಲಿಂಗವ ಮಾಡಿದವರಾರು ಹೇಳಾ ನೀವಲ್ಲದೆ ? ಮರದ ಮಾನಿಸನ ಕರೆದು `ಓ' ಎನಿಸಿ ನುಡಸಿ ಉಡಿಸಿ ಉಣಿಸಿ ಜಂಗಮಲಿಂಗಪ್ರಾಣಿ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ ಈ ಕಲ್ಯಾಣದಲ್ಲಿ ನೀವಲ್ಲದೆ ? ಜಂಗಮಮುಖಲಿಂಗವನರಿಯೆನೆಂದು ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದಡೆ ನಾನು ಸೈರಿಸಬಲ್ಲೆನೆ ? ನೀನು ಜಂಗಮಮುಖಲಿಂಗಸಂಬಂಧಿ ಎಂಬುದ ಕೇಳಿ ಆದಿಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ ನಿನ್ನನರಿಸಿಕೊಂಡು ಬರುತ್ತಲೈದಾನೆ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ಸಂಗನಬಸವಣ್ಣಾ, ನೀನೇ ಜಂಗಮಪ್ರಾಣಿಯೆಂದು ನಾನು ನಂಬಿದೆನು.
--------------
ಚನ್ನಬಸವಣ್ಣ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಲಿಂಗಕ್ಕೆ ಬೇರೆ ಭಾಜನ ತಮಗೆ ಬೇರೆ ಭಾಜನವೆಂದೆಂಬರು ನಾನಿದನರಿಯೆನಯ್ಯಾ. ಅಂಗದ ಮೇಲೆ ಪ್ರಾಣ[ಲಿಂಗ]ಪ್ರತಿಷ್ಠೆಯಾದ ಬಳಿಕ ಲಿಂಗಕ್ಕೆಯೂ ತಮಗೆಯೂ ಏಕಭಾಜನವಿಲ್ಲದನ್ನಕ್ಕ ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ ? ಇದನರಿದು ಏಕಭಾಜನವಾಗದಿದ್ದಡಂತದು ದೋಷ ಅರಿಯದೆ ಏಕಭಾಜನವಾದಡಿಂತು ದೋಷ. ಈ ಕುಳಸ್ಥಳದ ಭೇದವ ಭೇದಿಸಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, ಜಂಗಮನಿಷ್ಠೆ ಅನುಸರಣೆಯಲ್ಲಿ ಬೀಯವಾಯಿತ್ತು, ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಯಿತ್ತು, ಇಂತೊಂದರ ನಿಷ್ಠೆ ಅಂದಂದಿಂಗೆ ಬೀಯವಾಯಿತ್ತು, ಕೂಡಲಚೆನ್ನಸಂಗಯ್ಯನ ಭಕ್ತಿ ಜಗವನಾಳಿಗೊಂಡಿತ್ತು.
--------------
ಚನ್ನಬಸವಣ್ಣ
ಲೋಕವಿರಹಿತ ಶರಣ, ಶರಣವಿರಹಿತ ಲೋಕ. ಊರ ಹೊಂದ, ಕಾಡ ಹೊಂದ, ಆಪ್ಯಾಯನ ಭುಕ್ತಿವಿರಹಿತ ಕೂಡಲಚೆನ್ನಸಂಗಮದೇವರಲ್ಲಿ ಲಿಂಗನಿಜೈಕ್ಯನು.
--------------
ಚನ್ನಬಸವಣ್ಣ
ಲಿಂಗಸ್ಥಲವಿಲ್ಲದವರ ಭಕ್ತರೆಂಬೆ, ಗುರುಸ್ಥಲವಿಲ್ಲದವರ ಪ್ರಸಾದಿಗಳೆಂಬೆ (ಶಿಷ್ಯರೆಂಬೆ?), ಪ್ರಸಾದಿಸ್ಥಲವಿಲ್ಲದವರ ಜಂಗಮವೆಂಬೆ, ಈ ತ್ರಿವಿಧಸ್ಥಲವಿಲ್ಲದವರ ಶರಣರೆಂಬೆ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಭವಿಸಹಿತವಾಗಿದ್ದಾತನ ಲಿಂಗೈಕ್ಯನೆಂಬೆ.
--------------
ಚನ್ನಬಸವಣ್ಣ
ಲಿಂಗ ಜಂಗಮ ಪ್ರಸಾದವೆಂಬರು, ಲಿಂಗವೆಂದಡೆ ಅಂಗದೊಳಗಾಯಿತ್ತು, ಜಂಗಮವೆಂದಡೆ ಆಸೆಗೊ?ಗಾಯಿತ್ತು, ಪ್ರಸಾದವೆಂದಡೆ ವಿಷಯಕ್ಕೊಳಗಾಯಿತ್ತು_ ಇಂತೀ ತ್ರಿವಿಧವು ನಷ್ಟ ಇವರ ಮೇಲಣ ಅಂಕುರಿತವ ಬಲ್ಲ ಜಂಗಮವ ತೋರಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗದ ಕಲೆ ಅಂತರಂಗಕ್ಕೆ ವೇದಿಸುವ ಹಲವು ಸಾಧನಂಗಳಲ್ಲಿ ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯಾ. ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹರಿಚದಂತಿರ್ದಡೆ ಆ ಲಿಂಗವು ಕಂಗಳಲ್ಲಿ ವ್ಯಾಪಿಸುತಿಪ್ಪುದು. ಆ ಮಂಗಲಮಯವಾದ ಕಂಗಳಲ್ಲಿ ಮನವಿರಿಸಿ, ಲಿಂಗನಿರೀಕ್ಷಣೆಯಿಂದ ನೆನೆಯಲು, ಆ ಲಿಂಗಮೂರ್ತಿ ಮನವನಿಂಬುಗೊಂಡು ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು. ಬಳಿಕ ಮನೋಮಯಲಿಂಗವನು ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು, ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು ಭಾವಲಿಂಗವಾಗಿ ಕಂಗೊಳಿಸುತಿಪ್ಪುದು. ಆ ಭಾವಲಿಂಗವನು ಎಡೆವಿಡದೆ ಭಾವಿಸುತ್ತ, ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು, ಶರಣನು ನಿತ್ಯತೃಪ್ತನಾಗಿ ವಿರಾಜಿಸುತಿಪ್ಪನು. ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ ಕೂಡುವ ಪರಮೋಪಾಯವು.
--------------
ಚನ್ನಬಸವಣ್ಣ
ಲಿಂಗ ಲಿಂಗವೆಂದು ಕಾಣದನ್ನಕ್ಕ, ಜಂಗಮ ಜಂಗಮವೆಂದು ಕಾಣದನ್ನಕ್ಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಅರಿವಿನೊಳಗಣ ಘನವೆ ಸುಳುಹಡಗಿದ ಸೂತಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯ, ಸರ್ವಾಂಗ ಸಂದೇಹಿಗಳಿಗೆಂತೊಲಿವ ?
--------------
ಚನ್ನಬಸವಣ್ಣ
ಲಯ ಗಮನ ಶೂನ್ಯವಾಗಿರ್ಪುದು ಶಿವಲಿಂಗ ತಾನೆ ನೋಡಾ ! ಕೇವಲ ನಿಷ್ಕಲರೂಪವಾಗಿರ್ಪುದು ಪರತರ ಪರಬ್ರಹ್ಮ ತಾನೆ ನೋಡಾ ! ಭಕ್ತನ ಕರಕಂಜದಲ್ಲಿ ಖಂಡಿತಾಕಾರದಿಂದ ರೂಪುಗೊಂಡಿರ್ದು ಅನಿಷ್ಟವ ಕಳೆದು ಇಷ್ಟಾರ್ಥವನೀವುದು ಪರವಸ್ತು ನೋಡಾ ಕೂಡಲಚೆನ್ನಸಂಗಮದೇವಾ, ನಿಮ್ಮ ಒಲವು.
--------------
ಚನ್ನಬಸವಣ್ಣ
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಅಜ್ಞಾನಿಗಳು ತಾವೆ ಲಿಂಗವೆಂದೆಂಬರು. ತಾವೆ ಲಿಂಗವಾದಡೆ ಜನನ ಸ್ಥಿತಿ ಮರಣ ರುಜೆ ಸಂಸಾರಬಂಧನವಿಲ್ಲದಿರಬೇಕು. ಮಹಾಜ್ಞಾನವ ಬಲ್ಲೆವೆಂದು, ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪಾತಕರ ಎನಗೊಮ್ಮೆ ತೋರದಿರಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗಜಂಗಮ ಭಕ್ತಿಯ ಮಾಡಿಸಿಕೊಂಬಲ್ಲಿ ವಿವರವುಂಟು; ¯õ್ಞಕಿಕ ಅಲೌಕಿಕ ಸಹಜವೆಂಬ ಮಾಟತ್ರಯವನರಿದು_ ¯õ್ಞಕಿಕಭಕ್ತರಲ್ಲಿ ಅವರಿಚ್ಛೆಯಲ್ಲಿರ್ದು ಭಕ್ತಿಯ ಮಾಡಿಸಿಕೊಂಬುದು. ಅ¯õ್ಞಕಿಕ ಭಕ್ತರಲ್ಲಿ ತಾ ಕರ್ತನಾಗಿ ಅವರು ಭೃತ್ಯರಾಗಿ ಭಕ್ತಿಯ ಮಾಡಿಸಿಕೊಂಬುದು. ಸಹಜಭಕ್ತರಲ್ಲಿ ಕರ್ತೃತ್ವ ಭೃತ್ಯತ್ವವಿಲ್ಲದೆ ಭಕ್ತಿಯ ಮಾಡಿಸಿಕೊಂಬುದು. ಇಂತಿದು ಲಿಂಗಜಂಗಮದ ಜಾಣಿಕೆ ಕಾಣಿರೆ ! ಹೀಗಿಲ್ಲದೆ ಅವರ ಕಾಡಿ ಕರಕರಿಸಿ ಅವರ ಭಂಡು ಮಾಡಿ ತಾ ಭಂಡನಹ ಭಂಡನ ಮುಖವ ತೋರದಿರು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಜಂಗಮದಲ್ಲಿ ಕುಲಸೂತಕವ ಹಿಡಿವನ್ನಕ್ಕ ಶಿವಚಾರಯುಕ್ತನಾದ ಭಕ್ತಾನುಭಾವಿಯಲ್ಲ. ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವನ್ನಕ್ಕ, ಪ್ರಸಾದಿಯಲ್ಲ, ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ, ಅವಂಗೆ ಲಿಂಗವಿಲ್ಲ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಲಿಂಗ ಲಿಂಗವೆಂಬವ ಲಿಂಗಸೂತಕಿಯಯ್ಯ, ಜಂಗಮ ಜಂಗಮವೆಂಬವ ಜಂಗಮಸೂತಕಿಯಯ್ಯ, ಪ್ರಸಾದ ಪ್ರಸಾದವೆಂಬವ ಪ್ರಸಾದಸೂತಕಿಯಯ್ಯ ಈ ತ್ರಿವಿಧ ಸೂತಕಿಯ ಮಾತ ಕೇಳಲಾಗದು. ಸರ್ವಸೂತಕ ನಿರ್ವಾಹವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಲಿಂಗದಲ್ಲಿ ಅರ್ಪಿತ, ಜಂಗಮದಲ್ಲಿ ಅನರ್ಪಿತ, ಪ್ರಸಾದದಲ್ಲಿ ಉಭಯ ನಾಸ್ತಿ. ಈ ತ್ರಿವಿಧಸಮ್ಮತವ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ ಕಾಣಿರೆ.
--------------
ಚನ್ನಬಸವಣ್ಣ
ಲೋಕವಿರೋಧಿ ಭಕ್ತ, ಭಕ್ತವಿರೋಧಿ ಶರಣ, ಶರಣವಿರೋಧಿ ಲಿಂಗೈಕ್ಯ_ ಈ ತ್ರಿವಿಧವಿರೋಧಿ ಕೂಡಲಚೆನ್ನಸಂಗಯ್ಯನಲ್ಲಿ ಮಹಾಲಿಂಗೈಕ್ಯವು.
--------------
ಚನ್ನಬಸವಣ್ಣ
ಲಿಂಗಮುಖವು ಜಂಗಮವೆಂದುದಾಗಿ, ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತು ತತ್‍ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆ ಅದು ಅಶನವೆಂಬೆ, ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ, `ಸಾಶನಾನಶನೇ ಭಿ' ಎಂದುದಾಗಿ. ಇಂತೀ ಅಶನ ಅನಶನಗಳ ಭೇದವನರಿಯದೆ ತನುವ ದಂಡಿಸದೆ ಮನವ ಖಂಡಿಸದೆ ತನಗಾಗಿ ಜನವ ಮೋಸಂಗೈದು ತಂದು ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು, ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ. ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನು ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?
--------------
ಚನ್ನಬಸವಣ್ಣ
ಲಿಂಗವಂತನ ಲಿಂಗವೆಂಬುದೆ ಶೀಲ. ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ. ಲಿಂಗವಂತನ ಅರ್ಥ-ಪ್ರಾಣ-ಅಭಿಮಾನಕ್ಕೆ ತಪ್ಪದಿಪ್ಪುದೆ ಶೀಲ. ಲಿಂಗವಂತನ ಪಾದೋದಕ-ಪ್ರಸಾದಸೇವೆಯ ಮಾಡುವುದೆ ಶೀಲ. ಇಂತಪ್ಪ ಶೀಲವೇ ಶೀಲ. ಉಳಿದ ಶೀಲಕ್ಕೆ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ

ಇನ್ನಷ್ಟು ...