ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದವನೋದುವ ಅಣ್ಣಗಳು ನೀವು ಕೇಳಿರೊ ! ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ; ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ_ ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇದವನೋದಿ ಹೊನಲಲ್ಲಿ ಹೋದ ದ್ವಿಜರು, ಕೆಟ್ಟ ಕೇಡಿಂಗೆ ಕಡೆಯಿಲ್ಲ. ಅದು ಹೇಗೆಂದಡೆ:ಹೇಮದಾಸೆಗೆ ಒಕ್ಕಲಿಗಂಗೆ ದತ್ತಪುತ್ರನಾಗೆಂದು ಹೇಳಿತ್ತೆ ವೇದವು ? ಕೊರಡಿನ ಮೇಲೆ ಕುಳಿತು ತುತ್ತು ಗದ್ಯಾಣವ ನುಂಗಿ ಸೀಮೆಯಹೊರವಡಿಸಿಕೊಳ್ಳೆಂದು ಹೇಳಿತ್ತೆವೇದ? ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಹೊನ್ನಕಪಿಲೆಯ ಕೊಂದು ನರಕಕ್ಕಿಳಿಯ ಹೇಳಿತ್ತೆವೇದ? `ಅಹಿಂಸಾ ಪರಮೋ ಧರ್ಮಃ' ಎಂದೋದಿ, ಅಸುರಭೋಜನಕ್ಕೆ ಅಂಗವಿಸಿ ಕರ್ಮವ ಮಾಡಿ ಹೋತ ಕೊಂದು ತಿಂಬುದು ಪಾತಕವಲ್ಲವೆ ? `ಪರಮೋ ಧರ್ಮಃ ಹಿರಣ್ಯಗರ್ಭಃ' ಎಂದು ಹೊನ್ನ ಕಪಿಲೆಯಂ ಮಾಡಿ ಕಡಿದು ಹಂಚಿಕೊಂಬುದು ಚಾಂಡಾಲವಲ್ಲವೆ ? ಹೊಲೆಯನಂತೆ ಹುಲುವೆಣನ ಸುಟ್ಟು ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಹಸುವಿನ ಉತ್ಕ್ರಾಂತಿಯ ಕಾನನದಲ್ಲಿ ಕೂಳು ಭೋಜನವನುಂಡು, ಲೋಕೋಪಚಾರಕ್ಕೆ ಒಳಗಾಗಿ ಪಾಪಕರ್ಮವ ಮಾಡಿ ಸಲ್ಲದೆ ಹೋದರು ಶಿವನಲ್ಲಿಗೆ. ಕೂಡಲಚೆನ್ನಸಂಗಮದೇವ ಶಿವಭಕ್ತಂಗೊಲಿದ ಕಾರಣ ಕಂಚಿಯ ಏಳು ಕೇರಿಯ ಕೈಲಾಸಕ್ಕೊಯ್ದ.
--------------
ಚನ್ನಬಸವಣ್ಣ
ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ, ಕೊಂಡಾಡಿಸಿಕೊಳ್ಳಲ್ಪಟ್ಟ ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ. ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ, ಅವನು ಬ್ರಾಹ್ಮಣನಲ್ಲ, ಅವನು ಪಂಚಮಹಾಪಾತಕ, ಆತ ಶ್ವಪಚನೆಂದು ಪುರಾಣಪ್ರಸಿದ್ಧ. ಅದೆಂತೆಂದಡೆ, ಗರುಡಪುರಾಣದಲ್ಲಿ: ``ಶ್ರುತಯಃ ಸ್ಮೃತಯಸ್ಸರ್ವೇ ಪುರಾಣಾನ್ಯಖಿಲಾನಿ ಚ ವದಂತಿ ಭೂತಿಮಹಾತ್ಮ್ಯಂ ತತಸ್ತಂ ಧಾರಯೇದ್ದ್ವಿಜಃ ತದಭಾವೇ ತಥಾ ವಿಪ್ರೋ ಲೌಕಿಕಾಗ್ನಿಂ ಸಮಾಹರೇತ್ ಭಸ್ಮನೈವ ಪ್ರಕುರ್ವೀತ ನ ಕುರ್ಯಾನ್ಮೃತ್ತಿಕಾದಿಭಿಃ ಗೋಪೀಚಂದನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ ಶತೈಕವಿಂಶತಿಕುಲಂ ಸೋ[s]ಕ್ಷಯಂ ನರಕಂ ವ್ರಜೇತ್ ಮತ್ತಂ ಕೂರ್ಮಪುರಾಣದಲ್ಲಿ: ತ್ರಿಪುಂಡ್ರಂ ಬ್ರಾಹ್ಮಣೋ ವಿದ್ವಾನ್ ಮನಸಾ[s]ಪಿ ಲಂಘಯೇತ್ ಶ್ರುತ್ಯಾ ವಿಧೀಯತೇ ತಸ್ಮಾತ್ತ್ಯಾಗೀ ತು ಪತಿತೋ ಭವೇತ್ ಎಂದುದಾಗಿ ನಮ್ಮ ಕೂಡಲಚೆನ್ನಸಂಗಮದೇವರಲ್ಲಿ, ಶ್ರುತಿಸ್ಮೃತಿ ಪ್ರಸಿದ್ಧವಾದ ಶ್ರೀಮಹಾವಿಭೂತಿಯನಿಟ್ಟಾತನೆ ಸದ್ಬ್ರಾಹ್ಮಣ. ಈ ಮಹಾವಿಭೂತಿಯ ಬಿಟ್ಟು ಮಣ್ಣು ಮಸಿ ಮರದ ರಸಂಗಳ ಹಣೆಯಲ್ಲಿ ಬರೆದುಕೊಂಡನಾದಡೆ ಆವ ವಿಪ್ರನಲ್ಲ; ಆವ ಪಾಪಿ, ಶುದ್ಧ ಶ್ವಪಚ ಕಾಣಿಭೋ
--------------
ಚನ್ನಬಸವಣ್ಣ
ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ, ಅದು ವಿಭೂತಿ ಅಹುದೊ ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ ? ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ ? ನಿಃಕ್ರಿಯ ನಿಃಕಾಮ್ಯ ನಿರುಪಾಧಿಕದಿಂದ ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ. ಅದಕ್ಕಂಜುವುದು, ಬೆಚ್ಚುವುದು, ಅದಕ್ಕೆ ತಪ್ಪಿದಡೆ ತಪ್ಪಿದುದು, ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು. ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು ಧನದುಪಾಧಿಕೆಗೆ ಅಹುದನಲ್ಲವ ಮಾಡಿ, ಕುಚೇಷ್ಟೆವಿಡಿದು ಚರಿಸುವುದು ವಿಭೂತಿಯೆ ? ಅಲ್ಲ. ಅದಕಂಜಲಿಲ್ಲ ಬೆಚ್ಚಲಿಲ್ಲ. ಅದೇನು ಕಾರಣವೆಂದೆಡೆ_ ವಿಭೂತಿಯಲ್ಲಾಗಿ. ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ ?
--------------
ಚನ್ನಬಸವಣ್ಣ
ವಾಙ್ಮನಕ್ಕೆ ಗೋಚರ ಲಿಂಗ, ಅಗೋಚರ ಶರಣ. ಸಕಾಯ ಲಿಂಗ, ಅಕಾಯ ಶರಣ. ಆದಿ ಲಿಂಗ, ಅನಾದಿ ಶರಣ:ಪೂರ್ವಿಕ ಲಿಂಗ, ಅಪೂರ್ವಿಕ ಶರಣ ಇದು ಕಾರಣ_ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಲಿಂಗೈಕ್ಯ ಕಾಣಾ ಪ್ರಭುದೇವರು.
--------------
ಚನ್ನಬಸವಣ್ಣ
ವಾಯುವಶದಿಂದ ತರುಗಳಲ್ಲಾಡುವವು, ಭರತವಶದಿಂದ ಮೃದಂಗಾದಿಯಾದ ಪಟಹ ನುಡಿವವು, ಕೂಡಲಚೆನ್ನಸಂಗಯ್ಯಾ, ಲಿಂಗವಶದಿಂದ ಶರಣ ಮಾತಾಡುವ.
--------------
ಚನ್ನಬಸವಣ್ಣ
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು ? ಸುತ್ತಳಿದು ಬತ್ತಲೆಯಿದ್ದರೇನು ? ಕಾಲರಹಿತನಾದಡೇನು ? ಕರ್ಮರಹಿತನಾದರೇನು ? ಕೂಡಲಚೆನ್ನಸಂಗನ ಅನುಭಾವವನರಿಯದವರು ಏಸು ಕಾಲವಿದ್ದರೇನು ? ವ್ಯರ್ಥಕಾಣಿರೋ !
--------------
ಚನ್ನಬಸವಣ್ಣ
ವೇದಪ್ರಿಯನೆಂಬೆನೆ ನಮ್ಮ ದೇವ ? ವೇದಪ್ರಿಯನಲ್ಲ. ನಾದಪ್ರಿಯನೆಂಬೆನೆ ನಮ್ಮ ದೇವ ? ನಾದಪ್ರಿಯನಲ್ಲ. ಭೋಗಪ್ರಿಯನೆಂಬೆನೆ ನಮ್ಮ ದೇವ ? ಭೋಗಪ್ರಿಯನಲ್ಲ. ತುತ್ತುಪ್ರಿಯನೆಂಬೆನೆ ನಮ್ಮ ದೇವ ? ತುತ್ತುಪ್ರಿಯನಲ್ಲ. ಮನದ ಭಕ್ತಿಪ್ರಿಯ ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ ಹದಿನೆಂಟು ಪುರಾಣಂಗಳಾದವು. ಆ ಪುರಾಣಂಗಳನರಿವುದರಿಂದೆ ಜ್ಯೋತಿಜ್ರ್ಞಾನವಾಯಿತ್ತು. ಆ ಜ್ಯೋತಿಜ್ರ್ಞಾನದಿಂದೆ; _ಮತಿಜ್ಞಾನ, ಶ್ರುತಜ್ಞಾನ, ಮನಪರಿಪೂರ್ಣಜ್ಞಾನ, ಅವಧಿಜ್ಞಾನ ಕೇವಲಜ್ಞಾನ. _ಇಂತೀ ಪಂಚಜ್ಞಾನವೆ ಪಂಚಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ, ಶ್ರುತಜ್ಞಾನವುಳ್ಳಾತನೆ ಮಹೇಶ್ವರ, ಮನಪರಿಪೂರ್ಣ ಜ್ಞಾನವುಳ್ಳಾತನೆ ಪ್ರಸಾದಿ, ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ, ಕೇವಲಜ್ಞಾನವುಳ್ಳಾತನೆ ಶರಣ, ಶರಣಸ್ಥಲವೆಂಬುದು ಭವಂ ನಾಸ್ತಿ. ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ರ್ಞಾನವೆ ಪಂಚಸ್ಥಲದಲ್ಲಿ ಏಕಾಕಾರವಾದ ಐಕ್ಯನು_ ಇಂತೆಂದುದಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು
--------------
ಚನ್ನಬಸವಣ್ಣ
ವಿಷದಷ್ಟವಾದ ನರನ, ಗಾರುಡಮಂತ್ರೌಷಧದಿಂದ ಆರೋಗ್ಯಕಾಯನ ಮಾಡುವಂತೆ, ಶೈವಗುರುವಿನ ಕೈಯಲ್ಲಿ ಮಂತ್ರೋಪದಿಷ್ಟನಾದ ಶಿಷ್ಯಂಗೆ, ವೀರಶೈವದ ಮಂತ್ರೋಪದೇಶದಿಂದ ಆತನ ಕಾಯಶುದ್ಧನ ಮಾಡಿ ಆತನ ಲಿಂಗಕ್ಕೆ ಪ್ರಾಣಪ್ರತಿಷೆ*ಯ ತುಂಬಿ ಆತನ ಅಂಗದ ಮೇಲೆ ಲಿಂಗವ ಬಿಜಯಂಗೈಸಿ ಕೃತಕೃತ್ಯನಂ ಮಾಡಿದ ನಮ್ಮ ವೀರಶೈವಗುರು, ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ವೇದ ವೇದಾಂತವನೋದಿ ಜ್ಞಾನ ಸೂರೆಯ ಮಾಡುವ ಜಂಗಮ ಕ್ರಿಯಾಹೀನನಾದಡೆ ಆಗಮಸಮರಸ ಆತನಲ್ಲ. ಅದೇನು ಕಾರಣವೆಂದಡೆ:ನುಡಿದಂತೆ ನಡೆಯನು. ಅಲ್ಲಿ ಕೂಡಲಚೆನ್ನಸಂಗಮದೇವ ನಿಲ್ಲಲಾರನು ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ವೇದಾಂತಿಗಳಂತೆ ಜ್ಞಾನಬದ್ಧರಲ್ಲ, ಮುನಿಗಳಂತೆ ಕ್ರಿಯಾಬದ್ಧರಲ್ಲ, ಸಾಧಕರಂತೆ ಕಾರ್ಯಬದ್ಧರಲ್ಲ. ಜ್ಞಾನಕ್ರಿಯಾಕಾರ್ಯಗಳಲ್ಲಿ ಕೂಡಲಚೆನ್ನಸಂಗನ ಶರಣರು ನಿರತರು ಕಾಣಾ ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ ವಿವರ: ವಾಕು:ನುಡಿವುದು, ಪಾಣಿ:ಮಾಡುವುದು ಪಾದ:ನಡೆವುದು, ಪಾಯು:ಸರ್ವಾಂಗದಲ್ಲಿ ಕೂಡುವುದು. ಗುಹ್ಯ:ಸೇರಿಸುವುದು. ಇಂತೀ ಪಂಚಕರ್ಮೇಂದ್ರಿಯಂಗಳಲ್ಲಿ ಚರಿಸದೆ ಸುಚಾರಿತ್ರದಲ್ಲಿ ನಡೆಯಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.
--------------
ಚನ್ನಬಸವಣ್ಣ
ವಾಸಿಸುವ ನಾಸಿಕ ನೀನೆಂದರಿದೆ, ರುಚಿಸುವ ಜಿಹ್ವೆ ನೀನೆಂದರಿದೆ, ನೋಡುವ ನಯನ ನೀನೆಂದರಿದೆ, ಮುಟ್ಟುವ ತ್ವಕ್ಕು ನೀನೆಂದರಿದೆ, ಕೇಳುವ ಶ್ರೋತ್ರ ನೀನೆಂದರಿದೆ_ ಇದು ಕಾರಣ ಕೂಡಲಚೆನ್ನಸಂಗಯ್ಯಾ, ನಾ ನಿಮ್ಮ ಬೇಡಲಿಲ್ಲಾಗಿ ಕೂರ್ತು ಕೊಡಲಿಲ್ಲ
--------------
ಚನ್ನಬಸವಣ್ಣ
ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ ದೈವಂಗಳಿಗೆ, ನಮ್ಮ ಕುಲದೈವಂಗಳೆಂದು ಹೇಳುವವರಿಗೆ ಗುರುವಿಲ್ಲ ಲಿಂಗವಿಲ್ಲ ಪಾದೋದಕ_ಪ್ರಸಾದವಿಲ್ಲ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು? ಸುತ್ತಳಿದು ಬತ್ತಲೆಯಿದ್ದರೇನು? ಕಾಲರಹಿತನಾದಡೇನು? ಕರ್ಮರಹಿತನಾದರೇನು? ಕೂಡಲಚೆನ್ನಸಂಗನ ಅನುಭಾವವನರಿಯದವರು ಏಸು ಕಾಲವಿದ್ದರೇನು? ವ್ಯರ್ಥಕಾಣಿರೋ !
--------------
ಚನ್ನಬಸವಣ್ಣ
ವಲಿತ ಪಲಿತಪ್ರಸಾದವವ್ವಾ, ಆದಿವ್ಯಾಧಿ ಪ್ರಸಾದವವ್ವಾ, ಗಮನಾಗಮನ ಪ್ರಸಾದವವ್ವಾ; ಸ್ವಯವವ್ವಾ, ಕೂಡಲಚೆನ್ನಸಂಗನ ಪ್ರಸಾದವವ್ವಾ !
--------------
ಚನ್ನಬಸವಣ್ಣ
ವಿಷಯಾಭಿಲಾಷೆಯಲ್ಲಿ ವಿರಾಗವು ನೆಲೆಯಾಗಿ, ಅಷ್ಟಾವರಣದ ಆಚಾರವೆ ಅಂಗವಾದಡೆ; ಮರುಳುಗೊಳಿಪ ಮಾರನ ಮಾಟವು ದೂರವಾಗುವುದಯ್ಯಾ. ಅನಾಹತಶಬ್ದದ ಅನುಸಂಧಾನದಿಂದ, ಅವಸ್ಥಾತ್ರಯದಲ್ಲಿ ತೋರುವ ತನು ಮೂರರ ವಾಸನೆಯು ನಾಶವಾಗುವುದಯ್ಯಾ. ಇಷ್ಟಲಿಂಗದಲ್ಲಿಟ್ಟ ದೃಷ್ಟಿ, ಬಿಂದುವಿನ ಪರಿಪರಿಯ ಬಣ್ಣವ ನೋಡಿ ನೋಡಿ ದಣಿದು, ಶಿವಕಲಾರೂಪದಲ್ಲಿ ವ್ಯಾಪಿಸಿ, ಕಂಗಳ ಎವೆ ಮಾಟವಿಲ್ಲದೆ ಲಿಂಗಲಕ್ಷ್ಯವು ಕದಲಂತಿದ್ದಡೆ ಕಾಲನ ಕಾಟವು ತೊಲಗಿ ಹೋಗುವುದಯ್ಯಾ. ಇಂತೀ ಸಾಧನತ್ರಯವು ಸಾಧ್ಯವಾದ ಶರಣಂಗೆ ಕಾಲ_ಕಾಮ_ಪುರವೈರಿಯಾದ ನಮ್ಮ ಕೂಡಲಚೆನ್ನಸಂಗಯ್ಯನು ಮನ್ನಣೆಯ ಮುಕ್ತಿಯನೀವನು
--------------
ಚನ್ನಬಸವಣ್ಣ
ವಾರವೇಳು ಕುಲ ಹದಿನೆಂಟು ಎಂಬರಯ್ಯಾ ಅದ ನಾವು ಅಲ್ಲವೆಂಬೆವು. ಇರುಳೊಂದು ವಾರ ಹಗಲೊಂದು ವಾರ, ಭವಿಯೊಂದು ಕುಲ, ಭಕ್ತನೊಂದು ಕುಲ, ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವಿಶ್ವವೆಲ್ಲವೂ ಮಾಯೆಯ ವಶವಾಗಿ, ವಿಶ್ವದೊಳಗಾದ ದ್ರವ್ಯವ ಮಾಯೋಚ್ಛಿಷ್ಟವೆಂದು ಶಿವನೊಲ್ಲ. ಅಂತಪ್ಪ ಮಾಯೆಯ ಗೆಲಿದು, ಮಾಯಾತೀತರಾದ ಭಕ್ತರಿಂದೊದಗಿದ ಪ್ರಸಾದ, ಮಾಯಾತೀತನಾದ ಶಿವಂಗೆ ಮಹಾನೈವೇದ್ಯ, ಪರಮತೃಪ್ತಿ ಎಂಬುದ ನಾ ಬಲ್ಲೆನಯ್ಯಾ. ಅದೆಂತೆಂದಡೆ: ಮಾಯೋಚ್ಛಿಷ್ಟಂ ಜಗತ್ಸರ್ವಂ ಶುದ್ಧಂ ಪಂಚಾಕ್ಷರೇಣ ಚ ಅಭಿಮಂತ್ರ್ಯ ತದುಚ್ಛಿಷ್ಟಂ ಪದಾರ್ಥಂ ಭಕ್ತಿಮಾನ್ನರಃ ಚರಲಿಂಗೇ ವಿಚಾರೇಣ ಸಮರ್ಪ್ಯ ತದನಂತರಂ ಸ್ವಲಿಂಗೇ ಚ ಪ್ರಸಾದಾನ್ನಂ ದತ್ವಾ ಭೋಜನಮಾಚರೇತ್ ಎಂದುದಾಗಿ ಚೆನ್ನಯ್ಯನುಂಡು ಮಿಕ್ಕುದ ಚಪ್ಪರಿದು ಸವಿದ, ಚೋಳಿಯಕ್ಕನೊಕ್ಕುದ ಕೊಂಡ. ಇದು ಕಾರಣ_ ನಿಮ್ಮ ಪರಮಕಲಾರೂಪವಾದ ಜಂಗಮದ ಪ್ರಸಾದವ ನಿಮಗೆ ದಣಿಯಿತ್ತು ನಿಮ್ಮ ಪ್ರಸಾದವೆಂಬ ಜ್ಯೋತಿ ಎನ್ನಂಗ_ಪ್ರಾಣ_ಭಾವ_ಜ್ಞಾನ ಹಿಂಗದೆ ಬೆಳಗುತ್ತಿದೆ, ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವಾಯದ ಮಾಯದಲ್ಲಿ ಹುಟ್ಟಿದ ಕಷ್ಟದಳವನೆ ಬಿಟ್ಟು ನಿಷೆ*ಯಿಂದ ನಿಮ್ಮ ಶ್ರೀಚರಣಕ್ಕೆರಗಿದೆನು. ಪ್ರಸಾದವ ಕಾರುಣ್ಯವ ಮಾಡು ಗುರುವೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇದ ಘನವೆಂಬೆನೆ ? ವೇದ ವೇಧಿಸಲರಿಯದೆ ಕೆಟ್ಟವು. ಶಾಸ್ತ್ರ ಘನವೆಂಬೆನೆ ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು. ಪುರಾಣ ಘನವೆಂಬೆನೆ ? ಪುರಾಣ ಪೂರೈಸಲರಿಯದೆ ಕೆಟ್ಟವು. ಆಗಮ ಘನವೆಂಬೆನೆ ? ಆಗಮ ಅರಸಲರಿಯದೆ ಕೆಟ್ಟವು. ಅದೇನು ಕಾರಣವೆಂದಡೆ: ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ, ತಮ್ಮ ತನುವಿಡಿದು ಅರಸಲರಿಯವು. ಇದಿರಿಟ್ಟುಕೊಂಡು ಕಡೆಹೋದ, ನರಲೋಕದ ನರರುಗಳರಿಯರು, ಸುರಲೋಕದ ಸುರರುಗಳರಿಯರು, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.
--------------
ಚನ್ನಬಸವಣ್ಣ
ವೀರಶೈವನಾದಡೆ ಪರಧನವ ಪರಸತಿಯರ ಮುಟ್ಟದಿರಬೇಕು. ಎಂತೂ ಪರಹಿಂಸೆಯನೆಸಗದಿರಬೇಕು. ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು. ಇಂತೀ ವೀರಾಚಾರವು ನೆಲೆಗೊಳ್ಳದೆ ವೀರವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯಾ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ