ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಲಿಗರ ಮಾತು, ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ ? ರಚ್ಚೆಯ ಕೆಟ್ಟ ಬೀದಿಯ ಮಾತಿನೊಳಗುಂಟೆ ಲಿಂಗಾನುಭಾವ ? ಸಂತೆಯೊಳಗೆ ಸಮಾಧಿಯುಂಟೆ ? ಇದು ಕಾರಣ ಕೂಡಲಚೆನ್ನಸಂಗಯ್ಯನ ಅನುಭಾವ ಹೊರವೇಷದ ವಾಚಾಳರಿಗೆಲ್ಲಿಯದು.
--------------
ಚನ್ನಬಸವಣ್ಣ
ಉಭಯ ಕಾಮ, ಉಭಯ ಶಕ್ತಿ, ಉಭಯ ಆಶ್ರಮವು_ ಅನಾಶ್ರಮವು, ಉಭಯ ತಾನೆ ಪ್ರಸಾದಿ ಉಭಯನಾಮದ ಮೇಲೆ ನಾಮವಾದುದನು ಲಿಂಗದೇಹಿಯೆಂಬಾತಂಗರಿಯಬಾರದು. ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗಲ್ಲದೆ ಅರಿಯಬಾರದು.
--------------
ಚನ್ನಬಸವಣ್ಣ
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ. ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು. ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ. ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ. ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಉರಿಯ ಸೀರೆಯನುಟ್ಟು, ಕಡೆಸೆರಗ ಬಿಡುಬೀಸಿ, ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ, ಪತಿ ಬಂದು ಮುಡಿಯ ಹಿಡಿದು ಸೀರೆಯನುಗಿಯೆ, ಮಡದಿಯೊಡಗೂಡುತ್ತಿರೆ; ಸಮರಸದಲ್ಲಿ ಸತಿಯಳಿದು ಪತಿಯಾಗಿ, ಪತಿಯಳಿದು ನಿಃಪತಿಯಾಗಿ, ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು ಆಚಾರಕ್ಕಿಕ್ಕುವುದಿದು ಭಕ್ತಿಯೆ ? ಉಂಟೆಂಬ ಉದ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ. ಇದು ಕಾರಣ ಕೂಡಲಚೆನ್ನಸಂಗಾ. ಸಜ್ಜನ ಶುದ್ಧ ಶಿವಾಚಾರಿಗಲ್ಲದೆ ಲಿಂಗೈಕ್ಯವಳವಡದು.
--------------
ಚನ್ನಬಸವಣ್ಣ
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.
--------------
ಚನ್ನಬಸವಣ್ಣ
ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ ಪತ್ರೆ ಪುಷ್ಪ ಅಗ್ಗಣಿಯ ತಂದು ಮಜ್ಜನಕ್ಕೆ ನೀಡೆಹೆನೆಂದಡೆ ನೆನೆಯದು, ಬಲಿಯದು, ಗರಿಗಟ್ಟದಯ್ಯಾ. ನೀರ ತೋರಿದಡೆ ಒಂದು ಹನಿಯನೂ ಮುಟ್ಟದು. ನಿಮ್ಮ ಲಿಂಗದ ಪೂಜೆ ನಮ್ಮ ಜಂಗಮದ ಉದಾಸೀನ- ಇದ ಕಂಡು ನಾ ಬೆರಗಾದೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಾಲದು ನೋಡಾ. ಉಪದೇಶವ ಮಾಡುವ ಗುರು ಒಂದಾದಲ್ಲಿ ಲಿಂಗ ಒಂದು, ಲಿಂಗ ಒಂದಾದಲ್ಲಿ ದೀಕ್ಷೆ ಒಂದು, ದೀಕ್ಷೆ ಒಂದಾದಲ್ಲಿ ಪ್ರಸಾದ ಒಂದು, ಪ್ರಸಾದ ಒಂದಾದಲ್ಲಿ ಭಕ್ತಿ ಒಂದು, ಭಕ್ತಿ ಒಂದಾದಲ್ಲಿ ಮುಕ್ತಿ ಒಂದು, ಅದೆಂತೆಂದಡೆ; ಗುರುರೇಕೋ ಲಿಂಗಮೇಕಂ ದೀಕ್ಷಾಮೇಕಾಂ ಪ್ರಸಾದಕಂ ಏಕಮುಕ್ತಿಮಿದಂ ದೇವಿ ವಿಶೇಷಂ ಶುದ್ಧಭಕ್ತಿಮಾನ್ ದ್ವಯೋರ್ಗುರು ದ್ವಯೋರ್ಲಿಂಗ ದ್ವಯೋದೀಕ್ಷಾ ಪ್ರಸಾದಯೋಃ ಯಥಾದ್ವಯಮಿದಂ ದೇವಿ ವಿಶೇಷಂ ಪಾತಕಂ ಭವೇತ್ ಎಂದುದಾಗಿ ಗುರುವೆರಡಾದಲ್ಲಿ ಲಿಂಗವೆರಡು ಲಿಂಗವೆರಡಾದಲ್ಲಿ ದೀಕ್ಷೆ ಎರಡು ದೀಕ್ಷೆ ಎರಡಾದಲ್ಲಿ ಭಕ್ತಿ ಎರಡು ಭಕ್ತಿ ಎರಡಾದಲ್ಲಿ ಮುಕ್ತಿದೂರ ನೋಡ. ಇಂತೀ ಮುಕ್ತಿದೂರರಿಗೆ ಮುಂದೆ ನರಕ ತಪ್ಪದು ನೋಡಾ. ಇದು ಕಾರಣ ತನ್ನ ಸತಿ-ಸುತ ಪಿತ ಮಾತೆ ಸಹೋದರ ಭೃತ್ಯ ದಾಸಿಯರಿಗುಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಲ್ಲದು ನೋಡಾ. ಅದೆಂತೆಂದಡೆ; ಪತೀ ಪತ್ನಿ ಭ್ರಾತೃಪುತ್ರ ದಾಸಿ ಗೃಹಚರಾದಿನಾಂ ಏಕದೀಕ್ಷಾ ಭವೇಸಿದ್ದೇವಿ ವಿಶೇಷಂತು ಶುದ್ಧಭಕ್ತಿಮಾನ್ ಎಂದುದಾಗಿ, ಒಂದು ಮನೆಗೆ ಗುರುಲಿಂಗವ ಎರಡು ಮಾಡಿಕೊಂಡು ನಡೆದಡೆ ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವನು.
--------------
ಚನ್ನಬಸವಣ್ಣ
ಉಚ್ಚೆಯ ಬಚ್ಚಲ ಶೋಧಿಸುವವರಿಗೆ ಚಿಲುಮೆಯ ಆಯತವೇಕೊ ? ಸತಿಯರ ನರಮಾಂಸವ ಭುಂಜಿಸುವವರಿಗೆ ಪರಪಾಕವರ್ಜಿತವೆಂದು ಸ್ವಯಂಪಾಕವೇಕೊ ? ಅಷ್ಟೋತ್ತರಶತ ವೇದವ ಓದುವವರಿಗೆ ಅಚ್ಚಪ್ರಸಾದವೇಕೊ ? ಇಂತೀ ತ್ರಿವಿಧ ಡಂಬಿನ ಭಕ್ತಿಗೆ ಊರ ಮುಂದಣ ಡೊಂಬನೆ ಸಾಕ್ಷಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಉಭಯತನುಗುಣವಳಿದಲ್ಲದೆ ಅರಿವಿನಾಚಾರವಳವಡದು. ಅರಿವಿನಾಚಾರ ಅ?ವಟ್ಟಲ್ಲದೆ ಲಿಂಗದ ಬೆಳಗು ದೊರೆಕೊಳ್ಳದು, ಲಿಂಗದ ಬೆಳಗು ದೊರೆಕೊಂಡಲ್ಲದೆ ಕೂಡಲಚೆನ್ನಸಂಗಯ್ಯನಲ್ಲಿಪರಿಣಾಮದೊರೆಕೊಳ್ಳದು.
--------------
ಚನ್ನಬಸವಣ್ಣ
ಉಚ್ಛಿಷ್ಟದ ಉದಕದೊ?ಗೆ ಚಂದ್ರಮನ ನೆಳಲಿದ್ದಡೇನು, ಅಲ್ಲಿ ಚಂದ್ರಮನಿದ್ದಾತನೆ ? ಸಂಸಾರದ ವ್ಯಾಪ್ತಿಯಲ್ಲಿ ಶರಣನ ಕಾಯವಿರ್ದಡೇನು, ಅಲ್ಲಿ ಶರಣನಿದ್ದಾತನೆ ? ಕೆಸರೊಳಗಣ ತಾವರೆಯಂತೆ, ಮರದೊಳಗಣ ಬಯಲಿನಂತೆ. ಮಮ ಸಾಹಿತ್ಯರೂಪೇಣ ತಮೋಮಾಯೇ ವಿವರ್ಜಯೇತ್ ಮೇಘದುರ್ಮಲತೋಯಸ್ಥಂ ಕಮಲಪತ್ರಮಿವಾಚರೇತ್ ಇಂತೆಂದುದಾಗಿ, ಇದ್ದೂ ಇರನು, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ಉಂಡುಪವಾಸಿ ಬಳಸಿ ಬ್ರಹ್ಮಚಾರಿ
--------------
ಚನ್ನಬಸವಣ್ಣ
ಉಂಬುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ ಎಂಬ ಅನಾಚಾರಿಯ ಮಾತ ಕೇಳಲಾಗದು. ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ. ಅದೆಂತೆಂದಡೆ; ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ, ಸಿಹಿಯೊಳಗೆ ಕಹಿಯನರಸುವ ಹಾಗೆ, ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ಎಂದಡೆ, ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ. ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ. ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ- ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಉಭಯಲಿಂಗಪ್ರಸಾದವನರಿಯದೆ ಉಭಯ ಅಂತದೊಳಗಾಯಿತಲ್ಲಾ ! ಉಭಯ ನಾಮದ ಮೇಲೆ ನಾಮವಾದುದನು ದೇಹಪೂಜಕಂಗರಿಯಬಾರದು. ದೇಹ ಉಭಯವಾದುದನು, ಉಭಯ ತ್ರಿವಿಧವಾದುದನು ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗಲ್ಲದರಿಯಬಾರದು.
--------------
ಚನ್ನಬಸವಣ್ಣ
ಉದಕದೊಳಗಣ ವಿಕಾರ ಪವನನಿಂದಲ್ಲದೆ, ಉದಕ ಸಹಜಬೀಜವೆಂದರಿಯಬಹುದೆ ? ದೇಹ ಪ್ರಪಂಚಂಗಳು ವಾಯುವಿಂದಲ್ಲದೆ, ದೇಹದಲ್ಲಿ ಬೇರೊಂದು ಗುಣವನರಸುವರೆ ? ಮಂಜಿನ ಗುರಿಯ ಬಿಸಿಲ ಅಂಬಿನಲ್ಲಿ ಎಚ್ಚಡೆ, ಕರ ಹೊಸತಾಯಿತ್ತಲ್ಲಾ ! ಸಹಜದ ನಿಲವು ಜೀವ ಪರಮಾತ್ಮನೆಂದು ಎರಡನು ನುಡಿಯಲಿಲ್ಲ. ಬೇರೆ ನೆನೆವ ಮನ ತಾನೆಯಾಗಿ ತೆರಹಿಲ್ಲದ ಘನ. ಗಗನದ ಸೂರ್ಯ ಜಲದಲ್ಲಿ ತೋರುವಂತೆ, ಹಲವು ರವಿಯೆಂದು ಮತ್ತೆಣಿಸಲುಂಟೆ ? ಒಳಹೊರಗು ಎಂದೆನ್ನದೆ ಮುಟ್ಟಿಯೂ ಮುಟ್ಟದಿಪ್ಪ, ಬಯಲೊಳಡಗಿದ ನಿರಾಳವನು ಕೇಳುವ ಕೀರುತಿಯಲ್ಲ ನೋಡುವ ಮೂರುತಿಯಲ್ಲ ಪರಿಪೂರ್ಣ ಪರಂಜ್ಯೋತಿ ನಿರ್ಗುಣ ಮಹಿಮ. ಭಾವವಿಲ್ಲದ ಶಬ್ದವನು ಕೇಳಬಲ್ಲವನೊಬ್ಬನೆ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುವೆ ನೀನೆ ಬಲ್ಲೆ.
--------------
ಚನ್ನಬಸವಣ್ಣ
ಉದಾಸೀನವ ಮಾಡದ[ಮಾಡಿದ?] ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ*ರು ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್‍ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ; ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್ ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ. ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್ ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ*ವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಉಭಯದಳವು ನಡೆದು ಬಂದು ಮುಂದೆ ನಿಂದಿರ್ದು ಭಾಷೆಯಾಗಿ ಬಿರಿದನುಚ್ಚರಿಸುತ್ತ ಹೊಯಿಕುಟ್ಟಿಯಾಡುವ ಕಾಳಗದೊಳಗೆ ಕೈದು ಬಿದ್ದಡೆ ಭಂಗವಲ್ಲದೆ ಶಸ್ತ್ರಸಾಧಕ ಕಲಿತೇನೆಂದು ಅಭ್ಯಾಸಮಾಡುವ ಅಭ್ಯಾಸದೊಳಗೆ ಕೋಲು ಬಿದ್ದರೆ ಭಂಗವೆ ? ಅಲ್ಲ. ಮತ್ತೆ ಮರಳಿ ಕೋಲು ಕಳೆದುಕೊಂಡು ಅಭ್ಯಾಸ ಮಾಡುವುದೇ ಉಚಿತವಲ್ಲದೆ; ನಾನಿನ್ನು ಅಭ್ಯಾಸವ ಮಾಡಲಾಗದು ಕೋಲು ಬಿದ್ದಿತ್ತೆಂಬ ಗಾವಿಲರ ಮಾತ ಕೇಳಲಾಗದು. ದೃಷ್ಟವೇ ಕೋಲು ಅದೃಷ್ಟವೆ ಕೈದು (ಪ್ರಾಣ?). ಕಾಣಬಾರದ ಲಿಂಗವ ಕಾಬುದು ತನ್ನ ಸತ್‍ಕ್ರೀ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಉಟ್ಟುದನಳಿದು ಬತ್ತಲೆಯಿದ್ದಡೇನು ? ಆಶನವರತು ವ್ಯಸನ ನಿಂದು ವ್ಯಾಪ್ತಿಗಳು ತಲ್ಲೀಯವಾಗಿದ್ದಡೇನು ? ಮುಟ್ಟಬಾರದಠಾವ ಮರೆಗೊಂಡಿಪ್ಪನು, ಕೂಡಲಚೆನ್ನಸಂಗಮದೇವನು.
--------------
ಚನ್ನಬಸವಣ್ಣ
ಉರಿತಾಗಿದ ಮೃಗ ಒಂದಡಿಯಿಡುವುದೆ ? ತನುತಾಗಿದ ಸುಖವಗಲುವುದೆ ? ಕೂಡಲಚೆನ್ನಸಂಗನ ಶರಣರನುಭಾವವರಿದ ಬಳಿಕ ಮತ್ತೆ ಮರಳೆನು.
--------------
ಚನ್ನಬಸವಣ್ಣ
ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ, ಜನನವಿಲ್ಲಾಗಿ ಭೂತಾದಿ ಚರಿತ್ರ ಕರಣಾದಿ ಗುಣಂಗಳು ಮುನ್ನವೆ ಇಲ್ಲ. ಹಿಂದಣ ಜನನವಿಲ್ಲ, ಇಂದಿನ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ, ಆದಿ ಮಧ್ಯ ಅವಸಾನವಿಲ್ಲ, ಬಿಚ್ಚಿ ಬೇರಿಲ್ಲ, ಬೆರಸಿ ಒಂದಿಲ್ಲ. ಉಪಮಾತೀತ ಕೂಡಲಚೆನ್ನಸಂಗಾ ನಿಮ್ಮ ಶರಣನು
--------------
ಚನ್ನಬಸವಣ್ಣ
ಉದಯಾಸ್ತಮಾನವೆಂಬ ಕೊಳಗದಲ್ಲಿ. ಆಯುಷ್ಯವೆಂಬ ರಾಸಿಯನಳೆವರು ರಾಸಿ ತೀರದ ಮುನ್ನ ಸಟೆಯ ಸಡಗರ ಬಿಟ್ಟು ಶಿವಲಿಂಗಾರ್ಚನೆಯ ಮಾಡುವುದು. ಕೂಡಲಚೆನ್ನಸಂಗಯ್ಯಾ, ಇದ ಮಾಡದಿರ್ದಡೆ ನಾಯಕನರಕ.
--------------
ಚನ್ನಬಸವಣ್ಣ
ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ ಮನದ ಕೊನೆಯಿಂದ ಲಿಂಗವನಗಲದಿರಬೇಕು. ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ, ಉರ ಪ್ರಸಾದಸ್ಥಲ, ಉರ ಮಹಾಸ್ಥಲ, ಉರ ಮಹಾಮಹಿಮರಿಪ್ಪ ಅನುಭಾವಸ್ಥಲವೆಂದರಿದು ಅನ್ಯಮಿಶ್ರಂಗಳ ಹೊದ್ದಲಾಗದು. ತಟ್ಟು ಮುಟ್ಟು ತಾಗು ನಿರೋಧಗಳಿಗೆ ಗುರಿಯಾಗಲಾಗದು. ಇಂದ್ರಿಯಂಗಳ ಕೂಡ ಮನಸ್ಥಾಪ್ಯಗೊಳದಿದ್ದರೆ, ಇದು ಉರಲಿಂಗ ಸ್ವಾಯತ. ಪ್ರಾಣಲಿಂಗಪ್ರಾಣಿಗಿದು ಚಿಹ್ನೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ