ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ? ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ ?
--------------
ಚನ್ನಬಸವಣ್ಣ
ನೀ ನಿಲಿಸಿದಲ್ಲಿ ನಾನಂಜೆ ನಾನಂಜೆ ನಾನಂಜೆನಯ್ಯಾ ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ. ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ, ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ. ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ, ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ, ಇಂತೆಲ್ಲರ ಧೀರಸಮಗ್ರನಾಗಿ, ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು
--------------
ಚನ್ನಬಸವಣ್ಣ
ನಿರಾಲಂಬದಲ್ಲಿ ನಿಜಲಿಂಗ ನಾ(ತಾ)ನೆಂಬ ಮಹದಹಂಕಾರವೆ ಸಂಸಾರಿಯಾಗಿ ಬಂದು ಬಳಲುವ ಭ್ರಾಂತು ಇನ್ನಾರಿಗೆಯೂ ತಿಳಿಯದಯ್ಯಾ. ಇನ್ನಾರು ಪರಿಹರಿಸುವರಯ್ಯಾ ಬಸವಣ್ಣನಲ್ಲದೆ? ಇದು ಕಾರಣ, ಬಸವಣ್ಣನ ಶ್ರೀಪಾದವ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಿಮ್ಮ ಗುರುಗಳು ಪಲ್ಲಕ್ಕಿಯಲ್ಲಿ, ನಿಮ್ಮ [ನಮ್ಮರಿ] ಪರಮಗುರು ನಂದಿವಾಹನದಲ್ಲಿ ವಿರಾಜಿಪ ಪರಿ ನಿನ್ನ ಮನಕ್ಕೆ ವೇದ್ಯವೆ ? ಗುರುಶಿಷ್ಯರ ಭಾವದ ಗೌರವ ನೀ ಬಲ್ಲೆಯಲ್ಲದೆ ಮತ್ತಾರಯ್ಯಾ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ನಾದದಿಂದಾದ ಸಂಗ ವಿನೋದಸಂಗ, ಬಿಂದುವಿನಿಂದಾದ ಸಂಗ ಬದ್ಧಕ್ರಿ. ದ್ವಯ, ಅದ್ವಯದಿಂದಾದ ಸಂಗ ಪರಿಭಾವ. ಗಮಿಸುವುದೆ ನಿರವಯವು, ಬಯಸದಿರಾ ! ಬೇರೆ ಮತ್ತಿಲ್ಲ, ಅನುಭಾವವೆಂಬ ಘನಮಹಿಮೆಯ ನೆಮ್ಮಿತ್ತೆ ಆಯಿತ್ತು; ಆ ನಾದದ ನಿಶ್ಚಿಂತನಿಲವನರಿಯಿತ್ತೆ ಆಯಿತ್ತು. ಇದು ನಿಮ್ಮ ಕಲ್ಪನೆ, ಆದಿ ಅಂತ್ಯವ ಬಲ್ಲಡೆ, ಬಲ್ಲನು. ಅವಚಿತ್ತದ ಅವಧಾನದ, ಅಹುದೆಂಬ ಅಲ್ಲವೆಂಬ, ಉಂಟೆಂಬ ಇಲ್ಲವೆಂಬ ಈ ಎರಡರ ಮಥನವಲ್ಲ ಕೇಳಿರಯ್ಯಾ. ಚೆಂದಗೆಡದ ಮುನ್ನ ಬೇಗಮಾಡಿ ತಿಳಿದಿರಾದಡೆ ಬಸವನಂತೆ ಭಾವ, ಬಸವನಂತೆ ಮನ, ಬಸವನ ಪದವಿಡಿದಡೆ ಇದೇ ಪಥ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನಿಮ್ಮ ಭಕ್ತಂಗೆ ಮಲತ್ರಯವಿಲ್ಲ; ಅದೇನು ಕಾರಣವೆಂದಡೆ; ತನುವ ಸದಾಚಾರಕ್ಕರ್ಪಿಸಿ, ಮನವ ಮಹಾಲಿಂಗಭಾವದಲಿರಿಸಿ, ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯಬಲ್ಲವನಾಗಿ_ ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟಬಳಿಕ ಆ ಭಕ್ತನ ತನು ನಿರ್ಮಲ, ಆ ಭಕ್ತನ ಮನ ನಿಶ್ಚಿಂತ, ಆ ಭಕ್ತನ ಧನ ನಿರ್ವಾಣ. ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನರರು ಸುರರು ನವಕೋಟಿಯುಗಗಳ ಪ್ರಳಯಕ್ಕೆ ಒಳಗಾಗಿ ಹೋದರು, ಒಳಗಾಗಿ ಹೋಹಲ್ಲಿ ಸುರಪತಿಗೆ ಪರಮಾಯು ನೋಡಿರೆ ! ಅಂಥ ಸುರಪತಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ, ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ ! ಅಂಥ ಚಿಟ್ಟನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ ! ಅಂಥ ಚಿಪ್ಪಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ ! ಅಂಥ ಡೊಂಕಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ ! ಅಂಥ ರೋಮಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ ! ಅಂಥ ಆದಿಬ್ರಹ್ಮ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ ! ಅಂಥ ಆದಿ ನಾರಾಯಣ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ ! ಅಂಥ ರುದ್ರರು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ, ಷಣ್ಮಮುಖರೊಂದು ಕೋಟಿ, ಸಪ್ತಮುಖರೊಂದು ಕೋಟಿ ಅಷ್ಟಮೂಖರೊಂದು ಕೋಟಿ, ನವಮುಖರೊಂದು ಕೋಟಿ ದಶಮುಖರೊಂದು ಕೋಟಿ_ ಇಂತಿವರೆಲ್ಲರ ಕೀರೀಟದಾಭರಣಂಗಳು ಬಿದ್ದವು ನೋಡಿರೆ ! ಅಂಥ ಸಪ್ತಕೋಟಿಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ನಂದಿವಾಹನರೊಂದು ಕೋಟಿ, ಭೃಂಗಿ ಪ್ರಿಯರೊಂದು ಕೋಟಿ ಚಂದ್ರಪ್ರಿಯರೊಂದು ಕೋಟಿ_ ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ ! ಅಂಥ ತ್ರಿಕೋಟಿಗಳ ತಲೆಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು
--------------
ಚನ್ನಬಸವಣ್ಣ
ನೋಟವುಳ್ಳನ್ನಕ್ಕರ ಕೂಟವುಂಟು, ಭಾವವುಳ್ಳನ್ನಕ್ಕರ ಭ್ರಮೆಯುಂಟು. ನೋಟಗೆಟ್ಟು ಭಾವನಷ್ಟವಾಗಿ ಮನ ಲಯವಾದ ಬಳಿಕ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಒಳಗೂ ನೋಡ, ಹೊರಗೂ ನೋಡ
--------------
ಚನ್ನಬಸವಣ್ಣ
ನಿಮ್ಮ ಅಂಗದಲ್ಲಿರ್ದ ಅವಗುಣಂಗಳ ವಿಚಾರಿಸದೆ ಜಂಗಮದಲ್ಲಿ ಅವಗುಣವ ವಿಚಾರಿಸುವ ದುರಾಚಾರಿಗಳು ನೀವು ಕೇಳಿರೆ ಅದೆಂತು ಅಂಗದಲ್ಲಿ ಅನಾಚಾರವುಂಟೆಂಬುದ, ನಾನು ವಿಚಾರಿಸಿ ಪೇಳುವೆನು ಕೇಳಿರೆ: ನೀವು ಪರಸ್ತ್ರೀಯರ ನೋಡುವ ಕಣ್ಣುಗಳನೊಳಗಿಟ್ಟುಕೊಂಡಿರ್ಪುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ತನ್ನ ಸ್ತ್ರೀಯಲ್ಲದೆ ಅನ್ಯಸ್ತ್ರೀಯಲ್ಲಿ ಆಚರಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಅಂಗದ ಮೇಲಣ ಲಿಂಗವ ಪೂಜಿಸಿ ಜಂಗಮವ ನಿಂದಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಇನ್ನು ಹೇಳುವಡೆ ಅವಕೇನು ಕಡೆಯಿಲ್ಲ. ಇದನರಿದು, ನಮ್ಮ ಜಂಗಮಲಿಂಗವ ಮಾಯೆಯೆನ್ನದಿರಿ ಅಥವಾ ಮಾಯೆಯೆಂದಿರಾದಡೆ, ಆ ದ್ರೋಹ ಲಿಂಗವ ಮುಟ್ಟುವುದು. ಅದೆಂತೆಂದಡೆ: ಬೀಜಕ್ಕೆ ಚೈತನ್ಯವ ಮಾಡಿದಡೆ, ವೃಕ್ಷಕ್ಕೆ ಚೈತನ್ಯವಪ್ಪುದು. ಆ ಅಂತಹ ಬೀಜಕ್ಕೆ ಚೈತನ್ಯವ ಮಾಡದಿರ್ದಡೆ ವೃಕ್ಷ ಫಲವಾಗದಾಗಿ, ಬೀಜಕ್ಕೆ ಕೇಡಿಲ್ಲ. ಅದು ನಿಮಿತ್ತವಾಗಿ, ಬೀಜವೆ ಜಂಗಮಲಿಂಗವು. ಆ ಜಂಗಮಲಿಂಗವೆಂಬ ಬೀಜವನು ಸುರಕ್ಷಿತವ ಮಾಡಿದಡೆ ಲಿಂಗವೆಂಬ ವೃಕ್ಷ ಫಲಿಸುವುದಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಿರಾಳ ನಿಶ್ಶೂನ್ಯಲಿಂಗಕ್ಕೆ ಶರಣರು ತಮ್ಮ ತನುಮನವ ಕೊಡುವುದು ಇರಿಸಿಕೊಂಡಿಪ್ಪುದು ಕರ್ಮ. ಈ ಉಭಯ ನಾಸ್ತಿಯಾಗದ ಸುಳುಹು ಮುಂದೆ ಕಾಡುವುದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನದಿ ಕೂಪ ತಟಾಕ ಜಲಾಶಯದಲ್ಲಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವರೆಲ್ಲ ಶೀಲವಂತರೆ ? ಪಾಕದಲ್ಲಿ ಪರಪಾಕ ಭವಿಪಾಕ ಎಂಬವರೆಲ್ಲ ಶೀಲವಂತರೆ ? ತಳಿಗೆ ಬಟ್ಟಲ ಪ್ರಗಾಳಿಸಿ ನೇಮವ ಮಾಡಿಕೊಂಬವರೆಲ್ಲ ಶೀಲವಂತರೆ ? ಕಂಠಪಾವಡ, ಧೂಳಿಪಾವಡ, ಸರ್ವಾಂಗಪಾವಡವೆಂಬವರೆಲ್ಲ ಶೀಲವಂತರೆ ? [ಲ್ಲ], ಅದೇನು ಕಾರಣವೆಂದಡೆ; ಅವರು `ಸಂಕಲ್ಪಂ ಚ ವಿಕಲ್ಪಂ ಚ ಆ ಎಂದುದಾಗಿ, ಶುದ್ಧಭವಿಗಳು. ಭವಿಯೆಂಬವನೆ ಶ್ವಪಚ, ವ್ರತಸ್ಥನೆಂಬವನೆ ಸಮ್ಮಗಾರ. ಶೀಲವಿನ್ನಾವುದೆಂದಡೆ; ಆಶನ ಅರತು, ವ್ಯಸನ ನಿಂದು, ವ್ಯಾಪ್ತಿಯಳಿದು, ಅಷ್ಟಮದವೆಲ್ಲ ನಷ್ಟವಾದಲ್ಲದೆ, ಕೂಡಲಚೆನ್ನಸಂಗಮದೇವರಲ್ಲಿ ಶೀಲವಿಲ್ಲ ಕಾಣಿರೊ
--------------
ಚನ್ನಬಸವಣ್ಣ
ನೋಡುವುದೊಂದು ನೋಡಿಸಿಕೊಂಬುದೊಂದು ಇನ್ನೂ ನಿನ್ನಲ್ಲಿ ಎರಡುಂಟಲ್ಲಾ ! ಕರಸ್ಥಲದಲ್ಲಿ ಒಂದು, ಮನಸ್ಥಲದಲ್ಲಿ ಒಂದು, ಇನ್ನೂ ನಿನ್ನಲ್ಲಿ ಎರಡುಂಟಲ್ಲಾ ಕೂಡಲಚೆನ್ನಸಂಗಯ್ಯನಲ್ಲಿ ಗುಹೇಶ್ವರನೆಂಬ ಲಿಂಗವು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ ?
--------------
ಚನ್ನಬಸವಣ್ಣ
ನೆನಹಿನ ಸುಖವ ನೋಟ ನುಂಗಿತ್ತು, ನೋಟದ ಸುಖವ ಕೂಟ ನುಂಗಿತ್ತು. ಕೂಟದ ಸುಖವ ಸಮರಸ ನುಂಗಿತ್ತು, ಸಮರಸದ ಸುಖವ ಪರವಶ ನುಂಗಿತ್ತು, ಪರವಶದ ಸುಖವ ಕೂಡಲಚೆನ್ನಸಂಗಯ್ಯ ತಾನೇ ಬಲ್ಲ.
--------------
ಚನ್ನಬಸವಣ್ಣ
ನೆಲನೊಂದೆ ಜಲ[ನೊಂದೆ] ಎಂಬುದ ಎಲ್ಲ ಲೋಕವು ಬಲ್ಲುದು ನೋಡಿರೆ ! ನೆಲ ಶುದ್ಧವೆಂಬಿರಿ:ನೆಲದೊಳಗಿಪ್ಪ ಎಂಬತ್ತುನಾಲ್ಕುಲಕ್ಷ ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿ ಮಡಿವವಾಗಿ ಆ ನೆಲ ಶುದ್ಧವಲ್ಲ ನಿಲ್ಲು. ಜಲ ಶುದ್ಧವೆಂಬಿರಿ:ಜಲದೊಳಗಿಪ್ಪ ಇಪ್ಪತ್ತೊಂದು [ಲಕ್ಷ] ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿಯೆ ಮಡಿವವಾಗಿ ಆ ಜಲ ಶುದ್ಧವಲ್ಲ ನಿಲ್ಲು. ನಿಮ್ಮ ತನು ಶುದ್ಧವೆಂಬಿರಿ; ತನುವಿನೊಳಗಿಪ್ಪ ಅಷ್ಟಮದಗಳೆಂಬ ಭವಿಗಳಂ ಕಟ್ಟಿ ನಿಲಿಸಲರಿಯಲಿಲ್ಲವಾಗಿ ಆ ತನು ಶುದ್ಧವಲ್ಲ ನಿಲ್ಲು. ನಿಮ್ಮ ಹಸ್ತಂಗಳು ಶುದ್ಧವೆಂಬಿರಿ:ಒಂದು ಹಸ್ತ ಜಿಹ್ವೆಯೊಳಗಾಡುವದು ಒಂದು ಹಸ್ತ ಗುಹ್ಯದೊಳಗಾಡುವುದು_[ಆ] ಹಸ್ತಂಗಳು ಶುದ್ಧವಲ್ಲ ನಿಲ್ಲು. ನಿಮ್ಮ ನಯನಂಗಳು ಶುದ್ಧವೆಂಬಿರಿ:ನಯನದಲ್ಲಿ ನೋಡಿದಲ್ಲಿ ಕೂಡುವಿರಾಗಿ ನಿಮ್ಮ ನಯನಂಗಳು ಶುದ್ಧವಲ್ಲ ನಿಲ್ಲು_ ಇಂತೀ ತಮ್ಮ ಅಶುದ್ಧವಂ ತಾವು ಕಳೆಯಲರಿಯದೆ, ಇದಿರ ಅಶುದ್ಧವಂ ಕಳೆವೆವೆಂದಡೆ, ನಾಚಿತ್ತು ನೋಡಾ ಎನ್ನ ಮನವು. ಭಕ್ತಿ ವಿಶ್ವಾಸದಿಂದ ಗುರುಲಿಂಗಜಂಗಮದ ಪಾದಾರ್ಚನೆಯಂ ಮಾಡಿ ಪಾದೋದಕ ಪ್ರಸಾದವಂ ಕೊಂಬ ಭಕ್ತನ ಶೀಲವೇ ಶೀಲವಲ್ಲದೆ ಉಳಿದವರದಲ್ಲ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನಡೆಯುಳ್ಳವರ ನುಡಿಯೆಲ್ಲ ಬರಡು ಹಯನಾದಂತೆ ನಡೆಯಿಲ್ಲದವರ ನುಡಿಯೆಲ್ಲ ಹಯನು ಬರಡಾದಂತೆ ಅವರು ಗಡಣಿಸಿ ನುಡಿವ ವಚನ ಎನ್ನ ಶ್ರೋತ್ರಕ್ಕೆ ಸೊಗಸದಯ್ಯ ಅವರ ನೋಡುವರೆ ಎನ್ನ ಕಣ್ಣು ಮನದಿಚ್ಛೆಯಾಗದಯ್ಯ ಮಂಡೆ ಬೋಳಿಸಿ ಕುಂಡೆ ಬೆಳಸಿ ಹೆಗ್ಗುಂಡ ಮೈಯೊಳಗೆ ತಳೆದಿರೆ ಕಂಡು ಕಂಡು ವಂದಿಸುವರೆ ಎನ್ನ ಮನ ನಾಚಿತ್ತು ನಾಚಿತ್ತಯ್ಯ ಜಡೆಯ ತೋರಿ ಮುಡಿಯ ತೋರಿ ಅಡಿಗಡಿಗೊಮ್ಮೆ ಎಡೆ ಮಾಡಿದರೆ ಇಲ್ಲವೆನ್ನೆ ಕಡುಕೋಪವ ತಾಳುನವೆಫ ಮಡೆಯಳ ಹೊಲೆಯರ ಗುರುವಾದರು ಗುರುವೆನ್ನೆ ಲಿಂಗವಾದರು ಲಿಂಗವೆನ್ನೆ ಜಂಗಮವಾದರು ಜಂಗಮವೆನ್ನೆ ಎನ್ನ ಮನದೊಡೆಯ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ನಾಲ್ಕು ವೇದವನೋದಿದ ವಿಪ್ರರ ಮನೆಯ ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು. ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು, ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ. ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ? ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅವನಂಗಳ ಮೆಟ್ಟಿಕ್ಕುವೆನೆಂದ_ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ ತಂದು ನಯನಾದಿ ಅನಿಮಿಷ ದೃಷ್ಟವಾದ ಪ್ರಸಾದಿ ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದೇನ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ !
--------------
ಚನ್ನಬಸವಣ್ಣ
ನಾಥನು ಅನಾಥನು ಪುಣ್ಯನಾಥನು ಕರುಣಾಕರನೆಂಬ ಶಬ್ದಂಗಳ ಮನಕ್ಕೆ ತಾರದ ಪ್ರಸಾದಿ, ಸ್ಥಾಪ್ಯಾಯನ, ಸ್ತಂಭ ಆ ಎರಡರ ಅನ್ವಯವಳಿದ ಪ್ರಸಾದಿ, ಅಂಗ ಲಿಂಗೈಕ್ಯವೆಂಬ ನುಡಿಯ ಹಂಗಿಲ್ಲದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಾನೆನ್ನದ ಪ್ರಸಾದಿ.
--------------
ಚನ್ನಬಸವಣ್ಣ
ನಾನು ನೀನೆಂಬ ಮೋಹವೆಲ್ಲಿಯದೊ ? ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ? ಮನಲೀಯ, ಉಭಯಭಾವರಹಿತ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ನಚ್ಚು ಬಿಚ್ಚದೆ ಮನದಲಚ್ಚೊತ್ತಿದಂತಿತ್ತು, ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು. ಅದು ತಾನಾಗಿ ತಾನೆ ಭರಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ನಯನಾಗ್ರದ ನೋಟದ ಸುಖವ ಲಿಂಗಾರ್ಪಿತವೆಂಬರು, ನಾಸಿಕಾಗ್ರ ಪರಿಮಳದ ಸುಖವ ಲಿಂಗಾರ್ಪಿತವೆಂಬರು, ಶ್ರೋತ್ರಾಗ್ರದ ಕೇಳುವ ಸುಖವ ಲಿಂಗಾರ್ಪಿತವೆಂಬರು, ಜಿಹ್ವಾಗ್ರದ ರುಚಿಯ ಸುಖವ ಲಿಂಗಾರ್ಪಿತವೆಂಬರು, ಮುಟ್ಟುವ ತ್ವಕ್ಕಿನ ಸುಖವ ಲಿಂಗಾರ್ಪಿತವೆಂಬರು. ಇದು ಲಿಂಗಾರ್ಪಿತವೆ? ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ, ಅರ್ಪಿಸಬೇಕು, ಅರ್ಪಿಸುವ ಭಾವನೆವುಳ್ಳನ್ನಕ್ಕ ಶರಣೆನಿಸಬಾರದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಿರ್ನಾಮವಾಯಿತ್ತು, ನಿಷ್ಪತ್ತಿಯಾಯಿತ್ತು, ಅಗಮ್ಯದಲ್ಲಿ ಗಮನಗೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು, ಕೂಡಲಚೆನ್ನಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು !
--------------
ಚನ್ನಬಸವಣ್ಣ
ನಾನೊಂದ ತೋರಲರಿಯೆನು, ನಾನೊಂದ ಹೇಳಲರಿಯೆನು, ನಾನೊಂದ ಸ್ಥಲವಿಡಲರಿಯೆನು, ಕುಲವಿಡಲರಿಯೆನು. ಕೂಡಲಚೆನ್ನಸಂಗಮದೇವರಲ್ಲಿ ಮಡಿವಾಳನ ನಿಲವ ನಾನೆತ್ತ ಬಲ್ಲೆನಯ್ಯಾ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ನಿಷಾ*ಂಗದಲ್ಲಿ, ದೃಷ್ಟಾಂಗದಲ್ಲಿ, ದ್ರಷ್ಟಂಗದಲ್ಲಿ, ದೃಷ್ಟ್ಯಂಗದಲ್ಲಿ, ನಷ್ಟಾಂಗದಲ್ಲಿ ಮುಟ್ಟಿ ನಿಷೆ*ಯಾದ ಪ್ರಸಾದಿ ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ.
--------------
ಚನ್ನಬಸವಣ್ಣ
ನಿತ್ಯನೆಂಬ ಭಕ್ತನ ಮನೆಗೆ ಘನಚೈತನ್ಯವೆಂಬ ಜಂಗಮ ಬಂದಡೆ, ಜಲವಿಲ್ಲದ, ಜಲದಲ್ಲಿ ಪಾದಾರ್ಚನೆಯ ಮಾಡಿದಡೆ, ಮಾಡಿದ ಆ ಪಾದೋದಕವೆ ಮಹಾಪದವಯ್ಯಾ, ಸ್ವಚ್ಛಾನಂದಜಲೇ ನಿತ್ಯಂ ಪ್ರಕ್ಷಾಲ್ಯ ಚರಪಾದುಕಾಂ ತಚ್ಚ ಪಾದೋದಕಂ ಪೀತ್ವಾ ಸ ಮುಕ್ತೋ ನಾತ್ರ ಸಂಶಯಃ ಎಂದುದಾಗಿ, ಆ ಪಾದೋದಕದಲ್ಲಿ ಪರಮಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ

ಇನ್ನಷ್ಟು ...