ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ, ನೀವು ಕೇಳಿರೆ, ನೀವು ಕೇಳಿರೆ, ನಿಮ್ಮ ನಿಟಿಲದಲ್ಲಿ ಸಂಚಿತ ಪ್ರಾರಬ್ಧ ಆಗಾಮಿ ಎಂಬ ಲಿಖಿತವ ಬರೆದವಾರು ಹೇಳಿರೆ ? ನೀವೆ ಬ್ರಹ್ಮ, ಬೇರೆ ಈಶ್ವರನಿಲ್ಲೆಂದು ನುಡಿವಿರಿ. ತಪಸ್ಸು ತನ್ನಂತೆ, ಊಟ ಮನದಿಚ್ಛೆಯೆಂಬ ಲೋಕಗಾದೆಯ ಮಾತು ನಿಮಗಾಯಿತ್ತು. ಅಶನವನುಂಡು ವ್ಯಸನಕ್ಕೆ ಹರಿದು ವಿಷಯಂಗಳೆಂಬ ಹಿಡಿಮೊಲಕ್ಕೆ ಸಿಲ್ಕಿ ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು, ನಾಯಾಗಿ ಬಗುಳಿ ನಾಯ ಡೋಣಿಯಲ್ಲಿ ಉಂಡು ನಾಯ ಸಾವ ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ? ಬ್ರಹ್ಮ ವಿಷ್ಣ್ವಾದಿಗ?ು `ಬ್ರಹ್ಮೋಹಂ' ಎಂದು ಕೆಮ್ಮನೆ ಕೆಟ್ಟು ಹದ್ದು ಹೆಬ್ಬಂದಿಗಳಾದುದನರಿಯಿರೆ ? ಹಮ್ಮಿಂದ ಸನತ್ಕುಮಾರ ಒಂಟೆಯಾದುದನರಿಯಿರೆ ? ಕರ್ತನು ಭರ್ತನು ಹರ್ತನು ಶಿವನಲ್ಲದೆ ಬೇರೆ ಮತ್ತೊಬ್ಬ ಕಾವರಿಲ್ಲ ಕೊಲುವರಿಲ್ಲ, ಮತ್ತೊಬ್ಬರು?್ಳಡೆ ಹೇಳಿರೆ, ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಅಸತ್ಯಮಪ್ರತಿಷ್ಠಂ ಚ ಜಗದಾಹುರನೀಶ್ವರವರಿï ಎಂದುದಾಗಿ ಶಿವನೆ, ನಿಮ್ಮನಿಲ್ಲೆಂದು, ಬೊಮ್ಮವಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ ಬಾಯಲ್ಲಿ ಹುಡಿಯ ಹೊಯ್ಸಿ, ನರಕಾಗ್ನಿಯಲ್ಲಿ ಅನೇಕಕಾಲ ಇರಿಸದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವರು ?
--------------
ಚನ್ನಬಸವಣ್ಣ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು ನೀವು ಕೇಳಿರೆ :ಶಿವನಾವಕಡೆ ಶಕ್ತಿ ಆವ ಕಡೆ ? ಉತ್ಪತ್ಯವ ಬಲ್ಲರೆ ನೀವು ಹೇಳಿರೆ ! ಶಕ್ತಿಯ ಮೇಲೆ ಸಾಹಿತ್ಯವ ಮಾಡಿಕೊಟ್ಟನಲ್ಲಾ ನಿಮ್ಮ ಗುರು. ಶಿವನ ಶಿವಂಗರ್ಪಿಸುವ ಪರಿಯೆಂತೊ ? ಶಿವ ನಷ್ಟ, ಶಕ್ತಿ ನಷ್ಟ, ಈ ಉಭಯಸ್ಥಳವನರಿದಡೆ ಕೂಡಲಚೆನ್ನಸಂಗಾ ನೀನೆಂಬೆನು.
--------------
ಚನ್ನಬಸವಣ್ಣ
ಎಲೆ ಶಿವನೆ ನಿಮ್ಮಲ್ಲಿ ಸಾಲವ ಕೊಂಡು ನಿಮ್ಮ ಶರಣ ಶಿವಲೋಕಕ್ಕೆ ಹೋದವನಲ್ಲಾ: ಪೃಥ್ವಿಯ ಸಾಲವ ಪೃಥ್ವಿಗೆ ಕೊಟ್ಹು, ಅಪ್ಪುವಿನ ಸಾಲವ ಅಪ್ಪುಗೆ ಕೊಟ್ಟು, ತೇಜದ ಸಾಲವ ತೇಜಕ್ಕೆ ಕೊಟ್ಟು, ವಾಯುವಿನ ಸಾಲವ ವಾಯುವಿಗೆ ಕೊಟ್ಟು, ಆಕಾಶದ ಸಾಲವ ಆಕಾಶಕ್ಕೆ ಕೊಟ್ಟು ಪ್ರಸಾದವನಾರಿಗೆಯೂ ಕೊಡಲಿಲ್ಲೆಂದು ಕೂಡಲಚೆನ್ನಸಂಗನಲ್ಲಿ ಹೂಣೆಹೊಕ್ಕ ಶರಣಂಗೆ ಮಿಗೆ ಮಿಗೆ ನಮೋ ನಮೋಯೆಂಬೆ.
--------------
ಚನ್ನಬಸವಣ್ಣ
ಎನ್ನಂತರಂಗವೆ ಬಸವಣ್ಣ. ಬಹಿರಂಗವೆ ಮಡಿವಾಳಯ್ಯ, ಈ ಉಭಯದ ಸಂಗವೆ ಪ್ರಭುದೇವರು ! ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ಅರಿವಿನ ಕಣ್ಣ ಕತ್ತಲೆಯ ಕಳೆವಡೆ, ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆನು. ಎನ್ನ ಭಾವವ ನಿರ್ಭಾವದಲ್ಲಿ ನಿಶ್ಶೂನ್ಯವಮಾಡಿ ಪರಮಸುಖದೊಳಿರಿಸುವಡೆ, ಅಲ್ಲಮಪ್ರಭುದೇವರಲ್ಲದೆ ಮತ್ತಾರನೂ ಕಾಣೆನು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಬಸವ-ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು.
--------------
ಚನ್ನಬಸವಣ್ಣ
ಎನ್ನಾಧಾರಚಕ್ರಕ್ಕೆ `ನ' ಕಾರವಾದಾತ ಬಸವಣ್ಣ; ಎನ್ನ ಸ್ವಾಧಿಷಾ*ನಚಕ್ರಕ್ಕೆ `ಮ'ಕಾರವಾದಾತ ಬಸವಣ್ಣ; ಎನ್ನ ಮಣಿಪೂರಚಕ್ರಕ್ಕೆ `ಶಿ'ಕಾರವಾದಾತ ಬಸವಣ್ಣ: ಎನ್ನ ಅನಾಹತಚಕ್ರಕ್ಕೆ `ವ್ಡಾಕಾರವಾದಾತ ಬಸವಣ್ಣ; ಎನ್ನ ವಿಶುದ್ಧಿಚಕ್ರಕ್ಕೆ `ಯ'ಕಾರವಾದಾತ ಬಸವಣ್ಣ; ಎನ್ನ ಆಜ್ಞಾಚಕ್ರಕ್ಕೆ `ಓಂ'ಕಾರವಾದಾತ ಬಸವಣ್ಣ; ಎನ್ನ ಬ್ರಹ್ಮರಂಧ್ರಕ್ಕೆ ಸಾವಿರದೈವತ್ತೆರಡಕ್ಷರವಾದಾತ ಬಸವಣ್ಣ; ಎನ್ನ ಶಿಖಾಚಕ್ರಕ್ಕೆ `ಕ್ಷ'ಕಾರವಾದಾತ ಬಸವಣ್ಣ; ಎನ್ನ ಪಶ್ಚಿಮಚಕ್ರಕ್ಕೆ `ಹ'ಕಾರವಾದಾತ ಬಸವಣ್ಣ; ಇಂತೀ ಎನ್ನ ನವಚಕ್ರಂಗಳಲ್ಲಿಯೂ, ನವನಾಳಗಳಲ್ಲಿಯೂ ನವವಿಧಲಿಂಗಸ್ವರೂಪವಾದಾತ ಬಸವಣ್ಣ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ತೋರಿ ಎನ್ನ ಸಲಹಿದ ವರಗುರು ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ ಪ್ರಭುವೆ.
--------------
ಚನ್ನಬಸವಣ್ಣ
ಎಂಟುದಿಕ್ಕು ನಾಲ್ಕು ಬಾಗಿಲೊಳಗೆ, ಸಕಲ ಪದಾರ್ಥವೆಂಬ ಮಂಟಪವ ಮಾಡಿ, ನಾನಾ ಕೇರಿ ಬೀದಿವಾಗಿಲೊಳು ಅನಂತ ಬಣ್ಣಬಣ್ಣದ ಚೈತನ್ಯಗಳನನುಮಾಡಿ, ಅನಂತ ವೀರರನು ಅನಂತ ಲಾಳಮೇಳಿಗಳನು ಅನಂತ ಸೋಹಂ ಘನ ಮುಟ್ಟಿಕೊಂಡಿರ್ಪವರನು ತಂದಿರಿಸಿ ಆ ಮಂಟಪದೊಳಗೆ ಬಿಜಯ ಮಾಡೆಂದು_ ಭಕ್ತ್ಯಂಗನೆಯ ಕರೆಸಿ ಪರಿಪೂರ್ಣವಾಗಿರಿಸಿ ಜ್ಞಾನಾಂಗನೆಯ ಕರೆಸಿ ನಾಲ್ಕು ಬಾಗಿಲುಗಳಿಗೆ ಕಾಹ ಕೊಟ್ಟು ನುಡಿಯದಂತೆ ಗಂಡನು ಶಿವನಲ್ಲದೆ ಮತ್ತಿಲ್ಲವೆಂದಾತನ ಮಂಟಪದ ವಾರ್ತೆಯ ಅನ್ಯ ಮಿಶ್ರಂಗಳ ಹೊಗಲೀಸೆನೆಂಬ ಭಾಷೆ ! ಕಾಲ ಕರ್ಮ ಪ್ರಳಯವಿರಹಿತನೆಂದಾತನ ಹೆಸರು. ಮಹಾಪ್ರಳಯದಲ್ಲಿ ಅನಂತಮೂರ್ತಿಗಳು ಮಡಿವಲ್ಲಿ ಮಡಿಯದೆ ಉಳಿದ ನಿತ್ಯಸ್ವರೂಪನು. ಆತನ ಶ್ರೀಚರಣದೊಳಚ್ಚೊತ್ತಿದಂತಿರ್ಪಾತನೆ ಅನಾದಿ ಸಿದ್ಧನೆ, ಅನಾದಿ ಕುಳಜ್ಞನೆ, ಅನಾದಿ ಮಡಿವಾಳನೆ, ಶಿವನ ಮದಹಸ್ತಿಯೆ, ಹಸ್ತದೊಳು ಮದಂಗಳ ತೃಣವ ಮಾಡಿದ Zõ್ಞದಂತನೆ, ಭಕ್ತಿಸಾರಾಯ ಪ್ರಸಾದಪರಿಪೂರ್ಣನೆ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಅನಾದಿಗಣೇಶ್ವರನು ಮಡಿವಾಳನು.
--------------
ಚನ್ನಬಸವಣ್ಣ
ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು, ಪ್ರಾಣಲಿಂಗದಲ್ಲಿ ಪ್ರವೇಶವ ಮಾಡಿದನಯ್ಯಾ. ಆಯತ ಸ್ವಾಯತದಿಂದ ನೋಡಿ ಲಿಂಗಗಭೀರ ನಿಸ್ಸಂಗಿ ನೋಡಾ. ಮಾಟ ಕೂಟವೆಂಬ ಭ್ರಾಂತಳಿದಾ ಮನದಲ್ಲಿ ತ್ರಿವಿಧವ ನೆಮ್ಮಿಸಿ. ಸಾಹಿತ್ಯವಾದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ ಬತ್ತಿ, ಎಲ್ಲಿಕ್ಕೆಯ ಲಿಂಗವ ಪೂಜಿಸುವರು ನೀವು ಕೇಳಿರೆ : ಅಂಗ ಲಿಂಗವೆಂಬೆನೆ ? ಹಿಂಗದು ಮನದ ಭವಿತನ. ಪ್ರಾಣ ಲಿಂಗವೆಂಬೆನೆ ? ಭಾವದಲ್ಲಿ ಜಂಗಮವನರಿಯರು. ಗುರುವಚನ ಸಾರಾಯಸಂಪನ್ನರೆಂಬೆನೆ ? ಷಟ್ಕರ್ಮ (ಷಡಕ್ಷರ?) ಮಂತ್ರ ವಿರೋಧಿಗಳು. ಇದು ಕಾರಣ ಕೂಡಲಚೆನ್ನಸಂಗಯ್ಯಾ ತಾಯ ಮಾರಿ ತೊತ್ತ ಕೊಂಬರನೇನೆಂಬೆ.
--------------
ಚನ್ನಬಸವಣ್ಣ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಎಲ್ಲರ ದೀಕ್ಷೆಯ ಪರಿಯಂತಲ್ಲ ಎಮ್ಮಯ್ಯನ ದೀಕ್ಷೆ. ನಡೆ ನುಡಿ ಶುದ್ಧವಾದವರಿಗಲ್ಲದೆ ಅನುಗ್ರಹಿಸ ನೋಡಾ. ಪರಮಾರ್ಥಕಲ್ಲದ ಜಡ ನರರನೊಲ್ಲನೊಲ್ಲ, ದೀಕ್ಷೆಯ ಕೊಡ, ಭವಭಾರಿಗಳ ಮುಖದತ್ತ ನೋಡನಯ್ಯಾ ಕೂಡಲಚೆನ್ನಸಂಗಯ್ಯನೆಂಬ ಜ್ಞಾನಗುರು.
--------------
ಚನ್ನಬಸವಣ್ಣ
ಎನಗಿಲ್ಲದ ಘನವನೇರಿಸಿ ನುಡಿದಡೆ ಅದು ನಿಮ್ಮ ಲೀಲೆ, ನಾನದನು ಬೇಕೆನ್ನೆ ಬೇಡನ್ನೆ ಅದಂತಿರಲಿ. ನಿಮ್ಮ ಶ್ರೀ ಪಾದದ ಕೃಪೆಯಿಂದ ನಿಮ್ಮ ನಿಲವನರಿದೆನು. ಕೂಡಲಚೆನ್ನಸಂಗಮದೇವಾ ಎನಗೊಮ್ಮೆ ಬಸವಣ್ಣನ ಪರಿಯನರುಹಾ ಪ್ರಭುವೆ
--------------
ಚನ್ನಬಸವಣ್ಣ
ಎನ್ನ ಕಾಯಕ್ಕೆ ಸೀಮೆಯ ಮಾಡುವೆನು; ಎನ್ನ ಕಾಯದೊಳಗಿರ್ದ ಕರಣಾದಿ ಗುಣಂಗಳಿಗೆ ಸೀಮೆಯ ಮಾಡುವೆನು. ಎನ್ನ ಶ್ರೋತ್ರಕ್ಕೆ ಸೀಮೆಯ ಮಾಡುವೆನು; ಎನ್ನ ಶ್ರೋತ್ರದೊಳಗಿರ್ದ ಶಬ್ದಕ್ಕೆ ಸೀಮೆಯ ಮಾಡುವೆನು. ಎನ್ನ ತ್ವಕ್ಕಿಗೆ ಸೀಮೆಯ ಮಾಡುವೆನು; ಎನ್ನ ತ್ವಕ್ಕಿನೊಳಗಿರ್ದ ಸ್ಪರ್ಶಕ್ಕೆ ಸೀಮೆಯ ಮಾಡುವೆನು. ಎನ್ನ ನಯನಕ್ಕೆ ಸೀಮೆಯ ಮಾಡುವೆನು; ಎನ್ನ ನಯನದೊಳಗಿರ್ದ ರೂಪಕ್ಕೆ ಸೀಮೆಯ ಮಾಡುವೆನು. [ಎನ್ನ ಜಿಹ್ವೆಗೆ ಸೀಮೆಯ ಮಾಡುವೆನು; ಎನ್ನ ಜಿಹ್ವೆಯೊಳಗಿರ್ದ ರಸಕ್ಕೆ ಸೀಮೆಯ ಮಾಡುವೆನು.] ಎನ್ನ ಘ್ರಾಣಕ್ಕೆ ಸೀಮೆಯ ಮಾಡುವೆನು; ಎನ್ನ ಘ್ರಾಣದೊಳಗಿರ್ದ ಗಂಧಕ್ಕೆ ಸೀಮೆಯ ಮಾಡುವೆನು. ಎನ್ನ ಮನಕ್ಕೆ ಸೀಮೆಯ ಮಾಡುವೆನು; ಎನ್ನ ಮನದೊಳಗಿರ್ದ ಮರವೆಗೆ ಸೀಮೆಯ ಮಾಡುವೆನು. ಎನ್ನ ಭಾವಕ್ಕೆ ಸೀಮೆಯ ಮಾಡುವೆನು; ಎನ್ನ ಭಾವದೊಳಗಿರ್ದ ಭ್ರಾಂತಿಗೆ ಸೀಮೆಯ ಮಾಡುವೆನು. ಎನ್ನ ಪ್ರಾಣಕ್ಕೆ ಸೀಮೆಯ ಮಾಡುವೆನು ಎನ್ನ ಪ್ರಾಣವ ಲಿಂಗದಲ್ಲಿ ಹಿಂಗದಂತೆ ನಿಲಿಸುವೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ದೃಷ್ಟಿ ನಿಮ್ಮ ರೂಪಿನಲ್ಲಿ ನಿಂದು ಕಾಣದು; ಎನ್ನ ಮನ ನಿಮ್ಮ ಕಳೆಯಲ್ಲಿ ಬೆರಸಿ ಅರಿಯದು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅನುಪಮಸುಖಿಯಾನು !
--------------
ಚನ್ನಬಸವಣ್ಣ
ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು, ನಿನ್ನ ಕಾಯದೊಳಗೆ ಎನ್ನ ಕಾಯವಿಪ್ಪುದು. ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು, ನಿನ್ನ ಜೀವದೊಳಗೆ ಎನ್ನ ಜೀವವಿಪ್ಪುದು, ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವಿಪ್ಪುದು, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವಿಪ್ಪುದು. ಎನ್ನ ಇಂದ್ರಿಯಂಗಳೊಳಗೆ ನಿನ್ನ ಇಂದ್ರಿಯಂಗಳಿಪ್ಪುವು, ನಿನ್ನ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಿಪ್ಪುವು. ಎನ್ನ ವಿಷಯಂಗಳೊಳಗೆ ನಿನ್ನ ವಿಷಯಂಗಳಿಪ್ಪುವು. ನಿನ್ನ ವಿಷಯಂಗಳೊಳಗೆ ಎನ್ನ ವಿಷಯಂಗಳಿಪ್ಪುವು. ಎನ್ನ ಕರಣಂಗಳೊಳಗೆ ನಿನ್ನ ಕರಣಂಗಳಿಪ್ಪುವು. ನಿನ್ನ ಕರಣಂಗಳೊಳಗೆ ಎನ್ನ ಕರಣಂಗಳಿಪ್ಪುವು. ಇಂತು ನಾನೆ ರೂಪು, ನೀನೆ ನಿರೂಪು. ರೂಪಿಂಗೆ ಕೇಡುಂಟು, ನಿರೂಪಿಂಗೆ ಕೇಡಿಲ್ಲ, ಆನು ಕರ್ಪೂರ, ನೀನು ಜ್ಯೋತಿ. ಆನು ನಿಮ್ಮೊಳಡಗಿದೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ಘ್ರಾಣದ ಬಾಗಿಲಲ್ಲಿರ್ದು, ಸುವಾಸನೆಯ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ಜಿಹ್ವೆಯ ಬಾಗಿಲಲ್ಲಿರ್ದು, ಸುರುಚಿಯ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ನೇತ್ರದ ಬಾಗಿಲಲ್ಲಿರ್ದು, ಸುರೂಪ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ತ್ವಕ್ಕಿನ ಬಾಗಿಲಲ್ಲಿರ್ದು, ಸುಸ್ಪರ್ಶವ ಮಾಡಿ ಆ ಸ್ಪರ್ಶನಸುಖವ ಸುಖಿಸುವಾತ ನೀನಯ್ಯಾ. ಎನ್ನ ಶ್ರೋತ್ರದ ಬಾಗಿಲಲ್ಲಿರ್ದು ಸುಶಬ್ದ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ಮನದ ಬಾಗಿಲಲ್ಲಿರ್ದು ಪಂಚೇಂದ್ರಿಯಂಗಳನರಿದು ಸುಖಿಸುವ ಅರಿವಿನಮೂರ್ತಿ ನೀನಯ್ಯಾ ಅದೇನು ಕಾರಣವೆಂದಡೆ; ನೀನಾಡಿಸುವ ಜಂತ್ರದ ಬೊಂಬೆ ನಾನೆಂದರಿದ ಕಾರಣ. ನಿಮ್ಮ ಕರಣಂಗಳೆ ಎನ್ನ ಹರಣಂಗಳಾಗಿ, ಎನ್ನ ಹರಣಂಗಳೆ ನಿಮ್ಮ ಕಿ(ಕ?)ರಣಂಗಳಾಗಿ ಕೂಡಲಚೆನ್ನಸಂಗಮದೇವಾ ನೀನಾಡಿಸಿದಂತೆ ನಾನಾಡಿದೆನಯ್ಯಾ.
--------------
ಚನ್ನಬಸವಣ್ಣ
ಎನ್ನ ಸಂಸಾರಸೂತಕವ ತೊಡೆದು, ನಿಜಲಿಂಗದಲ್ಲಿ ನಿರಹಂಕಾರವೆಂಬ ಘನವ ತೋರಿದನಯ್ಯಾ ಒಬ್ಬ ಶರಣನು. ಎನಗಾರು ಇಲ್ಲೆಂದು ಪ್ರಭುದೇವರೆಂಬ ಒಬ್ಬ ಶರಣನ ಎನ್ನ ಕಣ್ಣಮುಂದೆ ಕೃತಾರ್ಥನ ಮಾಡಿ ಸುಳಿಸಿದನಯ್ಯಾ ಆ ಶರಣನು. ಆ ಶರಣನ ಕೃಪೆಯಿಂದ ಪ್ರಭುದೇವರೆಂಬ ಘನವ ಕಂಡು, ಮನ ಮನ ಲೀಯವಾಗಿ ಘನ ಘನ ಒಂದಾದ ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯನೆಂಬ ಮಹಿಮಂಗೆ ನಮೋ ನಮೋ ಎನುತಿರ್ದೆನು.
--------------
ಚನ್ನಬಸವಣ್ಣ
ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಉತ್ತಮಾಂಗದಲ್ಲಿ ಗಂಗಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಲಲಾಟದಲ್ಲಿ ಮಹಾದೇವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಪಶ್ಚಿಮ[ಚಕ್ರ]ದಲ್ಲಿ ಪಂಚಮುಖನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಕರ್ಣದಲ್ಲಿ ಶ್ರುತಿಪುರಾಣಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ ಎನ್ನ ಬಲದ ನಯನದಲ್ಲಿ ತ್ರಿಪುರಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ನಯನದಲ್ಲಿ ಕಾಮಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಜಿಹ್ವೆಯಲ್ಲಿ ಭವಹರರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಕಂಠದಲ್ಲಿ ಲೋಕೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಭುಜದಲ್ಲಿ ಸದಾಶಿವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಭುಜದಲ್ಲಿ ಮೃತ್ಯುಂಜಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೋಳಿನಲ್ಲಿ ಶೂಲಪಾಣಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೋಳಿನಲ್ಲಿ ಕೋದಂಡನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮೊಳಕೈಯಲ್ಲಿ ಪರಬ್ರಹ್ಮಸ್ವರೂಪನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮೊಳಕೈಯಲ್ಲಿ ವಿಶ್ವಕುಟುಂಬಿ ಎಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮುಂಗೈಯಲ್ಲಿ ಕರೆಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮುಂಗೈಯಲ್ಲಿ ಶ್ರೀಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗೈಯಲ್ಲಿ ನಿಧಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗೈಯಲ್ಲಿ ವೇದಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಹೃದಯದಲ್ಲಿ ಮಾಹೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಪಾಶ್ರ್ವದಲ್ಲಿ ದಕ್ಷಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಪಾಶ್ರ್ವದಲ್ಲಿ ಕಾಲಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬೆನ್ನಿನಲ್ಲಿ ಭೂತೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಭಿಯಲ್ಲಿ ಶಂಕರನೆಂಬ ರುದ್ರನಾಗಿ, ಬಂದು ನಿಂದಾತ ಬಸವಣ್ಣನಯ್ಯಾ, ಎನ್ನ ಗುಹ್ಯದಲ್ಲಿ ವಿಷ್ಣುಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಗುದದಲ್ಲಿ ಬ್ರಹ್ಮಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೊಡೆಯಲ್ಲಿ ಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೊಡೆಯಲ್ಲಿ ಸ್ಫಟಿಕಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮಣಿಪಾದದಲ್ಲಿ ಫಣಿಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮಣಿಪಾದದಲ್ಲಿ ರುಂಡಮಾಲಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಹದಡಿನಲ್ಲಿ ಕಪಾಲಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಹದಡಿನಲ್ಲಿ ಭಿಕ್ಷಾಟನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗುಷ*ದಲ್ಲಿ ಭೃಂಗಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗುಷ*ದಲ್ಲಿ ನಂದಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅರೆಪಾದದಲ್ಲಿ ಪೃಥ್ವೀಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅರೆಪಾದದಲ್ಲಿ ಸಚರಾಚರಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಸರ್ವಾಂಗದಲ್ಲಿ ಸರ್ವೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಇಂತೀ ಮೂವತ್ತೆಂಟು ಸ್ಥಾನಂಗಳಲ್ಲಿ, ಕೂಡಲಚೆನ್ನಸಂಗಯ್ಯಾ ಬಸವಸಾಹಿತ್ಯವಾಗಿಪ್ಪುದಯ್ಯಾ.
--------------
ಚನ್ನಬಸವಣ್ಣ
ಎನ್ನ ಕರಸ್ಥಲದಲ್ಲಿ ಲಿಂಗವ ಸಾಹಿತ್ಯವ ಮಾಡಿದ. ಎನ್ನ ಮನಸ್ಥಲದಲ್ಲಿ ಜಂಗಮವ ಸಾಹಿತ್ಯವ ಮಾಡಿದ. ಎನ್ನ ತನುಸ್ಥಲದಲ್ಲಿ ಆಚಾರವ ಸಾಹಿತ್ಯವ ಮಾಡಿದ. ಇಂತೀ ತನು ಮನ ಪ್ರಾಣವನೇಕವ ಮಾಡಿ ಕೂಡಲಚೆನ್ನಸಂಗಮದೇವಾ ನಿಮ್ಮನೆನ್ನ ವಶವ ಮಾಡಿದ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.
--------------
ಚನ್ನಬಸವಣ್ಣ
ಎನ್ನ ಹೊಗಳಲಿಕ್ಕೆ ನಿಮಗೆ ತೆರಹಿಲ್ಲ; ನಿಮ್ಮ ಹೊಗಳಲಿಕ್ಕೆ ಎನಗೆ ಹೊಲಬಿಲ್ಲ. ಒಬ್ಬರನೊಬ್ಬರು ಹೊಗಳಲಿಕ್ಕೆ ಹೊತ್ತು ಹೋಯಿತ್ತಲ್ಲದೆ ಸಂಗಮನಾಥನ ಆಪ್ಯಾಯನಕ್ಕೆ ಪದಾರ್ಥವ ನೀಡಲಿಲ್ಲ. ಕೂಡಲಚೆನ್ನಸಂಗಯ್ಯಂಗೆ ಪದಾರ್ಥವನಳವಡಿಸ ನಡೆಯಿರೆ ಸಂಗನಬಸವಣ್ಣಾ
--------------
ಚನ್ನಬಸವಣ್ಣ
ಎಂತು ಜೀವಿಸಬಹುದು, ಗುರುಪ್ರಾಣಿಗೆ ಗುರು ಓಸರಿಸಿದಡೆ ? ಎಂತು ಜೀವಿಸಬಹುದು, ಲಿಂಗಪ್ರಾಣಿಗೆ ಲಿಂಗ ಓಸರಿಸಿದಡೆ ? ಎಂತು ಜೀವಿಸಬಹುದು, ಜಂಗಮಪ್ರಾಣಿಗೆ ಜಂಗಮ ಓಸರಿಸಿದಡೆ ? ಎಂತು ಜೀವಿಸಬಹುದು, ಪ್ರಸಾದಪ್ರಾಣಿಗೆ ಕೂಡಲಚೆನ್ನಸಂಗಯ್ಯಾ ಪ್ರಸಾದ ಓಸರಿಸಿದಡೆ ?
--------------
ಚನ್ನಬಸವಣ್ಣ
ಎನ್ನ ಅನುಭಾವದ ಗಮ್ಯವೆ, ಎನ್ನ ಅರಿವಿನ ವಿಶ್ರಾಮವೆ, ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ, ಎನ್ನ ಪರಿಣಾಮದ ಮೇರುವೆ, ಎನ್ನ ಮನದ ಮಹಿಮನೆ, ನಿಮ್ಮ ಸುಳುಹು ಎತ್ತಲಡಗಿತ್ತು, ಎಲೆ ಲಿಂಗವೆ ? ನಿಮ್ಮ ನಾಮವೆತ್ತ ನಿರ್ನಾಮವಾಯಿತ್ತು, ಎಲೆ ಪರಮಗುರುವೆ ? ಕೂಡಲಚೆನ್ನಸಂಗಯ್ಯನಲ್ಲಿ ಉರಿಯುಂಡ ಕರ್ಪುರದಂತಾದೆಯಲ್ಲಾ ಪ್ರಭುವೆ !
--------------
ಚನ್ನಬಸವಣ್ಣ
ಎನ್ನ ಸದ್ಗರುಸ್ವಾಮಿ ಎನಗೆ ಕರುಣಿಸಿದ ಕಾರುಣ್ಯವ ನಾನೇನೆಂದುಪಮಿಸುವೆನಯ್ಯಾ ? ಗುರುಲಿಂಗವು ಸಾಕ್ಷಾತ್ ಪರಶಿವನಿಂದ ವಿಶೇಷವು ! ಜ್ಯೋತಿಯಲೊದಗಿದ ಜ್ಯೋತಿಯಂತಾಯಿತ್ತು, ದರ್ಪಣದೊಳಗಣ ಪ್ರತಿಬಿಂಬದಂತಾಯಿತ್ತು, ಪದಕದೊಳಗಣ ರತ್ನದಂತಾಯಿತ್ತು; ರೂಪದ ನೆಳಲಿನ ಅಂತರಂಗದಂತಾಯಿತ್ತು, ಕೂಡಲಚೆನ್ನಸಂಗಯ್ಯಾ, ದರ್ಪಣಕ್ಕೆ ದರ್ಪಣವ ತೋರಿದಂತಾಯಿತ್ತು, ಎನ್ನ ಸದ್ಗರುವಿನುಪದೇಶವೆನಗಯ್ಯಾ.
--------------
ಚನ್ನಬಸವಣ್ಣ
ಎನಗೆನ್ನ ಗುರುಬಸವಣ್ಣ ತೋರಿದ ಘನವ, ನಿಮಗೆ ಬಿನ್ನೈಸುವೆನು ಕೇಳಾ ಪ್ರಭುವೆ. ಪ್ರಸಾದದಿಂದ ಹುಟ್ಟಿದ ಕಾಯಕ್ಕೆ ಪ್ರಸಾದದಿಂದೊಗೆದ ಲಿಂಗವ ಕೊಟ್ಟು ಪ್ರಸಾದಲಿಂಗಮುಖದಲ್ಲಿ ಪ್ರಸಾದಮಯವಾದ, ಪ್ರಣವಪಂಚಾಕ್ಷರಿಯ ಪ್ರಸಾದಿಸಿ ತನ್ನಾದಿರೂಪಿನಲ್ಲಿ ಅನಾದಿಲಿಂಗಪ್ರಸಾದವ ಭೋಗವ ಮಾಡಿ ಆ ಪ್ರಸಾದದಿಂದೊಗೆದ ಪ್ರಸಾದವ ತನ್ನ ಪ್ರಸಾದಜ್ಞಾನವೆಂಬ ಪರಮಶಿಖಿಯಿಂದ ದಹನ ಮಾಡಿ, ಎನಗೆ, ಸಮಸ್ತ ಶಿವಭಕ್ತರ್ಗೆ ಇದು ಭಕ್ತಿ ನೀತಿಯೆಂದು ವಿಭೂತಿಯನಿಟ್ಟು ತ್ರಿಪುರದ ಸಂಚವನಳಿದು ತ್ರಿಜಗವ ರಕ್ಷಿಸಲೆಂದು ತ್ರಿಲೋಚನದಲ್ಲಿ ಉಗ್ರಶಾಂತಿ ಗಾಂಭೀರ್ಯವೆಂಬ ಜಲಬಿಂದುವೆ ಬೀಜವಾಗಿ ಬೆಳೆದ ರುದ್ರಾಕ್ಷಿಯ ಧರಿಸಿ, ಶಾಂಭವೀಮುದ್ರೆಯನೊತ್ತಿ ನಾದ ಬಿಂದು ಕಳೆಯೊಂದಾದಂದಿನ ಅನಾದಿ ಬೋಧಚೈತನ್ಯಜ್ಞಾನಲಿಂಗ ತಾನೆ ಜಂಗಮವೆಂದು ತಿಳುಹಿ ಆ ಜಂಗಮದ ಪಾದೋದಕ ಪ್ರಸಾದವೆ ಇಷ್ಟವಾದ ಷಡ್ವಿಧಲಿಂಗದ ಮೂಲಾಂಗವೆನಿಸುವ ಇಷ್ಟಲಿಂಗಕ್ಕೆ ಮಜ್ಜನ ನೈವೇದ್ಯವ ಸಜ್ಜನಸುದ್ಧ ಶಿವಭಕ್ತಿಯಿಂದ ಮಾಡೆಂದ ಬಸವಣ್ಣ. ಅದೆಂತೆಂದಡೆ; ಹಂಸೆಗೆ ಹಾಲನೆರೆವರಲ್ಲದೆ ಹುಳಿಯನೆರೆವರೆ ? ಇಷ್ಟಲಿಂಗಕ್ಕೆ ಪ್ರಸಾದವೆ ಭೋಜನವೆಂದು ಬಸವಣ್ಣ ನಿರೂಪಿಸಲು, `ನಿರಂತರವೆ ? ಎಂದು ಬಿನ್ನೈಸೆ, ಬೋಧಿಸಿದ ಬಸವಣ್ಣನು. ಅದೆಂತೆಂದಡೆ; ಪದಾರ್ಥವ ಕೊಟ್ಟಡೆ ಫಲಪದ ತಪ್ಪದು, ಪ್ರಸಾದವ ಕೊಟ್ಟಡೆ ಫಲಂ ನಾಸ್ತಿ ಪದಂ ನಾಸ್ತಿ ಭವಂ ನಾಸ್ತಿ ಎಂದನಯ್ಯಾ ಎನ್ನ ಗುರು ಬಸವಣ್ಣನು. ಅದೆಂತೆಂದಡೆ; ಪದಾರ್ಥವೆ ಕರ್ಮರೂಪು, ಪ್ರಸಾದವೆ ನಿಃಕರ್ಮರೂಪು. `ದ್ರವ್ಯಂ ಕ್ರಿಯಾಸ್ವರೂಪಂ ಚ ಪ್ರಸಾದೋ ಕರ್ಮಬಾಹ್ಯಕಃ ಪದಾರ್ಥೋ ಜನ್ಮಹೇತುಃ ಸಾತ್ ಪ್ರಸಾದೋ ಭವನಾಶಕಃ ಇಂತೆಂದು ನುಡಿದು, ನಡೆದು ತೋರಿ ಹೊರೆದನಲಾ ಬಸವಣ್ಣ, ಸಕಲ ಮಾಹೇಶ್ವರರ. ಇದನರಿದು ಕೊಡುವದು, ಇದನರಿದು ಕೊಂಬುದು ಇದೇ ಭಕ್ತಿಗೆ ಬೇಹ ಬುದ್ಧಿ, ಇದೇ ಪ್ರಸಾದಕ್ಕೆ ಪರಮಕಾರಣ. ಇಂತಲ್ಲದವಂಗೆ ಲಿಂಗವಿಲ್ಲ; ಲಿಂಗವಿಲ್ಲಾಗಿ ಪ್ರಸಾದವಿಲ್ಲ. ಇದನರಿದು, ಗುರುವಿಡಿದು ಲಿಂಗದಿಚ್ಛೆಯನರಿದು ಸುಖಿಸಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ

ಇನ್ನಷ್ಟು ...