ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ, ಹವನ ಹೋಮಾದಿ ಪವಿತ್ರಕಾರ್ಯವ ಕೈಕೊಂಡೆಡೆಯಲ್ಲಿ, ಉಚ್ಛಿಷ್ಟಾದಿ ಪಂಚಸೂತಕಗಳಂಟಿದಡೆ ಅವರು ಆ ಸೂತಕವ ಮಾನಿಸದೆ ಪರಿಶುದ್ಧಭಾವದಿಂದಿರ್ಪರು. ದೇವದೇವನಪ್ಪ ಮಹಾದೇವನನು ಲಿಂಗರೂಪದಿಂದ ಅಂಗದಲ್ಲಿ ಧರಿಸಿ ಪರಿಶುದ್ಧರಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ? ಸೂರ್ಯನು ಜ್ಞಾನವುಳ್ಳ್ಳವನಾದಡೆ ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ? ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ ? ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ ವಿವಾಹವಾದ ಹೆಂಡತಿ ರೋಹಿಣೀದೇವಿಯ ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ? ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ? ಅದು ಕಾರಣ_ ತಮಗೆ ಮುಂಬಹ ಸುಖದುಃಖಂಗಳನರಿಯದವರು ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು. ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು. ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು, ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು. ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ, ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು, ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ, ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು. `ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ' ಇಂತೆಂದುದಾಗಿ ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ ಪರಿಹರಿಸೇನೆಂದಡೆ ಹೋಗಲರಿಯದು. ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ, ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ, ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ, ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು. ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶೀಲಶೀಲವೆಂದೇನೊ, ಪಿಂಡ ಬ್ರಹ್ಮಾಂಡ ಸಂಯೋಗವಾಗದನ್ನಕ್ಕರ ? ಅಷ್ಟತನುವಿನ ಗುಣಧರ್ಮವನರಿದು ಬಿಡದನ್ನಕ್ಕರ ? ಅಕ್ರೋಧ ಸತ್ಯವಚನ ಸಾವಧಾನ ವ್ರತಾನುಗ್ರಹವಾಗದನ್ನಕ್ಕರ ? ``ಅಕ್ರೋಧಃ ಸತ್ಯವಚನಂ ಸಾವಧಾನೋ ದಮಃ ಕ್ಷಮಾ ಅನುಗ್ರಹಶ್ಚ ದಾನಂ ಚ ಶೀಲಮೇವ ಪ್ರಶಸ್ಯತೇ ' ಎಂದುದಾಗಿ, ಕೂಡಲಚೆನ್ನಸಂಗಮದೇವಯ್ಯಾ, ಶೀಲವೆಂಬುದು ಅಪೂರ್ವ.
--------------
ಚನ್ನಬಸವಣ್ಣ
ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ. ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶರಣನೆನಿಸಿಕೊಂಬುದು ಕರ ಅರಿದು ನೋಡಯ್ಯಾ ! ಸತ್ಯಸದ್ಭಕ್ತರೊಳಡಗಿ ತನ್ನ ಕುರುಹ ಲೋಕಕ್ಕೆ ತೋರದಿರಬೇಕು. ಸಕಲಜೀವರಾಶಿಗಳಿಗೆ ರೋಷ ಹರುಷವ ತಾಳದಿರಬೇಕು. ಇಂತಪ್ಪ ಶರಣನಲ್ಲಿ ಸನ್ನಿಹಿತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಶ್ರೀಗುರು ಸಾಹಿತ್ಯಸಂಬಂಧವ ಮಾಡುವಲ್ಲಿ; ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು, ಹೇಳಿಕೊಟ್ಟ ವಿವರವನರಿಯದೆ, ಲಿಂಗದೊಳಗೆ ಜಂಗಮವುಂಟೆಂದು ಗಳಹುತಿಪ್ಪಿರಿ. ರಾಸಿಗಿಕ್ಕದ ಲಚ್ಚಣ ರಾಸಿಯ ಕೊಳಬಲ್ಲುದೆ, ರಾಸಿಯ ಒಡೆಯನಲ್ಲದೆ ?_ ಆ ಪರಿಯಲ್ಲಿ ಲಿಂಗವು ಜಂಗಮದ ಮುದ್ರೆ, ಅದಕ್ಕೆ ಜಂಗಮವೆ ಮುದ್ರಾಧಿಪತಿಯಾದ ಕಾರಣ, ಜಂಗಮದೊಳಗೆ ಲಿಂಗವುಂಟೆಂಬುದು ಸತ್ಯವಲ್ಲದೆ ಲಿಂಗದೊಳಗೆ ಜಂಗಮವುಂಟೆಂಬುದು ಅಸತ್ಯವು. ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ಫಲವಹುದೆ ?ಬೇರಿಂಗೆ ನೀಡಬೇಕಲ್ಲದೆ. ವೃಕ್ಷದ ಆಧಾರವೆ ಪೃಥ್ವಿ, ಪೃಥ್ವಿಯೆ ಜಂಗಮ, ಶಾಖೆಯೆ ಲಿಂಗವು. ದೇಹದ ಮೇಲೆ ಸಕಲಪದಾರ್ಥಂಗಳ ತಂದಿರಿಸಿದಡೆ ತೃಪ್ತಿಯಹುದೆ ? ಮುಖವ ನೋಡಿ ಒಳಯಿಂಕೆ ನೀಡಬೇಕಲ್ಲದೆ. ಅದು ಕಾರಣವಾಗಿ_ಅವಯವಂಗಳು ಕಾಣಲ್ಪಟ್ಟ ಮುಖವುಳ್ಳುದೆ ಜಂಗಮ ದೇಹವೆ ಲಿಂಗ. ಲಿಂಗವೆಂಬುದು ಜಂಗಮದೊಂದಂಗ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಶುದ್ಧ, ಸಿದ್ಧ, ಪ್ರಸಿದ್ಧದ ವಿವರವ ಕೇಳಿದಡೆ ಹೇಳುವೆನು: ವಿಶ್ವ ಮುಟ್ಟಿತ್ತು ಶುದ್ಧ, ತೈಜಸ ಮುಟ್ಟಿತ್ತು ಸಿದ್ಧ, ಪ್ರಾಜ್ಞ ಮುಟ್ಟಿತ್ತು ಪ್ರಸಿದ್ಧ. ಪ್ರತ್ಯಗಾತ್ಮನಲ್ಲಿ ಪರಿಣಾಮಿ, ಕೂಡಲಚೆನ್ನಸಂಗಾ, ನಿಮ್ಮ ಶರಣ
--------------
ಚನ್ನಬಸವಣ್ಣ
ಶಿಷ್ಯನ ಪೂರ್ವಾಶ್ರಯವ ಕಳೆವುದು ಗುರುವಿಗೆ ಸಹಜ. ಶಿಷ್ಯನು ತನ್ನ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗವ ಮುಟ್ಟುವ ಪರಿ ಎಂತೋ ? ಅರ್ಪಿತ ಹೋಗಿ, ಪ್ರಸಾದವನರಸುವುದೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿಯೆ ಬಲ್ಲ.
--------------
ಚನ್ನಬಸವಣ್ಣ
ಶ್ರೀಶೈಲ ಸಿಂಹಾಸನದ ಮೇಲೆ ಕುಳ್ಳಿರ್ದು, ಪುರದ ಬಾಗಿಲೊಳು ಕದಳಿಯ ನಿರ್ಮಿಸಿದರು, ನರರು ಸುರರು ಮುನಿಗಳಿಗೆ ಮರಹೆಂಬ ಕದವನಿಕ್ಕಿ ತರಗೊಳಿಸಿದರು ತ್ರಿವಿಧ ದುರ್ಗಂಗಳ. ಆ ಗಿರಿಯ ಸುತ್ತಲು ಗಾಳಿ ದೆಸೆದೆಸೆಗೆ ಬೀಸುತ್ತಿರೆ, ಕೆರಳಿ ಗಜ ಎಂಟೆಡೆಗೆ ಗಮಿಸುತ್ತಿರಲು ಪರಿವಾರ ತಮ್ಮೊಳಗೆ ಅತಿಮಥನದಿಂ ಕೆರಳೆ ಪುರದ ನಾಲ್ಕು ಕೇರಿಯನೆ ಬಲಿದರು. ಆ ನರನೆಂಬ ಹೆಸರಳಿದು, ಗುರುಮಾರ್ಗದಿಂದ ಮರಹೆಂಬ ಕದವ ಮುರಿದು ಒಳಹೊಕ್ಕು ಪುರದ ಮರ್ಮವನರಿದು, ಭರದಿಂದ ತ್ರಿಸ್ಥಾನವನುರುಹಿ ಪರಿವಾರವನು ವಶಕ್ಕೆ ತಂದು, ಗಿರಿಶಿಖರವನೇರಿ ಪುರವ ಸೂರೆಯಂಗೊಂಡು, ಪುರಕ್ಕೊಡೆಯನಾಗಿ ಪರಿಣಾಮದಿಂದ ಕೂಡಲಚೆನ್ನಸಂಗಯ್ಯನಲ್ಲಿ ಶರಣಾದವಂಗೆ ನಮೋ ನಮೋ ಎಂಬೆ
--------------
ಚನ್ನಬಸವಣ್ಣ
ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು ವೇದ. ಉಳ್ಳಡೆ, ದಕ್ಷನ ಜನ್ನ ತಾನೆ ಹೇಳದೆ ? ಉಳ್ಳಡೆ ಕ್ರತುವನು ಕಾಯಲಾಗದೆ ? ಉಳ್ಳಡೆ ತಮ್ಮ ತಮ್ಮ ಶಿರಗಳ ಹೋಗಲಾಡಿಕೊಳಲೇಕೆ ? ಈ ಕ್ರತುಗಳಿಗೆ `ಶಿವನೇಕೋ ದೇವ' ಎಂದುದು ಋಗ್ವೇದ. `ಆವೋ ರಾಜಾನಮಧ್ವರಸ್ಯ ರುದ್ರಂ ಹೋತಾರಂ ಸತ್ಯಯಜುಂ ರೋದಸ್ಯೋಃ ಅಗ್ನಿಂ ಪುರಾತನಯಿತ್ನೋರಚಿತ್ತಾತ್ ಹಿರಣ್ಯರೂಪಮವಸೇ ಕೃಣುಧ್ವಂ _ಎಂದುದಾಗಿ ಇಂತೆಂಬ ಶ್ರುತಿಯಿದೆ. ಇದು ಕಾರಣ_ ಕೂಡಲಚೆನ್ನಸಂಗನಲ್ಲದಿಲ್ಲ; ನಿಲ್ಲು, ಮಾಣು.
--------------
ಚನ್ನಬಸವಣ್ಣ
ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ ಆ ಭಕ್ತ ಹೋಗಿ ಜಂಗಮವಾಗಿ, ಗುರುವಿನ ಮಠಕ್ಕೆ ಬಂದಡೆ ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ ಮನದಲ್ಲಿ ಹೊಳೆದಡೆ ಪಂಚಮಹಾಪಾತಕ. ಆ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಭೀತಿ ಹೊಳೆದಡೆ ರೌರವನರಕ. ಇಂತೀ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಶರಣರೆ ಬಲ್ಲರು
--------------
ಚನ್ನಬಸವಣ್ಣ
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ: ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ? ಎಂಬ ಜಗಭಂಡರು ನೀವು ಕೇಳಿರೊ: ಅಚ್ಚಪ್ರಸಾದಿ ನಿಚ್ಚಪ್ರಸಾದಿ ! ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಶ್ರೀಗುರು ತನ್ನ ಸಾಕಾರವ ಬಿಟ್ಟು ನಿರಾಕಾರವಾದಡೆ ಸಂದೇಹಿಸಲಿಲ್ಲ. ಸಾಕಾರವಿಡಿದು ಉಪದೇಶವ ಕೊಟ್ಟು, ಎನ್ನ ಕಾಯವ ಸಮರ್ಪಿಸಿಕೊಂಡು ಶುದ್ಧನ ಮಾಡಿದನಯ್ಯಾ ಶ್ರೀಗುರು. ಪ್ರಾಣದಲಡಗಿ ಸಿದ್ಧನ ಮಾಡಿದನಯ್ಯಾ ಶ್ರೀಗುರು. ಇಂತು ಅವಿರಳ ಗುರುತತ್ವ_ಸಂಗನಬಸವಣ್ಣನು ಕೂಡಲಚೆನ್ನಸಂಗಾ ನಿನ್ನೊಳಗೆ ಪರಿಪೂರ್ಣ ಕಾಣಾ
--------------
ಚನ್ನಬಸವಣ್ಣ
ಶಿವಯೋಗವಾದಲ್ಲಿ ಸಂಸಾರಯೋಗ ಮಾಬುದಯ್ಯಾ, ಸಂಸಾರಯೋಗ ಮಾದಲ್ಲಿ ಭಕ್ತಾನುಗ್ರಹಯೋಗವಯ್ಯಾ, ಭಕ್ತಾನುಗ್ರಹಯೋಗವಾದಲ್ಲಿ ಲಿಂಗಾನುಗ್ರಹಯೋಗವಯ್ಯಾ, ಲಿಂಗಾನುಗ್ರಹಯೋಗವಾದಲ್ಲಿ ಜಂಗಮಾನುಗ್ರಹಯೋಗವಯ್ಯಾ, ಜಂಗಮಾನುಗ್ರಹಯೋಗವಾದಲ್ಲಿ ಪ್ರಸಾದಾನುಗ್ರಹಯೋಗವಯ್ಯಾ, ಪ್ರಸಾದಾನುಗ್ರಹಯೋಗವಾದಲ್ಲಿ ತ್ರಿವಿಧ ಸನುಮತಯೋಗವಯ್ಯಾ, ತ್ರಿವಿಧ ಸನುಮತಯೋಗವಾದಲ್ಲಿ ಮನಮಗ್ನಯೋಗವಯ್ಯಾ, ಮನಮಗ್ನಯೋಗವಾದಲ್ಲಿ ಕೂಡಲಚೆನ್ನಸಂಗನಲ್ಲಿ ಲಿಂಗಸಂಯೋಗವಯ್ಯಾ.
--------------
ಚನ್ನಬಸವಣ್ಣ
ಶಿವಭಕ್ತಿಯುಳ್ಳವಂಗೆ; ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ; ಮೋಹ ಬೇಡ, ಮದ ಬೇಡ, ಮತ್ಸರ ಬೇಡ. ಶಿವಭಕ್ತಿಯುಳ್ಳವಂಗೆ; ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು, ಮೋಹ ಬೇಕು, ಮದ ಬೇಕು, ಮತ್ಸರ ಬೇಕು. ಬೇಕೆಂಬುದಕ್ಕಾವ ಗುಣ ? ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ, ಲೋಭ ಬೇಕು ಪಾದೋದಕ ಪ್ರಸಾದದಲ್ಲಿ, ಮೋಹ ಬೇಕು ಗುರುಲಿಂಗ ಜಂಗಮದಲ್ಲಿ, ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು, ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ_ಇಂತೀ ಷಡ್ಗುಣವಿರಬೇಕು. ಬೇಡವೆಂಬುದಕ್ಕಾವುದು ಗುಣ ? ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ._ ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶಿವಕಳಶ ಗುರುಕಳಶವೆಂದು ಹೆಸರಿಟ್ಟುಕೊಂಡು ನುಡಿವಿರಿ. ಶಿವಕಳಶ ಗುರುಕಳಶವ ನೀವು ಬಲ್ಲರೆ ಹೇಳಿರೇ. ಶಿವಕಳಶವಲ್ಲ ಇದು ಕುಂಭಕಳಶ. ಓಂ ಧಾಮಂತೇ ಗೋತಮೋ ಆಪೋ ಬೃಹತೀ ಧಾಮಂತೇ ವಿಶ್ವಂ ಭುವನಮಧಿಶ್ರಿತಮಂತಃ ಸಮುದ್ರೇ ಹೃದ್ಯಂತರಾಯುಷಿ ! ಅಪಾಮನೀಕೇ ಸಮಿಧೇಯ ಅಭೃತಸ್ತಮಶ್ಯಾಮ ಮಧುಮಂತಂತ ಊರ್ಮಿಂ ಇದು ಕಾರಣ, ಕೂಡಲಚೆನ್ನಸಂಗಯ್ಯಾ ಶಿವಕಳಶ ಗುರುಕಳಶದ ಹೊಲಬ ನಮ್ಮ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ಶಿವಶಕ್ತಿಸಂಪುಟವಿಹೀನ ಲಿಂಗ, ಹಾನಿವೃದ್ಧಿಯಿಲ್ಲದುದೆ ಜಂಗಮ. ಜಾಗ್ರದಲ್ಲಿ ಕುರುಹು, ಸ್ವಪ್ನದಲ್ಲಿ ಆಕೃತಿ. ನೆರೆ ಅರಿತ ಅರಿವು, ಹಿರಿದುಕಿರಿದೆನ್ನದ ಸಜ್ಜನ ಶುದ್ಧಶಿವಾಚಾರ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಶಿವಲಿಂಗಾರ್ಚನೆಯ ಮಾಡಿ ಶಿವಾರ್ಪಿತಕ್ಕೆ ಕೈದೆಗೆದಡೆ ಅದು ಲಿಂಗಾರ್ಪಿತಕ್ಕೆ ನೈವೇದ್ಯ ತನಗೆ ಪ್ರಸಾದವಹುದು. ಇದು ಕಾರಣ_ಕೂಡಲಚೆನ್ನಸಂಗಮದೇವ ಇಂತಪ್ಪ ಸಮಯೋಚಿತ ಉಳ್ಳವರ ಎನಗೆ ತೋರಯ್ಯಾ.
--------------
ಚನ್ನಬಸವಣ್ಣ
ಶಿವಸಂಸ್ಕಾರಿಯಾಗಿ ಅಂಗದ ಮೇಲೆ ಲಿಂಗವ ಧರಿಸಿ. ಆ ಲಿಂಗವೆ ತನ್ನಂಗ ಮನ ಪ್ರಾಣದಲ್ಲಿ ಹಿಂಗದಿರ್ದುದ ಕಂಡು, ನಂಬಿ ಪೂಜಿಸಿ ಪ್ರಸಾದವ ಪಡೆದು ಲಿಂಗೈಕ್ಯರಾಗಲರಿಯದೆ, ತನ್ನಂಗಲಿಂಗಸಂಬಂಧಕ್ಕನ್ಯವಾದ, ಭವಿ ಶೈವದೈವಕ್ಕೆ ಎರಗುವ ಕುನ್ನಿಗಳಿಗೆ ಅಘೋರನರಕ, ಅದೆಂತೆಂದಡೆ: ``ಇಷ್ಟಲಿಂಗಂ ಪರಿತ್ಯಜ್ಯ ಅನ್ಯಲಿಂಗಮುಪಾಸತೇ ಪ್ರಸಾದಂ ನಿಷ್ಪಲಂ ಚೈವ ರೌರವಂ ನರಕಂ ವ್ರಜೇತ್ ಎಂದುದಾಗಿ ಅಲ್ಲಲ್ಲಿ ಧರೆಯ ಮೇಲಿಪ್ಪ ಭವಿದೈವ ಸ್ಥಾವರಕ್ಕೆ ಹರಿಯಲಾಗದು. ಪ್ರಾಣಲಿಂಗಸಂಬಂಧಿಗೆ ಅದು ಪಥವಲ್ಲ. ತನ್ನ ಭವಿತನವ ಬಿಟ್ಟು ಭಕ್ತನಾದ ಬಳಿಕ ಆ ಭವವಿರಹಿತಲಿಂಗಕ್ಕೆ ಭವಿಪಾಕವ ನಿವೇದಿಸಿದರೆ ಅದು ಕಿಲ್ಬಿಷ, ಅದೆಂತೆಂದೊಡೆ: ``ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ ಶಿವಭಕ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ಎಂದುದಾಗಿ ತಾ ಶಿವಭಕ್ತನಾಗಿ ಭವಿಪಾಕ ಭವಿಪಂಥ ಭವಿಶೈವದೈವ, ಭವಿತಿಥಿಮಾಟಕೂಟ ಭವಿವರ್ತನಾಕ್ರೀಯನೊಡಗೂಡಿಕೊಂಡು ನಡೆದನಾದಡೆ, ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ
--------------
ಚನ್ನಬಸವಣ್ಣ
ಶ್ರೀಗುರು ಶಿಷ್ಯಂಗೆ ಅನುಗ್ರಹ ಮಾಡಿದ ಕ್ರಮವೆಂತೆಂದಡೆ: `ಲಿಂಗ, ಜಂಗಮ, ಪಾದೋದಕ, ಪ್ರಸಾದ_ ಇಂತು ಚತುರ್ವಿಧ ಲಂಪಟನಾಗೈ ಮಗನೆ' ಎಂದು ಅಂಗದ ಮೇಲೆ ಲಿಂಗಸಾಹಿತ್ಯವ ಮಾಡಿ, `ಹುಸಿ ಕಳವು ವೇಶ್ಯಾಗಮನ ಪಾರದ್ವಾರ ಪರದ್ರವ್ಯ ಪರನಿಂದೆ ಪರದೋಷ: ಇಂತೀ ಸಪ್ತಗುಣ ವಿರಹಿತನಾಗಿ, ಅನ್ಯಭವಿನಾಸ್ತಿಯಾಗಿ ಮಜ್ಜನಕ್ಕೆರೆವುದು ಶಿವಪಥ ಕಂಡಾ ಮಗನೆ' ಎಂದು ಹೇಳಿಕೊಟ್ಟ ಉಪದೇಶವನೆ ಕೇಳಿ ನಡೆಯ ಬಲ್ಲಡೆ ಆತನೆ ಶಿಷ್ಯ ಆತನೆ ನಿತ್ಯಮುಕ್ತನು. ಆ ಗುರುಶಿಷ್ಯರಿಬ್ಬರು ನಿಮ್ಮೊಳಗೆರಕವು_ಅದಂತಿರಲಿ, ಅದು ಉಪಮಿಸಬಾರದ ಘನವು, ಅದಕ್ಕೆ ಶರಣಾರ್ಥಿ. ಇನಿತಲ್ಲದೆ ಕೊಡುವ ಕೊಂಬ ಗುರುಶಿಷ್ಯರಿಬ್ಬರಿಗೂ ಯಮದಂಡನೆ ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ. ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ. ಆ ವಸ್ತು ಜಗದ ಹಿತಾರ್ಥ ಪೀಠಸಂಬಂಧಿಯಾಗಿ `ಏಕಮೂರ್ತಿಸ್ತ್ರಯೋ ಭಾಗಾಃ' ಆಗಲಾಗಿ ವರ್ತುಳ ಗುರುವಾಗಿ, ಗೋಮುಖ ಜಂಗಮವಾಗಿ ಗೋಳಕಾಕಾರಮೂರ್ತಿ ಲಿಂಗವಾದ ಕಾರಣ, ಲಿಂಗವಾಯಿತ್ತು. ಇಂತೀ ತ್ರಿವಿಧದೊಳಗೆ ಒಂದ ಮೀರಿ ಒಂದ ಕಂಡೆಹೆನೆಂದಡೆ ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ. ಅಂಕುರ ಬೀಜವಿರೆ, ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ ಅಂಕುರಕ್ಕೆ ದೃಷ್ಟವಿಲ್ಲ. ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು.
--------------
ಚನ್ನಬಸವಣ್ಣ
ಶೃಂಗಾರಾದಿ ನವರಸ ರಸಿಕನಾದಹೆನೆಂಬವ ನವಖಂಡಮಂಡಲಾಧಾರದಲ್ಲಿ ಕರ ಚಂಡನಾಗದೆ ನವವಿಧ ಬಂಧನಕ್ಕೊಳಗಾಗದೆ ನವನಾಳದಲ್ಲಿ ಕಳಾಹೀನನಾಗದೆ ಇಂತೀ ನವಸಂಪಾದನೆ ಮೂವತ್ತಾರು ಪ್ರಕಾರಂಗಳು ಪ್ರಾಣಲಿಂಗಕ್ಕೆ ಸಲುವರನರಿತು ಸಲಿಸುವದು, ಸಲ್ಲದಿದ್ದಡೆ ತನಗಾಗಿ ಚಿಂತಿಸಲಾಗದು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶೀಲವಂತರೆಲ್ಲ ಅಂತಿರಲಿ, ತಮ್ಮ ತಮ್ಮ ಮನದಿ ಮದವ ಕಳೆದು ತಮ್ಮೊಳಗಿರ್ದ ಭವಿಗಳ ಭಕ್ತರ ಮಾಡಿ ತಮ್ಮಲ್ಲಿರುವ ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಪಂಚಭೂತಂಗಳು, ಚತುಷ್ಕರಣಂಗಳು, ತ್ರಿಕರಣಂಗಳು, ತ್ರಿಗುಣಂಗಳು ಶಿವಸಂಸ್ಕಾರದಿಂದ ಲಿಂಗಕರಣಂಗಳೆಂದೆನಿಸಿ ನಿತ್ಯ ಲಿಂಗಾರ್ಚನೆಯ ಮಾಡಬಲ್ಲಾತನೆ ಶೀಲವಂತನಯ್ಯಾ. ಅವನ ಶ್ರೀಪಾದವನು ಹಸ್ತವನೆತ್ತಿ ಹೊಗಳುತಿರ್ದವು ವೇದಂಗಳು: `ಓಂ ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ' ಇಂತಪ್ಪ ಲಿಂಗದ ಅರ್ಚನೆಯ ಮಾಡಬಲ್ಲಾತನೆ ಸಂಬಂಧಿಯೆನಿಸಿಕೊಳ್ಳಬಲ್ಲನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ

ಇನ್ನಷ್ಟು ...