ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ, ಪರಧನ ಪರಸತಿಯಾಸೆಯುಳ್ಳನ್ನಬರ ಮಾಹೇಶ್ವರನಲ್ಲ, ಸಕಲ ಪದಾರ್ಥವನೆಲ್ಲ ಗ್ರಹಿಸುವನ್ನಕ್ಕ ಪ್ರಸಾದಿಯಲ್ಲ, ಪ್ರಾಣಲಿಂಗದಲ್ಲಿ ಸ್ವಸ್ಥಿರವಾಗದನ್ನಕ್ಕ ಪ್ರಾಣಲಿಂಗಿಯಲ್ಲ, ಕರಣಾದಿಗಳು ವರ್ತಿಸುವನ್ನಕ್ಕ ಶರಣನಲ್ಲ, ಜನನಮರಣವುಳ್ಳನ್ನಕ್ಕ ಐಕ್ಯನಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಭಕ್ತಿಯೆಂಬುದು ಬಾರಿ ಬಾಯ ಧಾರೆ, ಅದೆಂತೆಂದಡೆ: ಕಂಗಳಿನ ವರಿಯದಂತೆ ಸುತ್ತಲರಿದು; ಮಧ್ಯಾಹ್ನದ ಆದಿತ್ಯನಂತೆ ನೋಡಲರಿದು, ಪಾಪಿಯ ಕೂಸಿನಂತೆ ಎತ್ತಲರಿದು, ಒಳು(ವಾಳಿರಿ)ಗುದುರಿಯಂತೆ ಒ(ಹ ರಿ)ತ್ತಲರಿದು, ಸಜ್ಜನವುಳ್ಳ ಸತಿಯಂತೆ ಉಳಿಯಲರಿದು, ಪಾದರಸದಂತೆ ಹಿಡಿಯಲರಿದು, ಮೊದಲುಗೆಟ್ಟ ಹರದನಂತೆ ಕೆತ್ತಿಕೊಂಡಿಹುದು, ಭಕ್ತಿಯ ಮುಖ ಎತ್ತಲೆಂದರಿಯಬಾರದು. ಇದು ಕಾರಣ_ಕೂಡಲಚೆನ್ನಸಂಗಯ್ಯ ಹಿಡಿಯಬಲ್ಲವರಿಗಳವಟ್ಟಿತ್ತು ಹೊಡೆ(ಹಿಡಿರಿ)ಯಲರಿಯದವರಿಗೆ ವಿಗುರ್ಬಣೆಯಾಗಿತ್ತು.
--------------
ಚನ್ನಬಸವಣ್ಣ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಭಕ್ತ ಜಂಗಮಕ್ಕೆ, ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ, ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ ಪರಸತಿ ಪರಧನ ಪರದೈವ ಭವಿಸಂಗ_ಇಷ್ಟುಳ್ಳನ್ನಕ್ಕ, ಅವನು ನಾಯಡಗು ನರಮಾಂಸ ಕ್ರಿಮಿಮಲ ಭುಂಜಕನು ಸುರಾಪಾನಸೇವಕನಪ್ಪನಲ್ಲದೆ, ಭಕ್ತನಲ್ಲ, ಜಂಗಮನಲ್ಲ, ಅದೆಂತೆಂದಡೆ: ಅಕ್ಷದೂತವಿನೋದಶ್ಚ ನೃತ್ಯಗೀತೇಷು ಮೋಹನಂ ಅಪಶಬ್ದಪ್ರಯೋಗಶ್ಚ ಜ್ಞಾನಹೀನಸ್ಯಕಾರಣಂ ತಸ್ಕರಂ ಪಾರದಾರಂಚ ಅನ್ಯದೈವಮುಪಾಸಕಂ ಅನೃತಂ ನಿಂದಕಶ್ಚೈವ ತಸ್ತ್ಯತೇ ಸ್ಯುಶ್ಚಾಂಡಲವಂಶಜಾಃ ಎಂದುದಾಗಿ ಈತನು ಗುಣಾವಗುಣವನೊಡಗೂಡಿಕೊಂಡು ನಡೆದಡೆ ಭಕ್ತ ಜಂಗಮನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭಕ್ತಸ್ಥಲ ಘನವೆಂದೆಂಬಿರಿ, ಭಕ್ತಸ್ಥಲಕ್ಕೆ ಮಾಹೇಶ್ವರಸ್ಥಲವೆ ಪ್ರತಿ, ಮಾಹೇಶ್ವರಸ್ಥಲಕ್ಕೆ ಪ್ರಸಾದಿಸ್ಥಲವೆ ಪ್ರತಿ, ಪ್ರಸಾದಿಸ್ಥಲಕ್ಕೆ ಪ್ರಾಣಲಿಂಗಿಸ್ಥಲವೆ ಪ್ರತಿ. ಪ್ರಾಣಲಿಂಗಿಸ್ಥಲಕ್ಕೆ ಶರಣಸ್ಥಲವೆ ಪ್ರತಿ, ಶರಣಸ್ಥಲಕ್ಕೆ ಐಕ್ಯಸ್ಥಲವೆ ಪ್ರತಿ. ಪ್ರತಿಯುಳ್ಳುದರಿವೆ ? ಪ್ರತಿಯು?್ಳುದು ಜ್ಞಾನವೆ ? ಪ್ರತಿಯುಳ್ಳುದು ನಿರ್ಭಾವವೆ ? ಪ್ರತಿಯುಳ್ಳುದು ಮೋಕ್ಷವೆ ? ಇಂತಿದು ಸ್ಥಲದ ಮಾರ್ಗವಲ್ಲ, ಸಾವಯವಲ್ಲ, ನಿರವಯವಲ್ಲ, ಸ್ಥಲವೂ ಅಲ್ಲ ನಿಃಸ್ಥಲವೂ ಅಲ್ಲ, ಒಳಗೂ ಅಲ್ಲ, ಹೊರಗೂ ಅಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಭಕ್ತ, ಭೃತ್ಯನಾಗಿ ಮಾಡುವ ಮಾಟದಲ್ಲಿ ವಿಚಾರವುಂಟಯ್ಯಾ, ಅದೆಂತೆಂದರೆ:ಸಂಸಾರಚ್ಛೇದನೆಯುಳ್ಳರೆ ಜಂಗಮಲಿಂಗವಹುದು, ಅದಕ್ಕೆ ಮಾಡಿದ ಫಲಂ ನಾಸ್ತಿ. ಸಂಸಾರಚ್ಛೇದನೆ ಇಲ್ಲದಿದ್ದರೆ ಆ ಜಂಗಮ ಭವಭಾರಿಯಹನು. ಅದಕ್ಕೆ ಮಾಡಿದಲ್ಲಿ ಫಲವುಂಟು. ಫಲವುಂಟಾದಲ್ಲಿ ಭವ ಉಂಟು, ಫಲವಿಲ್ಲದಲ್ಲಿ ಭವವಿಲ್ಲ. `ಮನದಂತೆ ಮಂಗಳ' ಎಂಬ ಶ್ರುತಿಯ ದಿಟವ ಮಾಡಿ, ಈ ಉಭಯದೊಳಗೆ ಆವುದ ಪ್ರಿಯವಾಗಿ ಮಾಡುವರು ಅಹಂಗೆ ಇಹರು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು, ಜಂಗಮವ ಕಂಡು ಗೃಹಕ್ಕೆ ಬಿಜಯಂಗೈಸಿ ತಂದು, ತೊತ್ತಿನ ಕೈಯಲ್ಲಿ ಅಗ್ಗವಣಿಯ ತಂದಿರಿಸಿ ಪಾದಾರ್ಚನೆಯ ಮಾಡುವ ಭಕ್ತನ ಯುಕ್ತಿಯ ಕೇಳಿರಣ್ಣಾ ! ಭಕ್ತರ ಬಸುರಲ್ಲಿ ಬರುತ ಬರುತಲಾ ತೊತ್ತಿನ ಬಸುರಲ್ಲಿ ಬರುತ್ತಿಪ್ಪನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭವಿಗೆ ಭವವಿಲ್ಲ, ಭಕ್ತಂಗೆ ಭವಿಯನೊಲ್ಲೆನೆಂಬುದು ದುರಾಚಾರ. ದೇವಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆಂದೆ, ಲಿಂಗಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆ ? ಭವಿಗೆ ಮಾಡುವ ಪದಾರ್ಥವನತಿ ಸುಯಿದಾನದಲ್ಲಿ ಮಾಡಬೇಕು. ಭಕ್ತಕಂಡಡೆ ಮುಟ್ಟಪಡವಾಯಿತಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯ, ಭಕ್ತನಾಗಿ ಭವಿಯಾಗದಿರ್ದಡೆ ಅವರನೆಂತು ಭಕ್ತರೆಂಬೆ ?
--------------
ಚನ್ನಬಸವಣ್ಣ
ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ ಕಣ್ಣಾಲಿ ಉರೆ ನಟ್ಟು ಹೊರ ಸೂಸದೆ (ಕ)ಣ್ಣ ಬಣ್ಣವ ಕಳೆದು, ಉಣ್ಣನು ಉಣ್ಣದೆ ಇರನು, ತನ್ನ ನಿಲವನರಿತು ತಾನೊಬ್ಬನೆ ಇರನು. ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ, ತನ್ನ ಪ್ರಾಣ ತನಗೆ ಪ್ರಕಾಶವು. ತನ್ನೊಳಗೆ ಹೊಣೆ ಹೊಕ್ಕು, ಕುಂಬಳದ ಸೂಚಿಯ ಸುಮ್ಮಾನಿ ಶರಣನ ನಿಲವ ನೋಡಾ ! ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ,_ಎರಡಳಿದ ನಿಲವು. ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ. ಹೊರಳಲರಿಯನು ಕೊಳಚಿಯ ಉದಕದೊಳಗೆ. ಕಳಾಕಳಾ ಭೇದದಿಂದ ತೊಳತೊಳಗುವನು. ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ ಕೂಡಲಚೆನ್ನಸಂಗಯ್ಯನೊಳಗೆ ಶರಣಕಾಂತಿಯ ನಿಲವಿಂಗೆ ಶರಣು ಶರಣು !
--------------
ಚನ್ನಬಸವಣ್ಣ
ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ ಆ ಶಿಷ್ಯನೆ ಜಂಗಮವಾಗಿ ಗುರುವಿನ ಮಠಕ್ಕೆ ನಡೆದು ಬಂದರೆ ಗುರುವೆಂಬ ಹಮ್ಮಿಲ್ಲದೆ ಪರಮಗುರುವೆಂದು ಪಾದಾರ್ಚನೆಯಂ ಮಾಡೂದು ಆಚಾರ, ನಾಚಿ ಮಾಡದಿದ್ದರೆ ನಾಯಕ ನರಕ. ಆ ಜಂಗಮ ಶಂಕೆಯಿಲ್ಲದೆ ಪಾದಾರ್ಚನೆಯ ಮಾಡಿಸಿಕೊಂಬುದೆ ಕರ್ತೃತ್ವ, ಶಂಕೆಗೊಂಡಡೆ ಪಂಚಮಹಾಪಾತಕ. ಹೀಂಗಲ್ಲದೆ ಗುರುವೆಂಬ ಹಮ್ಮು, ಶಿಷ್ಯನೆಂಬ ಶಂಕೆಯುಳ್ಳನ್ನಬರ ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಭಾವ ಭಾವಿಸಲುಂಟೆ ಭಾವಭಾವಿಸಲರಿಯದು. ಅದೇನು ಕಾರಣ ? ಭಾವದಲ್ಲಿ ಭರಿತನಾಗಿ, ನೇತ್ರ ನೋಡಲುಂಟೆ ? ನೇತ್ರ ನೋಡಲರಿಯದು, ಅದೇನು ಕಾರಣ ? ನೇತ್ರೇಂದ್ರಿಯದ ಬಾಗಿಲಲ್ಲಿ ನಿಂದು ನೋಡುವನಾಗಿ. ಶ್ರೋತ್ರ ಕೇಳಲುಂಟೆ? ಶ್ರೋತ್ರ ಕೇಳಲರಿಯದು, ಅದೇನು ಕಾರಣ ? ಶ್ರೋತ್ರದ ಬಾಗಿಲಲ್ಲಿ ನಿಂದು ಕೇಳುವನಾಗಿ. ನಾಸಿಕ ಪರಿಮಳವರಿವುದೆ? ನಾಸಿಕ ಪರಿಮಳವರಿಯದು, ಅದೇನು ಕಾರಣ ? ನಾಸಿಕದ ಬಾಗಿಲಲ್ಲಿ ನಿಂದು ವಾಸಿಸುವ ತಾನಾಗಿ. ಜಿಹ್ವೆ ರುಚಿಯನರಿವುದೆ? ಜಿಹ್ವೆ ರುಚಿಯನರಿಯದು, ಅದೇನು ಕಾರಣ ? ಜಿಹ್ವೆಯ ಬಾಗಿಲಲ್ಲಿ ನಿಂದು ರುಚಿಯ ನಿಶ್ಚೈಸುವ ತಾನಾಗಿ. (ತ್ವಕ್ಕು ಸ್ಪರ್ಶಿಸಬಲ್ಲುದೆ ತ್ವಕ್ಕು ಸ್ಪರ್ಶಿಸಲರಿಯದು, ಅದೇನು ಕಾರಣ ? ತ್ವಕ್ಕಿನಲ್ಲಿ ನಿಂದು ಸ್ಪರ್ಶಿಸುವ ತಾನಾಗಿ) ಜಂತ್ರಂಗಳಾಡಬಲ್ಲವೆ? ಜಂತ್ರಂಗಳಾಡಲರಿಯವು, ಅದೇನು ಕಾರಣ ? ಜಂತ್ರಂಗಳನಾಡಿಸುವ ಯಂತ್ರವಾಹಕ ತಾನಾಗಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ, ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರವೆ ಲಿಂಗ, ಆ ಲಿಂಗಕ್ಕೆ ನಿವೃತ್ತಿಯೆ ಕಲೆ, ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ ನಿಮ್ಮ ಭಕ್ತನು
--------------
ಚನ್ನಬಸವಣ್ಣ
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ ಕಾಮನ ಕಾಟವು ಕಡೆಗಾಣದಯ್ಯಾ. ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ ಕಾಲದೂತರ ಭೀತಿಯು ತಪ್ಪದಯ್ಯಾ. ತನುತ್ರಯದ ಅಭಿಮಾನ ಇಹನ್ನಬರ ಸಂಸಾರಸಂತಾಪ ಓರೆಯಾಗದಯ್ಯಾ. ಕೂಡಲಚೆನ್ನಸಂಗಮದೇವಾ,_ ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ ನಿನ್ನ ಮಾಯದ ಮಾಟವೆಂದರಿದೆನಯ್ಯಾ.
--------------
ಚನ್ನಬಸವಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಬೇರು ಮಾಡಿ ನುಡಿದು ಬೇರು ಮಾಡಿ ನಡೆವ ಭಿನ್ನನಲ್ಲ. ಭಿನ್ನವಿಲ್ಲದ ಅಂತರಂಗದಲ್ಲಿ ಅರಿವು ಪರಿಪೂರ್ಣ ಬಸವಣ್ಣ. ಬಹಿರಂಗದಲ್ಲಿ ದಾಸೋಹ ಸಂಪನ್ನ ಬಸವಣ್ಣ. ಮನ ವಚನ ಕಾಯದಲ್ಲಿ ಸದ್ಭಕ್ತಿಸಂಪನ್ನ ಬಸವಣ್ಣ. ಎಡೆದೆರಹಿಲ್ಲದ ಲಿಂಗಸಂಪನ್ನ ಬಸವಣ್ಣ. ಸರ್ವಾಂಗದಲ್ಲಿ ಸರ್ವಾಚಾರಸಂಪನ್ನ ಬಸವಣ್ಣ. ಕೂಡಲಚೆನ್ನಸಂಗನಲ್ಲಿ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ ? ವೇಶಿ ಭಕ್ತೆಯಾದರೇನಯ್ಯಾ ಎಂಜಲ ತಿಂಬುದ ಬಿಡದನ್ನಕ್ಕ ? ಅರಸು ಭಕ್ತನಾದರೇನಯ್ಯಾ, ಅಹಂಕಾರವಳಿಯದನ್ನಕ್ಕ ?_ ಇಂತೀ ಮೂವರಿಗೆ ಲಿಂಗವ ಕೊಟ್ಟಾತ ವ್ಯವಹಾರಿ, ಕೊಂಡಾತ ಲಾಭಗಾರ_ ಇವರ ಭಕ್ತಿಯೆಂಬುದು, ಒಕ್ಕಲಗಿತ್ತಿ ಹೊಸ್ತಿಲ ಪೂಜೆಯ ಮಾಡಿ, ಇಕ್ಕಾಲಿಕ್ಕಿ ದಾಟಿದಂತಾಯಿತ್ತು. ಹಟ್ಟಿಯ ಹೊರಗೆ ಬೆನವನ ಪೂಜೆಯ ಮಾಡಿ ತಿಪ್ಪೆಯೊಳಗೆ ಬಿಟ್ಟಂತಾಯಿತ್ತು. ಜಂಗಮದ ಪೂಜೆಯ ಮಾಡಿ ನೈಷೆ*ಯಿಲ್ಲದ ಭ್ರಷ್ಟರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಭವಿವಿರಹಿತನಾಗಿ ಭಕ್ತನಾದ ಬಳಿಕ ತನ್ನ ಮನೆಯಲ್ಲಿ ಮಾಡಿದ ಪಾಕವ ಭವಿಗಿಕ್ಕಬಹುದೆ ? ಇಂತಪ್ಪ ಯುಕ್ತಿಶೂನ್ಯರಿಗೆ ಪ್ರಸಾದವಿಲ್ಲ; ಮುಕ್ತಿ ಎಂತಪ್ಪುದೊ ? ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ! ಕೂಡಲಚೆನ್ನಸಂಗಮದೇವಯ್ಯ ನಿಮ್ಮಾ ಪಥವನರಿಯದ ಅನಾಚಾರಿಗಿನ್ನೆಂತಯ್ಯ ?
--------------
ಚನ್ನಬಸವಣ್ಣ
ಭವವಿಲ್ಲದ ಭಕ್ತನ ಪರಿಯ ನೋಡಾ ! ಮನ ಪ್ರಾಣ ಮುಕ್ತಿಭಾವ ವಿರಹಿತ ಒಡಲಿಲ್ಲದ ಜಂಗಮದ ಪರಿಯ ನೋಡಾ ! ಸಿಡಿಲು ಮಿಂಚಿನ ರೂಹನೊಂದೆಡೆಯಲ್ಲಿ ಹಿಡಿಯಲುಂಟೆ ? ಈ ಉಭಯ ಒಂದಾದವರ ಕಂಡರೆ ನೀವೆಂಬೆನಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭವಿಯ ಮನೆಯಲ್ಲಿ ಭವಿಯ ಹಸ್ತದಲ್ಲಿ ಭವಿಪಾಕವಲ್ಲದೆ, ಭಕ್ತರ ಮನೆಯಲ್ಲಿ ಭಕ್ತರ ಹಸ್ತದಲ್ಲಿ ಭವಿಪಾಕವುಂಟೆ ? ಇಲ್ಲ ಇಲ್ಲ. ಸುಡಲಿವದಿರ ಭಕ್ತಿಯೆಂತಹುದೊ, ಯುಕ್ತಿಯಂತಹುದೊ, ಶೀಲವೆಂತಹುದೊ ! ಸದ್ಭಕ್ತಿಯಿಂದ ಮಾಡಿ ನೀಡುವ ಭಕ್ತನು ಭಕ್ತದೇಹಿಕದೇವ ಆತ ತಾನೆ ಪರಶಿವನು. ಆ ಭಕ್ತನ ಹಸ್ತದಿಂದ ಬಂದ ದ್ರವ್ಯಪದಾರ್ಥಂಗಳೆಲ್ಲವೂ ಪ್ರಸನ್ನತ್ವದಿಂದ ಬಂದುವಾಗಿ ಪ್ರಸಾದ, ಲಿಂಗಕ್ಕೆ ಕೊಟ್ಟು ಕೊಂಬುದು. ಅದು ತಾನೆ ಶುದ್ಧ ಸಿದ್ಧ ಪ್ರಸಿದ್ಧಪ್ರಸಾದವು. ಆ ಮಹಿಮನು ಭಕ್ತದೇಹಿಕದೇವನೆಂದು ಭಾವಶುದ್ಧಿಯಿಂದ ಪ್ರಸಾದವ ಕೊಂಡಡೆ ಅದೇ ಮಹಾಪ್ರಸಾದ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ ? ಭಾವಶುದ್ಧವಿಲ್ಲ, ಮಹೇಶ್ವರರೆಂತಪ್ಪಿರಯ್ಯಾ ? ಅರ್ಪಿತದನುವರಿದು ಅರ್ಪಿಸಲರಿಯಿರಿ, ಪ್ರಸಾದವ ಗ್ರಹಿಸುವ ಪರಿಯೆಂತಯ್ಯಾ ? ನಡೆ-ನುಡಿ ಎರಡಾಗಿ ಇದೆ, ಪ್ರಾಣಲಿಂಗಸಂಬಂಧಿಯೆಂತಾದಿರಿ ? ಇಂದ್ರಿಯಂಗಳು ಭಿನ್ನವಾಗಿ, ಶರಣರಾದ ಪರಿಯೆಂತಯ್ಯಾ ? ವಿಧಿ ನಿಷೇಧ ಭ್ರಾಂತಿ ಮುಕ್ತಿಯಾದ ಪರಿಯನರಿಯಿರಿ, ಐಕ್ಯರೆಂತಪ್ಪಿರಿ ? ಈ ಪಡುಸ್ಥಲದ ಕ್ರಿಯಾಕರ್ಮವರ್ಮ ಆರಿಗೆಯೂ ಅರಿಯಬಾರದು. ಈ ವರ್ಮವರಿದಡೆ ಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತಿಗೆ ಅನುಭಾವವೆ ಬೀಜ ಕಾಣಿರೆ, ಭಕ್ತಿಗೆ ಅನುಭಾವವೆ ಆಚಾರ ಕಾಣಿರೆ, ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು. ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ ಕೂಡಲಚೆನ್ನಸಂಗಮದೇವರು ಅಘೋರನರಕದಲ್ಲಿಕ್ಕುವ
--------------
ಚನ್ನಬಸವಣ್ಣ
ಭಕ್ತನ ಹಾಡಿ ಬೇಡುವಾತ ಜಂಗಮವಲ್ಲ. ಭಕ್ತನ ಹೊಗಳಿ ಬೇಡುವಾತ ಜಂಗಮವಲ್ಲ. ಭಕ್ತನ ಓದಿ ಬೇಡುವಾತ ಜಂಗಮವಲ್ಲ. ಭಕ್ತನ ಕೊಂಡಾಡಿ ಬೇಡುವಾತ ಜಂಗಮವಲ್ಲ. ಭಕ್ತನ ಸ್ತುತಿಸಿ ಬೇಡುವಾತ ಜಂಗಮವಲ್ಲ. ಭಕ್ತನ ಕೈವಾರಿಸಿ ಬೇಡುವಾತ ಜಂಗಮವಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಬೇಡದೆ ಮಾಡುವನೆ ಭಕ್ತ, ಬೇಡದೆ ಮಾಡಿಸಿಕೊಂಬಾತನೆ ಜಂಗಮ.
--------------
ಚನ್ನಬಸವಣ್ಣ
ಭಕ್ತನಾದರೆ ಭಕ್ತಿಸ್ಥಲವನರಿದು ಅರಿಯದಂತಿರಬೇಕು, ಮಹಾಹೇಶ್ವರನಾದರೆ ನಿಷೆ*ಯ ಕುಳವನರಿದು ಅರಿಯದಂತಿರಬೇಕು, ಪ್ರಸಾದಿಯಾದರೆ ಪ್ರಸಾದಿಸ್ಥಲವನರಿದು ಅರಿಯದಂತಿರಬೇಕು, ಪ್ರಾಣಲಿಂಗಿಯಾದರೆ ಸ್ಥಿತಿ-ಗತಿಯನರಿದು ಅರಿಯದಂತಿರಬೇಕು, ಶರಣನಾದರೆ ಸತಿಪತಿಯೆಂದರಿದು ಅರಿಯದಂತಿರಬೇಕು, ಐಕ್ಯನಾದರೆ ತಾನು ತಾನಾಗಿ ಆಗದಂತಿರಬೇಕು,_ ಇಂತೀ ಷಡುಸ್ಥಲವನರಿಯದೆ ಮಾಡಿದೆನೆಂಬ ಲಜ್ಜೆಗೆಟ್ಟ ಲಾಂಛನಧಾರಿಯನೇನೆಂಬೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ

ಇನ್ನಷ್ಟು ...