ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಮರುತನ ಸಂಗದಿಂದ ಪರಿಮಳ ಬೀಸರವಾಯಿತ್ತು, ನುಡಿಯ ಗಡಣದಿಂದ ಅನುಭಾವ ಬೀಸರವಾಯಿತ್ತು, ಮಾಟದ ಸಂಭ್ರಮದಿಂದ ಭಕ್ತಿ ಬೀಸರವಾಯಿತ್ತು. ಕೂಟದ ಬೆರಕೆಯ ಸಂಭ್ರಮದಿಂದ ಅರಿವು ಬೀಸರವಾಯಿತ್ತು. ಸೂಕ್ಷ್ಮ ಶಿವಪಥವು ಸಾಮಾನ್ಯಂಗಳವೆರಿ ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ. ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ. ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ. ಮಾಡುವ ಸದಾಚಾರಕ್ಕೆ ಮೂರು ಪೂಜೆ. ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
--------------
ಚನ್ನಬಸವಣ್ಣ
ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು, ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು, ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ. ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು ಲಿಂಗಕ್ಕಭಿಷೇಕಂಗೆಯ್ಯುತಿಪ್ಪರು ನೋಡಾ. ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು ಗಳಹುತಿಪ್ಪರು ನೋಡಾ. ಇಂತೀ ಮರುಳರಾಟವ ಕಂಡು, ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ. ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ. ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಾಡಬಾರದ ಭಕ್ತಿಯನೆ ಮಾಡಿ, ನೋಡಬಾರದ ನೋಟವನೆ ಕೂಡಿ, ಸ್ತುತಿಸುವರೆ ಸ್ತುತಿಗೆ ಬಾರದೆ, ಮುಟ್ಟುವ[ರೆ] ಮುಟ್ಟಬಾರದೆ ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಂಗಳ. ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು! ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ ಏಳು ರತ್ನದ ಪುತ್ಥಳಿಗಳಾಟವು, ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ, ಎಳೆಯ ನೀಲದ ತೊಡಿಗೆಯನೆ ತೊಟ್ಟರು, ಸುಳಿದು ಮದ್ದಳೆಗಾರರೊಳು ಮೊಳಗೆ (ದಂದ?) ಮೆನಲು ಕುಣಿವ (ಪಾಡುವ) ಬಹುರೂಪಿಗಳ ನಾಟಕ, ತಾಳಧಾರಿಯ ಮೇ? ಕಹಳೆಗಾರನ ನಾದ ಕೊಳಲ ರವದೊಳಗಾಡುತ್ತ ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ! ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇ? ಕೂಡಲಚೆನ್ನಸಂಗಯ್ಯನಲ್ಲಿ ಕಳಸ (ಕಳಾಸರಿ) ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು
--------------
ಚನ್ನಬಸವಣ್ಣ
ಮಹಾಲಿಂಗಮೋಹಿತನಾದಡೆ ಲೋಕದ ಮೋಹವ ಮರೆಯಬೇಕು. ಮಹಾಲಿಂಗಭಕ್ತನಾದಡೆ ಪೂರ್ವಭಕ್ತಿಯ ಮಾಡಲಾಗದು. ಮಹಾಲಿಂಗಪೂಜಕನಾದಡೆ, ಅಜ್ಞಾನಿಗಳ ಕೂಡೆ ಸಂಗ-ಸಂಭಾಷಣೆಯ ಮಾಡಲಾಗದು. ಮಹಾಲಿಂಗವೀರನಾದಡೆ ಪ್ರಳಯಾದಿಗಳಿಗಂಜಲಾಗದು. ಮಹಾಲಿಂಗಪ್ರಸಾದಿಯಾದಡೆ ಸಮತೆ ನೆಲೆಗೊಳ್ಳಬೇಕು. ಮಹಾಲಿಂಗಪ್ರಾಣಿಯಾದಡೆ ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗಲಾಗದು. ಇದು ಕಾರಣ -ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಮಹಾಲಿಂಗಭಕ್ತಿ.
--------------
ಚನ್ನಬಸವಣ್ಣ
ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ. ವಿೂರಿದಕ್ರಿಯಾಸಮಯದಲ್ಲಿ ಶಿವಲಿಂಗಸಂಪುಟ. ಉಭಯಕ್ರಿಯಾನುಭಾವ ನೆಲೆಗೊಂಡಲ್ಲಿ ಮನಲಿಂಗಸಂಪುಟ. ಮನ ಲಿಂಗ ಲೀಯವಾದ ಬಳಿಕ ತೆರಹಿಲ್ಲದೆ ಕುರುಹಳಿದ ಲಿಂಗೈಕ್ಯ. ಸುತ್ತಿದ ಪ್ರಪಂಚು ಮೆಲ್ಲಮೆಲ್ಲನೆ ಅಚ್ಚುಗವಿಲ್ಲದೆ ಹಿಂಗಿದವು ಕೂಡಲಚೆನ್ನಸಂಗಾ ಲಿಂಗೈಕ್ಯಂಗೆ.
--------------
ಚನ್ನಬಸವಣ್ಣ
ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು. ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು. ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ ಒಕ್ಕು ಮಿಕ್ಕ ಪ್ರಸಾದವ ಕೊಂಡು ಆಗಳೆ ಅಂತೆ ಮೋಕ್ಷವನೈದಿದರು, ಶಿವರಹಸ್ಯದಲ್ಲಿ; ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ ಎಂದುದಾಗಿ ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ ಕೂಡಲಚೆನ್ನಸಂಗಮದೇವಾರಿ
--------------
ಚನ್ನಬಸವಣ್ಣ
ಮಾತನು ಮನೆಯ ಮಾಡಿ ಪತಿ (ಸತಿರಿ) ಯ ನೆಲೆಗೊಳಿಸಿ ಭ್ರಾಂತಿನ ಕದವನಿಕ್ಕಿ ಸೂತಕವಳಿದ ಸುಯಿದಾನಿ, ಇದನರಿದು ಮರೆದವರ ಕೂಡಲಚೆನ್ನಸಂಗನೆಂಬೆ
--------------
ಚನ್ನಬಸವಣ್ಣ
ಮರಹು ಅರಿವಿನಲ್ಲಡಗಿ, ಅರಿವು ಮರಹ ನುಂಗಿ ತೆರಹಿಲ್ಲದಿರ್ದೆನೆಂಬ ಅಹಂ ಇದೇನೊರಿ ಬ್ರಹ್ಮವನೊಳಕೊಂಡ ಬ್ರಹ್ಮವು ತಾನಾಗಿ ಮತ್ತೆ ಬ್ರಹ್ಮದ ನುಡಿ ಇದೇನೊರಿ ಆದಿಶೂನ್ಯ ಮಧ್ಯಶೂನ್ಯ ಅಂತ್ಯಶೂನ್ಯ ಉಧ್ರ್ವಶೂನ್ಯದಿಂದತ್ತತ್ತ ನಿಂದ [ಘನದ]ನಿಲವ ಕಾಬರಾರೊರಿ ಇದು ಕಾರಣ-ಕೂಡಲಚೆನ್ನಸಂಗನ [ಸಹಜದ] ನಿಲವು ಬಯಲು ಚಿತ್ರಿಸಿದ ರೂಪ, ಬಯಲರಿಯದಂತೆ!
--------------
ಚನ್ನಬಸವಣ್ಣ
ಮಾಯೆವಿಡಿದು ಜೀವಿಸುವ ಜೀವಕನಲ್ಲ, ಅದೇನು ಕಾರಣವೆಂದಡೆ: ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ. ವಿಷಯವಿಡಿದು ಭುಂಜಿಸುವ ಭುಂಜಕನಲ್ಲ; ಅದೇನು ಕಾರಣವೆಂದಡೆ; ಆತ ಮಹಾಪ್ರಸಾದವಿಡಿದು ಭುಂಜಿಸುವ ಭುಂಜಕನಾಗಿ. ವೇಷವಿಡಿದು ರಂಜಿಸುವ ರಂಜಕನಲ್ಲ, ಅದೇನು ಕಾರಣವೆಂದಡೆ: ಆತ ಸಹಜವಿಡಿದು ರಂಜಿಸುವ ರಂಜಕನಾಗಿ. ಇಂತೀ ತ್ರಿವಿಧವಿಡಿದು ಪರಮಾರ್ಥದಲ್ಲಿ ಆಚರಿಸುವ ಶರಣಂಗೆ ಶರಣೆಂಬೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ, ನಾದವೆ ಕಿರೀಟ, `ಅಕಾರ `ಉ'ಕಾರವೆ ಬಿಂದುವಕ್ತ್ರ, ಪರಶಿವಸ್ವರೂಪವಾದ `ಹ್ರ'ಕಾರವೆ ದೇಹ, `ಹ್ರೀಂ'ಕಾರವೆ ಶಕ್ತಿ, ಹಂಸದ್ವಯಾ ಶೃಂಗವೇ ಭುಜ, `ವ'ಕಾರವೆ_ಕಳಾ ಸ್ವರೂಪವಾದವನಿಯೆ ಪಾದದ್ವಯ. ಇಂತೀ ಮಂತ್ರಮೂರ್ತಿಯಾದ ಪರಶಿವನು, ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೊಡುವದೇವ ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ.
--------------
ಚನ್ನಬಸವಣ್ಣ
ಮನದ ಭ್ರಮೆಯ ಕಳೆದು, ಗುರುವ ಮಾಡಿ ಗುರುಭಕ್ತನಾದನಯ್ಯಾ ಬಸವಣ್ಣನು. ಪ್ರಾಣದ ಭ್ರಮೆಯ ಕಳೆದು ಲಿಂಗವ ಮಾಡಿ ಲಿಂಗಭಕ್ತನಾದನಯ್ಯಾ ಬಸವಣ್ಣನು. ಸಂಸಾರದ ಭ್ರಮೆಯ ಕಳೆದು ಜಂಗಮವ ಮಾಡಿ ಜಂಗಮಭಕ್ತನಾದನಯ್ಯಾ ಬಸವಣ್ಣನು. ಈ ತ್ರಿವಿಧಭ್ರಮೆಯ ತ್ರಿಕರಣದಲ್ಲಿ ಕಳೆದು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನಾದನಯ್ಯಾ ಬಸವಣ್ಣನು
--------------
ಚನ್ನಬಸವಣ್ಣ
ಮಾಡುವಲ್ಲಿ ಎನ್ನ ನಾನು ಅರೆಯಿತ್ತು ಮಾಡಿದೆನಾದಡೆ, ನೀಡುವಲ್ಲಿ ಎನ್ನ ನಾನು ಅರೆಯಿತ್ತು ನೀಡಿದೆನಾದಡೆ, [ಉಣಿಸುವಲ್ಲಿ] ಎನ್ನ ನಾನು ರುಚಿಗೆ ಹಾರೈಸಿದೆನಾದಡೆ ನಿಮಗಂದೇ ದ್ರೋಹಿಯಯ್ಯಾ! ಮಾಡುವಲ್ಲಿ ನೀಡುವಲ್ಲಿ [ಉಣಿಸುವಲ್ಲಿ] ಕೂಡೆ ಶುದ್ಧನಲ್ಲದಡೆ ನೀನಂದೆ ಮೂಗ ಕೊಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ, ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯಾ. ನಾಭಿಯಲ್ಲಿ ಶಂಕರನೆಂಬ ರುದ್ರನಿಪ್ಪನಯ್ಯಾ, ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯಾ. ಕೊರಳಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯಾ. ಬಲದ ಭುಜದಲ್ಲಿ ಶ್ರೀಕÀಠನೆಂಬ ರುದ್ರನಿಪ್ಪನಯ್ಯಾ, ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯಾ. ಬಲದ ಬಾಹುವಿನಲ್ಲಿಈಶ್ವರನೆಂಬ ರುದ್ರನಿಪ್ಪನಯ್ಯಾ. ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯಾ. ಬಲದ ಮುಂಗೈಯಲ್ಲಿ ಕೋದಂಡನೆಂಬ ರುದ್ರನಿಪ್ಪನಯ್ಯಾ, ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯಾ. ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯಾ, ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಿಪ್ಪನಯ್ಯಾ. ಬಲದ ಕಣ್ಣಲ್ಲಿ ಕಾಮಸಂಹರನೆಂಬ ರುದ್ರನಿಪ್ಪನಯ್ಯಾ, ಎಡದ ಕಣ್ಣಲ್ಲಿ ತ್ರಿಪುರಸಂಹರನೆಂಬ ರುದ್ರನಿಪ್ಪನಯ್ಯಾ. ಬಲದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಿಪ್ಪನಯ್ಯಾ, ಎಡದ ಕರ್ಣದಲ್ಲಿ ಏಕಾದಶನೆಂಬ ರುದ್ರನಿಪ್ಪನಯ್ಯಾ. ಹಿಂದಲೆಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯಾ. ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡಖಂಡಿತನೆಂಬ ರುದ್ರನಿಪ್ಪನಯ್ಯಾ; ಇಂತೀ ರುದ್ರರುಗಳು ತಮ್ಮ ತಮ್ಮಸ್ಥಾನಂಗಳೊಳಗಿಪ್ಪರಾಗಿ; ಇದನರಿಯದೆ ವಿಭೂತಿಯ ಧರಿಸಿದಡೆ ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಸಣವೈರಾಗ್ಯರು ಲಕ್ಷ ಲಕ್ಷ, ಪುರಾಣವೈರಾಗ್ಯರು ಲಕ್ಷ ಲಕ್ಷ, ಪ್ರಸೂತಿವೈರಾಗ್ಯರು ಲಕ್ಷ ಲಕ್ಷ, ಪಿತ್ತವೈರಾಗ್ಯರು ಲಕ್ಷ ಲಕ್ಷ, ಸ್ವಯಾನುಭಾವ ಸಮ್ಯಕ್‍ಜ್ಞಾನ ವೈರಾಗ್ಯರನೊಬ್ಬರನೂ ಕಾಣೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮನ ಭಾವ ಕರಣಂಗಳೊಳಹೊರಗೆ ತೆರಹಿಲ್ಲದ ದೇವಾ, ಬಂದ ಪದಾರ್ಥವನವಧರಿಸು ದೇವಾ, ಭಾವಭರಿತದೇವಾ. ಅದೆಂತೆಂದಡೆ: ತಿಲಮಧ್ಯೇ ಯಥಾ ತೈಲಂ ಕ್ಷೀರಮಧ್ಯೇ ಯಥಾ ಘೃತಂ ಪುಷ್ಪಮಧ್ಯೇ ಯಥಾ ಗಂಧೋ ಭಾವಮಧ್ಯೇ ತಥಾ ಶಿವಃ ಎಂದುದಾಗಿ ಎಲ್ಲ ಭೋಗಂಗಳು ತನ್ನವಾಗಿ, ಎಲ್ಲ ಕರಣಂಗಳ ತನ್ಮಯ ಮಾಡಿಕೊಂಡನಾಗಿ ಕೂಡಲಚೆನ್ನಸಂಗದೇವರು
--------------
ಚನ್ನಬಸವಣ್ಣ
ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ, ಕೇವಲಜ್ಞಾನ, ಜ್ಯೋತಿಜ್ರ್ಞಾನ, ಮಹಾಜ್ಯೋತಿಜ್ರ್ಞಾನವೆಂದಿಂತು ಜ್ಞಾನವಾರು ತೆರನು. ಮತಿಜ್ಞಾನದಿಂದ ಶ್ರುತಿಜ್ಞಾನವಹುದು, ಶ್ರುತಿಜ್ಞಾನದಿಂದ ಖಂಡಜ್ಞಾನವಹುದು. ಖಂಡಜ್ಞಾನದಿಂದ ಕೇವಲಜ್ಞಾನವಹುದು, ಕೇವಲಜ್ಞಾನದಿಂದ ಜ್ಯೋತಿಜ್ರ್ಞಾನವಹುದು. ಜ್ಞೋತಿಜ್ರ್ಞಾನದಿಂದ ಮಹಾಜ್ಯೋತಿಜ್ರ್ಞಾನವಹುದು. ಮತಿಜ್ಞಾನವೆ ಭಕ್ತ, ಶ್ರುತಿಜ್ಞಾನವೆ ಮಹೇಶ್ವರ, ಖಂಡಜ್ಞಾನವೆ ಪ್ರಸಾದಿ, ಕೇವಲಜ್ಞಾನವೆ ಪ್ರಾಣಲಿಂಗಿ, ಜ್ಯೋತಿಜ್ರ್ಞಾನವೆ ಶರಣ, ಮಹಾಜ್ಯೋತಿಜ್ರ್ಞಾನವೆ ಐಕ್ಯ. ಈ ಷಟ್‍ಸ್ಥಲದ ನೆಲೆಯ ಬಲ್ಲಾತನೆ- ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು
--------------
ಚನ್ನಬಸವಣ್ಣ
ಮಂತ್ರಯೋಗ, ಹಠಯೋಗ, ಲಯಯೋಗ, ಜ್ಞಾನಯೋಗ. ಇಂತೀ ಎಲ್ಲ ಯೋಗವನರಿದು ಮರೆದು ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನುಡಿವುದು ಕಾಣಿರೆ ! ರಾಜಯೋಗದ ಮೇಲೆ ನಡೆವುದು ಕಾಣಿರೆ ! ವಾಗತೀತಂ ಮನೋ[s]ತೀತಂ ಭಾವತೀತಂ ನಿರಂಜನಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ ಎಂದುದಾಗಿ, ಶಿವ ಜೀವ ಲಿಂಗ ಪ್ರಾಣ, ಶಿವಯೋಗವೆಂಬುದೆ ಐಕ್ಯ. ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರು, ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಮನೆಯೊಳಗಣ ಕಿಚ್ಚು ಕಾನನವ ಸುಟ್ಟಿತ್ತು, ಕಾನನ ಬೆಂದಲ್ಲಿ ಮನೆ ಉರಿಯಹತ್ತಿತ್ತು, ಮನೆ ಬೆಂದು ಕಂಬ ಉಳಿಯಿತ್ತು. ಆ ಕಂಬದ ಮೇಲೆ ರತ್ನವಿದ್ದುದ ಕಂಡೆ. ಅದರ ಬೆಳಗು ಮೂರು ಲೋಕವ ತುಂಬಿತ್ತಲ್ಲಾ ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು
--------------
ಚನ್ನಬಸವಣ್ಣ
ಮನು ಮುನೀಶ್ವರ ವೇದ ಶಾಸ್ತ್ರ ಸ್ಮೃತಿಗಳೆಲ್ಲ ತಮ ತಮಗೆ ಹೊಗಳುತಿಹವು ಶಿವಘನತೆಯಂ, ಘನತರಾಂತರಗಾಣದ ಅತ್ಯತಿಷ*ದ್ದಶಾಂಗುಲನೆಂದು, ಒರಲುತಿಹವು ಎನಲು ಆ ಘನವದು ದರ್ಶನಾಗಮ ತರ್ಕದನುಮತಕೆ ಸಾಧ್ಯವೆರಿ ಲಿಂಗದ ಮಹಾತ್ಮೆಗೆ ಕಡೆಯನೆಣಿಸಲಿಲ್ಲಾಗಿ. ಪ್ರಣವಾದಿ ಪಂಚಾಕ್ಷರಿಯೊಳಗಡಕವಾಗಿಹುದು ಸತ್ಯ, ನಿತ್ಯ. ಅನಿತ್ಯದೇವತೆಗಳರಿಯಲಿಕರಿವೆ ಸಚ್ಚಿದಾನಂದ ಶಿವಜ್ಞಾನಾನುಭಾವಭಾವೋತ್ತಮರ ಭಾವ ಕರಣದ ಕರದೊಳಮೃತಕರಕಿರಣ ಸಮ್ಯಗ್ಜೋತಿಯರಿ ಒತ್ತರಿಸಿ ತೊಳತೊಳಗುವತ್ಯಂತ ನಿರವಯದ ಮತ್ತೆ ಸಚ್ಚಿತ್ ಸುಖನಿರಂಜನದ ನಿರ್ಮಲದ ನಿತ್ಯ ಕೂಡಲಚ್ನೆಸಂಗನಂಗವನು ಪ್ರಭುಲಿಂಗದಲ್ಲಿಯೆ ಕಂಡೆನು
--------------
ಚನ್ನಬಸವಣ್ಣ
ಮುಂದುಗಾಣದ ಮಾನವರು ಮತ್ತೊಂದನರಿಯದೆ ಕೆಟ್ಟರು, ಲಿಂಗವ ಪೂಜಿಸಿ, ಜಂಗಮವ ವೇದಿಸಿ ಪ್ರಸಾದದ ಪರಿಣಾಮವನರಿಯದೆ ಕೆಟ್ಟು ಹೋದರಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ

ಇನ್ನಷ್ಟು ...