ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವ ದೇವ ಮಹಾಪ್ರಸಾದ. ತನ್ನ ರೂಪವ ತಿಳಿದು ನೋಡಬೇಕೆಂದು ಕನ್ನಡಿಯನುಪಾಸ್ತಿ ಮಾಡಲು ಆ ಕನ್ನಡಿ ಬೇಕು ಬೇಡೆಂಬುದೆ ಅಯ್ಯಾ ? ಪತಿಯಾಜ್ಞೆಯಂತೆ ಸತಿಪತಿಭಾವವ ಧರಿಸಿದಡೆ ಸಂಯೋಗಕಾಲದಲ್ಲಿ ಅಲ್ಲವೆಂದೆನಬಹುದೆ ? ನೀವೆ ಮಾಡಿದಡೆ ನೀವೆ ಮಾಡಿದುದು ನಾನೆ ಮಹಾಪ್ರಸಾದವೆಂದು ಸ್ವೀಕರಿಸಿದಡೂ ನೀವೆ ಮಾಡಿದುದು. ಅಂಗೈಯ ಲಿಂಗದ ಲಕ್ಷಣವ ನೋಡಿ ಎಂದು ಕೈಯಲ್ಲಿ ಕೊಟ್ಟಡೆ, ಲಿಂಗದಲ್ಲಿ ಲಕ್ಷಣವನರಸಲಾಗದೆಂದು ಚೆನ್ನಸಂಗಮನಾಥನ `ಕೋ' ಎಂದು ಕೊಟ್ಟಡೆ ಮಹಾಪ್ರಸಾದವೆಂದು ಕೈಕೊಂಡೆನು ಗುರುವೆ. ಬೆದರಿ ಅಂಜಿದಡೆ ಮನವ ಸಂತೈಸಿ ಏಕಾರ್ಥದ ಭೇದದ ತೋರಿ ಬಿನ್ನಹವ ಮಾಡಿದೆನು. ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು, ಸಂಗನಬಸವಣ್ಣನ ಕರುಣದ ಶಿಶುವೆಂಬುದ ಮೂರುಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು.
--------------
ಚನ್ನಬಸವಣ್ಣ
ದೀವಿಗೆಯೊಳಗಣ ಜ್ಯೋತಿಯ ದಿವಿಜರೆತ್ತಬಲ್ಲರು ? ಮನೋಜಲ ಹರಿವಠಾವನು ಮನೋಹರನೆತ್ತ ಬಲ್ಲ? ತನುವಿನ ಸ್ನೇಹಗುಣವ ದೇಹಿಕನೆತ್ತ ಬಲ್ಲ? ಅಷ್ಟತನು ಅಣುವಿನ ಭೇದವನು ಕೂಡಲಚೆನ್ನಸಂಗನಲ್ಲಿ ಆ ಲಿಂಗಿಯೇ ಬಲ್ಲನು
--------------
ಚನ್ನಬಸವಣ್ಣ
ದಾಸಿಯ ಸಂಗ, ಭಂಗಿಯ ಸೇವನೆ, ವೇಶಿಯ ಸಂಗ, ಸುರೆಯ ಸೇವನೆ, ಮುಂಡೆಯ ಸಂಗ, ಅಮೇಧ್ಯದ ಸೇವನೆ, ಕನ್ನೆಯ ಸಂಗ, ರಕ್ತದ ಸೇವನೆ._ ಇಂತೀ ಐವರ ಸಂಗವ ಮಾಡುವ ದ್ರೋಹಿಗೆ ಕÀಠಪಾವಡ, ಧೂಳಪಾವಡ, ಸರ್ವಾಂಗಪಾವಡ ಉಂಟೆಂಬ ಪಂಚಮಹಾಪಾತಕರಿಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ ನಾ(ನಾಮ?) ಮೊದಲೇ ಇಲ್ಲ_ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ದೂರದಲ್ಲಿ ಅರ್ಪಿತವೆಂಬ ದುರಾಚಾರಿಯ ಮಾತ ಕೇಳಲಾಗದು. ಭಾವದಲ್ಲಿ ಅರ್ಪಿತವೆಂಬ ಭ್ರಮಿತರ ಮಾತ ಕೇಳಲಾಗದು. ಅಂತರದಲ್ಲಿ ಅರ್ಪಿತವೆಂಬ ಅನಾಚಾರಗಳ ಮಾತ ಕೇಳಲಾಗದು. ತನ್ನ ಕಾಯದ ಮೇಲಣ ಲಿಂಗಕ್ಕೆ ಭಾವಶುದ್ಧಿಯಲ್ಲಿ ಕೊಟ್ಟಲ್ಲದೆ ಕೊಂಡನಾದಡೆ, ಸತ್ತ ಹಳೆಯ ನಾಯಿಯ ಅರಸಿ ತಂದು ಅಟ್ಟದ ಮೇಲೆ ಇರಿಸಿಕೊಂಡು, ಗದ್ಯಾಣ ಗದ್ಯಾಣ ತೂಕವ ಕೊಂಡಂತೆ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ದೇಹೇಂದ್ರಿಯ ಮನಃಪ್ರಾಣ ಅಹಮಾದಿ ತತ್ವಪದಾರ್ಥವ ಕೆಡಸಿತಲ್ಲಾ, ಕೋ[s]ಹಮೆನಲರಿಯದ ಮುಗ್ಧಾ, ಸೋ[s]ಹಂ ನಿನ್ನ ನೀ ತಿಳಿಯಾ, ತತ್ವಮಸಿ ವಾಕ್ಯಾರ್ಥ ನೀನಾಗಿ, ಕೂಡಲಚೆನ್ನಸಂಗ ಬೇರಿಲ್ಲ.
--------------
ಚನ್ನಬಸವಣ್ಣ
ದಾಸಿಯ ಸಂಗವ ಮಾಡಿದಡೆ ಸೂಕರನ ಮಾಂಸವ ತಿಂದ ಸಮಾನ, ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ, ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ, ಗಂಡನ ಬಿಟ್ಟವಳ ಸಂಗವ ಮಾಡಿದಡೆ ನರಮಾಂಸವ ತಿಂದ ಸಮಾನ, ಗಂಡನುಳ್ಳವಳ ಸಂಗವ ಮಾಡಿದಡೆ ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ, ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಇದು ಕಾರಣ ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ ದಾಶಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿಪಟ್ಟ ಪಾಣಿಗ್ರಹಣ ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ ವರ್ತಿಸುವ ಭಕ್ತಾರಾಧ್ಯರಿಗೆ_ ಗುರುವುಂಟು ಲಿಂಗವುಂಟು ಜಂಗಮವುಂಟು ಪಾದೋದಕವುಂಟು ಪ್ರಸಾದವುಂಟು; ಆತಂಗೆ ನಿಜಮೋಕ್ಷವುಂಟು. ಇಂತಲ್ಲದೆ_ ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ ಆರು ಪ್ರಕಾರದ ಸ್ತ್ರೀಯರು ಮುಂತಾದ ರಾಶಿಕೂಟದ ಸ್ತ್ರೀಯರಿಗೆ ಹೇಸದೆ ಆಸೆ ಮಾಡುವ ಪಾಠಕರಿಗೆ; ಗುರುವಿಲ್ಲ; ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ; ಅವ ಭಕ್ತನಲ್ಲ ಜಂಗಮವಲ್ಲ, ಅವರಿಗೆ ಮುಕ್ತಿಯಿಲ್ಲ, ಮುಂದೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ದಾಯೆಂದಡೆ ನಡೆದು ಹೋಯೆಂದಡೆ ನಿಲ್ಲನೆ ಜಗವ ಹೊರೆಯಲೆಂದು ? ಆತನ ಸಾಹಸವ ಬೆಸಗೊಂಬಡೆ ಈಶ್ವರನ ತಾಳುವನಯ್ಯಾ. ಆವರಿಸಿದಡಲ್ಲಾಡಿದತ್ತು ಕೈಲಾಸವು ! ಗಂಡುಗೆದರಿ ಈಡಾಡಿದಡೆ ಅಂಡಜ ಬ್ರಹ್ಮಾಂಡಗಳು ನಿಲುವವೆ ? ಕೆಲೆದು ಕೆದರಿ ಅಟ್ಟಿದೊಡೆ ಮೊರೆಯೆಂಬರಲ್ಲದೆ ಇದಿರಾನುವರುಂಟೆ ? ಅಯ್ಯಾ ನೀನು ಬಿಟ್ಟು ಬೀದಿವರಿದೋಡೆ ಅಟ್ಟಿ ಹಿಡಿವ ಗಂಡುಗರ ನಾ ಕಾಣೆನಯ್ಯಾ. ಸೃಷ್ಟಿಗೀಶ್ವರನಲ್ಲದೆ ಮತ್ತಾರೂ ಇಲ್ಲ. ಗಂಭೀರವೆಂದಡೆ ಇಂಬುಗೊಳ್ವವೆ ಕೊಳಗು ? ಶಂಭುವೇರುವ ವಾಹನವೆಂದೊಡೆ ಬೆನ್ನು ಬೆಂಕಟ್ಟಾಗದೆ ? ಈ ಕೀಳು ಭುವನಕ್ಕೆ. ನಮ್ಮ ಕೂಡಲ[ಚೆನ್ನ]ಸಂಗಮದೇವನಲ್ಲಿ ತೆತ್ತೀಸಾದಿಗಳಿಗುಬ್ಬಸವಯ್ಯ ಎಮ್ಮ ಬಸವರಾಜನು
--------------
ಚನ್ನಬಸವಣ್ಣ
ದಾನವ ಮಾಡುವ ಕ್ರೂರಕರ್ಮರ ಮನೆಯಲ್ಲಿ ಮಜ್ಜೆ ಮಾಂಸವಲ್ಲದೆ ಲಿಂಗಕ್ಕೆ ಓಗರವಿಲ್ಲ ವರುಷಕ್ಕೆ ಒಂದು ತಿಥಿಯ ಮಾಡುವ ಭಕ್ತ ಮನೆಯಲ್ಲಿ ಕೂಟಕ್ಕೆಯಿಕ್ಕಿ ಕೀರ್ತಿಗೆ ಸಲುವನಲ್ಲದೆ ಲಿಂಗಕ್ಕೋಗರವಿಲ್ಲ ಹರಸಿಕೊಂಡು ನೀಡುವ ಭಕ್ತನ ಮನೆಯಲ್ಲಿ ಲಿಂಗಕ್ಕೆ ಓಗರವಿನಲ್ಲಫ ಈ ತ್ರಿವಿಧವಿಡಿದು ಮಾಡುವಾತ ಭಕ್ತನಲ್ಲ ಅವನ ಮನೆಯ ಹೊಕ್ಕು ಲಿಂಗಾರ್ಚನೆಯ ಮಾಡಿಸಿಕೊಂಬಾತ ಜಂಗಮಸ್ಥಳಕ್ಕೆ ಸಲ್ಲ ಈ ತ್ರಿವಿಧ ಭಕ್ತಿಯೆಂಬುದು ನರಕಕ್ಕೆ ಭಾಜನವಾಯಿತ್ತು ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ
--------------
ಚನ್ನಬಸವಣ್ಣ
ದಶ ದ್ವಾದಶಂಗಳ ಮೇಲಣ ಬಾಗಿಲಲಿರ್ದು, ಕಾಲ ಜರಾ ಮರಣವೆಂಬ ಬಾಗಿಲ ಹೊಗದೆ ಹೊನ್ನಬಣ್ಣವಾಗದಂತೆ ಮಾಡಿಕೊಂಬುದು. ಕುಲಸಂಕುಲವಾಗದೆ ದಶದಿಕ್ಕಿನಲ್ಲಿ ದೇಸಿಗನಾಗದೆ ದೇಶಿಕನಾಗಿರಬೇಕು ದಶಸ್ಥಾನಂಗಳ ನೋಡಿ ಲಿಂಗಸ್ಥಾನದಲ್ಲಿ ನಿಂದು. ಇಂತು ದಶಸಂಪಾದನೆ ಮೂವತ್ತಾರರಿಂದ, ಸಂಸಾರಮೃಗದ ಮರೀಚಿಕಾಜಲದ ಮಾಯವೆಂದರಿತು ನಿಶ್ಚಲ ಮತಿಯಿಂದ ಶುದ್ಧಾತ್ಮಚಿತ್ತರಾಗಿ ಆರಾಧಿಸಬೇಕು ಕೂಡಲಚೆನ್ನಸಂಗನ ಶರಣರು
--------------
ಚನ್ನಬಸವಣ್ಣ
ದೇವಪ್ರಭೆಯೊಳಗಿಹರಲ್ಲದೆ ದೇವಗಹನವ ಮಾಡಬಾರದಾರಿಗೆಯೂ. ದೇವಸಕೀಲದೊಳಗೆ ಬೆಳೆಯಬಹುದಲ್ಲದೆ, ದೇವನಷ್ಟದೊಳಗೆ ಉತ್ಪತ್ಯವಾಗಬಾರದಾರಿಗೆಯೂ. ಉತ್ಪತ್ತಿಯ ಗಣತಿ(ಗತಿ?)ಯನಾರೋಗಣೆಯ ಮಾಡಬಾರದಾರಿಗೆಯೂ. ಸಚರಾಚರವೆಲ್ಲವೂ ಈ ಪರಿಯಲ್ಲಿ ಸಂಭ್ರಮಿಸುತ್ತಿರ್ದುದಲ್ಲಾ, ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಇದ್ದ ಭಾವವಳಿದಡೆ ಲಿಂಗೈಕ್ಯವು.
--------------
ಚನ್ನಬಸವಣ್ಣ
ದಿಟದಾಕಾಶ, ಘಟದಾಕಾಶ, ಮಠದಾಕಾಶತ್ರಯಂಗಳಲ್ಲಿ ಹೋಗಲಿಕಸಾಧ್ಯ, ಹೊರವಡಲಿಕಸಾಧ್ಯ. ಚಿತ್ತಾಕಾಶಂ ಚಿದಾಕಾಶಂ ಆಕಾಶಂ ಚ ತೃತೀಯಕಂ ದ್ವಾಭ್ಯಾಂ ಶೂನ್ಯತರಂ ವಿದ್ಧಿ ಚಿದಾಕಾಶಂ ವರಾನನೇ ಎಂಬುದಾಗಿ_ಆಕಾಶತ್ರಯ ಕೂಡಲಚೆನ್ನಸಂಗಾ. ನಿಮ್ಮ ಶರಣಂಗೆ ಸಾಧ್ಯ, ಉಳಿದವರಿಗಸಾಧ್ಯ
--------------
ಚನ್ನಬಸವಣ್ಣ
ದೇವಾ, ``ನಮಃ ಶಿವಾಯೇತಿ ಶಿವಂ ಪ್ರಪದ್ಯೇ ಶಿವಂ ಪ್ರಸೀದೇತಿ ಶಿವಂ ಪ್ರಪದ್ಯೇ ಶಿವಾತ್ಪರಂ ನೇತಿ ಶಿವಂ ಪ್ರಪದ್ಯೇ ಶಿವೋsಹಮಸ್ಮೀತಿ ಶಿವಂ ಪ್ರಪದ್ಯೇ ಎಂದು ನಿಮ್ಮ ಪವಿತ್ರವಚನವಿಪ್ಪುದಾಗಿ ಎನ್ನ ತನುವ ನಿಮ್ಮ ಶರಣರ ಸೇವೆಯಲ್ಲಿರಿಸುವೆನಯ್ಯಾ. ಆನು ಸತ್ಕಾರ್ಯದಿಂದ ಸಂಪಾದಿಸಿದ ಧನವ ನಿಮ್ಮ ನಿಲುವಿಂಗಾಗಿ ವಿನಿಯೋಗಿಸುವೆನಯ್ಯಾ. ಇಂತೀ ಸಕಲದ್ರವ್ಯವ ನಿರ್ವಂಚನೆಯಿಂದ ನಿಮಗರ್ಪಿಸಿ, ನಿಮ್ಮಡಿಯ ಹೊಂದಲಿಚ್ಛಿಸುವೆನಯ್ಯಾ. ಮೇಣು, ನಿಮ್ಮ ಸುಪ್ರಸಾದವ ಪಡೆದು ಲಿಂಗಭೋಗೋಪಭೋಗಿಯಾಗಿ, ನಿಮ್ಮ ಹೊಂದಲಾತುರಿಪೆನಯ್ಯಾ. ದೇವಾ, ನೀವು ಸರ್ವಶಕ್ತರಾಗಿ ಅಂದಿಂದು ಮುಂದೆಂದಿಗೆಯೂ ನಿಮ್ಮ ಸರಿಮಿಗಿಲಾರೂ ಇಲ್ಲವೆಂಬುದನರಿದು ನಿಮ್ಮಡಿಯ ಸೇರೆ ಯತ್ನಿಸುವೆನಯ್ಯಾ. ಬಳಿಕ ನೀವೇ ಎನ್ನ ಸ್ವರೂಪವಾಗಿ [ಅನ್ಯ] ಭೇದವಡಗಿ ನಿಮ್ಮೊಡನೆ ಬೆರೆದು ನಿತ್ಯಮುಕ್ತನಾಗಿರ್ಪೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು, ಪ್ರಾಣಪ್ರಸಾದವ ಸಿರಿಯಾಳ ಕೊಂಡ, ಸಮತೆಪ್ರಸಾದವ ಬಲ್ಲಾಳ ಕೊಂಡ, ಜಂಗಮಪ್ರಸಾದವ ಬಸವಣ್ಣ ಕೊಂಡ, ಸಮಯಪ್ರಸಾದವ ಬಿಬ್ಬ ಬಾಚಯ್ಯಗಳು ಕೊಂಡರು, ಜ್ಞಾನಪ್ರಸಾದವ ಅಕ್ಕಗಳು ಕೊಂಡರು, ಶೂನ್ಯಪ್ರಸಾದವ ಪ್ರಭುದೇವರು ಕೊಂಡರು. ಎನಗಿನ್ನೆಂತಯ್ಯಾ ? ಮುಳ್ಳಗುತ್ತೆ ತೆರಹಿಲ್ಲ. ಇದು ಕಾರಣ, ಕೂಡಲಚೆನ್ನಸಂಗನ ಶರಣರ ಒಕ್ಕು ಮಿಕ್ಕ ಪ್ರಸಾದವೆನಗಾಯಿತ್ತು.
--------------
ಚನ್ನಬಸವಣ್ಣ
ದೇವ ದೇವ ಮಹಾಪ್ರಸಾದ, ನಿಮ್ಮಡಿಗಳಿಗೆ ಉತ್ತರಕೊಡಲಮ್ಮೆನಯ್ಯಾ, [ಇದ] ಬಲ್ಲೆನೆಂಬ ಬಲುಮೆಯ ದೇಹಿ ನೀವಲ್ಲವಾಗಿ, ಆನು ಭಕ್ತನೆಂಬ ಭಕ್ತಿಶೂನ್ಯನಲ್ಲವಾಗಿ ಆನು ಬಲ್ಲೆನೆಂಬ ನುಡಿ ಎನ್ನನಿರಿದಿರಿದು ಸುಡದೆ ? ತಪ್ಪೆನ್ನದು ಕ್ಷಮೆ ನಿಮ್ಮದು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಕೊಲ್ಲು, ಕಾಯಿ, ನಿಮ್ಮ ಧರ್ಮ !
--------------
ಚನ್ನಬಸವಣ್ಣ
ದೇವರು ಬಿದ್ದರು ದೇವರು ಬಿದ್ದರು ಎಂದು ಸಾಹಿತ್ಯದ ಕೂಡ ಸಾಯಬೇಕೆಂಬಿರಿ. ಆವಾಗ ಬಿದ್ದಿತ್ತೆಂದರಿಯಿರಿ ಆವಾಗ ಇದ್ದಿತ್ತೆಂದರಿಯಿರಿ, ಆವಾಗ ಇದ್ದಿತ್ತು ಆವಾಗ ಬಿದ್ದಿತ್ತು ಎಂದು ಬಲ್ಲರೆ ನೀವು ಹೇಳಿರೆ ? ``ಅದೃಶ್ಯಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯನ ಅರಿದಾಗಲಿದ್ದಿತ್ತು ಮರೆದಾಗ ಬಿದ್ದಿತ್ತು.
--------------
ಚನ್ನಬಸವಣ್ಣ
ದೃಷ್ಟ ನಷ್ಟಕ್ಕೇನು ದೃಷ್ಟ ? ಭಾವ ನಷ್ಟವೇ ದೃಷ್ಟ ಭಾವ ನಷ್ಟಕ್ಕೇನು ದೃಷ್ಟ? ಅನುಭಾವ ನಷ್ಟವೇ ದೃಷ್ಟ. ಅನುಭಾವ ನಷ್ಟಕ್ಕೇನು ದೃಷ್ಟ ? ಸ್ವಯ ಪರವಾವುದೆಂದರಿಯದುದೆ ದೃಷ್ಟ. ಸ್ವಯ ಪರವಾವುದೆಂದರಿಯದಕ್ಕೇನು ದೃಷ್ಟ ? ಕೂಡಲಚೆನ್ನಸಂಗನೆಂದು ಎನ್ನದುದೆ ದೃಷ್ಟ.
--------------
ಚನ್ನಬಸವಣ್ಣ
ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ? ಅನ್ನ ಪಾನಾದಿಗಳೊಗಣ ಅನ್ನಪಾನವೆಂದೆನ್ನಬಹುದೆ ಪ್ರಸಾದವ? ಎನಬಾರದಯ್ಯಾ, ಎನ್ನ ತಂದೆ! ಸಾಧನದೊಳಗಣ ಸಂಯೋಗವೆಂತಿದ್ದುದು ಅಂತಿದ್ದುದಾಗಿ. ಇದು ಕಾರಣ, ಶ್ರತಿ ಸ್ಮೈತಿಗಗೋಚರ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣರು.
--------------
ಚನ್ನಬಸವಣ್ಣ