ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ: ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ. ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ. ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ. ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು ಈ ಐದು ವಾಯುವಿನ ಅಂಶ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ. ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
--------------
ಚನ್ನಬಸವಣ್ಣ
ಪಾದಪೂಜೆಯ ಮಾಡಿ, ಅಂಗುಷ್ಠವೆರಡು ಅಂಗುಲವೆಂಟು ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ. ಲಿಂಗಧಾರೀ ಮಹಾಯೋಗೀ ಚರಪಾದೋದಕಂ ವಿನಾ ದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು ವರ್ಷೇ ಸಹಸ್ರಜನ್ಮಾನಿ ವರ್ಷಾರ್ಧೇ ಘೂಕವಾಯ¸õ್ಞ ದ್ವಿವರ್ಷೇ ¸õ್ಞಕರೇ ಗರ್ಭೇ ಜಾಯತೇ ನಾತ್ರ ಸಂಶಯಃ ಎಂದುದಾಗಿ ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣವ ಮಾಡುವುದು ಇದು ವೀರಶೈವರಿಗೆ ಸಲ್ಲುವ ನಡತೆ. ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ. ವಿಶೇಷವೀರಶೈವರು ಗಿಂಡಿಯ ಮಾಡಲಾಗದು, ಅದೇನು ಕಾರಣವೆಂದಡೆ:ಅವರಿಗೆ ತ್ರಿವಿಧ ಪಾದೋದಕವು ನಿತ್ಯದ ಸಹಬಂಧವಾಗುವುದೆಂದು. [ಇದ]ನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪ್ರಥಮದಲ್ಲಿ ಸ್ಪರ್ಶವೆಂಬ ಸ್ಪರ್ಶನಗುಣದಿಂದ ಪಾದೋದಕ, ದ್ವಿತೀಯದಲ್ಲಿ ಅಂಗಗುಣವಳಿಯಿತ್ತಾಗಿ ಲಿಂಗಮುಖದಿಂದ ಬಂದುದು ಲಿಂಗೋದಕ, ತೃತೀಯದಲ್ಲಿ ಮಹಾಗಣಂಗಳ ಬರವಿನಿಂದ (ಬಂದುದಾಗಿ) ಮಜ್ಜನೋದಕ, ಚತುರ್ಥದಲ್ಲಿ ಚತುರ್ದಳಪದ್ಮ ವಿಕಸಿತವಾಗಿ ಪುಷ್ಪೋದಕ, ಪಂಚಮದಲ್ಲಿ ಲಿಂಗಕ್ಕೆ ಪರಮ ಪರಿಯಾಣ (ಪರಿಣಾಮರಿ) ಇಕ್ಕುವಲ್ಲಿ ಅವಧಾನೋದಕ, ಷಷ್ಠಮದಲ್ಲಿಲಿಂಗಾರೋಗಣೆಯ ಅಪ್ಯಾಯನೋದಕ, ಸಪ್ತಮದಲ್ಲಿ ಲಿಂಗಕ್ಕೆ ಹಸ್ತೋದಕ ಅಷ್ಟಮದಲ್ಲಿ ಅಷ್ಟಾಂಗಯೋಗ ಪರಮಪರಿಣಾಮೋದಕ, ನವಮದಲ್ಲಿ ನಾಮ ಸೀಮೆ ಇಲ್ಲವಾಗಿ ನಿರ್ನಾಮೋದಕ, ದಶಮದಲ್ಲಿ ಹೆಸರಿಲ್ಲವಾಗಿ ನಿತ್ಯೋದಕ,-ಇಂತು ದಶವಿಧೋದಕ. ಇನ್ನು ಏಕಾದಶಪ್ರಸಾದ: ಪ್ರಥಮದಲ್ಲಿ ಮಹಾದೇವಂಗೆ ಮನವರ್ಪಿತ, ದ್ವಿತೀಯದಲ್ಲಿ ಮಾಹೇಶ್ವರಂಗೆ ವೀರಾರ್ಪಿತ, ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ, ಚತುರ್ಥದಲ್ಲಿ ನಿರ್ವಿಷಯಾರ್ಪಿತ, ಪಂಚಮದಲ್ಲಿ ಪಂಚವಸ್ತ್ರಾರ್ಪಿತ, ಷಷ್ಠಮದಲ್ಲಿ ನಷ್ಟರೂಪ ನಿರೂಪಾರ್ಪಿತ, ಸಪ್ತಮದಲ್ಲಿ ಆತ್ಮಾರ್ಪಿತ, ಅಷ್ಟಮದಲ್ಲಿ ತನ್ನ ಮರೆದ ಮರಹಾರ್ಪಿತ, ನವಮದಲ್ಲಿ ಅಸಮಸಹಸ್ರನಾಳದಿಂದ ತೃಪ್ತ್ಯಾರ್ಪಿತ, ದಶಮದಲ್ಲಿ ಚಿತ್ತಸುಯಿಧಾನಿಯಾಗಿ ಸುಷುಮ್ನಾನಾಳದಿಂದ ಅಮೃತಾರ್ಪಿತ, ಏಕಾದಶದಲ್ಲಿ ಏಕಪ್ರಸಾದ ನೋಡಹೋದರೆ ತನ್ನ ನುಂಗಿತ್ತಯ್ಯಾ. ಹೇಳಬಾರದ ಘನವು ಕಾಣಬಾರದಾಗಿ ಕೂಡಲಚೆನ್ನಸಂಗನಲ್ಲಿ ಉಪಮಿಸಬಾರದ ಮಹಾಘನವು
--------------
ಚನ್ನಬಸವಣ್ಣ
ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ, ಪ್ರಣಮ:ಓಂಕಾರದ ಶ್ರುತಿಯ ಮೂಲಾಂಕುರವನರಿಯಬಲ್ಲರೆ ಪ್ರಣಮ:ಐವತ್ತೆರಡಕ್ಷರದ ಲಿಪಿಯ ತಿಳಿದುನೋಡಿ ಓದಬಲ್ಲರೆ, ಪ್ರಣಮ, ನಾದಬಿಂದು ಕಲಾತೀತನಾಗಬಲ್ಲರೆ_ ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ ಪ್ರಣಮಪ್ರತಿಷ್ಠಾಚಾರ್ಯರು. ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು. ಅತೀತ ಅನಾಗತವೆಂಬ ನುಡಿಯಲೆ ಸಿಲುಕಿದರು. ಶ್ರುತಿವಂತರೆಲ್ಲರೂ ಆಗಮದಲ್ಲಿ ಸಿಲುಕಿದರು. ಇಂಥವನೆ ಲಿಂಗೈಕ್ಯನು ? ನುಡಿದ ನುಡಿಯ ನಡೆಯನು, ನಡೆದ ನಡೆಯ ನುಡಿಯನು, ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು, ನಿಸ್ಸೀಮನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ ನೆಟ್ಟನೆ ಮಾಡಿ, ಅಧೋಮುಖ ಕಮಲವ ಬಲಿದು, ಊಧ್ರ್ವಮುಖವ ಮಾಡಿ, ಇಂದ್ರಿಯಂಗಳನು ಏಕಮುಖವ ಮಾಡಿ, ಚಂದ್ರ ಸೂರ್ಯರನೊಂದಠಾವಿನಲ್ಲಿರಿಸಿ ಅತ್ತಿತ್ತ ಮಿಸುಕದೆ ನಡುಗೀರ ಜ್ಯೋತಿಯ ದೃಢವಾಗಿ ಹಿಡಿದು, ಪರಮಾನಂದದ ವಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ ಮಹಾಮಹಿಮರ ತೋರಿ ಬದುಕಿಸಾ, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಪ್ರಮಥದಲ್ಲಿ ಪಾದೋದಕ, ದ್ವಿತೀಯದಲ್ಲಿ ಲಿಂಗೋದಕ, ತೃತೀಯದಲ್ಲಿ ಮಜ್ಜನೋದಕ, ಚತುರ್ಥದಲ್ಲಿ ಸ್ಪರ್ಶನೋದಕ, ಪಂಚಮದಲ್ಲಿ ಅವಧಾನೋದಕ, ಷಷ್ಠದಲ್ಲಿ ಆಪ್ಯಾಯನೋದಕ, ಸಪ್ತಮದಲ್ಲಿ ಹಸ್ತೋದಕ, ಅಷ್ಟಮದಲ್ಲಿ ಪರಿಣಾಮೋದಕ, ನವಮದಲ್ಲಿ ನಿರ್ನಾಮೋದಕ, ದಶಮದಲ್ಲಿ ಸತ್ಯೋದಕ,- ಇಂತೀ ದಶವಿಧಪಾದೋದಕವ ತಿಳಿದುಕೊಳಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಪ್ರಾರಬ್ಧ ಪ್ರಯತ್ನಗಳ ತಾರತಮ್ಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರಯತ್ನದ ಹೆಚ್ಚು ಕುಂದಿನಂತೆ, ಇಂದಾಗಲಿ ಮುಂದಾಗಲಿ ಪ್ರಾರಬ್ಧವು ಫಲಪದವನೀವುದಲ್ಲವೆ ? ``ಅತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮಶ್ನುತೇ ಎಂದುದಾಗಿ ಪಿರಿದಪ್ಪ ಪುಣ್ಯಪಾಪಂಗಳು ಇದೆ ಜನ್ಮದಲ್ಲಿಯೆ ಫಲವನೀಯದೆ ಮಾಣವು. ವಿಶ್ವಾಮಿತ್ರನು ಕ್ಷತ್ರಿಯನಾದಡೆಯೂ, ತನ್ನ ತಪಃಪ್ರಭಾವದಿಂದ ಬ್ರಾಹ್ಮಣನಾಗಲಿಲ್ಲವೆ ? ಮಾರ್ಕಂಡೇಯನು ಅತ್ಯುತ್ಕಟವಾದ ಶಿವಭಕ್ತಿಯಿಂದ ಚಿರಂಜೀವಿಯಾಗಲಿಲ್ಲವೆ ? ರಾವಣ ಕೀಚಕಾದಿಗಳು ಪಾಪಾಧಿಕ್ಯದಿಂದ ಹತಭಾಗ್ಯರಾಗಲಿಲ್ಲವೆ ? ಅದು ಕಾರಣ_ತಾನು ಕೈಕೊಂಡ ಕಜ್ಜದಲ್ಲಿ ಪ್ರಯತ್ನವೆ ಪ್ರಾರಬ್ಧವಾಗಿ ಫಲವೀವುದರಿಂದ ಪ್ರಾರಬ್ಧಕ್ಕಿಂತ ಪ್ರಯತ್ನವೇ ಮಿಗಿಲಾಗಿಪ್ಪುದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ ಹೇಮಗಿರಿಯ ಸಂಚ ತಪ್ಪದು ನೋಡಾ ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ಅಂತಿರಲಯ್ಯಾ ಪ್ರಭುವೆ.
--------------
ಚನ್ನಬಸವಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಲ್ಲಿ ಪಂಚಮುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ. ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯದಲ್ಲಿ ಚತುರ್ಮುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ. ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ವಾಕ್ಕು ಪಾಣಿ ಪಾದ ಪಾಯು ಗುಹ್ಯಗಳೆಂಬ ದಶೇಂದ್ರಿಯಂಗಳಲ್ಲಿ ದಶಮುಖಲಿಂಗವ ಪ್ರತಿಷ್ಠೆಯ ಮಾಡಿ ಅಂತರಂಗ ಬಹಿರಂಗವ ಹತವ ಮಾಡಿದನಯ್ಯಾ ಕೂಡಲಚೆನ್ನಸಂಗಮದೇವಾ ಎನ್ನ ಶ್ರೀಗುರು ಬಸವಣ್ಣನು
--------------
ಚನ್ನಬಸವಣ್ಣ
ಪಾದೋದಕ ಪಂಚೇಂದ್ರಿಯಾರ್ಚನೆ, ಲಿಂಗೋದಕ ಅಂಗಾರ್ಚನೆ, ಪ್ರಸಾದೋದಕ ಘ್ರಾಣಾರ್ಚನೆ- ಲಿಂಗೋದಕ, ಪಾದೋದಕ, ಪ್ರಸಾದೋದಕ ಈ ತ್ರಿವಿಧೋದಕವ ಈ ಕ್ರಮವರಿದಲ್ಲದೆ ಮುಟ್ಟಲಾಗದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪ್ರಾಣಾದಿ ವಾಯುಗಳ ಕಳೆದು ಭಕ್ತರಾದರೆಮ್ಮವರು, _ಅದೆಂತೆಂದಡೆ: ಅಲ್ಲಲ್ಲಿರ್ದ ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತಿಯ ಮಾಡುವ ಪರಿಯ ಹೇಳಿಹೆ ಕೇಳಿರಣ್ಣಾ: ಪ್ರಾಣವಾಯುವ ನಿಲಿಸಿದರು ಪ್ರಾಣಲಿಂಗದಲ್ಲಿ, ಅಪಾನವಾಯುವ ನಿಲಿಸಿದರು ಪ್ರಸಾದಲಿಂಗದಲ್ಲಿ, ವ್ಯಾನವಾಯುವ ನಿಲಿಸಿದರು ಚತುರ್ವಿಧಪದದ ಬಯಕೆಯಳಿದ ಲಿಂಗಧ್ಯಾನದಲ್ಲಿ. ಉದಾನ ವಾಯುವ ನಿಲಿಸಿದರು ಉದ್ದೇಶದಿಂದ ನಡೆವ ಅನ್ಯಗಮನವ ಕೆಡಿಸಿ
--------------
ಚನ್ನಬಸವಣ್ಣ
ಪೃಥ್ವಿಗೆ ಹುಟ್ಟಿದ ಪಾಷಾಣ, ಬಿನ್ನಣಿಗೆ ಹುಟ್ಟಿದ ಪ್ರತಿಮೆ, ಮಂತ್ರಕ್ಕೆ ಹುಟ್ಟಿದ ಮೂರ್ತಿ, ಗುರುವಿಂಗೆ ಹುಟ್ಟಿದ ಲಿಂಗ_ ಇಂತೀ ಚತುರ್ವಿಧದ ಕೈಗೆ ಕೈಗೆ ಬಾಯ್ಗೆ ಬಾಯ್ಗೆ ಬರಲಾಗಿ ಹೇಸಿ ಲಿಂಗವೆಂದು ಮುಟ್ಟಿ ಪೂಜೆಯ ಮಾಡೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪಂಚಶತಕೋಟಿ ವಿಸ್ತೀರ್ಣ ಭೂಮಂಡಲ ಮೊದಲಾದ ನವಖಂಡಪೃಥ್ವಿಯೆಲ್ಲವು ಒಂದು ಭುವನದೊಳಡಗಿತ್ತು. ಇಂತಹ ಈರೇಳು ಭುವನವನೊಳಕೊಂಡ ಮಹಾಘನಕ್ಕೆ ಸಯದಾನವ ನೀಡಿಹೆನೆಂಬ ಸ್ವಾಮಿಯ ಮರುಳತನವನೇನೆಂಬೆನು ? ಕೂಡಲಚೆನ್ನಸಂಗಮದೇವರ ತೃಪ್ತಿಯ ತೆರನನೊಲಿವಡೆ ನೀವು ಬೋನ, ನಾನು ಪದಾರ್ಥ. ಇದರಿಂದ ಮೇಲೇನೂ ಘನವಿಲ್ಲ ಕಾಣಾ ಸಂಗನಬಸವಣ್ಣ.
--------------
ಚನ್ನಬಸವಣ್ಣ
ಪ್ರಸಾದಲಿಂಗಮೋಹಿತನಾದಡೆ ಅಂಗರುಚಿಗೆ ಇಚ್ಛೈಸಲಾಗದು. ಪ್ರಸಾದಲಿಂಗಭಕ್ತನಾದಡೆ ಪೂರ್ವಾಹಾರವ ಕೈಕೊಳ್ಳಲಾಗದು. ಪ್ರಸಾದಲಿಂಗಪೂಜಕನಾದಡೆ ಅಪ್ರಸಾದಿಗೆ ಉಣಲಿಕ್ಕಲಾಗದು. ಪ್ರಸಾದಲಿಂಗವೀರನಾದಡೆ ಅನ್ಯರಿಗೆ ಕೈಯಾನಲಾಗದು. ಪ್ರಸಾದಲಿಂಗಪ್ರಸಾದಿಯಾದಡೆ ಜೀವಹಿಂಸೆಯ ಮಾಡಲಾಗದು. ಪ್ರಸಾದಲಿಂಗಪ್ರಾಣಿಯಾದಡೆ ಆತ್ಮನಿಗ್ರಹವ ಮಾಡಲಾಗದು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಪ್ರಸಾದಲಿಂಗಭಕ್ತಿ
--------------
ಚನ್ನಬಸವಣ್ಣ
ಪ್ರಾಣಲಿಂಗಿಗಳಾದವರು ಪ್ರಸಾದಕಾಯರಪ್ಪರಲ್ಲದೆ ಲಿಂಗಭಾಜನವೆಂತಳವಡುವುದಯ್ಯಾ? ತನುವಿನಲ್ಲಿ ಪಂಚವಿಂಶತಿ ಗುಣಂಗಳೆಚ್ಚತ್ತಿಪ್ಪನ್ನಕ್ಕ, ಲಿಂಗಭಾಜನವೆಂತಳವಡುವುದಯ್ಯಾ? ಬಂದುದು ಬಾರದುದೆಂಬ ಸಂದೇಹವುಳ್ಳನ್ನಕ್ಕ, ಕೊಂಡುದು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪ್ರಾಣ ಲಿಂಗಕ್ಕೆ ಆಗಿ, ಲಿಂಗ ಪ್ರಾಣಕ್ಕೆ ಆಗಿ, ಆಚಾರ ಅನುಭಾವ ದ್ವಿವಿಧ ಸನುಮತವಾಗಿ, ತನು ಪ್ರಸಾದಕ್ಕೆಯಾಗಿ ಪ್ರಸಾದ ತನುವಿಂಗಾಗಿ, ಶರೀರಪ್ರೇಮದಿಂ ಸರ್ವಾಂಗ (ಲಿಂಗ) ನೋಡಾ. ಬಂದುದೆ ಓಗರ ನಿಂದುದೆ ಪ್ರಸಾದ. ಅಲ್ಲಿ ನಿತ್ಯನಿರಂತರ ಸಾವಧಾನಿ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ ಸಂಚವನರಿಯದೆ ತೋಟದ ಕೊಜೆಯನಾಗಿ ಕರಣಂಗಳ ಮೇಲೆ ಮಣಿಹವಾಗಿ ಬಂದೆನಯ್ಯಾ ಯೋಗಿ ವಿಯೋಗಿಯಾಗಿ ಕುಂಡಲಿಯನೆ ಬಿಗಿದು ಇಂದ್ರಿಯ ಷಡಂಗವ ಮಡ(ಡಿರಿ)ದಲ್ಲಿ ಇಂದ್ರಿಯನಿಗ್ರಹವಂ ಮಾಡಿ ಮಂತ್ರ ಮಂತ್ರ ಮಥನದ ಹೋಮದ ಹೊಗೆಯ ತೆಗೆದು ಚಂದ್ರಸೂರ್ಯರನಾಣೆಯಿಟ್ಟಂತೆ ಒಂದೆ ಠಾವಿನಲ್ಲಿ ನಿಲಿಸಿದೆ ರುದ್ರಪದದಲ್ಲಿ_ ಇಂತು ಕ್ರೀಯಳಿದು ನಿಃಕ್ರಿಯದಲ್ಲಿ ನಿಂದ ಕೂಡಲಚೆನ್ನಸಂಗಯ್ಯನು ಎನ್ನ ಪ್ರಾಣನಾಥನೆಂದರಿದು ಎನ್ನ ಕಾಯವ ಬಾಧಿಪುದಂ ಬಿಟ್ಟು ನಿಜದಲ್ಲಿ ನಿಂದೆನು.
--------------
ಚನ್ನಬಸವಣ್ಣ
ಪರಂಜ್ಯೋತಿಯಪ್ಪ ಮಹಾಲಿಂಗವ ಮರೆದು ಜಡತನುವಾನೆಂಬ ಆಣವವೈರಿಯ ಗೆಲುವಡೆ ಚಿತ್‍ಸ್ವರೂಪಿ ಶ್ರೀಜಂಗಮಪಾದವನೊಡನೆ ಪಿಡಿವುದಯ್ಯಾ. ಚಿತ್‍ಕೈಲಾಸವನೈದುವಡೆ ಜಂಗಮಪಾದವೆ ಮಹಾದ್ವಾರವಾಗಿಪ್ಪುದಯ್ಯಾ. ಆ ಜಂಗಮಪಾದವೆ ಭವಜಡಧಿಗೆ ಹಡಗವಾಗಿಪ್ಪುದಯ್ಯಾ. `ಅರಾತಿಂ ತರೇಮ ಶಿವಲೋಕಸ್ಯ ದ್ವಾರಂ...' ಎಂದುದಾಗಿ ಕೂಡಲಚೆನ್ನಸಂಗಮದೇವಾ ಇಂತಪ್ಪ ಪಾದವಿಡಿದು ಪವಿತ್ರರಾದ ಸದ್ಭಕ್ತರ ಸಂಗವನೆನಗೆ ಕರುಣಿಸು
--------------
ಚನ್ನಬಸವಣ್ಣ
ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿದ್ದಿರಯ್ಯಾ. ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯಾ. ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯಾ. ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯಾ. ಷಷ* ಕಾಲದಲ್ಲಿ ಪರಮಪುರುಷಾರ್ಥಸಾಧನವಾಗಿ, ತ್ರಿವಿಧಭಕ್ತಿಗೆ ನೀವೇ ಕಾರಣವಾಗಿ ಬಂದಿರಿ ಪ್ರಮಥರು ಸಹಿತ, ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ತ. ಬೆಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೆ ನಿಮ್ಮ ಕರಸ್ಥಲದಲ್ಲಿ ಕೂಡಲಚೆನ್ನಸಂಗಮದೇವಾ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಪ್ರಾಣಲಿಂಗ ಎಂಬಿರಿ, ಪ್ರಾಣವೆಲ್ಲಿರ್ಪುದು ? ಪ್ರಾಣಲಿಂಗದ ಭೇದವ ಬಲ್ಲಡೆ ನೀವು ಹೇಳಿರೆ. ಕಾಯಶೂನ್ಯ, ಲಿಂಗ, ಪ್ರಾಣಶೂನ್ಯ, ಶರಣ. ಕಾಯವಳಿದು ಸಮಾಧಿಯೊ ? ಕಾಯವಳಿಯದೆ ಸಮಾಧಿಯೊ ? ಬಲ್ಲಡೆ ನೀವು ಹೇಳಿರೆ. ಕಾಯ ವಾಯವಾಗದೆ ಸಮಾಧಿಯಂತುವ ಬಲ್ಲ, ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ಶರಣ ಬಸವಣ್ಣನು.
--------------
ಚನ್ನಬಸವಣ್ಣ
ಪ್ರಸಾದ ಮುಖದಲ್ಲಿ ಕಲ್ಪಿತ ಲಿಂಗಮುಖದಲ್ಲಿ ಸಂಕಲ್ಪಿತ. ಜಂಗಮಮುಖದಲ್ಲಿ ಸಂದೇಹಿ ಗುರುಮುಖದಲ್ಲಿ ಸಮಾಪ್ತಿ. ಇಂತೀ ಚತುರ್ವಿಧವನೇಕಾರ್ಥವ ಮಾಡಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಪ್ರಾಣಲಿಂಗಿಯಾಗಿ ಲಿಂಗವ ನಂಬಿದ. ನಿಸ್ಸಂಗಿಯ ನಿಲವಿನ ಬೋಧವಾವರಿಸಲೊಡನೆ, ತನ್ನ ಮರವಹುದು; ಮತ್ತೊಂದಕ್ಕಿಂಬುಗೊಡದು. ಕೂಡಲಚೆನ್ನಸಂಗನ ಅರಿವು ಅನುಪಮವಾಗಿ ವ್ಯವಹಾರದೊಳಗಿರಲೀಯದು
--------------
ಚನ್ನಬಸವಣ್ಣ
ಪಂಚೇಂದ್ರಿಯಂಗಳ ಮುಖಂಗಳಲ್ಲಿ ಅಲ್ಲಲ್ಲಿ ತಾಗಿದ ಸುಖವ ಸುಖಿಸಿ ಲಿಂಗಾರ್ಪಿತವೆಂಬರು. ಅದು ಲಿಂಗಾರ್ಪಿತವೆ ? ಅಲ್ಲಲ್ಲ. ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ ಅರ್ಪಿಸಬೇಕು. ಅರ್ಪಿಸುವ ಈ ಭೇದವುಳ್ಳನ್ನಕ್ಕ ಶರಣನೆನಿಸಬಾರದು. ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಪೂರ್ವಜನ್ಮವ ನಿವೃತ್ತಿಯ ಮಾಡಿ ಶ್ರೀಗುರುಕರಕಮಲದಲ್ಲಿ ಜನಿಸಿದ ಭಕ್ತನ ಪಂಚಭೌತಿಕದ ತನುವಿನಂತೆ ವರ್ಣಿಸಿ ನುಡಿಯಬಹುದೆ ? ಉತ್ತಮಾಧಮ ತೃಣ ಮೊದಲಾದುವೆಲ್ಲವು ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುವು ಕೇಳಿರೆ. ಜ್ಯೋತಿರ್ಮಯಲಿಂಗವ ಮುಟ್ಟಿದ ತನು ಕೇವಲ ಜ್ಯೋತಿರ್ಮಯಲಿಂಗ. ಆಧಾರ, ಸ್ವಾಧಿಷಾ*ನ, ಮಣಿಪೂರಕ ಅನಾಹತ, ವಿಶುದ್ಧಿ, ಆಜ್ಞೇಯ ಬ್ರಹ್ಮರಂಧ್ರ ದಳ ಕಳೆ ವರ್ಣ ಅಧಿದೇವತೆ ಎಂದು, ಅಲ್ಲಿ ಶುಕ್ಲ ಶೋಣಿತಾತ್ಮಕನಂತೆ ವರ್ಣಿಸಿ ನುಡಿಯಬಹುದೆ, ಶಿವಲಿಂಗತನುವ ? ಷಡಾಧಾರಚಕ್ರವನು ಎನ್ನ ಸರ್ವಾಂಗದಲ್ಲಿ ಪ್ರತಿಷೆ*ಯ ಮಾಡಿ, ಅಂತರ್ಬಾಹ್ಯದಲ್ಲಿ ಭರಿತನಾಗಿ ಸರ್ವಾಂಗವ ಲಿಂಗವ ಮಾಡಿದ, ಕೂಡಲಚೆನ್ನಸಂಗಾ ಶ್ರೀಗುರುಲಿಂಗ
--------------
ಚನ್ನಬಸವಣ್ಣ

ಇನ್ನಷ್ಟು ...