ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯಿಂದ ಅಪ್ಪು, ಅಪ್ಪುವಿನಿಂದ ಪೃಥ್ವಿ. ಅಗ್ನಿಯಿಂದ ವಾಯು, ವಾಯುವಿನಿಂದ ಅಗ್ನಿ. ಆಕಾಶದಿಂದ ಮಹದಾಕಾಶ, ಮಹದಾಕಾಶದಿಂದ ಆಕಾಶ. ನಿನ್ನಿಂದ ನಾ, ನನ್ನಿಂದ ನೀ, ನಾ ನೀನೆಂಬ ಭಾವ ಲೀಲೆವುಳ್ಳನ್ನಕ್ಕ. ಮತ್ತೆ ತಿಳಿದು ನೋಡಲಿಕ್ಕೆ ಮತ್ತೆಯೂ ಪರಿಪೂರ್ಣ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಮಾಣಿಸಿ ಅವಧರಿಸಿ ಮಾಡುವಂಗೆ, ಮಾಡುವ ದ್ರವ್ಯಕ್ಕೆ ಹೇಗೆಂದು ಮನಗುಂದದಿರಬೇಕು. ನೀಡಿದ ಮತ್ತೆ, ನಿಜವಸ್ತುವಿನಲ್ಲಿರಬೇಕು. ಕೂಡಿದ ಮತ್ತೆ, ಹಿಂದಣ ಹಂಗ ಹರಿದು, ಸಂದಳಿದು ಅಂದಂದಿಗೆ ಬಂದುದ ಕಂಡು, ಬಾರದುದಕ್ಕೆ ಭ್ರಮೆಯಿಲ್ಲದಿರಬೇಕು. ಇಂತೀ ಸ್ಥಲ, ಭಕ್ತಂಗೆ. ಮುಕ್ತಿಯನರಸಿ ಇಪ್ಪವಂಗೆ ಇದೇ ಸತ್ಯಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸದ್ಭಕ್ತಿ ನಿರ್ಲೇಪ.
--------------
ಮೋಳಿಗೆ ಮಾರಯ್ಯ
ಪರಬ್ರಹ್ಮವ ನುಡಿಯುತ್ತ, ಪರದ್ರವ್ಯವ ಕೈಯಾಂತು ಬೇಡುತ್ತ, ಮಾತಿನಲ್ಲಿ ಶೂನ್ಯತನ, ಮನದಲ್ಲಿ ಆಶೆಯೆಂಬ ತೊರೆ ಹಾಯಬಾರದೆ ಹರಿವುತ್ತಿದೆ. ಮತ್ತೆಂತಯ್ಯ ಪರಬ್ರಹ್ಮದ ಮಾತು ? ಇದು ಎನಗೆ ಹೇಸಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪುವಿನ ಸಂಗದಲ್ಲಿ, ಅನಲ ಅನಿಲವೆಂಬ ಪುತ್ಥಳಿ ಹುಟ್ಟಿತ್ತು. ಆ ಪುತ್ಥಳಿಯ ಗರ್ಭದಲ್ಲಿ, ಆಕಾಶ ಮಹದಾಕಾಶವೆಂಬ ಕುರುಹುದೋರಿತ್ತು. ಅದು ನಾದಪೀಠ ಬಿಂದುಲಿಂಗ ಕಳೆ ವಸ್ತುವಾಗಿ, ಹೊಳಹುದೋರುತ್ತದೆ. ಆ ಹೊಳಹು ಆರುಮೂರಾದ ಭೇದವ ತಿಳಿದು, ಮೂರು ಏಕವಾದಲ್ಲಿ, ಐಕ್ಯವನರಿತಲ್ಲಿ, ನಾದಬಿಂದುಕಳೆಭೇದವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪುಷ್ಪಗಂಧದಂತೆ ಪ್ರಾಣಲಿಂಗಭಾವ. ನೀರು ಗಂಧದಂತೆ ಇಷ್ಟಲಿಂಗಭಾವ. ಇಂತೀ ನಾಲ್ಕರ ಯೋಗ ಕೂಡಿದಲ್ಲಿ ಶರಣಸ್ಥಲಭಾವ. ಇಂತೀ ಐದರ ಭಾವವ ಅವಗವಿಸಿ ನಿಂದುದು, ಐಕ್ಯಸ್ಥಲಂಗೆ ಅವದ್ಥಿಗೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಂಚಮುಖದ ಗಿರಿಯ ಗಹ್ವರದಲ್ಲಿ, ಮುಂಚಿದರೈದುವ ಹುಲಿಗಳ ಕಂಡೆ. ಆ ಹುಲಿಯೊಂದಕ್ಕೆ ಐದು ಬಾಯಿ. ಆ ಬಾಯೊಳಗೆ ಹೊಕ್ಕು ಹುಲಿಯ ಕುಲಗೆಡಿಸಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಪೃಥ್ವಿಯೊಳಗಿದ್ದು ಸಾಯದಿರಬೇಕು, ಅಪ್ಪುವಿನೊಳಗಿದ್ದು ಚರಿಸದಿರಬೇಕು. ತೇಜದೊಳಗಿದ್ದು ಬೇಯದಿರಬೇಕು, ವಾಯುವಿನೊಳಗಿದ್ದು ಸಂಚರಿಸದಿರಬೇಕು. ಆಕಾಶದೊಳಗಿದ್ದು ಬಹುವರ್ಣಕ್ಕೆ ಅಲೇಖವಾಗಿರಬೇಕು. ಸಕಲಸುಖಭೋಗಂಗಳಲ್ಲಿದ್ದು, ವಿರಾಗಿಯಾಗಿರಬಲ್ಲಡೆ ಆರುಸ್ಥಲ ಒಂದಾಯಿತ್ತು. ಒಂದರಲ್ಲಿ ಪಂಚವಿಂಶತಿತತ್ವ ಸಂದನಳಿದವು. ನಾಮ ರೂಪು ಕ್ರೀಯೆಂಬ ಭಾವದ್ವಂದ್ವವಳಿದು, ನಿಜ ಒಂದೆಯೆಂಬುದಕ್ಕೆ ತೆರಪಿಲ್ಲದೆ ಶರಣನಾದೆಯಲ್ಲಾ. ಶರಣ ಸನ್ಮತನಾಗಿ ಐಕ್ಯನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಾಣಲಿಂಗಿಗಳೆಂದು ನುಡಿವ ನಾಚಿಕೆಯಿಲ್ಲದ ಅಣ್ಣಗಳು ಭಾವಿಸಿರಯ್ಯಾ. ತನು ಸೋಂಕುವುದಕ್ಕೆ ಮೊದಲೆ, ಮನ ಸೋಂಕಿತ್ತಲ್ಲಾ. ತನು ಹಿಂಗಿ ಅರ್ಪಿಸುವ ಠಾವಿನ್ನೆಲ್ಲಿಯದೊ? ಅಂಗವರಿದು ಮನವರಿದುದಿಲ್ಲ. ಅಂಗಲಿಂಗ ಅರ್ಪಿತವೆಂತಾಯಿತ್ತೊ? ಇಂತೀ ಭಂಗಿತರ ಕಂಡು ಹಿಂಗಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ, ಅನಲ ನುಂಗಿದ ತಿಲದಂತೆ, ವರುಣನ ಕಿರಣ ಕೊಂಡ ದ್ರವದಂತೆ, ಇನ್ನೇನನುಪಮಿಸುವೆ ? ಇನ್ನಾರಿಗೆ ಹೇಳುವೆ ? ನೋಡುವದಕ್ಕೆ ಕಣ್ಣಿಲ್ಲ, ಕೇಳುವದಕ್ಕೆ ಕಿವಿಯಿಲ್ಲ, ಕೀರ್ತಿಸುವದಕ್ಕೆ ಬಾಯಿಲ್ಲ, ಏನೂ ಎಂಬುದಕ್ಕೆ ತೆರಪಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವು.
--------------
ಮೋಳಿಗೆ ಮಾರಯ್ಯ
ಪಾಪ ಪುಣ್ಯವಿಲ್ಲವೆಂದು ನುಡಿವ ಕಾಕರ ಮಾತ ಕೇಳಲಾಗದು. ಅವರು ಇದಿರಿಗೆ ನಿರಾಶೆಯ ಹೇಳಿ, ತಾವು ಆಶೆಯೆಂಬ ಪಾಶದಲ್ಲಿ ಕಟ್ಟುವಡೆವ ವೇಷಧಾರಿಗಳ ಕಂಡು, ನಾಚಿತ್ತೆನ್ನ ಮನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಯವ ಕೂಡಿದ ನೀರಿನಂತೆ, ಮಧುರವ ಕೂಡಿದ ಅಂಬಸಿಯಂತೆ, ತೈಲವ ಕೂಡಿದ ಉದಕದಂತೆ, ನೋಡಿ ಏರ ಕಾಸಲಿಕ್ಕೆ ಅಲ್ಲಿಯೆ ಅರತಂತೆ, ಸ್ಥಲ ಬೇರಾಗಲಿಲ್ಲ. ಆ ಅರಿವು ಸ್ಥಲಂಗಳನರಿತು, ಉಭಯ ತಲೆದೋರದಿದ್ದಲ್ಲಿಯೆ ನಿಃಕಳಂಕ ಮಲ್ಲಿಕಾರ್ಜುನನು ಷಡುಸ್ಥಲ ಸಂಪೂರ್ಣನು.
--------------
ಮೋಳಿಗೆ ಮಾರಯ್ಯ
ಪಟ ಬಾಲಸರವು ಕೂಡಿರ್ದಡೇನು ? ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ, ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ? ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ, ಮನಮುಟ್ಟದಿರ್ದಡೇನಾಯಿತ್ತು ? ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು? ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ, ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೇಶ.
--------------
ಮೋಳಿಗೆ ಮಾರಯ್ಯ
ಪೂಜೆಯಲ್ಲಿ ಮುಕ್ತನೆಂದು ಜ್ಞಾನವ ಮರೆಯಲಿಲ್ಲ. ಜ್ಞಾನವನರಿತೆನೆಂದು ಪೂಜೆಯ ಬಿಡಲಿಲ್ಲ. [ಈ ಉಭಯದ] ಭೇದ, ಬೆಳಗಿನಲ್ಲಿ ಉದಯಿಸಿದ ಕಳೆಯಂತೆ, ಆ ಕಳೆ ಬೆಳಗನೊಳಕೊಂಡಂತೆ, ಉಭಯವಿರಹಿತವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಾಣಲಿಂಗಿಯ ಯೋಗಸಂಬಂಧವೆಂತುಟೆಂದಡೆ : ಫಲರಸ ವರುಣನ ಕಿರಣ ಕೊಂಡಂತಿರಬೇಕು. ಪಯದೊಳಗಣ ನವನೀತದಂತಿರಬೇಕು. ವಾಯುವಿನ ಗಂಧದ ತೆರದಂತಿರಬೇಕು. ದೃಷ್ಟಿಯ ಚಿತ್ತದಂತಿರಬೇಕು. ಅಪ್ಪುವಿನ ಮೆಚ್ಚಿಕೆಯಂತಿರಬೇಕು. ಹೀಂಗೆ ಲಿಂಗದಲ್ಲಿ ಒಪ್ಪವಿಟ್ಟ ಶರಣಂಗೆ ಅರ್ಚನೆಯ ಮಾಡಿದಡೂ ಸರಿ, ಅರ್ಪಣದಲ್ಲಿ ಒಪ್ಪವಿಟ್ಟಡೂ ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ? ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆ ಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೂಜೆಯಿಂದ ತಾ ಪೂಜ್ಯವಂತನಾದೆಹೆನೆಂದು ಮಾಡುವನ ಇರವು, ಹೊಲತಿ ತನ್ನ ಹೊಲೆಯ ಮರೆದು, ಶುದ್ಧನೀರ ಮಿಂದೆನೆಂದು ಕೆಲಬರ ಮುಟ್ಟುವಂತೆ, ಆ ವಿಧಿ ನಿಮಗಾಯಿತ್ತು. ತ್ರಿಕರಣಶುದ್ಧವಿಲ್ಲದ ಪೂಜೆ[ಯ]ವರು ಕೆಟ್ಟ ಕೇಡಿಂಗೆ ಇನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಪೂರ್ವಧಾತುವಿನ ಮೋಹ, ಉತ್ತರಧಾತುವಿನ ನಿರ್ಮೋಹ, ಉಭಯದ ಕಕ್ಷೆಯ ತಿಳಿದು ಅರಿದಲ್ಲಿ, ಅರಿದು ಮರೆದಲ್ಲಿ, ಮತ್ತೇತರ ದರಿಸಿನ ? ಇಂತೀ ಗುಣವ ಸಂದೇಹಕ್ಕೆ ಇಕ್ಕಿ, ಬೇರೊಂದರಲ್ಲಿ ನಿಂದು ಕಂಡೆಹೆನೆಂದಡೆ, ಉಭಯಲಿಂಗದಂಗ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೂಜೆಯ ಮಾಡುವಲ್ಲಿ, ಪುಣ್ಯವನರಿಯದೆ ಮಾಡಬೇಕು. ಹೆಣ್ಣು ಹೊನ್ನು ಮಣ್ಣು ಕೊಡುವಲ್ಲಿ, ಹಮ್ಮುಬಿಮ್ಮಿಲ್ಲದಿರಬೇಕು. ಎರಡು ತಲೆದೋರದೆ, ಒಂದು ನಾಮ ನಷ್ಟವಾಗಿ, ಇಂತಿವ ಕಳೆದುಳಿದ ಮತ್ತೆ ಹೋದ ಹೊಲಬಿಲ್ಲ. ಕೊಟ್ಟು ಕೊಂಡೆಹೆನೆಂಬ ಕೊಳುಮಿಡಿಯಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ. ಪೂರ್ವವನಳಿದುದಕ್ಕೆ ಭವ ಹಿಂಗಬೇಕು. ಪುನರ್ಜಾತನಾದ ಮತ್ತೆ ಪುನರಪಿ ಇಲ್ಲದಿರಬೇಕು. ಹೀಂಗಲ್ಲದೆ ಗುರುಕರಜಾತನಾಗಬಾರದು. ತಾನರಿದು ಸರ್ವೇಂದ್ರಿಯವ ಮರೆದು, ಅಳಿವು ಉಳಿವು ಉಭಯವ ಪರಿದ ಸುಖನಿಶ್ಚಯ ಜ್ಯೋತಿರ್ಮಯ ಪ್ರಕಾಶಂಗೆ, ಪಿಂಡದ ಜನ್ಮವ ಕಳೆದುಳಿಯಬೇಕು. ಹೀಂಗಲ್ಲದೆ ಗುರುಸ್ಥಲ ಇಲ್ಲ. [ತ್ರಿವಿಧಕ್ಕೋಲು], ಅದಾರಿಗೆ ದೃಷ್ಟ ? ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಿಂಡ ಪಿಂಡಸ್ಥಲವಾದಲ್ಲಿ ಆತ್ಮನೆರಡುಂಟೆ ? ಕರಚರಣ ಅವಯವಾದಿಗಳು ಹಲವಲ್ಲದೆ, ಆತ್ಮ ಹಲವುಂಟೆ ? ಅದು ಏಕರೂಪು ವರುಣನ ಕಿರಣದಂತೆ. ನಿನ್ನ ನೀ ತಿಳಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಪೂಜಿಸುವಲ್ಲಿ ಹೂ ನೀರು ಮುಂತಾದ ಷೋಡಶ ಉಪಚರಿಯಕ್ಕೆ ನಿಲ್ಲ. ವೇದದ ಕಡೆ, ಶಾಸ್ತ್ರದ ಮೊದಲು, ಪುರಾಣದ ಸುದ್ದಿಯ ಸುಮ್ಮಾನಂಗಳಲ್ಲಿ ವಚನದ ರಚನೆಗೆ ನಿಲ್ಲ, ಮಹಾಜ್ಞಾನಿಗಳಲ್ಲಿಯಲ್ಲದೆ. ಘಟದಲ್ಲಿ ವೈಭವ, ಆತ್ಮನಲ್ಲಿ ವಿರೋಧ, ಆಚಾರದಲ್ಲಿ ಕರ್ಕಶ. ಇಂತೀ ನಿಹಿತಾಚಾರಂಗಳಲ್ಲಿ ನಿರತನಾಗಿ, ಕಾಯಕ ಕರ್ಮ, ಜೀವನ ಭಾವ, ಜ್ಞಾನದ ಒಳಗನರಿಯಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಾದೋಕದದಿಂದ ಪದಂ ನಾಸ್ತಿಯಾಗಿರಬೇಕು. ಲಿಂಗೋದಕದಿಂದ ಅಂಗ ಮಂಗಳಮಯವಾಗಬೇಕು. ಪ್ರಸಾದೋದಕದಿಂದ ಆತ್ಮಭಾವಕ್ಕೆ ಬೀಜವಿಲ್ಲದಿರಬೇಕು. ಒಂದನಳಿದು, ಒಂದ ಕಂಡೆಹೆನೆಂದಡೆ, ತಾವು ತಾವು ನಿಂದಲ್ಲಿಯೆ ನಿರುತರು. ಎನಗಾ ಉಭಯದ ಬಂಧವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು. ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ, ಲಯವಾದ ಮತ್ತೆ ಜಗವಿಲ್ಲವಾಗಿ. ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು, ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು. ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ. ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ? ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ? ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ? ನೆರೆ ಸತ್ಯನಲ್ಲಿ [ಹಾ]ರುವ ಮ[ನದವನು]ಂಟೆ ? ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ ಗುರುವೆಂದರರು, ಲಿಂಗವೆಂದರು, ಜಂಗಮವೆಂದರು. ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ. ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ. ಇಂತೀ ಷಟ್‍ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು, [ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪು, ಅಗ್ನಿಯ ಘಟ. ವಾಯು ಆಕಾಶ, ಅಗ್ನಿಯ ಪ್ರಾಣ. ಆ ಅಗ್ನಿ ಜಗದ ಜೀವ. ಇಂತೀ ಪಂಚತತ್ವವ ಧರಿಸಿ, ಉರಿಲಿಂಗವಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...