ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ತನು ನಿರ್ವಾಣವೊ, ಮನ ನಿರ್ವಾಣವೊ, ಭಾವ ನಿರ್ವಾಣವೊ ? ತ್ರಿವಿಧ ತನಗಿಲ್ಲದ ನಿರ್ವಾಣವೊ ? ಇದ ನಾ ನುಡಿಯಲಂಜುವೆ. ತೊಟ್ಟ ಘಟಧರ್ಮಕ್ಕೆ ಬೇಡೂದೆ, ಲೆಕ್ಕವಿಲ್ಲದೆ ಆಸೆ ಮನದೊಳಗೆ ಹೊಕ್ಕು ತಿರುಗಾಡುತ್ತ ? ಇಂತೀ ಚಿಕ್ಕಮಕ್ಕಳಿಗೆಲ್ಲಿಯದೊ ನಿರ್ವಾಣ, ಘಟ್ಟಿವಾಳಂಗಲ್ಲದೆ ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ, ಫಲದ ಮರಯ ರಸವ ಹಿಳಿದು ಕಾಬ ಸವಿವ ರುಚಿಯಂತೆ, ತೆರೆಯ ಮರೆಯ ರೂಪ ತೆಗೆದು ಕಾಬ ಸುಖದಂತೆ, ಇಷ್ಟದ ಮರೆಯಲ್ಲಿದ್ದ ದೃಷ್ಟವ, ಉಭಯವ ನಿಶ್ಚಿಯಿಸಿದಲ್ಲಿ ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನ ತಾನರಿದು ಕಂಡೆಹೆನೆಂದಡೆ, ಆ ಚಿತ್ತ ಬಣ್ಣದ ಬಯಲು. ಇದಿರುವ ಕುಳಿತು ಕೇಳಿ ಕಂಡೆಹೆನೆಂದಡೆ, ಆ ಭಾವ ಭ್ರಮೆಗೊಳಗು. ಭಕ್ತಿಯಲ್ಲಿ ನಡೆವ ಭಕ್ತರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ತಾವು ಬಲ್ಲವರಾದೆವೆಂದು ಗೆಲ್ಲಸೋಲಕ್ಕೆ ಹೋರುತಿಪ್ಪರು. ಇದೆಲ್ಲವನತಿಗಳೆದ ಮತ್ತೆ ಗೆಲ್ಲಸೋಲಕ್ಕೆ ಹೋರಲೇಕೋ ? ಗೆಲ್ಲುವಂಗೆ ಸೋಲುವದೆ ಧರ್ಮ, ಸೋತ ಮತ್ತೆ ಒಲವರವಿಲ್ಲವಾಗಿ. ಜಲನದಿಯಲ್ಲಿ ಹೋಹ ಬಲುಮರನಂತೆ, ಇವರ ನೆಲೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೃಣವತಿಶುಷ್ಕವಾದ ಪರ್ಣ ತರುವ ಹಿಡಿದ ಅನಲನ ನಡುವೆ ಎಡಗೈಯ ಬಲ್ಲದೆ ? ನಿರ್ಮಲ ಸುಚಿತ್ತನ ಪರಮವಿರಕ್ತನ ಭಾವ, ವಸ್ತುವ ಮುಟ್ಟಿದಲ್ಲಿ, ತ್ರಿವಿಧಮಲಕ್ಕೆ ಸಿಕ್ಕುವನೆ ? ಅವು ತನ್ನೊಳಗಿರ್ದಡೂ ತಾನವರೊಳಗಿರ್ದಡೂ ಗಾಜಿನ ಕುಪ್ಪಿಗೆಯ ನೀರೆಣ್ಣೆಯಂತೆ, ಸ್ಫಟಿಕದ ಮಧ್ಯದಲ್ಲಿ ಬಹುವರ್ಣವಾದ ಹೊರೆಯ ತೋರಿ ಹಿಡಿವವನಂತೆ, ಅದು ಸ್ವಯವಲ್ಲ, ಇದು ಸ್ವಯವಲ್ಲದಿಪ್ಪ ಬಾಹ್ಯಕ್ರಿಯಾವರ್ತಕನ ಲಕ್ಷಣದ ಬ್ಥಿತ್ತಿಯ ತೆರ ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ತೊಳೆದು ಕಂಡೆಹೆನೆಂದಡೆ ಅಂಗದವನಲ್ಲ. ಪೂಜಿಸಿ ಕಂಡೆಹೆನೆಂದಡೆ ಮಂಡೆಯವನಲ್ಲ. ಊಡಿಸಿ ಕಂಡೆಹೆನೆಂದಡೆ ಬಾಯವನಲ್ಲ. ಅವರು ಮೂವರು ನೆರಿಕೆಯೊಳಗಿರ್ದಡೆ, ಆ ನೆರಿಕೆಯ ಹೊರಗಿರ್ದು ಬರುಕಾಯನಾದೆಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತ್ರಿಕರಣ ಶುದ್ಧವಿಲ್ಲದವನ ಮಾಟ, ನೇಣು ಹರಿದವನಾಟ. ಭಯಭಕ್ತಿ ಇಲ್ಲದವನ ಕೈಯ ದ್ರವ್ಯಕ್ಕೆ ಆಶೆಯ ಮಾಡುವ ಭವಭಾರಿಗೆ, ಭವವೇ ಕಡೆ. ಅದಕ್ಕೆ ಏನೂ ಇಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾನು ಹೊಳೆಯಲ್ಲಿ ಮುಳುಗಿ ಹೋಗುತ್ತ, ಈಸಬಲ್ಲವರ ಕಂಡೆನೆಂಬಂತೆ, ತಾ ನಾಶಕನಾಗಿ, ಇದಿರಿನಲ್ಲಿ ನಿರಾಶೆಯನರಸುವನಂತೆ, ತಾನಿದ್ದು ತನ್ನ ಕಾಣದೆ, ಕೆಟ್ಟುಹೋದೆಹೆನೆಂದು ಅರಸುವನಂತೆ. ಇಂತೀ ಗುಣವುಳ್ಳನ್ನಕ್ಕ ಗುರುವಲ್ಲ. ಆ ಗುರುವಿನ ಬೆಂಬಳಿಯಿಂದಾದುದು ಲಿಂಗವಲ್ಲ. ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತುವ ಧೀರರನಾರುವ ಕಾಣೆ. ಸತ್ತ ಹೆಣನನೆತ್ತಿ ಅರ್ತಿಮಾಡುವನಂತೆ, ಸಚ್ಚಿದಾನಂದ, ನಿಃಕಳಂಕ ಮಲ್ಲಿಕಾರ್ಜುನವರುವ ಬಲ್ಲನಾಗಿ ಒಲ್ಲನು.
--------------
ಮೋಳಿಗೆ ಮಾರಯ್ಯ
ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ. ತಾವು ವ್ರತಿಗಳೆಂದು ಇದಿರಿಂಗೆ ಹೇಳದಿಹುದೆ ವ್ರತ. ಗುರುಲಿಂಗಜಂಗಮವ ದೂಷಿಸದಿಹುದೆ ವ್ರತ. ಸಹಪಂಙÂ್ತಯಲ್ಲಿ ವಿಶೇಷವ ಕೊಳದಿಪ್ಪುದೆ ವ್ರತ. ಇಂತಪ್ಪ ವ್ರತಕ್ಕೆ ನಮೋ ನಮೋ ಎಂಬೆ. ಇಂತಲ್ಲದೆ ಜಗವ ಸಿಕ್ಕಿಸುವ ಬಹುಮುಖಿಗಳಿಗೆಲ್ಲಿಯದೊ ಮುಕ್ತಿ ? ಮಾತಿನಲ್ಲಿ ಭಕ್ತಿ, ಮನದಲ್ಲಿ ಕತ್ತರಿ, ಭಕ್ತಿಯಲ್ಲಿ ಬಲೆ, ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ ಭಕ್ತಿಶೀಲ ? ಇಂತಿವ ಬಲ್ಲೆನಾಗಿ ಭಕ್ತಿ ನನಗಿಲ್ಲ. ಇನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೃಣ ತ್ರಿಣಯನ ಹೆಡಗೈಯ ಕಟ್ಟಿತ್ತು. ಭಾವ ಕಾಲನ ಸಂಕಲೆಯನಿಕ್ಕಿತ್ತು. ಕುರುಹು ಅರಿವವರ ಕೈಯಲ್ಲಿ, ನೆರೆನಂಬಿ ಎಂದು ತೆರಪ ಹೇಳುತ್ತ, ಈ ಅರಿಕೆ ಇನ್ನಾವುದೊ ? ನುಡಿವಡೆ ಮಾತಿಂಗಗೋಚರ, ನಡೆವರಂಗಕ್ಕೆ ಅಗೋಚರ. ಇಂತಿವರೊಳಗೆ ಭಂಗಿತರಾಗಿ ಸಾವವರಿಗೇಕೆ ಲಿಂಗಾಂಗಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ತೋಹಿನ ಶಬರನಂತೆ, ಲಾಗಿನ ವ್ಯಾಘ್ರನಂತೆ, ಆಡುವ ವಿಧಾಂತನಂತೆ, ಇಂತೀ ವೇಷ ಸಹಜವೆ ? ದೊರೆವನ್ನಬರ ಭಕ್ತ, ದೊರೆವನ್ನಬರ ವಿರಕ್ತ. ಇಂತೀ ಇವರಿರವ ಕಂಡು ಬೆರಸಿದೆನಾದಡೆ, ಎನಗೆ ಘೋರ ನರಕ, ನಿಮಗೆ ಎಕ್ಕಲ ತಪ್ಪದು. ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತಿ ಶುದ್ಧರಾಗಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನಂಗವ ತಾ ಬಡಿದು, ಇದಿರಿನಲ್ಲಿ ನೋವ ಕೇಳುವನಂತೆ, ತನ್ನ ದ್ರವ್ಯ ತಾನಿಕ್ಕಿ, ಪರರುವ ಕೈಯಲ್ಲಿ ಜರೆಯಿಸಿಕೊಂಬವನಂತೆ. ವರ್ಮವನರಿಯದವನ ಸುಮ್ಮಾನ, ಹೆಮ್ಮೆಗೆ ಹುಯ್ಯಲಿನಲ್ಲಿ ಸಿಕ್ಕಿ, ತನ್ನ ತಾನರಿಸಿಕೊಂಡಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ. ಅದರ ಮಧ್ಯದಲ್ಲಿ ಇಪ್ಪತ್ತೈದು ಮಹಾಮೇರುವೆ. ಹದಿನಾರು ವರ್ತನದ ಕೊಂಡಿಗರು. ಲಘುವೆಂಬ ತಾರುಗದ, ಅದಕ್ಕೆ ಅಗುಳಿ ದಿವಾರಾತ್ರಿಯೆಂಬವೆರಡು. ಅಗುಳಿಯ ಸನ್ನರ್ಧವಾಗಿ ಬಲಿದವನ ನೋಡಾ. ಅವನ ನಖದ ಕೊನೆಯಲ್ಲಿ ಲಕ್ಷ ಅಲಕ್ಷವೆಂಬ ಭೇದ. ಆ ಭೇದವೆಂಬ, ಜರನಿರ್ಜರವೆಂಬ, ಅಹುದಲ್ಲವೆಂಬ, ಆಗುಚೇಗೆಯೆಂಬ, ಶಂಕೆ ಸಂತೋಷವೆಂಬ, ಕಾಂಕ್ಷೆ ನಿಃಕಾಂಕ್ಷೆಯೆಂಬ, ಜೀವ ಪರಮವೆಂಬ ಇಂತೀ ದ್ವಂದ್ವಂಗಳೆಲ್ಲ ದ್ವಾರಸಂಚಾರಕ್ಕವಧಿಯಾದವು. ಇದಕ್ಕಿಂದ ಮುನ್ನವೆ ಭುವನ ಕೆಟ್ಟಿತ್ತು. ಕೋಟೆ ಕೋಳು ಹೋಯಿತ್ತು, ಹಿರಿಯರಸು ಸಿಕ್ಕಿದ, ಪ್ರಧಾನನ ತಲೆ ಹೋಯಿತ್ತು, ತಳವಾರನ ಕಣ್ಣು ಕಳೆಯಿತ್ತು. ಎಕ್ಕಟಿಗನ ಮಕ್ಕಳೆಲ್ಲರೂ ನಷ್ಟಸಂತಾನವಾದರು. ಸೃಷ್ಟಿಯೊಳಗೆಲ್ಲ ರಣಮಯವಾಯಿತ್ತು. ರಣಮಧ್ಯದಲ್ಲೊಂದು ವೃಕ್ಷವ ಕಂಡೆ, ಸತ್ತವನಿರ್ದ, ಇರ್ದವಸತ್ತ. ಇವರಿಬ್ಬರ ಮಧ್ಯದಲ್ಲೊಂದು ವೃಕ್ಷವ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವ ನೆಮ್ಮಿ ಕಾಬ ಮನವಿಲ್ಲ. ಮನವ ನೆಮ್ಮಿ ಕಾಬ ಅರಿವಿಲ್ಲ. ಅರಿವ ನೆಮ್ಮಿ ಕಾಬ ಕುರುಹಿಲ್ಲ. ಬರುದೊರೆ ಹೋಯಿತ್ತಲ್ಲ ಎನ್ನ ಬಾಲಲೀಲೆ. ಅಗಣಿತ ಅಗೋಚರವ ನೆರೆಯರಿವುದಕ್ಕೆ ಕುರುಹ ತೋರುವರ [ನಾ] ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಮದಲ್ಲಿ ಸ್ಥಾಣುವ ನಟಿಸಿದ ವ್ಯಾಧನಂತೆ ಅಂಜಲೇಕೋ ? ಅರಿದ ಮತ್ತೆ ಹೆದರಲೇಕೋ ? ಇದಿರಿಂಗರಿವ ಹೇಳುವ, ಮರೆದೊರಗುವನ ಕಂಡು ಒಡಗೊಡಲಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ? ಮನಕ್ಕೆ ಲಿಂಗ ಬಾಹಾಗ ತೊಂಡಿನ ದನವೆ ? ಕಂಡಕಂಡವರಂಗದಲ್ಲಿ ಹಿಂಗಿಹನೆಂದಡೆ, ಬಂಧುಗಳ ಮನೆಯ ಲಂದಣಗಾರನೆ ? ಇವರಂದದ ಮಾತು ಸಾಕು. ಲಿಂಗವಿಪ್ಪೆಡೆಯ ಹೇಳಿಹೆ ಕೇಳಿರಣ್ಣಾ. ಸುಖಿಯಲ್ಲದೆ ದುಃಖಿಯಲ್ಲದೆ, ಆಗಿಗೆ ಮನಗುಡದೆ, ಚೇಗೆಗೆ ದುಃಖಿತನಾಗದೆ, ಕಂಡಕಂಡವರಲ್ಲಿ ಭಂಡ ಗೆಲಿಯದೆ, ತೊಂಡಿನ ಜೀವದನದಂತೆ, ಬಂದು ಹೊಯ್ವವರನರಿಯದೆ, ಇವರಂದವನರಿಯ ಮತ್ತೆ ಉಭಯದ ಸಂದಳಿದು, ಒಂದೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತತ್ವಬ್ರಹ್ಮವ ನುಡಿವ ಹಿರಿಯರೆಲ್ಲರೂ ಮೃತ್ಯುವಿನ ಬಾಯ ತುತ್ತಾದರು. ಇಹ ಪರ ಶುದ್ಧಿಯ ಹೇಳುವ ಹಿರಿಯರೆಲ್ಲರೂ ಅನ್ನವನಿಕ್ಕಿ ಹೊನ್ನ ಕೊಡುವ ಅಣ್ಣಗಳ ಮನೆಯ ಎತ್ತುವ ಕೂಸಾದರು. ಇನ್ನಾರಿಗೆ ಹೇಳುವೆ, ಆರೂಢ ಶುದ್ಧಿಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವಿನ ಮೇಲಿಪ್ಪ ಲಿಂಗಕ್ಕೆ, ಅನವರತ ಬಿಡದೆ ನೆನಹಿರಬೇಕೆಂಬರು. ಅಂಗದ ಮೇಲಣ ಲಿಂಗವ, ಪ್ರಾಣಸಂಬಂಧವ ಮಾಡುವ ಪರಿ ಇನ್ನೆಂತೊ ? ಇದರಂದವನರಿಯದೆ ತ್ರಿಭಂಗಿಯಲ್ಲಿ ಸಿಕ್ಕಿ, ಬೆಂದವರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾನರಿಯದಿರ್ದಡೆ, ಅರಿವ ಮುಖ ಬೇಕು, ದೃಷ್ಟಿಗೆ ಪ್ರತಿಬಿಂಬದಂತೆ. ಮರೆದಡೆ, ಅರಿಯೆಂದು ಹೇಳಿದಡೆ, ಇದು ಕೊರತೆಯೇ ? ನೆರೆ ಬಲ್ಲವರಿಗೆ ಅದು ತೆರಪಿನ ಹೃದಯ, ಅರಿವಿನಾಗರ. ಮಿಥ್ಯವನಳಿದು ತಥ್ಯ ಕರಿಗೊಂಡಡೆ, ಲಿಂಗದಲ್ಲಿ ಅಚ್ಚೊತ್ತಿದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾನೇನೊಂದ ನೆನೆದು ಮಾಡಿ ಆಯಿತ್ತೆಂದಡೆ ತಾನೇನು ಬ್ರಹ್ಮನೆ ? ತಾನೊಬ್ಬರಿಗೆ ಕೊಟ್ಟು ಸುಖವಾಯಿತ್ತೆಂದಡೆ ತಾನೇನು ವಿಷ್ಣುವೆ ? ತಾನೊಬ್ಬರ ಕೊಂದು ಸತ್ತರೆಂದಡೆ ತಾನೇನು ರುದ್ರನೆ ? ಇಂತಿವನೇನೂ ಅರಿಯದೆ, ಆಹಂ ಬ್ರಹ್ಮವೆಂಬ ಭಾವಭ್ರಮಿತರಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತರಬಾರದ ಠಾವಿನಲ್ಲಿ ಪರುಷರಸವಿದ್ದರೇನೋ ? ಹತ್ತಬಾರದ ಠಾವಿನಲ್ಲಿ ಸಂಜೀವನಫಳವಿದ್ದರೇನೋ ? ಲಿಂಗವನರಿಯದ ಠಾವಿನಲ್ಲಿ ವೇಷಯುಕ್ತರಿದ್ದರೇನೋ ? ಜಂಗಮವನರಿಯದ ಠಾವಿನಲ್ಲಿ ತ್ರಿವಿಧವಿಧ ಸಮೃದ್ಧಿಯಾಗಿದ್ದರೇನೋ ? ಆಪ್ಯಾಯನವಡಿಸಿದಲ್ಲಿ ಆಪ್ಯಾಯನ bs್ಞೀದಿಸಿದಲ್ಲಿಯೆ ಸಂಜೀವನವೊಳಗಾಯಿತ್ತು. ಸಂಗದ ಭೇದದಿಂದ ಮಂಗಳದ ಬೆಳಗು. ನಿಜ ನೆಲೆಗೊಳಲಿಕೆ ಲಿಂಗವಾಯಿತ್ತು. ಅದು ಕಾರಣ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಆ ಶರಣ ಉರಿವುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ತಾನಳಿದ ಮತ್ತೆ ತಾನಾದುದ ಕಂಡೆ, ತಾನಾಗಿ ಮತ್ತೆ ಅಳಿದುದ ಕಂಡೆ, ಏನೂ ಇಲ್ಲದೆ ನೀನಾಗಿ ಮತ್ತೆ ನಾನಾದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿಶ್ಚಿಂತನಾಗಿ.
--------------
ಮೋಳಿಗೆ ಮಾರಯ್ಯ
ತಲೆಯಿಲ್ಲದೆ ಕಾಲು ನಡೆಯಬಲ್ಲುದೆ ? ಕುಕ್ಷಿಯಿಲ್ಲದಿರೆ ಬಾಯಿ ಉಣ್ಣಬಲ್ಲುದೆ ? ಆತ್ಮನಿಲ್ಲದಿರೆ ಕರಚರಣಾದಿಗಳಿಗೆ ಏತರ ಹೊಲಬು ? ನಿನ್ನ ಭಕ್ತಿಯ ಬೆಳೆ ಎನಗೆ ಸತ್ಯದ ಹಾದಿ. ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೊಗಲಚೀಲದಲ್ಲಿ ಪರಶಿವನಿದ್ದಾನೆಂದು ಪೊಡವಿಯ ಮೃಡಭಕ್ತರೆಲ್ಲ ನುಡಿವುತಿಪ್ಪರು. ಇದ ನಾ ನುಡಿಯಲಂಜುವೆ. ಹಡಕಿಯ ಕೊಳಕಿನ ತೊಗಲ ಹೊದಿಕೆಯ ಹೊರೆಯೊಳಗೆ ಅರಸಿ ಕಂಡಿಹೆನೆಂಬ ಕುರುಕರ ನೋಡಾ. ಅರಿವಿಡೆ ತೆರಹಿಲ್ಲ, ಕುರುಹಿಡುವದಕ್ಕೆ ನೆರೆ ನಾಮವಿಲ್ಲ. ಅರಿದಡೆ ತಾನೇ, ಮರೆದಡೆ ಮಾಯೆ. ಇದಕ್ಕೆ ಬಿಡುಗಡೆಯಿಲ್ಲ. ಮೃಡನ ಮುಂಡಿಗೆಯ ಹಾಕಿದೆ, ಎತ್ತುವ ಕಡುಗಲಿಗಳ ಕಾಣೆ. ಎನ್ನೊಡೆಯಾ ಎನ್ನ ಬಿಡದಿರಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...