ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ ? ಬಣ್ಣವೋ ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
--------------
ಮೋಳಿಗೆ ಮಾರಯ್ಯ
ಹಿರಿದಪ್ಪುದೊಂದು ಭೇರಿಗೆ, ಅಂಗುಲದೊಳಡಗಿದ ಕಾಷ್ಠದ ಕುರುಹಿನಿಂದ ಧ್ವನಿಯೊದಗುವಂತೆ. ಇಂತೀ ಘಟನಾದದ ಭೇದದ ಎಸಕವ ಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವನೆಂಬೆ.
--------------
ಮೋಳಿಗೆ ಮಾರಯ್ಯ
ಹುಟ್ಟುಗುರುಡ ಕತ್ತೆಯನೇರಿ ಬಪ್ಪಾಗ, ಮತ್ರ್ಯದ ಮಹಾಗಣಂಗಳು ಕಂಡು, ಕತ್ತೆಯನೇರಿ ಬಂದಡೆ, ಕತ್ತೆಯನೇರಿದ ಕುರುಡ ಹೊತ್ತುಕೊಂಡು, ಕತ್ತೆಯ ಕಾಲೇ ಕುರುಡಂಗೆ, ಕುರುಡನ ಕಾಲೇ ಕತ್ತೆಗೆ. ಈ ಗುಣ ಅಚ್ಚುಗವಾಯಿತ್ತು ಭಕ್ತರೆಲ್ಲರಿಗೆ. ಕತ್ತೆಯ ಕಣ್ಣು ಕಿತ್ತು, ಕುರುಡನ ಕಾಲ ಮುರಿದು, ಭಕ್ತಿ ಮುಕ್ತಿಯೆಂಬುದು ಸತ್ತಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಲ್ಲಿನ ಸಾರವ, ಮೇವ ಪಶು ಬಲ್ಲುದಲ್ಲದೆ ಒಳ್ಳಿತ್ತನುಂಬ ಮನುಜರು ಬಲ್ಲರೆ ಹುಲ್ಲಿನ ಸಾರವ ? ಅಲ್ಲಿ ಇಲ್ಲಿ ಹೋರಿಹೆನೆಂಬ ಖುಲ್ಲರನೊಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಯ್ದ ಭೇರಿಯ ನಾದ ಸಾಗಿತ್ತು ಎಲ್ಲಿಗೆ ? ಅದನಾರು ಬಲ್ಲರು ವೇದ್ಥಿಸಿದ ಠಾವ ? ಗುಡುಗಿನೊಳಗಣ ಗುಲುಗಡಗಿದ ಭೇದವ ? ಅದು ಪೊಡವಿಯೊಳಗೋ, ಅಂಬರದಂಗವೋ ? ಅದರ ಸಂಗವನಾರು ಬಲ್ಲರು ? ಹೊಯ್ದ ಭೇರಿಯ ಕಾಣಬಹುದಲ್ಲದೆ, ನಾದವಡಗಿದ ಠಾವ ಭೇದಿಸಬಹುದೆ ಅಯ್ಯಾ ? ಆ ಶರಣರಿರವು ನಾದಭೇದದಂತೆ, ಗುಡುಗು ಗರ್ಜನೆಯಲ್ಲಿ ಅಡಗಿದಂತೆ, ಇದನೊಡಗೂಡಬಲ್ಲಡೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುತ್ತದ ಬಾಯಲ್ಲಿ ಲೆಕ್ಕವಿಲ್ಲದ ಹುಳು ಹುಟ್ಟಿ, ಹುತ್ತ ಕತ್ತಿತ್ತು ನೋಡಾ. ಸರ್ಪನ ವಿಷದ ಹೊಗೆಯಿಂದ ಹುತ್ತವುರಿದು, ಹುಳು ಸಾಯದು ನೋಡಾ. ಇಂತೀ ಪುತ್ಥಳಿಯ ಹೊತ್ತು ನಷ್ಟವ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹರುಗೋಲನೇರಿದಡೆ ಅದ ಹಿಡಿವ ತೆರನನರಿಯಬೇಕು. ತಡಿ ಮಡು, ಅದರಡಿಯನರಿದು ಒಡಗೂಡಬೇಕು. ಬಿಡುಮುಡಿಯನರಿಯದಿರ್ದಡೆ ತನಗೆ ಸಡಗರವೇಕೆ ? ಕೊಲುವ ಹಗೆ ಬೇರಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು ಮುಂತಾದ ಫಲಾಹಾರಮಂ ಕೊಂಡು, ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು, ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ. ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ, ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು, ಇವರಿಗೆ ಅರಿಕೆಯಿಲ್ಲವೆಂದೆ. ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ. ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹದ್ದುಹಾವು ನುಂಗುವಾಗ ಸಿದ್ಧರೆಲ್ಲರು ನೋಡುತ್ತಿದ್ದರು. ಪ್ರಸಿದ್ಧರಲ್ಲದ ಕಾರಣ ಸಿದ್ಧರು ಸಿದ್ಧಿಯಲ್ಲಿಯೆ ಮುಳುಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಹೊದ್ದಿದುದಿಲ್ಲ.
--------------
ಮೋಳಿಗೆ ಮಾರಯ್ಯ
ಹೊಳೆಯ ಸುಳಿಯಲ್ಲಿ ಸಿಕ್ಕಿದ ಹುಲ್ಲು, ಬಳಸುವದಲ್ಲದೆ ಅಳಿವುದಿಲ್ಲ, ಮುಳುಗುವುದಿಲ್ಲ. ಭವಸಾಗರದಲ್ಲಿ ಸಿಕ್ಕಿದ ಚಿತ್ತು, ತೆರಪಿಂಗೊಡಲಿಲ್ಲ. ಜಲ ಪಾಷಾಣದಂತೆ, ನೆಲೆ ಬಿಂಬದಂತೆ, ಈ ಸುಲಲಿತ ಬಲುಗೈಯರಿಲ್ಲದ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಿಡಿದು ಬಿಟ್ಟಡೆ ಮಹಾಪ್ರಮಥರಿಗೆ ದೂರ. ಬಿಡದಿರ್ದಡೆ ಮಹಾಬೆಳಗಿಂಗೆ ದೂರ. ಹಿಡಿಯಬಾರದು, ಬಿಡಬಾರದು. ಇಂತೀ ಲಿಂಗೈಕ್ಯವನಿನ್ನಾರಿಗೆ ಉಸುರುವೆ, ನಿಃಕಳಂಕ ಮಲ್ಲಿಕಾಜುನಾ ?
--------------
ಮೋಳಿಗೆ ಮಾರಯ್ಯ
ಹೋಟಾರದಲ್ಲಿ ಒಂದು ವೇತಾಳ ಹುಟ್ಟಿತ್ತು. ವೇತಾಳನ ಚಿತ್ತದಲ್ಲಿ ಶಿಶು ಬೆಸಲಾಗಿ, ಮಾಣಿಕ್ಯವ ಕಂಡಿತ್ತು. ಆ ಮಾಣಿಕ್ಯದ ಬೆಳಗಿನಲ್ಲಿ ಹೋಟಾರದ ಕತ್ತಲೆ ಕೆಟ್ಟು, ವೇತಾಳನ ಚಿತ್ತದ ಕತ್ತಲೆ ಹರಿದು, ಶಿಶುವಿನ ಕೈಯ ರತ್ನ ಮೂರುದೆಸೆಯ ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನನ ಸಂಗ ಸುಖದಿಂದ.
--------------
ಮೋಳಿಗೆ ಮಾರಯ್ಯ
ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ, ಒಂದು ಅರಗಿನ ಗಿಳಿ ತತ್ತಿಯನಿಕ್ಕಿ, ತತ್ತಿಯ ಆ ಗಿರಿ ನುಂಗಿತ್ತ ಕಂಡೆ. ಗಿಳಿಯ ಕುರುಹಿಲ್ಲದೆ ಹಾರಿಹೋಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ, ನೀವೇ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ಹಸಿದ ಡುಂಡುಕಂಗೆ, ಬಕಂಗೆ ಎಸಕದ ಧ್ಯಾನವುಂಟೆ ? ಅವು ತಮ್ಮ ಹಸಿವಡಗುವನ್ನಕ್ಕ, ತೃಷೆಗಳು ಬಂದು ಸೇರುವನ್ನಕ್ಕ, ಹುಸಿಧ್ಯಾನದಿಂದ ಜೀವದ ಅಸುಗಳ ಕೊಂಬವು. ಇಂತಿವರಂತೆ ಹುಸಿಕರ ಭಕ್ತಿ, ಕಿಸುಕುಳರ ವಿರಕ್ತಿ. ಇವು ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೀಗಿರು ಎಂದಡೆ, ಹಾಗಿರದಿದ್ದಡೆ ಅವಳು ಸತಿಯಲ್ಲ, ನಾ ಪತಿಯಲ್ಲ. ಆವ ಠಾವಿನಲ್ಲಿ ಎನಗೆ ಸತಿ ಸಂಗ? ಆವ ಠಾವಿನಲ್ಲಿ ಲಜ್ಜೆ ನಾಚಿಕೆ? ಕೇಣಸರ ಅಪಮಾನವಿಲ್ಲದಿರಬೇಕು, ಅದು ಎನ್ನ ಭಕ್ತಿ ಮುಕ್ತಿಯ ಬೆಳೆ. ಸತಿಪತಿಯಿಬ್ಬರೂ ಏಕವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು.
--------------
ಮೋಳಿಗೆ ಮಾರಯ್ಯ
ಹೊಲ ಬೆಳೆದಲ್ಲಿ ಹುಲ್ಲೆಗಳು ಇರಗುಡವು. ಹುಲ್ಲೆಯ ಹೊಡೆಯಬಾರದು, ಹೊಲನ ಮೇಯಬಾರದು. ಬಿಟ್ಟಡೆ ವರ್ತನಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ. ಇಂತೀ ಸಮಯವ ಜ್ಞಾನದಲ್ಲಿ ತಿಳಿಯಬೇಕಯ್ಯಾ. ಹಾವು ಸಾಯದೆ, ಕೋಲು ಮುರಿಯದೆ, ಹಾವು ಹೋಹ ಪರಿ ಇನ್ನೆಂತಯ್ಯಾ ! ಅದು ಗಾರುಡಂಗಲ್ಲದೆ ಗಾವಿಲ [ ಗಂಜದು ] . ಆ ತೆರ ಸ್ವಯಾನುಭಾವಿಗಲ್ಲದೆ ಶ್ವಾನಜ್ಞಾನಿಗುಂಟೆ ? ಮುಚ್ಚಿದಲ್ಲಿ ಅರಿದು, ತೆರೆದಲ್ಲಿ ಮರೆದು, ಇಂತೀ ಉಭಯದಲ್ಲಿ ಕುಕ್ಕುಳಗುದಿವವರಿಗುಂಟೆ , ನಿಃಕಳಂಕ ಮಲ್ಲಿಕಾರ್ಜುನನ ಸುಚಿತ್ತದ ಸುಖ?
--------------
ಮೋಳಿಗೆ ಮಾರಯ್ಯ
ಹಾಳಾಹಳವೆಂಬ ಮಾಳಿಗೆಯ ಹೊಕ್ಕು, ಕೋಳಾಹಳ ತಾ ಕಾದಿ, ಇಡಾ ಪಿಂಗಳ ಸುಷುಮ್ನ ನಾಡಿಗಳೆಂಬ ಅಂಬುಗಂಡಿಯ ಮುಚ್ಚಿ, ಅಷ್ಟಮದವೆಂಬ ಕೋಟೆಯನೊಡೆದು, ಪಂಚೇಂದ್ರಿಯವೆಂಬ ಹೂಡೆಯವಂ ಕಿತ್ತು, ಸಕಳೇಂದ್ರಿಯವೆಂಬ ನಿಗಳಂ ಮುರಿದು, ಅಹಂಕಾರವೆಂಬ ಅಗಳಂ ಹೂಣಿ, ಉಂಟಿಲ್ಲವೆಂಬ ಚಾರುಗದಪಂ ಕಿತ್ತು, ಸತ್ವರಜವೆಂಬ ನಿಲವಂ ಕಡಿದು, ತಮವೆಂಬ ಅಗುಳಿಯಂ ಮುರಿದು, ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯೆಂಬ ನೆಲಗಟ್ಟಂ ಮೆಟ್ಟಿ, ಸ್ಥೂಲಸೂಕ್ಷ್ಮ ಕಾರಣವೆಂಬ ಮೇಲುಜಂತಿಯಂ ಕಿತ್ತು, ಪ್ರಪಂಚೆಂಬ ಮೇಲು ಮಣ್ಣಂ ತೆಗೆದುಹಾಕಿ, ಹೋಯಿತ್ತು ಮಾಳಿಗೆ, ನಾಮ ನಷ್ಟವಾಗಿ. ಮಾಳಿಗೆಯನಾಳಿದವ ಬಾಳದೆ ಹೋದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಲದವರೆಯ ನಡೆದು ಸೊಡಗೆಯ ಸುಲಿದಲ್ಲಿ, ತಳಿಲು ಬಲಿದು ಒಡೆದುದಿಲ್ಲ. ಬಿತ್ತವಟ್ಟಕ್ಕೆ ಮೊದಲೆ ಕೂಳೆಹೋಯಿತ್ತು. ಹೊಲದವನಿಗೆ ಒಮ್ಮನವಾದುದಿಲ್ಲ. ಇಮ್ಮನ ಸೊಡಗೆಯ ಮೆದ್ದು, ಕರ್ಮಕ್ಕೀಡಾದವರ ನುಡಿಯೆಂದಡೆ, ಎನ್ನ ಹಮ್ಮಿಗನೆಂಬರು. ಅವರಿಗೆ ಹಾಕಿದ ಗಾಣ ಸಾಕು, ನಿಲ್ಲು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಟ್ಟಿಸುವಾತ ಬ್ರಹ್ಮನಾದಡೆ ಅರ್ಚಿಸಲೇಕೋ ನಿಮ್ಮುವ? ರಕ್ಷಿಸುವಾತ ವಿಷ್ಣುವಾದಡೆ ಅರ್ಪಿಸಲೇಕೋ ನಿಮಗೊಂದುವ? ಹೊಂದಿಸುವಾತ ರುದ್ರನಾದಡೆ ಮಹದಂದವ ನುಡಿಯಲೇಕೋ ನಿಮ್ಮುವ? ಇಂತೀ ಲೀಲೆಗೆ ಆರಾದಡೂ ಆಗಲಿ ನಾನೀ ಲೀಲೆಯವನಲ್ಲ. ಇದರ ಹೊಳಹು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಳುವಿನೊಳಗಣ ದಳ್ಳುರಿ, ಅದು ಸಲ್ಲಲಿತದಿಂದಲ್ಲದೆ ಅಲ್ಲಿಂದೇಳದು. ಬಲ್ಲವರೊಳಗಣ ಸೊಲ್ಲಿಗತೀತ ಒಳ್ಳಿದವರನಲ್ಲದೊಲ್ಲ. ಅಲ್ಲದ ನೆಲನ ಬೆಳೆವುದಕ್ಕೆ ಹುಲ್ಲಲ್ಲದೆ ಜಲ್ಲೆಯುಂಟೆ ? ವಾಗ್ವಾದಕ್ಕೆ ಹೋರುವರಲ್ಲಿ ಬಲ್ಲವರಿರ್ಪರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಟ್ಟೆಯ ಕಕ್ಕುಲತೆಗಾಗಿ, ಭಕ್ತರ ಮನೆಯ ಹೊಕ್ಕು ಸೇವೆಯ ಮಾಡುವ ಮಿಟ್ಟೆಯಭಂಡರಿಗೆಲ್ಲಿಯದೊ ನೆಟ್ಟನೆ ದೇವತ್ವ ? ಈ ಕಷ್ಟ ಜೀವನ ನೆಟ್ಟನೆ ಕಂಡಡೆ, ಬಟ್ಟೆಯ ಬಿಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹರಿಗೆಯ ಹಿಡಿದವ ಇದಿರ ಗೆದ್ದಿಹೆನೆಂದು ಅದನೆದೆಗಿಕ್ಕಿಕೊಂಡು, ಉರವಣಿಸಿಕೊಂಡು, ಬಾಹ ಸಮರವ ತರಹರಿಸಿಹೆನೆಂದು ಇದಿರಿಗೆ ಈಡಹ ತೆರನಂತೆ ಅದಕ್ಕೇ ಹಾನಿ. ಅಂಗದ ಕುರುಹಿನ ನೆಮ್ಮುಗೆಯಪ್ಪ ಲಿಂಗವು, ಕಲಸಿದ ಮಣ್ಣು ರೂಹಿಂಗೆ ಈಡಾಗದೆಂದರಿದಡೆ, ಆ ಲಿಂಗ ಭವಪಾಶವ ಗೆಲ್ಲುವುದು. ಹಾಕಿದ ಮುಂಡಿಗೆಯ, ಭಾಷೆಯ ತಪ್ಪಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...