ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂದಚಂದದ ಬಣ್ಣವ ಹೊದ್ದು, ಹರನ ಶರಣರೆಂಬ ಅಣ್ಣಗಳೆಲ್ಲರು ಕರಣಂಗಳೆಂಬ ಉರವಣೆಯ ಅಂಬಿಗಾರದೆ, ಭಕ್ತಿಯೆಂಬ ಹರಿಗೆಯ ಹಿಡಿದು, ಮುಕ್ತಿಯೆಂಬ ಗ್ರಾಮವ ಮುತ್ತಿ ಕಾದಿ, ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ. ಎನಗೆ ಹೊದ್ದಿಗೆ ಯಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅಂಗದ ಮೇಲೆ ಶಿವಲಿಂಗ ನೆಲಸುವಂಗೆ ಮೂರುಸ್ಥಲವಾಗಬೇಕು. ಅವಾವವಯ್ಯಾಯೆಂದಡೆ: ಗುರುಲಿಂಗಜಂಗಮದಲ್ಲಿ ಭಕ್ತಿ. ಅರಿವ ಸಾದ್ಥಿಸುವಲ್ಲಿ ಜ್ಞಾನ. ಕರಣಾದಿಗಳ ಭಂಗ ವೈರಾಗ್ಯ. ಇನಿತಿಲ್ಲದೆ ಲಿಂಗವ ಪೂಜಿಸಿಹೆನೆಂಬ, ಲಿಂಗವ ಧರಿಸಿಹೆನೆಂಬ ಲಜ್ಜೆಭಂಡರ ಕಂಡು, ನಾ ನಾಚಿದೆನಯ್ಯಾ. ಇದು ಕಾರಣ ಗದ್ದುಗೆಗೆಟ್ಟು ಎದ್ದಾತನು ಲಿಂಗವಲ್ಲ ಕಾಣಾ. ಲಿಂಗ ಸತ್ತ, ನಾ ಕೆಟ್ಟೆ, ರಂಡೆಗೂಳೆನಿಸಲಾರೆ. ಎನ್ನ ಹತ್ಯವ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ, ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ. ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ, ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು? ಎಯ್ದಿಸಿಕೊಂಬುವನಾರೆಂದು ನಾನರಿಯೆ. ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ? ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ, ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ? ಪರರಂಗವನರಿದು ಹೆರರಂಗದಲ್ಲಿ ಸಿಲ್ಕಿ ಭಂಗಿತನಾಗಲೇಕೊ? ನದಿಯೊಳಗೆ ಮುಳುಗಿ ತನ್ನೊಡವೆಯ ಸುದ್ಧಿ ಯಾಕೊ? ಅದರ ವಿದ್ಥಿ ನಿಮಗಾಯಿತ್ತು, ಬಿಡು ಕಡುಗಲಿತನವ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಧಕ ಪಂಗುಳನಾದ, ಪಂಗುಳ ಅಂಧಕನಾದ. ಈ ಉಭಯದ ಬೆಂಬಳಿಯನರಿಯಬೇಕು. ಮಂಜರಿ ವಿಹಂಗನ ಕೊಂದು ಉಭಯವನರಿಯಬೇಕು. ಪರಮ ಜೀವನದೊಳಗಡಗಿ ಪರಮನಾದ ಉಭಯವ ತಿಳಿಯಬೇಕು. ಬೆಂಕಿ ಮರದೊಳಗಿದ್ದು, ಮಥನದಿಂದ ಮರ ಸುಟ್ಟು, ಮರ ಬೆಂಕಿಯಾದ ತೆರನನರಿತಡೆ ಪ್ರಾಣಲಿಂಗಸಂಬಂದ್ಥಿ. ಪ್ರಾಣಲಿಂಗವೆಂಬುಭಯ ಸಮಯ ನಿಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಭವಿ, ಭಕ್ತಂಗೆ ಮನಭವಿ ಮಹೇಶ್ವರಂಗೆ. ರುಚಿಭವಿ ಪ್ರಸಾದಿಗೆ, ಕುರುಹುಭವಿ ಪ್ರಾಣಲಿಂಗಿಗೆ. ತ್ರಿವಿಧನಾಮಭವಿ ಶರಣಂಗೆ, ಕೂಟಸ್ಥಭವಿ ಐಕ್ಕಂಗೆ. ಇಂತೀ ಸ್ಥಲಂಗಳಲ್ಲಿ, ಕುರುಹ ಕುರುಹಿನಲ್ಲಿ ಕಂಡು, ಅರಿವ ಅರಿವಿನಲ್ಲಿ ತಿಳಿದು, ಐಕ್ಯ ಐಕ್ಯನಾದ ಮತ್ತೆ, ಅದು ಕಲ್ಲಿನೊಳಗಣ ಬೆಳಗು, ಮುತ್ತಿನೊಳಗಣ ಅಪ್ಪು, ಕರ್ಪುರದೊಳಗಣ ಉರಿಯಂತೆ, ದೃಷ್ಟವಿದ್ದು ನಿಃಪತಿಯಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಂಬರ ಹರಿದಡೂ ಸಂಭವಿಸದಡೂ ಕಲೆ ಬಿಡದು. ಇದರಂದವ ತಿಳಿ. ಹೀಂಗಲ್ಲದೆ ಮನವ ಲಿಂಗದಲ್ಲಿ ನಿಕ್ಷೇಪಿಸಿ, ಬಂಧವ ಹಿಂಗಿ, ಸುಸಂಗನಾಗು. ಮಹಾಲಿಂಗಿಗಳ ಸಂಭಾಷಣದಲ್ಲಿ ನಿಂದು ನಿರ್ವಾಣನಾಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು? ನೀರಿಲ್ಲದಿರ್ದಡೆ ಹಾಲನಾರು ಬಲ್ಲರು? ನಾನಿಲ್ಲದಿರ್ದಡೆ ನಿನ್ನನಾರು ಬಲ್ಲರು? ನಿನಗೆ ನಾ, ನನಗೆ ನೀ. ನಿನಗೂ ನನಗೂ ಬೇರೊಂದು ನಿಜವುಂಟೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಭವಿ, ಗುರುವಿನ ಹಂಗು; ಮನಭವಿ, ಲಿಂಗದ ಹಂಗು. ರುಚಿಭವಿ, ಜಂಗಮದ ಹಂಗು. ಇಂತೀ ತ್ರಿವಿಧದ ಭೇದವನರಿಯಬೇಕು. ಅಂಗಭವಿಯ ಕಳೆದಲ್ಲದೆ ಭಕ್ತನ ಮಾಡಬಾರದು. ಮನಭವಿಯ ಕಳೆದಲ್ಲದೆ ಲಿಂಗವ ಕೊಡಬಾರದು. ತನುರುಚಿಯ ಕಳೆದಲ್ಲದೆ ಜಂಗಮದ ಪ್ರಸಾದವ ಕೊಳಬಾರದು. ಹೀಂಗಲ್ಲದೆ, ಮಾತಿನ ಬಣಬೆಯ ಕಲಿತು, ನೀತಿಯ ಹೇಳುವರೆಲ್ಲರೂ ತ್ರಿವಿಧಕ್ಕಾಚಾರ್ಯರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಲಿಂಗವೆಂದು, ಪ್ರಾಣಲಿಂಗವೆಂದು, ಉಭಯದ ಒಡಲನೊಡಗೂಡುವ ಪರಿಯಿನ್ನೆಂತೊ? ಅದು ಶಿಲೆಯ ಬೆಳಗಿನಂತೆ, ಶಿಲೆ ಅಡಗಿದಡೆ ಬೆಳಗಿಲ್ಲ. ಬೆಳಗಡಗಲಿಕ್ಕೆ ಆ ಶಿಲೆ ಅಚೇತನ ಪಾಷಾಣವಾಯಿತ್ತು. ಅಪ್ಪು ಕೂಡಿದ ಪರ್ಣಯೆಲೆ ನಾಮರೂಪಾದಂತೆ, ಅಪ್ಪುವಡಗೆ ಅಚೇತನ ತರಗಾಯಿತ್ತು. ಅಂಗದ ಮೇಲಣ ಲಿಂಗ, ಲಿಂಗದ ಮೂರ್ತಿಯ ನೆನಹು, ಈ ತ್ರಿವಿಧ ಒಂದುಗೂಡಿದಲ್ಲಿ, ಅಂಗವೆಂಬ ಭಾವ, ಲಿಂಗವೆಂಬ ನೆನಹು ನಿರಂಗವಾದಲ್ಲಿ, ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ. ಈ ಗುಣ ಪ್ರಾಣಲಿಂಗಿಯ ಭೇದ, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಲಿಂಗ ಸಂಬಂಧ, ಭಾವಲಿಂಗ ಸಂಬಂಧ, ಪ್ರಾಣಲಿಂಗ ಸಂಬಂಧವೆಂದು ಭಾವಿಸಬೇಕು, ಭಾವಿಸಬೇಡಾ ಎಂಬ ಉಭಯದ ತೆರನೆಂತುಟೆಂದಡೆ: ಮೃದುಕಠಿನವನರಿವನ್ನಕ್ಕ ಕುರುಹ ಮರೆಯಲಿಲ್ಲ. ಶೀತ ಉಷ್ಣಾದಿಗಳನರಿವನ್ನಕ್ಕ ಭಾವವ ಮರೆಯಲಿಲ್ಲ. ರೂಪು ನಿರೂಪೆಂಬ ದ್ವಯಂಗಳ ಭೇದಿಸುವನ್ನಕ್ಕ ಪ್ರಾಣಲಿಂಗವೆಂಬ ಉಭಯದ ಕುರುಹುಂಟು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗದ ನಿರಾಭಾರಿಗಳೆಲ್ಲರೂ ಕೂಡಿ, ಲಿಂಗದ ಹೊಲಬ ಬಲ್ಲೆವೆಂದು, ಅನಂಗನ ಬಲೆಯೊಳಗಿಲ್ಲವೆಂದು, ಸಕಲರ ಸಂಸರ್ಗವನೊಲ್ಲೆವೆಂದು ಮತ್ತೆ ಅಖಿಲರೊಳಗೆ ಸಕಲಭೋಗವನುಂಡು, ವಿಕಳಗೊಂಡವರ ನೋಡಾ. ಪ್ರಕೃತಿ ಹರಿಯದೆ, ಸುಖವ ಮೆಚ್ಚಿ ತಿರುಗದೆ, ಇಂತಿಹ ಅಖಿಳಂಗೆ ನಮೋ ನಮೋ, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಬರದಲ್ಲಿ ಒಂದು ಕೋಡಗ ಹುಟ್ಟಿ, ಕೊಂಬಿಲ್ಲದೆ ನೆಗೆವುತ್ತಿಹುದ ಕಂಡೆ. ಮತ್ತಾ ಕೊಂಬಿನ ಮೇಲಣ ಕೋಡಗ ಅಂಬರವ ಕಾಣದೆ, ಲಂಘಿಸಿ ನಿಲುವುದಕ್ಕೆ ನೆಲದ ಅಂಗವ ಕಾಣದೆ ಕೊಂಬಿನಲ್ಲಿಯೆಯ್ದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ.
--------------
ಮೋಳಿಗೆ ಮಾರಯ್ಯ
ಅಂಗ ಲಿಂಗವಂತವಾದ ಮತ್ತೆ ಮುಟ್ಟುವ ತಟ್ಟುವ, ಸೋಂಕಿನಲ್ಲಿ ಸುಳಿವ, ಇದಿರಿಟ್ಟು ಬಂದ ಪದಾರ್ಥವ ಅಂಗಲಿಂಗಕ್ಕೆ ಕೊಟ್ಟುಕೊಳಬೇಕು. ಪ್ರಾಣಲಿಂಗವಾದ ಮತ್ತೆ ಕರಣಂಗಳಿಗಿಂಬುಗೊಡದಿರಬೇಕು. ತನ್ನನರಿದುದಕ್ಕೆ ಉಭಯಾರೂಢನಾಗಿರಬೇಕು. ಉಭಯವೇಕವಾದ ಮತ್ತೆ ಸಾಕು ಸತ್ಕ್ರೀ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಂಬುವಿನ ಸಾರ ಒಡಗೂಡಿ, ಆ ಮಣ್ಣಿಂಗೆ ಕುಂಭವೆಂಬುದಕ್ಕೆ ಕುರುಹುಗೊಟ್ಟು, ಘನ ಕಿರಿದಲ್ಲದೆ, ಕುಂಭದಲ್ಲಿ ಲೀಯವಾದಂತೆ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಲೀಯ.
--------------
ಮೋಳಿಗೆ ಮಾರಯ್ಯ
ಅಂಗವಿರಲಾಗಿ ಲಿಂಗವೆಂಬುದೊಂದು ಕುರುಹು. ಆ ಕುರುಹನರಿವುದಕ್ಕೆ ಅರಿವೆಂಬುದೊಂದು ಭಾವ. ಭಾವದ ಮರೆಯಲ್ಲಿ ಚಿತ್ತ, ಚಿತ್ತದ ಮರೆಯಲ್ಲಿ ನಿಶ್ಚಯ, ನಿಜವನೆಯ್ದಿದಲ್ಲಿ ವಸ್ತುಭಾವಲೇಪ. ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂದಳದ ಮುಂದೆ ವಂದಿಸಿಕೊಂಡೆನೆಂದು ತ್ರಿವಿಧವ ಹೆರೆಹಿಂಗಿ ಮಾಡುವ ನಿರ್ಬಂಧಿಗನ ನೋಡಾ. ಕಂಡಕಂಡವರ ಮನೆಯಲ್ಲಿ ಕೊಂಡಾಡಬೇಕೆಂದು ಹಿಂಡ ಕೂಡಿ ಕೂಳನಿಕ್ಕುವ ಭಂಡರಿಗೆಲ್ಲಿಯದೊ ಭಕ್ತಿ? ಇವರಂದಕ್ಕೆ ಅಂದೇ ಹೊರಗು, ಸಂದೇಹವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ