ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂದ್ಥಿ. ಮಣ್ಣಿನಲ್ಲಿ ಸುಟ್ಟ ಓಡು ಮನ್ನಿನಂತಾಗಬಲ್ಲಡೆ ಭಾವಲಿಂಗಸಂಬಂದ್ಥಿ. ಇಷ್ಟಭಾವವನರಿವ ಆ ಚಿತ್ತ ದೃಷ್ಟವನರಿವುದಕ್ಕೆ ಶ್ರುತದೃಷ್ಟವೆಂತುಟೆಂದಡೆ: ವಾರಿಕಲ್ಲು ನೋಡ ನೋಡಲಿಕ್ಕೆ ನೀರಾದಂತೆ. ಇಷ್ಟ ಭಾವ ಕರಿಗೊಂಡು, ನಿಶ್ಚಯಪದವೆಂಬ ಗೊತ್ತ ಮುಟ್ಟದೆ, ಅದು ಸಶ್ಚಿತ್ತವಾದಲ್ಲಿ, ಪ್ರಾಣಲಿಂಗಸಂಬಂದ್ಥಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕವಡೆ ಕಟಕವ ನುಂಗಿತ್ತು, ಕುಡಿಕೆ ಹಿರಿದಪ್ಪ ಮಡಕೆಯ ನುಂಗಿತ್ತು. ಅಡಕೆ ಮರನ ನುಂಗಿದ ಮತ್ತೆ ಫಲವುಂಟೆ? ಅರ್ಚನೆ ಭಕ್ತಿಯಲಡಗಿ, ಭಕ್ತಿ ಮುಕ್ತಿಯಲಡಗಿ, ಮುಕ್ತಿ ಜ್ಞಾನದಲಡಗಿ, ಜ್ಞಾನ ನಾನೆಂಬಲ್ಲಿ ಅಡಗಿದ ಮತ್ತೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ. ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ, ಲಿಂಗವಿಲ್ಲಾ ಎಂದೆ. ಕಣ್ಣಿನಲ್ಲಿ ನೋಡಿ ಕಬಳೀಕರಿಸಿದೆನೆಂದಡೆ ಅದು ಕವುಳಿಕವೆಂಬೆ. ಮನದಲ್ಲಿ ನೆನೆದು ಘನದಲ್ಲಿ ನಿಂದೆಹೆನೆಂದಡೆ ಭವಕ್ಕೆ ಬೀಜವೆಂದೆ. ಕೈಗೂ ಕಣ್ಣಿಗೂ ಮನಕ್ಕೂ ಬಹಾಗ ತೊತ್ತಿನ ಕೂಸೆ ? ಕಂಡಕಂಡವರ ಅಪ್ಪಾ ಅಪ್ಪಾ ಎಂಬ ಇಂತೀ ಸುಚಿತ್ತರನರಿಯದೆ, ಉದ್ಯೋಗಿಸಿ ನುಡಿವ ಜಗದ ಭಂಡಕರನೊಲ್ಲೆನೆಂದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕದ್ದ ಕಳವ ಮರೆಸಿಕೊಂಡು, ನಾ ಸಜ್ಜನನೆಂಬಂತೆ, ಇದ್ದ ಗುಣವ ನೋಡಿ, ಹೊದ್ದಿ ಸೋದಿಸಲಾಗಿ, ಕದ್ದ ಕಳವು ಕೈಯಲ್ಲಿದ್ದ ಮತ್ತೆ, ಸಜ್ಜನತನವುಂಟೆ ? ಇಂತೀ ಸಜ್ಜನಗಳ್ಳರ ಕಂಡು ಹೊದ್ದದೆ ಹೋದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಕ್ರೋಧವ ಬಿಟ್ಟಲ್ಲದೆ ಇಚ್ಫಾಶಕ್ತಿಯ ಹೊರಗಲ್ಲ. ಮೋಹವ ಬಿಟ್ಟಲ್ಲದೆ ಜ್ಞಾನಶಕ್ತಿಯ ಹೊರಗಲ್ಲ. ವ್ಯಾಪಾರ ಮುಂತಾದ ಸಕಲಕೃತ್ಯದ ತಾಪವ ಬಿಟ್ಟಲ್ಲದೆ ಕ್ರಿಯಾಶಕ್ತಿ ಹೊರಗಲ್ಲ. ಇಂತೀ ತ್ರಿವಿಧ ನಿರ್ಲೇಪವಾಗಿಯಲ್ಲದೆ ಲಿಂಗೈಕ್ಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ ? ಅದರ ಸಂಚವ ಕಂಚಗಾರನೆ ಬಲ್ಲ. ಸಂಚಿತಕರ್ಮ ಪ್ರಾರಬ್ಧವೆಂಬಿವ ಮುಂದಕ್ಕೆ ನಾನೇನ ಬಲ್ಲೆ. ಹಿಂಗಿದ್ದ ದೇಹದ ಸಂಚವನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕುರುಹಡಗಿಯಲ್ಲದೆ ಒಂದನರಿಯಬಾರದು. ತಾನರಿದಲ್ಲಿಯಲ್ಲದೆ ಕುರುಹಿನ ಕುಲ ಕೆಡದು. ಅರಿಯದುದನರಿದಲ್ಲಿ ಮರೆದು, ಮರೆದುದನರಿದಲ್ಲಿ ಕಂಡು, ಉಭಯದ ತೋಟಿಯ ತೊಳಸಿ ನಿಂದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದ ಅಂಗ, ಕರತಳಾಮಳಕವಾಯಿತ್ತು.
--------------
ಮೋಳಿಗೆ ಮಾರಯ್ಯ
ಕಪ್ಪೆ ಸತ್ತು ಸರ್ಪನ ನುಂಗಿತ್ತು ನೋಡಾ. ಮೊಲ ಸತ್ತು ಬಲೆಯ ಮೀರಿತ್ತು ನೋಡಾ. ಮತ್ತೊಡೆದು ಜಲವ ನುಂಗಿತ್ತು ನೋಡಾ. ಜೀವ ಸತ್ತು ಕಾಯ ನುಂಗಿತ್ತು ನೋಡಾ. ಉದಕ ಒಡೆದು ಏರಿ ತುಂಬಿತ್ತು, ರೆಕ್ಕೆ ಮುರಿದು ಪಕ್ಷಿ ಹಾರಿತ್ತು. ಹಾರುವ ಪಕ್ಷಿಯ ಮೀರಿ ನಿಂದಿತ್ತು ಬಯಲು. ನುಂಗಿದ ಬಯಲವ, ಹಿಂಗಿದ ಪಕ್ಷಿಯ ಕಂಗಳು ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯ ಸಮಾದ್ಥಿಯನೊಲ್ಲೆ, ನೆನಹು ಸಮಾದ್ಥಿಗೆ ನಿಲ್ಲೆ, ಕೈಲಾಸವೆಂಬ ಭವಸಾಗರವನೊಲ್ಲೆ. ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ, ನಿನ್ನಲ್ಲಿಗೆ ಕೂಟಸ್ಥವ ಮಾಡು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಳಾಂಧರವೆಂಬ ಕಾಳರಕ್ಕಸಿಯ ಬಸುರಲ್ಲಿ, ಒಬ್ಬ ಭಾಳಲೋಚನ ಹುಟ್ಟಿದ. ಆತ ಕಾಲಸಂಹಾರ, ಕಲ್ಪಿತನಾಶನ. ಆತ ಕಾಳಾಂಧರ ರಕ್ಕಸಿಯ ಕೊಂದ. ತಾಯ ಕೊಂದ ನೋವಿಲ್ಲ, ಹೆತ್ತ ತಾಯ ಕೊಂದ ಅನಾಚಾರಿ. ನಿಃಕಳಂಕ ಮಲ್ಲಿಕಾರ್ಜುನ, ಕಟ್ಟುಮೆಟ್ಟಿನವನಲ್ಲ.
--------------
ಮೋಳಿಗೆ ಮಾರಯ್ಯ
ಕೂಟಗೆಯ ಕೂಳನುಣ್ಣಬಂದವರೆಲ್ಲರೂ ಅಜಾತನ ನಿಲವ ಬಲ್ಲರೆ ? ಬೇಟದ ಕಣ್ಣಿನವರೆಲ್ಲರೂ ಸಕಳೇಶನ ಬಲ್ಲರೆ ? ಈಷಣತ್ರಯವ ಕೂಡುವರೆಲ್ಲರೂ ಪರದೇಶಿಗನ ಕೂಡಬಲ್ಲರೆ ? ಆಶೆಯೆಂಬ ಕೊಳದಲ್ಲಿದ್ದು, ನಿರಾಶೆಯ ನಿರ್ನಾಮವ ಬಲ್ಲರೆ ? ದೋಷದೂರ ನಿರ್ಜಾತನು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕತ್ತಿಯನೆತ್ತಿ ಕೊಲೆಗೆಣಿಸಿದಡೆ, ಕಲ್ಪಿತವ ತೊಡುವುದು ಕತ್ತಿಯೋ, ಹೊತ್ತವನೋ ? ಈ ಉಭಯದ ಚಿತ್ರವನರಿದಡೆ, ಆತ ಮುಕ್ತಿಗೆ ಹೊರಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದ ಕೈಯಲ್ಲಿ ಲಿಂಗಪೂಜೆ. ಮನದ ಕೈಯಲ್ಲಿ ಸಂಸಾರ. ಎಂತಹದಯ್ಯಾ ಲಿಂಗಪೂಜೆ ? ಎಂತಹದಯ್ಯಾ ಜಂಗಮಪೂಜೆ ? ಇಂತಪ್ಪ ನಾಚಿಕೆಗೆಟ್ಟ ಮೂಕೊರೆಯರ ತೋರದಿರಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೋಳು ಹೋದ ಮತ್ತೆ ಕಾಳಗದ ಇರವೇಕೆ ? ಜಾಣನಾದ ಮತ್ತೆ ಕೇಳಲೇಕೆ ಆರುವನು ? ಜ್ಞಾನಿಯಾದ ಮತ್ತೆ ಬಾಳಲೇಕೆ ಭವದಲ್ಲಿ ? ಇದು ವೇಣುವಿನೊಳಗಣ ಕಿಚ್ಚಿನಂತಾಯಿತ್ತು. ಇದಕ್ಕೆ ಜಾಣತನವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ, ಅಳಲುತ್ತ ಬಳಲುತ್ತಲೈದಾರೆ. ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ. ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು. ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ. ವಿಷ್ಣುವಿನ ನಾಬ್ಥಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ. ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು. ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ. ಕುರಿ ಸಾಯದು, ಕಂಬಳಿ ಹರಿಯದು. ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಕೀಲಿಂಗೆ ಕೀಲ ಮಾಡಿಹೆನೆಂದಡೆ, ಆ ತರುವಿಂಗೆ ಕಡೆ ನಡು ಮೊದಲಿಲ್ಲ. ಸ್ಥಲವ ಹಿಡಿದು ಸ್ಥಲವನೆಯ್ದಿಹೆನೆಂದಡೆ, ಅದು ನಾಮ ರೂಪು. ಭಾವ ಹಿಡಿವಲ್ಲಿ, ಅರಿತು ಬಿಡುವಲ್ಲಿ, ಮರೆದಡೆ ಆತನೊಡಗೂಡಿಪ್ಪ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಕೊಂಡ ಅನ್ನದಿಂದ ಅಜೀರ್ಣ ಬಂದಡೆ, ಆ ಅಜೀರ್ಣ ತನಗೊ, ಅಂಗಕ್ಕೊ ? ತನ್ನ ಅನುವ ತಾನರಿಯದೆ, ಬಂದುಂಬ ಜಂಗಮದಲ್ಲಿ ಅಂಗವನರಸುವ ಲಿಂಗದೂರರಿಗೇಕೆ ಜಂಗಮಭಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಕೀಳು ಮೇಲನರಸುವುದಕ್ಕೆ ಕೋಳಿಯ ಕಾಳಗವೆ ? ಆ[ಳು] ಮೇಳದಲ್ಲಿ ಲೋಲಿತನಾಗಿಹಾಗ, ಸೂಳೆಯ ಮನೆಯ ಆಳೆ ? ಬಾಲರಾಳಿಯ ಜೂಜಿನ ಸೋಲುವೆಯೆ ? ಅವರ ಗಾಣದಲ್ಲಿ ಬಪ್ಪ ಸಾಲಿನ ಹೆಜ್ಜೆಯಂತೆ ಇನ್ನಾರಿಗೆ ಹೇಳುವೆ ? ಮೆಟ್ಟಿದ ಹೆಜ್ಜೆಯ ಮೆಟ್ಟುವ ಕಷ್ಟಜೀವಿಗಳಿಗೆ ಇನ್ನೆತ್ತಣ ಗತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಕಳೆ ಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ. ಹೊಲೆ ಮಲವ ಕಳೆದಲ್ಲದೆ ಮನ ಶುದ್ಧವಲ್ಲ. ಜೀವನ ನೆಲೆಯನರಿದಲ್ಲದೆ ಕಾಯ ಶುದ್ಧವಲ್ಲ. ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ. ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕ್ರೀಶುದ್ಧವಾದವಂಗೆ ಭಾವಶುದ್ಧ. ಭಾವಶುದ್ಧವಾದವಂಗೆ ಆತ್ಮಶುದ್ಧ. ಆತ್ಮಶುದ್ಧವಾದವಂಗೆ ಅರಿವು ಕರಿಗೊಂಡು ನಿಂದ ನಿಜವೆ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದೊಳಗುಂಟೆಂದಡೆ ಕರ್ಮಕಾಂಡಿಯಲ್ಲ. ಜೀವದೊಳಗುಂಟೆಂದಡೆ ನಾನಾ ಯೋನಿಯವನಲ್ಲ. ಭಾವದೊಳಗುಂಟೆಂದಡೆ ನಾನಾ ಪ್ರಕೃತಿಯವನಲ್ಲ. ಅದು ಇದ್ದಿಲು ಶುಭ್ರದ ತೆರ. ಅದು ಹೊದ್ದದಾಗಿ ಬದ್ಧಕತನವಿಲ್ಲೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...