ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆತ್ಮ ತೇಜಕ್ಕೆ ಬೀಗಿ ಬೆರೆದು, ಶಾಸ್ತ್ರದ ಸಂತೋಷಕ್ಕೆ ಸಾಧ್ಯವಾದಿಹಿತೆಂದು, ವಚನದ ರಚನೆಗೆ ರಚಿಸಿದೆನೆಂದು, ತರ್ಕಕ್ಕೆ ಹೊತ್ತು ಹೋರುವನ್ನಕ್ಕರ ಗುರುವೆಂತಾದಿರೊ? ಘಟದ ಮಧ್ಯದಲ್ಲಿ ಪೂಜಿಸಿಕೊಂಬವನಾರೆಂದು ಅರಿಯದೆ, ಫಲವ ಹೊತ್ತಿರ್ಪ ಮರನಂತೆ, ಕ್ಷೀರವ ಹೊತ್ತಿರ್ಪ ಕೆಚ್ಚಲಂತೆ, ನಿನ್ನ ನೀನೆ ತಿಳಿದು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ ಕೆಟ್ಟ ಕೇಡ ನೋಡಾ. ಅಂದಳ ಸತ್ತಿಗೆ ಕರಿ ತುರಗಂಗಳಿಂದ, ನಾನಾ ಭೂಷಣ ಸುಗಂಧ ಸುಖದಿಂದ ಮೆಚ್ಚಿ ಪೂಜಿಸಿಕೊಂಬ ಹಿರಿಯರೆಲ್ಲರೂ ಬೋಧನೆಯ ಹೇಳಿ ಬೋದ್ಥಿಸಿಕೊಂಡುಂಬ ಹಿರಿಯರುಗಳೆಲ್ಲರೂ ಹಿರಿಯರಲ್ಲದೆ ಕಿರಿಯರಾದವರಾರೂ ಇಲ್ಲ. ಇದುಕಾರಣ, ಅಂಧಕನ ಕೈಯ ಅಂಧಕ ಹಿಡಿದಂತೆ. ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ? ತನುಸುಖವ ಮೆಚ್ಚಿದ, ಗುರು ಮುಟ್ಟಿದ ಭಕ್ತಂಗೆ ನಿಶ್ಚಯ ಹೇಳಲಾಗಿ, ಅವನಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಆತ್ಮತೇಜವ ಬಿಟ್ಟಾಗವೆ ಗುರುವನರಿದವ. ಮನವಿಕಾರವ ಬಿಟ್ಟಾಗವೆ ಲಿಂಗವನರಿದವ. ಧನವಿಕಾರವ ಬಿಟ್ಟಾಗವೆ ಜಂಗಮವನರಿದವ. ಇಂತೀ ತ್ರಿವಿಧ ನಾಸ್ತಿಯಾದಂಗಲ್ಲದೆ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸಹಜಭಕ್ತನಲ್ಲ.
--------------
ಮೋಳಿಗೆ ಮಾರಯ್ಯ
ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ ಸ್ಥೂಲ ಸೂಕ್ಷ್ಮ ಕಾರಣ ಆದಿ ಮಧ್ಯಾವಸಾನಂಗಳಲ್ಲಿ ಜಗದಲ್ಲಿ ಸಾದ್ಥಿಸುತ್ತಿರ್ದ ಬೋಧರುಗಳು ನೀವು ಕೇಳಿರೊ. ಅಭ್ಯೇದ್ಯಲಿಂಗವ ಭೇದಿಸಿ ಸುಬುದ್ಧಿಯಿಂದ ಕಂಡ ಪರಿ ಇನ್ನೆಂತೊ? ಮಾತಿನ ಮಾಲೆಯ ಕಲಿತು ಸಂತೆಯ ಹೋತಿನಂತೆ ಹೋರುವ ತೂತಜ್ಞಾನಿಗಳಿಗಿನ್ನೇತರ ಭಕ್ತಿ ವಿರಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಆವಾವ ವಿಶ್ವಾಸದಲ್ಲಿ, ಭಕ್ತಿಯ ಮಾಡುವಲ್ಲಿ, ಸತಿ ಸುತ ಬಂಧುಗಳು ಮುಂತಾದ ಬಂಧಿತವಳಯವೆಲ್ಲವೂ ಭಕ್ತಿಗೆ ಏಕರೂಪವಾಗಿ, ಸತ್ಯಕ್ಕೆ ನಿಜರೂಪಾಗಿ. ಕೃತ್ಯಕ್ಕೆ ತಪ್ಪುವರಲ್ಲದೆ, ವಸ್ತು ಭಾವದಲ್ಲಿ ತಪ್ಪದೆ ಇದ್ದಾತನ ಭಕ್ತಿ, ನಿಃಕಳಂಕ ಮಲ್ಲಿಕಾರ್ಜುನನ ನಿಶ್ಚಯದ ನಿಜನಿವಾಸ.
--------------
ಮೋಳಿಗೆ ಮಾರಯ್ಯ
ಆವಾವ ವಸ್ತು ತನ್ನ ಸ್ಥಾನದಲ್ಲಿ ರಿತುಕಾಲ ತುಂಬುವನ್ನಕ್ಕ. ಫಲ ಕುಸುಮ ಚಂದನ ಸುಗಂಧ ಮುಂತಾದ ಲೌಕಿಕ ರತ್ನಂಗಳು ಕುಲಸ್ಥಾನವಂ ಬಿಟ್ಟು ಯೋಗ್ಯವಾದಂತೆ, ಸ್ಥಲ ಬಂಧದಲ್ಲಿ ಬಲಿದು, ಕಳೆದುಳಿದ ಮತ್ತೆ ಆರು ಮೂರು ಇಪ್ಪತ್ತೈದು ನೂರೊಂದು ಅವು ಕೂಡಿದವಲ್ಲ, ನಿಃಕಳಂಕ ಮಲ್ಲಿಕಾರ್ಜುನನನಾರೆಂದರಿದಲ್ಲಿಯೆ.
--------------
ಮೋಳಿಗೆ ಮಾರಯ್ಯ
ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ. ತಲೆದೂಗಿ ಝಂಪಿಸಿ ಅಂತಃಕರಣ ಕದಡಿ ಆನಂದಿಸುವುದು ಭಾವಭಕ್ತಿ. ಬಿಂಬಿಸುವುದಕ್ಕೆ ಪ್ರತಿರೂಪಿಲ್ಲದೆ ಆನಂದ ಅಶ್ರುಗಳು ನಿಂದು, ಮುತ್ತಿನೊಳಗಣ ಅಪ್ಪುವಿನಂತೆ ಹೆಪ್ಪಳಿಯದೆ ನಿಂದುದು ಜ್ಞಾನಭಕ್ತಿ. ಇಂತೀ ತುರೀಯಾತುರೀಯವು ಏಕಚಿತ್ತವೆಂಬುದು ನಿಹಿತವಾದಲ್ಲಿ, ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ, ಅವಧಿಗೆ ಬಂದಲ್ಲಿ ಒದಗಬೇಕಲ್ಲದೆ, ಬಯಲ ಚಿಪ್ಪಿರಿದು ಬೆಲ್ಲವ ಮೆದ್ದೆನೆಂದಡೆ ಮೆಚ್ಚುವರೆ? ಗೆಲ್ಲದ ಜೂಜು, ಕೊಲ್ಲದ ಅರಿಗಳ ಬಲ್ಲವರು ಮೆಚ್ಚುವರೆ? ಸೊಲ್ಲಿನ ಮಾತಿಂಗೆ ನೆರೆ ಬಲ್ಲವರು ಸಿಕ್ಕುವಡೆ, ಗೆಲ್ಲ ಗೂಳಿತನವೆ? ಬರಿಯ ಚೀರದ ಪಸರಕ್ಕೆ ಲಲ್ಲೆಯ ಮಾತೇ ಒಳ್ಳಿಹ ನಿಃಕಳಂಕ ಮಲ್ಲಿಕಾರ್ಜುನನ ಸಂಗ.
--------------
ಮೋಳಿಗೆ ಮಾರಯ್ಯ
ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು, ಬೆಂಕಿ ಸತ್ತ ಠಾವಿನಲ್ಲಿ ಸುಟ್ಟಿತ್ತು. ಕೈಯಿಲ್ಲದ ಮೋಟ ಹಿಡಿ ಖಂಡವ ಕೊಯ್ದ. ನಾಲಗೆಯಿಲ್ಲದೆ ಬಾಯಲ್ಲಿ ಮೆದ್ದು, ಪರಿಣಾಮವಿಲ್ಲದ ಸಂತೋಷಿಯಾದನಯ್ಯಾ, ಆ ಶರಣ. ಆತನ ಇರವು, ಇಹದಲ್ಲಿ ಅಜ್ಞಾನಿ, ಪರದಲ್ಲಿ ಸುಜ್ಞಾನಿ. ಇಹಪರವೆಂಬ ಸಂದನಳಿದಲ್ಲದೆ ಲಿಂಗವಂತನಲ್ಲ. ಲಿಂಗ ಪ್ರಾಣದ ಮೇಲೆ ನಿಂದುದಕ್ಕೆ ಸಾಕ್ಷಿ ಉರಿ ಕೊಂಡ ಕರ್ಪುರದಂತೆ, ವಿಷ ಕೊಂಡ ಘಟದಂತೆ ಘಟ ಕೊಂಡ ಸೂತ್ರದಂತೆ, ಶೌರ್ಯ ಕೊಂಡ ಪ್ರತಾಪದಂತೆ. ಹಾಂಗಿರಬೇಕು ಮನ. ಲಿಂಗ ಕೊಂಡ ಮನಕ್ಕೆ ಇದೇ ದೃಷ್ಟ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ವಾನುಭಾವಿಗೆ.
--------------
ಮೋಳಿಗೆ ಮಾರಯ್ಯ
ಆತ್ಮ ನನರಿದೆಹೆವೆಂದು ಭೀಷ್ಮಿಸಿಕೊಂಡಿಪ್ಪ ಜಗದಾಟ ತ್ರಿವಿಧ ಕಾಟದ ನೀತಿವಂತರು ಕೇಳಿರೊ. ಆತ್ಮನ ಇರವು ಶ್ವೇತವೋ, ಹರೀತವೋ, ಕಪೋತವೋ, ಮಾಂಜಿಷ*ವೋ? ಕೃಷ್ಣಗೌರವ ಗಾತ್ರಕ್ಕೆ ಮೊದಲಾದ ಬಣ್ಣದ ವರ್ಣವೋ? ಇವೇಕೊ? ಬಾಯಲ್ಲಿ ಆಡುವ ಮಾತಲ್ಲದೆ, ಭಾವಜ್ಞರನಾರನೂ ಕಾಣೆ. ಆತ್ಮನ ಕಂಡವನ ಇರವು ಮುಕುರದೊಳಗಣ ಪ್ರತಿಬಿಂಬದಂತೆ, ಶ್ರುತಿಯೊಳಗಡಗಿದ ಗತಿ ನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ. ಇದರ ಎಸಕದ ಕುರುಹನರಿದವ ನೀನೋ, ಆತ್ಮನೋ? ಇದನೇನೆಂದು ಅರಿಯೆ. ಭಾವಭ್ರಮೆಗೆ ದೂರ ಜ್ಞಾನ ನಿರ್ಲೇಪ, ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆವಾವ ಸ್ಥಲಂಗಳನಾದರಿಸಿ ನಡೆವಲ್ಲಿ, ಆ ಘಟನೆ ಬೀಗವಾಗಿ ಎಸಳೆ ಆತ್ಮವಾಗಿ, ಅರಿವೆ ಕೈಯಾಗಿ, ಸ್ವಸ್ಥ ಘಟಕ್ಕೆ, ಸ್ವಸ್ಥ ಕೈಗಳಿಂದ ಸಿಕ್ಕು ಹರಿವುದಲ್ಲದೆ, ಮತ್ತೊಂದು ಕೈಯಿಕ್ಕಿ ತುಡುಕಿದಡೆ ಬಿಟ್ಟುದುಂಟೆ ಆ ಸಿಕ್ಕು? ಇಂತೀ ಕ್ರೀಯಲ್ಲಿ ಕ್ರೀಯ ಕಂಡು, ಭಾವದಲ್ಲಿ ಭ್ರಮೆ ಹಿಂಗಿ, ಜ್ಞಾನದಲ್ಲಿ ಸಂಚವಿಲ್ಲದೆ ನಿಂದ ನಿಲವು, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಆದ್ಯರ ವಚನವ ನೋಡಿ, ಓದಿ ಹೇಳಿದಲ್ಲಿ ಫಲವೇನಿ ಭೋ? ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ. ನುಡಿಯಲ್ಲಿ ಅದ್ವೈತವ ನುಡಿದು, ನಡೆಯಲ್ಲಿ ಅದಮರಾದಡೆ, ಶಿವಶರಣರು ಮೆಚ್ಚುವರೆ? ಇದು ಕಾರಣ, ಅವರ ನಡೆನುಡಿ ಶುದ್ಧವಿಲ್ಲವಾಗಿ, ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಮ ಪಂಚಾಕ್ಷರವಿಲ್ಲ. ಇಂತಿವಿಲ್ಲದೆ ಬರಿಯಮಾತಿನಲ್ಲಿ ಬೊಮ್ಮವ ನುಡಿವ ಬ್ರಹ್ಮೇತಿಕಾರರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಆಗಮವನರಿದಲ್ಲಿ ಆಗುಚೇಗೆಯನಯಬೇಕು. ಶಾಸ್ತ್ರವನರಿದಲ್ಲಿ ಸಾವನರಿಯಬೇಕು. ಪುರಾಣವನರಿದಲ್ಲಿ ಪುಂಡರ ಸಂಗವ ಹರಿಯಬೇಕು. ಇಂತಿವನರಿದ ಚಿತ್ತಶುದ್ಧಂಗಲ್ಲದೆ ಸನ್ಮತವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ? ಅನಾಗತವನರಿದ ಮತ್ತೆ ಅನ್ಯಾಯದಲ್ಲಿ ನಡೆವ ಗನ್ನವೇಕೆ? ಇಹಪರವೆಂಬುಭಯವನರಿದ ಮತ್ತೆ ಪರರ ಬೋಧಿಸಿ ಹಿರಿಯನಾದೆಹೆನೆಂಬ ಹೊರೆಯೇತಕ್ಕೆ? ಯೋಗಿಯಾದ ಮತ್ತೆ ರೋಗದಲ್ಲಿ ನೋಯಲೇತಕ್ಕೆ? ಆದಿಮಧ್ಯಾಂತರವನರಿದ ಮತ್ತೆ ಸಾಯಸವೇಕೆ ಕರ್ಮದಲ್ಲಿ? ಇಂತೀ ಭೇದಕರಿಗೆ ಅಭೇದ್ಯ, ಅಪ್ರಮಾಣ ಅಭಿನ್ನವಾದ ಶರಣಂಗೆ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಕಾಶದಲಾಡುವ ಪಕ್ಷಿ ಆಕಾಶವ ನುಂಗಿ, ಮಹದಾಕಾಶದಲ್ಲಿ ಆಡುತ್ತಿದ್ದಿತ್ತು. ಆ ಆಡುವ ಪಕ್ಷಿಯ, ಪಕ್ಷಿಯೊಳಗಾದ ಆಕಾಶವ, ಪಕ್ಷಿಗೆ ತೆರಪುಗೊಟ್ಟ ಮಹದಾಕಾಶವ, ಒಂದು ಸಂಖ್ಯೆಯಲ್ಲಿ ಒಡಗೂಡಿ, ಷಡ್ಫಾಗವಾದ ಕುಕ್ಕುಟನ ಕೊರಳು ನುಂಗಿತ್ತು. ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಆಚಾರಗುರು, ಸಮಯಗುರು, ಜ್ಞಾನಗುರು. ಆಚಾರಗುರು ಬ್ರಹ್ಮಕಲ್ಪವ ತೊಡೆಯಬೇಕು. ಸಮಯಗುರು ವಿಷ್ಣುವಿನ ಸ್ಥಿತಿಯ ಹರಿಯಬೇಕು. ಜ್ಞಾನಗುರು ಉತ್ಪತ್ಯಸ್ಥಿತಿಲಯ ಮೂರನೂ ಕಳೆಯಬೇಕು. ಇಂತೀ ತ್ರಿವಿಧಗುರು ಏಕವಾದಲ್ಲಿ, ಸದ್ಗುರು ಮದ್ಗುರು ಮಹಾಗುರವೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆ ಲಿಂಗಸ್ಥಲ ಭಾವ[ಸ್ವ]ರೂಪವಾದಲ್ಲಿ, ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧವ ತಾಳ್ದು, ಮೂರ್ತಿ ಕುರುಹುಗೊಂಬಲ್ಲಿ, ನಾನಾ ಮಧುರ[ರ] ಸದಂಡ ವೃಕ್ಷಂಗಳಲ್ಲಿ, ಮಿಕ್ಕಾದ ಲತೆ ಪಚ್ಚೆ ಪೈರುಗಳಲ್ಲಿ, ಕುಸುಮ ಗಂಧ ಮೃಗಗಂಧಗಳು ಮುಂತಾದ ಸ್ಥಾವರ ಸುಗಂದ ಸುವಾಸನೆಗಳಿಗೆಲ್ಲಕ್ಕೂ ತದ್ರೂಪಿಂಗೆ ಹಿಂಗದಂತೆ ಬಂದೊದಗಿ, ಸಂಗದಂತೆ ಕುರುಹುಗೊಂಡೆಯಲ್ಲಾ. ಕಾಯದ ಜೀವದ ಉಭಯದ ಮಧ್ಯದಲ್ಲಿ ನಿಂದು, ದೇವಾನಾದೆಯಲ್ಲಾ ನಿನ್ನ ಲೀಲೆ ಕಾರಣವಾಗಿ. ಸಂದೇಹಿಗಳಿಗೆ ಸಂಕಲ್ಪಿಯಾಗಿ, ನಿರಂಗಿಗೆ ನಿರಾಲಂಬನಾಗಿ, ಸಮ್ಯಕ್‍ಜ್ಞಾನ ಮುಕುರದಂತೆ ಸಂಬಂಧಿಸಿದೆಯಲ್ಲಾ. ನಿರಂಗ ನಿಃಕಳಕ ಮಲ್ಲಿಕಾರ್ಜುನಾ, ನಿನ್ನಿರವ ನೀನೇ ಬಲ್ಲೆ.
--------------
ಮೋಳಿಗೆ ಮಾರಯ್ಯ
ಆಚಾರ ಅನುಸರಣೆಯಾದಲ್ಲಿ, ಲಿಂಗ ಬಾಹ್ಯವಾದಲ್ಲಿ, ತನ್ನ ವ್ರತ ನೇಮಕ್ಕೆ ಅನುಕೂಲವಾಗದೆ ಭಿನ್ನಭಾವಿಗಳಾದಲ್ಲಿ, ಸತಿ ಸುತ ಪಿತ ಮಾತೆ ಸರ್ವಚೇತನ ಬಂಧುಗಳಾದಡೂ ಗುರು ಲಿಂಗ ಜಂಗಮವಾದಡೂ ಒಪ್ಪೆನು. ಇದಿರಿಂಗೆ ದೃಷ್ಟವ ತೋರಿ, ಪರಕ್ಕೆ ಕೊಂಡುಹೋದೆಹೆನೆಂದಡೂ ಆ ಕೈಲಾಸ ಎನಗೆ ಬೇಡ. ಆಚಾರಕ್ಕೆ ಅನುಸರಣೆಯಿಲ್ಲದೆ, ನೇಮಕ್ಕೆ ಕುಟಿಲವಿಲ್ಲದೆ ನಿಂದ ಸದ್ಭಕ್ತನ ಬಾಗಿಲ, ಬಚ್ಚಲ ಕಲ್ಲೆ, ಎನಗೆ ನಿಶ್ಚಯದ ಕೈಲಾಸ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಆಡುವ ಆಟವು ತಪ್ಪಿದ ಮತ್ತೆ ಆಟದವನ ಮನಸ್ಸಿಂಗೆ ಕಿಂಕಿಲದೋರಿ, ಮತ್ತೆ ಓಡಬೇಕಲ್ಲದೆ, ಅರಿದು ಮರೆದೆನೆಂಬ, ಮರೆದು ಮತ್ತರಿದೆನೆಂಬ ಖುಲ್ಲರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆತ್ಮ ಪೃಥ್ವಿಯ ಗುಣವೊ? ಅಪ್ಪುವಿನ ಗುಣವೊ? ತೇಜದ ಗುಣವೊ? ವಾಯುವಿನ ಗುಣವೊ? ಆಕಾಶದ ಗುಣವೊ? ತನ್ನ ಸ್ವಬುದ್ಧಿಯೊ? ಎಂಬುದ ತಿಳಿಯಬೇಕು, ಆಧ್ಯಾತ್ಮವನರಿದೆಹೆನೆಂಬ ಲಿಂಗಾಂಗಿಗಳು. ಅದು ಅಡಗಿ, ಉಡುಗಿಹ ಭೇದವನರಿದಡೆ, ಅದೇ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಳಿನಪಮಾನ ಆಳ್ದಂಗೆ[0]ದಲ್ಲಿ, ಆಳ್ದನಪಮಾನ ಆಳಿ[0]ಗೆ ಬಂದಲ್ಲಿ, ಉಭಯದ ನೋವು ಒಂದೆಂದು ತಿಳಿದಲ್ಲಿ, ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ? ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ? ನಾನೊಡೆಯ, ತುಡುಗುಣಿಯ ಸವಿತ. [ಅವ]ನೊಡೆಯನಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು ಅದಾವ ಭಾವ? ತಿಳಿದು ಹೇಳಿರಣ್ಣಾ. ಆದಿಯ ತಿಳಿವುದು ಅದಾವ ಆತ್ಮ? ಮಧ್ಯವ ತಿಳಿವುದು ಆದಾವ ಆತ್ಮ? ಅವಸಾನವ ತಿಳಿವುದು ಆದಾವ ಆತ್ಮ? ಅದು ಅರುವೋ, ಮರವೆಯೋ? ಕೆಂಡ ಕೆಟ್ಟಡೆ ಹೊತ್ತುವುದಲ್ಲದೆ, ದೀಪ ನಂದಿದ ಕಿಡಿ ತುಷ ಮಾತ್ರಕ್ಕೆ ಹೊತ್ತಿದುದುಂಟೆ? ಇಂತೀ ಆಧ್ಯಾತ್ಮವ ತಿಳಿದಲ್ಲಿ, ಮೂರುಸ್ಥಲ ಮುಕ್ತ, ಉಭಯವಾರುಸ್ಥಲ ಭರಿತ. ಮಿಕ್ಕಾದ ನೂರೊಂದೆಂದು ಗಾರಾಗಲೇತಕ್ಕೆ? ಪೂರ್ವದಲ್ಲಿ ನಿಂದು, ಉತ್ತರದಲ್ಲಿ ಒಂದೆಂದು, ಸಲೆ ಸಂದಲ್ಲಿ ನಾನಾ ಸ್ಥಲ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆರೂಢನಾದ ಮತ್ತೆ, ರೂಢಿಯ ಅವತಾರವ ಹೊರಲೇಕೊ? [ಕೋಡಗ] ಕಂಡಕಂಡವರಲ್ಲಿ ಹಿಂಡಿನೊಳಗೆ ಹೊಕ್ಕು, ಬಂಡುಗೆಡೆಯಲೇತಕ್ಕೋ? ಈ ಅಂದಗಾರ ಅಣ್ಣಗಳ ಕಂಡು ಭಂಡಾದಿರಯ್ಯಾ. ಅರ್ತಿಗೆಯಾಡುವ ಸತ್ಯವಂತರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಆ ಮಹಾಂತಿನ ಘನವೆಂತೆಂದಡೆ, ಹೇಳಿಹೆ ಕೇಳಿರಣ್ಣಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...