ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಹಾರಾಣುವೆಯ ಬಿಟ್ಟು ಬಂದು, ಮತ್ತೆ ಒಡೆಯರು ಭಕ್ತರಲ್ಲಿ ರಾಣಿವಾಸವೆಂದು ಕಟ್ಟು ಮೆಟ್ಟುಂಟೆ ? ಖಂಡಿತ ಕಾಯವನಂಗೀಕರಿಸಿದ ಭಕ್ತಂಗೆ, ಮತ್ತೆ ಹೆಂಡತಿ ಮಕ್ಕಳು ಬಂಧುಗಳೆಂದು ಜಂಗಮಕ್ಕೆ ತಂದ ದ್ರವ್ಯವನ್ಯರಿಗಿಕ್ಕಿ, ತಾನುಂಡನಾದಡೆ, ತಿಂಗಳು ಸತ್ತ ಹುಳಿತನಾಯ ಕಾಗೆ ತಿಂದು, ಆ ಕಾಗೆಯ ಕೊಂದು ತಿಂದ ಭಂಡಂಗೆ ಕಡೆ. ನಿಃಕಳಂಕ ಮಲ್ಲಿಕಾರ್ಜುನಲಿಂಗವೆ, ನೀವೆ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ಮಾತ ಹೇಳುವ ಹಿರಿಯರೆಲ್ಲರೂ ನೀತಿಗೊಡಲಾದರು. ನಿರ್ಜಾತನ ಮರೆದು, ಭ್ರಾಂತಿಗೆ ಸಿಕ್ಕಿದ ಮತ್ತೆ ಇನ್ನೇತರ ಮಾತು ? ಸೂತ್ರದ ಬೊಂಬೆಯ ನೂಕುವ ಪಾಶದಂತೆ, ಇವರೇತರ ಹಿರಿಯರು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಣ್ಣ ಬೆಕ್ಕು, ನನ್ನಿಯ ಮೂಷಕನ ಮುಟ್ಟಿದುದುಂಟೆ ? ಜಗಗನ್ನರ ಕ್ರೀ, ವಿರಕ್ತಿ ಪ್ರಸನ್ನನ ಮುಟ್ಟಿದುದುಂಟೆ ? ಇದ ಚೆನ್ನಾಗಿ ತಿಳಿದು ನೋಡಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಮಾತು ಮಾತಿನೊಳಗೇಕೆ ಆಜಾತನ ಸಂವಾದ? ಆ ನೀತಿವಂತನೇತರೊಳಗಿದ್ದಹನೆಂಬುದನರಿಯದೆ, ಉದರಘಾತಕಕ್ಕಾಗಿ ಮಹತ್ತುಪದದಾಸೆಯ ಬಯಸಲೇಕೆ? ಇಂತೀ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಮಗು ಸತ್ತು ಕೊರಳು ಕುಗ್ಗದು, ಅಂಗುಳಾರದು, ಬಾಯ ಬರೆ ಹಿಂಗದು. ಇನ್ನಾವ ನೇಣ ಹಾಕುವೆ ಕೊರಳಿಗೆ ? ಒಂದು ನೇಣಿನಲ್ಲಿ ಸಂದೇಹ ಬಿಡದು. ಎರಡು ನೇಣಿನಲ್ಲಿ ಹಿಂಗಿ ಹೋಗದು. ಮೂರು ನೇಣಿನಲ್ಲಿ ಮುಗಿತಾಯವಾಗದು. ಹಲವು ನೇಣಿನಲ್ಲಿ ಕಟ್ಟುವಡೆದ ಕೂಸು, ಅದಕ್ಕೆ ಒಲವರವೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮಣ್ಣಿನ ಗುಣವನರಿದು ಕಳೆದಡೆ, ಗುರು[ಸಿ]ದ್ಧಾತ್ಮಿಯೆಂಬೆ. ಹೆಣ್ಣಿನ ಗುಣವನರಿದು ಕಳೆದಡೆ, ಲಿಂಗಸಿದ್ಧಾತ್ಮಿಯೆಂಬೆ. ಹೊನ್ನಿನ ಗುಣವನರಿದು ಕಳೆದಡೆ, ಜಂಗಮ ಸಿದ್ಧಾತ್ಮಿಯೆಂಬೆ. ಈ ತ್ರಿವಿಧ ಗುಣವನರಿಯದೆ, ವೇಷದ ಬಲುಮೆಯ ತೂತಮಾತುಗರನೊಪ್ಪ, ಅಜಾತರನಲ್ಲದೆ ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಮುಂದರಿದು ಕಂಡೆಹೆನೆಂಬಾಗ, ತನು ಶಿಲೆಯ ನೆಲೆಮನೆಯೆ? ನಡೆದು ಕಂಡೆಹೆನೆಂಬಾಗ, ವಸ್ತು ಹೊಲದ ಹಾದಿಯೆ? ಇಂತೀ ಉಭಯವನರಿದು ಕಾಬುದ ಕಂಡು, ಕೇಳುವಲ್ಲಿ ಕೇಳಿ, ಉಂಡಲ್ಲಿ ಉಂಡು, ಭಾವಿಸಿದಲ್ಲಿ ಭಾವಿಸಿ, ಹೊಳೆಯ ದಾಟಿದ ಮತ್ತೆ ಹರುಗೋಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮಹಾಬಯಲ ಕಡಿದು ಎರಡು ಮಾಡಿಹೆನೆಂದಡೆ ಆ ಬಯಲು ಎರಡಹುದೆ ? ಅಣುರೇಣು ಮಧ್ಯಗುಣಭರಿತ ಅಖಂಡ ಬ್ರಹ್ಮವ ಪ್ರಾದೇಶಿಕ ಪರಿಶ್ಚಿನ್ನವೆಂದು ನುಡಿಯಲುಂಟೆ ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮಧುರವ ಕೂಡಿದ ಜಲವ ತೆಗೆದು ಬ್ಥಿನ್ನವ ಮಾಡಬಹುದೆ ಅಯ್ಯಾ ? ಘಟವ ಹೊದ್ದಿದ ಬೆಳಗ ಪ್ರಕಟಿಸಬಹುದೆ ಅಯ್ಯಾ ? ಇಂತೀ ಉಭಯದ ತೆರದಂತೆ ಪ್ರಾಣಲಿಂಗಿಯ ಸಂಬಂಧದ ಇರವು. ಮಾತಿನ ಮಾಲೆಯಿಂದ, ನೀತಿಯಲ್ಲಿ ಕಾಬ ವಾದದಿಂದ, ಇಂತಿವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಮಹಾಂಧಕಾರದಲ್ಲಿ ಸಂದಿಲ್ಲದೆ, ಹೊಂದಿ ಹೊಂದಿ ಬಾಹಾಗ, ಬಂದುದ ಬಲ್ಲೆಯಾ ? ಈಗ ಮಾಡುವ ಮಾಟದ ಅಂದವ ಬಲ್ಲೆಯಾ ? ನಿಸ್ಸಂಗವ ಮಾಡುವ ಲಿಂಗದ ಪುಂಗವ ಬಲ್ಲೆಯಾ ? ಇದಕ್ಕೆ ಸಾರಂದಗಾರಿಕೆಯ ಮಾ[ತೇಕೆ?] ಅಂದು ನೀ ಬಂದ ಬೆಂಬಳಿಯ ಕಂಬಳಿಯಲ್ಲದೆ ಲಿಂಗ[ವೆ], ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಮದವಳಿಗ ಮದವಳಿಗಿತ್ತಿಯ ಮುಟ್ಟದೆ, ಅತ್ತೆಯ ಭಗವ ಮುಟ್ಟಿ ನೋಡಿ, ಎನ್ನ ಮದವಳಿಗೆಯ ಹೆತ್ತ ಠಾವೆಂದು ಮತ್ತರಿದು ಮುಟ್ಟದೆ, ಭಗವ ನೋಡುತ್ತ ಬಟ್ಟಬಯಲಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಟಕೂಟವೆಂಬ ಹೊಲದಲ್ಲಿ, ಪಾಪರುಣ್ಯವೆಂಬ ಬೀಜವ ಬಿತ್ತೆ, ತಂಗಾಲಕ್ಕೆ ಬೆಳೆದು, ಮಳೆಗಾಲಕ್ಕೆ ತಗ್ಗಿ, ಹೊಲದ ಓವರಿಯಲ್ಲಿ ಜಲಬಿದ್ದು ಹೋಯಿತ್ತು. ಮತ್ತೆ ಹೊಲದ ಹೊಲಬಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೂಗೇಣಗಲದ ಬಾವಿಗೆ, ಆರುಗೇಣಗಲದ ಗಾತ್ರದ ಕುಂಭವ ಬಿಟ್ಟು, ಹುರಿಗೂಡದ ಕಣ್ಣಿಯಲ್ಲಿ ಸೇದುತ್ತಿರಲಾಗಿ, ನೀರು ನೆಲನ ಮುಟ್ಟದೆ,. ಕುಂಭವ ಬಿಟ್ಟು, ಕಣ್ಣಿಯಲ್ಲಿ ತುಂಬಬಂದಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಗೆ.
--------------
ಮೋಳಿಗೆ ಮಾರಯ್ಯ
ಮಧುರದ ಗುಣ ಬದರಿಯಿಂದಳಿಯಿತ್ತು, ಶರಧಿಯ ಗುಣ ಸಾಗಲಾಗಿ ಅಳಿಯಿತ್ತು, ಬೇಟದ ಗುಣ ಕೂಟದಿಂದಳಿಯಿತ್ತು, ಸಾರದ ಗುಣ ಕಠಿನದಿಂದಳಿಯಿತ್ತು, ಕಠಿನದ ಗುಣ ಪಾಕದಿಂದಳಿಯಿತ್ತು, ಕಾಯದ ಗುಣ ಪ್ರಾರಬ್ಧದಿಂದಳಿಯಿತ್ತು, ವಿಷದ ಗುಣ ನಿರ್ವಿಷದಿಂದಳಿಯಿತ್ತೆಂಬುದಜನ ಸಿದ್ಧಾಂತವಾಗಿ ನುಡಿವುತ್ತಿದೆ. ಎನ್ನ ಗುಣ ನಿನ್ನಿಂದಲ್ಲದೆ ಅಳಿಯದಯ್ಯಾ. ಕಾಲಕ್ಕಂಜಿ, ಕರ್ಮಕಂಜಿ, ವಿಧಿವಿಧಾಂತನಿಗಂಜಿ, ಹಿರಿಯರೆನಿಸಿಕೊಂಬ ಗ್ರಾಸವಾಸಿಗಳು ನೀವು ಕೇಳಿರಯ್ಯಾ. ರುದ್ರನ ಪಸರವ ಹೊತ್ತು, ಆಶೆಯೆಂಬ ಕಂಥೆಯಂ ತೊಟ್ಟು, ಜಗದಾಟವೆಂಬ ವೇಷವ ಧರಿಸಿ, ಈಶನ ಶರಣರೆಂದು ಭವಪಾಶದಲ್ಲಿ ತಿರುಗುವ ದೇಶಿಗರ ಕಂಡು ನಾಚಿದೆ. ಭಾಷೆಗೆ ತಪ್ಪದ ನಿರ್ಗುಣ ನಿರಾಶಕ, ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲ, ನಿಲ್ಲು ಮಾಣಿರೊ.
--------------
ಮೋಳಿಗೆ ಮಾರಯ್ಯ
ಮುನ್ನ ಸತ್ತವರ ಕೇಳಿ, ಈಗ ಸತ್ತವರ ಕಂಡು, ನಾನು ಸತ್ತೆಹೆನೆಂಬುದ ತಾನರಿದ ಮತ್ತೆ, ಇದಿರ ನೋವನರಿಯಬೇಡವೆ ? ಇದಿರ ನೋವನರಿದವಂಗೆ ನಿಜಭಾವದಲ್ಲಿ ತಪ್ಪದೆ ಇಪ್ಪುದು, ಅವ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಂಜಿನ ಮಡಿಕೆಯ ನೀರಿನಂತೆ, ಮರೀಚಿಕಾಜಲದ ಹೊಳಹಿನಂತೆ, ಅಂಬುಧಿ ತುಂಬಿದಲ್ಲಿ ಕುಡಿವ ವಡಬಾನಳನಂತೆ, ಕಲ್ಲಿಗೆ ಸಂಭ್ರಮಿಸಿ ಹೂಸಿದ ನವನೀತದಂತೆ, ಮತ್ತವಕ್ಕೆ ಸಂದುಸಂಶಯವುಂಟೆ ? ಕ್ರೀಯಲ್ಲಿದ್ದು ಕ್ರೀಯನೀಂಟಿ, ಭಾವದಲ್ಲಿದ್ದು ಭಾವವನೀಂಟಿ, ಜ್ಞಾನದಲ್ಲಿದ್ದು ಜ್ಞಾನವನೀಂಟಿ ತಾನಾಗಿದ್ದಲ್ಲಿ, ತನ್ನನರಿದು ತನಗೆ ಅನ್ಯಭಿನ್ನವಿಲ್ಲದಲ್ಲಿ, ಸರ್ವಮಯ ಪರಿಪೂರ್ಣನಾದಲ್ಲಿ, ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಹಾಜಗವು ಪ್ರಳಯವಹಲ್ಲಿ, ಮಣ್ಣುಮೊರಡಿ ಕದಡಿದುದಿಲ್ಲ. ಮಹಾಹೇತು ದಹನವಹಲ್ಲಿ, ಹುಲ್ಲುಮೆದೆ ಬೆಂದುದಿಲ್ಲ. ಬಲ್ಲಿದರೆಲ್ಲರು ಕಾದಿ ಮಡಿವಲ್ಲಿ, ಹಂದೆ ಹುಯ್ಯಲಲಿದ್ದು ಅಂಜಿದುದಿಲ್ಲ. ಲಿಂಗವ ಹಿಡಿದವರೆಲ್ಲರೂ ಒಂದ ಮೆಟ್ಟಿ, ಒಂದನರಿದು ಸಂಗವ ಮಾಡುವಾಗ, ಇದರಂದವನೇನೆಂದು ಅರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾತಿನಲ್ಲಿ ಗೆಲ್ಲಸೋಲದಲ್ಲಿ ಅಜಾತನನರಿಯಬಾರದು. ಶಾಸ್ತ್ರದ ಗೀತೆಯ ಗುಣದಲ್ಲಿ, ಪ್ರಖ್ಯಾತನಾದನ ನೀತಿಯ ವೇಷವನರಿಯಬಾರದು. ಉಂಟೆಂಬವನಲ್ಲಿ, ಇಲ್ಲ ಎನಲೇಕೆ ? ಇಲ್ಲ ಎಂಬವನಲ್ಲಿ, ಉಂಟು ಎನಲೇಕೆ ? ಈ ಉಭಯದ ಕಂಟಕವನೀಂಟಿಯಲ್ಲದೆ, ನಿಜವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಳಲ ಹಿಳಿದು ದ್ರವವ ಕಾಣಬಲ್ಲಡೆ, ಇಷ್ಟಲಿಂಗಸಂಬಂಧಿ. ಕಲ್ಲ ಹಿಳಿದು ಮೃದುವ ಕಂಡಲ್ಲಿ, ಭಾವಲಿಂಗಸಂಬಂಧಿ. ನೀರ ಕಡೆದು ಬೆಣ್ಣೆಯ ಮೆದ್ದಲ್ಲಿ, ಪ್ರಾಣಲಿಂಗಸಂಬಂಧಿ. ಇಂತೀ ಇಷ್ಟ ಭಾವ ಪ್ರಾಣ ತ್ರಿವಿಧಗೂಡಿ ಏಕವಾದಲ್ಲಿ, ಪ್ರಾಣಲಿಂಗಿಯೆಂಬ ಭಾವವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಯೆ ತನ್ಮಯವೆಂಬ ಭವಜನ್ಮದಲ್ಲಿ ಬಂದು, ಗೋರಸವನೆ ಉಂಡು ನಾಚದೇಕೆ ಮನ ? ಹೇಸದೇಕೆ ಮನ? ತಿತ್ತಿಯ ಹಿಡಿದ ಮಾದಿಗನಿಗೆ, ಹೊತ್ತಿದ ಮೂಗಿನ ನಾತ ನಿಶ್ಚಯವುಂಟೆ, ಇತ್ತಣವರಿಗಲ್ಲದೆ? ಕಚ್ಚಿದವನಿಗೆ ಸುಖಸಂಸಾರವೆಂಬಡಗುಮಾಯೆ, ಮತ್ತತನದಿಂದ ಕೊಂದಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೂಲದ್ವಾರದ ಮೂಲೆಯಲ್ಲಿ ಏಳುಮಂದಿ ಕಳ್ಳರಡಗಿ, ಬಹಳ ಬಂಗಾರವ ಕದ್ದರು ನೋಡಾ. ಕದ್ದ ಕಳವರಗದೆ ಮತ್ತೊಂದು ಬುದ್ಧಿಯ ನೆನೆದು, ಹೊದ್ದಿ ಸೇರಿದರು ಮನೆಯಾತನ. ಅವನಿರುವ ಹೆಜ್ಜೆಯನರಿದು ಎದ್ದು ಹಿಡಿದ. ಕೈಯೊಳಗಾದರು, ಕಳ್ಳರು ಬೆಳ್ಳರೆಂದು ಹೋದರೆ, ಇದ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೂಕೊರೆಯನ ಕೈಯಲ್ಲಿ ವಾಸನೆಯ ಕುಸುಮವ ಕೊಟ್ಟಡೆ, ಅವನಿಗದು ಲೇಸೋ, ಕಷ್ಟವೋ ? ಭಾವಿಸಿಕೊಳ್ಳಿರಣ್ಣಾ. ಭಕ್ತಿಹೀನಂಗೆ ಸತ್ಯವ ಹೇಳಿದಡೆ, ಅದೆತ್ತಣ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದೆವೆಂದು ಸಂತ್ಯೆಸಿಕೊಂಬಾದ್ಯರು ನೀವು ಕೇಳಿರಯ್ಯಾ. ಭ್ರಮರ ಕೀಟಕವ ತಂದಳಿದು ತನ್ನಂತೆ ಮಾಡಿದುದಿಲ್ಲವೆ ? ಚಕ್ರ ಮೃತ್ತಿಕೆಯ ತಂದು ತನ್ನ ನೆನಹಿನಲ್ಲಿ ತೋರಿದ ಗುಣ ಕುಂಭವ ಮಾಡಿದುದಿಲ್ಲವೆ ? ಕಾರುಕಶಿಲೆಯ ತಂದು ತನ್ನ ಮನಕ್ಕೆ ತೋರಿದ ಸ್ವರೂಪವ ಮಾಡಿದುದಿಲ್ಲವೆ ? ಇಂತಿವೆಲ್ಲವು ಹಿಡಿದವರ ಗುಣಕ್ಕೊಳಗಾದವು. ಇದನರಿಯದೆ ನಾವು ಗುರುವಾದೆವೆಂದು, ಇದಿರು ಶಿಷ್ಯರೆಂದು ಭಾವಿಸಿ, ಸೇವೆಯ ಕೊಂಬ ಗುರು, ಹರಿದ ಹರುಗೋಲನೇರಿ ತೊರೆಯ ಪಾಯ್ವುದಕ್ಕೆ ತೆರನಿಲ್ಲದೆ, ಅದರಡಿಯಲ್ಲಿ ತುಂಬಿ ಸೂಸುವ ತೆರ ನಿಮಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ, ತ್ರಿವಿಧದ ಆಸೆಗೆ ಸಿಕ್ಕಿ ಸಾವ ತೂತರಿಗೆಲ್ಲಿಯದೊ ಲಿಂಗ ? ಅದೇತರ ನಿರ್ವಾಣ? ಏತದ ಕೂನಿಯಂತೆ, ರಾಟಾಳದಂತೆ, ಭವಪಾಶದಲ್ಲಿ ಬಿದ್ದು ಘಾಸಿಯಾದ ಮತ್ತೆ ನಿನಗಿನ್ನೇತರ ಭಾಷೆಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...