ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಸ್ಥಲವೆಂದು ಬಂದೆ, ಆಚಾರ್ಯನಾಗಿ. ಲಿಂಗಸ್ಥಲವೆಂದು ಬಂದೆ, ಆರೋಹ ಅವರೋಹಂಗಳ ಪರಿಹರಿಸಿಹೆನೆಂದು. ಶರಣನಾಗಿ ಬಂದೆ, ಭಕ್ತಿಜ್ಞಾನ ವೈರಾಗ್ಯ ತ್ರಿವಿಧದ ಗೊತ್ತ ಮುಕ್ತಿಯ ಮಾಡಿಹೆನೆಂದು. ದುತ್ತೂರಕ್ಕೆ, ಕಲ್ಪತರುವಿಂಗೆ ಮತ್ತಾವ ವೃಕ್ಷಫಲಾದಿಗಳಿಗೆ ಅಪ್ಪುವೊಂದು, ಹಲವು ವೃಕ್ಷಂಗಳು ತಮ್ಮ ತಮ್ಮ ಸಶ್ಚಿತ್ತದ ಸವಿಯಾದಂತೆ, ನಾನಾ ಸ್ಥಲಕ್ಕೆ ದೇವನೊಬ್ಬನೆ. ಊರೊಳಗಾದಲ್ಲಿ ಅರಸು ಆಳಿನೊಳಗಾದಂತೆ ಆದೆಯಲ್ಲಾ. ಕ್ರೀಗೆ ತುತ್ತಾಗಿ ಸಿಕ್ಕಿದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು. ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು. ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು. ಗುರುವಿನ ಅನುವನರಿಯನಾಗಿ ಗುರು ಸಂಬಂದ್ಥಿಯಲ್ಲ. ಲಿಂಗದ ನಿಲವನರಿಯನಾಗಿ ಲಿಂಗಸಂಬಂದ್ಥಿಯಲ್ಲ. ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂದ್ಥಿಯಲ್ಲ. ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು, ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ. ಆ ಶರಣ ಉರಿಯುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ. ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ, ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು. ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ, ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ, ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ, ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ. ಲಿಂಗವೆಂಬೆನೆ, ಸಂಸಾರಕ್ಕೆ ಅಂಗವ ಕೊಟ್ಟ. ಜಂಗಮವೆಂಬೆನೆ, ಕಂಡಕಂಡವರ ಅಂಗಳವ ಹೊಕ್ಕು, ಬಂಧನಕ್ಕೊಳಗಾದ. ಎನಗಿದರಂದವಾವುದೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಾಜಿನ ಗೋಡೆಯ ಸುಣ್ಣ ವೇದ್ಥಿಸಬಲ್ಲುದೆ ? ನಾಗರಹೆಡೆಯ ಚಿಕ್ಕೆರ ಬಲ್ಲುದೆ ? ಉರಿಯ ಪುತ್ಥಳಿಯ ಅರಗು ಮುಟ್ಟಿ ಅಪ್ಪಬಲ್ಲುದೆ ? ಲಿಂಗಮಯ ಸಿರಿವಂತರ ಅಂಗವ ಸಂಗಿಸಬಲ್ಲವೆ ಇಂದ್ರಿಯಂಗಳು, ಇಂತೀ ಗುಣವ ಹಿಂಗಿ, ಲಿಂಗವೆ ತಾನಾಗಿಪ್ಪ ನಿಃಕಳಂಕ ಮಲ್ಲಿಕಾರ್ಜುನನ ?
--------------
ಮೋಳಿಗೆ ಮಾರಯ್ಯ
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ. ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು. ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು. ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು. ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು. ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು. ಕಂಡಿತ್ತು ಬೆಂಕಿಯ ಬೆಳಗ, ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು. ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗರಳವಿಲ್ಲದ ಉರಗಂಗೆ ಹಲಬರಂಜಿದರುಂಟೆ ? ಕೈದಿಲ್ಲದ ಭಟ ಗರ್ಜಿಸಿದಡೆ ಅಂಜಿದರುಂಟೆ ? ಇಷ್ಟ ಬಾಹ್ಯ ದೃಷ್ಟ ಮಾತನಾಡಿದಡೆ, ನೆಟ್ಟನೆ ಪ್ರಾಣಲಿಂಗಿಯಪ್ಪನೆ ? ಅದು ನಿಶ್ಚಯವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವನರಿಯದ ಕಾರಣ ತನು ಸವೆಯಬೇಕೆಂಬರು. ಲಿಂಗವನರಿಯದ ಕಾರಣ ಮನ ಸವೆಯಬೇಕೆಂಬರು. ಜಂಗಮವನರಿಯದ ಕಾರಣ ಧನ ಸವೆಯಬೇಕೆಂಬರು. ಇಂತೀ ತ್ರಿವಿಧವನರಿಯದ ಕಾರಣ ಮಾಟಕೂಟಕ್ಕೆ ಮನೆಗಟ್ಟಿ ಮಾಡುತ್ತಿರ್ದರಯ್ಯಾ ಮಹಾಗಣಂಗಳು, ತಾವು ಸ್ವಇಚ್ಫಾಪರರಲ್ಲದೆ. ಬ್ರಹ್ಮನ ಹಂಗಿಂದ ಬಂದ ಗುರುವನರಿಯರಾಗಿ, ವಿಷ್ಣುವಿನ ಹಂಗಿಂದ ಬಂದ ಲಿಂಗವನರಿಯರಾಗಿ, ರುದ್ರನ ಹಂಗಿಂದ ಬಂದ ಜಂಗಮವನರಿಯರಾಗಿ, ಅಹಂಕಾರವ ಮರೆದಲ್ಲಿಯೆ ಗುರುವನರಿದವ, ಚಿತ್ತದ ಪ್ರಕೃತಿಯ ಹರಿದಲ್ಲಿಯೆ ಲಿಂಗವನರಿದವ, ಮಾಟಕೂಟದ ಅಲಸಿಕೆಯ ಮರೆದಾಗವೆ ಜಂಗಮವನರಿದವ. ಇಂತೀ ತ್ರಿವಿಧಸ್ಥಲನಿರತಂಗಲ್ಲದೆ ವರ್ಮವಿಲ್ಲಾ ಎಂದೆ. ಖ್ಯಾತಿ ಲಾಭಕ್ಕೆ ಮಾಡುವಾತನ ಭಕ್ತಿ, ಅಗ್ನಿಯಲ್ಲಿ ಬಿದ್ದ ಬಣ್ಣವನರಸುವಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಿಲ್ಲವೆಂದೆ, ಶಿಕ್ಷೆಯೊಳಗಣ ನಿಳಯವನರಿಯನಾಗಿ. ಲಿಂಗವಿಲ್ಲವೆಂದೆ, ಜಂಗಮದ ತ್ರಿಕರಣವನರಿಯನಾಗಿ. ಜಂಗಮವಿಲ್ಲವೆಂದೆ, ಗುರುವಿನ ಅನಾದಿಸಂಸಿದ್ಧಿಯನರಿಯನಾಗಿ. ಈ ತ್ರಿವಿಧವಿಲ್ಲವೆಂದೆ, ತನ್ನ ತಾನರಿಯನಾಗಿ. ತನ್ನ ತಾನರಿದಲ್ಲಿಯೆ, ನಿಃಕಳಂಕ ಮಲ್ಲಿಕಾರ್ಜುನನ ಒಡಲುಗೊಂಡು, ಕುರುಹಾದ ಭೇದ.
--------------
ಮೋಳಿಗೆ ಮಾರಯ್ಯ
ಗುರುವೆಂದು ಪ್ರಮಾಣಿಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕು. ಲಿಂಗವೆಂದು ಪ್ರಮಾಣಿಸಿದಲ್ಲಿ, ಸಂದೇಹವಿಲ್ಲದಿರಬೇಕು. ಜಂಗಮವೆಂದು ಪ್ರಮಾಣಿಸಿದಲ್ಲಿ, ತ್ರಿವಿಧದ ಹಂಗಿಲ್ಲದಿರಬೇಕು. ಇದರಂದ ಒಂದೂ ಇಲ್ಲದೆ ಭಕ್ತರಾದೆವೆಂಬ ಮಿಟ್ಟೆಯ ಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಇಂತಿವ ಕೊಟ್ಟು ಮುಕ್ತಿಯ ಗಳಿಸಿಕೊಂಡೆಹೆನೆಂಬ ಮುಯ್ಯ ಬಂಧುಗಳಂತೆ, ಬಡ್ಡಿಯಾಸೆಗೆ ಕೊಟ್ಟ ಲುಬ್ಧನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ, ಜಂಗಮಸ್ಥಲ ಪ್ರಸಾದಿಯ ವಂಶಿಕ. ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧ ಅನಾದಿಯ ಸೋಂಕು. ಅವು ಪೂರ್ವಗತಿಗೆ ಬಂದು, ಉತ್ತರಗತಿಯನೆಯ್ದಿಸುವುದಕ್ಕೆ ಗೊತ್ತಾಗಿ, ನಿತ್ಯ ಅನಿತ್ಯವೆಂಬ ಉಭಯದ ಹೆಚ್ಚುಕುಂದ ತಿಳಿವುದಕ್ಕೆ ದೃಷ್ಟವ ಕೊಟ್ಟೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುತ್ತಿಗೆಕಾರ ನುಡಿದಡೆ, ಅದ ಒಪ್ಪವಿಡಲರಿಯರು. ಹೊತ್ತುಹೊರಗೆಯವರು ನುಡಿದಡೆ, ತಪ್ಪನೊಪ್ಪವಿಡಬೇಕು. ಮುಂದಣ ತಪ್ಪಿಗೆ ಈಡಾದ ಕಾರಣ, ಇದು ನಿಶ್ಚಯವೆಂದು ತಿಳಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಾದಡೆ ಕಾಲಿಲ್ಲದಿರಬೇಕು. ಲಿಂಗವಾದಡೆ ಬಾಯಿಲ್ಲದಿರಬೇಕು. ಜಂಗಮವಾದಡೆ ಅಂಗವಿಲ್ಲದಿರಬೇಕು. ಈ ಮೂವರು ಮೂವರ ಹಂಗಿಗರಾದರು. ಏತರ ಹಂಗಿಲ್ಲದಾತ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಾಳಿಯಲೆದ್ದ ಧೂಳು, ತೃಣ ಎಲೆ ಮೊದಲಾದ ಬಹುವ್ಯಾಪಾರ, ಗಾಳಿಯ ಮುಟ್ಟಿದುದಿಲ್ಲ. ಶರಣನ ಸರ್ವೇಂದ್ರಿಯ, ಗಾಳಿಯ ಧೂಳಿನ ಪರಿಯಂತೆ, ಪಳುಕದ ಭಾಂಡ ಬಹುವರ್ಣದಂತೆ, ಮುಟ್ಟಿಯೂ ಮುಟ್ಟದಿರ್ಪ ಮಹಾಶರಣಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಾಣದಲ್ಲಿ ಸಿಲುಕಿದ ಎಳ್ಳು, ನೋಯದೆ ಎಣ್ಣೆಯ ಬಿಡುವುದೆ ? ಕಾಯದಲ್ಲಿ ಸಿಲುಕಿದ ಜೀವ, ನೋಯದೆ ಕರಣಂಗಳ ಬಿಡುವನೆ ? ಭಾವದಲ್ಲಿ ಸಿಲುಕಿದ ಭ್ರಮೆ, ನೋಯದೆ ವಿಕಾರವ ಬಿಡುವುದೆ ? ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವೆಂದಡೆ ತನು, ಲಿಂಗವೆಂದಡೆ ಆತ್ಮ, ಜಂಗಮವೆಂದಡೆ ಆತ್ಮನರಿವು. ತ್ರಿವಿಧದ ವ್ಯಾಪ್ತಿಯ ಕಳೆದುಳಿದ ಸಂಬಂಧವದು ನೀನೆ, ಅನುಪಮಲಿಂಗ, ನಿರವಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರು ಭಕ್ತನಂಗ, ಲಿಂಗ ಮಹೇಶ್ವರನಂಗ, ಜಂಗಮ ಪ್ರಸಾದಿಯಂಗ. ಇಂತೀ ತ್ರಿವಿಧಸ್ಥಲಂಗಳಲ್ಲಿ ತ್ರಿವಿಧವಡಗಿ, ತ್ರಿವಿಧ ಇದಿರಿಟ್ಟು, ತ್ರಿವಿಧ ಐಕ್ಯವಾಗಿ, ಬೆಳಗಿಂಗೆ ಕಳೆದೋರಿ, ಕಳೆಗೆ ಕಾಂತಿ ಪ್ರಜ್ವಲಿಸುವಂತೆ, ಅರ್ಕನ ಕಿರಣದಂತೆ, ಸಾಕಾರ ರೂಪಿಂಗೆ ಉಭಯಚಕ್ಷುವಾಗಿ, ಬೆಳಗಿನಿಂದ ಬೆಳಗ ಕಂಡಂತೆ, ಸ್ಥಲವ ನೆಮ್ಮಿ, ಸ್ಥಲದಲ್ಲಿ ಒಲವರವಿಲ್ಲದೆ ನೋಡಲಿಕ್ಕೆ, ಸ್ಥಲಭರಿತಮೆಲ್ಲಿಯೂ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುಣವ ಕಂಡು ನೆನೆದೆಹೆನೆಂದಡೆ ಆ ನೆನಹು ನಿನ್ನ ಹಂಗು. ಅಂಗವ ಬಿಟ್ಟು ಕಂಡೆಹೆನೆಂದಡೆ, ಆ ದೇಹ ಕರಣಂಗಳ ಹಂಗು. ಅರಿಯಬಾರದು, ಅರಿಯದೆ ಇರಬಾರದು. ಈ ಉಭಯದ ಭೇದವ ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವನರಿದವಂಗೆ ಗುರುವಿಲ್ಲ, ಲಿಂಗವನರಿದವಂಗೆ ಲಿಂಗವಿಲ್ಲ. ಜಂಗಮವನರಿದವಂಗೆ ಜಂಗಮವಿಲ್ಲ, ಪ್ರಸಾದವನರಿದವಂಗೆ ಪ್ರಸಾದವಿಲ್ಲ, ಪಾದೋದಕವನರಿದವಂಗೆ ಪಾದೋದಕವಿಲ್ಲ. ಇವೆಲ್ಲವನರಿದು ಮರೆದವಂಗೆ, ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ, ಎಲ್ಲಿಯೂ ಇಲ್ಲ. ಮತ್ತೆ ಎಲ್ಲಾ ಎಡೆಯಲ್ಲಿಯೂ ತಾನೆ. ಲೀಲೆಗೆ ಹೊರಗೆಂದಡೆ ಕೇಡಿಲ್ಲದವನೆ, ನಿರ್ಭವ ನೀ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಲಿಂಗದ ಕುರುವಹುದಕ್ಕೆ ಕೆಟ್ಟ ದನವೆ ? ಅರಸಿಕೊಂಬುದಕ್ಕೆ ಓಡಿಹೋದ ತೊತ್ತೆ ? ದೃಷ್ಟದಲ್ಲಿ ಕಾಬುದಕ್ಕೆ ನೆಟ್ಟನೆ ಗೊತ್ತೆ ? ಈ ಸಂದೇಹದ ಅಚ್ಚುಗದಲ್ಲಿ ಬಿದ್ದು ಕೆಟ್ಟೆನಯ್ಯಾ. ಇದಕಿನ್ನೇನು ದೃಷ್ಟ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವ ಭಾವಿಸಿದಲ್ಲಿ ಲಿಂಗವ ಮರೆಯಬೇಕು. ಲಿಂಗವ ಭಾವಿಸಿದಲ್ಲಿ ಜಂಗಮವ ಮರೆಯಬೇಕು. ಜಂಗಮವ ಭಾವಿಸಿದಲ್ಲಿ ಪ್ರಸಾದವ ಮರೆಯಬೇಕು. ಪ್ರಸಾದವ ಭಾವಿಸಿದಲ್ಲಿ ಪಾದೋದಕವ ಮರೆಯಬೇಕು. ಪಾದೋದಕವ ಭಾವಿಸಿದಲ್ಲಿ ಪ್ರಸನ್ನವನರಿಯಬೇಕು. ಅರಿದರಿದು [ಮರೆವುದು] ಮತ್ತೆ ಎಡೆಯ ಕುರುಹಲ್ಲ. [ಬೇಡುವ]ವರ ಬಯಕೆ. ಎನ್ನೊಡೆಯನೆ ಒಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಶಿಷ್ಯ ಸಂಬಂಧ, ಕಮಠನ ಶಿಶುವಿನ ಕೂರ್ಮೆಯಂತಿರಬೇಕು. ಗುರುಶಿಷ್ಯ ಸಂಬಂಧ, ಬಿತ್ತಳಿದ ಕಾರ್ಪಾಸದ ಪಾವಕನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಪಯದ ಅಪ್ಪುವಿನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಲೆಕ್ಕಣಿಕೆಯೊಳಡಗಿದ ಸುರೇಖೆಯಂತಿರಬೇಕು. ಹೀಂಗಲ್ಲದೆ ಹಸ್ತಮಸ್ತಕಸಂಯೋಗವ ಮಾಡಿದ ಗುರುವಿನ ಇರವು. ಒಡೆದ ಗಡಿಗೆಯಲ್ಲಿ ಸುಧೆಯ ತುಂಬಿ ಅದಿರಬೇಕೆಂದಡೆ, ಪಡಿಗೆ ತೆರಹಿಲ್ಲ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಿಂಗೆ ತನುವ ಕೊಟ್ಟಾಗವೆ ಬ್ರಹ್ಮನ ಬಲೆ. ಲಿಂಗಕ್ಕೆ ಮನವ ಕೊಟ್ಟಾಗವೆ ವಿಷ್ಣುವಿನ ಬಲೆ. ಜಂಗಮಕ್ಕೆ ಧನವ ಕೊಟ್ಟಾಗವೆ ರುದ್ರನ ಬಲೆ. ಈ ಇದಿರಿಟ್ಟ ಭೇದ, ಸ್ಥೂಲ ಸೂಕ್ಷ್ಮ ಕಾರಣ ಮೂರು ಮೂರಕ್ಕೊಡಲಾದ ಮತ್ತೆ, ಇದ ಸಾರಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...