ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ, ತಾಯಿ ಅಳಿದು, ಶಿಶು ಉಳಿಯಿತ್ತು. ಉಳಿದುಳುಮೆಯ ತಿಳಿಯಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಡಗೂಡ ಬಲ್ಲವ.
--------------
ಮೋಳಿಗೆ ಮಾರಯ್ಯ
ಶತಭಿನ್ನಪತ್ರದಲ್ಲಿ ತೋರುವ ಪ್ರಕಾಶ, ಒಂದೋ, ಹಲವೋ ಉಂಟೆಂಬುದ ತಿಳಿ. ಜಲಘಟದಲ್ಲಿ ತೋರುವ ಪ್ರತಿಬಿಂಬ, ಒಂದೋ, ಹಲವೋ ಉಂಟೆಂಬುದ ತಿಳಿ. ಮುಕುರದಲ್ಲಿ ಹಲವು ನೋಡಿದಡೆ, ನುಂಗಿದ ಮುಕುರ ಒಂದೋ, ಹಲವೋ ಉಂಟೆಂಬುದ ತಿಳಿ. ಅದರಂದವ ಬಲ್ಲಡೆ ಲಿಂಗದ ಸಂದ ಬಲ್ಲರೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶರೀರದಲ್ಲಿ ಷಡಾಧಾರಚಕ್ರವುಂಟೆಂಬ ಜಡೆಗಡಗಿದಲೆಯ, ಬಿಡುಗುರುಳ ಅಣ್ಣಗಳು ನೀವು ಕೇಳಿರೊ. ಬ್ರಹ್ಮಚಕ್ರದಲ್ಲಿ ಹುಟ್ಟಿ, ವಿಷ್ಣುಚಕ್ರದಲ್ಲಿ ಬೆಳೆದು, ರುದ್ರಚಕ್ರದಲ್ಲಿ ಸಾವುದನರಿಯದೆ, ಬಣ್ಣಬಚ್ಚನೆಯ ಮಾತ ಕಲಿತು, ಹೊನ್ನು ಹೆಣ್ಣು ಮಣ್ಣಿಗಾಗಿ ಅನ್ನವನಿಕ್ಕುವರ ಪ್ರಸನ್ನವ ಹಡೆಯಬಂದ ಗನ್ನಗಾರರಿಗೇಕೆ ಅರಿವಿನ ಸುದ್ದಿ ? ಆನಂದಕ್ಕತಿದೂರ, ಸ್ವಾನುಭಾವಾತ್ಮಕನೆ ಜಾಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶುಕ್ತಿಕರಂಡದಲ್ಲಿ ಬಿದ್ದ ಅಪ್ಪು, ಶುಕ್ತಿಯ ಭೇದವೋ? ಕರಂಡದ ಭೇದವೋ? ಅಪ್ಪುವಿನ ಭೇದವೋ? ಕಾಯದಲ್ಲಿದ್ದ ಭಾವ, ಭಾವದಲ್ಲಿದ್ದ ಜೀವ, ಜೀವದಿಂದ ಭಾವವಾಯಿತ್ತೋ, ಭಾವದಿಂದ ಕಾಯವಾಯಿತ್ತೋ? ಪಾಷಾಣವ ಕೂಡಿದ್ದ ರತಿ, ರತಿಯ ಕೂಡಿದ್ದ ಬೆಳಗು, ಬೆಳಗು ರತಿಯಿಂದಲಾಯಿತ್ತೋ, ರತಿ ಶಿಲೆಯಿಂದಲಾಯಿತ್ತೋ? ಇಂತೀ ಅಂಗ ತ್ರಿವಿಧ, ಇಂತೀ ಭಾವ ತ್ರಿವಿಧ, ಇಂತಿ ಜೀವ ತ್ರಿವಿಧ. ಇಂತೀ ತ್ರಿವಿಧ ಸ್ಥಲಂಗಳಲ್ಲಿ ಇಂತೀ ತ್ರಿವಿಧ ಸೂಕ್ಷ್ಮಂಗಳಲ್ಲಿ, ಇಂತೀ ತ್ರಿವಿಧ ಕಾರಣಂಗಳಲ್ಲಿ, ಅಳಿವ ಉಳಿವ ಉಭಯವನರಿತು ನೆನೆವುದು, ನೆನೆಯಿಸಿಕೊಂಬ ಉಭಯವನರಿತು, ಉಭಯ ಒಂದಾದಲ್ಲಿ ಪ್ರಾಣಲಿಂಗ. ಉಭಯಸಂಬಂಧ ಉಭಯ ಲೇಪವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶಿಶುವಿಂಗೆ ಗುಮ್ಮನಲ್ಲದೆ ದೆಶೆಯ ಬಲ್ಲರಿಗುಂಟೆ, ಭೀತಿ ? ನಿನ್ನ ಎಸಕದೊಲುಮೆ ನಟಿಸಿದವಂಗೆ ಉಂಟೆ ? ಹುಸಿ, ಕಳವು, ಪಾರದ್ವಾರ ಇಂತೀ ಪಿಸಿತವ ಹರಿಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶರೀರದ ನೆಲೆಮನೆಯಲ್ಲಿರ್ದು, ನೆರೆವ ವಸ್ತುವನರಿವುದಕ್ಕೆ ಕುರುಹಾವುದು? ಸಂಚಾರದ ಪ್ರಕೃತಿಯ ನಿಳಯದಲ್ಲಿರ್ದು, ನೆರೆ ಸುಳುಹಿಗೆ ಒಳಗಲ್ಲದವನನರಿವನರಿವ ಪರಿಯಿನ್ನೆಂತೊ ? ಅರಿದೆನೆಂಬುದು ಅದು ತಾ ಅರಿವೋ, ಮರವೆಯ ತೆರನೋ ? ಇದು ಎನಗರಿಯಬಾರದು. ಅರಿವೆಡೆಗೆ ಕುರುಹ ಹೇಳಾ, ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶೀಲ ಶೀಲವೆಂತೆಂಬಿರಯ್ಯಾ, ಶೀಲದ ನೆಲೆಯ ಬಲ್ಲರೆ ಹೇಳಿರೊ, ಅರಿಯದಿರ್ದಡೆ ಕೇಳಿರೊ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ, ಆಮಿಷ ಏಳನೆಯ ಭವಿ. ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು, ಲಿಂಗವಿಲ್ಲದವರ ಭವಿ ಭವಿ ಎಂಬರು. ತಮ್ಮಂತರಂಗದಲ್ಲಿರ್ದ ಲಿಂಗಾಂಗದ ಸುದ್ದಿಯನರಿದೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಗಳೆಂದು ಜಲಕ್ಕೆ ಕನ್ನವನಿಕ್ಕಿ, ಉದಕವ ತಂದು, ಲಿಂಗಕ್ಕೆ ಮಜ್ಜನಕ್ಕೆರೆವ ಪಗಲುಗಳ್ಳರಿಗೆ ಮೆಚ್ಚುವನೇ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಶ್ವಾನಜ್ಞಾನಿಗಳೆಲ್ಲ ಸಮ್ಯಕ್‍ಜ್ಞಾನವ ಬಲ್ಲರೆ ? ಲೌಕಿಕದ ಧ್ಯಾನಮೌನಿಗಳೆಲ್ಲ ಸ್ವಾನುಭಾವಿಗಳಹರೆ ? ಇದರ ಭಾವವನರಿಯದೆ, ಭ್ರಮೆಯೊಳಗೀ ವಸ್ತುವಿನ ಠಾವನರಿಯದೆ ವಾಯವಾಗಿ, ಇಂತೀ ಗಾವಿಲರಿಗೆಲ್ಲಿಯದೊ ಸಮ್ಯಕ್‍ಜ್ಞಾನದ ಹೊಲಬು ? ಇಂತಿವ ನೀನೆ ಬಲ್ಲೆ, ನಾನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ ಲಿಂಗಾರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗಲಿಂಗಿಗೆ ಬೇರೆ ಐದುಸ್ಥಾನದಲ್ಲಿ ಅರ್ಪಿತವ ಮಾಡಬೇಕೆಂಬ ಜಡಸಂಕಲ್ಪವಿಲ್ಲ. ಇಷ್ಟಕ್ಕೂ ಭಾವಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಯ್ಯಾ. ಪರುಷದ ರಸ ಕೈಯಲ್ಲಿರ್ದು ಹೇಮವನರಸಿ ತಿರುಗುವವನಂತೆ, ಖೇಚರತ್ವದಲ್ಲಿ ಹೋಹ ಸಾಮಥ್ರ್ಯವಿರ್ದು, ಅಂಬಿಗನ ಹಂಗನರಸುವ ಅವಿಚಾರಿಯಂತೆ, ನಿತ್ಯತೃಪ್ತನಾಗಿರ್ದು ಅಂಬಲಿಯ ಬಯಸುವ ಕಾಳ್ವಿಚಾರಿಯಂತೆ, ಸ್ವಯಂಜ್ಯೋತಿ ಪ್ರಕಾಶದೊಳಗಿರ್ದು, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ, ವಾಯುಗಮನವುಳ್ಳಾತ ತೇಜಿಯನರಸುವಂತೆ, ಅಮೃತ ಸೇವನೆಯ ಮಾಡುವಾತ ಆಕಳನರಸಿ ಬಳಲುವಂತೆ, ತಾ ಬೈಚಿಟ್ಟ ನಿಕ್ಷೇಪವ ಹೊಲಬುದಪ್ಪಿ ಅರಸುವನಂತೆ ಆಗಬೇಡ. ಇದು ಕಾರಣ, ವೇದಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ತೃಪ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ ಭ್ರಾಂತು ಹರಿದು, ಬೆಳಗಿನೊಳಗಿಪ್ಪ ಜ್ವಲಿತವಂ ಕಡಿದು, ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ