ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಘೋರಕ್ಕಾರದೆ ಭವದಾಳಿಯ ತೊಡೆದೆನಯ್ಯಾ. ಬಡವನೆಂದು ನಿಮ್ಮವರು ನಿಧಾನವನೀವರಯ್ಯಾ. ನಾನು ಬಡವನಾದಡೆ, ನೀ ಬಡವನೆ ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಭಕ್ತನಾದ ಮತ್ತೆ ಬಂಧಗಳ ಬಿಡಬೇಕು. ವಿರಕ್ತನಾದ ಮತ್ತೆ ಧರಿತ್ರಿಯಲ್ಲಿ ಸುಖಕ್ಕೆ ಸಿಕ್ಕಿ ಮತ್ತನಾಗದಿರಬೇಕು. ಇಕ್ಕುವರ ಬಾಗಿಲ ಕಾಯದೆ, ಸುಚಿತ್ತದಿಂದ ಬಂದ ಬ್ಥಿಕ್ಷವ ಕೊಂಡು, ಅನಿತ್ಯವ ಮರೆದು, ಸತ್ತುಚಿತ್ತಾನಂದ ಭಕ್ತ ಜಂಗಮಕ್ಕೆ ನಿತ್ಯ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು ನಾಲ್ಕರ ಮುಕ್ತಿಯ ಭಕ್ತರು. ನಿಷ್ಠೆವಂತರಿಗೆ ಇದೇ ಭಕ್ತಿ, ಅನಿತ್ಯವನರಿದ ನಿಶ್ಚಟಂಗೆ ಮಿಥ್ಯವನಾರಾದಡೂ ನುಡಿಯಲಿ, ಸತ್ಯವಿದ್ದ ಮತ್ತೆ. ಕಲ್ಲಿನ ಮನೆಯಲ್ಲಿದ್ದವಂಗೆ ದಳ್ಳುರಿ ಬಿದ್ದಡೇನು ? ಇವರೆಲ್ಲರ ಬಲ್ಲತನಕ್ಕಂಜಿ ನಾನೊಳ್ಳಿಹನೆಂದಡೆ, ಆತನು ಎಲ್ಲಿಗೆ ಯೋಗ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ, ಜ್ಞಾನಸೂತ್ರ ಪ್ರಭುದೇವಂಗೆ. ಇಂತೀ ಸ್ಥೂಲತನು ಬಸವಣ್ಣಂಗೆ, ಸೂಕ್ಷ್ಮತನು ಚೆನ್ನಬಸವಣ್ಣಂಗೆ, ಕಾರಣತನು ಪ್ರಭುದೇವಂಗೆ. ಕಾಯ ಬಸವಣ್ಣನಾಗಿ, ಜೀವ ಚೆನ್ನಬಸವಣ್ಣನಾಗಿ, ಉಭಯದರಿವು ಪ್ರಭುದೇವರಾಗಿ. ಇಂತೀ ತ್ರಿವಿಧ ಪ್ರಸಾದ ಎನಗೆ ನಿಂದು, ಎನ್ನ ಜನ್ಮವಾಸನೆ ಬಿಡದಿದೆ ನೋಡಾ. ಈ ವಾಸನೆ ನಿಃಕಳಂಕ ಮಲ್ಲಿಕಾರ್ಜುನ ನಷ್ಟವಾಗಿಯಲ್ಲದೆ, ಎನ್ನ ಭಾವ ನಷ್ಟವಿಲ್ಲ.
--------------
ಮೋಳಿಗೆ ಮಾರಯ್ಯ
ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮøತಿ ತತ್ವದಿಂದ ಇದಿರಿಗೆ ಬೋದ್ಥಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ? ನುಡಿದಂತೆ ನಡೆದು, ನಡೆದಂತೆ ನುಡಿದು, ನಡೆನುಡಿಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು. ಗೆಲ್ಲಸೋಲಕ್ಕೆ ಹೋರಿ ಬಲ್ಲಿದರಾದೆವೆಂದು ತನ್ನಲ್ಲಿದ್ದ ಹುಸಿಯ ಹುಸಿವ ಕಲ್ಲೆದೆಯವನ ನೋಡಾ. ಇವರೆಲ್ಲರ ಬಲ್ಲತನವ ಕಂಡು ನಿಲ್ಲದೆ ಹೋದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗಬ್ರ್ಥೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಾಳಾಂಬಕ ಬಲೆಗೆ ಸಿಲ್ಕಿದ, ಲೀಲಾಂಗ ಕಾಲಕ್ಕೊಳಗಾದ. ಪುಷ್ಪೋದ್ಭವ ಹಿಡಿಗಟ್ಟಿಗೀಡಾದ. ಇವರ ಮೂವರ ದೇವರೆಂದಾರಾದ್ಥಿಸಿದಡೆ, ಜೇನಮಡಕೆಯಲ್ಲಿ ಸಿಕ್ಕಿದ ನೊಣದಂತಾದಿರಯ್ಯಾ. ಅಂಟಿಗೆ ಸಿಕ್ಕಿದ ವಿಹಂಗನಂತಾದಿರಣ್ಣಾ. ಅಂಥವರ ಕಂಡು ಎನಗಂಜಿಕೆಯಾಯಿತ್ತಯ್ಯಾ. ಇವರ ಮೂವರ ಬಿಡಲಾರದೆ, ಭಾಳಾಂಬಕನ ಭಾಳದಲ್ಲಿ ಧರಿಸಿದೆ. ವಿಷ್ಣುವಿನ ಅಕ್ಷಿಯಲ್ಲಿ ಧರಿಸಿದೆ, ಬ್ರಹ್ಮನ ಬಾಯಲ್ಲಿ ಧರಿಸಿದೆ. ಇವರ ಮೂವರ ಕೊಂದ ಭೇದ. ಲಲಾಟದಲ್ಲಿದ್ದವನ ತಲೆಯ ಹೊಯ್ದೆ. ಅಕ್ಷಿಯಲ್ಲಿದ್ದವನ ಕುಕ್ಷಿಯಂ ಕುಕ್ಕಿದೆ. ಬಾಯಲ್ಲಿದ್ದವನ ಬಸುರ ಒಡೆಯ ಹೊಯ್ದೆ. ಹೊಯ್ಯಲಾಗಿ ಅವರು ಬದುಕಿದರು, ನಾ ಸತ್ತೆ. ಸತ್ತವನಿಗೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವುಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.
--------------
ಮೋಳಿಗೆ ಮಾರಯ್ಯ
ಭಕ್ತಿ ಒಳಗಾದ ಕ್ರೀ, ಕ್ರೀಯೊಳಗಾದ ಆಚಾರ, ಆಚಾರದೊಳಗಾದ ಅನುವು, ಅನುವಿನೊಳಗಾದ ಭಾವಲಿಂಗವನರಿದು, ಉಭಯದ ಬೆಸುಗೆಯ ನಿಶ್ಚಯಿಸಿದಲ್ಲಿ, ಪ್ರಾಣಲಿಂಗ ಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಇಂತೀ ತ್ರಿವಿಧವನರಿತು, ಆ ತ್ರಿವಿಧಸ್ಥಾನಂಗಳಲ್ಲಿ ಕಾಯ ಜೀವ ಭಾವ ಈ ತ್ರಿವಿಧವನರಿತು, ಕಾಯದ ಕರ್ಮವ ಕಳೆದು, ಜೀವದ ಭವವ ಹಿಂಗಿಸಿ, ಭಾವದ ಪ್ರಕೃತಿಯ ನಂದಿಸಿ, ಇಷ್ಟಲಿಂಗವ ದೃಷ್ಟದ ತನುವಿಂಗೆ ಪ್ರಮಾಣಿಸುವಲ್ಲಿ, ಅದು ಗುರುಸ್ಥಲಭಾವ, ಅಲ್ಲಿ ಮೂರುಸ್ಥಲ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಯುಳ್ಳನ್ನಕ್ಕ ಇಷ್ಟಲಿಂಗದ ಹಂಗು ಬೇಕು. ಆತ್ಮನುಳ್ಳನ್ನಕ್ಕ ಅರಿವೆಂಬುದ ವಿಚಾರಿಸಬೇಕು. ಮತ್ರ್ಯವೆಂಬುದು ನಾ ಬಲ್ಲನ್ನಕ್ಕ ಕರ್ಕಶದ ಜಗ. ಇದು ಕಾರಣದಲ್ಲಿ, ಕೈಲಾಸವೆಂಬ ಬಟ್ಟೆಯನರಸಬೇಕು. ಎನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಎನ್ನ ಮನಕ್ಕೆ ಎನ್ನ ಮುಕ್ತ್ಯಂಗನೆ, ಎನ್ನ ನಿಶ್ಚಯಕ್ಕೆ ಒಂದು ಗೊತ್ತು ತೋರಾ. ನಿಃಕಳಂಕ ಮಲ್ಲಿಕಾರ್ಜುನ ಎಲ್ಲಿ ಇದ್ದಹನು ಹೇಳಾ ?
--------------
ಮೋಳಿಗೆ ಮಾರಯ್ಯ
ಭಕ್ತನ ಅಂಗಸ್ಥಲ, ಮಹೇಶ್ವರನ ಭಾವಸ್ಥಲ, ಪ್ರಸಾದಿಯ ಜ್ಞಾನಸ್ಥಲ, ಪ್ರಾಣಲಿಂಗಿಯ ಉಭಯಸ್ಥಲ, ಶರಣನ ಏಕಸ್ಥಲ, ಐಕ್ಯನ ಕೂಟಸ್ಥಲ. ಇಂತೀ ಆರುಸ್ಥಲವ ವೇಧಿಸಿ ನಿಂದಲ್ಲಿ, ಮಹದೈಕ್ಯ ಏಕಮೂರ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತನಾದಲ್ಲಿ ಧರಿತ್ರಿಯಂತಿರಬೇಕು. ಮಾಹೇಶ್ವರನಾದಲ್ಲಿ ಅಪ್ಪುವಿನಂತಿರಬೇಕು. ಪ್ರಸಾದಿಯಾದಲ್ಲಿ ವಹ್ನಿಯಂತಿರಬೇಕು. ಪ್ರಾಣಲಿಂಗಿಯಾದಲ್ಲಿ ಶುಕ್ತಿ ಕೊಂಡ ವಿಷದಂತಿರಬೇಕು. ಶರಣನಾದಲ್ಲಿ ಉರಿಯುಂಡ ಕರ್ಪುರದಂತಿರಬೇಕು. ಐಕ್ಯನಾದಲ್ಲಿ ಹಸುಳೆ ಕಂಡ ಕನಸಿನಂತಿರಬೇಕು. ಹೀಂಗರಿದಡೆ ಆರರಲ್ಲಿ ಲೇಪ, ಮೂರರಲ್ಲಿ ಮುಕ್ತಿ. ಇದ ಮೀರಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಯೆಂಬ ಪಾಶವ ಹೊತ್ತು ಮಾಡುವ ಭಕ್ತನ ಸತ್ಯ ಹೇಗೆಂದಡೆ : ಲಾಂಛನವ ಹೊತ್ತು ಜಂಗಮ ಮನೆಗೆ ಬಂದಡೆ, ಮುಯ್ಯಾಂತು ಅಡಿಗೆರಗಿ ಸಡಗರಿಸಿ, ಮೃಡನೆಂದು ಪ್ರಮಾಣಿಸಿ, ಮನದಲ್ಲಿ ಒಡಗೂಡಿ ಗುಡಿಕಟ್ಟಿ ಪುಳಕವೇರಿ, ಎರಡಿಲ್ಲದೆ ತ್ರಿವಿಧಕ್ಕೆ ಬಿಡಬೀಸಿ, ಒಡೆಯಂಗೆ ಒಡವೆಯಂ ಕೊಟ್ಟು, ಹಡೆವೆಡೆಯೊಳಗಿರ್ಪ ದೃಢಚಿತ್ತಂಗೆ ಬಿಡುವಿಲ್ಲದೆ ನಮೋ ನಮೋ [ಎಂಬೆ], ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ, ತಾ ಮುಟ್ಟುವನ್ನಬರ ಆ ಬೋಧೆಯ ಹುಸಿಯೆಂದ. ತಾ ಮುಟ್ಟದೆ ತನ್ನ ಮುಟ್ಟಿಪ್ಪ ಭಕ್ತನ ತಟ್ಟದೆ, ಕರ್ಮಕ್ಕೆ ಕರ್ಮವನಿತ್ತು ತಾ ವರ್ಮಿಗನಾಗಬಲ್ಲಡೆ, ಹೊಳೆಯಲ್ಲಿ ಹಾಕಿದ ಸೋರೆಯಂತೆ, ಅನಿಲ ಕೊಂಡೊಯ್ದ ಎಲೆಯಂತೆ, ಯಾತಕ್ಕೂ ಹೊರಗಾಗಿ ಜಗದಾಸೆಯಿಲ್ಲದಿಪ್ಪ ವೇಷಕ್ಕೆ ಒಳಗಲ್ಲ. ಆತ ಜಗದೀಶನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತದೇವನಿಗೆ ನೀರು ತಾವರೆಯ ತೆರನಂತೆ, ಭಕ್ತ ದೇವನಿಗೆ ಕ್ಷೀರನೀರಿನ ತೆರನಂತೆ, ನಿನಗೂ ನನಗೂ ಬೇರೊಂದೆಡೆಯುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು. ಈ ಉಭಯ ಜಗದ ಹಾಹೆ ನಡೆಯಬೇಕಾದಲ್ಲಿ, ಮೂರು ಭಕ್ತಿಸ್ಥಲವಾಯಿತ್ತು. ಮೂರು ಕರ್ತೃಸ್ಥಲವಾಯಿತ್ತು. ಭಕ್ತ ಮಾಹೇಶ್ವರ ಪ್ರಸಾದಿ, ಈ ತ್ರಿವಿಧಭಾವ ಭಕ್ತಿರೂಪು. ಪ್ರಾಣಲಿಂಗಿ ಶರಣ ಐಕ್ಯ, ಈ ತ್ರಿವಿಧ [ಭಾವ] ಕರ್ತೃಸ್ವರೂಪು. ಇಂತೀ ಉಭಯಭೇದದಲ್ಲಿ, ವಸ್ತು ಮತ್ರ್ಯಕ್ಕೆ ಬಂದು, ಮುಂದೆ ಆಶ್ರಯವ ಕಟ್ಟಿದ ಕಾರಣ, ಭಕ್ತಿಗೆ ಬಸವಣ್ಣನಾಗಿ, ಆ ಭಕ್ತಿಯನೊಪ್ಪುಗೊಂಬುದಕ್ಕೆ ವಸ್ತು ಪ್ರಭುರೂಪಾಗಿ ಬಂದ ಕಾರಣದಲ್ಲಿ, ಉಭಯಸ್ಥಲ ಗೋಚರಿಸದೆಂದು ಷಟ್ಸ್ಥಲವಾಯಿತ್ತು. ಆ ಸ್ಥಲದ ನಾಮ ರೂಪಿನಲ್ಲಿ ನಾನಾಸ್ಥಲ ಒಡಲಾಯಿತ್ತು. ಪೂರ್ವಗತಿಯಾದಲ್ಲಿ ಸ್ಥಲ, ಉತ್ತರಗತಿಯಾದಲ್ಲಿ ನಿಃಸ್ಥಲ ಉಭಯನಾಮರೂಪು ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಿರ್ಲೇಪವಾದನು.
--------------
ಮೋಳಿಗೆ ಮಾರಯ್ಯ
ಭಕ್ತಿಸ್ಥಲ ಮಾಹೇಶ್ವರನ ನಿರ್ವೀಜ. ಆ ನಿರ್ವೀಜ, ಪ್ರಸಾದಿಯ ಪ್ರಣಮ. ಆ ಪ್ರಣಮ, ಪ್ರಾಣಲಿಂಗಿಯ ಎರಡಳಿದ ಅರಿವು. ಆ ಅರಿವು, ಶರಣನ ಪರಿಪೂರ್ಣಕಳೆ. ಆ ಕಳೆ, ನಿಃಪತಿಯಾದಲ್ಲಿ ಐಕ್ಯನ ನಿರವಯ. ಆ ನಿರವಯವಸ್ತು ಬೇರೊಂದೇಕೆ, ಕುರುಹುಗೊಂಡೆ ? ಅದು ನಿನ್ನದಲ್ಲ, ಎನ್ನ ಅಂಗಕ್ಕೋಸ್ಕರವಾಗಿ ಲಿಂಗವಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭೃತ್ಯನಾದಲ್ಲಿ ಕರ್ತೃವಿನ ಕೈಯ ಊಳಿಗವ ಕೊಂಬ ಭಕ್ತರ ಕಂಡು ನಾಚಿತ್ತೆನ್ನ ಮನ. ಆಳುವ ಅರಸಿನ ಕೈಯಲ್ಲಿ ಊಳಿಗವ ಕೊಂಬಂತೆ, ತೊತ್ತು ಒಡತಿಯ ಕೈಯಲ್ಲಿ ಭೃತ್ಯತ್ವವ ಮಾಡಿಸಿಕೊಂಬಂತೆ, ಮೊದಲಿಗೆ ಮೋಸ ಲಾಭವನರಸಲುಂಟೆ ? ಅರ್ತಿಗಾರರೆಲ್ಲಕ್ಕೆ ನಿಶ್ಚಯದ ಭಕ್ತಿಯುಂಟೆ ? ಹೊತ್ತುಹೋಕರ ಭಕ್ತರೆಂದಡೆ, ಒಪ್ಪುವರೆ ನಿಚ್ಚಟಶರಣರು ? ಅಚ್ಚು ಮುರಿದ ಹಾರಕ್ಕೆ ಎತ್ತಿನ ಹಂಗೇಕೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತರು ಭವಪಾಶದಲ್ಲಿದ್ದಹರೆಂದು ತೆಗೆವುದಕ್ಕೆ ಸುಳಿವ ಜಂಗಮದ ಇರವೆಂತೆಂದಡೆ : ಆಸೆಯೆಂಬ ಪಾಶವ ಹರಿದು, ಈಷಣತ್ರಯದ ದೋಷವ ತರಿದು, ತಾನೇತರಾಸೆಯಿಲ್ಲದೆ, ತನುವಿಂಗೆ ಶೀತೋಷ್ಣಾದಿ ಭೋಗಂಗಳೆಂಬ ಸುಖಂಗಳಂ ಮರೆದು, ಜಿಹ್ವೆಗೆ ಮಧುರರಸ ನಾನಾ ಪರಿಕರಂಗಳಂ ಮರೆದು, ಭಕ್ತರಿಗೆ ಇಚ್ಫೆಯಂ ನುಡಿವ, ಕುಚಿತ್ತರಂ ಬಿಟ್ಟು ಚಿತ್ತಶುದ್ಧನಾಗಿ, ಇದ ನಿಶ್ಚಯವೆಂದರಿದ ಮತ್ತೆ ಮೆಚ್ಚಲೇಕೊ, ನಾನಾ ಮೋಹಂಗಳ ? ವಿರಕ್ತಿಯಿಂದ ಸುಳಿವ ಜಂಗಮಕ್ಕೆ ಮತ್ತೆ ನರರೊಂದಾಗಿ ಸುತ್ತಿ ಬಳಲಲೇಕೊ? ಇದು ಕಾರಣ, ವರ್ಮವನರಿಯದೆ ಮಾಡುವ ಭಕ್ತ ಕರ್ಮಕ್ಕೊಳಗಾದ. ಧರ್ಮವನರಿಯದೆ ತಿರುಗುವ ಜಂಗಮ ಬ್ರಹ್ಮನಿಗೊಳಗಾದ. ಇವರಿಬ್ಬರೂ ಕೆಟ್ಟ ಕೇಡ ನೋಡಿ ಬೆಚ್ಚಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಸ್ಥಲ ಬ್ರಹ್ಮನಾಶನ, ಮಾಹೇಶ್ವರಸ್ಥಲ ವಿಷ್ಣುನಾಶನ, ಪ್ರಸಾದಿಸ್ಥಲ ರುದ್ರನಾಶನ, ಪ್ರಾಣಲಿಂಗಿಸ್ಥಲ ಈಶ್ವರನಾಶನ, ಶರಣಸ್ಥಲ ಸದಾಶಿವನಾಶನ, ಐಕ್ಯಸ್ಥಲ ಪರಮವಸ್ತು ಭಾವನಾಶನ. ಇಂತೀ ಸ್ಥಲಂಗಳನಾರೋಪಿಸುವಲ್ಲಿ, ಪೂರ್ವವನಾಧರಿಸಿ, ಉತ್ತರವ ನಿರೀಕ್ಷಿಸಿ, ಮೇಲಣ ನಿಶ್ಚಯಪದವ ನಿಜವೆಂದು ನಿಶ್ಚಯಿಸಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನನ ಸ್ಥಲ ನಿಃಸ್ಥಲವನೆಯ್ದಿತ್ತು.
--------------
ಮೋಳಿಗೆ ಮಾರಯ್ಯ
ಭಿತ್ತಿಯ ಮೇಲಣ ಚಿತ್ರದ ಬೊಂಬೆಯ ಕೈಯಲ್ಲಿ, ಹೊತ್ತುವ ದೀಪ ಇದ್ದಡೇನು, ಕತ್ತಲೆಯ ಬಿಡಿಸಬಲ್ಲುದೆ ? ನಿಷೆ*ಹೀನನಲ್ಲಿ ಇಷ್ಟಲಿಂಗ ಇರುತಿರಲಿಕ್ಕೆ ದೃಷ್ಟವ ಬಲ್ಲನೆ ? ಭಕ್ತಿಹೀನಂಗೆ ನಿತ್ಯಾನಿತ್ಯವ ಹೇಳಲಿಕ್ಕೆ ನಿಶ್ಚಯಿಸಬಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಭಕ್ತನ ಭಕ್ತಿ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯವೆಂಬಲ್ಲಿ ದೃಷ್ಟವಾವುದು ಹೇಳಿರಣ್ಣಾ ? ಘಟ ಬಿದ್ದಲ್ಲಿ ಆತ್ಮನೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಭಕ್ತನ ಭಕ್ತಸ್ಥಲ. ಕೆಚ್ಚಲ ಕೊಯಿದು ಹಿಕ್ಕಿದಲ್ಲಿ ಅಮೃತವಿಪ್ಪೆಡೆಯ ಬಲ್ಲಡೆ, ಮಹೇಶ್ವರನ ಮಾಹೇಶ್ವರಸ್ಥಲ. ಇಂಗಳ ಕೆಡಿಸಿ ನಂದಿದಲ್ಲಿ ಆ ವಹ್ನಿಯ ಅಂಗವೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಸಾದಿಯ ಪ್ರಸಾದಿಸ್ಥಲ. ರತ್ನದ ಶಿಲೆ ಒಡೆದು ಪುಡಿಯಾದಲ್ಲಿ ರತಿಯೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ವಾಸನೆಯ ಕುಸುಮವ ಹೊಸೆದು ವಾಸನೆ ಹೋಗಿ, ಆ ಸುವಾಸನೆ ಅಡಗಿತ್ತೆಂಬುದನರಿದಲ್ಲಿ, ಶರಣನ ಶರಣಸ್ಥಲ. ಅನಲ ಆಹುತಿಗೊಂಡು ಬೇವಲ್ಲಿ ಆ ಭಾವವ ಭಾವಿಸಬಲ್ಲಡೆ, ಐಕ್ಯನ ಐಕ್ಯಸ್ಥಲ. ಇಂತೀ ಆರು ಸ್ಥಲದ ಭೇದವನರಿತು, ಮೂರು ಆರಾದ ಉಭಯವ ಕಂಡು, ಇಂತೀ ಆರರೊಳಗೆ ಆರಾದ ಭೇದವ ಭಾವಿಸಿ ತಿಳಿದು, ಮುಕುರದೊಳಗಣ ಬಿಂಬವ ಪ್ರತಿಬಿಂಬಿಸಿ ಕಾಬುದು, ಒಂದೋ, ಎರಡೋ ? ಎಂಬುದ ತಿಳಿದಲ್ಲಿ, ಸರ್ವಸ್ಥಲ ಸಂಪೂರ್ಣ. ಆತ ಸರ್ವಾಂಗಲಿಂಗಿ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಂಗೆ ವಿಶ್ವಾಸ ಗುರುವೆಂದು ಪ್ರಮಾಣಿಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕು. ಲಿಂಗವೆಂದು ಪ್ರಮಾಣಿಸಿದಲ್ಲಿ, ಸಂದೇಹವಿಲ್ಲದಿರಬೇಕು. ಜಂಗಮವೆಂದು ಪ್ರಮಾಣಿಸಿದಲ್ಲಿ, ತ್ರಿವಿಧದ ಹಂಗಿಲ್ಲದಿರಬೇಕು. ಇದರಂದ ಒಂದೂ ಇಲ್ಲದೆ ಭಕ್ತರಾದೆವೆಂಬ ಮಿಟ್ಟೆಯಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭೂತಹಿತವುಳ್ಳನ್ನಕ್ಕ ಇಷ್ಟಲಿಂಗಪೂಜೆ. ಸರ್ವರ ಚೇತನ ಭಾವವನರಿವನ್ನಕ್ಕ ಭಾವಲಿಂಗಪೂಜೆ. ಸರ್ವಜೀವಂಗಳಲ್ಲಿ ದಯವುಳ್ಳನ್ನಕ್ಕ ಪ್ರಾಣಲಿಂಗಪೂಜೆ. ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಾತ್ಮಭರಿತನಾಗಿ, ಕ್ರೀಯಲ್ಲಿ ತ್ರಿವಿಧ, ಭಾವದಲ್ಲಿ ತ್ರಿವಿಧ, ಜ್ಞಾನದಲ್ಲಿ ತ್ರಿವಿಧ. ತನ್ನ ತ್ರಿವಿಧವ ತಾನರಿದು, ಅನ್ಯಭಿನ್ನವಿಲ್ಲದೆ ನಿಂದುದು, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...