ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉರಿ ಆತ್ಮಸ್ಥಾವರಂಗಳಲ್ಲಿ ನಂದದಿಹನ್ನಕ್ಕ, ನೀರು ಒಂದರಲ್ಲಿಯೆ ಇಂಗದಿಹನ್ನಕ್ಕ, ಲಿಂಗವೆಂಬುದೊಂದು ಪ್ರಮಾಣವುಂಟು ಆ ಪ್ರಮಾಣು ಅಪ್ರಮಾಣಹನ್ನಕ್ಕ, ಭಾವ ಮೂರು, ನಿರ್ಭಾವ ಮೂರು, ಸ್ಥೂಲವಾರು, ತತ್ತ್ವವೈದು, ಇಂತಿವು ಕೂಡೆ, ಅಳೆದು ಮರಳಲಿಕ್ಕೆ ಹಲವು ಸ್ಥಲ ಕುಳ ಬೇರಾಯಿತ್ತು. ಬಂಗಾರವೊಂದು ಹಲವು ತೊಡಿಗೆಯ ಹೊಲಬಾದಂತೆ, ತನ್ನಷ್ಟೇ ತದ್ದøಷ್ಟವುಭಯವ ಕೂಡುವನ್ನಬರ, ನಿಃಕಳಂಕ ಮಲ್ಲಿಕಾರ್ಜುನನೆಂದೆನುತ್ತಿರಬೇಕು.
--------------
ಮೋಳಿಗೆ ಮಾರಯ್ಯ
ಉಡುಪ ತನ್ನ ಕಳೆಯ ತಾ ಕಾಣಿಸಿಕೊಂಬಂತೆ, ಸೂರ್ಯ ತನ್ನ ಬೆಳಗ ತಾ ಕಾಣಿಸಿಕೊಂಬಂತೆ, ಫಲ ತನ್ನ ರುಚಿಯ ತಾ ಕಾಣಿಸಿಕೊಂಬಂತೆ, ಇಂತೀ ತ್ರಿವಿಧ ಉಂಟೆನಬಾರದು, ಇಲ್ಲೆನಬಾರದು. ತನ್ನಿಂದರಿವಡೆ ಸ್ವತಂತ್ರಿಯಲ್ಲ, ಇದಿರಿನಿಂದರಿವಡೆ ಪರತಂತ್ರಿಯಲ್ಲ. ಈ ಉಭಯವನಿನ್ನಾರಿಗೆ ಹೇಳುವೆ? ಕಡಲೊಳಗೆ ಕರೆದ ವಾರಿಯಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ ಡಿಂಡೆಯ ಮತದ ಹಿರಿಯರುಗಳೆಲ್ಲಾ ನೀವು ಕೇಳಿರೊ. ಬಲೆಯೊಳಗಾದ ಹುಲಿಗೆ ಬಲಾತ್ಕಾರವುಂಟೆ? ಲಲನೆಯರ ಸಂಸರ್ಗದಲ್ಲಿ ಚಲನೆಯಿಲ್ಲದೆ ಬಿಂದುವುಂಟೆ? ಶಿಲೆಯೊಳಗಣ ಬೆಂಕಿಗೆ ಅಲಂಕಾರ ಉಂಟೆ? ಸಲಿಲದೊಳಗಣ ತೃಷ್ಣೆಗೆ ಅಪ್ಯಾಯನ ಉಂಟೆ? ಅರಿವನರಿದಂಗಕ್ಕೆ, ಮರವೆಗೆ ತೆರನುಂಟೆ? ತೆರನನರಿದು, ಹರಿದಲ್ಲಿಯೆ ಅರಿಕೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕವಿಲ್ಲದಿರೆ ಅಂಬುದ್ಥಿ ತಟಾಕಂಗಳೆಂಬ ನಾಮವುಂಟೆ? ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ? ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ? ನೀನಿಲ್ಲದಿರೆ ನಾನೆಂಬ ಭಾವವುಂಟೆ? ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ. ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ. ಜಗಹಿತಾರ್ಥವಾಗಿ ಭಕ್ತನಾದೆ. ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ. ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ. ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ. ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ. ಶರಣ ತದರ್ಥನಾಗಿ ಐಕ್ಯನಾದೆ. ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ ಸಂಗನಬಸವಣ್ಣ, ಚೆನ್ನಬಸವಣ್ಣ, ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು ಮತ್ತೆ ಅವದ್ಥಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲಾ. ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು. ಎನ್ನ [ಭ]ವದ ಉರಿಯ ಬಿಡಿಸು, [ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಭಯವ ನೆಮ್ಮಿ ಹರಿವ ನದಿಯಂತೆ, ಮಾಡುವ ಕ್ರೀ, ಅರಿವ ಚಿತ್ತ. ಈ ಉಭಯದ ನೆಮ್ಮುಗೆಯಲ್ಲಿ ಭಾವಿಸಿ ಅರಿವ ಚಿತ್ತ, ಅಂಗದ ಮುಟ್ಟನರಿತು ನಿಜಸಂಗದ ನೆಲೆಯಲ್ಲಿ ನಿಂದು, ಉಭಯ ನಿರಂಗವಾದಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಉರಿದು ಸತ್ತುದು, ಮತ್ತುರಿದು, ನಾನಾ ಭೇದಂಗಳ ಘಟಮಟಂಗಳ ಆಶ್ರಯಕ್ಕೊಡಲಾಗಿ, ಮತ್ತೆ ಭಸ್ಮವಾಗಿ, ಒಡಲಗಿಡದ ತೆರದಂತೆ. ಇಂತೀ ತ್ರಿವಿಧದ ಕುರುಹಿನ ಲಕ್ಷದ ಭೇದ ಒಪ್ಪಿರಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಮೋಳಿಗೆ ಮಾರಯ್ಯ
ಉಂಡು ಕೊಂಡಾಡುವನ್ನ ಬರ, ವೇಶಿಯ ಮನೆಯ ದಾಸಿಯ [ಬರಿಹುಂಡವೆಂಬೆ], ಈಶ್ವರನ ರೂಪ ತೊಟ್ಟು ಕೈಯಾಂತು ಬೇಡಿದಡೆ, ವೇಷದ ಮರೆಯ ಬಲೆಯ ಬೀಸುವ ಬೇಟೆಗಾರನೆಂಬೆ, ಆಗಮವ ಕಲಿತು ಅವರಿಗೆ ಆಗಹೇಳಿ, ಹೋಗಿನ ದ್ರವ್ಯಕ್ಕೆ ಕೈಯಾನುವ ಈ ಲಾಗಿನ ಅಣ್ಣಗಳ ಬಗೆಯ ಭಕ್ತಿಯಲ್ಲಿ ಇದ್ದೆಹೆನೆಂಬವರಿಗೆ ಸತ್ತು ಸಾಯದ ಕುದುರೆಗೆ ಹುಲ್ಲನಡಕುವಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ, ಹೊಸಮಾಣಿಕ್ಯವ ನುಂಗಿತ್ತ ಕಂಡೆ. ನುಂಗುವಾಗ ಒಂದು, ಗುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂರು, ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ಉರಿಯೊಳಗಣ ಶೈತ್ಯದಂತೆ, ಶೈತ್ಯದೊಳಗಣ ಉರಿಯಂತೆ, ಅರಿದು ಅರುಹಿಸಿಕೊಂಬುದೇನು ಹೇಳಾ? ಅದು ಚಂದ್ರನೊಳಗಣ ಕಲೆ, ತನ್ನಂಗದ ಕಳೆಯಿಂದ ಉಭಯದೃಷ್ಟವ ಕಾಣಿಸಿಕೊಂಬಂತೆ, ಆ ಇಷ್ಟದ ದೃಷ್ಟದ ಕಾಣಿಸಿಕೊಂಡಂತೆ, ಅರಿವುದು, ಅರುಹಿಸಿಕೊಂಬುದು ಒಡಗೂಡಿದಲ್ಲಿ ಶರಣ ಸ್ಥಲ. ಆ ಸಂಬಂಧಸಮಯ ನಿಂದಲ್ಲಿ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದ ರಸದಂತೆ, ಅಗ್ನಿಯ ಉಭಯದಂತೆ, ವಿಷ ನಿರ್ವಿಷದಂತೆ ಕಾಬ, ಕಾಣಿಸಿಕೊಂಬ ಭೇದ. ತನುವಿನ ಮೇಲಿನ ಲಿಂಗದ ನೆನಹು, ಪ್ರಾಣನ ಮೇಲಿಹ ಭಾವದ ಸಂಚು. ಆ ಉಭಯವನೊಳಕೊಂಡ ಜ್ಞಾನದ ಬಿಂದು, ಸದಮಲ ಬೆಳಗಿನೊಳಗೆಯ್ದಿದ ಮತ್ತೆ ಬಿಡುಮುಡಿ ಎರಡಿಲ್ಲ. ಅದು ಶರಣನ ನಿಜದೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದಲ್ಲಿ ತೊಳೆದು ಕಂಡೆಹೆನೆಂದಡೆ ಮಲಿನವಲ್ಲ. ಪುಷ್ಪದಲ್ಲಿ ಪೂಜಿಸಿ ಕಂಡೆಹೆನೆಂದಡೆ, ಹೊತ್ತಿನ ವೇಳೆಗೆ ಬಂದು ಗೊತ್ತು ಮುಟ್ಟವನಲ್ಲ. ನಾನಾ ಉಪಚಾರದಿಂದ ಭಾವಿಸಿ ಕಂಡೆಹೆನೆಂದಡೆ ಭ್ರಮೆಯವನಲ್ಲ. ಇದನರಿದು ಮರವೆಗೆ ತೆರಹಿಲ್ಲದಿರ್ಪ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದವನೇ.
--------------
ಮೋಳಿಗೆ ಮಾರಯ್ಯ
ಉಂಬ ತಳಿಗೆಯ ಬೆಳಗಿದಡೆ ನೊಂದಿತ್ತೆ, ನನ್ನ ಬೆಳಗಿದರೆಂದು? ಬೆಂದ ಮಸಿಯ ತೊಳೆದಡೆ ನೊಂದಿತ್ತೆ, ಎನ್ನ ಹೊರೆಯನೆತ್ತಿದರೆಂದು? ಅಂ[ಧ] ಮಂದರೊಂದನು ನುಡಿದಡೆ ನೊಂದು ಬೇಯಲೇಕೆ? ಅವರು ನೊಂದರೂ ನೋಯಲಿ ಹಿಂಗಬೇಕೆಂದೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಂಟು ಉಂಟೆಂಬನ್ನಕ್ಕ ಸಂದೇಹಕ್ಕೀಡಾಗದೆ, ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ, ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ, ಉಭಯಚಕ್ಷು ಒಡಗೂಡಿ ಕಾಬಂತೆ, ನೋಡುವುದು, ಉಭಯ ನೋಡಿಸಿಕೊಂಬುದು ಒಂದೆ. ಕ್ರೀಯಲ್ಲಿ ಇಷ್ಟ, ಅರಿವಿನಲ್ಲಿ ಸ್ವಸ್ಥ. ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದಲ್ಲಿ ಮಜ್ಜನವ ಮಾಡಿ, ಇಹ ಪರವ ಹರಿದವರಾರುವ ಕಾಣೆ. ಪುಷ್ಪದಲ್ಲಿ ಪೂಜೆಯ ಮಾಡಿ, ಪುನರಪಿಯ ಗೆದ್ದವರನಾರನು ಕಾಣೆ. ಕರ್ಮದಿಂದ ಒದವಿದ ಸುಖ, ಚರ್ತುವಿಧಕ್ಕೆ ಒಳಗಲ್ಲದೆ ಹೊರಗಾದುದಿಲ್ಲ. ಕರ್ಮವ ಮಾಡುವಲ್ಲಿ ಧರ್ಮವನರಿದಡೆ, ಅದು ಪಥಕ್ಕೆ ಹೊರಗೆಂದೆ. ಮೌಕ್ತಿಕ ಉಂಡ ಜಲಕ್ಕೆ ರಾಗ ಉಂಟೆ ಅಯ್ಯಾ? ಅಮೃತದಲೊದಗಿರ್ದ ಆಜ್ಯವ ಧರಿಸಿದ ಜಿಹ್ವೆಗೆ ಕರತಳ ಉಂಟೆ ಅಯ್ಯಾ? ಕರದಲ್ಲದೆ ಅರಿದು ಹಿಡಿದವಂತೆ ಬಿಡುಗಡೆ ಇನ್ನೇನೊ? ಅರಿದಡೆ ತಾ, ಮರೆದಡೆ ಜಗವೆಂಬ ಉಭಯವ ಹರಿದಾಗವೆ ಪೂಜಕನಲ್ಲ, ಪ್ರತಿಷೆ*ಯಲ್ಲಿ ಪರಿಣಾಮಿಯಲ್ಲ, ಸ್ವಯಂಭುವಿನಲ್ಲಿ ಸ್ವಾನುಭಾವಿಯಲ್ಲ. ಏನೂ ಎನಲಿಲ್ಲವಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತಾನೆಯಾಗಿ.
--------------
ಮೋಳಿಗೆ ಮಾರಯ್ಯ
ಉರಿಗೆ ರಸ ನಿಂದಾಗವೆ ರಸಸಿದ್ಧಿ ಎಂದೆ. ಅಸಿಗೆ ಶರೀರ ನಿಂದಲ್ಲಿಯೆ ಕಾಯಸಿದ್ಧಿ ಎಂದೆ. ಲಿಂಗವಿಡಿದ ತನುವಿಂಗೆ ಅಂಗವ್ಯಾಪಾರವ ಬಿಟ್ಟಾಗವೆ, ಲಿಂಗಸಿದ್ಧಿ ಎಂಬೆ. ಇದರಂಗ ಒಂದೂ ಇಲ್ಲದಿರ್ದಡೆ, ತ್ರಿಭಂಗಿಯಂ ತಿಂದು ಅಂದಗೆಡುವನಿಗೇಕೆ, ಲಿಂಗದ ಶುದ್ಧಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉ[ರಿವ] ಗಿರಿಯ ಮೇಲೆ ಬೆಣ್ಣೆಯ ಕೋಣ ಹುಟ್ಟಿ, ಕರ್ಪುರದ ಘಟ್ಟಿ ಸೋಪಾನ ಕಟ್ಟಿತ್ತು. ಅಜು ಮಂಜಿನ ನೀರು, ಆ ನೀರ ತುಂಬುವುದಕ್ಕೆ ಮಳಲ ಮಡಕೆ, ತುಂಬಿ ಹಿಡಿವುದಕ್ಕೆ ಕೈಯಿಲ್ಲದೆ, ನಡೆವುದಕ್ಕೆ ಕಾಲಿಲ್ಲದೆ, ಮೀರಿ ಹೊರುವುದಕ್ಕೆ ತಲೆಯಿಲ್ಲದೆ ತುಂಬಿ ತರಬೇಕು. ತಂದು ಬಂದು ನಿಂದಲ್ಲಿ, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ, ಬಾಯಿಲ್ಲದೆ ಈಂಟಿ, ಅರಿವಿಲ್ಲದ ತೆರದಲ್ಲಿ ಸುಖಿಯಾದ ಐಕ್ಯಂಗೆ ಲಕ್ಷಿಸಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉರಿದು ಬೇವುದು ಉರಿಯೋ, ಮರನೋ? ಹರಿದು ಕೊರೆವುದು ನೆಲನೋ, ನೀರೊ? ನೆಲ ನೀರಂತಾದುದು ಅಂಗಲಿಂಗಸಂಬಂಧ. ಉರಿ ಮರೆದಂತಾದುದು ಪ್ರಾಣಲಿಂಗಸಂಬಂಧ. ಇಂತೀ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲದ ವಳಿಯಂತೆ, ಮಂಜಿನ ರಂಜೆಯ ಝಂಝಾಮಾರುತನಂತೆ. ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉರಿ ನೀರು ಕುಂಭದಂತೆ ಆಗಬಲ್ಲಡೆ, ಕಾಯಲಿಂಗಸಂಬಂಧಿ. ತರು ಧರಿಸಿದ ನೀರು ಉರಿಯಂತಾಗಬಲ್ಲಡೆ, ಭಾವಲಿಂಗಸಂಬಂಧಿ. ಕರ್ಪುರ ಧರಿಸಿದ ಅಪ್ಪು ಉರಿಯ ಯೋಗದಂ [ತಾಗಬಲ್ಲಡೆ] ಪ್ರಾಣಲಿಂಗ ಸಂಬಂಧಿ. ಇಂತೀ ಇವನಿಪ್ಪ ಭೇದವನರಿದು ನಿಶ್ಚಯಿಸಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದ್ಯಾಪನ ವ್ಯಾಪಾರ ಕೃತಭೇದ ಸರ್ವವನರಿದು, ತ್ಯಾಗಾಂಗನಾಗಿ, ಭೋಗಾಂಗನಾಗಿ, ಯೋಗಾಂಗನಾಗಿ, ತಾಮಸ ನಿರಸನವಾಗಿ, ಭೂತ ಭವಿಷ್ಯದ ದ್ವರ್ತಮಾನಕ್ಕೆ ಹೊರಗಾಗಿನಿಂದ ನಿಜತತ್ವದಂಗಕ್ಕೆ ಬೇರೆ ಮಂಗಲೋತ್ತರವರಸಲಿಲ್ಲ. ಲಿಂಗವನಂಗಬಾಹ್ಯದಲ್ಲಿ ಇರ್ದಿಹೆನೆಂಬ ಭ್ರಾಂತಿಲ್ಲ. ಆತ ಲಿಂಗವೆ ಅಂಗವಾದ ಕಾರಣ, ಪೃಥಕ್ ಎಂಬುದಿಲ್ಲ. ಆತನಂಗವೆ ಮಂಗಲದೊಡಲು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉರಿಯ ಬಣ್ಣದ ಸೀರೆಯನುಟ್ಟು, ಹರಶರಣರೆಲ್ಲರೂ ಮದುವೆಗೆ ಹೋದರು. ನಿಬ್ಬಣಿಗನ ಹಿಂದುಳುಹಿ, ಮದುವೆಯ ಹರೆ ಮುಂದೆ ಹೋಯಿತ್ತು. ಮದುವೆಗೆ ಕೂಡಿದ ಬಂಧುಗಳೆಲ್ಲರು, ಮದವಳಿಗನ ಮದವಳಿಗಿತ್ತಿಯ ಕಾಣದೆ, ಕದನವಾಯಿತ್ತು ಮದುವೆಯ ಮನೆಯಲ್ಲಿ. ಈ ಗಜೆಬಜೆಗಂಜಿ ಹರೆಯವ ಸತ್ತ. ಎಣ್ಣೆಯ ಗಡಿಗೆಯ ಒಡೆಯ ಹಾಕಿದ. ಇನ್ನು ಮದುವೆಯ ಸಡಗರವೇಕೆಂದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಉದಕವ ನುಂಗಿದ ಕೆಸರಿನಂತೆ, ಆತ್ಮ ಗಸಣಿಗೊಳಗಾಯಿತ್ತು. ಉದಕವರತ ಕೆಸರಿನ ತೆರನುಂಟೆ? ಈ ಉಭಯಭೇದವನರಿದಡೆ ಪ್ರಾಣಲಿಂಗಿಯೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಂಬ ಊಟ ನಿನಗೊ, ಅಶನಕ್ಕೊ ಎಂಬುದನರಿ, ಮಾಡುವ ಭಕ್ತಿ ಮಾಡುವಂಗೊ, ಮಾಡಿಸಿಕೊಂಬವಂಗೊ ಎಂಬುದ ತಿಳಿದ ಮತ್ತೆ ಹೋರಿ ಆರ್ಜವ ಮಾಡಲೇಕೆ? ಎಂಬುದ ತಿಳಿದ ಕೊಂಡು ಬಪ್ಪಂತೆ, ತಾ ತನ್ನ ತಿಳಿದ ಮತ್ತೆ ಅನ್ಯವೇಕೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ