ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋನಿಯಲ್ಲಿ ಹುಟ್ಟಿದ ಸಕಲಜೀವಂಗಳೆಲ್ಲ, ಮತ್ತೆ ಯೋನಿಯ ಬಯಕೆ, ಮತ್ತಾ ಯೋನಿಗಾಗಿ ಜನನ, ಯೋನಿಗಾಗಿ ಮರಣ. ಇಂತಿವ ತಿಳಿದ ಮತ್ತೆ ತಾವು ಅದರಲ್ಲಿ ಅಳಿವುತ್ತ ಮತ್ತೆ ಜ್ಞಾನವೆ ? ಮತ್ತೆ ಶಿವಧ್ಯಾನವೆ ? ಮತ್ತೆ ನಾನಾ ವ್ರತ ನೇಮವೆ ? ಶುದ್ಧ ಭಾವವೆ ? ಎಲ್ಲೆಲ್ಲಿ ನೋಡಿದಡೆ ಕಟಿಹದ ಬಿದಿರಿನಂತೆ, ತೊಟ್ಟು ಬಿಟ್ಟ ಹಣ್ಣಿನಂತೆ, ದ್ರವ ತಟ್ಟಾರಿದ ಫಲದಂತೆ, ನಿಶ್ಚಯವಾಗಿರ್ಪವರಲ್ಲಿಯಲ್ಲದೆ, ನಿಃಕಳಂಕ ಮಲ್ಲಿಕಾರ್ಜುನನು ಮತ್ತೆಲ್ಲಿಯೂ ಇಲ್ಲ.
--------------
ಮೋಳಿಗೆ ಮಾರಯ್ಯ
ಯುಗ ಹದಿನೆಂಟು ಸಹಸ್ರ ಕೂಡೆ, ಬ್ರಹ್ಮಂಗೆ ಪರಮಾಯು. ಇಂತಾ ನವಬ್ರಹ್ಮರು ಸಹಸ್ರ ಕೂಡೆ, ವಿಷ್ಣುವಿಂಗೆ ಪರಮಾಯು. ಇಂತಾ ವಿಷ್ಣುವಿನ ಸಹಸ್ರ ಕೂಡೆ, ರುದ್ರಂಗೆ ಒಂದು ಜಾವ. ಇಂತಾ ರುದ್ರರು ಏಕಾದಶ ಕೂಡೆ, ಈಶ್ವರಂಗೆ ಎರಡು ಜಾವ. ಇಂತಾ ಈಶ್ವರರು ದ್ವಾದಶ ಕೂಡೆ, ಸದಾಶಿವಂಗೆ ಮೂರು ಜಾವ. ಇಂತಾ ಸದಾಶಿವರು ಶತಸಹಸ್ರ ಕೂಡೆ, ಮಹಾಪ್ರಳಯವಾಯಿತ್ತು. ಇಂತಾ ಮಹಾಪ್ರಳಯ ಹದಿನೆಂಟು ಕೂಡೆ, ಮಹಾಂಧಕಾರ ಸಂದಿತ್ತು. ಇಂತಾ ಮಹಾಂಧಕಾರ ಸಂದಿಲ್ಲದೆ ತಿರುಗುವಲ್ಲಿ, ಬಯಲು ಬರಿಕೆಯ್ಯಿತ್ತು. ಅಲ್ಲಿಂದಾಚೆ ನೀವೆ ಬಲ್ಲಿರಿ, ನಾನರಿಯೆನಯ್ಯಾ. ಸೊಲ್ಲಿಗತೀತನ ಕಲ್ಲಿಲಿರ್ದಹೆನೆಂಬರಯ್ಯಾ. ನಂಬಿಗೆ ಅಂಜಿ ಹಿಂದುಮುಂದಾದೆ, ಸಂದೇಹಿ ನಾನಯ್ಯಾ. ಎಲ್ಲಿ ಭಾವಿಸಿದಡಲ್ಲಿ ವಲ್ಲಭ ನೀನಾಗಿರ್ಪೆ, ಎನ್ನ ನಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಯಾತದ ತುದಿಯಲ್ಲಿ ಕಟ್ಟಿದ ಮಡಕೆಯಂತೆ, ಅದ ನೀತಿವಂತರು ಮೆಟ್ಟಿದಡೆ, ಪಾತಾಳದ ಉದಕವ ತಂದು, ಪಾತಿಗೆ ಹರಹಿದ ತೆರದಂತೆ, ಸರ್ವಮಯದಲ್ಲಿ ಒಪ್ಪಿಪ್ಪ ವಸ್ತುವನರಿದು, ನಿರ್ಜಾತನಾಗಬಲ್ಲಡೆ, ಆತನೆ ಜೀವನ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ