ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಪರವನರಿದುದೆ ಖರ್ಪರ, ತ್ರಿವಿಧವ ಮುರಿದುದೆ ಕಟ್ಟಿಗೆ. ಸರ್ವವ ಕೇಳಿ ಕೇಳದಂತಿಪ್ಪುದೆ ಕುಂಡಲ. ರುದ್ರಪಾಶವ ಕಿತ್ತು ಗಟ್ಟಿಗೊಂಬುದೆ ಜಡೆ. ಜ್ಞಾನ ವಿಜ್ಞಾನ ಸುಜ್ಞಾನ ಮಹಾಜ್ಞಾನ ಅಪರಜ್ಞಾನ. ಇಂತೀ ಪಂಚಜ್ಞಾನ ದಹ್ಯಮಂ ಮಾಡಿ, ಬ್ರಹ್ಮಲಿಖಿತವ ತೊಡೆವಂತೆ ಧರಿಸುವುದು ತ್ರಿಪುಂಡ್ರವ. ಇಂತೀ ವೇಷವ ಧರಿಸಿ ಭಕ್ತನೆಂಬ ಭೂಮಿಯಲ್ಲಿ, ಸಕಲಕರಣಂಗಳ ತೀರ್ಥಯಾತ್ರೆಯಂ ಮಾಡುತ್ತ, ಕಳೆದುಳಿಯಬಲ್ಲಡೆ, ಆತನೇ ಲಿಂಗಜಂಗಮ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ [ನಾ] ನಿನಗಂಜುವೆ. ಕಚ್ಚುವ ಹಾವ ಕೈಯಲ್ಲಿ ಹಿಡಿದೆ. [ಕು]ತ್ತುವ ಹಸುವ ಬಾಗಿಲಲ್ಲಿ ಕಟ್ಟಿದೆ. ತಿಂಬ ಹುಲಿಯ ಅಂಗಳದಲ್ಲಿ ಕೂಡಿದೆ. ನಿನ್ನಂಗವಿದೇನೊ, ಅಭಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಭವಿ, ಗುರುವಿನ ಹಂಗು; ಮನಭವಿ, ಲಿಂಗದ ಹಂಗು. ರುಚಿಭವಿ, ಜಂಗಮದ ಹಂಗು. ಇಂತೀ ತ್ರಿವಿಧದ ಭೇದವನರಿಯಬೇಕು. ಅಂಗಭವಿಯ ಕಳೆದಲ್ಲದೆ ಭಕ್ತನ ಮಾಡಬಾರದು. ಮನಭವಿಯ ಕಳೆದಲ್ಲದೆ ಲಿಂಗವ ಕೊಡಬಾರದು. ತನುರುಚಿಯ ಕಳೆದಲ್ಲದೆ ಜಂಗಮದ ಪ್ರಸಾದವ ಕೊಳಬಾರದು. ಹೀಂಗಲ್ಲದೆ, ಮಾತಿನ ಬಣಬೆಯ ಕಲಿತು, ನೀತಿಯ ಹೇಳುವರೆಲ್ಲರೂ ತ್ರಿವಿಧಕ್ಕಾಚಾರ್ಯರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ, ಬೇಯ್ದ[ಆಕೆಯ] ಕರಚರಣಾದಿಗಳು, ಆ ಗಂಡನಲ್ಲಿಯೆ ಒಪ್ಪವಿಟ್ಟಂತಿರಬೇಕು. ಇಂತಪ್ಪ ಇಷ್ಟಲಿಂಗವ ದೃಷ್ಟದಲ್ಲಿ ಹಿಡಿದುದಕ್ಕೆ ಇದೇ ದೃಷ್ಟ. ಹೀಂಗಲ್ಲದೆ ಲೌಕಿಕಾರ್ಚನೆಯ ಮಾಡುವ ಪೂಜಕರ ಮೆಚ್ಚೆನೆಂದ, ನಚ್ಚಿನಗ್ಫಣಿಯ ಮಜ್ಜನದೊಡೆಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಲ್ಲಿಗೆ ಮರ್ಕಟನಂತಾಗದೆ, ಇಲ್ಲಿಗೆ ವಿಹಂಗನಂತಾಗದೆ. ಈಚೆಯಲ್ಲಿಗೆ ಪಿಪೀಲಿಕನಂತಾಗದೆ, ರಾಜಸ ತಾಮಸ ಸಾತ್ವಿಕದಲ್ಲಿ ಸಾಯದೆ, ಭಾಗೀರಥಿಯಂತೆ ಹೆಚ್ಚು ಕುಂದಿಲ್ಲದೆ, ಮಾಸದ ಚಂದ್ರನಂತೆ, ಕಲೆಯಿಲ್ಲದ ಮೌಕ್ತಿಕದಂತೆ, ರಜವಿಲ್ಲದ ರತ್ನದಂತೆ, ತೆರೆದೋರದ ಅಂಬುಧಿಯಂತೆ, ಒಡಲಳಿದವಂಗೆ, ನೆರೆ ಅರಿದವಂಗೆ, ಕುರುಹೆಂಬುದು ಆತ್ಮನಲ್ಲಿ ಘಟಿಸಿದವಂಗೆ ಬೇರೊಂದೆಡೆಯಿಲ್ಲ. ಆ ಗುಣವಡಗಿದಲ್ಲಿ ಪ್ರಾಣಲಿಂಗಸಂಬಂಧ. ಆ ಸಂಬಂಧ ಸಮಯ ಸ್ವಸ್ಥವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರುದರುಶನದೊಡೆಯನ ಅಂತರಂಗದೊಳಿಪ್ಪ ಅರಿಗಾದಡೆ[ಯೂ] ಗಗನ ಭುವನವೊಂದೆ ಎಂದುದಾಗಿ, ಮಹಾಬಯಲು ಕಡಿದು ಎರಡ ಮಾಡಿಹೆನೆಂದು, ಆ ಬಯಲು ಎರಡಹುದೆ? ಅಣುರೇಣು [ತೃಣಕಾಷ*] ಮಧ್ಯ ಗುಣಭರಿತ ಅಖಂಡ ಬ್ರಹ್ಮವ ಪ್ರಾದೇಶಿಕ ಪರಿಚ್ಛಿನ್ನವೆಂದು ನುಡಿಯಲುಂಟೆ ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅನ್ಯ ಶಬ್ದವ ನುಡಿಯೆ, ಕೇಳೆನೆಂದು ಗಂಟೆಯ ಕರ್ಣದಲ್ಲಿ ಕಟ್ಟಿಕೊಂಡೆ. ಮತ್ತೆಯೂ ಅಪಶಬ್ದವ ನುಡಿವುದಕ್ಕೆ ನೀನೆ ತಿಳಿದು ನೋಡು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಅರಿವ ಕತ್ತಿ ಹರಣದ ಇರವ ಬಲ್ಲುದೆ ? ಬಿರುನುಡಿಯ ನುಡಿವವ ಮಾನ್ಯರ [ಮಾ]ನದ ಮನ್ನಣೆಯ ಬಲ್ಲನೆ ? ಹೆತ್ತವರಿಗೆ ಕೂಸು ಹುಚ್ಚಾದರೆ, ಅದರರ್ತಿ ಹೆತ್ತವರಿಗಲ್ಲದೆ ಮಿಕ್ಕಾದವರಿಗುಂಟೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಲಿಂಗವೆಂದು, ಪ್ರಾಣಲಿಂಗವೆಂದು, ಉಭಯದ ಒಡಲನೊಡಗೂಡುವ ಪರಿಯಿನ್ನೆಂತೊ? ಅದು ಶಿಲೆಯ ಬೆಳಗಿನಂತೆ, ಶಿಲೆ ಅಡಗಿದಡೆ ಬೆಳಗಿಲ್ಲ. ಬೆಳಗಡಗಲಿಕ್ಕೆ ಆ ಶಿಲೆ ಅಚೇತನ ಪಾಷಾಣವಾಯಿತ್ತು. ಅಪ್ಪು ಕೂಡಿದ ಪರ್ಣಯೆಲೆ ನಾಮರೂಪಾದಂತೆ, ಅಪ್ಪುವಡಗೆ ಅಚೇತನ ತರಗಾಯಿತ್ತು. ಅಂಗದ ಮೇಲಣ ಲಿಂಗ, ಲಿಂಗದ ಮೂರ್ತಿಯ ನೆನಹು, ಈ ತ್ರಿವಿಧ ಒಂದುಗೂಡಿದಲ್ಲಿ, ಅಂಗವೆಂಬ ಭಾವ, ಲಿಂಗವೆಂಬ ನೆನಹು ನಿರಂಗವಾದಲ್ಲಿ, ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ. ಈ ಗುಣ ಪ್ರಾಣಲಿಂಗಿಯ ಭೇದ, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅದಿರಿನ ತಲೆ, ಬಿದಿರಿದ ಬಾಯಿ, ಕಾಡಿನ ಹಕ್ಕೆ, ಓಡಿನ ಊಟಿ ಹತ್ತಿದ ಹೊಟ್ಟೆ, ಬತ್ತಿದ ಗಲ್ಲ, ಊರಿದ ಚರಣ, ಏರಿದ ಭಾಷೆ. ಇದು ಶರಣಂಗಲ್ಲದೆ ನಡುವಣ ಪುಕ್ಕಟವಾದವರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ? ಇವರಾಗುಹೋಗನರಿಯದೆ, ಬಾಧೆಗೆ ಸಿಕ್ಕಿ ನಾದವ ಲಾಲಿಸುವ ನಾಗಫಣಿಯಂತೆ ಆಡುತ್ತಿದ್ದು, ಹೋದ ಹೊಲಬೇಕೆಂದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಣುಮಾತ್ರವಪ್ಪ ವಾಯುವ, ಮನದ ಕೊನೆಯ ಮೊನೆಯಲ್ಲಿ ಸಪ್ತಸಮುದ್ರ, ದಿಗ್ವಳಯದ ಗಿರಿಗಳು ಮುಂತಾದವ ತನ್ನ ಸತ್ವದಲ್ಲಿ ಎತ್ತುವದ ಕಂಡೆ. ಕೊಂಡು ಹೋ[ಹು]ದ ಕಂಡುದಿಲ್ಲ. ಎತ್ತಿ ಎಯ್ದಿಹೆನೆಂಬುದರಲ್ಲಿ, ವಾಯುಸತ್ವ ನಷ್ಟವಾಯಿತ್ತು. ಇಂತೀ ಗುಣವ ತ್ರಿಗುಣಾತ್ಮಕರು ತಿಳಿದು, ಜಡ ಅಜಡವೆಂಬುದ ಕಳೆದು ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಳಗು ಮಾಡಿರೆ.
--------------
ಮೋಳಿಗೆ ಮಾರಯ್ಯ
ಅಸಿಯಾಗಲಿ ಮಸಿಯಾಗಲಿ ಕೃಷಿಯಾಗಲಿ ವಾಣಿಜ್ಯ ಮುಂತಾದ ಕೃಷಿಯ ಮಾಡುವಲ್ಲಿ, ಪಶುಪತಿಗೆಂದೇ ಪ್ರಮಾಣಿಸಿ ಭಕ್ತಿಯೆಸಕದಿಂದ, ಹಸಿವಿಲ್ಲದೆ ತೃಷೆಯಿಲ್ಲದೆ ವಿಷಯವನರಿಯದೆ, ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದ ಮಾಡುತಿರ್ಪ ಭಕ್ತನ ಅಂಗಣವೆ ವಾರಣಾಸಿ, ಆತನ ಆಶ್ರಯವೆ [ಅ] ವಿಮುಕ್ತ ಕ್ಷೇತ್ರ, ಆತನ ಮುಖವೆ ಮೋಕ್ಷದಾಗರ. ಆತನಂಗವೆ [ಲಿ] ಂಗದ ಬೆಳಗು, ಆತನ ಪಾದವೆ ಪವಿತ್ರ ಸುಧೆ. ಹೀಂಗೆ ತ್ರಿಕರಣ ಶುದ್ಧಾತ್ಮ ಭಕ್ತನಂತೆ ಒಕ್ಕುದ ಕಾಯ್ದುಕೊಂಡಿರ್ಪ ಕುಕ್ಕು [ಟ] ನಂತೆ ಮಾಡಾ. ಎನಗಿದೇ ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಕ್ಕಿಯ ಕುದಿಸಿದಡೆ ಪಕ್ವವಲ್ಲದೆ, ಮಿಕ್ಕುಳಿದುದಕ್ಕೆ ಪಕ್ವವುಂಟೆ? ಮರವೆಯಲ್ಲಿ ಅರಿವಲ್ಲದೆ, ಅರಿವಿನಲ್ಲಿ ಮರವೆಯುಂಟೆ? ಅದ ಉಂಟೆನಬಾರದು, ಇಲ್ಲೆನಬಾರದು. ಈ ಉಭಯವನೀಂಟಿಯಲ್ಲದೆ, ಗಂಟಿಕೆಗೆ ಹೊರಗಾಗ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಅಂಗಲಿಂಗ ಸಂಬಂಧ, ಭಾವಲಿಂಗ ಸಂಬಂಧ, ಪ್ರಾಣಲಿಂಗ ಸಂಬಂಧವೆಂದು ಭಾವಿಸಬೇಕು, ಭಾವಿಸಬೇಡಾ ಎಂಬ ಉಭಯದ ತೆರನೆಂತುಟೆಂದಡೆ: ಮೃದುಕಠಿನವನರಿವನ್ನಕ್ಕ ಕುರುಹ ಮರೆಯಲಿಲ್ಲ. ಶೀತ ಉಷ್ಣಾದಿಗಳನರಿವನ್ನಕ್ಕ ಭಾವವ ಮರೆಯಲಿಲ್ಲ. ರೂಪು ನಿರೂಪೆಂಬ ದ್ವಯಂಗಳ ಭೇದಿಸುವನ್ನಕ್ಕ ಪ್ರಾಣಲಿಂಗವೆಂಬ ಉಭಯದ ಕುರುಹುಂಟು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರ್ಪಿತ ಭಿನ್ನವ ಮಾಡಬಹುದೆ ಅಯ್ಯಾ ? ಸರ್ಪ ದಷ್ಟವಾದಲ್ಲಿ ಕಚ್ಚಿದ ಠಾವಿನಲ್ಲಿರ್ಪುದೆ ವಿಷ ? ತನುವಿನ ದರ್ಪವ ಮುರಿವುದಲ್ಲದೆ, ಸಿಲುಕುವುದೆ ಒಂದು ಠಾವಿನಲ್ಲಿ ? ಭಕ್ತಿ ಜ್ಞಾನ ವೈರಾಗ್ಯ[ವೆಂಬ] ಮೂರರ ತೊಟ್ಟುಬಿಟ್ಟ ಶರಣಂಗೆ ಅರ್ಪಿತವೆರಡಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿವನರಿವನ್ನಕ್ಕ ಅರ್ಚನೆ ಬೇಕು, ಪುಣ್ಯವನರಿವನ್ನಕ್ಕ ಪೂಜೆ ಬೇಕು. ತಾನೆಂಬುದನರಿವನ್ನಕ್ಕ ಎಲ್ಲ ನೇಮವ ಭಾವಿಸಬೇಕು. ಕಾಲ ಕರ್ಮ ಜ್ಞಾನ ಭಾವ ತಾನುಳ್ಳನ್ನಕ್ಕ ಭಜಿಸಬೇಕು. ತನ್ನ ಮರೆದು, ವಸ್ತುವ ಕುರಿತು ನಿಂದ ಮತ್ತೆ ಬತ್ತಲೆ ಹೋಹವಂಗೆ ಎತ್ತಲೂ ಭಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಳಿವರಿಗೆ ಉಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ. ಉಳಿವರಿಗೆ ಅಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ. ಈ ಅಳಿವು ಉಳಿವು ಎಂಬುಭಯವನೇನೆಂಬುದ ತಿಳಿ. ತಿಳಿದ ಮತ್ತೆ ನಿಃಕಳಂಕ ಮಲ್ಲಿಕಾರ್ಜುನ ಏನೂ ಇಲ್ಲವೆಂಬುದ ತಿಳಿ.
--------------
ಮೋಳಿಗೆ ಮಾರಯ್ಯ
ಅರ್ಚನೆಯ ಮಾಡುವಲ್ಲಿ, ಮಚ್ಚಿ ಬಯಸಲಾಗದು ಇಷ್ಟಾರ್ಥವ. ಲೋಕದ ಪೂಜೆಯ ಮಾಡುವಲ್ಲಿ, ಪುಣ್ಯಲೋಕವ ಮಚ್ಚಲಾಗದು. ಇಂತೀ ಗುಣವಿರಹಿತನಾಗಿ, ಚತುರ್ವಿಧಫಲ ಹೊರತೆಯಾಗಿ, ನಿತ್ಯನೇಮವೆಂಬ ಮಾಡುವ ಭಕ್ತವಿದಂಗೆ ಮಾಡಿಯೂ ಮಾಡದಿರ್ದಡೇನು ದಗ್ಧಪಟದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪುವಿನ ಯೋಗದ ಕಾಷ* ಹೊತ್ತುವಲ್ಲಿ, ಮೆಚ್ಚನೆ ತಮದ ಧೂಮ, ಶುಷ್ಕದ ಅಪ್ಪುವಿನ ಗುಣ. ಅಪ್ಪುವರತು ಶುಷ್ಕ [ತೊ]ಟ್ಟಾರೆ, ಕಿಚ್ಚು ಮುಟ್ಟುವುದಕ್ಕೆ ಮುನ್ನವೆ, ಹೊತ್ತಿ ಬೇವುದದು ಕಿಚ್ಚೋ, ಮತ್ತೊಂದೋ ? ಇಂತೀ ಉಭಯವನರಿತು, ಒಂದರಲ್ಲಿ ಒಂದು ಅದೆಯೆಂಬ ಸಂದೇಹವ ನೋಡಾ. ಅಲ್ಲಾ ಎಂದಡೆ ಭಿನ್ನಭಾವ, ಅಹುದೆಂದಡೆ ಇಷ್ಟದ ದೃಷ್ಟವೊಂದೆಯಾಗಿದೆ. ಜನ ಜಾತ್ರೆಗೆ ಹೋದವನಂತೆ ಕೂಟದಲ್ಲಿ ಗೋಷಿ* ಹ[ರಿ]ದಲ್ಲಿ, ತಮ್ಮ ತಮ್ಮ ಮನೆಯ ಇರವಿನ ಹಾದಿ. ಇಂತಿವನರಿದು ಬಾಡಗೆಯ ಮನೆಗೆ ಹೊಯ್ದಾಡಲೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿವು ಕರಿಗೊಂಡಲ್ಲಿ ಇದರ ತೆರನನರಿಯಬೇಕು. ತನ್ನ ಮರೆಯಬೇಕು, ಲಿಂಗವನರಿಯಬೇಕು. ಅರಿದ ಮತ್ತೆ ಎರಡಕ್ಕೆ ತೆರಪಿಲ್ಲ, ಹಿಡಿವುದಕ್ಕೆ ಅಂಗವಿಲ್ಲ. ಅರಿವುದಕ್ಕೆ ಆತ್ಮವಿಲ್ಲ. ಬೇರೆ ಬಿಡುಗಡೆ ಇಲ್ಲವಾಗಿ, ಆ ಅರಿಕೆ ತಾನೆ ಶರಣನಲ್ಲಿ. [ಇದು] ನಿರ್ಲೇಪ, ಶರಣಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಗ್ನಿ ವಾಯುವ ಧರಿಸಿ, ವಾಯು ಆಕಾಶವ ಧರಿಸಿ, ಆಕಾಶ ಅಪ್ಪುವ ಧರಿಸಿ, ಅಪ್ಪು ಪೃಥ್ವಿಯ ಧರಿಸಿ, ಆ ಪೃಥ್ವಿಗೆ ಅಪ್ಪು, ಆ ಅಪ್ಪುವಿನ ಮಧ್ಯದ ಕಮಠ, ಕಮಠನ ಮಧ್ಯದ ಶೇಷ, ಶೇಷನ ಮಧ್ಯದ ಜಗ, ಜಗದ ಆಗುಚೇಗೆಯಲ್ಲಿ ಲೋಲನಾಗದೆ, ಕಾಯಗುಣವ ಕರ್ಮದಿಂದ ಕಳೆದು, ಜೀವ ಗುಣವ ಅರಿವಿನಿಂದ ಮರೆದು, ಭಾವ ನಿರ್ಭಾವವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಅಂಗದ ನಿರಾಭಾರಿಗಳೆಲ್ಲರೂ ಕೂಡಿ, ಲಿಂಗದ ಹೊಲಬ ಬಲ್ಲೆವೆಂದು, ಅನಂಗನ ಬಲೆಯೊಳಗಿಲ್ಲವೆಂದು, ಸಕಲರ ಸಂಸರ್ಗವನೊಲ್ಲೆವೆಂದು ಮತ್ತೆ ಅಖಿಲರೊಳಗೆ ಸಕಲಭೋಗವನುಂಡು, ವಿಕಳಗೊಂಡವರ ನೋಡಾ. ಪ್ರಕೃತಿ ಹರಿಯದೆ, ಸುಖವ ಮೆಚ್ಚಿ ತಿರುಗದೆ, ಇಂತಿಹ ಅಖಿಳಂಗೆ ನಮೋ ನಮೋ, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪುವಿನೊಳಗಣ ಅಗ್ನಿಯಂತೆ ಅಪ್ಪುವಿನೊಳಗೆ ಬೆರೆದು, ಕೆಡದ ಕಿಚ್ಚಿನಂತೆ ಸ್ಥಲಕುಳಭರಿತನಾಗಿ, ಸ್ಥಲದಲ್ಲಿದ್ದು ಸ್ಥಲವ ನೇತಿಗಳೆದಲ್ಲಿ ಒಳಗು ಹೊರಗಾಯಿತ್ತು. ಆ ಹೊರಗಣ ಹೊಲಬ ಕಂಡು, ಆ ಹೊಲಬಿ[ಗ]ನ ಹೊಲನ ನೋಡಿ, ವಿರಳ ಅವಿರಳವೆಂಬುದನರಿತು, ಕುರುಹು ನಷ್ಟವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಾಮನಷ್ಟ.
--------------
ಮೋಳಿಗೆ ಮಾರಯ್ಯ
ಅರಗಿನ ಮಣಿಯ ಮಾಡಿ, ಉರಿಯ ನೇಣ ಮಾಡಿ, ಹಿರಿಯರೆಲ್ಲರು ಪವಣಿಸಲಾರರು. ಈ ಮಣಿಯ ಗುಣಕ್ಕೆ ಗುಣಜ್ಞರಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...