ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಧ್ಯ ಸಾಧಕರಿಲ್ಲದಂದು, ಪೂಜ್ಯ ಪೂಜಕರಿಲ್ಲದಂದು, ದೇವ ಭಕ್ತನೆಂಬ ನಾಮ ತಲೆದೋರದಂದು, ಉಪಾಸ್ಯ ಉಪಾಸಕರಿಲ್ಲದಂದು, ಅಂಗಸ್ಥಲ ಲಿಂಗಸ್ಥಲವಾಗದಂದು, ನಿನ್ನ, ನಿಃಕಲ ಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ತಾತ ಗುರು, ಹೊತ್ತಾತ ಲಿಂಗವು, ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ. ಸತ್ತವನೊಬ್ಬ, ಹೊತ್ತವನೊಬ್ಬ, ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ. ಆತ್ತವರಮರರು, ನಿತ್ಯವಾದುದು ಪ್ರಸಾದ, ಪರಿಪೂರ್ಣವಾದುದು ಪಾದಜಲ. ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸುದತಿ ಪುತ್ರ ಮಿತ್ರ ಮಾತೃಪಿತೃರು ಹಿತರು ನಿತ್ಯರೆಂದು ಹದೆದು ಕುದಿದು ಕೋಟಲೆಗೊಂಬನ್ನಕ್ಕರ ಗುರುವೆಂದೇನಯ್ಯ. ಸುರಚಾಪದಂತೆ ತೋರಿ ಕೆಡುವ ಹೆಣ್ಣು ಹೊನ್ನು ಮಣ್ಣ ನಚ್ಚಿ ಮದಡನಾಗಿಪ್ಪನ್ನಕ್ಕರ ಲಿಂಗವೆಂದೇನಯ್ಯ. ಈ ಕಷ್ಟ ಸಂಸೃತಿಯ ಕೂಪತಾಪದೊಳಗೆ ಬಿದ್ದುರುಳುವ ನಾಮನಷ್ಟರಿಗೆ ಜಂಗಮಲಿಂಗವೆಂದೇನಯ್ಯ. ಈ ದುಷ್ಟದುರ್ಮಲತ್ರಯದ ಅಂಧಕಾರ ಘೋರತರವಿಕಾರ ಸರ್ಪದಷ್ಟರಾದ ದುಷ್ಟರಿಗೆ ಶಿವಸತ್ವಥವೆಂದೇನು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. ಭಕ್ತನ ಮಾಹೇಶ್ವರ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಣ್ಣನ ನೂಲುವ ಚಿಣ್ಣಂಗೆ ಬಣ್ಣ ಮುನ್ನಿಲ್ಲ ನೋಡಯ್ಯ. ಚಿಣ್ಣ ತಾನಾದರೇನಯ್ಯ? ಬಣ್ಣವುಳ್ಳವರ ಕಣ್ಣಿಗೆ ಕಾಣಿಸನು ನೋಡಯ್ಯ. ಬಣ್ಣವಳಿದು ಕಣ್ಣ ಕತ್ತಲೆ ಹರಿದಲ್ಲದೆ ಚಿಣ್ಣನ ಕಾಣಬಾರದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಐವರನೆತ್ತಿ ನುಂಗಿದ ಅವಿರಳ ಪರಬ್ರಹ್ಮ ನೋಡಾ. ಆ ಪರಬ್ರಹ್ಮವ ನುಂಗಿದನು ನಿರವಯ. ನಿರವಯವ ನುಂಗಿದ ನಿರಾಳ. ನಿರಾಳವ ನುಂಗಿದ ನಿತ್ಯ ನಿರಂಜನ ಪರವಸ್ತು ನೋಡಾ. ಇವರೆಲ್ಲರ ನುಂಗಿದ ಪರವಸ್ತು ಎನ್ನ ನುಂಗಿತ್ತಾಗಿ, ಆ ಪರವಸ್ತುವ ನಾನು ನುಂಗಿದೆನಾಗಿ, ನಿಃಶಬ್ದಮಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ಯನಲ್ಲ, ಅಸತ್ಯನಲ್ಲ. ಕರ್ಮಿಯಲ್ಲ, ಧರ್ಮಿಯಲ್ಲ, ನಿಃಕರ್ಮಿಯಯ್ಯ ಭಕ್ತನು. ಆಚಾರನಲ್ಲ ಅನಾಚಾರನಲ್ಲ; ಪುಣ್ಯ ಪಾಪ ವಿರಹಿತನಾಗಿ ನಿಷ್ಪಾಪಿಯಯ್ಯ ಭಕ್ತನು. ವ್ರತ ನೇಮ ಮಂತ್ರ ತಂತ್ರ ಭವಿ ಭಕ್ತನೆಂಬುವುದಿಲ್ಲ ನೋಡಾ, ಲಿಂಗೈಕ್ಯಂಗೆ. ಸವಿಕಲ್ಪನಲ್ಲ. ನಿರ್ವಿಕಲ್ಪನಲ್ಲ. ಸೀಮನಲ್ಲ. ನಿಸ್ಸೀಮನಲ್ಲ. ಪರಮ ನಿರಂಜನನು ತಾನೆ ನೋಡಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸದ್ಯೋಜಾತನ ಮುಟ್ಟಿ, ಪೃಥ್ವಿ ಬಯಲಾಗಿ ಚಿತ್ತ ಪಂಚಕವು ಕೆಟ್ಟವು ನೋಡಾ. ವಾಮದೇವನಿಗೊಲಿದು, ಅಪ್ಪು ಬಯಲಾಗಿ ಬುದ್ಧಿ ಪಂಚಕವು ಕೆಟ್ಟವು ನೋಡಾ. ಅಘೋರನ ನೆರೆದು, ಅಗ್ನಿ ಬಯಲಾಗಿ ಅಹಂಕಾರ ಪಂಚಕವಳಿದು ನಿರಹಂಕಾರಿಯಾದೆನಯ್ಯ. ತತ್ಪುರುಷನನಪ್ಪಿ, ವಾಯು ಬಯಲಾಗಿ ಮನಪಂಚಕವಳಿದವು ನೋಡಾ. ಈಶಾನ್ಯನೊಡಗೂಡಿ, ಆಕಾಶಬಯಲಾಗಿ ಭಾವ ಪಂಚಕವಳಿದು ನಿರ್ಭಾವಿಯಾಗಿ ನಿಜಲಿಂಗೈಕ್ಯನಾದೆನಯ್ಯ. ಎಲ್ಲಾ ಪದಂಗಳ ಮೀರಿ ಮಹಾಲಿಂಗ ಪದದೊಳಗೆ ಸಂಯೋಗವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸುಧೆಯೊಳಗೆ ವಿಷವುಂಟೆ? ಮಧುರದೊಳಗೆ ಕಹಿಯುಂಟೆ? ದಿನಮಣಿಯೊಳಗೆ ಕಪ್ಪುಂಟೆ? ಬೆಳದಿಂಗಳೊಳಗೆ ಕಿಚ್ಚುಂಟೆ? ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ? ಮಹಾಜ್ಞಾನಸ್ವರೂಪರಪ್ಪ ಶರಣರೇ ಲಿಂಗವೆಂದರಿದ ಮಹಾತ್ಮಂಗೆ ಸಂಕಲ್ಪ ಭ್ರಮೆಯುಂಟೆ? ಅದೇತರ ವಿಶ್ವಾಸ? ಸುಡು ಸುಡು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ವಾನುಭಾವ ವಿವೇಕ ಅಂತರ್ಗತವಾಗಿ ಜ್ಞಾನ ತಲೆದೋರಿತ್ತಯ್ಯ. ಆ ತಲೆಯೊಳಗೊಂದು ಚಿತ್ಪ್ರಾಣನ ಕಂಡೆನಯ್ಯ. ಅದೇ ಎನ್ನ ಪ್ರಾಣದೊಡೆಯನೆಂದರಿದು ಅಲ್ಲಿ ಸನುಮತ ಸಂಗಿಯಾಗಿ ಘನಸಮರಸವಾಗಿ ಮನ ಮಗ್ನನಾಗಿ ಸದಾ ಸನ್ನಹಿತನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ ಅಖಂಡ ಪರಿಪೂರ್ಣ ಗೋಳಕಾಕಾರ ಪರಂಜ್ಯೋತಿಸ್ವರೂಪವಪ್ಪ ಮಹಾಲಿಂಗವಾಯಿತ್ತು ನೋಡಾ. ಆ ಲಿಂಗದ ಮಧ್ಯದಲ್ಲಿ ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ, ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು, ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ, ಸಕಲ ನಿಃಕಲವಾಗಿ, ಪಂಚಮುಖ ದಶಭುಜ ದಶಪಂಚನೇತ್ರ ದ್ವಿಪಾದ ತನುವೇಕ ಶುದ್ಧ ಸ್ಫಟಿಕವರ್ಣ ಧಾತುವಿನಿಂದ ಒಪ್ಪುತ್ತಿಪ್ಪುದು ಸದಾಶಿವಮೂರ್ತಿ. ಆ ಸದಾಶಿವನ ಈಶಾನ್ಯಮುಖದಲ್ಲಿ ಆಕಾಶ ಪುಟ್ಟಿತ್ತು. ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು. ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು. ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು. ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು. ಮನಸ್ಸಿನಲ್ಲಿ ಚಂದ್ರ, ಚಕ್ಷುವಿನಲ್ಲಿ ಸೂರ್ಯ. ಪರಮಾತ್ಮ ಸ್ವರೂಪವಪ್ಪ ಗೋಪ್ಯಮುಖದಲ್ಲಿ ಆತ್ಮ ಹುಟ್ಟಿದನು. ಇಂತು, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಶಿವನ ಅಷ್ಟತನುಮೂರ್ತಿಯೆ ಸಮಸ್ತ ಜಗತ್ತಾಯಿತ್ತು. ಆ ಜಗತ್ತಾವಾವವೆಂದಡೆ: ಚತುರ್ದಶ ಭುವನಂಗಳು, ಸಪ್ತ ಸಮುದ್ರಂಗಳು, ಸಪ್ತ ದ್ವೀಪಂಗಳು, ಸಪ್ತ ಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ಬ್ರಹ್ಮಾಂಡವೆನಿಸಿತ್ತು. ಇದು ಜಗದುತ್ಪತ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ಯದಲ್ಲಿ ನಡೆವುದು ಶೀಲ; ಸತ್ಯದಲ್ಲಿ ನುಡಿವುದು ಶೀಲ, ಸಜ್ಜನ ಸದಾಚಾರದಲ್ಲಿ ವರ್ತಿಸಿ ನಿತ್ಯವನರಿವುದೆ ಶೀಲ ಕಾಣಿಭೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸುರತರು ವೃಕ್ಷದೊಳಗಲ್ಲ; ಸುರಧೇನು ಪಶುವಿನೊಳಗಲ್ಲ; ಪರುಷ ಪಾಷಾಣದೊಳಗಲ್ಲ; ಶಿಷ್ಯನ ಭಾವಕ್ಕೆ ಗುರು ನರನಲ್ಲ; ಗುರುವೇ ಪರಮೇಶ್ವರನೆಂದು ಭಾವಿಸಬಲ್ಲಡೆ ಶಿಷ್ಯನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ಯಲೋಕದಿಂದ ಚಿತ್‍ಸಮುದ್ರ ಉಕ್ಕಿ ಹರಿಯಲು ಸಪ್ತಸಮುದ್ರಂಗಳೆಲ್ಲಾ ಬರತವು ನೋಡಾ. ಮತ್ರ್ಯಲೋಕದ ಮಾನವರು ಚಿತ್‍ಸಮುದ್ರದೊಳಗೆ ಮುಳುಗಿ ನಿತ್ಯ ನಿಶ್ಚಿಂತ ನಿರ್ಮಲರಾದರು ನೋಡಾ. ಚಿತ್ ಸಮುದ್ರದೊಳಗೆ ಮುಳುಗಿ ಸತ್ತಾತ ಸಾಕ್ಷಾತ್ ಪರವಸ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು ಅನಾದಿಪರಶಿವ ನೀನೊರ್ಬನೆ ಇರ್ದೆಯಯ್ಯ. ಆ ನಿರಕಾರ ಪರಶಿವನಿಂದ ನಾನುದಯವಾಗಿ, ಮಾಯಾರಂಜನೆ ಹುಟ್ಟದ ಮುನ್ನ ನಿರಂಜನನೆಂಬ ಗಣೇಶ್ವರನಾಗಿರ್ದೆನು. ಜ್ಞಾನಾಜ್ಞಾನಗಳಿಲ್ಲದಂದು ಜ್ಞಾನಾನಂದನೆಂಬ ಗಣೇಶ್ವರನಾಗಿರ್ದೆನು. ಈ ಶರೀರವಿಲ್ಲದಂದು ನಿರ್ಮಲನೆಂಬ ಗಣೇಶ್ವರನಾಗಿರ್ದೆನು. ಬಸವ ಮೊದಲಾದ ಪ್ರಮಥರೆಲ್ಲರೂ ಪ್ರಸಾದವ ಎನ್ನಲ್ಲಿ ಸಂಬಂಧಿಸಿ, ನಿನ್ನ ಕೃಪಾಪ್ರಸಾದವನೆನ್ನಲ್ಲಿ ಮೂರ್ತಿಗೊಳಿಸಿ, `ಇನ್ನಾವುದಕ್ಕೂ ಅಂಜಬೇಡ'ವೆಂದು, ನೀನು, ನಿನ್ನ ಪ್ರಮಥರು ಎನ್ನ ಆಜ್ಞಾಪಿಸಿ ಮತ್ರ್ಯಕ್ಕೆ ಕಳುಹಿದಿರಿಯಾಗಿ, ಕಳುಹಿದ ಭೇದವ ಶಿವಜ್ಞಾನೋದಯದಿಂದ ಅರಿದು ಸಿದ್ಧಲಿಂಗನೆಂಬ ನಾಮ ಎನಗೆ ನಿನ್ನಿಂದ ಬಂದಿತ್ತೆಂಬುದ ಅರಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಂಗ್ರಹದ ಮನೆಯಲ್ಲಿ ಭೃಂಗೀಶ್ವರನೆದ್ದು ಲಿಂಗಲೀಲೆಯಾಡುವುದ ಕಂಡೆನಯ್ಯ. ನಂದೀಶ್ವರ ಮುಖ್ಯರಾದ ಪ್ರಮಥರು ನಲಿದಾಡುತ್ತಿದಾರೆ ನೋಡಾ ಅಯ್ಯ. ಸಂಗ್ರಹದ ಮನೆಯಳಿದು ಭೃಂಗಿ ಸಿಕ್ಕದೆ ಭಂಗಿತರಾದರಲ್ಲಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸವಿಕಲ್ಪ ಸತ್ತಿತ್ತು, ನಿರ್ವಿಕಲ್ಪವೆಂಬ ಗರ್ವವಳಿದು, ತೆರಹಿಲ್ಲದ ಮಹಾಘನದೊಳಡಗಿತ್ತಾಗಿ. ಸಾಧ್ಯವಿಲ್ಲ, ಸಾಧಕನಿಲ್ಲ; ಪೂಜ್ಯನಿಲ್ಲ, ಪೂಜಕನಿಲ್ಲ; ದೇವನಿಲ್ಲ, ಭಕ್ತನಿಲ್ಲ. ಇವೇನುಯೇನೂ ಇಲ್ಲವಾಗಿ ನಾಮನಲ್ಲ, ನಿರ್ನಾಮನಲ್ಲ; ಸೀಮನಲ್ಲ, ನಿಸ್ಸೀಮನಲ್ಲ; ಇವೇನುಯೇನೂ ಇಲ್ಲದ ಸರ್ವಶೂನ್ಯನಿರಾಲಂಬವು, ನಿರ್ವಯಲು ನಿರಾಕಾರ ಪರವಸ್ತುವು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಪ್ತದ್ವೀಪದ ಮಧ್ಯದಲ್ಲಿ ಇಪ್ಪತ್ತೆ ೈದು ಕೊನೆಯ ವೃಕ್ಷವ ಕಂಡೆನಯ್ಯ. ಎಂಟರಾದಿಯಲ್ಲಿ ನಿಂದು ಏಳರ ನೀರನಲ್ಲಿ ಬೆಳೆದು ಆರರ ಭ್ರಮೆಯಲ್ಲಿ ಮುಳುಗಿ ಮೂಡುತ್ತಿಹುದು. ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಯ್ಯ. ಎಲೆ ಹೂವು ಫಲವು ಹಲವಾಗಿಪ್ಪುದಯ್ಯ. ಸಪ್ತದ್ವೀಪವೂ ಅಲ್ಲ; ಇಪ್ಪತ್ತೆ ೈದು ಕೊನೆಯೂ ಅಲ್ಲ; ಎಂಟಲ್ಲ, ಏಳಲ್ಲ, ಆರರ ಭ್ರಮೆಯಲ್ಲ; ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಿಲ್ಲ; ಎಲೆ ಹೂವು ಫಲವು ಹಲವಾಗಿ ತೋರುವ ತೋರಿಕೆ ತಾನಲ್ಲವೆಂದು ನಡುವಣ ವೃಕ್ಷದ ನೆಲೆಯ ನಿರ್ಣಯವ ತಿಳಿದಾತನಲ್ಲದೆ ಸಲೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸದಾಚಾರದಲ್ಲಿ ನಡೆವವನ ಶಿವನಲ್ಲಿ ಭಕ್ತಿಯಾಗಿಪ್ಪವನ ಶಿವಲಾಂಛನವ ಕಂಡಲ್ಲಿ ವಂದನೆಗೈವುತಿಪ್ಪವನ ಲಿಂಗ ಜಂಗಮವ ಒಂದೇ ಭಾವದಲ್ಲಿ ಕಂಡು ಭೃತ್ಯಾಚಾರ ಸದಾಚಾರಯುಕ್ತನಾಗಿರಬಲ್ಲರೆ ಭಕ್ತನ ಸ್ಥಲವಿದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೂರ್ಯನ ಬೆಳಗಿಂಗೆ ಕೊಳ್ಳಿಯ ಬೆಳಗ ಹಿಡಿಯಲುಂಟೇ ಮರುಳೆ? ತನ್ನ ಮುಖವ ತಾ ಬಲ್ಲವಂಗೆ ಕನ್ನಡಿಯ ಹಿಡಿದು ನೋಡಲುಂಟೇ ಹೇಳಾ. ತನ್ನ ಸುಳುಹಿನ ಸೂಕ್ಷ ್ಮವ ತಾನರಿದ ಸ್ವಯಜ್ಞಾನಿಗೆ ಇನ್ನಾವ ಆಗಮಬೋಧೆಯೇಕೆ ಹೇಳ? ಆಗಮಶಿಕ್ಷೆಯೆಂಬುದು, ಲೋಗರಿಗಲ್ಲದೆ, ಆದಿಯಲ್ಲಿ ಶಿವಬೀಜವಾದ ಮಹಾಮಹಿಮರಿಗುಂಟೇ? ಸ್ವಾನುಭಾವಜ್ಞಾನ ಎಲ್ಲರಿಗೂ ಇಲ್ಲವಲ್ಲ. ಇಲ್ಲದಿರ್ದಡೆ ಮಾಣಲಿ, ಅದಕ್ಕೇನು ಕೊರತೆಯಿಲ್ಲ. ಮತಾಂತರ ಶಾಸ್ತ್ರಾಗಮಂಗಳ ಮುಟ್ಟಲಾಗದು. ಅದೇನು ಕಾರಣವೆಂದಡೆ: ಅವರಂಗದ ಮೇಲೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವಿಲ್ಲದ ಕಾರಣ. ಆ ಆಗಮದಲ್ಲಿ ಜಂಗಮಪ್ರಸಾದವ ಲಿಂಗಕ್ಕರ್ಪಿಸಿ, ಕೊಟ್ಟು ಕೊಳಬೇಕೆಂಬ ಪ್ರಮಾಣವ ಹೇಳವಾಗಿ. ಛಿಃ, ಅವೆಲ್ಲಿಯ ಆಗಮ, ಅವು ಅಂಗಲಿಂಗ ಸಂಬಂಧಿಗಳಿಗೆ ಮತವೇ? ಅಲ್ಲ. ಸದ್ಗುರುವಿನ ವಚನ ಪ್ರಮಾಣೇ? ಅಲ್ಲ. ಗುರುವಚನ ಪ್ರಮಾಣವಲ್ಲದ ಮಾರ್ಗವ ಹಿಡಿದು ಆಚರಿಸುವರೆಲ್ಲರು ಗುರುದ್ರೋಹಿಗಳು. ಎಲೆ ಶಿವನೇ, ನೀ ಸಾಕ್ಷಿಯಾಗಿ ಅಂಗಲಿಂಗ ಸಂಬಂಧಿಗಳಿಗೆ ಪರಮ ವೀರಶೈವಾಗಮವೇ ಪ್ರಮಾಣು. ಪುರಾತನರ ಮಹಾವಾಕ್ಯವೇ ಪ್ರಮಾಣು. ಉಳಿದುವೆಲ್ಲ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಆಧಾರವಾಗಿ ನಿರ್ಮಲವಾಗಿ, ಸ್ಥಿರವಾಗಿ, ಸರ್ವಸರ್ವಜ್ಞಾನ ಸರ್ವಾತ್ಮಕ ನಿರ್ವಿಕಾರ ನಿತ್ಯಾತ್ಮಕನಾದ ಪರಮಾತ್ಮಲಿಂಗವು, ``ಪರಂ ಗೂಢಂ ಶರೀರರಸ್ಥಂ ಲಿಂಗಕ್ಷೇತ್ರಮನಾದಿವತ್| ಯಥಾದಿಮೀಶ್ವರಂ ತೇಜಂ ತಲ್ಲಿಂಗಂ ಪಂಚಸಂಜ್ಞಕಂ||' ಎಂಬ ಪಂಚಸಂಜ್ಞೆಯನೊಳಕೊಂಡು ``ಆಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಅಣುವಿಂಗಣು ಮಹತ್ತಕ್ಕೆ ಮಹತ್ತಾಗಿಪ್ಪ ಮಹಾಲಿಂಗದ ನಿಲುಕಡೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಚ್ಚಿದಾನಂದನ ಸಂಕಲ್ಪಮಾತ್ರದಿಂದ ಮಿಥ್ಯಾ ಛಾಯೆ ತೋರಿತ್ತು ನೋಡಾ. ತಥ್ಯವೇ ಶಿವತತ್ತ್ವ, ಮಿಥ್ಯಯೇ ಮಾಯಾಸೂತ್ರದ ಜಗಜ್ವಾಲ ನೋಡಾ. ತಥ್ಯವೇ ತನ್ನ ನಿಜವೆಂದು, ಮಿಥ್ಯವೇ ಹುಸಿಯೆಂದರಿವ ಶಿವತತ್ತ್ವಜ್ಞಾನಿಗಳಪೂರ್ವ ನೋಡಾ. ತಥ್ಯಮಿಥ್ಯವೆಂಬ ಹೊತ್ತುಹೋಕನತಿಗಳೆದ ನಿತ್ಯ ನಿರಂಜನನು ತಾನು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೂರ್ಯನಿಂದ ತೋರಿದ ಕಿರಣಂಗಳಿಗೂ ಆ ಸೂರ್ಯನಿಗೂ ಭಿನ್ನವುಂಟೇ?. ಚಂದ್ರನಿಂದ ತೋರಿದ ಕಲೆಗೆ ಆ ಚಂದ್ರನಿಗೂ ಭಿನ್ನವುಂಟೇ?. ಅಗ್ನಿಯಿಂದ ತೋರಿದ ಕಾಂತಿಗೂ ಆ ಅಗ್ನಿಗೂ ಭಿನ್ನವುಂಟೇ?. ಜ್ಯೋತಿಯಿಂದ ತೋರಿದ ಬೆಳಗಿಗೂ ಆ ಜ್ಯೋತಿಗೂ ಭಿನ್ನವುಂಟೇ?. ಅಗಮ್ಯ, ಅಗೋಚರ, ಅಪ್ರಮಾಣ, ಅಪ್ರತಿಮ ಮಹಾಲಿಂಗದಲ್ಲಿ ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ ಉದಯಿಸಿದ ಶರಣಂಗೂ ಆ ಮಹಾಲಿಂಗಕ್ಕೂ ಭಿನ್ನವುಂಟೇ? ಇದ ಬೇರೆಂಬ ಅರೆಮರುಳುಗಳನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ, ನೊರೆವಾಲ ಚಲ್ಲಿ ಕಾಟೆಯ ಬಯಸಿ ಬಾಯಾರುವಂತೆ, ತಾಯ ಮಾರಿ ತೊತ್ತ ಕೊಂಬವರಂತೆ, ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ, ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ, ಮಾಯಾಪ್ರಪಂಚ ಮಚ್ಚಿದ ಮನುಜರು, ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿ[ಸುವ] ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಿರಿಯ ಸೀರೆಯನುಟ್ಟು, ಐವರು ತರುಣಿಯರು ಉರಿಯ ಪುರುಷನ ನೆರೆಯ ಹೋಗಿ, ಸಿರಿಯ ಸೀರೆಯ ತೆಗೆಯದೆ ನಾಚಿದರು ನೋಡಾ. ಸಿರಿಯ ಸೀರೆಯನಳಿದು, ಉರಿಯ ಪುರುಷನ ನೆರೆಯಲು, ಅದು ಪರಮ ಶಿವಯೋಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...