ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೆಲ್ಲುದ್ದ ಮರನನೇರಿ ಇಳಿಯಲರಿಯದೆ ತ್ರೆ ೈಜಗವೆಲ್ಲಾ ತಲ್ಲಣಿಸುತ್ತಿದೆ ನೋಡಾ. ಅಲ್ಲಿಯ ಫಲವ ಬಯಸಿದ ಹಿರಿಯರೆಲ್ಲ ಹಳ್ಳದಲ್ಲಿ ಕೆಡೆದರೆ ಇದ ಕಂಡು ಹೇಸಿ, ಕಡೆಗೆ ತೊಲಗಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ?. ಸತ್ಯ ಜ್ಞಾನಿಗೆ ಅಜ್ಞಾನದ ಭಯವುಂಟೇ?. ವಾತ ಪಿತ್ತ ಶ್ಲೇಷ್ಮ ನಷ್ಟವಾದವಂಗೆ ತಾಪತ್ರಯಾದಿಗಳ ಭಯವುಂಟೇ?. ಸ್ವಯಂಜ್ಯೋತಿಯ ಬೆಳಗನುಳ್ಳಾತನು ಚಂದ್ರಸೂರ್ಯಾದಿಗಳ ಬೆಳಗನಾಶ್ರಯಿಸುವನೆ?. ನಿಜದಿಂದ ತನ್ನ ತಾನರಿದು, ತಾನು ತಾನಾದತನು, ಮಾಯಾದ ಗಜಬಜೆಯ ಹುಸಿಗೆ ಬೆದರುವನೆ ಮಹಾಶರಣನು?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ. ಅದರಂಕುರ ಮೂರು, ಫಲವಿಪ್ಪತ್ತೆ ೈದು ನೋಡಾ. ಪ್ರಥಮಾಂಕುರ ಶಿವ, ದ್ವಿತೀಯಾಂಕುರ ಸದಾಶಿವ, ಮೂರನೆ ಅಂಕುರ ಮಹೇಶ್ವರ. ಫಲವಿಪ್ಪತ್ತೆ ೈದು, ಪಂಚವಿಂಶತಿ ಲೀಲಾವಿಗ್ರಹ ನೋಡಾ. ಫಲವಿಪ್ಪತ್ತೆ ೈದು, ಅಂಕುರ ಮೂರನೊಳಕೊಂಡು ನಿಂದ ನಿರ್ವಯಲ ಪ್ರಾಣಲಿಂಗವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿತ್ಯನಿರಂಜನನಾದ ಪರಶಿವನು ಲಿಂಗ ಜಂಗಮ ಭಕ್ತನೆಂದು ಮೂರು ತೆರನಾದನು ನೋಡಿರೇ. ಸದ್ರೂಪು ಲಿಂಗ, ಚಿದ್ರೂಪು ಭಕ್ತ, ಆನಂದ ಸ್ವರೂಪವೇ ಜಂಗಮ ನೋಡಾ. ಆ ಚಿತ್‍ಸ್ವರೂಪವಪ್ಪ ಭಕ್ತಂಗೆ ಸತ್‍ಸ್ವರೂಪವಪ್ಪ ಲಿಂಗವೇ ಅಂಗ; ಆನಂದಸ್ವರೂಪವಪ್ಪ ಜಂಗಮವೇ ಪ್ರಾಣ. ಇದುಕಾರಣ, ಲಿಂಗವೆ ಅಂಗ, ಜಂಗಮವೆ ಪ್ರಾಣಗ್ರಾಹಕನಾದ ಚಿನ್ಮಯನಯ್ಯ ಭಕ್ತನು. ಲಿಂಗ ಜಂಗಮ ಭಕ್ತ ಮೂರುವೊಂದಾಗಿ ಪರಶಿವತತ್ತ್ವದಲ್ಲಡಗಿದ ಅದ್ವೆ ೈತ ಪರಬ್ರಹ್ಮವು ತಾನೇ ಪರಮಭಕ್ತ ನೋಡಾ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿತ್ಯ ನಿಜವಸ್ತುವಿನ ಪ್ರಸನ್ನತ್ವ ಸಚ್ಚಿದಾನಂದ ಚಿದ್ಬೆಳಗು ತತ್ತ್ವಬ್ರಹ್ಮಾಂಡವ ನುಂಗಿ ತತ್ತ್ವಬ್ರಹ್ಮಾಂಡದಿಂದತ್ತತ್ತ ತಾನಾದ ನಿಶ್ಚಿಂತ ನಿರಾಳನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾದಪ್ರಿಯಂ ನಾದಮಯಂ ನಾದೋರ್ಲಿಂಗ ನಗೇಶ್ವರಂ ಆದಿ ಮಧ್ಯಾಂತರಹಿತಂ ವೇದೋ ವೇದವಿದಂ ವರಂ ಮಂತ್ರಮೂರ್ತಿ ಮಹಾರುದ್ರಂ ಓಮಿತಿ ಜ್ಯೋತಿರೂಪಕಂ ಹರ ಹರಾ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾನು ನೀನೆಂಬ ಉಭಯ ತನುಗುಣ ನಾಸ್ತಿಯಾಗಿ ಅರುಹು ಮರಹೆಂಬುಭಯದ ಮರೆಹು ಅಳಿಯಿತ್ತಯ್ಯ. ಮರೆಹು ಅಳಿಯಿತ್ತಾಗಿ, ಮಹದರುಹಿನ ಆಚರಣೆ ಕರಿಗೊಂಡಿತ್ತಯ್ಯ. ಮಹದರುಹಿನ ಆಚರಣೆ ಕರಿಗೊಂಡಿತ್ತಾಗಿ, ಮಹಾಲಿಂಗದ ಬೆಳಗು ಒಳಕೊಂಡಿತ್ತಯ್ಯ. ಮಹಾಲಿಂಗದ ಬೆಳಗು ಒಳಕೊಂಡಿತ್ತಾಗಿ, ಮಂಗಳಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ, ಪರಮ ಪರಿಣಾಮ ನೆಲೆಗೊಂಡಿತ್ತಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೂಲೆಳೆಯ ತೋರದ ಪಶುವಿಂಗೆ ಮೇರುವೆಯ ತೋರ ಕೆಚ್ಚಲು ನೋಡ ಅಯ್ಯ. ಅದಕ್ಕೆ ಕೋಡೆರಡಿಲ್ಲ ನೋಡಾ. ಅದು ಮೊಲೆಗೊಕ್ಕುಳಹಾಲ ಕರೆವುದು. ಕರೆವಾತಗೆ ಕೈಯಲ್ಲ; ಕುಡಿವಾತಗೆ ಬಾಯಿಲ್ಲ ನೋಡಾ. ಕೈಯಿಲ್ಲದೆ ಕರೆದು ಬಾಯಿಲ್ಲದೆ ಉಂಡು ತೃಪ್ತಿಯಿಲ್ಲದೆ ಪರಿಣಾಮಿಸಬಲ್ಲಾತನಲ್ಲದೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ ಬಿಳಿಯ ಮದಗಜವ ಕಳೆವರೆ ಅರಳವಲ್ಲ ನೋಡಾ. ಬಿಳಿಯ ಮದಗಜದ ಶಿರವ ಉರಿಯ ಚರಣದಲ್ಲಿ ಮೆಟ್ಟಿ, ನಿರವನಯನನೆರೆದು ನಿಜಲಿಂಗೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು `ಏಕಮೇವಾ ನ ದ್ವಿತೀಯ ಪರಾಪರವೆ' ಶರಣ ಲಿಂಗವೆಂದು ತೋರಿತ್ತು ಕಾಣಾ. ಎಂದರೆ, ಆ ಅಂಗ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಅದೆಂತೆಂದಡೆ: ಚಿನ್ನ ಬಣ್ಣದಂತೆ, ಶಿವಶಕ್ತಿಯಂತೆ, ಶುದ್ಧ ಪರಾಪರವೆ ಶರಣನು ನೋಡಾ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿರಾಕಾರ ಪರವಸ್ತು[ತಾನೆ] ತನ್ನ ವಿನೋದಾರ್ಥಕಾರಣ ನಿಜಜ್ಞಾನವಾಗಿ ತೋರಿತ್ತು ನೋಡಾ. ಆ ಮಹಾಜ್ಞಾನ ಚಿತ್ತೇ ಅಂಗಸ್ಥಲ ಲಿಂಗಸ್ಥಲವೆಂದಾಯಿತ್ತು ನೋಡಾ. ಅಂಗವೇ ಶರಣ; ಲಿಂಗವೇ ಶಿವ. ಅಂಗಲಿಂಗದ ಸಂಗಸಮರಸ ತಾನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಂದೀಶ್ವರ, ಭೃಂಗೀಶ್ವರ, ವೀರಭದ್ರ, ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ, ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ, ಸದಾಶಿವ, ಈಶ್ವರ, ಮಹೇಶ್ವರ, ರುದ್ರ, ಘಂಟಾಕರ್ಣ, ಗಜಕರ್ಣ, ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ ಗಣಾಧೀಶ್ವರರು ಇವರು, ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ ಶುದ್ಧ ಚಿದ್ರೂಪರಪ್ಪ ಪ್ರಮಥರು. ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ. ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ, ಅವರಾಗಮವಂತಿರಲಿ. ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾದ, ಬಿಂದು, ಕಳಾ ಭೇದವ ತಿಳಿದಲ್ಲದೆ ಆರಕ್ಷರವಾದ ತೆರನನರಿಯಬಾರದು. ಆರಕ್ಷರಕ್ಕೆ ಮೂಲಪ್ರಣವವ ತಿಳಿದಲ್ಲದೆ ನಾದ ತಲೆದೋರದು. ನಾದ ಬೆಳಗಿನ ಕಳೆಯ ನೋಡಿ ಕಂಡಲ್ಲದೆ ರಾಜ ಶಿವಯೋಗಿಯಾಗಬಾರದು. ರಾಜ ಶಿವಯೋಗವೆಂಬುದು ಆದಿಯಲ್ಲಿ ಶಿವಬೀಜವಾದ ಮಹಾಮಹಿಮನಿಗೆ ಸಾಧ್ಯವಪ್ಪುದಲ್ಲದೆ ತ್ರೆ ೈಜಗದಲಾರಿಗೂ ಅಸಾಧ್ಯ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನದಿವಾಸಿಗಳು, ವನವಾಸಿಗಳು, ಗಿರಿವಾಸಿಗಳು, ಗುಹೆವಾಸಿಗಳು, ಇಂದ್ರಿಯ ಭಯಂಗಳಿಗಂಜಿ ಕಂದ ಮೂಲಂಗಳ ಭಕ್ಷಿಸುವ ಕಾನನದ ಮರುಳುಗಳೆಲ್ಲ ಲಿಂಗಪ್ರಾಣಿಗಳಿಗೆ, ಪ್ರಾಣಲಿಂಗ ಸಂಬಂಧಿಗಳಾದ ಪರಶಿವಯೋಗಿಗಳಿಗೆ ಸರಿಯೇ ಈ ಭ್ರಾಂತರೆಲ್ಲ? ಇದು ಕಾರಣ, ನಿಮ್ಮ ಶರಣರು ಅಂಗ ಪ್ರಾಣ ಇಂದ್ರಿಯಂಗಳೆಲ್ಲವು ಲಿಂಗ ನಿವಾಸಿಗಳಾಗಿ ಲಿಂಗದೊಳಡಗಿದ ಲಿಂಗಗ್ರಾಹಕರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೋಡಿಹೆನೆಂದರೆ ನೋಟ ಸಮರಸವಾಯಿತ್ತು. ಕೂಡಿಹೆನೆಂದರೆ ಕೂಟ ನಿಬ್ಬೆರಗಾಯಿತ್ತಯ್ಯ. ನೋಟ ಕೂಟಗಳೆಂಬುಭಯವಳಿದು, ನಿಜದಲ್ಲಿ ನಿರ್ವಯಲಾಯಿತ್ತಯ್ಯ. ನೋಡಲಿಲ್ಲದ ನುಡಿಸಲಿಲ್ಲದ ಕೂಡಿಲಿಲ್ಲದಪ್ರತಿಮ ತಾನು ತಾನಾದ ಪರಮಾನಂದ ಸುಖದಲ್ಲಿ ಓಲಾಡುತ್ತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೋಟವಾಗದ ಮುನ್ನ ಬೇಟವಾಯಿತ್ತು. ಬೇಟವಾಗದ ಮುನ್ನ ಕೂಟವಾಯಿತ್ತು. ಕೂಟವಾಗದ ಮುನ್ನ ಬಸುರಾಯಿತ್ತಯ್ಯ. ಬೇನೆ ತೋರದ ಮುನ್ನ ಬೆಸನಾಯಿತ್ತಯ್ಯ. ಬೆಸಲಾದ ಶಿಶುವೆದ್ದು ತಂದೆಯನಪ್ಪಲು ಪಶುಪತಿ ಐಕ್ಯವಾದುದು ಸೋಜಿಗವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಡುಮನೆಯೊಳಾಡುವ ಸಿಂಗಳೀಕನನೊಂದು ಉಡು ನುಂಗಿದ್ದುದ ಕಂಡು ಕಡೆಯಲಿದ್ದ ಕಾಳಲದೇವಿ ನಗುತ್ತಿದಾಳೆ ನೋಡಾ. ನಡುಮಧ್ಯದಲ್ಲಿ ನಕ್ಷತ್ರ ಉದಯವಾಗಲು ಉಡು ಸಿಂಗಳಿಕ ಮಡಿದು, ಕಡೆಯಲಿದ್ದ ಕಾಳಲದೇವಿ ಕೆಡೆಮುರಿದೋಡಿದಳು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾಲಗೆಯ ಕೊನೆಯಲ್ಲಿ ನಂಜಿನ ಸೋನೆ ಸುರಿವನ್ನಕ್ಕರ ಬಾರದುದ ಬಯಸುತ್ತಿಪ್ಪುದು ನೋಡಾ. ನಾಲಗೆಯ ನಂಜನೆ ಕೆಡಿಸಿ, ಅಮೃತವ ಸವಿಯಬಲ್ಲವರಾಗಿ ನಿಮ್ಮ ಶರಣರು ಅನುಪಮಸುಖಿಗಳಯ್ಯ. ನಿಮ್ಮ ಶರಣರೆಲ್ಲರ ಪಾದಕ್ಕೆ ನಮೋ ನಮೋಯೆನುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀರೊಳಗಣ ಪಾವಕನೆದ್ದುರಿಯಲು ಮೇರುಗಿರಿ ಬೆಂದುದ ಕಂಡನಯ್ಯ. ಊರಳಿದು ಉಲುಹಡಗಿ ಮಾರಿಮಸಣಿಯರು ಮಡಿದುದು ಸೋಜಿಗ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನರರಂತೆ ನಡೆವುತ್ತಿಪ್ಪರಯ್ಯ, ನರರಂತೆ ನುಡಿವುತ್ತಿಪ್ಪಿರಿ ಅಯ್ಯ. ನರರಂತೆ ಉಣ್ಣುತ್ತಿಪ್ಪಿರಯ್ಯ, ನರರಂತೆ ಉಡುತಿಪ್ಪಿರಿ ಅಯ್ಯ. ನೋಡಿದರೆ ಅವರವರಂತಿಪ್ಪಿರಿ, ವಿವರಿಸಿದರೆ ನೀವು ನಿಮ್ಮಂತೆ ಇಪ್ಪಿರಿ ಅಯ್ಯ. ಹತ್ತರೊಳಗೆ ಹನ್ನೊಂದಾಗಿಪ್ಪಿರಿ ಅಯ್ಯ. ಕುರುಹಿನ ನಾಮವಿಡಿದು ಕರೆದರೆ `ಓ' ಎಂದೆಂಬಿರಿ. ನಾಮವಿಲ್ಲದ ಸೀಮೆಯಿಲ್ಲದ ನಿಸ್ಸೀಮ ಲಿಂಗೈಕ್ಯನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾನೊಬ್ಬನುಂಟೆಂಬವಂಗೆ ನೀನೊಬ್ಬನುಂಟಾಗಿ ತೋರುವೆ. ನಾನು ನೀನೆಂಬುದುಂಟಾದಲ್ಲಿ ಜ್ಞಾನ ಅಜ್ಞಾನವುಂಟಾಯಿತ್ತು. ಜ್ಞಾನ ಅಜ್ಞಾನ ಉಂಟಾದಲ್ಲಿಯೆ ನಾನಾವಿಧದ ಪ್ರಪಂಚು ಆಯಿತ್ತು ನೋಡಾ. ಮಾಯಿಕವೆಂಬುದು ಹೀಂಗಲ್ಲದೆ ಇನ್ನು ಹೇಂಗಿಹುದು ಹೇಳಾ?, ನಾನು ನೀನೆಂಬುದೆರಡು ಸತ್ತರೆ ಜ್ಞಾನ ಅಜ್ಞಾನವರತಿತ್ತು. ನಾನಾವಿಧವಾಗಿ ತೋರಿದ ಮಾಯಿಕವಳಿಯಿತ್ತು. ಮಾಯಿಕವಳಿಯಿತ್ತಾಗಿ ನಿರ್ಮಾಯನಾದೆನು ಕಾಣಾ. ನಿರ್ಮಾಯನಾದ ನಿಜಶರಣಂಗೆ ಕಾಯವೆಲ್ಲಿಯದು? ಮಾಯವೆಲ್ಲಿಯದು? ಮನವೆಲ್ಲಿಯದು? ನೆನಹೆಲ್ಲಿಯದು? ಅರುಹೆಲ್ಲಿಯದು? ಕುರುಹೆಲ್ಲಿಯದು. ತಾನಷ್ಟವಾದ ಸರ್ವನಷ್ಟಂಗೆ ತನಗನ್ಯವಾಗಿ ಇನ್ನೇನು ದೃಷ್ಟವನೂ ಹೇಳಲಿಲ್ಲ. ``ಯದೃಷ್ಟಂ ತನ್ನಷ್ಟಂ' ಎಂದುದಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ಲಿಂಗವು ನಿರಾಳವಾಗಿ, ಇನ್ನೇನು ಎಂಬ ನುಡಿಗೆಡೆಯಿಲ್ಲ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ ಸ್ವಯಂ ಜ್ಞಾನಶಿಖಿ ಉದಯವಾಯಿತ್ತು ನೋಡಾ. ಆ ಸ್ವಯಂ ಜ್ಞಾನಶಿಖಿ ಊಧ್ರ್ವಲೋಕಕ್ಕೆ ಹೋಗಿ, ವ್ಯೋಮಾಮೃತ ಪ್ರಸಾದವನುಂಡು, ನಾಮ ರೂಪು ಕ್ರೀಗಳನಳಿದು ನಿರವಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿರಾಕಾರವೇ ಸಾಕಾರವಾಗಿ, ನಿರ್ವಿಕಾರದ ಸೋಂಕಿನ ಸೊಬಗೆ ನೆಲೆವನೆಯಾಗಿಪ್ಪಿರಿ ಅಯ್ಯ. ಆತ್ಮಜ್ಯೋತಿ, ಮನೋಜ್ಯೋತಿ, ಸ್ವಯಂಜ್ಯೋತಿ, ಕೇವಲ ಪರಂಜ್ಯೋತಿ ಜ್ಞಾನಾನಂದಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನವಿಲಾಡಿತೆಂದು ಕೆಂಬೋತ ಪಕ್ಕವ ತರಕೊಂಡಂತೆ ಹುಲಿಯ ಬಣ್ಣಕ್ಕೆ ನರಿ ಮೈಯ ಸುಟ್ಟುಕೊಂಡಂತೆ ಕೋಗಿಲೆ ಸ್ವರಗೆಯ್ದದೆಂದು ಕಾಗೆ ಕರೆದಂತೆ ಲಿಂಗನಿಷಾ*ಂಗಿ ವಚನಹಾಡಿದರೆ ಒಪ್ಪುವನಲ್ಲದೆ ನಿಷೆ*ಹೀನರು ಓದಿ ಹಾಡಿದರೆ ನಳ್ಳಿಗುಳ್ಳೆಯ ತಿಂದ ನರಿ ಹಳ್ಳದ ತಡಿಯಲ್ಲಿ ಬಳ್ಳಿಟ್ಟು ಬಗುಳಿದಂತೆ ಏನೆಂದು ಪಾಟಿ ಮಾಡರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ. ಮೃಡನ ಗಡಣೆಯಲ್ಲಿ ಜಗವೆಲ್ಲ ಅಡಗಿ ಉಡುಗಿದೆ ನೋಡಾ. ಈ ಒಡೆಯನ ಮಹಿಮೆಯನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...