ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯ ಮುಖದ ಜ್ಯೋತಿಯಿಂ ಅಧೋಮುಖಕಮಲ ಊಧ್ರ್ವಮುಖವಾಗಿ ಷಡುಕಮಲಾಂಬುಜಂಗಳು ಉದಯವಾಗಿ ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ. ಅಂಬುಜಕಮಲ ಆರರಿಂದ ಸ್ವಯಂಭುವ ಪೂಜಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯದ ಪೂಜೆ ಉತ್ಪತ್ತಿಗೆ ಬೀಜ. ಮಧ್ಯಾಹ್ನದ ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ. ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜ. ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು ಸದಾ ಸನ್ನಹಿತವಾಗಿ ಮಾಡುವ ಪೂಜೆ ಉತ್ಪತ್ತಿ ಸ್ಥಿತಿ ಲಯಂಗಳ ಮೀರಿದ ನಿತ್ಯ ನಿರ್ಮಲ ಪೂಜೆ ಕಾಣಾ. ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ ಮೃತ್ಯುಲೋಕವನೆಯ್ದಲು ಆ ಶಕ್ತಿಯರ ಕೃತ್ಯಾಕೃತ್ಯಂಗಳು ಕೆಟ್ಟು ಆ ಲೋಕವೆಲ್ಲಾ ಭಕ್ತಿ ಸಾಮ್ರಾಜ್ಯವಾಯಿತ್ತು ನೋಡಾ. ಶಕ್ತಿ ಭಕ್ತಿಯೆಂಬ ಸತ್ಕ ೃತ್ಯ ನಷ್ಟವಾಗಿ ಮುಕ್ತ್ಯಂಗನೆಯ ಮುಖವ ನೋಡುತ್ತ ನೋಡುತ್ತ ಸಚ್ಚಿದಾನಂದೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉರಿಗೆ ತೋರಿದ ಬೆಣ್ಣೆ ಕರುಗವಂತೆ, ಅಸಿಯ ಜವ್ವನೆಯರ ಕಂಡು ವಿಷಯಾತುರರಾಗಿ ಕುಸಿವುತ್ತಿಪ್ಪರು ನೋಡಾ ಹಿರಿಯರು. ಇದು ಹುಸಿಯೆಂದರಿದು ನಿಮ್ಮ ಶರಣರು ಮನದ ಕೊನೆಯ ಮೊನೆಯಲ್ಲಿ ಶಶಿಧರನ ಸಾಹಿತ್ಯವ ಮಾಡಬಲ್ಲರಾಗಿ, ಸಂಸಾರವಿಷಯದೋಷ ಪರಿಹರವಪ್ಪುದು ತಪ್ಪುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ ಮುಖದ ಪ್ರಸಾದ ಸದಮಲದ ಬೆಳಗೇ ಸದ್ರೂಪವಾಗಿ ಸರ್ವಾಂಗವನೊಳಕೊಂಡಿತ್ತು ನೋಡಾ. ಆ ಪ್ರಸಾದ ಸರ್ವಾಂಗವನೊಳಕೊಂಡು ಮೂರ್ತಿಯಾಗಿ ಆ ಪ್ರಸಾದವೆ ತದಾಕಾರವಾಗಿ ನಿಲ್ಲಲು, ಆ ಪ್ರಸಾದದೊಳಗೆ ಆ ಅಂಗ ಬಯಲಾಯಿತ್ತು ನೋಡಾ. ಮಧ್ಯಾಹ್ನ ಮುಖದ ಪ್ರಸಾದ ಶುದ್ಧ ಸ್ವಯಂಜ್ಯೋತಿ ಚಿದ್ರೂಪವಾಗಿ ಮನವನೊಳಕೊಂಡಿತ್ತು. ಆ ಪ್ರಸಾದದಲ್ಲಿ ಆ ಮನ ಬಯಲಾಯಿತ್ತು ನೋಡಾ. ಅಸ್ತಮಯ ಮುಖದ ಪ್ರಸಾದ ಪ್ರಸನ್ನಿಕೆ ಶತಕೋಟಿ ಸೋಮ ಸೂರ್ಯರ ಉದಯದಂತೆ ಆನಂದ ಸ್ವರೂಪವಾಗಿ ಪ್ರಜ್ವಲಿಸುತ್ತಿದೆ ನೋಡಾ. ಆ ಪ್ರಸಾದವೆನ್ನ ಭಾವವ ನುಂಗಿತ್ತಾಗಿ, ಭಾವ ಬಯಲಾಯಿತ್ತು ನೋಡಾ. ಭಾವ ಬಯಲಾಯಿತ್ತಾಗಿ, ಆ ಪ್ರಸಾದ ನಿರ್ಭಾವ ಪ್ರಸಾದತ್ವನೆಯ್ದಿ, ನಿರ್ವಯಲಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯಾ. ಉರಿಯನುಂಡು, ಶರೀರವಿಲ್ಲದಾಕೆಯ ನೆರೆದು ಪರಮಾಮೃತವ ಸೇವಿಸಿ ಪರಮ ಪರಿಣಾಮದೊಳಗೋಲಾಡಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದ್ದದ ಮೇಲಣ ಕಪಿ, ಬದ್ಧರಸವ ಕರೆಯಲು, ಬದ್ಧರಸವ ಕುಡಿದು ಸಿದ್ಧರೆಲ್ಲಾ ಪ್ರಳಯವಾದರು ನೋಡಾ. ಉದ್ದದ ಮೇಲಣ ಕಪಿಗೆ, ಸಿದ್ಧರಸವನುಣಿಸಬಲ್ಲಾತನಲ್ಲದೆ, ಶಿವಯೋಗಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯಮುಖದ ಜ್ಯೋತಿ ಶರೀರತ್ರಯದ ನುಂಗಿತ್ತು. ಮಧ್ಯಾಹ್ನಮುಖದ ಜ್ಯೋತಿ ಮಲತ್ರಯಂಗಳ ನುಂಗಿತ್ತು. ಅಸ್ತಮಯಮುಖದ ಜ್ಯೋತಿ ಅಹಂಕಾರತ್ರಯಂಗಳ ನುಂಗಿತ್ತು. ಈ ಮೂರು ಪ್ರಕಾರದ ಜ್ಯೋತಿಯ ಅಖಂಡ ಜ್ಞಾನಜ್ಯೋತಿ ನುಂಗಿತ್ತು. ಅಖಂಡ ಜ್ಞಾನಜ್ಯೋತಿ ಅವಿರಳಬ್ರಹ್ಮವನೆಯಿದಿ ನುಂಗಿ ಅಲ್ಲಿಯೆ ಅಡಗಿತ್ತು. ಅದು ಅಡಗಿದಲ್ಲಿ ತಾನಡಗಿದಾತನೇ ಶಿವಯೋಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು