ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೃದಯಕಮಲಕರ್ಣಿಕಾವಾಸದಲ್ಲಿ ದಿಟಪುಟಜಾÕನ ಉದಯವಾಗಿ ದ್ಥಿಕ್ಕರಿಸಲಾಗಿ, ಸಟೆ ದೂರವಾಗಿ ವಿವರ್ಜಿತವಾದವು ನೋಡಾ. ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ, ಸ್ಫಟಿಕ ಪ್ರಜ್ವಲಾಕಾರವಾಯಿತ್ತು ನೋಡಾ. ಆ ಶಿವಜಾÕನಪ್ರಭೆಯೊಳಗೆ ನಿಟಿಲಲೋಚನನೆಂಬ ನಿತ್ಯನ ಕಂಡು, ಅದೇ ಎನ್ನ ನಿಜವೆಂದು ಬೆರಸಿ ಅಬ್ಥಿನ್ನಸುಖಿಯಾಗಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾವ ಹಿಡಿದ ಚೇಳು ತಾನೆದ್ದೂರಲು ಮೂಜಗವೆಲ್ಲವು ಬೇನೆಹತ್ತಿ ಬೇವುತ್ತಿದೆ ನೋಡಾ. ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾರುವ ಹಕ್ಕಿಗೆ ಗರಿ ಈರೈದಾದುದ ಕಂಡೆನಯ್ಯ. ಕುಳಿತರೆ ಗೇಣುದ್ಧ, ಎದ್ದರೆ ಮಾರುದ್ದ. ಹಾರುವಲ್ಲಿ ಆರುಗೇಣಾಗಿಪ್ಪುದಯ್ಯ. ಮತ್ತರಿದೆನೆಂದರೆ ಅದೆ ನೋಡಾ. ತನ್ನ ತಿಳಿದರೆ ತಾನು ಅತಿಸೂಕ್ಷ ್ಮ ನೋಡಾ. ತನ್ನ ಪರಿ ವಿಪರೀತ ವಿಸ್ಮಯವಾಗಿದೆ ನೋಡಾ. ಮೂರಾರು ಬಾಗಿಲಲ್ಲಿ ಹಾರಿ ಹಲುಬುವುದಯ್ಯ. ಸರ್ವಬಾಗಿಲಲ್ಲಿ ಪರ್ಬಿ ಪಲ್ಲಯಿಸುವುದು. ಈ ಬಾಗಿಲೆಲ್ಲವು ತನ್ನ ಹಾದಿಯೆಂದರಿಯದು ನೋಡಾ. ತನ್ನ ಹಾದಿಯನರಿದು ಚೆನ್ನಾಗಿ ನಡೆದಾಡಬಲ್ಲರೆ ಮೇಲುಗಿರಿ ಪರ್ವತವ ಓರಂತೆಯ್ದಿ ನಿರ್ವಯಲ ಬೆರಸಿತ್ತೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊರಗೆ ವೇಷದ ಸೊಂಪು ಒಳಗೆ ರೋಷದ ಮೊಟ್ಟೆಯಯ್ಯ. ಅಶನವನಿಕ್ಕಿ ಹಣವ ಕೊಡದವರ ಕಂಡರೆ ಶಾಪಿಸಿ ಕೋಪಿಸಿ ಪಾಪಿಗಳೆಂಬಿರಯ್ಯ. ನಿಮ್ಮ ಕಿಚ್ಚಿಗೆ ಸಾಪಿಸಿ ಕೋಪಿಸಿ ಹೊಯಿದು ಕುತಾಪಿಸುವವರು ನೀವು ಪಾಪಿಗಳಲ್ಲದೆ, ಅವರು ಪಾಪಿಗಳೇ ತಿಳಿದು ನೋಡಿರಯ್ಯ. ಜಗದ ಕರ್ತನ ವೇಷಧರಿಸಿ ಕರ್ತೃ ನೀವಾದ ಬಳಿಕ ಮಾನವರು ಕೊಟ್ಟಾರು ಕೊಂಡಾರು ಎಂಬ ಭ್ರಾಂತಿಯೇಕೆ? ಅರೆಮರುಳಗಳಿರಾ, ಕೊಡುವಾತ ಶಿವನೆಂದರಿಯದ ಉದರ ಘಾತಕ ಖುಲ್ಲರನೊಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು ಹೊರ ಉಪಚಾರವ ಮಾಡುವುದೆಲ್ಲ ಬರಿಯ ಭಾವದ ಬಳಲಿಕೆ ನೋಡಾ. ಅಳಲದೆ ಬಳಲದೆ ಆಯಾಸಂಬಡದೆ ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ ಪೂಜಿಸಬಲ್ಲ ಶರಣಂಗೆ ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೀಂಗೆಂದರಿಯದೆ ತಾ ನಡೆದೆನೆಂದು, ತಾ ನುಡಿದೆನೆಂದು, ತಾ ವಾಸಿಸಿದೆನೆಂದು, ತಾ ರುಚಿಸಿದೆನೆಂದು, ತಾ ಸೋಂಕಿದೆನೆಂದು, ತಾ ಕೇಳಿದೆನೆಂದು, ತಾನೆ ನೆನೆದೆನೆಂದು, ತಾನೆಂಬುದನೆ ಮುಂದುಮಾಡಿಕೊಂಡು, ಲಿಂಗವೆಂಬುದನೆ ಹಿಂದುಮಾಡಿಕೊಂಡು, ಭೋಗಿಸುವ ಭೋಗವೆಲ್ಲವು, ಅಂಗಭೋಗ ಕಾಣಿರೋ. ಅಂಗದಿಚ್ಛೆಗೆ ಉಂಡು ಲಿಂಗಕ್ಕೆಂಬ ಆಧಮಜೀವಿಗಳೇನೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾಲೋಗರವನುಂಡು ಬಾಲೆಯರ ತೋಳಮೇಲೊರಗಿದಡೆ ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣ. ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು, ಸವಿನುಡಿ ಕಠಾರಿ ನೋಡಾ. ಅಲ್ಲಿಯ ನೆನಹು ಆಜ್ಞಾನ ನೋಡಾ. ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ ಹುಟ್ಟಿಸಿ ಕೊಲುವದಾಗಿ, ಆ ಸಂಸಾರ ನಿನಗೆ ಹಗೆಯೆಂದು ತಿಳಿಯ, ಮರುಳುಮಾನವ. ಇದುಕಾರಣ, ಸಂಸಾರಸುಖವನುಣ್ಣಲೊಲ್ಲದೆ, ಬಾಲೇಂದುಮೌಳಿಯ ಜ್ಞಾನಪ್ರಸಾದವನುಂಡು ನಾನು ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ. ಕರಿಯ ಮಲ್ಲಿಗೆಯ ಕಮಲವ ಕುಯಿದು ಕಾಮಾರಿಯ ಚರಣವನರ್ಚಿಸಬಲ್ಲ ನಿಸ್ಸೀಮ ಶರಣಂಗೆ, ನಾಮ ಸೀಮೆಗಳೆಂದೇನು? ಕಾಲ ಕಲ್ಪಿತವೆಂದೇನು? ನಿರ್ವಿಕಲ್ಪಭಾವದಲ್ಲಿ ಲಿಂಗಾರ್ಚನೆಯ ಮಾಡುವ ಶರಣಂಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ ನುಂಗಿತ್ತು; ಈರೇಳು ಲೋಕ ನುಂಗಿ ಕಾಳಕೂಟವಿಷವನೆ ಉಗುಳುತ್ತಿದೆ ನೋಡ. ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು `ಪಶುಪತಿ ಪಶುಪತಿ' ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು, ಹೇಳಿಗೆ ಮುರಿಯಿತ್ತು; ಈರೇಳುಲೋಕದ ನುಂಗಿದ ಸರ್ಪ ತಾನು ಸತ್ತಿತ್ತು. ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೆ ೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ದ್ಥೀರರು ವ್ರತಿಗಳು ಸಾಮಥ್ರ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊನ್ನು ತನ್ನ ಬಣ್ಣದ ಲೇಸುವ ತಾನರಿಯದಂತೆ ಬೆಲ್ಲ ತನ್ನ ಮಧುರವ ತಾನರಿಯದಂತೆ ಪುಷ್ಪ ತನ್ನ ಪರಿಮಳವ ತಾನರಿಯದಂತೆ ವಾರಿಶಿಲೆ ಅಂಬುವಿನೊಳು ಲೀಯವಾದಂತೆ ಮನವು ಮಹಾಲಿಂಗದಲ್ಲಿ ಲೀಯವಾಗಿ ಮನವಳಿದು ನೆನಹುಳಿದು ನೆನಹು ನಿಃಪತಿಯಾಗಿ ನಾನು ನೀನಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದೊಳಗೆ ಉದಕವಿಪ್ಪುದಯ್ಯ. ಅಗ್ನಿಯ ಸಂಪರ್ಕದ ದೆಸೆಯಿಂದ ಕುಂಭದೊಳಗಿರ್ದ ಉದಕವು ಹೇಂಗೆ ಉಷ್ಣವಹುದು ಹಾಂಗೆ ಸರ್ವೇಂದ್ರಿಯವನುಳ್ಳಪ್ರಾಣನು ತನ್ನ ಪೂರ್ವಗುಣವನು ಬಿಟ್ಟು ಲಿಂಗಕಳೆಯನೆ ವೇಧಿಸಿ ಪ್ರಾಣವೆ ಲಿಂಗವೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ ಹೊನ್ನ ಬಿಟ್ಟೆನೆಂದು ಜಗದ ಕಣ್ಣ ಕಟ್ಟಿ ಮೆರೆವ ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ಮಾತಿನಲ್ಲಿ ಬಿಟ್ಟಿರೋ, ಮನದಲ್ಲಿ ಬಿಟ್ಟಿರೋ? ಈ ನೀತಿಯ ಹೇಳಿರಿ ಎನಗೊಮ್ಮೆ. ತನುಮನದ ಮಧ್ಯದಲ್ಲಿ ಇವರ ನೆನಹು ಕೆಟ್ಟು ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ. ಮಾತಿನಲ್ಲಿ ಬಿಟ್ಟು, ಮನದಲ್ಲಿ ಉಳ್ಳರೆ ಭವಭವದಲ್ಲಿ ತಂದು ಕುನ್ನಿ ನಾಯ, ಕೆರವ ಕಚ್ಚಿಸುವ ಹಾಂಗೆ ಕಚ್ಚಿಸಿದಲ್ಲದೆ ಮಾಣದು ಕಾಣಿರಯ್ಯ. ಹಿಡಿದು ಸಂಸಾರಿಗಳಲ್ಲ. ಬಿಟ್ಟು ನಿಸ್ಸಂಸಾರಿಗಳಲ್ಲ. ಎರಡೂ ಅಲ್ಲದ ಎಟುವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾವು ಹಿಡಿದ ಚೇಳು ತಾನೆದ್ದು ಊರಲು ಮೂಜಗವೆಲ್ಲಾ ಬೇನೆಹತ್ತಿ ಬೇವುತ್ತಿದೆ ನೋಡಾ. ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು. ಬೇನೆ ಮಾದು ತಾನೆ ತಾನಾದುದನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಿಯ ಹೇಳಿಗೆಯಲ್ಲಿ ಮಾರ್ಜಾಲ ಮೂಷಕನ ಹಡೆದುದ ಕಂಡೆನಯ್ಯ. ಕರಿಯ ಬೇಡನ ಕೈವಿಡಿದು, ರಾಹುಕೇತುಗಳಾಗಿ ಚಂದ್ರಸೂರ್ಯರ ಕೊರೆಕೂಳನುಂಡು ಧರೆಯಾಕಾಶಕ್ಕೆ ಶರೀರವಿಲ್ಲದೆ ಎಡೆಯಾಡುವುದ ಕಂಡೆ. ಸಿರಿವರ ವಾಣಿಪತಿಯೆಂಬವರ ತನ್ನ ಹೊರೆಯಲ್ಲಿಕ್ಕಿ ಆಳಿ ಮನುಮುನೀಶ್ವರರ ಮರೆದೊರಗಿಸಿದ್ದ ಕಂಡೆ. ಇದರ ನೆಲೆಯನರಿದು, ಹೊಲಬ ತಿಳಿದುಕೊಳಬಲ್ಲಾತನಲ್ಲದೆ ಲಿಂಗೈಕ್ಯನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು ಕರಣಂಗಳ ಗುಣ ಕಾಣಿರಣ್ಣ. ಕರಣದ ಕತ್ತಲೆಯ ಲಿಂಗಬೆಳಗನುಟ್ಟು ಕಳೆದು ಮುಕ್ಕಣ್ಣನೆ ಕಣ್ಣಾಗಿಪ್ಪ ಶರಣ ಬಸವಣ್ಣನ ಪಾದವ ತೋರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಜ್ಜೆಯುಳ್ಳ ಮೃಗ ಇಬ್ಬರ ಕೂಡಿ ಹಲಬರ ನೆರಹಿ ಹಬ್ಬವ ಮಾಡುವ ಭರವಸ ಉಬ್ಬರವೆಂಬುವದನೊಬ್ಬರು ಅರಿಯರು ನೋಡಾ. ಹಜ್ಜೆಯಿಲ್ಲದ ಮೃಗ ಇಬ್ಬರ ಕೂಡದು, ಹಲಬರ ನೆರಹದು, ಹಬ್ಬವನೊಲ್ಲದು. ತಾನೊಬ್ಬನೆಯಾಯಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣ ಸ್ವತಂತ್ರ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಜಾರದ ಪೀಠದ ಮನೆಯಲ್ಲಿ ಭಜಕಜನವರೇಣ್ಯನಿದಾನೆ ನೋಡ. ಕುಜನ ಜನವಳಿದು ಸುಜನಜನಮುಖಸ್ಸರೋಜ ರಾಜಹಂಸನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾಳುಕೇರಿಯಲೊಂದು ಹಂದಿಯೂ ನಾಯೂ ಮೈಥುನವ ಮಾಡುವದ ಕಂಡು ಆಕಾಶದಲಾಡಡುವ ಅರಗಿಳಿ ನಗುತ್ತಲಿದೆ ನೋಡಾ. ಆಡುತ್ತಾಡುತ್ತ ಬಂದ ಅರಗಿಣಿ ಮಾರ್ಜಾಲನ ನುಂಗಲು ಮಾಯಾವಿಲಾಸ ಅಡಗಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಲವು ಜನ್ಮಂಗಳಲ್ಲಿ ಒದಗಿಸಲ್ಪಟ್ಟ ಪಾಪಂಗಳೆಂಬ ಕರ್ಮಂಗಳನು ಜ್ಞಾನಾಗ್ನಿಯಿಂದ ಸುಟ್ಟುರುಹಿ ಪ್ರಕಾಶಿಸಿ ತೋರಿಸಿದ ಸದ್ಗುರುದೇವಂಗೆ ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಸು ಸತ್ತು ಆರುದಿನ, ಕರು ಸತ್ತು ಮೂರು ದಿನ. ಅಂದು ಬಿತ್ತಿದ ಬೆಳಸು ಇಂದು ಫಲಕಾತುದ ಕಂಡೆನಯ್ಯಾ. ಫಲ ರಸವನುಂಡುಂಡು ಪರಮ ಪರಿಣಾಮಿಯಾದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು ಪರಿಪರಿಯ ಕೇರಿಯಲ್ಲಿ ಸುಳಿದಾಡುವಳಿವಳಾರೋ? ಈ ಊರಿಗೆ ನಾನೊಡತಿ; ಇಲ್ಲಿ ಸುಳಿಯುವುದಕ್ಕೆ ನಿನಗೇನು ಕಾರಣ ಹೇಳಾ? ಈ ಊರಿಗೂ ನಿನಗೂ ನಾನೊಡತಿಯೆನುತ ಊರ ಸುಟ್ಟು ನಾರಿಯ ಕೊಂದವಳು ನಾನು ಪರಾಪರಾಂಗನೆಯೆನುತ ಸ್ವಪತಿಯ ನೆರೆದು ನಿಷ್ಪತಿಯನೆಯಿದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾರುವ ಹಕ್ಕಿಗೆ ಗರಿಯಿಲ್ಲ ನೋಡಾ. ಊರೊಳಗಿಪ್ಪ ಕಪಿಗೆ ತಲೆಯಿಲ್ಲ ನೋಡಾ. ಹಾರುವ ಹಕ್ಕಿಗೆ ಗರಿ ಬಂದು, ಊರೊಳಗಿಪ್ಪ ಕಪಿಗೆ ತಲೆ ಬಂದಲ್ಲದೆ ತಾನಾರೆಂಬುದನರಿಯಬಾರದು. ತನ್ನಾದಿಯ ಶಿವತತ್ವವ ಭೇದಿಸಲರಿಯದೆ, ವೇದಾಗಮ ಮುಖದಿಂದ ನಿಮ್ಮನರಿದೆನೆಂಬ ಆಜ್ಞಾನಿಗಳನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೃದಯಮಧ್ಯದಲೊಂದು ಸದಮಲದುದಯವ ಕಂಡೆ. ಅದಕೆ ಉದಯವಿಲ್ಲ, ಮಧ್ಯಾಹ್ನವಿಲ್ಲ, ಅಸ್ತಮಯವಿಲ್ಲ ನೋಡಾ. ಆ ಸದಮಲದ ಎಸಳಿನಿಂದ ಪೂಜೆಯಮಾಡಬಲ್ಲ ಸರ್ವಜ್ಞಂಗೆ ಹೊರ ಉಪಚಾರವೆಂಬ ಬರಿಯ ಭಾವದ ಬಳಲಿಕೆಯೆಂದೇನು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...