ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ರದ ಬೊಂಬೆ ರೂಪಾಗಿರ್ದರೇನೋ? ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ? ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಅತ್ತಿಯ ಹಣ್ಣು ಕಳಿತಿರ್ದರೇನೋ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯ ಹಳ್ಳ ತಿಳಿದಿರ್ದರೇನೋ? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ವೇದ ಶಾಸ್ತ್ರ ಪುರಾಣಾಗಮಂಗಳನೋದಿ ಎಲ್ಲರಲ್ಲಿಯೂ ಅನುಭಾವಿಗಳಾದರೇನೋ? ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ ಪ್ರಯೋಜನಕಾರಿಗಳಾದುದಿಲ್ಲ. ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ ಎಂತು ಶಿವಶರಣರೆಂಬೆ ವಾಚಾಳಿಕರ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ತೇ ಅಂಗ, ಸತ್ತೇ ಪ್ರಾಣ, ಆನಂದವೇ ಶರಣನ ಕರಣ ನೋಡಾ. ನಿತ್ಯವೇ ಪ್ರಸಾದ. ಪರಿಪೂರ್ಣವೇ ಸರ್ವಾಂಗದ ಪ್ರಕಾಶ. ಪರಮಾನಂದವೇ ಪಾದಜಲ ನೋಡಾ. ಇದುಕಾರಣ, ಸಚ್ಚಿದಾನಂದ ಸ್ವರೂಪನು ನಿಮ್ಮ ಶರಣನೈ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ? ಲಿಂಗಮುಖದಿಂದ ಉದಯವಾದ ಶರಣರು ಲಿಂಗದ ರೂಪಲ್ಲದೆ, ಮತ್ತೊಂದು ರೂಪೆಂದೆನಬಹುದೇ? ಎನಲಾಗದು ನೋಡ. ಶಿವನ ಅಂಶವಾದ ಶರಣರಿಗೆ ಮಲಿನಭಾವ ಕಲ್ಪಿಸುವ ಮಹಾಪಾತಕರಿಗೆ ನಾಯಕನರಕ ತಪ್ಪದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ. ಚಿತ್ತೇ ಚಿಪ್ಪು, ಮುತ್ತೇ ವಸ್ತುವೆಂಬ ಯುಕ್ತಿಯನಾರೂ ತಿಳಿಯರಲ್ಲಾ. ಚಿಪ್ಪಳಿದು ಮತ್ತೆ ಬೆರೆಸಲಾಗಿ ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಂದ್ರಮನೊಳಗಣ ಕಳಹಂಸೆಯೆದ್ದು ರಾಹುವ ನುಂಗಲು ಮಂಡಲದಸುರರು ಮಡಿದು, ಚಂದ್ರಮನಬೆಳಗು ಮಂಡಲವನಗವಿಸಲು ಮಂಡಲ ಕರಗಿ ಮಂಡಲಾಧಿಪತಿ ತನ್ನ ಕಂಡುದು ಸೋಜಿಗ ಸೋಜಿಗ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ ಮಹಾಜ್ಞಾನ ಪ್ರಕಾಶವಾಗಿ ಮೆರೆವುತ್ತಿಹ ಚಿಲ್ಲಿಂಗವು ಶರಣನ ದೇಹವೆಂಬ ಭೂಮಿಯ ಮರೆಯಲ್ಲಿ ಅಡಗಿಪ್ಪುದು ನೋಡಾ. ನೆಲನ ಮರೆಯ ನಿಧಾನದಂತೆ, ಷಡಾಧಾರದಲ್ಲಿ ಷಡಾದಿಯಾಗಿ ಷಡಾತ್ಮಕನಾಗಿಪ್ಪುದು ನೋಡಾ. ಪಂಚೇಂದ್ರಿಯ ದ್ವಾರಂಗಳಲ್ಲಿ ಪಂಚವದನನಾಗಿ ಪ್ರಭಾವಿಸುತ್ತಿಪ್ಪುದು ನೋಡಾ. ದಶವಾಯುಗಳ ಕೂಡಿ ದೆಸೆದೆಸೆಗೆ ನಡೆವುತ್ತ ವಿಶ್ವಚೈತನ್ಯನಾಗಿಪ್ಪುದು ನೋಡಾ. ಸರ್ವಾಂಗದಲ್ಲಿಯೂ ತನ್ಮಯವಾಗಿಪ್ಪುದು ನೋಡಾ. ಮನದಲ್ಲಿ ಮತಿಯ ಕಣಜ, ಮಾತಿನಲ್ಲಿ ಜ್ಯೋತಿರ್ಲಿಂಗವಾಗಿ ಎನ್ನ ಬ್ರಹ್ಮರಂಧ್ರದಲ್ಲಿ ತೊಳಗಿ ಬೆಳಗುವ ಪರಂಜ್ಯೋತಿ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿಲುಮೆಯ ಅಗ್ಘವಣಿಯ ಕುಡಿದರೇನೋ, ಜನ್ಮದ ಮೈಲಿಗೆಯ ತೊಳೆಯದನ್ನಕ್ಕರ? ಕಾಡುಗಟ್ಟಿಯ ನೀರ ಕುಡಿದರೇನೋ, ತನ್ನ ಕಾಡುವ ಕರಣಾದಿ ಗುಣಂಗಳ ಕಳೆದುಳಿಯದನ್ನಕ್ಕರ? ಉಳ್ಳಿ ನುಗ್ಗೆಯ ಬಿಟ್ಟರೇನೋ, ಸಂಸಾರದ ಸೊಕ್ಕಿನುಕ್ಕಮುರಿದು ಮಾಯಾದುರ್ವಾಸನೆಯ ವಿಸರ್ಜಿಸದನ್ನಕ್ಕರ? ಸಪ್ಪೆಯನುಂಡರೇನೋ ಸ್ತ್ರೀಯರ ಅಪ್ಪುಗೆ ಬಿಡದನ್ನಕ್ಕರ? ಅದೇತರ ಶೀಲ, ಅದೇತರ ವ್ರತ ಮರುಳೇ? ಅಂಗವಾಚಾರಲಿಂಗವಾಗಿ ಮನವು ಅರಿವು ಸಂಬಂಧವಾಗಿ ಸರ್ವ ದುರ್ಭಾವ ಚರಿತ್ರವೆಲ್ಲಾ ಕೆಟ್ಟು ಸತ್ಯ ಸದ್ಭಾವ ನೆಲೆಗೊಂಡ ಸದ್ಭಕ್ತನ ಸುಶೀಲಕ್ಕೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ನದ ಗಿರಿಯಲ್ಲಿ ಚಿನ್ಮಯಮೂರ್ತಿಯ ಕಂಡೆನಯ್ಯ. ಚಿನ್ನ ಕಾರ್ಮಿಕವಲ್ಲ; ಚಿನ್ಮಯ ಮೂರ್ತಿಯಲ್ಲ; ಇದರನ್ವಯವೇನು ಹೇಳಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಂದ್ರನಿಂದಾದ ಕಲೆ ಚಂದ್ರನಬೆರಸಿ ಚಂದ್ರನಾದಂತೆ, ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ, ಅಗ್ನಿಯಿಂದಾದ ಕಾಂತಿ ಅಗ್ನಿಯನೆ ಬೆರಸಿ ಅಗ್ನಿಯಾದಂತೆ, ದೀಪದಿಂದಾದ ಬೆಳಗು ದೀಪವನೆ ಬೆರಸಿ ದೀಪವಾದಂತೆ, ಸಮುದ್ರದಿಂದಾದ ನದಿ ಸಮುದ್ರವನೆ ಬೆರಸಿ ಸಮುದ್ರವಾದಂತೆ, ಪರಶಿವತತ್ತ್ವದಲ್ಲಿಯೆ ನಾನುದಯಿಸಿ ಆ ಪರಶಿವತತ್ತ್ವದಲ್ಲಿಯೆ ಬೆರಸಿ ಪರಶಿವಯೋಗಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿದಾನಂದಸುಖಮಯವಪ್ಪ ವಸ್ತುವಿಂಗೆ, ಇಂದ್ರಿಯಾನಂದ ಹೊದ್ದಿದಡೆ ನಾ ನೊಂದೆನಯ್ಯ. ನಾನು ಬೆಂದೆನಯ್ಯ. ನಾನು ಚಿದಾನಂದಸ್ವರೂಪನು. ಈ ಅನಾನಂದವಿದೇನೋ? ಇದು ಕಾರಣ, ಅನಾಯತವಪ್ಪ ಇಂದ್ರಿಯವಿಕಾರವ ಮಾಣಿಸಯ್ಯ ಎನ್ನ ತಂದೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ ಹಿಂದಳ ಕೇರಿಯವರು ಕಂಡು ಮುಂದಳೂರವರಿಗೆ ಮೊರೆಯ ಹೇಳುತ್ತಿದಾರೆ ನೋಡಿರೇ. ಮುಂದಳೂರವರೆಲ್ಲಾ ರವಿಯೋಕುಳಿಯ ಸಂಗದಿಂದ ಮಂಗಳ ಮುಂಗಳವೆನುತ ಶಿವಲಿಂಗೈಕ್ಯರಾದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ ಮುನ್ನಿನ ಚಿನ್ನವೆ ಆದಂತೆ, ಉದಕದಿಂದಾದ ವಾರಿಕಲ್ಲು ಕರಗಿ ಮುನ್ನಿನ ಉದಕವೆ ಆದಂತೆ, ಚಿನ್ಮಯ ವಸ್ತುವಿನಿಂದುದಯಿಸಿದ ಚಿತ್‍ಸ್ವರೂಪನಾದ ಶರಣನು ಆ ಚಿನ್ಮಯ ಪರವಸ್ತುವನೆ ಬೆರಸಿ ಪರಮ ಶಿವಯೋಗಿಯಾದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಂದ್ರಮನ ರಾಹುವೆಡೆಗೊಳಲು ಪುರ ನಿಂದಿರಿವುತ್ತಿದೆ ನೋಡಾ. ಮಂದಾರಗಿರಿಯ ಸಲಿಲ ಮುಂಜೂರಲೊಸರಲು ನಿಂದಿರುವುದು ಕೆಟ್ಟು ನಿಜ ನಿಂದಿತ್ತಯ್ಯ ಎನ್ನ ತಂದೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿದ್ವಿಲಾಸದ ಮುಂದೆ ಇದಿರಿಟ್ಟು ತೋರುವ ಮಾಯಾವಿಲಾಸದ ಹೊದ್ದಿಗೆಯಿದೇನೋ. ಶುದ್ಧ ನಿರ್ಮಲ ನಿರಾವರಣನೆಂಬ ನಿಜಭಾವವೆ ನಿಶ್ಚಯವಾದರೆ, ಎನ್ನ ತನು ಮನ ಭಾವದ ಒಳಹೊರಗೆ ಹಿಡಿದಿಪ್ಪ ಮಾಯಾಪ್ರಪಂಚು ಮಾಬುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ತನ ಮನೆಯಲ್ಲಿ ಸತ್ತಿಪ್ಪವನಿವನಾರೋ? ಸತ್ತವನ ನೋಡಿ, ಎತ್ತಹೋದರೆ, ಎತ್ತಹೋದವ ಸತ್ತು, ಸತ್ತವನೆದ್ದು ಕೂಗುತ್ತಿದ್ದಾನೆ. ಈ ಚಿತ್ರವನೇನೆಂಬೆನೋ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ಮಯ ವಸ್ತುವಿನಿಂದ ಚಿದ್ಬಿಂದು ಉದಯಿಸಿತ್ತು. ಆ ಚಿತ್ತಿನ ಪ್ರಭೆಯಲ್ಲಿ ಶರಣನುದಯಿಸಿದನು. ಇದು ಕಾರಣ, ಚಿನ್ಮಯ, ಚಿದ್ರೂಪ, ಚಿತ್‍ಪ್ರಕಾಶ, ಚಿದಾತ್ಮನೆ ಶರಣನೆಂಬ ವಾಕ್ಯ ಸತ್ಯಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ತ ಬುದ್ಧಿ ಅಹಂಕಾರ ಹುಟ್ಟದಂದು, ಮನ ಜ್ಞಾನ ಭಾವಂಗಳುತ್ಪತ್ತಿಯಿಲ್ಲದಂದು, ಜ್ಞಾತೃ ಜ್ಞಾನ ಜ್ಞೇಯಂಗಳು ಹುಟ್ಟದಂದು, ಜ್ಞಾನ ಸುಜ್ಞಾನ ಮಹಜ್ಞಾನವೆಂಬ, ವೃತ್ತಿಜ್ಞಾನಂಗಳಿಲ್ಲದಂದು, ಅಖಂಡ ಪರಿಪೂರ್ಣ ಅದ್ವಯ ನಿಃಕಲ ನಿಜಜ್ಞಾನಮೂರ್ತಿ ನೀನೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು