ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ಹೃದಯಕ್ಕೆ ಲಿಂಗದ ಹೃದಯ, ತನ್ನ ಶ್ರೋತ್ರಕ್ಕೆ ಲಿಂಗದ ಶ್ರೋತ್ರ, ತನ್ನ ನೇತ್ರಕ್ಕೆ ಲಿಂಗದ ನೇತ್ರ, ತನ್ನ ತ್ವಕ್ಕಿಗೆ ಲಿಂಗದ ತ್ವಕ್ಕು, ತನ್ನ ನಾಸಿಕಕ್ಕೆ ಲಿಂಗದ ನಾಸಿಕ, ತನ್ನ ಜಿಹ್ವೆಗೆ ಲಿಂಗದ ಜಿಹ್ವೆ ಪ್ರತಿರೂಪಕವಾಗಿರ್ದ ಬಳಿಕ, ಅಂಗವಿದೆಂದು, ಲಿಂಗವಿದೆಂದು, ಬೇರಿಟ್ಟು ನುಡಿಯಲುಂಟೇ ಅಯ್ಯ?. ಶರಣನೇ ಲಿಂಗ; ಲಿಂಗವೇ ಶರಣ. ಇವೆರಡಕ್ಕೂ ಬ್ಥಿನ್ನವೆಲ್ಲಿಯದೋ ಒಂದೆಯಾದ ವಸ್ತುವಿಂಗೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು; ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತರದಂತೆ, ವಿಷಯ ತೋರಿದಡೆ ಯೋನಿ ಚಕ್ರವ ನಿಶ್ಚಯಿಸುವುದು ಆ ವಿಷಯ ತೀರಿದ ಬಳಿಕ ಆ ಯೋನಿ ಸ್ನಾನದಕುಳಿಯಿಂದ ಕಡೆಯಾಗಿಪ್ಪುದು ನೋಡ. ಸತಿಯೆಂಬುವಳು ಸತ್ತ ಶವಕಿಂದ ಕಡೆಯಾಗಿಪ್ಪಳು ನೋಡ. ಅಪ್ಪಬಾರದು ಅಪ್ಪಬಾರದು; ಅತಿ ಹೇಸಿಕೆ. ಪಶುಪತಿ ನೀ ಮಾಡಿದ ವಿಷಯವಿದ್ಥಿ ಈರೇಳು ಲೋಕವನಂಡೆಲೆವುತ್ತಿದೆ ನೋಡಾ. ಈ ಸಂಸಾರ ಪ್ರಪಂಚ ದೇವದಾನವ ಮಾನವರು ಪರಿಹರಿಸಲಾರದೆ ಆಳುತ್ತ ಮುಳುಗತ್ತಲಿಪ್ಪರು ನೋಡಾ. ಇದು ಕಾರಣ, ಸದಾಶಿವನನರಿದು ನೆನೆಯಲು ಸಂಸಾರಪ್ರಪಂಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಾಳ ಮರನ ಹಿಡಿದು ತನಿರಸವನುಂಬನ್ನಕ್ಕರ ಬಾರದ ಭವದಲ್ಲಿ ಬಪ್ಪುದು ತಪ್ಪದು ನೋಡಾ. ತಾಳಮರನ ಹಿಡಿಯದೆ ತನಿರಸವ ಮುಟ್ಟದೆ ಮೇಲಣ ಹಾಲಕುಡಿಯಬಲ್ಲರಾಗಿ ನಿಮ್ಮ ಶರಣರು ಭವವಿರಹಿತರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು ನೋಡಾ. ತಲೆಯಳಿಯಿತ್ತು:ನೆಲ ಬೆಂದಿತ್ತು. ತಲೆಯೊಳಗಣ ಕಣ್ಣು ತ್ರಿಜಗದಾದ್ಥಿಪತಿಯ ತಾನೆಂದು ನೋಡುತ್ತ ನೋಡುತ್ತ ಅಡಗಲು ನೆಲದೊಡೆಯ ಸತ್ತುದ ಕಂಡು ನಿರ್ವಯಲ ಸಮಾದ್ಥಿಸ್ಥಲವಾಗಿ ಕುರುಹಳಿದ ಲಿಂಗೈಕ್ಯನಯೇನೆಂದುಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವುಳ್ಳನ್ನಕ್ಕರ ನಿನ್ನ ಸಾವಯನೆಂದೆ ಮನಪ್ರಾಣಂಗಳುಳ್ಳನ್ನಕ್ಕರ ನಿನ್ನ ಸಾವಯ ನಿರವಯನೆಂದೆ. ಅನುಭಾವವುಳ್ಳನ್ನಕ್ಕರ ನಿನ್ನ ನಿರವಯನೆಂದೆ. ನಾನುಳ್ಳನ್ನಕ್ಕರ ನೀನೆಂದೆ. ನಾ ಸತ್ತ ಬಳಿಕ ನೀನೆಲ್ಲಿಯವನು ಹೇಳ. ಇದು ಕಾರಣ, ಸಾವಯನೆನ್ನೆ, ಸಾವಯ ನಿರವಯನೆನ್ನೆ, ನಿರವಯನೆನ್ನೆ. ನಿರಾಕಾರ ಬಯಲಾದ ಕಾರಣ, ಪರಾಪರ ವಸ್ತುವೆಂದೆನಲಿಲ್ಲ ಕಾಣಾ ಎರಡಿಲ್ಲದ ನಿರಾಳನ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವ ಮುಟ್ಟಿಹ ಮನ ಮನವ ಮುಟ್ಟಿದ ತನು ತನು ಮನವ ಮುಟ್ಟಿಹ ಸರ್ವಕರಣಂಗಳ ನೋಡಾ. ಕಾಯದ ಕರಣಂಗಳ ಮುಟ್ಟಿಹ ಜೀವನ ನೋಡಾ. ಕಾಯ ಜೀವ ಕರಣಂಗಳ ಶುದ್ಧ ಪರಮಾತ್ಮಲಿಂಗದಲ್ಲಿ ಮುಟ್ಟಿಸಬಲ್ಲರೆ ಅದೇ ಅರ್ಪಿತ, ಅದೇ ಪ್ರಸಾದ ನೋಡಾ. ಆ ಪ್ರಸಾದಿ ಎಂದೂ ಪ್ರಳಯ ವಿರಹಿತ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತುಂಟ ಬಂಟಂಗೆ ನಂಟರು ನಾಲ್ವರು ನೋಡಾ. ಬಂಟರು ಎಂಟುಮಂದಿಗಳಾಗಿಪ್ಪರಯ್ಯ. ನಂಟರು ನಾಲ್ವರ ಕೊಂದು ಬಂಟರು ಎಂಟಮಂದಿಯ ಬಿಟ್ಟಲ್ಲದೆ ತುಂಟತನ ಬಿಡದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಾಳಮರದ ಮೇಲೊಂದು ಹೂಳಿದ್ದ ವಸ್ತುವ ಕಂಡೆ. ಏಳುನೂರೆಪ್ಪತ್ತು ಮನೆಯಲ್ಲಿ ತಾನಾಗಿಪ್ಪುದಯ್ಯ. ಸರ್ವ ಸಂದುಗಳೊಳಗೆ ಅಳವಟ್ಟು ಬೆಳಗುವುದು. ನಟ್ಟ ನಡು ಮಧ್ಯದಲ್ಲಿ ನಂದಾದೀವಿಗೆ ನಂದದ ಬೆಳಗು ಕುಂದದು ನೋಡಿರೇ. ಮೂರಾರು ನೆಲೆಗಳ ಮೀರಿ ಪರಿಪೂರ್ಣವಾಗಿಪ್ಪುದು. ದಶನಾಡಿಗಳೊಳಗೆ ಎಸೆದು ಪಸರಿಸಿಪ್ಪ ಸ್ಫಟಿಕಪ್ರದ್ಯುತ್ ಪ್ರಭಾಮಯವಾಯಿತ್ತಯ್ಯ. ಒಳಗಿಲ್ಲ, ಹೊರಗಿಲ್ಲ, ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲ, ಅಡಿಯಿಲ್ಲ, ಅಂತರವಿಲ್ಲ, ಆಕಾಶವೆಂಬುದು ಮುನ್ನಿಲ್ಲವಯ್ಯ. ಹಿಡಿದರೆ ಹಿಡಿಯಿಲ್ಲ, ಕರೆದರೆ ನುಡಿಯಿಲ್ಲ, ನೋಟಕ್ಕೆ ನಿಲುಕದು. ಇದರಾಟ ಅಗಮ್ಯವಾಗಿಪ್ಪುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವಿನೊಳಗೆ ಲಿಂಗ, ಲಿಂಗದೊಳಗೆ ತನು. ಮನದೊಳಗೆ ಲಿಂಗ, ಲಿಂಗದೊಳಗೆ ಮನ. ಭಾವದೊಳಗೆ ಲಿಂಗ, ಲಿಂಗದೊಳಗೆ ಭಾವ. ಪ್ರಾಣದೊಳಗೆ ಲಿಂಗ, ಲಿಂಗದೊಳಗೆ ಪ್ರಾಣವಾಗಿರ್ದು, ಬೇರಿಟ್ಟು ನುಡಿವ ಭಿನ್ನಜ್ಞಾನಿಗಳಿಗೆ ಲಿಂಗವೆಲ್ಲಿಯದೊ?. ಲಿಂಗವಿಲ್ಲವಾಗಿ ಪ್ರಸಾದವಿಲ್ಲ; ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ ನೋಡಾ. ಇದು ಕಾರಣ. ಭಿನ್ನಾಭಿನ್ನವನಳಿದು ನಿನ್ನೊಳಗಡಗಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ: ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು. ಅನ್ಯ ಸತಿ, ಅನ್ಯ ಧನದಾಸೆಯನ್ನು ಬಿಡಬೇಕೆಂಬುದು ನೋಡ, ಜಗ. ತನ್ನ ಸತಿಯಾರು ಅನ್ಯಸತಿಯಾರೆಂದು ಬಲ್ಲವರುಂಟೆ ಹೇಳ ಮರುಳೆ, ಬಲ್ಲವರುಂಟುಂಟು ಶಿವಶರಣರು. ತನ್ನ ಶಕ್ತಿಯೆ ಶಿವಶಕ್ತಿ; ಅನ್ಯಶಕ್ತಿಯು ಮಾಯಾಶಕ್ತಿ ಕಾಣ ಮರುಳೆ. ಇದು ಕಾರಣ, ಮಾಯಾಶಕ್ತಿಯ ಸಂಗ ಭಂಗವೆಂದು ನಿವೃತ್ತಿಯ ಮಾಡಿ ಶಿವಶಕ್ತಿಸಂಪನ್ನರಾಗಿ ಶಿವಲಿಂಗವ ನೆರೆವರಯ್ಯ ನಿಮ್ಮ ಶರಣರು. ಇದು ಕಾರಣ, ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರನರಕ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ ಬಚ್ಚಬರಿಯ ಬಯಲ ಬಣ್ಣ ಶೃಂಗರಿಸಿ ಪರತತ್ತ್ವವಾಯಿತ್ತು ನೋಡಾ. ಆ ಪರತತ್ತ್ವ ತನ್ನ ಶಕ್ತಿ ಸಾಮಥ್ರ್ಯದಿಂದ ವಿಭಜಿಸಿ ಅಂಗ ಲಿಂಗವಾಯಿತ್ತು ನೋಡಾ. ಅಂಗವೆಂದರೆ ಶರೀರ; ಲಿಂಗವೆಂದರೆ ಪ್ರಾಣ. ಇದು ಕಾರಣ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದು? ಭೇದವೆಲ್ಲಿಯದು ಬಿಡಾ ಮರುಳೆ. ಶರಣನೇ ಲಿಂಗವೆಂಬುದು ಸತ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಂದೆಯ ಸಾಮಥ್ರ್ಯದಿಂದ ಹುಟ್ಟಿದ ಮಗನಿಗೆ ಆ ತಂದೆಯ ಸ್ವರೂಪಲ್ಲದೆ ಬೇರೊಂದೂ ಸ್ವರೂಪೆಂದು ತಿಳಿಯಲುಂಟೇ ಅಯ್ಯ?. ಶಿವ ತಾನೆ ತನ್ನ ಸಾಮಥ್ರ್ಯವೆ ಒಂದೆರಡಾಗಿ, ಗುರುವೆಂದು ಶಿಷ್ಯನೆಂದು ಆಯಿತ್ತೆಂದಡೆ, ಆ ಗುರುವಿಂಗೂ ಶಿಷ್ಯಂಗೂ ಬೇರಿಟ್ಟು ನುಡಿಯಲಾಗದಯ್ಯ. ಗುರುವಿನ ಅಂಗವೇ ಶಿಷ್ಯ; ಶಿಷ್ಯನ ಅಂಗವೇ ಗುರು. ಆ ಗುರುವಿನ ಪ್ರಾಣವೇ ಶಿಷ್ಯ; ಶಿಷ್ಯನ ಪ್ರಾಣವೇ ಗುರು. ಈ ಗುರುಶಿಷ್ಯಸಂಬಂಧ ಒಂದಾದ ಬಳಿಕ ಗುರು ಶಿಷ್ಯರೆಂದು ಬೇರಿಟ್ಟು ನುಡಿವ ಭ್ರಷ್ಟರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವಿಡಿದು ಕಾಬುದು ಗುರುವಿನ ಭೇದ. ಮನವಿಡಿದು ಕಾಬುದು ಲಿಂಗದ ಭೇದ. ಜ್ಞಾನವಿಡಿದು ಕಾಬುದು ಜಂಗಮದ ಭೇದ. ಈ ತ್ರಿವಿಧವಿಡಿದು ಕಾಬುದು ಮಹಾ ಪ್ರಕಾಶ. ಆ ಮಹಾಪ್ರಕಾಶದೊಳಗೆ ಮಹವ ಕಂಡು ಮಹಕ್ಕೆ ಮಹನಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವನು ಶ್ರೀಗುರುವು ಕ್ರಿಯಾದೀಕ್ಷೆಯಿಂದ ತನುಗುಣವನು ಭಸ್ಮೀಕೃತವ ಮಾಡಿದಬಳಿಕ, ಅದು ದೃಶ್ಯ ಜಡ ತನುವಲ್ಲ. ಶಿವಸತ್ಕಿ ್ರಯಾಚಾರದ ಮೂಲಸೂತ್ರವೆ ತನ್ನ ತನುವೆಂದರಿವುದು. ಶ್ರೀಗುರು ಮಂತ್ರದೀಕ್ಷೆಯಿಂದ ಮನದ ಪೂರ್ವಾಶ್ರಯವ ಕಳೆದು ಮನಕ್ಕೆ ಘನ ನೆನಹ ಸಂಬಂಧಿಸಿದನಾಗಿ, ಮನ ನಿರ್ಮಲವಾಗಿ ಲಿಂಗಕ್ಕಾಶ್ರಯವೆಂದು ಅರಿವುದು. ಶ್ರೀಗುರು ಜ್ಞಾನದೀಕ್ಷೆಯಿಂದ ಪ್ರಾಣನ ಪ್ರಪಂಚಿನ ಪಶುಭಾವವ ಕಳೆದು ಅಖಂಡಿತ ಜ್ಞಾನಲಿಂಗಕಳೆಯು ತನ್ನ ಪ್ರಾಣನಾಥನೆಂದು ತಿಳುಹಿದನಾಗಿ, ಪ್ರಾಣನ ಮಲಿನವೆಂಬುದು ಪಶುಭಾವವಲ್ಲದೆ ಲಿಂಗಭಾವವಲ್ಲ. ಈ ಸಂದೇಹ ಭ್ರಾಂತಿಯುಳ್ಳ ಕಾರಣ, ಶೈವ ಹೊಲ್ಲ ಎನ್ನುತ್ತಿರ್ದೆನಯ್ಯ. ತಮ್ಮ ತಾವರಿದು ನಿಶ್ಚೆ ೈಸದಿರ್ದಡೆ ಮಾಣಲಿ, ಗುರೂಪದೇಶದಿಂದ ನಿಶ್ಚೆ ೈಸುವುದು. ಇದು ಸಂದೇಹವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನು ನಿನಗನ್ಯವೆಂದರಿಯದೆ, ತನು ನಿನ್ನದೆಂಬೆ; ಮನ ನಿನಗನ್ಯವೆಂದರಿಯದೆ, ಮನ ನಿನ್ನದೆಂಬೆ; ಧನ ನಿನಗನ್ಯವೆಂದರಿಯದೆ, ಧನ ನಿನ್ನದೆಂಬೆ; ಸ್ಥೂಲ ಸೂಕ್ಷ ್ಮಕಾರಣವೆಂದೆಂಬ ತನುತ್ರಯ ನೀನಲ್ಲ; ಮನ ಮನನ ಮಾನನೀಯವೆಂದೆಂಬ ಮನತ್ರಯ ನೀನಲ್ಲ; ಧನ ಮಮಕಾರ ಸಂಗ್ರಹವೆಂಬ ಕಾರ್ಮಿಕತ್ರಯ ನೀನಲ್ಲ; ಇವು ಒಂದೂ ನೀನಲ್ಲ; ನೀನಾರೆಂದಡೆ: ನೀನು ಸಚ್ಚಿದಾನಂದಸ್ವರೂಪವಪ್ಪ ಶಿವತತ್ವವೇ ನೀನೆಂದು ತಿಳಿದು ನೋಡ, ಉಳಿದವೆಲ್ಲಾ ಹುಸಿಯೆನ್ನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಾಪತ್ರಯಾದಿಗಳಳಿಯವು; ಕೋಪ ಮೋಹಾದಿಗಳ ಸುಟ್ಟುರುಹಲರಿಯರು; ಅಷ್ಟಮದಂಗಳ ಹಿಟ್ಟುಗುಟ್ಟಲರಿಯರು. ಬಟ್ಟಬಯಲ ತುಟ್ಟಿ ತುದಿಯಣ ಮಾತನೇಕೆ ನುಡಿವಿರಣ್ಣ? ಕರಕಷ್ಟ ಕರಕಷ್ಟ ಕಾಣಿಭೋ! ಇಂದ್ರಿಯಂಗಳ ಮುಸುಕುನುಗಿಯದೆ ವಿಷಯಂಗಳ ಶಿರವನರಿಯದೆ ಕರಣಂಗಳ ಕಳವಳವ ಕೆಡಿಸದೆ ಕರ್ಮೇಂದ್ರಿಯಂಗಳ ಮೂಲದ ಬೇರ ಕಿತ್ತು ಭಸ್ಮವ ಮಾಡದೆ ಕಷ್ಟಕಾಮನ ನಷ್ಟವ ಮಾಡಲರಿಯದೆ ಲಿಂಗನಿಷ*ರೆಂಬ ಕಷ್ಟವನೇನೆಂಬೆನಯ್ಯ? ಮೃತ್ಯುಗಳ ಮೊತ್ತವ ಕಿತ್ತೆತ್ತಿ ಕೆದರದೆ ಸತ್ವರಜತಮಂಗಳ ನಿವೃತ್ತಿಯ ಮಾಡದೆ ನಿತ್ಯ ನಿಶ್ಚಿಂತ ನಿರ್ಮಲರೆಂಬ ಕಷ್ಟಯೋಗಿಗಳನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವೆಂಬುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು; ತಾಮಸವೆಂಬ ಸರ್ಪಂಗೆ ತಲೆ ಹದಿನಾಲ್ಕು; ಒಡಲಾರು. ಬಾಲವ ಬ್ರಹ್ಮಲೋಕಕ್ಕಿಟ್ಟು, ಶಿರವ ಹರಿದ್ವಾರದಲ್ಲಿರಿಸಿ, ಕರಣೇಂದ್ರಿಯಂಗಳೆಂಬ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ. ಆ ವಿಷವು ಶಿವಶರಣರಲ್ಲದವರನೆಲ್ಲರ ಸುಡುವುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ವಾರ್ಥವ ಬಲ್ಲೆವೆಂಬರಯ್ಯ ತತ್ತಿಯೊಳಗಣ ಬಾಲಕರು. ತತ್ವಾನುಭಾವ ಸಂಭವಿಸಿದರೆ ಸತ್ತು ಹೋಗಲುಂಟೆ? ಸತ್ತು ಹೋಗುವ ಪ್ರಾಣಿಗಳ ಶಿವತತ್ವಾನುಭಾವಿಗಳೆಂತೆಂಬೆನಯ್ಯ? ಅನುಪಮ ಅದ್ವಯರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಂದೆಯ ವಧುವ ತಂದು, ಮಗನಿಗೆ ಮದುವೆ ಮಾಡಿದೆ; ಮಗನ ಹೆಂಡತಿ ತಂದು, ಅವರಪ್ಪಗೆ ಮದುವೆ ಮಾಡಿದೆ; ಆದಿಪಿಂಡವೇ ಜೀವಪಿಂಡ; ಅತ್ತೆ ಸೊಸೆಯ ನೆರದಳು; ತಂದೆಮಕ್ಕಳಿಬ್ಬರೂ ಪರಾಂಗನೆಯ ನೆರದು, ಪರಾಪರವಸ್ತುವಾದುದನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನ್ನಂಗದ ಮೇಲೆ ಶಿವಲಿಂಗವಿದ್ದು ಸತ್ಕಿ ್ರಯಾಮುಖದಿಂದ ಲಿಂಗಾರ್ಪಿತವ ಮಾಡಿ ಆ ಲಿಂಗ ಪ್ರಸಾದವ ಕೊಂಬುದೆ ಶಿವಾಚಾರಪದ ನೋಡಾ! ಆ ಸದ್ಭಕ್ತನಲ್ಲಿ ಶಿವನಿಪ್ಪನು. ಹೀಂಗಲ್ಲದೆ, ಅಂತರಂಗದಲ್ಲಿ ಆತ್ಮಲಿಂಗವುಂಟೆಂದು ಮನ ಭಾವಂಗಳಿಂದರ್ಪಿತವೆಂದು ಇಷ್ಟಲಿಂಗಾರ್ಪಣವಿಲ್ಲದ ಕರಕಷ್ಟಂಗೆ ಅವನಿಗೆ ಆವ ಸತ್ಯವು ಇಲ್ಲ; ಆವ ಸದಾಚಾರವು ಇಲ್ಲ; ಶಿವಜ್ಞಾನವೆಂಬುದು ಮುನ್ನವೆ ಇಲ್ಲ. ಶಿವಲಿಂಗಾರ್ಪಣಹೀನವಾಗಿ ಕೊಂಬುದು ಅದು ಶಿವಜ್ಞಾನವೆ? ಇಂತಪ್ಪ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಲೆವಾಲೊಸರಲು ನೆಲ ಬೆಂದು ನೀರರತು ಕಿಚ್ಚು ಕೆಟ್ಟಿತ್ತು ನೋಡಾ ಗಾಳಿಯ ದೂಳಿಯ ದಾಳಿನಿಂದು ಅಂಬರದ ಸಂಭ್ರಮವಡಗಿತ್ತು ನೋಡಾ. ಹಾಲಕುಡಿದ ಶಿಶು ಸತ್ತು ತಾನು ತಾನಾದುದ ಏನೆಂದುಪಮಿಸುವೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಂದೆ ತಾಯಿಗಳ ವಿಕಾರದ ಶುಕ್ಲಶೋಣಿತದ ಸಂಬಂಧವಪ್ಪ ಸರ್ವಸೂತಕತನುವಿಡಿದ ಪ್ರಾಣಿಗಳಿಗೆ ಯಮನ ಸಂಹಾರವ ಕಲ್ಪಿಸಿಕೊಂಡಿಪ್ಪ ಶಿವನ ಪರಿಯಾನಾರೂ ಅರಿಯರಲ್ಲ. ಈ ಮಾಯಿಕ ಸಂಬಂಧವಾದ ದೇಹ ತಾನೆಂದೆಂಬ ಮೂಢಾತ್ಮರ ನಾನೇನೆಂಬೆನಯ್ಯ?. ಆತ್ಮ ಅನಾತ್ಮನ ವಿಚಾರಿಸಿ ತಿಳಿಯಲು ಅಚೇತನವಾದ ಅನಾತ್ಮಸ್ವರೂಪೇ ದೇಹ; ಆ ದೇಹಕ್ಕೆ ಆಶ್ರಯವಾಗಿಪ್ಪ ಚೈತನ್ಯನೇ ಆತ್ಮನು. ಇದು ಕಾರಣ, ದೇಹವೇ ಜಡ; ಆತ್ಮನೇ ಅಜಡನು. ಅದೇನುಕಾರಣ ದೇಹ ಜಡ, ಆತ್ಮನು ಅಜಡನುಯೆಂದಡೆ; ದೇಹವೇ ಮಾಯಾಕಾರ್ಯವಾದ ಕಾರಣ ಜಡ; ಇದು ಕಾರಣ, ಇಂದ್ರಿಯಂಗಳು ಜಡ; ವಿಷಯಂಗಳು ಜಡ; ಕರಣಂಗಳು ಜಡ; ವಾಯುಗಳು ಜಡ; ಆತ್ಮನೇ ಅಜಡನು. ಆತ್ಮನದೇನುಕಾರಣ ಅಜಡನೆಂದರೆ ಶಿವಾಂಶಿಕನಾದಕಾರಣ ಅಜಡನು. ಆ ಶುದ್ಧ ಚಿದ್ರೂಪನಾದ ಆತ್ಮನು ಅವಿದ್ಯಾಸಂಬಂಧವಾದ ದೇಹೇಂದ್ರಿಯದ ಸಂಗದಿಂದ ಸಂಸಾರಿಯಾಗಿಪ್ಪನು ನೋಡಾ. ಈ ಸಂಸಾರವ್ಯಾಪ್ತಿಯಹಂಥ ಜೀವನದ ಗುಣವ ಕಳೆದುಳಿದಿಹನೆಂದಡೆ ದೇವ ದಾನರ ಮಾನವರಿಗೆ ದುರ್ಲಭ ನೋಡಾ. ಈ ಮಾಯಾಪ್ರಪಂಚ ನಿವೃತ್ತಿಯಮಾಡುವ ಮಹದರುಹು ತಾನೆಂತಾದೋ ಅಂತಪ್ಪ ಅರುಹುಳ್ಳ ಶರಣರಿಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಾನೆ ಬ್ರಹ್ಮವೆಂದು ಕರ್ತೃಹೀನನಾದ ವಾಗದ್ವೆ ೈತಿಯಲ್ಲ. ಅನಾದಿ ಭಿನ್ನವಾಗಿ ದ್ವೆ ೈತಿಯಲ್ಲ ನೋಡ ಶರಣನು. ಅದೇನು ಕಾರಣವೆಂದರೆ: ಮಹಾಘನ ಪರಶಿವತ್ತ್ವದಲ್ಲಿ ಚಿತ್ತು ಉದಯಿಸಿತ್ತು. ಆ ಚಿಚ್ಛಕ್ತಿಯಿಂದ ಶಿವಶರಣನುದಯಿಸಿದನು. ಅಂತು ಉದಯಿಸಿದ ಚಿದ್ರೂಪಮನೇ ಶರಣನು; ಸದ್ರೂಪವೇ ಲಿಂಗವು. ಈ ಶರಣ ಲಿಂಗವೆರಡರ ಸಂಬಂಧವ ದ್ವೆ ೈತವೆನಲಿಲ್ಲ; ಅದ್ವೆ ೈತವೆನಲಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ವಚಿಂತಾಮಣಿಗಳೆಂಬ ರುದ್ರಾಕ್ಷೆಗಳ ಭಕ್ತಿದಾರದಲ್ಲಿ ಸರಗೊಳಿಸಿ, ಯುಕ್ತಿವಿಧಾನವಿಡಿದು ಧರಿಸಿ ಸದ್ಯೋನ್ಮುಕ್ತನಾದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...