ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿದ್ಥಿಯ ದರ್ಶನವಾದಿಗಳ ಪರಿ ವರ್ತನೆಯಲ್ಲ; ಶರಣನ ವರ್ತನೆ ಬೇರೆ. ವೀರಶೈವ ಸಿದ್ಧಾಂತ ನಿರ್ಣಯ ನಿಜಭಕ್ತಿ. ನಿಜ ಶಿವಜ್ಞಾನ, ಪರಮ ವೈರಾಗ್ಯವನುಳ್ಳ ಸರ್ವಾಚಾರ ಸಂಪನ್ನ ಶರಣ. ಲಿಂಗಾತ್ಮಕ, ಲಿಂಗೇಂದ್ರಿಯ, ಲಿಂಗಾಂಗಸಂಗಿ, ಘನಲಿಂಗಯೋಗಿ. ಪ್ರಾಣಮುಕ್ತ, ಮನೋಮುಕ್ತ, ಶರೀರಮುಕ್ತ. ಅನಾದಿ ಕೇವಲ ಮುಕ್ತರಯ್ಯಾ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಸ್ತುವೆಂದಡೆ:ಹೇಂಗಾಯಿತ್ತಯ್ಯಾಯೆಂದಡೆ, ಹೇಳಿಹೆ ಕೇಳಯ್ಯಾ ಮಗನೆ. ಕಾಷ್ಟದಲ್ಲಿ ಅಗ್ನಿ ಹೇಂಗೆ ಹಾಂಗಿಪ್ಪುದು; ಕ್ಷೀರದೊಳಗೆ ಘೃತ ಹೇಂಗೆ ಹಾಂಗಿಪ್ಪುದು; ತಿಲದಲ್ಲಿ ತೈಲ ಹೇಂಗೆ ಹಾಂಗಿಪ್ಪುದು; ಜಲದೊಳಗೆ ಸೂರ್ಯ ಹೇಂಗೆ ಹಾಂಗಿಪ್ಪುದು; ಕನ್ನಡಿಯೊಳಗೆ ಪ್ರತಿಬಿಂಬ ಹೇಂಗೆ ಹಾಂಗಿಪ್ಪುದು; ಸರ್ವತ್ರ ಎಲ್ಲಾ ಠಾವಿನಲ್ಲಿಯೂ ವಸ್ತುವಿನ ಕಳೆ ಪರಿಪೂರ್ಣವಾಗಿಪ್ಪುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಸ್ತುವೆಂದೊಡೆ ಹೇಂಗಾಯಿತ್ತಯ್ಯ? ಗ್ರಹಿಸುವ ಭೇದವಾವುದಯ್ಯ? ಕಳೆಯ ಸ್ಥಾಪಿಸುವ ಭೇದವಾವುದಯ್ಯ? ಇದರ ಗುಣವನಾನರಿಯೆನು; ಕರುಣಿಸಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾರಣದುದರದಲ್ಲಿ ಮಾರಿ ಮನೆಯಮಾಡಿಕೊಂಡಡಿಪ್ಪಳು ನೋಡಾ. ಮಾರಿಯ ಮನೆಯ ಹೊಕ್ಕವರೆಲ್ಲ ದಾರಿಯ ಕಾಣದೆ, ಹೋರಾಟಗೊಳುತ್ತಿದ್ದಾರೆ ನೋಡಾ. ಇವರೆಲ್ಲರ ಹೋರಾಟವ ಕಂಡು, ಮೂರುಲೋಕದ ಮಸ್ತಕವ ಮೆಟ್ಟಿ ನಿಲಲು, ವಾರುಣದುದರ ಬೆಂದಿತ್ತು. ಮಾರಿ ಸತ್ತಳು. ದಾರಿ ನಿವಾಟವಾಯಿತ್ತು ನಿಮ್ಮವರಿಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿಷಯರತಿಯುಳ್ಳವಂಗೆ ಈಶ್ವರರತಿಯಿನ್ನೆಲ್ಲಿಯದೋ? ಅಂಗವಿಕಾರವುಳ್ಳವರಿಗೆ ಲಿಂಗಾಂಗ ಸಂಬಂಧವಿನ್ನೆಲ್ಲಿಯದೋ ಅಯ್ಯ?. ಮಾಯಾಪಟಲ ಹರಿಯದ ಹಿರಿಯರಿಗೆ ಮಹದ ಮಾತೇಕೋ? ಸಂಸಾರಸಂಗಾನುಭಾವದ ದುಶ್ಚರಿತ್ರದೊಳಗಿಪ್ಪವರಿಗೆ ಲಿಂಗಾನುಭಾವದ ಮಾತೇಕೋ? ಬಿಡು ಬಿಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿಶ್ವಾಸದಿಂದ ಅಂಗನೆಯ ಕುಚ, ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಬಳ್ಳ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಆಡಿನ ಹಿಕ್ಕೆ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಲಿಂಗವನಪ್ಪಿದ ಹೆಣ್ಣು ಗಂಡಾದುದಿಲ್ಲವೆ? ವಿಶ್ವಾಸದಿಂದ ಓಗರವು ಪ್ರಸಾದವಾಗಿ ಎಂಜಲೆಂದ ವಿಪ್ರರ ಮಂಡೆಯ ಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ? ಇದು ಕಾರಣ, ವಿಶ್ವಾಸದಿಂದ ಗುರು; ವಿಶ್ವಾಸದಿಂದ ಲಿಂಗ; ವಿಶ್ವಾಸದಿಂದ ಜಂಗಮ, ವಿಶ್ವಾಸದಿಂದ ಪ್ರಸಾದ. ವಿಶ್ವಾಸಹೀನಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಚಾತೀತ, ಮನೋತೀತ ಅಗೋಚರ ನಿರ್ನಾಮ ನಿರ್ಗುಣ ನಿತ್ಯ ನಿರಂಜನ ನಿರವಯ ನಿರಾಮಯ ನಿರ್ಮಲ ನಿಃಕಲ ಜ್ಞಾನನಿರ್ಭೇದ್ಯ ನಿರುಪಾಧಿಕ ನಿರವಸ್ಥ ನಿರಾವರಣ ಅದ್ವೆ ೈತಾನಂದ ಸಂಪೂರ್ಣವನ್ನುಳ್ಳ ಪರಶಿವ, ತಾನೆ ಪರಮೇಶ್ವರನಾದನು. ಆ ಪರಮೇಶ್ವರನಿಂದ ಸದಾಶಿವನಾದನು. ಸದಾಶಿವನಿಂದ ಈಶ್ವರನಾದನು. ಈಶ್ವರನಿಂದ ಮಹೇಶ್ವರನಾದನು. ಮಹೇಶ್ವರನಿಂದ ರುದ್ರನಾದನು. ರುದ್ರನಿಂದ ವಿಷ್ಣು ಹುಟ್ಟಿದನು. ವಿಷ್ಣುವಿನಿಂದ ಬ್ರಹ್ಮ ಹುಟ್ಟಿದನು. ಬ್ರಹ್ಮನಿಂದ ಸಕಲ ಜಗತ್ತೆಲ್ಲಾ ಆಯಿತು. ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ; ಸ್ವಾಧಿಷಾ*ನಚಕ್ರಕ್ಕೆ ವಿಷ್ಣುವಧಿದೇವತೆ; ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ; ಅನಾಹತಚಕ್ರಕ್ಕೆ ಈಶ್ವರನಧೀದೇವತೆ ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ; ಆಜ್ಞಾಚಕ್ರಕ್ಕೆ ಪರಮೇಶ್ವರನಧಿದೇವತೆ. ಆಧಾರಸ್ಥಾನದ ಬ್ರಹ್ಮತತ್ವಕ್ಕೆ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನದ ವಿಷ್ಣುತತ್ವಕ್ಕೆ ಗುರುಲಿಂಗವ ಸ್ವಾಯತವ ಮಾಡಿ ಮಣಿಪೂರಕಸ್ಥಾನದ ರುದ್ರತತ್ವಕ್ಕೆ ಶಿವಲಿಂಗವ ಸ್ವಾಯತವ ಮಾಡಿ ಅನಾಹತಸ್ಥಾನದ ಈಶ್ವರತತ್ವಕ್ಕೆ ಜಂಗಮಲಿಂಗವ ಸ್ವಾಯತವ ಮಾಡಿ ವಿಶುದ್ಧಿಸ್ಥಾನದ ಸದಾಶಿವತತ್ವಕ್ಕೆ ಪ್ರಸಾದಲಿಂಗವ ಸ್ವಾಯತವ ಮಾಡಿ ಆಜ್ಞಾಸ್ಥಾನದ ಪರಮೇಶ್ವರನೆಂಬ ತತ್ವಕ್ಕೆ ಮಹಾಲಿಂಗವ ಸ್ವಾಯತವ ಮಾಡಿ ಪರಿಪೂರ್ಣಲಿಂಗವು ತಾನೆ ಸರ್ವಾಂಗದಲ್ಲಿ ಸ್ವಾಯತವಾಗಲು, ಆ ಶರಣನ ಸರ್ವಾಂಗವು ನಿರುಪಮ ಲಿಂಗಸ್ವಾಯತವಾಗಿ ನಿರವಯಸ್ಥಲ ವೇದ್ಯವಾಯಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಸ್ತುವೆಂದರೆ ಪರಬ್ರಹ್ಮನಾಮ. ಆ ವಸ್ತು ತನ್ನಿಂದ ಭಾವವ ಕಲ್ಪಿಸಿ, ಆ ಭಾವದಿಂದ ಮಾಯವ ಕಲ್ಪಿಸಿ, ಆ ಮಾಯದಿಂದ ಮೋಹವ ಕಲ್ಪಿಸಿ, ಆ ಮೋಹದಿಂದ ಸಕಲ ಪ್ರಪಂಚುವ ಹುಟ್ಟಿಸಿ, ಆ ಪ್ರಪಂಚಿನಿಂದ ಸಮಸ್ತ ಜಗತ್ತು ಹುಟ್ಟಿತ್ತು ನೋಡಾ. ಇಂತಿವೆಲ್ಲವು ನೀನಾಗೆಂದಡಾದವು; ನೀ ಬೇಡಾಯೆಂದಡೆ ಮಾದವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಸನೆಯ ಕೊಂಬುದು ಲಿಂಗದ ನಾಸಿಕ; ರುಚಿಸುವದು ಲಿಂಗದ ಜಿಹ್ವೆ; ನೋಡುವದು ಲಿಂಗದ ನೇತ್ರ; ಕೇಳುವದು ಲಿಂಗದ ಶ್ರೋತ್ರ; ಸೋಂಕುವದು ಲಿಂಗ ತ್ವಕ್ಕು; ನಡೆವುದು ಲಿಂಗ ತಾನೆ. ನುಡಿವುದು ಲಿಂಗ ತಾನೆ. ಮನಬೆರಸಿ ಪರಿಣಾಮಿಸುವುದು ಲಿಂಗ ತಾನೆಯೆಂಬ ಭಾವ ಸಹಭಾಜನವೆಂದೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಸ್ತುವಿನ ಸ್ವರೂಪ ಹೇಳಿಹೆ ಕೇಳು, ಹೊಳೆವುತ್ತಿದ್ದ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು; ಅನಂತಕೋಟಿ ಮಿಂಚುಗಳ ಪ್ರಭೆಯ ಪ್ರಕಾಶವನುಳ್ಳುದು; ಅನಂತಕೋಟಿ ಸೋಮ ಸೂರ್ಯರ ಪ್ರಭೆಯ ಪ್ರಕಾಶವನುವುಳ್ಳದು; ಮುತ್ತು ಮಾಣಿಕ್ಯ ನವರತ್ನದ ಕಿರಣಂಗಳ ಪ್ರಭೆಯ ಪ್ರಕಾಶವನುಳ್ಳುದು; ನಿನ್ನ ಪಿಂಡದ ಮಧ್ಯದಲ್ಲಿ ಉದಯವಾಗಿ ತೋರುವ ಪಿಂಡಜ್ಞಾನದ ಮಹದರುಹೆ ಪರಬ್ರಹ್ಮವೆಂದು ಅರಿಯಲು ಯೋಗ್ಯವೆಂದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾರಿ ಬಲಿದು ವಾರಿಶಿಲೆಯಾದಂತೆ, ವಾರಿಶಿಲೆ ಕರಗಿ ಉದಕವಾದಂತೆ, ನಿನ್ನ ವಿನೋದಕ್ಕೆ ನೀನೆ ಶರಣನಾದೆ. ನಿನ್ನ ವಿನೋದಕ್ಕೆ ನೀನೆ ಲಿಂಗವಾದೆ. ನಿನ್ನ ವಿನೋದ ನಿಂದಲ್ಲಿ, ನೀನೆ ಶರಣ ಲಿಂಗವೆಂಬುಭಯವಳಿದು ನಿರಾಳ ನಿರ್ಮಾಯನಾಗಿ ನಿಶ್ಯಬ್ದಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಂದಿಸಿ ನಿಂದಿಸುವ ಸಂದೇಹಿಯ ಮನೆಯ ಕೂಳು ಹಂದಿಯ ಬಾಯ ತುತ್ತ ನಾಯಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣ. ಅದೇನು ಒಡಲ ಉಪಾಧಿಗೆ ತನ್ನ ನಿಂದಿಸಿದುದನರಿಯದೆ ಭಕ್ತನೆಂದು ಒಳಗಿಟ್ಟುಕೊಂಡು ನಡೆವವರನೊಲ್ಲೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವೇದಶಾಸ್ತ್ರ ಪುರಾಣಾಗಮಂಗಳುದಯವಾಗದಂದು, ದ್ವೆ ೈತಾದ್ವೆ ೈತವಿಲ್ಲದಂದು ಶ್ವೇತ, ಪೀತ, ಹರಿತ, ಮಾಂಜಿಷ*, ಕಪೋತ, ಮಾಣಿಕ್ಯವರ್ಣಮೆಂಬ ಈ ಷಡುವರ್ಣಮುಖ್ಯವಾದ ಸಮಸ್ತವರ್ಣಂಗಳಿಲ್ಲದಂದು, ನೀನು, ವಾಚಾತೀತ ಮನಾತೀತ ವರ್ಣಾತೀತ ಭಾವಾತೀತ ಜ್ಞಾನಾತೀತನಾಗಿ, ನೀನು ನಿಃಕಲನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ ಶರಣ ಐಕ್ಯ ಭಕ್ತ ಮಹೇಶ್ವರ ಪ್ರಸಾದಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಪ್ರಾಣಲಿಂಗಿಗೆ ಜಂಗಮಲಿಂಗ ಸ್ವಾಯತವಾಗಿ ಆ ಜಂಗಮಲಿಂಗದಲ್ಲಿಯೇ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಜಂಗಮಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾರಣದ ತಲೆಯನೊಡೆದು ಉತ್ತುಂಗರಾಸಿಯೆಂಬ ಭಕ್ತ್ಯಂಗನೆ ಉದಯವಾದಳು ನೋಡಾ. ಭಕ್ತ್ಯಂಗನೆಯ ಬಸುರೆಲ್ಲಾ ನಿತ್ಯ ನಿರ್ಮಲಜ್ಯೋತಿ. ಸತ್ಯಜ್ಞಾನಮನಂತಂಬ್ರಹ್ಮವನೆಯಿದಿ ನುಂಗಿ ಉಗುಳಲಾರದೆ ಅಲ್ಲಿಯೇ ಸತ್ತಿತ್ತು ನೋಡಾ. ತಾ ಸತ್ತ ಬಳಿಕ ಇನ್ನೆತ್ತಳ ತತ್ವಾತತ್ವವಿಚಾರ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಚ್ಯಾವಾಚ್ಯಂಗಳಿಲ್ಲದಂದು, ಪಕ್ಷಾಪಕ್ಷಗಳಿಲ್ಲದಂದು, ಸಾಕ್ಷಿ, ಸಭೆಗಳಿಲ್ಲದಂದು, ಪೃಥ್ವಿ ಆಕಾಶಾದಿಗಳಿಲ್ಲದಂದು, ಉತ್ಪತ್ತಿ, ಸ್ಥಿತಿ, ಲಯಂಗಳಿಲ್ಲದಂದು, ಸತ್ವ, ರಜ, ತಮಗಳೆಂಬ ಗುಣತ್ರಯಂಗಳಿಲ್ಲದಂದು, ಅಹಂಕಾರ ಮಮಕಾರ ಪ್ರಕೃತಿ ಮಹತ್ತು, ಮಾಯಾಪ್ರಪಂಚು ಮೊಳೆದೋರದಂದು, ಮಾಯಿಕ ನಿರ್ಮಾಯಿಕಂಗಳು ಹುಟ್ಟದಂದು, ಜ್ಞಾನಾಜ್ಞಾನಗಳು ಉದಯವಾಗದಂದು, ರೂಪು ನಿರೂಪು ಹುಟ್ಟದಂದು, ಕಾಮ ನಿಃಕಾಮಂಗಳಿಲ್ಲದಂದು, ಮಾಯಾಮಾಯಂಗಳೇನುಯೇನೂಯಿಲ್ಲದಂದು, ನಿನ್ನ ನಿರ್ಮಾಯನೆಂದು ಹೆಸರಿಟ್ಟು ಹೇಳುವರಾರೂಯಿಲ್ಲದಂದು, ನಿಜವು ನಿನ್ನಯ ಘನತೆಯ ನೀನರಿಯದೆ, ಇದಿರನು ಅರಿಯದೆ, ಏನನು ಅರಿಯದೆ, ನೀನೆ ನೀನಾಗಿರ್ದೆಯಲ್ಲಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆಯೆಂಬ ದೀಕ್ಷಾತ್ರಯಂಗಳಿಂದ ತನುತ್ರಯಂಗಳ ಪೂರ್ವಾಶ್ರಯವ ಕಳದು ಲಿಂಗತ್ರಯಂಗಳ ಸಂಬಂಧಿಸಿದನದೆಂತೆಂದಡೆ: ವೇಧಾದೀಕ್ಷೆಯೆಂದು ಶ್ರೀಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿ ಸಂಯೋಗವ ಮಾಡಿದುದು; ಮಂತ್ರದೀಕ್ಷೆಯೆಂದು ಶ್ರೀಗುರು ಪ್ರಣವಪಂಚಾಕ್ಷರಿಯ ಮಂತ್ರವ ಕರ್ಣದಲ್ಲಿ ಉಪದೇಶಿಸಿದುದು; ಕ್ರಿಯಾದೀಕ್ಷೆಯೆಂದು ಆ ಮಂತ್ರಸ್ವರೂಪವನೆ ಇಷ್ಟಲಿಂಗಸ್ವರೂಪವ ಮಾಡಿ ಕರಸ್ಥಲದಲ್ಲಿ ಸಂಬಂಧಿಸಿದುದು. ಇದು ಕಾರಣ, ವೇಧಾದೀಕ್ಷೆಯಿಂದ ಕಾರಣತನುವಿನ ಪೂರ್ವಾಶ್ರಯವಳಿದು ಭಾವಲಿಂಗಸಂಬಂಧವಾಯಿತ್ತು. ಮಂತ್ರದೀಕ್ಷೆಯಿಂದ ಸೂಕ್ಷ ್ಮತನುವಿನ ಪೂರ್ವಾಶ್ರಯವಳಿದು ಪ್ರಾಣಲಿಂಗಸಂಬಂಧವಾಯಿತ್ತು. ಕ್ರಿಯಾದೀಕ್ಷೆಯಿಂದ ಸ್ಥೂಲತನುವಿನ ಪೂರ್ವಾಶ್ರಯವಳಿದು ಇಷ್ಟಲಿಂಗಸಂಬಂಧವಾಯಿತ್ತು. ಅಂಗತ್ರಯಂಗಳಲ್ಲಿ ಲಿಂಗತ್ರಯಂಗಳ ಧರಿಸಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು