ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಭಾವದಿಂದ ಲಿಂಗಮುಖವನು ಅಂಗಮುಖವನು ಅರಿದು ಜಂಗಮ ಮುಖವನು ಅರಿದಡೆ ಸಂಸಾರವೆಂಬ ಬಂಧನವಿಲ್ಲವಯ್ಯ. ಜಂಗಮವೆಂದರೆ ಸಾಕ್ಷಾತ್ ಪರವಸ್ತು ತಾನೆ ನೋಡಾ. ಅದೇನು ಕಾರಣವೆಂದಡೆ: ಅಂಗವಾರಕ್ಕೆ ಲಿಂಗವಾರಕ್ಕೆ ಮೇಲಾಗಿ ಆ ಅಂಗವನು ಲಿಂಗವನು ತನ್ನಲ್ಲಿ ಏಕೀಕರಿಸಿಕೊಂಡು ತಾನು ಪರಮ ಚೈತನ್ಯನಾದ ಕಾರಣ. ಆ ಪರವಸ್ತುವಿನ ಪ್ರಸನ್ನ ಪ್ರಸಾದಮುಖವನರಿದು ಇಹ ಪರವ ನಿಶ್ಚೆ ೈಸೂದಿಲ್ಲ ನೋಡಾ. ಅದೇನು ಕಾರಣವೆಂದಡೆ: ಇಹ ಪರಕ್ಕೆ ಹೊರಗಾಗಿ ಪರಮ ಪದದಲ್ಲಿ ಪರಿಣಾಮಿಯಾದನಾಗಿ ಈ ತ್ರಿವಿಧವು ಒಂದೆಯೆಂದರಿದಾತನೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ. ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ. ಲಿಂಗಾಂಗವೆಂಬ ಎರಡನರಿಯೆನಯ್ಯ. ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ ಪ್ರಾಣಲಿಂಗವೆಂಬ ಎರಡನರಿಯೆನಯ್ಯ. ಎರಡೆರಡೆಂದು ಈ ಹುಸಿಯನೇಕೆ ನುಡಿವರಯ್ಯ. ಇನ್ನೆರಡು ಒಂದಾಯಿತ್ತಾಗಿ ಲೋಕಚಾತುರ್ಯ, ಲೋಕವ್ಯವಹರಣೆ. ಲೋಕಭ್ರಾಂತಿಯ ಮರೆದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗುಷ್ಠದಲ್ಲಿ ಸರ್ಪದಷ್ಟವಾಗಲು ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ. ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು ಆ ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡಾ. ಲಿಂಗವನಪ್ಪಿ ಲಿಂಗಸಂಗಿಯಾದ ಅಭಂಗ ಶರಣಂಗೆ ಅನಂಗಸಂಗವುಂಟೆ? ಬಿಡಾ ಮರುಳೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಾರು, ಲಿಂಗವಾರು ಶಕ್ತಿಯಾರು, ಭಕ್ತಿಯಾರು, ಇಂತಿವೆಲ್ಲವ ನಿನ್ನಲ್ಲಿ ಗಬ್ರ್ಥೀಕರಿಸಿಕೊಂಡು ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ ನಿನ್ನ, ನಿಃಕಲಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ, ಅದು ಕಾಮಾರಿ ನೋಡಾ. ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ ಅವಿರಳ ಪರಬ್ರಹ್ಮನಾಗಿ ಅರಿಷಡುವರ್ಗಂಗಳ ಗರ್ವವ ಮುರಿದನು ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು, ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ. ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ. ಆ ರಸದ ಭಾವಿಯ ತುಳಕ ಹೋದವರೆಲ್ಲ ಅಗ್ನಿಯನುಣ್ಣದೆ, ಆ ರಸವನೆ ಉಂಡು, ಅಗ್ನಿಯ ಸ್ವರೂಪವಾದರು ನೋಡ. ಅಗ್ನಿಯ ಸ್ವರೂಪವಾದುದ ಕಂಡು ಕುರುಹಳಿದು ಅರುಹಡಗಿ ನಿರವಯಲಸಮಾದ್ಥಿಯಲ್ಲಿ ನಿಂದ ನಿಬ್ಬೆರಗು ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದಮೇಲೊಂದು ಲಿಂಗವ ಕಂಡೆ; ಲಿಂಗದಮೇಲೊಂದಂಗವ ಕಂಡೆನು ನೋಡಾ. ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು. ಶಿವಜೀವರೊಂದಾದಲ್ಲಿ, ಪ್ರಾಣಾಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ[ವೆ]ಂಬ ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ. ಲಿಂಗವುಳ್ಳನ್ನಕ್ಕರ ಅಂಗ ಅಂಗವೆನುತಿರ್ದೆ. ಅಂಗ ಲಿಂಗವುಳ್ಳನ್ನಕ್ಕರ ಅರುಹು ಅರುಹುಯೆನುತಿರ್ದೆನು. ಅರುಹು ಅರುಹುಯೆಂಬನ್ನಕ್ಕರ ಭಾವ ನಿರ್ಭಾವಯೆನುತಿರ್ದೆನು. ಅಂಗ ಲಿಂಗದಲ್ಲಡಗಿ, ಲಿಂಗ ಅಂಗದಲ್ಲಡಗಿ, ಅಂಗ ಲಿಂಗವೆಂಬುಭಯ ಭಾವವರತಲ್ಲಿ ಅರುಹು ಅರುಹೆಂಬುವುದು ಬರಿದಾಯಿತ್ತು ನೋಡಾ. ಅರುಹು ಅರುಹೆಂಬುವದು ಅರಿದಾದಲ್ಲಿ, ಭಾವ ನಿರ್ಭಾವ ಬಯಲಾಗಿ ಬಚ್ಚಬರಿಯ ಬಯಲೆಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು ಲಿಂಗ ತಾನೆಯಯ್ಯ. ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು ಲಿಂಗ ತಾನೆಯಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವುದು ಲಿಂಗ ತಾನೆಯಯ್ಯ. ಜಿಹ್ವೆಯ ಕೊನೆಯ ಮೊನೆಯಲ್ಲಿ ರುಚಿಸುವುದು ಲಿಂಗ ತಾನೆಯಯ್ಯ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವುದು ಲಿಂಗ ತಾನೆಯಯ್ಯ. ಶ್ರೋತ್ರದ ಕೊನೆಯ ಮೊನೆಯಲ್ಲಿ ಕೇಳುವುದು ಲಿಂಗ ತಾನೆಯಯ್ಯ. ಭಾವದ ಕೊನೆಯ ಮೊನೆಯಲ್ಲಿ ತೃಪ್ತಿಯಿಂದ ಪರಿಣಾಮಿಸುವುದು ಲಿಂಗ ತಾನೆಯಯ್ಯ. ಇದುಕಾರಣ, ಲಿಂಗ ಮುಂತಲ್ಲದೆ ಸಂಗವ ಮಾಡೆ. ಲಿಂಗ ಮುಂತಲ್ಲದೆ ಅನ್ಯವ ನೋಡೆ. ಲಿಂಗ ಮುಂತಲ್ಲದೆ ಅನ್ಯವ ವಾಸಿಸೆ. ಲಿಂಗ ಮುಂತಲ್ಲದೆ ಅನ್ಯವ ರುಚಿಸೆ. ಲಿಂಗ ಮುಂತಲ್ಲದೆ ಅನ್ಯವ ಸೋಂಕೆ. ಲಿಂಗ ಮುಂತಲ್ಲದೆ ಅನ್ಯವ ಕೇಳೆನು. ಲಿಂಗ ಮುಂತಲ್ಲದೆ ಅನ್ಯವ ಪರಿಣಾಮಿಸೆನು. ಹೀಂಗೆಂಬ ನೆನಹು ನಿತ್ಯಾನಿತ್ಯ ವಿವೇಕವ್ರತವಯ್ಯಾ ಎನಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಡಜ ಪಿಂಡಜ ಬಿಂದುಜ ಉದಯವಾಗದಂದು, ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತತ್ವತ್ರಯಂಗಳ ನಾಮಸೀಮೆಗಳೇನುಯೇನೂಯಿಲ್ಲದಂದು, ಆಚಾರ ಅನಾಚಾರವಿಲ್ಲದಂದು, ಸೀಮೆ ನಿಸ್ಸೀಮೆಯಿಲ್ಲದಂದು,
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಗುಣವುಂಟೇ ಲಿಂಗವನೊಳಕೊಂಡ ನಿರಂಗ ಸಂಗಿಗೆ? ಆತ್ಮಗುಣವುಂಟೇ ಪರಮಾತ್ಮಲಿಂಗ ಸಂಬಂಧಿಗೆ? ಅಹಂಭಾವವುಂಟೇ ತಾನೆಂಬ ಭಾವವಳಿದು ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ? ಸಂದೇಹಾವರಣ ಎಂದೂ ಇಲ್ಲ ನೋಡಾ. ತಾನೆಂದೆಂದೂ ಇಂದುಧರನಂಗದಲ್ಲಿ ಉದಯವಾಗಿ ಬಂದನಾಗಿ, ಹುಟ್ಟಿದ ಬಟ್ಟೆಯ ಮೆಟ್ಟಿ ನಡೆದು ಹುಟ್ಟಿದಲ್ಲಿಯೆ ಹೊಂದುವಾತನೆ ಮಾಹೇಶ್ವರನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ, ಶಿವಲಿಂಗದುದಯವ ಕಂಗಳಿಲ್ಲದೆ ಕಂಡು, ಅಂಗವಿಲ್ಲದೆ ಸಂಗವ ಮಾಡಿ, ನಿಸ್ಸಂಗಿಯಾಗಿ ಸರ್ವಸಂಗಕ್ಕೆ ಹೊರಗಾಗಿ, ನಿರ್ವಯಲ ಬೆರಸಲು `ಮಂಗಳ ಮಂಗಳ'ವೆನುತ್ತಿಪ್ಪ ಮಹಾಗಣಂಗಳ ಸಂಗದಲ್ಲಿ ಮೈಮರೆದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂತರಂಗದಲ್ಲಿ ಜ್ಞಾನ, ಬಹಿರಂಗದಲ್ಲಿ ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವವೆನಿಸಿಕೊಂಬುದಯ್ಯ. ಅದು ಹೇಗೆಂದಡೆ: ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದಲ್ಲಿ ಉದಕವಿಪ್ಪುದು. ಅಗ್ನಿಯ ಜ್ವಾಲೆಯ ಸಾಮಥ್ರ್ಯದಿಂದ ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ ಜ್ಞಾನ ಸತ್ಕಿ ್ರಯೋಪಚಾರವ ಮಾಡಲಾಗಿ ಪ್ರಾಣವೆ ಲಿಂಗಸ್ವರೂಪವಪ್ಪುದು ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು ಭಂಗವ ಮಾರುತಿಪ್ಪಳು ನೋಡಾ. ಆಕೆಗೆ ಹರಿಗೆಯ ಪಂಗನೆಂಬವ ಗಂಡನಾಗಿಪ್ಪನು ನೋಡಾ. ಅಂಗಡಿಯ ಬೀದಿಯ ಮುಚ್ಚಿ, ಕೊಂಗಿತಿಯ ಕೋಡ ಮುರಿದು, ಹರಿಗೆಯ ಪಂಗನ ಕೊಂದಲ್ಲದೆ, ಲಿಂಗವ ಕಾಣಬಾರದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಲಿಂಗ ಸಂಬಂಧದ ನಿಲುಕಡೆಯನರಿಯದೆ ಅಘೋರತಪವ ಮಾಡಿದರೇನು? ಗಾಳಿಯಾಹಾರವ ಕೊಂಡರೇನು? ತರಗೆಲೆಯ ಮೆದ್ದರೇನು? ಗಿರಿಗಹ್ವರದೊಳಗಿದ್ದರೇನು? ಅಂಗಲಿಂಗಸಂಬಂಧಿಗಳಾಗಬಲ್ಲರೆ. ಅಂಗಲಿಂಗಸಂಗಂದಿಂದಲ್ಲದೆ, ಅಂತರಂಗದಲ್ಲಿ ಅರುಹು ತಲೆದೋರದು. ಅಂತರಂಗದಲ್ಲಿ ಅರುಹು ತಲೆದೋರಿದಲ್ಲದೆ, ಆತ್ಮಲಿಂಗದ ಆದ್ಯಂತವನರಿಯಬಾರದು. ಆತ್ಮಲಿಂಗದ ಆದ್ಯಂತವನರಿಯದೆ ಅಘೋರತಪವಮಾಡಿದರೆ ಅದೇತಕ್ಕೂ ಪ್ರಯೋಜನವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂತರವಿಲ್ಲದಂದು, ಬಾಹ್ಯವಿಲ್ಲದಂದು, ಅಡಿ, ಮುಡಿ, ಒಡಲು, ಮತ್ತೊಂದೆಡೆಯೇನೂಯಿಲ್ಲದಂದು, ದೆಶ, ದಿಕ್ಕುಗಳು ವಿಶ್ವಪ್ರಪಂಚುಯೇನೂಯಿಲ್ಲದಂದು, ಸ್ಥಾವರ ಜಂಗಮಾತ್ಮಕಂಗಳಿಗೆ ಆಧಾರಕರ್ತೃವೆಂಬ ನಾಮಂಗಳೇನೂಯಿಲ್ಲದಂದು, ಸರ್ವಶೂನ್ಯನಿರಾಲಂಬವಾಗಿರ್ದೆಯಲ್ಲಾ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ ಕಂಗಳ ಕೊನೆಯ ಬಿಡುಮುಳ್ಳು ತಾಕಲು, ಭಂಗಿತರಾದರು ಹರಿ ಬ್ರಹ್ಮರೆಲ್ಲರು. ಅಂಗದ ಕೊನೆಯ ಮೊನೆಯ ಬಿಡುಮುಳ್ಳ ಮುರಿಯಲು, ಮಂಗಳಮಯ ಮಹಾಲಿಂಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಕ್ಕೆ ಆಚಾರವೆ ಆಶ್ರಯ. ಆಚಾರಕ್ಕೆ ಪ್ರಾಣವೆ ಆಶ್ರಯ. ಪ್ರಾಣಕ್ಕೆ ಜ್ಞಾನವೆ ಆಶ್ರಯ. ಜ್ಞಾನಕ್ಕೆ ಲಿಂಗವೆ ಆಶ್ರಯ. ಲಿಂಗಕ್ಕೆ ಜಂಗಮವೆ ಆಶ್ರಯ. ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ. ಅಂಗದೊಳಗೆ ಪ್ರಾಣವಿಪ್ಪುದಯ್ಯ. ತನುವಿನ ಮೇಲಿಪ್ಪ ಲಿಂಗವ ಮನದಲ್ಲಿ ಸ್ವಾಯತಮಾಡಿ ನೆರೆಯಲರಿಯದೆ ಧನ ಕಾಮಿನಿಯರ ಭ್ರಾಂತಿನಲ್ಲಿ ಜಿನುಗುವ ಮನುಜರಿಗೆ ಪ್ರಾಣಲಿಂಗವೆಂದೇನೋ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಲಿಂಗ, ಲಿಂಗ ಅಂಗವೆಂದೆಂಬಿರಿ; ಅಂಗ ಸೂತಕವ ಹೇಳುವಿರಿ. ಪ್ರಾಣವೆ ಪ್ರಸಾದ, ಪ್ರಸಾದವೆ ಪ್ರಾಣವೆಂದೆಂಬಿರಿ; ಪ್ರಕೃತಿ ಭಾವವ ಕಲ್ಪಿಸಿಕೊಂಬಿರಿ; ಇದು ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವವೆ? ಅಲ್ಲ ಕಾಣಿರೋ. ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವ ಭರಿತವಾದರೆ, ಲಿಂಗವ ಮುಟ್ಟಿ ಅರ್ಪಿಸಲ್ಲಮ್ಮೆವೆಂಬುದು ಅಜ್ಞಾನ ನೋಡ. ಈ ಅಜ್ಞಾನಿಗಳ ಅಂಗದಲ್ಲಿ ಲಿಂಗವುಂಟೇ? ಮನದಲ್ಲಿ ಮಂತ್ರವುಂಟೇ? ಪ್ರಾಣದಲ್ಲಿ ಪ್ರಸಾದವುಂಟೇ? ಈ ಅಶುದ್ಧ ಜೀವಿಗಳಿಗೆ ಶುದ್ಧವಹ ಶಿವಪ್ರಸಾದ ಸಂಬಂಧ ಎಂದೂ ಇಲ್ಲ ಕಾಣ. ಲಿಂಗ ಸೋಂಕಿದ ಅಂಗದಲ್ಲಿ ಶುದ್ಧಾಶುದ್ಧ ಉಂಟೇ? ಇಲ್ಲ; ಈ ಅನಂಗಸಂಗಿಗಳ ಮುಖ ತೋರದಿರಾಯೆನಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ ಕಂಡೆ. ಕಾಯವಿಲ್ಲದೆ ಅಪ್ಪಿದೆ. ಮನವಿಲ್ಲದೆ ನೆನೆದೆ. ಭಾವವಿಲ್ಲದೆ ಭಾವಿಸಿ ಮಾಯವಿಲ್ಲದೆ ಸಂಗವ ಮಾಡಿ ನಿಸ್ಸಂಗಿಯಾದೆನು. ನಿರುಪಾಧಿಕ ನಿಷ್ಕಳಂಕ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು ಅಂಬುಜ ಉದಯವಾಗಿ ಅಮರಗಣಂಗಳು ಸಂಭ್ರಮಿಸುತ್ತಿದಾರೆ ನೋಡಾ. ಅಮರಗಣ ತಿಂಥಿಣಿಯೊಳಗೆ ಅನುಪಮ ಮಹಿಮನ ಕಂಡು ಅಪ್ಪಿ ಅಗಲದೆ ಅಪ್ರತಿಮನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವವ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂದಾದಿಬಿಂದು ಉದಯಿಸದಂದು, ಮಾಯಾಶಕ್ತಿ ಹುಟ್ಟದಂದು, ಪರಶಿವತತ್ವದಲ್ಲಿ ಚಿತ್ತು ತಲೆದೋರದಂದು, ಚಿತ್ತಿನಿಂದ ನಾದ ಬಿಂದು ಕಳೆಗಳುದಯವಾಗದಂದು, ನಾದ ಬಿಂದು ಕಳೆವೊಂದಾಗಿ ಚಿತ್ಪಿಂಡ ರೂಹಿಸದಂದು, ಶೂನ್ಯ ಮಹಾಶೂನ್ಯವಿಲ್ಲದಂದು, ನಿಃಕಲ ನಿರಾಳತತ್ವವೆಂಬ ಹೆಸರಿಲ್ಲದಂದು, ನಿತ್ಯನಿರಂಜನ ನೀನೊರ್ಬನೆಯಿರ್ದೆಯಲ್ಲ ನಿನ್ನ ನೀನರಿಯದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...