ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು, ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು, ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು, ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ. ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು ಅನಂತ ಹಿರಿಯರ ನುಂಗುವದ ಕಂಡು, ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ ಶಿಲೆಯನೆಂತು ಲಿಂಗವೆಂದೆಂಬೆನಯ್ಯ? ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ. ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ; ಕೊಂಡಾತ ಶಿಷ್ಯನೆಂಬೆನಯ್ಯ `ಯಥಾ ಕಲಾ ತಥಾ ಭಾವೋ| ಯಥಾ ಭಾವಸ್ತಥಾ ಮನಃ|| ಯಥಾ ಮನಸ್ತಥಾ ದೃಷ್ಟಿ| ರ್ಯಥಾ ದೃಷ್ಟಿಸ್ತಥಾ ಸ್ಥಲಂ||' ಎಂದುದಾಗಿ ಈ ಭೇದವನರಿಯದೆ ಇಷ್ಟವ ಮಾರುವಾತಂಗೂ ಕೊಂಬಾತಂಗೂ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ. ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು ಈ ಮೂರು ಕ್ರಿಯಾಲಿಂಗವಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಈ ಮೂರು ಜ್ಞಾನಲಿಂಗವಯ್ಯ. ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಆ ಆರು ಕ್ರಿಯಾಂಗವು. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಲಿಂಗವಾರು ತೆರನಾಗಿಪ್ಪುದಯ್ಯ. ಇನ್ನು ಸಂಗವಾರು ತೆರನದೆಂತೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು ಸಂಗವಾರು ತೆರನಾಗಿಪ್ಪುದಯ್ಯ. ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ; ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ; ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ. ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ. ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ ಆ ಆರು ಪ್ರಾಣಾಂಗಗಳು. ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧಲಿಂಗವು ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು ಜ್ಞಾನಗಮ್ಯವಾಗಿ ಸಂಗದನುವನರಿದು ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ. ಹಿಂದೆ ಹೇಳಿದ ಕ್ರಿಯಾಂಗವಾರು ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು. ಈ ಉಭಯಾಂಗವು ಲಿಂಗಸಂಗದಿಂದ ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ ನಿರುಪಮ ಮಹಿಮ ಶರಣ ತಾನೆ ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು, ಕಾಣಬಾರದೆಯಿದ್ದ ಕಣ್ಣಿಂಗೆ ಜ್ಞಾನವೆಂಬ ಅಂಜನವನೆಚ್ಚು ಶಿವಪಥವಿದೆಂದು ತೋರಿಸಿದ ಸದ್ಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೂತಗ್ರಾಮದಲ್ಲಿ ಪಾತಕದ ಕಿಚ್ಚು ಹುಟ್ಟಿ ಪಂಚಾಗ್ನಿಯಾಗಿ ಸರ್ವರ ಘಾತಿಸುತ್ತ ಘರ್ಜಿಸುತ್ತಿದ್ದಿತ್ತು ನೋಡಾ. ಪಂಚಬ್ರಹ್ಮದ ಮುಖದಲ್ಲಿ ಪರಮಶಿಖಿ ಉದಯಿಸಲು ಭೂತಗ್ರಾಮ ಬೆಂದು, ಪಾತಕದ ಪಂಚಾಗ್ನಿ ಕೆಟ್ಟು, ಪಂಚಬ್ರಹ್ಮದ ಕಿಚ್ಚು ಪರಬ್ರಹ್ಮವನಪ್ಪಲು ಪರಮ ಶಿವೈಕ್ಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಾದ್ಯೆ ೈಕ್ಯಾಂತವಹ ಷಡಂಗಕ್ಕೆ ಭಕ್ತನಂಗವೇ ಆದಿಯಾಗಿ ಆ ಭಕ್ತಂಗೆ ಪೃಥ್ವಿಯೆ ಅಂಗವಾಗಿ ಆ ಪೃಥ್ವಿಯ ಅಂಗವನುಳ್ಳ ಭಕ್ತನಲ್ಲಿಯೇ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಭಕ್ತನಂಗದಲ್ಲಿಯೇ ಆಚಾರಲಿಂಗಸ್ವಾಯತವಾಗಿ ಆ ಆಚಾರಲಿಂಗದಲ್ಲಿಯೇ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೇ ಸರ್ವಕಾರಣವಾಗಿ ಇಂತೀ ಷಡ್ವಿಧಲಿಂಗದಲ್ಲಿಯೇ ಬೆರಸಿ ಬೇರಿಲ್ಲದಿರಬಲ್ಲರೆ ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ ಜಗಂಜ್ಯೋತಿಯ ಕಂಡೆನಯ್ಯ. ಅದು ಹಗಲಿರುಳನರಿಯದೆ ಜಗಜಗಿಸುತ್ತಿದ್ದುದು ನೋಡಾ. ಜಗಂಜ್ಯೋತಿಯ ಬೆಳಗಿನೊಳಗೆ ಅಗಣಿತ ಮಹಿಮನಿದ್ದಾನೆ ನೋಡಾ. ಆ ಅಪ್ರಮಾಣಲಿಂಗದೊಳಗೆ ನಾನಿರ್ದೆನು ಕಾಣಾ. ಅನುಪಮ ಮಹಿಮ ಮಹಾಲಿಂಗಗುರು ಶಿವಸಿದ್ಧೇಶ್ವರಾಯೆಂಬುದಕ್ಕೆ ತೆರಹಿಲ್ಲ ನೋಡಿರೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಂಗೆ ಹಸ್ತವಾವುದು, ಮಾಹೇಶ್ವರಂಗೆ ಹಸ್ತವಾವುದು, ಪ್ರಸಾದಿಗೆ ಹಸ್ತವಾವುದು, ಪ್ರಾಣಲಿಂಗಿಗೆ ಹಸ್ತವಾವುದು, ಶರಣಂಗೆ ಹಸ್ತವಾವುದು, ಐಕ್ಯಂಗೆ ಹಸ್ತವಾವುದು ಎಂದರೆ, ಈ ಹಸ್ತಂಗಳ ಭೇದವ ಹೇಳಿಹೆನಯ್ಯ: ಭಕ್ತಂಗೆ ಸುಚಿತ್ತವೇ ಹಸ್ತ. ಮಾಹೇಶ್ವರಂಗೆ ಸುಬುದ್ಧಿಯೇ ಹಸ್ತ. ಪ್ರಸಾದಿಗೆ ನಿರಹಂಕಾರವೇ ಹಸ್ತ. ಪ್ರಾಣಲಿಂಗಿಗೆ ಸುಮನವೇ ಹಸ್ತ. ಶರಣಂಗೆ ಸುಜ್ಞಾನವೇ ಹಸ್ತ ಐಕ್ಯಂಗೆ ಸದ್ಭಾವವೇ ಹಸ್ತ. ಇಂತಿ ಹಸ್ತಂಗಳ ಭೇದವ ತಿಳಿವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೋಜನಸಾಲೆಯ ಆಧಾರದ ರತ್ನಪೀಠದಲ್ಲಿ ವಿರಾಜಿಸುವ ರಾಜಮೂರ್ತಿ ಇವನಾರಯ್ಯ? ಮೂಜಗದೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೂಲೋಕದಲ್ಲಿ ಕುಳ್ಳಿರ್ದು ಆಕಾಶದ ಸುದ್ದಿಯ ನುಡಿದರೆ ಆಕಾಶದ ನೆಲೆಯ ಬಲ್ಲರೆ ಅಯ್ಯ? ಪಾತಾಳಲೋಕದಲ್ಲಿದ್ದವರು ಕೈಲಾಸದ ಸುದ್ದಿಯ ನುಡಿದರೆ ಕಂಡಂತೆ ಆಗಬಲ್ಲುದೆ ಅಯ್ಯ? ತತ್ವಶಾಸ್ತ್ರವನೋದಿ ತತ್ವಮಸ್ಯಾದಿ ವಾಕ್ಯಾರ್ಥಂಗಳ ತಿಳಿದು ತತ್ವಮಸಿಯಾದನೆಂಬವರೆಲ್ಲಾ ಎತ್ತ ಹೋದರೋ? ವ್ಯರ್ಥವಾಗಿ ಸತ್ತು ಹೋದರಲ್ಲ. ಇದು ಕಾರಣ, ನಿಮ್ಮ ಶರಣರು ಉತ್ಪತ್ತಿ ಸ್ಥಿತಿ ಪ್ರಳಯರಹಿತವಾದ ಮಹಾಲಿಂಗದಲ್ಲಿ ಸಂಯೋಗವಾದ ಅಚ್ಚ ಲಿಂಗೈಕ್ಯರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ, ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ, ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ, ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತನಂಗವಾವುದು, ಮಾಹೇಶ್ವರನಂಗವಾವುದು, ಪ್ರಸಾದಿಯಂಗವಾವುದು, ಪ್ರಾಣಲಿಂಗಿಯಂಗವಾವುದು, ಶರಣನಂಗವಾವುದು, ಐಕ್ಯನಂಗವಾವುದು ಎಂದರೆ, ಈ ಅಂಗಸ್ಥಲಗಳ ಭೇದವ ಹೇಳಿಹೆನಯ್ಯ; ಭಕ್ತಂಗೆ ಪೃಥ್ವಿಯಂಗ. ಮಾಹೇಶ್ವರಂಗೆ ಜಲವೆ ಅಂಗ. ಪ್ರಸಾದಿಗೆ ಅಗ್ನಿಯೆ ಅಂಗ. ಪ್ರಾಣಲಿಂಗಿಗೆ ವಾಯುವೆ ಅಂಗ. ಶರಣಂಗೆ ಆಕಾಶವೆ ಅಂಗ. ಐಕ್ಯಂಗೆ ಆತ್ಮನೆ ಅಂಗ ಇಂತೀ ಅಂಗಸ್ಥಲಂಗಳ ಭೇದವ ತಿಳಿಯುವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ ಲಿಂಗವಾವುದು, ಪ್ರಸಾದಿಗೆ ಲಿಂಗವಾವುದು, ಪ್ರಾಣಲಿಂಗಿಗೆ ಲಿಂಗವಾವುದು, ಶರಣಂಗೆ ಲಿಂಗವಾವುದು, ಐಕ್ಯಂಗೆ ಲಿಂಗವಾವುದುಯೆಂದರೆ ಈ ಲಿಂಗಸ್ಥಲಂಗಳ ಭೇದವ ಹೇಳಿಹೆನಯ್ಯ. ಭಕ್ತಂಗೆ ಆಚಾರಲಿಂಗ. ಮಾಹೇಶ್ವರಂಗೆ ಗುರುಲಿಂಗ. ಪ್ರಸಾದಿಗೆ ಶಿವಲಿಂಗ. ಪ್ರಾಣಲಿಂಗಿಗೆ ಜಂಗಮಲಿಂಗ. ಶರಣಂಗೆ ಪ್ರಸಾದಲಿಂಗ. ಐಕ್ಯಂಗೆ ಮಹಾಲಿಂಗವೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು ಭೂತದೇಹಿಗಳ ಕೈಯಲ್ಲಿ ಕೊಟ್ಟು ಕೊಟ್ಟ ಕೂಲಿಯ ತಕ್ಕೊಂಡು, ಹೊಟ್ಟೆಯ ಹೊರೆವ ಭ್ರಷ್ಟರಿಗೆ ಪ್ರಸಾದವೆಲ್ಲಿಯದೋ? `ನಾದಂ ಲಿಂಗಮಿತಿ ಜ್ಞೇಯಂ| ಬಿಂದು ಪೀಠಮುದಾಹೃತಂ|| ನಾದ ಬಿಂದುಯುತಂ ರೂಪಂ| ಲಿಂಗಾಕಾರಮಿಹೋಚ್ಯತೇ||' ಎಂದುದಾಗಿ ಇಷ್ಟಲಿಂಗದಾದಿಯನಿವರೆತ್ತ ಬಲ್ಲರು?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಾವ ಮನಕ್ಕೆ ಲಿಂಗವ ಧರಿಸಿ ಕಾಯಕ್ಕೆ ಲಿಂಗವಿಲ್ಲದಿರಬಹುದೇ? ಎರಡಂಗ ಭಕ್ತರಾಗಿ, ಒಂದಂಗ ಭವಿಯಾಗಿಪ್ಪ ಭ್ರಾಂತರ ಮುಖವ ನೋಡಲಾಗದು. ತನು ಮನ ಭಾವದಲ್ಲಿ ಲಿಂಗವ ಧರಿಸಿ ಲಿಂಗತ್ರಯಕ್ಕೆ ಅಂಗತ್ರಯಕ್ಕೆ ಅಗಲಿಕೆಯಿಲ್ಲದೆ ಅಚಲಿತನಾಗಿರ್ದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ, ಮಾಹೇಶ್ವರಸ್ಥಲ ಪ್ರಸಾದಿಸ್ಥಲದಲ್ಲಡಗಿ, ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲದಲ್ಲಡಗಿ, ಪ್ರಾಣಲಿಂಗಿಸ್ಥಲ ಶರಣಸ್ಥಲದಲ್ಲಡಗಿ, ಶರಣಸ್ಥಲ ಐಕ್ಯಸ್ಥಲದಲ್ಲಡಗಿ, ಇಂತೀಷಡಂಗಯೋಗ ಸಮರಸವಾಗಿ ಷಡುಸ್ಥಲವ ಮೀರಿ ನಿರವಯಸ್ಥಲವನೆಯ್ದಿ, ಆ ನಿರವಯಸ್ಥಲ ನಿರಾಳದಲ್ಲsಗಿ, ಆ ನಿರಾಳ ನಿತ್ಯನಿರಂಜನ ಪರವಸ್ತು ತಾನಾಯಿತ್ತಾಗಿ, ಕ್ರಿಯಾನಿಷ್ಪತ್ತಿ ಜ್ಞಾನನಿಷ್ಪತ್ತಿ ಭಾವನಿಷ್ಪತ್ತಿ, ಮಾಡುವ ಕ್ರೀಗಳೆಲ್ಲಾ ನಿಷ್ಪತ್ತಿಯಾಗಿ, ಅರಿವ ಅರುಹೆಲ್ಲಾ ಅಡಗಿ, ಭಾವಿಸುವ ಭಾವವೆಲ್ಲ ನಿರ್ಭಾವವಾಗಿ, ನಿರ್ಲೇಪಕ ನಿರಂಜನ ವಸ್ತು ತಾನು ತಾನಾದಲ್ಲದೆ, ಧ್ಯಾನಿಸಲಿಕೇನೂ ಇಲ್ಲ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ, ಷಟ್‍ಸ್ಥಲಜ್ಞಾನಸಾರಾಯಸ್ವರೂಪನೆಂದು ಹೇಳಲ್ಪಟ್ಟನು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭರಿತಬೋನ ಭರಿತಬೋನವೆಂದು ಒಂದೆ ವೇಳೆ ಬಾಚಿಸಿಕೊಂಡು ಲಿಂಗಕ್ಕೆ ಕೊಟ್ಟೆವು ಲಿಂಗಪ್ರಸಾದವಾಯಿತ್ತೆಂದು ಬಿಗಿಬಿಗಿದು ಕಟ್ಟಿಕೊಂಡು ಮತ್ತೊಂದು ಪದಾರ್ಥ ಬಂದರೆ ಲಿಂಗವ ಬಿಡಲಮ್ಮರಯ್ಯ. ಆ ಪದಾರ್ಥವ ಕಂಡು ಮನದಲ್ಲಿ ಬಯಸಿ ಕುದಿಕುದಿದು ಕೋಟಲೆಗೊಂಡು ಹಲ್ಲು ಬಾಯಾರುತ್ತಿಪ್ಪರಯ್ಯ. ಅದೇಕೆ ಲಿಂಗವ ಬಿಡಲಮ್ಮಿರಿ ಕೈಯೇನು ಎಂಜಲೆ? ಕೈಯೆಂಜಲಾದಂಗೆ ಬಾಯೆಲ್ಲಾ ಎಂಜಲು. ಬಾಯೆಂಜಲಾದವಂಗೆ ಸರ್ವಾಂಗವೆಲ್ಲಾ ಎಂಜಲು. ಎಂಜಲಂದರೆ ಅಮೇಧ್ಯ. ಅಮೇಧ್ಯದ ಮೇಲೆ ಲಿಂಗವ ಧರಿಸಿಪ್ಪಿ[ರೇನು] ಹೇಳಿರಣ್ಣ? ಈ ಸಂದೇಹಿಭ್ರಾಂತಿಯ ಕೈವಿಡಿಯಲೊಲ್ಲರು ನಿಮ್ಮಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು