ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಸುವಳಿದ ಕಾಯದಂತೆ ದೆಸೆಗೆಟ್ಟಿನಯ್ಯ ದೆಸೆಗೆಟ್ಟಿನಯ್ಯ. ಅದೇನು ಕಾರಣವೆಂದಡೆ: ಪಶುಪತಿಯ ಭಕ್ತಿ ವಿಶ್ವಾಸವಿಲ್ಲದೆ ವಿಷಯಾತುರನಾಗಿರ್ದೆನಯ್ಯ. ಇದು ಕಾರಣ, ಎನ್ನ ಸಂಸಾರವಿಷಯಂಗಳ ಮಾಣಿಸಿ ಭಕ್ತನೆಂದೆನಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರುರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ. ಮೂಜಗ ಸತ್ತು ಮೂಜಗದೊಡೆಯನುಳಿದುದು ಸೋಜಿಗವೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರ ಅನಾಚಾರವೆಂಬುದು ಇಲ್ಲ. ಸೀಮೆ ನಿಸ್ಸೀಮೆಯೆಂಬುದು ಇಲ್ಲ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಅನಾದಿಗಳಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ದೇಹ ದೇಹಿಗಳುತ್ಪತ್ತಿಯಾಗದಂದು, ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು, ಸಕಲ ಸಚರಾಚರಂಗಳ ಸುಳುಹಿಲ್ಲದಂದು, ಇವೇನುಯೇನೂ ಇಲ್ಲದಂದು, ನೀನು ಶೂನ್ಯನಾಗಿರ್ದೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ; ಸ್ವಾಯತಲಿಂಗ ಸಂಬಂಧವಿಲ್ಲದಾತ ಮನಭವಿ; ಸನ್ನಿಹಿತಲಿಂಗವ ಸಂಬಂಧವಿಲ್ಲದಾತ ಆತ್ಮಭವಿ; ಇದು ಕಾರಣ, ಆಯತಲಿಂಗವ ಅಂಗದಲ್ಲಿ ಅಳವಡಿಸಿ, ಸ್ವಾಯತಲಿಂಗವ ಮನದಲ್ಲಿ ಅಳವಡಿಸಿ ಸನ್ನಿಹಿತಲಿಂಗವ ಆತ್ಮನಲ್ಲಿ ಅಳವಡಿಸಿ ಅಂಗಮನಪ್ರಾಣದಲ್ಲಿ ಲಿಂಗವ ಧರಿಸಿ ಹೆರೆಹಿಂಗದಿರ್ದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಅನಾದಿಗಳೇನೂ ಇಲ್ಲದ ನಿರುಪಮಲಿಂಗದಲ್ಲಿ ಅನುಪಮಭಕ್ತಿ ಜನಿಸಿತ್ತು ನೋಡ. ಆ ಭಕ್ತಿಯ ಗರ್ಭದಲ್ಲಿ ಸತ್ಯಶರಣನುದಯಿಸಿದನು. ಇದು ಕಾರಣ, ಅನಾದಿ ಕೇವಲ ಮುಕ್ತನೇ ಶರಣನೆಂಬ ವಾಕ್ಯ ಸತ್ಯ ಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು, ಸಚ್ಚಿದಾನಂದ ಪರಬ್ರಹ್ಮ ನೀನೆಯಾಗಿ ಎಲ್ಲಾ ತತ್ವಂಗಳಿಗೆ ನೀನಾದಿಯಾಗಿ, ನಿನಗೊಂದಾದಿಯಿಲ್ಲದೆ ನೀ, ನಿರಾದಿಯಾದಕಾರಣ ನಿನ್ನ, ನಿಃಕಲಶಿವತತ್ವವೆಂದರಿದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ ಭೇದಿಸಿ ಬಹಿಷ್ಕರಿಸಿ ಸರ್ವಾಂಗದಲ್ಲಿ ಧರಿಸಲು ಭವಬಂಧನ ದುರಿತದೋಷಂಗಳು ಪರಿಹರವಪ್ಪುದು ತಪ್ಪದು ನೋಡಾ. ಇದು ಕಾರಣ ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸಿ ಮಲತ್ರಯಂಗಳ ತೊಳೆದೆನು ನೋಡಾ. ಮಲತ್ರಂಯಗಳು ಪರಿಹರವಾಗದ ಮುನ್ನ ಭವಬಂಧನದ ಬೇರುಗಳ ಸಂಹರಿಸಿ ಜನನ ಮರಣಂಗಳ ಒತ್ತಿ ಒರಸುವುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಧಾರಚಕ್ರದಲ್ಲಿ ನಕಾರ ಸ್ವಾಯತ. ಸ್ವಾಧಿಷಾ*ನಚಕ್ರದಲ್ಲಿ ಮಃಕಾರ ಸ್ವಾಯತ. ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ. ಅನಾಹತಚಕ್ರದಲ್ಲಿ ವಾಕಾರ ಸ್ವಾಯತ. ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ. ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ. ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ, ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಯಲ್ಲಿ ಈಶ್ವರನು ಕೂಗಿದ ಕೂಗ ತ್ರೆ ೈಜಗವೆಲ್ಲಾ ಕೂಗುತ್ತಿದೆ ನೋಡ. ಮುದಿಬಳ್ಳು ಕೂಗಿದ ಕೂಗ ಮರಿಬಳ್ಳುಗಳೆಲ್ಲ ಬಳ್ಳಿಟ್ಟು ಬಗುಳುತ್ತಿಪ್ಪವು ನೋಡ. ಮರಿಬಳ್ಳುಗಳು ಬಗುಳಿದ ಬಗುಳು ಮುದಿಬಳ್ಳುವ ಮುಟ್ಟದಿದೇನು ಸೋಜಿಗವೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ವಾಙ್ಮನಕ್ಕಗೋಚರನಾದ ಕಾರಣ, ಅವರ ನಡೆಯು ನುಡಿಯು ಮುಟ್ಟವು ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಡಿನ ಶಿರದಮೇಲೆ ಕುಣಿದಾಡುವ ಕೋಡಗ ಮಾರುತನ ಕೂಡೆ ಉಡುವ ಹಡೆಯಿತ್ತು ನೋಡಾ. ಉಡುವಿನ ನಾಲಗೆಯಲ್ಲಿ ಅಜ ಹರಿ ಸುರ ಮನು ಮುನಿಗಳು ಅಡಗಿದರು. ಇವರೆಲ್ಲರ ಯಜನಾದಿಕೃತ್ಯಂಗಳು ಉಡುವಿನ ಕಾಲಿನಲ್ಲಿ ಅಡಗಿದವು. ತ್ರಿಜಗವೆಲ್ಲವು ಹೀಂಗೆ ಪ್ರಳಯದಲ್ಲಿ ಮುಳುಗಿದೆಯಲ್ಲ. ಉಡುವಿನ ನಾಲಗೆ ಕೊಯಿದು, ಕುಣಿದಾಡುವ ಕೋಡಗನ ಕಾಲಮುರಿದು, ಅಜಪಶುವ ಕೊಂದು, ಅಗ್ನಿಯಲ್ಲಿ ಸುಟ್ಟು ಭಸ್ಮವಮಾಡಬಲ್ಲಾತನ ಜನನಮರಣ ವಿರಹಿತನೆಂಬೆ, ತ್ರಿಜಗಾಧಿಪತಿಗಳಿಗೆ ಒಡೆಯನೆಂಬೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಲಿಯ ಕೊನೆಯಲ್ಲಿ ಬೆಳೆದ ಹಾಲೆ ಬಾಲೆಯರನೆ ಬಯಸುತ್ತಿಪ್ಪುದು ನೋಡಾ. ಆಲಿಯ ಕೊನೆಯ ಹಾಲೆಯ ಹರಿದು ಬಾಲೇಂದುಮೌಳಿ ತಾನಾದ ಲಿಂಗೈಕ್ಯವನೇನ ಹೇಳುವೆನಯ್ಯ? ನೇತ್ರಕ್ಕೆ ಪ್ರತ್ಯಕ್ಷ ಘನಮಹಿಮ ತಾನಾದ ನಿಲವ ಚೆನ್ನಬಸವಣ್ಣ ಬಲ್ಲ. ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋಯೆನುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರಾರರಿಂದ ಮೀರಿ ತೋರುವ[ಸೀಮೆ] ನಿಸ್ಸೀಮೆ ನೋಡಾ. ಆ ಸೀಮೆಯರಸು ಅನಾಹತನು. ಆವ ಆವರಣವೂ ಇಲ್ಲದ ನಿರಾವರಣಂಗೆ ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು. ಈ ಲಿಂಗಾಂಗ ಸಂಯೋಗವ ತತ್ತ್ವಮಸ್ಯಾದಿ ವಾಕ್ಯಾರ್ಥವೆಂಬ ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಈ ಮೂರು ಮಲತ್ರಯಂಗಳು. ಒಂದು ಕೆಂಪಿನ ಮಲ; ಒಂದು ಬೆಳ್ಳಿನ ಮಲ; ಒಂದು ಕಪ್ಪಿನ ಮಲ. ಈ ಮೂರು ಪ್ರಕಾರದ ಮಲವ ಭುಂಜಿಸಿ, ಸಂಸಾರ ವಿಷಯ ಕೂಪವೆಂಬುವ ತಿಪ್ಪೆಯ ಗುಂಡಿಯ ನೀರಕುಡಿದು, ಮಾಯಾಮೋಹವೆಂಬ ಹಾಳುಗೇರಿಯ ಗೊಟ್ಟಿನಲ್ಲಿ ಬಿದ್ದು, ಸೂಕರನಂತಿಪ್ಪವರ ಎಂತು ಭಕ್ತರೆಂಬೆ? ಎಂತು ದೇವರೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತ್ಮನೂ ಉಂಟು, ಮಲಮಾಯಾ ಕರ್ಮಂಗಳೂ ಉಂಟು; ಶಿವನೂ ಉಂಟು ಎಂದಡೆ, ಶಿವನೇನು ಪರಿಪೂರ್ಣನೋ ಖಂಡಿತನೋ? ಶಿವನೇನು ಕಿಂಚಿಜ್ಞನೋ ಸರ್ವಜ್ಞನೋ? ಶಿವನು ಪರಿಪೂರ್ಣನಾದಡೆ, ಮಲಮಾಯಾ ಕರ್ಮಂಗಳಿದ್ದೆಡೆಯಾವುದು ಹೇಳಾ. ಖಂಡಿತನೆಂಬೆಯಾ ಶಿವನೊಂದು ಮೂಲೆಯಲ್ಲಿಪ್ಪನೆ? ಸರ್ವವ್ಯಾಪಕನೆಂಬುದು ಹುಸಿಯೆ? ಸರ್ವಜ್ಞನೆಂಬುದು ಹುಸಿಯೆ? ಆದಡೆ ಕಿಂಚಿಜ್ಞನೆನ್ನು. ಕಿಂಚಿಜ್ಞನೆಂಬ ಶಾಸ್ತ್ರವುಂಟೇ? ಪರಿಪೂರ್ಣಸರ್ವಮಯವಾದ ವಸ್ತು ನೀನೊಬ್ಬನೆಯಾಗಿ ಪ್ರತಿಯಿಲ್ಲದಪ್ರತಿಮ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರೆಂಬ ಸಂಖ್ಯೆ ಆರೂ ಇಲ್ಲದ ರಾಜ್ಯದಿ ಮಾರಾರಿಯೊಬ್ಬನೇ ಅರಸು ನೋಡಾ. ಅರಸು ಪ್ರಧಾನಿ ಮಂತ್ರಿ ಆನೆ ಸೇನೆ ಪ್ರಜೆ ಪರಿವಾರವೆಲ್ಲವು ಸತ್ತು ಅರಸಿನ ಅರಸುತನ ಕೆಟ್ಟಿತ್ತು ನೋಡಾ. ತನ್ನಿಂದನ್ಯವಾಗಿ ಇನ್ನಾರೂ ಆರು ಏನುಯೇನೂ ಇಲ್ಲದ ನಿರಾಕಾರವ ನೆರೆದು ಆ ನಿರಾಕಾರ ಪರವಸ್ತುವೆಯಾದನಾಗಿ, ಅದು ಲಿಂಗಾಂಗ ಸಂಯೋಗ ಕಾಣಾ, ಮಹಾಲಿಂಗುಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರಲಿಂಗಕ್ಕೆ ಪೃಥ್ವಿಯೆ ಸಮರ್ಪಣ. ಗುರುಲಿಂಗಕ್ಕೆ ಜಲವೆ ಸಮರ್ಪಣ. ಶಿವಲಿಂಗಕ್ಕೆ ಅಗ್ನಿಯೆ ಸಮರ್ಪಣ. ಜಂಗಮಲಿಂಗಕ್ಕೆ ವಾಯುವೆ ಸಮರ್ಪಣ. ಪ್ರಸಾದಲಿಂಗಕ್ಕೆ ಆಕಾಶವೆ ಸಮರ್ಪಣ. ಮಹಾಲಿಂಗಕ್ಕೆ ಆತ್ಮನೆ ಸಮರ್ಪಣವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರವಿಲ್ಲದ ಗುರು ಭೂತಪ್ರಾಣಿ ಆಚಾರವಿಲ್ಲದ ಲಿಂಗ ಶಿಲೆ. ಆಚಾರವಿಲ್ಲದ ಜಂಗಮ ಮಾನವ. ಆಚಾರವಿಲ್ಲದ ಪಾದೋದಕ ನೀರು. ಆಚಾರವಿಲ್ಲದ ಪ್ರಸಾದ ಎಂಜಲು. ಆಚಾರವಿಲ್ಲದ ಭಕ್ತ ದುಃಕರ್ಮಿ. ಇದು ಕಾರಣ, ಅಟ್ಟವನೇರುವುದಕ್ಕೆ ನಿಚ್ಚಣಿಗೆಯೆ ಸೋಪಾನವಯ್ಯ. ಹರಪದವನೆಯ್ದುವರೆ ಶ್ರೀ ಗುರು ಹೇಳಿದ ಸದಾಚಾರವೆ ಸೋಪಾನವಯ್ಯ. ಗುರುಪದೇಶವ ಮೀರಿ, ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಯತಲಿಂಗದಲ್ಲಿ ಅಂಗಗುಣವಳಿದು ಸರ್ವಾಂಗವನು ಲಿಂಗನಿಷೆ*ಯಲ್ಲಿ ಘಟ್ಟಿಗೊಳಿಸಿ ಲಿಂಗಾಂಗಸಂಗದಲ್ಲಿ ನಿರತನು ನೋಡಾ. ಸ್ವಾಯತಲಿಂಗದಲ್ಲಿ ಮನ ವೇದ್ಯವಾಗಿ ಮನೋಮಾಯವನಳಿದ ನಿರ್ಮಾಯ ನಿರಾಕುಳನು ಮಾಯಾಪ್ರಪಂಚಿನೊಳಗೆ ಚರಿಸದ ಪ್ರಾಣಲಿಂಗನಿಷ*ನು ನೋಡಾ. ಸನ್ನಿಹಿತಲಿಂಗದಲ್ಲಿ ತನ್ನನಳಿದು ತಾನೆಂಬುವ ಭಾವವೇನೂ ತೋರದ ಮಹಾನುಭಾವಿಯ ನೋಡಾ. ತಾನೆಂಬುದೇನೂ ಇಲ್ಲವಾಗಿ, ನೀನೆಂಬುದು ಇಲ್ಲ; ನಾನು ನೀನೆಂಬುದು ಇಲ್ಲವಾಗಿ, ಲಿಂಗವೆ ಸರ್ವಮಯವಾಗಿಪ್ಪುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾಶವೇ ಅಂಗವಾದ ಶರಣನಲ್ಲಿಯೆ ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಶರಣಂಗೆ ಪ್ರಸಾದಲಿಂಗವೆ ಸ್ವಾಯತವಾಗಿ ಆ ಪ್ರಸಾದಿಲಿಂಗದಲ್ಲಿಯೆ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಪ್ರಸಾದಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಶರಣನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತ್ಮದೃಕ್ಕಿಂದ ಈಶ್ವರನ ತಿಳಿದಲ್ಲದೆ, ಜಾತಿಸ್ಮರತ್ವವ ಕಾಣಬಾರದು; ಜ್ಯೋತಿರ್ಮಯಲಿಂಗದಿಂದೊಗೆದ ಶರಣನ, ಏತರಿಂದ ಕಂಡು ಹೇಳುವಿರಣ್ಣ? ಮಾತಿನಿಂದ ಹೇಳಿಹೆನೆಂದಡೆ, ವಾಚಾತೀತ ಶಿವಶರಣನು. ವಾಙ್ಮನಕ್ಕಗೋಚರವಾದ ಮಹಾಘನ ಪರತತ್ವದಲುದಯವಾದ ಶರಣನ ಮಾತಿಗೆ ತಂದು ನುಡಿವ ಮರುಳುಮಾನವರನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಅಂಗನೆಯ ಉದರದಲೊಂದು ಅದ್ಭುತದ ಕಿಚ್ಚು ಹುಟ್ಟಿ ಮೂರು ಹಂಸೆಯ ನುಂಗಿ ಮುಪ್ಪುರವ ಸುಟ್ಟು ಆರೂಢಪದದಲ್ಲಿ ನಿಂದ ಅದ್ವಯ ಲಿಂಗೈಕ್ಯವನೇನೆಂದುಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆ ಭಕ್ತಂಗೆ ಲಿಂಗವೇ ಪ್ರಾಣ; ಆ ಲಿಂಗಕ್ಕೆ ಗುರುವೇ ಪ್ರಾಣ; ಆ ಗುರುವಿಂಗೆ ಜಂಗಮವೇ ಪ್ರಾಣ ನೋಡಾ. ಅದೇನುಕಾರಣವೆಂದರೆ: ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ ಜಂಗಮವು ನೋಡಾ. ಆ ಪರಮ ಜಂಗಮದಿಂದ ನಿಃಕಲ ಗುರುಮೂರ್ತಿ ಉದಯವಾದನು ನೋಡಾ. ಆ ನಿಃಕಲ ಗುರುಮೂರ್ತಿಯಿಂದ ಆದಿಮಹಾಲಿಂಗವು ಉದಯವಾಯಿತ್ತು ನೋಡಾ. ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು. ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ ಆ ಜಂಗಮ ಪ್ರಸಾದವೇ ಪ್ರಾಣ ನೋಡಾ. ಇದು ಕಾರಣ: ಭಕ್ತನಾದರೂ ಲಿಂಗವಾದರೂ ಗುರುವಾದರೂ ಜಂಗಮ ಪ್ರಸಾದವ ಕೊಳ್ಳಲೇಬೇಕು. ಜಂಗಮ ಪ್ರಸಾದವ ಕೊಳ್ಳದಿದ್ದರೆ ಆತ ಗುರುವಲ್ಲ, ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾ. ಆ ಶೈವ ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ; ಆತನಿಂದ ಪಡೆದುದು ಲಿಂಗವಲ್ಲ. ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ. ಅವ ಭೂತಪ್ರಾಣಿ ನೋಡಾ. ಇದುಕಾರಣ: ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು. ಆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ ಅವ ಭವಿಗಿಂದಲು ಕರಕಷ್ಟ ನೋಡಾ. ಆ ಭವಭಾರಿಯ ಮುಖ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...