ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು ಪಶುಪತಿಯ ಸಂಗಸುಖಕ್ಕೆ ಯಾಕೆ ಎಣಿಸಲೊಲ್ಲರಯ್ಯ? ಶಿವ ಶಿವಾ! ನೀ ಮಾಡಿದ ವಿಷಯದ ವಿದ್ಥಿ, ಈರೇಳುಲೋಕವನಂಡಲೆವುತ್ತಿದೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನ ಕಾಯವೇ ಭಕ್ತ, ಭಕ್ತನ ಕಾಯವೇ ಶಿವ. ಶಿವನ ಚೈತನ್ಯವೇ ಭಕ್ತ, ಭಕ್ತನ ಚೈತನ್ಯವೇ ಶಿವನು ನೋಡಾ. ಭಕ್ತನ ಮನ ಭಾವ ಕರಣಂಗಳೇ ಭಕ್ತನು ನೋಡಾ. ಇದು ಕಾರಣ. ಶಿವನೇ ಭಕ್ತನು; ಭಕ್ತನೇ ಶಿವನು. ದೇವ ಭಕ್ತನೆಂಬ ಅಂತರವೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶುದ್ಧ ಸತ್ಕುಲಜಂಗೆ ಅಃಕ್ಕುಲಿಜೆಯ ಸಂಗದಿಂದ ಸತ್ಕುಲ ಕೆಟ್ಟು ಅಃಕ್ಕುಲಜನಾಗಿ ಹುಟ್ಟುತ್ತ ಹೊಂದುತ್ತಿಹುದ- ನಿದನಾರು ಮಾಡಿದರೋ ಎಂದು ಆರೈದು ನೋಡಿ ಮಾರಾರಿಯ ಕೃತಕವೆಂದರಿಯಲಾ ಸತ್ಕುಲಜನ ತಾಯಿ ಅಃಕ್ಕುಲಿಜೆಯ ಕೊಂದು ಸುಪುತ್ರನ ನುಂಗಿ ತತ್ತ್ವಮಸಿವಾಕ್ಯದಿಂದತ್ತತ್ತಲಾದವನ ನೆತ್ತಿಯಲ್ಲಿ ಹೊತ್ತು ನೆರೆಯಲು ಭಕ್ತಿ ನಿಃಪತಿಯಾಯಿತ್ತು. ಸತ್ಯವಿಲ್ಲ, ಎನಗೊಂದು ಸಹಜವಿಲ್ಲ. ಗುರು ಲಿಂಗ ಜಂಗಮವೆಂಬ ಮಿಥ್ಯದ ಮಾತೆಲ್ಲಿಯದೋ ಮೂರೊಂದಾಗಿ ಬೆರೆದ ನಿರಾಳಕ್ಕೆ?. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮವೆಲ್ಲಿಯದೋ ನಿರ್ನಾಮಂಗೆ? ಬಿಡಾ ಮರುಳೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೀಗುರು ಶಿವಗಣಂಗಳ ಮಧ್ಯದಲ್ಲಿ ಎನಗೆ ಉಪದೇಶಿಸುವಲ್ಲಿ ಪರಮೇಶ್ವರನ ಪಂಚಮುಖವನೆ ಪಂಚಕಳಶವಾಗಿ ಮೂರ್ತಿಗೊಳಿಸಿ, ಗಣಂಗಳು ಸಾಕ್ಷಿಯಾಗಿ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟು `ಈ ಲಿಂಗವೆ ಗಂಡ, ನೀನೇ ಹೆಂಡತಿ'ಯೆಂದು ಹೇಳಿ, ಲಲಾಟದಲ್ಲಿ ವಿಭೂತಿಯ ಪಟ್ಟವ ಕಟ್ಟಿ ಹಸ್ತದಲ್ಲಿ ಕಂಕಣವ ಕಟ್ಟಿ, ಪಾದೋದಕ ಪ್ರಸಾದವನಿತ್ತು ಎಂದೆಂದಿಗೂ ಸತಿಪತಿಭಾವ ತಪ್ಪದಿರಲಿಯೆಂದು ನಿರೂಪಿಸಿದದನಯ್ಯ ಶ್ರೀಗುರು. ಆ ನಿರೂಪವ ಮಹಾಪ್ರಸಾದವೆಂದು ಕೈಕೊಂಡೆನಯ್ಯ. ಇದು ಕಾರಣ, ಎನ್ನ ಪತಿಯಲ್ಲದೆ ಅನ್ಯವನರಿಯೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನೇ ಶರಣ, ಶರಣನೇ ಶಿವನೆಂದೆಂಬರು. ಹೀಗೆಂದೆಂಬುದು ಶ್ರುತಪ್ರಮಾಣದ ವಾಚಾಳಕತ್ವವಲ್ಲದೆ ಪರಮಾರ್ಥವಲ್ಲ ನೋಡ. ಶರಣನೇ ಲಿಂಗವೆಂಬುದು ಏಕಾರ್ಥವಾದಡೆ, ಇತರ ಮತದ ದ್ವೆ ೈತಾದ್ವೆ ೈತ ಶಾಸ್ತ್ರವ ಕೇಳಿ, ಅಹುದೋ ಅಲ್ಲವೋ, ಏನೋ ಎಂತೋ ಎಂದು ಸಂದೇಹಿಸಿದಲ್ಲಿ ಅದು ಅಜ್ಞಾನ ನೋಡಾ. ಶಿವಜ್ಞಾನ ಉದಯವಾದ ಶರಣರ ಆದಿ ಮಧ್ಯಾವಸಾನವರಿದು, ನಿಶ್ಚಯಿಸಿ, ನೆಲೆಗೊಂಡ ಬಳಿಕ ಇತರ ಮತದ ವೇದ ಶಾಸ್ತ್ರಪುರಾಣ ಆಗಮಂಗಳ ಶ್ರುತಿ ಭ್ರಾಂತಿಗೆ ಭ್ರಮೆಗೊಂಬನೆ ನಿಭ್ರಾಂತನಾದ ನಿಜಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ ಚಿತ್ಕರಣಂಗಳು ನೋಡಾ. ಆತಂಗೆ ಶರೀರ[ಶುಚಿ] ಚಿದ್ಭೂಮಿ ಚಿಜ್ಜಲ ಚಿದಗ್ನಿ ಚಿತ್ಪ್ರಾಣವಾಯು ಚಿದಾಕಾಶಮಯ ನೋಡಾ. ಆ ಚಿದಾಭರಣಂಗೆ ಚಿಚೈತನ್ಯ[ಕೆ] ತ್ವಾನೇ ಪ್ರಾಣಲಿಂಗ ನೋಡಾ. ಆ ಚಿದಾಭರಣ ಶರಣನು ಚಿದ್ಘನಲಿಂಗವ ನೆರೆದು ಪರಾಪರನಾದ ಪರಶಿವಯೋಗಿ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ವಾನಂಗೆ ಪೃಷ*ದಲ್ಲಿ ಬಾಲ; ಉಪಾಧಿಕಂಗೆ ಬಾಯಲ್ಲಿ ಬಾಲ ನೋಡಾ. ಮಮಕಾರವೆಂಬ ನಾಯಿಯೆದ್ದು ಮುರುಗಲು ನಾಲಗೆಯೆಂಬ ಬಾಲ ಬಡಿದಾಡುತ್ತಿದೆ ನೋಡಾ. ಒಡಲುಪಾಧಿಗೆ ಉಪಚಾರವ ನುಡಿವ ವಿರಕ್ತನ ನಾಲಿಗೆ ನಾಯ ಬಾಲಕಿಂದ ಕರಕಷ್ಟ ನೋಡಾ. ಪರಮಾರ್ಥ ಪದದಲ್ಲಿ ಪರಿಣಾಮಿಯಾದವನ ಬಾಯಲ್ಲಿ ಪ್ರಪಂಚುಂಟೆ ಹೇಳಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ಅಪ್ರಮೇಯ ಶುದ್ಧ ಸೂಕ್ಷ ್ಮ ಚಿನ್ಮಯನು ನೋಡಾ. ಆ ಚಿದಮೃತ ಕಳಾಪ್ರಸಾದವನೊಡಗೂಡಿ ಶುದ್ಧ ಪ್ರಣವ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರಣನಂಗ ಲಿಂಗವನಪ್ಪಿತ್ತಾಗಿ ಶರಣನ ತನುವೆ ಲಿಂಗದ ತನು ನೋಡಾ. ಲಿಂಗದ ತನು ಶರಣನನಪ್ಪಿತ್ತಾಗಿ ಶರಣನ ತನುವೆ ಲಿಂಗದ ತನು ನೋಡಾ. ಶರಣನ ಮನ ಲಿಂಗವನಪ್ಪಿ, ಲಿಂಗದ ಮನ ಶರಣನನಪ್ಪಿದ ಕಾರಣ ಶರಣನ ಮನವೆ ಲಿಂಗ; ಲಿಂಗದ ಮನವೆ ಶರಣ ನೋಡಾ. ಶರಣನ ಹರಣ ಲಿಂಗವನಪ್ಪಿ ಲಿಂಗದ ಹರಣ ಶರಣನನಪ್ಪಿದ ಕಾರಣ ಶರಣನ ಹರಣವೆ ಲಿಂಗ ಲಿಂಗದ ಹರಣವೆ ಶರಣ ನೋಡಾ. ಶರಣನ ಭಾವವೆ ಲಿಂಗ; ಲಿಂಗದ ಭಾವವೆ ಶರಣ ನೋಡಾ. `ಅಹಂ ಮಾಹೇಶ್ವರಃ ಪ್ರಾಣೋ| ಮಮ ಪ್ರಾಣೋ ಮಾಹೇಶ್ವರಃ ತಸ್ಮಾದ್ಧವಿರಳಂ ನಿತ್ಯಂ ಶರಣಂ ನಾಮವರ್ತತೇ||' ಎಂದುದಾಗಿ ಭಾವ ಭೇದವಿಲ್ಲ ಶರಣ ಲಿಂಗಕ್ಕೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರಣನೇ ಲಿಂಗ; ಲಿಂಗವೇ ಶರಣ ಈ ಎರಡಕ್ಕೂ ಭಿನ್ನವಿಲ್ಲವಯ್ಯ. ಲಿಂಗಕ್ಕಿಂತಲೂ ಶರಣನೇ ಅಧಿಕವಯ್ಯ. ನಿಮಗೆ ಪಂಚಮುಖ; ನಿಮ್ಮ ಶರಣಂಗೆ ಸಹಸ್ರ ಮುಖ, ಸಹಸ್ರ ಕಣ್ಣು, ಸಹಸ್ರ ಬಾಹು, ಸಹಸ್ರ ಪಾದ. ಆ ಶರಣನ ಮುಖದಲ್ಲಿ ರುದ್ರ; ಭುಜದಲ್ಲಿ ವಿಷ್ಣು, ಜಂಫೆಯಲ್ಲಿ ಆಜನ ಜನನ. ಇಂದ್ರ ಪಾದದಲ್ಲಿ; ಚಂದ್ರ ಮನಸ್ಸಿನಲ್ಲಿ; ಸೂರ್ಯ ಚಕ್ಷುವಿನಲ್ಲಿ; ಅಗ್ನಿ ವಕ್ತ್ರದಲ್ಲಿ; ಪ್ರಾಣದಲ್ಲಿ ವಾಯು; ನಾಭಿಯಲ್ಲಿ ಗಗನ; ಪಾದತಲದಲ್ಲಿ ಭೂಮಿ; ದಶದಿಕ್ಕು ಶ್ರೋತ್ರದಲ್ಲಿ; ಶಿರದಲುದಯ ತೆತ್ತೀಸಕೋಟಿ ದೇವಾದಿದೇವರ್ಕಳು. ಇಂತು ಕುಕ್ಷಿಯಲ್ಲಿ ಜಗವ ನಿರ್ಮಿಸಿ ನಿಕ್ಷೇಪಿದನು ಅಕ್ಷಯನು, ಅಗಣಿತನು. ಇಂತಪ್ಪ ಮಹಾಮಹೇಶ್ವರನ ನಿಜ ಚಿನ್ಮಯಸ್ವರೂಪವೇ ಪ್ರಭುದೇವರು ನೋಡಾ. ಅಂತಪ್ಪ ಪರಮ ಪ್ರಭುವೇ ಎನಗೆ ಪರಮಾನಂದವಪ್ಪ ಪ್ರಾಣಲಿಂಗವೆಂದು ಆರಾಧಿಸಿ ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ. ಹರಹರಯೆಂಬುದು ಹರಣದ ತೊಡಕಿನ ಮರಣವ ಪರಿಹರಿಸುವುದು ನೋಡಾ. ಇದು ಕಾರಣ, ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿಯು `ಓಂ ನಮಃಶಿವಾಯ ಓಂ ನಮಃಶಿವಾಯ ಓಂ ನಮಃಶಿವಾಯ' ಎಂಬ ಪ್ರಣವ ಪಂಚಾಕ್ಷರಿಯನೆ ಸ್ಮರಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಭಾವದಿಂದ ಆತ್ಮಹುಟ್ಟಿ ಶಿವ ತಾನೆಂಬುಭಯವನಲಂಕರಿಸಿದನಾಗಿ ಆತ್ಮಂಗೆ ಭಾವವೆಂಬ ಹೆಸರಾಯಿತ್ತು. ಆತ್ಮನು ಆಕಾಶವ ಬಂದು ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮನು ವಾಯುವ ಬಂದು ಬೆರಸಿದಲ್ಲಿ ಮನಸ್ಸೆಂಬ ಹೆಸರಾಯಿತ್ತು. ಆತ್ಮನು ಅಗ್ನಿಯ ಬಂದು ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮನು ಅಪ್ಪುವ ಬಂದು ಬೆರಸಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮನು ಪೃಥ್ವಿಯ ಬಂದು ಕೂಡಿದಲ್ಲಿ ಚಿತ್ತ ಪುಟ್ಟಿತ್ತಯ್ಯ. ಚಿತ್ತವಾಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು. ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದಯ್ಯ. ಈ ಭೇದವನರಿದು ಲಿಂಗವ ಧರಿಸಬಲ್ಲರಾಗಿ ನಿಮ್ಮ ಶರಣರು ಸರ್ವಾಂಗಲಿಂಗಿಗಳಯ್ಯ. ಬಸವ, ಪ್ರಭು, ಚೆನ್ನಬಸವಣ್ಣ ಮೊದಲಾದ ವೀರ ಶಿವೈಕ್ಯರ ಬಂಟರಬಂಟನಾಗಿರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರನಿಧಿ ರತ್ನವ ಧರಿಸಿದ್ದರೆ ಆ ಮಹಾನದಿಗೆ ಒಂದು ಬಡತನ ಉಂಟೇ ಅಯ್ಯ? ಮೇರುಗಿರಿಪರ್ವತ ಮೂಲಿಕೆಯ ಧರಿಸಿರ್ದರೆ ಆ ಮೇರುಗಿರಿಪರ್ವತಕೆ ಒಂದು ಬಡತನ ಉಂಟೇ ಅಯ್ಯ? ಅನಾದಿಮಯ ಪರಿಪೂರ್ಣಲಿಂಗವು ಶರಣನಾಗಿ ಪ್ರವರ್ತಿಸಿತ್ತು. ಏತಕ್ಕಯ್ಯ ಎಂದರೆ; ತನ್ನ ಮಹಿಮಾಗುಣ ವೈಭವವ ಪ್ರಕಾಶಿಸ ತೋರಲಾಯಿತ್ತಯ್ಯ? ಶರಣ ಲಿಂಗವೆಂಬ ಅಂತರವೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಶರಣ ಲಿಂಗವೆಂಬಾತ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶೈವರು ಕಟ್ಟಿದ ಗುಡಿಯ ಹೊಗಲೇಕೆ? ಶೈವರು ನೆಟ್ಟ ಲಿಂಗವ ಮುಟ್ಟಿ ಪೂಜಿಸಲೇಕೆ? ಆದಕೆ ಉಪಾಸಿತವ ಮಾಡಲೇಕೆ? ನೆಟ್ಟಿದ್ದ ಕಲ್ಲಿಗೆ ನೀಡಿ ಕೆಡೆದರೆ ಕಟ್ಟಿದ್ದ ಕಲ್ಲಿನ ಕಷ್ಟವ ನೋಡಿರೆ! ಕಟ್ಟಿದ ಕಲ್ಲು ಕಳೆದಿಟ್ಟು ಬಿಟ್ಟು ನೆಟ್ಟಿದ್ದ ಕಲ್ಲಿಗೆ ನಮಿಸಿರಾ ಭ್ರಷ್ಟರಿರಾ. ತನ್ನ ಗುರು ಕೊಟ್ಟ ಇಷ್ಟಲಿಂಗ ಕೊಡಲರಿಯದೆಂದು, ನೆಟ್ಟಿದ್ದ ಲಿಂಗ ಕೊಟ್ಟಿತ್ತೆಂಬ ಕೊಟ್ಟಿಗಳ ಕೆಡೆನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತಿರ್ದೆನಯ್ಯ. ಅದೇನು ಕಾರಣವೆಂದಡೆ: ಕಟ್ಟಿದ್ದುದೂ ಕಲ್ಲು, ನೆಟ್ಟಿದ್ದುದೂ ಕಲ್ಲು. ಅದೇನು ಕಾರಣವೆಂದಡೆ; ಏಕಲಿಂಗನಿಷಾ*ಚಾರವಿಲ್ಲದ ಕಾರಣ. ಪ್ರಾಣಲಿಂಗಿಗೆ ಈ ಪಾಷಾಣದ ಹಂಗುಂಟೆ? ಆತ್ಮನೊಳಗೆ ಹುಟ್ಟಿದ ಅನುಭಾವಲಿಂಗವ ಶ್ರೀಗುರು ತಂದು ಕರಸ್ಥಲದಲ್ಲಿ ಇಷ್ಟಲಿಂಗವ ಮಾಡಿರಿಸಿದನಾಗಿ ಇಷ್ಟ ಪ್ರಾಣ ಒಂದೇಯೆಂದು ಅರಿದು ಆರಾಧಿಸಿ ಸುಖಿಯಾಗಿದ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಶಿವದನೆಯ ಮಸ್ತಕವನೊಡೆದು ಅಸಮಾಕ್ಷನುದಯವಾದನು ನೋಡಿರೇ. ಅಸಮಾಕ್ಷನುದಯಕ್ಕೆ ರವಿ ಶಶಿ ಶಿಖಿವೊಂದಾಗಿ ಅಸಮಾಕ್ಷನ ನೆರೆದು ಸತಿ ಪತಿ ಭಾವ ಸತ್ತಿತ್ತು. ಪರವಸ್ತುವೆಂದು ಬೇರುಂಟೆ ತಾನಲ್ಲದೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿಶು ತಾಯ ಮರೆವುದೆ ಅಯ್ಯ? ಪಶು ಕರುವ ಮರೆವುದೆ ಅಯ್ಯ? ಅಂಗನೆ ರಮಣನ ಮರೆವಳೆ ಅಯ್ಯ? ಲಿಂಗಸಾವಧಾನಿಯಾದಾತ ಲಿಂಗದ ನೆನಹ ಮರೆವನೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನಲ್ಲದೆ ಬೇರೆ ದೈವವಿಲ್ಲ ನೋಡ ಎನಗೆ. ಶಿವಮಂತ್ರವಲ್ಲದೆ ಬೇರೆ ಮಂತ್ರವಿಲ್ಲ ನೋಡ ಎನಗೆ. ಇದು ಕಾರಣ, `ಓಂ ನಮಃಶಿವಾಯ ಓಂ ನಮಃ ಶಿವಾಯ ಓಂ ನಮಃಶಿವಾಯ' ಎಂಬ ಷಡಕ್ಷರಮಂತ್ರವನೆ ಜಪಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೀಗುರು ಈ ವಿಭೂತಿಯನ್ನು ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಲು ಬ್ರಹ್ಮನ ಉತ್ಪತ್ಯದ ಅಂಡವೊಡೆಯಿತ್ತು ನೋಡಾ. ಶ್ರೀಗುರು ಈ ವಿಭೂತಿಯನೆ ಅಡಿಗಡಿಗೆ ಧರಿಸಿ ಕಲಿಸಿದನಾಗಿ ವಿಷ್ಣುವಿನ ಸ್ಥಿತಿಗತಿಯ ಕುಕ್ಷಿಹರಿಯಿತ್ತು ನೋಡಾ. ಶ್ರೀಗುರು ಈ ವಿಭೂತಿಯ ಸರ್ವಾಂಗದಲ್ಲಿ ಧರಿಸೆಂದು ಉಪದೇಶಿಸಿದನಾಗಿ, ಅಂತರಂಗದ ಬಹಿರಂಗದ ಭ್ರಾಂತಿ ಭಸ್ಮವಾಗಿ. ರುದ್ರನ ಲಯದ ಹೊಡೆಗಿಚ್ಚು ಕೆಟ್ಟಿತ್ತು ನೋಡಾ. ಶ್ರೀಗುರು ಈ ವಿಭೂತಿಯ ಅನಾದಿಚಿತ್ ಸ್ವರೂಪವೆಂದು ತಿಳುಹಿದನಾಗಿ ಅನಾದಿ ಸಂಸಿದ್ಧವಾದ ವಿಮಲಭೂತಿಯನೆ ಕ್ರೀಯಿಟ್ಟು ಅಡಿಗಡಿಗೆ ಧರಿಸುತ್ತಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು ಹುಟ್ಟಿದರು ನೋಡಾ. ಐವರು ಸ್ತ್ರೀಯರ ವಿಲಾಸದಿಂದ ಅನೇಕ ಕೋಟಿ ಬ್ರಹ್ಮಾಂಡಗಳ ತೋರಿಕೆ ನೋಡಾ. ಪಿಂಡಾಂಡಕ್ಕೆ ತಾವೆ ಅಧಿಷಾ*ನ ಕರ್ತೃಗಳಾಗಿಪ್ಪವು ನೋಡಾ. ಸ್ತ್ರೀಯರೈವರ ಅವರವರ ಭಾವಕ್ಕೆ ನೆರೆದು ಪರಮನೊಬ್ಬನೇ ಪಂಚಪುರುಷನಾಗಿಪ್ಪನು ನೋಡಾ. ಸ್ತ್ರೀಪುರುಷರನೊಳಕೊಂಡು ಅತಿಶಯವಾದ ಅವಿರಳಪರಬ್ರಹ್ಮವೇ ತಾನಾದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶುದ್ಧ ಶಿವತತ್ವ ವೇದ್ಯವಾಗಿ ಶಬ್ದಮುಗ್ಧನಾದೆನಾಗಿ ಮೂರ್ತಿ ಅಮೂರ್ತಿ ತತ್ತ್ವಾತತ್ವಂಗಳನರಿಯೆ. ಮದ ಮೋಹಂಗಳ ಮರೆದೆ. ಅದೇನುಕಾರಣವೆಂದರೆ: ಮಂದೆ ಅರಿವುದಕ್ಕೆ ಕುರುಹಿಲ್ಲವಾಗಿ. ಅರುಹು ಕುರುಹುನೊಳಕೊಂಡು ತೆರಹಿಲ್ಲದ ಪರಿಪೂರ್ಣನಿಗೆ ಮಾಯವೆಲ್ಲಿಯದು? ದೇಹಮದೆಲ್ಲಿಯದು? ದೇಹಿಯದೆಲ್ಲಿಯವನು? ಮಾಯ ದೇಹ ದೇಹಿಯಿಲ್ಲವಾಗಿ ಸ್ವಯವೆಲ್ಲಿಯದು ಪರವೆಲ್ಲಿಯದು? ಪರವಸ್ತು, ತಾನಾದ ಶರಣಂಗೆ ಮುಂದಿನ್ನೇನು ಹೇಳಲಿಲ್ಲ ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನೂ ಉಂಟು, ಆತ್ಮನೂ ಉಂಟು, ಮಾಯೆಯೂ ಉಂಟು ಎಂಬೆ ಎಲೆ ಮರುಳು ಮಾನವ. ಆತ್ಮನನಾದಿಯೋ, ಮಾಯೆಯನಾದಿಯೋ, ಶಿವನನಾದಿಯೋ? ಈ ಮೂರೂ ಅನಾದಿಯಲ್ಲಿ ಉಂಟಾದರೆ, ಆದಿಯೆಂದಡೆ ದೇಹ, ಅನಾದಿಯೆಂದೆಡೆ ಆತ್ಮನು. ದೇಹವೂ ಆತ್ಮನೂ ಮಾಯೆಯೂ ಈ ಮೂರೂ ಇಲ್ಲದಂದು ನಿತ್ಯನಿರಂಜನ ಪರಶಿವತತ್ತ್ವವೊಂದೇ ಇದ್ದಿತ್ತೆಂಬುದು ಯಥಾರ್ಥವಲ್ಲದೆ, ಉಳಿದವೆಲ್ಲ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವತತ್ವದ ಆದಿಮಧ್ಯಾವಸಾನವನರಿಯದೆ ಭಕ್ತರೆಂತಪ್ಪಿರಿಯಯ್ಯ? ಶಿವತತ್ವದಾದಿಯೇ ಮಹೇಶ್ವರ. ಶಿವತತ್ವದ ಮಧ್ಯವೇ ಸದಾಶಿವ. ಶಿವತತ್ವದವಸಾನವೇ ಪರತತ್ವ. ಮಾಹೇಶ್ವರನಲ್ಲಿ ತನುವ ನಿಲ್ಲಿಸಿ ಸದಾಶಿವನಲ್ಲಿ ತನ್ನ ಮನವ ಸಾಹಿತ್ಯವ ಮಾಡಲು ಮನೋಮಧ್ಯದಲ್ಲಿ ಪಂಚಬ್ರಹ್ಮಮೂರ್ತಿಯಾಗಿಪ್ಪುನು ನೋಡಾ ಸೂಕ್ಷ ್ಮತತ್ವವು. ಪ್ರಾಣವು ಪರವನಪ್ಪಿ ಪರಾಪರನಾಗಿ ಪ್ರಪಂಚವನೇನುವಂ ಮುಟ್ಟದೆ ಪರಮಮಾಹೇಶ್ವರನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ ನೆನೆರ ಭಂಡರ ಮುಖವ ನೋಡೆ, ನೋಡೆ. ಶಿವಾಶ್ರಯವೆಂದರೆ, ಶ್ರೀ ಗುರುವಿನ ಕರಕರಮಲವೆಂಬ ಪರಿ; ಭವಾಶ್ರಯವೆಂದರೆ, ತನ್ನ ಹಿಂದಣ ತಾಯಿ ತಂದೆಗಳೆಂಬ ಪರಿ. ಇಂತು ಗುರುಕರಜಾತನಾಗಿ, ಗುರುಕುಮಾರನಾಗಿ, ನರರ ಹೆಸರ ಹೇಳುವ ನರಕಜೀವಿಯ ಎನಗೊಮ್ಮೆ ತೋರದಿರ. ತಾನು ಶುದ್ಧನಿರ್ಮಲನಾಗಿ ಮಲಸಂಬಂಧವ ಬೆರೆಸುವ ಮರುಳುಮಾನವನ ಪರಿಯ ನೋಡಾ. ಇಂತಪ್ಪ ಅಜ್ಞಾನಿಯ ಶಿಷ್ಯನೆಂದು ಕೈವಿಡಿಯಬಹುದೆ?. ಇಂತಿವರಿಬ್ಬರ ಗುರುಶಿಷ್ಯಸಂಬಂಧವ ಕಂಡು ನಾನು ಹೇಸಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು