ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ. ದೇವಸಾಲೆಯು ಅಳಿವುದಲ್ಲ; ದಿವ್ಯಮೂರ್ತಿಯು ಕೆಡುವುದಲ್ಲ. ಕೇಡಿಲ್ಲದ ಪರವಸ್ತು ತಾನೆಂದರಿದಾತನಲ್ಲದೆ, ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದ್ವೆ ೈತಿಯಲ್ಲ ಅದ್ವೆ ೈತಿಯಲ್ಲ ಕಾಣಿಭೋ ಶರಣ. ದ್ವೆ ೈತಾದ್ವೆ ೈತವೆಂಬ ಉಭಯ ಕಲ್ಪನೆಯನಳಿದುಳಿದ ವೀರಮಾಹೇಶ್ವರನು ಪರಶಿವನ ನಿರುತ ಸ್ವಯಾನಂದಸುಖಿ. ಪರಶಿವನ ಪರಮ ತೇಜದಾದಿ ಬೀಜ. ಪರಶಿವನ ಪರಮಜ್ಞಾನಪ್ರಕಾಶಮಯ ಪರಮಾನಂದದ, ನಿರುಪಮಲಿಂಗದ ಪ್ರಭಾಕಿರಣವೇ ತಾನಾದ ಶರಣನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೂರ್ವೆಯದಳನ ಮೇಯಬಂದ ಮೊಲನ ಉರ್ವಿಯ ಕರಡಿ ತೊಡರಿಗೊಂಡಿಪ್ಪುದಯ್ಯ. ಕರಡಿಯ ಹಿಡಿದ ಬೇಡನ ಕಯ್ಯ ಕಾಡು ನಾಯಿಗಳು ನಾಡನೆಲ್ಲವ ಹರಿದು ತಿನುತಿಪ್ಪವು; ಇವರ ಗಾಢವನೇನೆಂಬೆನಯ್ಯ. ಇವರ ಗಾಢ ಗಮಕವ ಮುರಿದಾತನಲ್ಲದೆ ಲಿಂಗೈಕ್ಯನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇಹವ ಮರೆಗೊಂಡಿಪ್ಪ ಆತ್ಮನಂತೆ, ಶಕ್ತಿಯ ಮರೆಗೊಂಡಿಪ್ಪ ಶಿವನಂತೆ, ಕ್ಷೀರವ ಮರೆಗೊಂಡಿಪ್ಪ ತುಪ್ಪದಂತೆ, ವಾಚ್ಯವ ಮರೆಗೊಂಡಿಪ್ಪ ಅನಿರ್ವಾಚ್ಯದಂತೆ, ಲೋಕಾರ್ಥದೊಳಡಗಿಪ್ಪ ಪರಮಾರ್ಥದಂತೆ, ಎನ್ನ ಆತ್ಮನೊಳಡಗಿಪ್ಪ ಪರಮಾರ್ಥ ತತ್ವವು, ಬೀಜದೊಳಡಗಿದ ವೃಕ್ಷದಂತೆ ಇದ್ದಿತಯ್ಯ. ನಾನರಿಯದ ಮುನ್ನ ಎನ್ನೊಳಡಗಿದ್ದಿತಯ್ಯ ಶರಣ ಲಿಂಗ ಸಂಬಂಧ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇಹವೇ ದೇಗುಲ, ಕಾಲೇ ಕಂಬ, ಶಿರಸ್ಸೇ ಶಿಖರ ನೋಡಾ. ಹೃದಯಕಮಲಕರ್ಣಿಕಾವಾಸವೇ ಸಿಂಹಾಸನ. ಮಹಾಘನಪರತತ್ತ್ವವೆಂಬ ಪ್ರಾಣಲಿಂಗವ ಮೂರ್ತಿಗೊಳಿಸಿ, ಪರಮಾನಂದಾಮೃತಜಲದಿಂದ ಮಜ್ಜನಕ್ಕೆರೆದು, ಮಹಾದಳಪದ್ಮದ ಪುಷ್ಪದಿಂದ ಪೂಜಿಸಿ, ಪರಮ ಪರಿಣಾಮವೆಂಬ ನೈವೇದ್ಯವ ಗಡಣಿಸಿ, ಪ್ರಾಣಲಿಂಗಕ್ಕೆ ಪ್ರಾಣಸಂಬಂಧವಾದ ಪೂಜೆಯ ಮಾಡುತ್ತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದನುಜ ಮನುಜ ದಿವಿಜರ ಅಲ್ಪಪದವಿಯನೇನೆಂದು ಅರಿಯನು ನೋಡಾ ಶರಣನು. ಮನುಮುನಿಗಳ ಕ್ಷಣಿಕ ಪದಗಿದವ ಬಗೆವನೇ ನಿಃಕಾಮಿ ಶರಣನು? ಕಾಮಧೇನು ಗೀಮಧೇನು ಕಲ್ಪತರು ಗಿಲ್ಪತರು ಚಿಂತಾಮಣಿ ಗಿಂತಾಮಣಿ ಪರುಷ ಗಿರುಷಗಳೆಂಬ ಪ್ರಪಂಚುಗಳ ಎಣಿಸುವನೆ ನಿಭ್ರಾಂತಶರಣನು? ಇಹಲೋಕದ ಸುಖ, ಪರಲೋಕದ ಗತಿ ಎಂಬ ಇಹಪರವನೆಣಿಸುವನೆ ಶರಣನು? ಇಹಪರವೆಂಬ ಇದ್ದಸೆಗೆಟ್ಟು ಪರಾಪರವಸ್ತುವೇ ತಾನಾದ ಪರಮ ಪರಿಣಾಮಿ ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದ್ವಾದಶದಳ ಮಂಟಪದಲ್ಲಿ ರವಿ, ಶಶಿ, ಶಿಖಿಯ ಪೀಠದಲ್ಲಿ ಶಶಿವದನೆ ವಿಶ್ವತೋ ಮುಖವಾಗಿದ್ದಾಳೆ ನೋಡ. ಶಶಿಮುಖಿಯ ಸಂಗದಿಂದ ಪಶುಪತಿಯ ನೆರೆದು ವಿಶ್ವತೋಮುಖ ಪ್ರಸಾದಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ. ಆ ದೇಹದೊಡನೆ ಮಿಶ್ರವಾದ ಪ್ರಾಣನು ಶ್ರೀಗುರುವಿನ ಕರಕಮಲದಲ್ಲಿ ಉತ್ಪತ್ತಿಯಾಗಿ, ಅಂಗದ ಮೇಲೆ ಲಿಂಗಸ್ವಾಯತವ ಮಾಡಿ ಉರುತರ ಲಿಂಗದಲ್ಲಿ ಭರಿತ ಚರಿತ ಚಾರಿತ್ರನ ಮಾಡಿದನಾಗಿ ಲಿಂಗದೇಹಿ ಲಿಂಗಪ್ರಾಣಿಯೆನಿಸಿಕೊಂಡು ಬದುಕಿದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇಹಾದಿಗುಣವಿಲ್ಲದ ಜಾತಿ ವರ್ಣಾಶ್ರಮ ನಾಮರೂಪಿಲ್ಲದ ಜಿಹ್ವಾಲಂಪಟತ್ವವಿಲ್ಲದ ಮದ ಮೋಹಾದಿಗಳಿಲ್ಲದ ಮಾಯಾದೇಹದ ಮಲತ್ರಯದ ದುರ್ವಾಸನೆಯಿಲ್ಲದ ಸಂಗ ಸಂಯೋಗ ಸಂಬಂಧವೆಂಬ ಇಂದ್ರಿಯಂಗಳ ಬಂಧವಿಲ್ಲದ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯಿಲ್ಲದ ತ್ರಿಪುಟಿಯ ಮೀರಿ, ತ್ರಿಪುಟಿಗೆ ನಿಲುಕದ ಸ್ಥಾನದ ಅರುಹಿನ ಪರಬ್ರಹ್ಮವೇ ಶರಣ ಲಿಂಗ ಕಾಣಿಭೋ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣರು ಅದ್ವೆ ೈತಾನಂದದಿಂದ ಸಂಪೂರ್ಣ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು ಶಶಿಕಳೆಯೊಳಗೆ ರವಿಯ ಬೆಳಗು ನೋಡಾ. ರವಿ ಶಶಿ ಶಿಖಿ ಏಕರಸಮಯವಾಗಿ ಓಂಕಾರವೊಂದಾದ ನಾದ, ಆ ಆಧಾರ ಸ್ಥಾಧಿಷಾ*ನ ಮಣಿಪೂರಕ ಅನಾಹುತ ವಿಶುದ್ಧಿ ಆಜ್ಞೇಯದಲ್ಲಿ. ಕಂಡು, ಕೂಡಿ ಸುಖಿಸುತಿರ್ದೆನಯ್ಯಾ, ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು ನಾನು ನೀನಾದೆನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇವಸ್ತ್ರೀಯರ ಸಂಗಕ್ಕೆ ಎಣಿಸುವದೆಲ್ಲ ಕಾಯಗುಣ ಕಾಣಿರಣ್ಣ. ಆವ ಹಾವಾದಡೇನು ವಿಷವೊಂದೇ ನೋಡ. ಮಾಯಿಕಕ್ಕೆ ದೇವತ್ವವುಂಟೇ ಮರುಳು ಮಾನವ? ಮಹಾದೇವನೇ ದೇವನಲ್ಲದೆ, ಅನಿತ್ಯವಾದ ಮಾಯಾಪ್ರಪಂಚು ನಿತ್ಯವಾದ ಶಿವನ ನೆನೆದರೆ ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ, ಪುತ್ರ ಮಿತ್ರ ಕಳತ್ರತ್ರಯ ಧನಧಾನ್ಯ ಷಡುಚಂದನಾದಿ ಭೋಗಾದಿಭೋಗಂಗಳ ಪಡೆದು ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ, ಕಾಯವೇ ದುಃಖದಾಗರವೆಂದು ಅರಿಯೆಯಲ್ಲ? ಕಾಯವೇ ಸಕಲಧರ್ಮಕರ್ಮಕ್ಕಾಶ್ರಯವೆಂದರಿಯೆಯಲ್ಲ? ಪುಣ್ಯ ಪಾಪವಶದಿಂದ ಸ್ವರ್ಗನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ? ಹುಟ್ಟುವುದು ಮಹಾದುಃಖ; ಹುಟ್ಟಿ ಸಂಸಾರಶರಧಿಯೊಳು ಬದುಕುವುದು ದುಃಖ. ಸಾವ ಸಂಕಟವನದ ನಾನೇನೆಂಬೆನಯ್ಯಾ, ಅದು ಅಗಣಿತ ದುಃಖ. ಆವಾವ ಪರಿಯಲ್ಲಿ ತಿಳಿದುನೋಡಲು, ಈ ಮೂರು ಪರಿಯ ದುಃಖ ಮುಖ್ಯವಾದ ಅನಂತ ದುಃಖ ನೋಡಾ. ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ, ಮಾಯಾಮೋಹನ ತಾಳ್ದು ಮತ್ತನಾಗಿರದೆ, ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ, ಪಂಚವದನನ ನೆನೆನೆನೆದು ಸಂಸಾರಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು