ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಡುವ ಕಚ್ಚಿದ ನಾಯಿ ಒಡೆಯನ ಕುರುಹ ಬಲ್ಲುದೆ? ಹೊನ್ನು ಹೆಣ್ಣು ಮಣ್ಣ ಕಚ್ಚಿದ ಮನುಜರು ನಿಮ್ಮನೆತ್ತ ಬಲ್ಲರಯ್ಯ? ನಿಮ್ಮನರಿಯದ ಮನುಜರು ನಾಯಕುನ್ನಿಗಿಂದಲೂ ಕರಕಷ್ಟ ನೋಡಾ ನಿತ್ಯವ ಹಿಡಿಯದೆ, ಅನಿತ್ಯವ ಹಿಡಿದು, ವ್ಯರ್ಥಕ್ಕೆ ಸತ್ತವರ ನೋಡಿ ಹೇಸಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಮಾರ್ಥವ ನುಡಿದು ಪರರ ಕೈಯಾಂತು ಬೇಡುವುದು ಕರಕಷ್ಟವಯ್ಯ. ಪುರಾತರಂತೆ ನುಡಿಯಲೇಕೆ? ಕಿರಾತರಂತೆ ನಡೆಯಲೇಕೆ? ಆಸೆಯಿಚ್ಛೆಗೆ ಲೇಸ ನುಡಿವಿರಿ. ಇಚ್ಛೆಯ ನುಡಿವುದು ಉಚ್ಚೆಯ ಕುಡಿವುದು ಸರಿ ಕಾಣಿರೋ. ಇಚ್ಛೆಯ ನುಡಿವನೆ ಶಿವಶರಣನು? ಮಾತಿನಲ್ಲಿ ಬೊಮ್ಮವ ನುಡಿದು ಮನದಲ್ಲಿ ಆಸೆಯ ಸೋನೆ ಕರೆವುತಿಪ್ಪುದು. ಈ ವೇಷವ ಕಂಡೆನಗೆ ಹೇಸಿಕೆಯಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ ಶರಣ? ಪರಿಜನಂಗಳ ಮೆಚ್ಚಿಸುವಾಗ ಪಾದರಗಿತ್ತಿಯೆ ಶರಣ? ಸರ್ವರ ಮೆಚ್ಚಿಸುವಾಗ ಸಂತೆಯ ಸೂಳೆಯೇ ಶರಣ? ತನ್ನ ಲಿಂಗದ ನಚ್ಚು ಮಚ್ಚು ಪರಬ್ರಹ್ಮದಚ್ಚು. ನಿಂದಕರ ಸುಡುವ ಎದೆಗಿಚ್ಚು ನೋಡ. ಕೆಂಡವ ಕೊಂಡು ಮಂಡೆಯ ತುರಿಸುವಂತೆ ಕೆಂಡಗಣ್ಣನ ಶರಣರ ಇರವನರಿಯದೆ ದೂಷಣೆಯ ಮಾಡುವ ನರಕಿಜೀವಿಗಳ ನರಕದಲ್ಲಿಕ್ಕದೆ ಮಾಬನೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಸಾದಿಗೆ ಲಕ್ಷಣವಾವುದೆಂದರೆ ಹೇಳಿಹೆ ಕೇಳಿ[ರಯ]. ಕಾಯದಿಂದ ಮನಸ್ಸಿನಿಂದ ವಾಕ್ಯದಿಂದ ಸತ್ಯಶುದ್ಧವಾಗಿ, ವಿಶ್ವಾಸ ಶ್ರದ್ಧೆಯೆಡೆಗೊಂಡು ಶರೀರವನು ಪ್ರಾಣವನು ಒಡೆಯೆಂಗೆ ಸಮರ್ಪಿಸಿ ಪ್ರಸಾದವ ಕೈಕೊಳಬಲ್ಲರೆ ಪ್ರಸಾದಿಯೆಂಬೆ. ಹೀಂಗಲ್ಲದೆ ಕುಳವೆಂಬ ಕೋಳಕ್ಕೆ ಸಿಲ್ಕಿದ ಕಾಳ್ವಿಚಾರಿ ಋಣಪಾತಕರ ಪ್ರಸಾದಿ ಸದ್ಭಾವಿಯೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷೆಯ ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ ಧರಿಸಿದ ಶಿವಶರಣನೇ ರುದ್ರನು. ಆ ರುದ್ರಾಕ್ಷೆಯ ಜಪಿಸಿದಾತನೇ ಸದ್ಯೋನ್ಮುಕ್ತನು. ಇದು ಕಾರಣ, ಅಜ ಹರ ಸುರ ಮನು ಮುನೀಶ್ವರರು ಶ್ರೀವಿಭೂತಿ ರುದ್ರಾಕ್ಷೆಯನೆ ಧರಿಸಿ ಶಿವಲಿಂಗಾರ್ಚನೆಯ ಮಾಡುತ್ತಿಪ್ಪರು. ಪ್ರಮಥಗಣ ರುದ್ರಗಣ ಮುಖ್ಯವಾದ ಗಣಾದ್ಥೀಶ್ವರರು ವಿಭೂತಿ ರುದ್ರಾಕ್ಷೆಯನೆ ಧರಿಸಿ, ಪ್ರಣವ ಪಂಚಾಕ್ಷರಿಯನೆ ಜಪಿಸಿ, ಪ್ರಣವ ಸ್ವರೂಪಿಗಳಾಗುತ್ತಿಪ್ಪರು. ನೋಡಿದವರು ಮುಟ್ಟಿದವರು ಧರಿಸಿದವರು ಜಪಿಸಿದವರೆಲ್ಲ ಸಕಲ ಪ್ರಪಂಚನಳಿದು ಪರಶಿವ ಸ್ವರೂಪರಪ್ಪುದು ತಪ್ಪದು ನೋಡಾ. ಇದು ಕಾರಣ, ನಾನು ವಿಭೂತಿ ರುದ್ರಾಕ್ಷೆಯನೆ ಧರಿಸಿ, ಶಿವಲಿಂಗಾರ್ಚನೆಯನೆ ಮಾಡಿ ಪ್ರಣವ ಪಂಚಾಕ್ಷರಿಯನೆ ಜಪಿಸುತ್ತಿದ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪುರುಷಾಮೃಗದ ಕೈಯಲ್ಲಿ, ಪರುಷವಿಪ್ಪುದ ಕಂಡೆನಯ್ಯ. ಪರುಷವ ಸೋಂಕದೆ ಪಶುವಾಗಿದೆ ನೋಡಾ. ಪುರುಷಾಮೃಗವನರಿದು ಪರುಷವ ಸಾಧನಮಾಡಬಲ್ಲ ಹಿರಿಯನಾರನೂ ಕಾಣೆ. ಕಸ್ತುರಿಯ ಮೃಗ ಬಂದು ಸುಳಿಯಲು ಪುರುಷಾಮೃಗವಳಿದು, ಪರುಷಸಾಧನವಾಗಿ, ಪರಾಪರವಾದುದೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಶ್ಚಿಮಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು ತತ್ತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ. ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ ಪ್ರಸಾದ ನೋಡಾ. ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ ಮಹಾಪ್ರಸಾದಿಯಾದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚವಕ್ತ್ರಂ ದಶಭುಜಂ ದಶಪಂಚನೇತ್ರಂ ದ್ವಿಪಾದಂ ತನುವೇಕಂ ಶುದ್ಧಸ್ಫಟಿಕಪ್ರದ್ಯುಕ್ತಂ ಪ್ರಭಾಮಯಮೂರ್ತಿ ಹರ ಹರಾ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಣವವೇ ಪರಬ್ರಹ್ಮವು. ಪ್ರಣವವೇ ಪರಾಪರವಸ್ತು. ಪ್ರಣವವೇ ಪರತತ್ವವು ಪ್ರಣವವೇ ಪರಂಜ್ಯೋತಿ ಪ್ರಕಾಶವು. ಪ್ರಣವವೇ ಪರಶಿವ. ಪ್ರಣವವೇ ಶುದ್ಧಪ್ರಸಾದ. ಪ್ರಣವವೇ ಪರಮಪದ. ಪ್ರಣವವೇ. ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ ನೋಡಾ. ಪ್ರಣವವೇ ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ ಮಾತೃಸ್ಥಾನ ನೋಡಾ. ಇಂತಪ್ಪ ಶಿವಸ್ವರೂಪವಪ್ಪ ಪ್ರಣವಮಂತ್ರವನೇ ಶುದ್ಧಮಾಯಾಸಂಬಂಧವೆಂಬ ಅಬದ್ಧರ ಎನಗೊಮ್ಮೆ ತೋರದಿರಯ್ಯ. ಮಂತ್ರ ಜಡವಾದಲ್ಲಿಯೆ ಗುರು ಜಡ. ಗುರು ಜಡವಾದಲ್ಲಿಯೆ ಲಿಂಗವು ಜಡ. ಲಿಂಗವು ಜಡವಾದಲ್ಲಿಯೆ ಜಂಗಮವು ಜಡ. ಜಂಗಮವು ಜಡವಾದಲ್ಲಿಯೇ ಪ್ರಸಾದವು ಜಡ. ಪ್ರಸಾದವು ಜಡಯೆಂಬುವರಿಗೆ ಮುಕ್ತಿಯೆಂಬುದು ಎಂದೂ ಇಲ್ಲ. ಮಂತ್ರ ಗುರು ಲಿಂಗ ಜಂಗಮ ಪ್ರಸಾದ ಮುಕ್ತಿ ಈ ಆರು ಸಾಕ್ಷಾತ್ ಶಿವ ತಾನೆಯಲ್ಲದೆ ಬೇರಿಲ್ಲ. ಶಿವ ಬೇರೆ ಇವು ಬೇರೆಯೆಂಬ ಅಜ್ಞಾನ ಕರ್ಮಕಾಂಡಿಗಳ ಪಶುಮತ(ದ)ವರಯೆನಗೊಮ್ಮೆ ತೋರದಿರು. ಇದು ಕಾರಣ, ಪ್ರಣವವೇ ಪರವಸ್ತು. ಪಂಚಾಕ್ಷರವೇ ಪಂಚಮುಖವನ್ನುಳ್ಳ ಪರಮೇಶ್ವರ ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರುಷ ಸೋಂಕಲು ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ? ಹಲವು ತೃಣಂಗಳೆಲ್ಲವು ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ? ಹಳ್ಳಕೊಳ್ಳದ ನೀರೆಲ್ಲಾ ಬಂದು ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ. ಹಲವು ವರ್ಣದ ಪದಾರ್ಥವನೆಲ್ಲವ ತಂದು ಶಿವಲಿಂಗಾರ್ಪಣವ ಮಾಡಲು ಆ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಪ್ಪುದು ತಪ್ಪದು ನೋಡಾ. ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚವಿಂಶತಿತತ್ವಾಶ್ರಯವೆಂಬ ಪಟ್ಟಣದೊಳಗೆ ಆರುಬಣ್ಣದ ಪಕ್ಷಿ ಮೂರು ಗೂಡ ಮಾಡಿಕೊಂಡು ನಾಲ್ಕರಾಹಾರವ ಕೊಂಬುವುದ ಕಂಡೆನಯ್ಯ. ಐದರ ನೀರ ಕುಡಿದು ಪರಿಣಾಮಿಸುತ್ತಿದೆ ನೋಡ. ಏಳರ ಮೊಲೆಯನುಂಡು ಎಂಟರಾಭರಣವ ತೊಟ್ಟಿದೆ ನೋಡಾ. ಹತ್ತರ ಬೆಂಬಳಿವಿಡಿದು ಒಂಬತ್ತು ಬಾಗಿಲೊಳಗೆ ನಡೆದಾಡುವದ ಕಂಡೆನಯ್ಯ. ಕೊಂಬುಕೊಂಬಿನಯಿಂಬಿನಲ್ಲಿ ಸುಳಿದಾಡುತ್ತಿದೆ ನೋಡಯ್ಯ. ಆ ಸುಳುಹಿನ ಸೂಕ್ಷ ್ಮವ ತಿಳಿದು ತನ್ನ ಸುಳುಹನರಿವ ಹಿರಿಯರಾರನು ಕಾಣೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಶು ಪಾಶ ಮಲ ಮಾಯಾಕರ್ಮಂಗಳು ನಿತ್ಯವೆಂಬೆ. ನಿತ್ಯವಾದಡೆ, `ಪಶುಪಾಶವಿನಿರ್ಮುಕ್ತಃ ಪರಮಾತ್ಮಾ ಸದಾಶಿವಃ ಎಂದುದಾಗಿ ಇದಂ ಮಲತ್ರಯದೋಷಂ ಗುರುಣೈವ ವಿಮೋಚನಂ' ಎಂದುದಾಗಿ, ಪಶು ಪಾಶ ಮಲ ಮಾಯಾಕರ್ಮಂಗಳು ಗುರೂಪದೇಶದಿಂದಲೂ ಶಿವಪ್ರಸಾದತ್ವದಿಂದಲೂ ಕೆಡುತ್ತಿರ್ದಾವು. ಪಶು ಪಾಶ ಮಲ ಮಾಯಾ ಕರ್ಮಂಗಳು ಶಿವಯೋಗಿಗಳ ಮಧ್ಯದಲ್ಲಿಯೂ ಕೆಡುತ್ತಿರ್ದಾವು; ಕೆಡುತ್ತಿರ್ದಂಥ ಅನಿತ್ಯವಾದ ವಸ್ತುವ, ಅಭ್ರಚ್ಛಾಯವ ನಿತ್ಯವೆನ್ನಬಹುದೇ? ನಿತ್ಯವೆಂಬೆಯಾದಡೆ, ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ ಎನ್ನು. ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ ಎಂಬಾಗವೇ ಮುಕ್ತಿಯಿಲ್ಲಯೆನ್ನು. ಮುಕ್ತಿಯುಂಟಾದಡೆ, ಮಲಮಾಯಾಕರ್ಮಂಗಳು ನಿತ್ಯವೆಂಬುದು ಅಬದ್ಧ. ಅವು ನಿತ್ಯವಾದಾಗವೆ, ಉತ್ಪತ್ತಿ ಸ್ಥಿತಿ ಪ್ರಳಯಂಗಳಿಲ್ಲಾಯೆನ್ನು. ಉತ್ಪತ್ತಿ ಸ್ಥಿತಿ ಪ್ರಳಯಂಗಳುಂಟಾದಲ್ಲಿ, ನಿತ್ಯವೆನಲಿಲ್ಲ. ಪೃಥ್ವಿಯ ಲಯ ಅಪ್ಪುವಿನಲ್ಲಿ, ಅಪ್ಪುವಿನ ಲಯ ಅಗ್ನಿಯಲ್ಲಿ, ಅಗ್ನಿಯ ಲಯ ವಾಯುವಿನಲ್ಲಿ, ವಾಯುವಿನ ಲಯ ಆಕಾಶದಲ್ಲಿ, ಆಕಾಶದ ಲಯ ಆತ್ಮನಲ್ಲಿ, ಆತ್ಮನ ಲಯ ಮಹಾಲಿಂಗದಲ್ಲಿ. ಇಂತಿವೆಲ್ಲವೂ ಮಹಾಲಿಂಗದಲ್ಲಿಯೇ ಹುಟ್ಟಿ, ಮಹಾಲಿಂಗದಲ್ಲಿಯೇ ಲಯವಾಗುವಲ್ಲಿಯೆ ಪಿಂಡಾಂಡವೆಲ್ಲವೂ ಲಯ. ಸಮಸ್ತ ತತ್ವಂಗಳೆಲ್ಲವೂ ಲಯ. ಈ ಲಯ ಗಮಂಗಳಿಗೆ ಆಸ್ಪದವಾದ ಶಿವತತ್ವವೊಂದೇ ನಿತ್ಯವಲ್ಲದೆ, ಉಳಿದವೆಲ್ಲವೊ ನಿತ್ಯವೆಂಬುದು ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚಶಕ್ತಿಯನು ಪಂಚಸಾದಾಖ್ಯವನು ಪಂಚಕಲೆಗಳನು ಪಂಚಾಕ್ಷರಂಗಳನು ಪಂಚಭೂತಾತ್ಮವನು ತನ್ನಲ್ಲಿ ಗರ್ಭೀಕರಿಸಿಕೊಂಡು ತಾನು ಚಿದ್ಭ ್ರಹ್ಮಾಂಡಾತ್ಮಕನಾಗಿ, ಚಿನ್ಮಯನಾಗಿ, ಚಿದ್ರೂಪನಾಗಿ, ಚಿತ್ಪ್ರಕಾಶನಾಗಿ, ಚಿದಾನಂದನಾಗಿ ಸುಖ ದುಃಖ ಮೋಹ ಭಯಂಗಳ ಹೊದ್ದದೆ, ಸರ್ವವ್ಯಾಪಕನಾಗಿ, ಸರ್ವಚೈತನ್ಯಮಯನಾಗಿಪ್ಪ ಪರಂಜ್ಯೋತಿರ್ಲಿಂಗವು ಎನ್ನ ಪ್ರಾಣಲಿಂಗವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು, ಪಿಂಡದೊಳ ಹೊರಗೆ ತಾನಾಗಿ, ತಂಡತಂಡದ ಭವ ತಿಮಿರವ ಖಂಡಿಸಿತ್ತು ನೋಡಾ. ಆ ಅಖಂಡ ಜ್ಞಾನಜ್ಯೋತಿಯಿಂದ ಅಪ್ರಮಾಣಲಿಂಗದಲ್ಲಿ ನಿಃಪತಿಯಾದಾತನೇ ನಿಜಶರಣನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಶಿವನಿಂದ ಚಿಚ್ಛಕ್ತಿ. ಆ ಚಿಚ್ಛಕ್ತಿಯಿಂದ, ಪರಾ ಆದಿ ಇಚ್ಛಾ ಜ್ಞಾನ ಕ್ರಿಯೆಯೆಂಬ ಪಂಚಕಲಾಶಕ್ತಿಯರುದಯವಾದರು ನೋಡಾ. ಆ ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ. ಆ ನಿವೃತ್ತಿಕಲೆಯಿಂದ ಮಹಾಮಾಯೆ ಹುಟ್ಟಿತ್ತು ನೋಡಾ. ಆ ಮಹಾಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಜನನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ. ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ, ಆ ಮಹಾಜ್ಞಾನವೇ ಅನಾದಿ ಶರಣರೂಪಾಗಿ, ಆ ನಿರಾಕಾರ ಪರವಸ್ತುವಿಗೆ ಆಧಾರವಾಗಿ, ಚಿನ್ನ ಬಣ್ಣದ ಹಾಂಗೆ ಭಿನ್ನವಿಲ್ಲದಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿರಾಕಾರ ಪರವಸ್ತುವೆ ನಿಃಕಲಲಿಂಗವಾದಲ್ಲಿ, ಆ ನಿಃಕಲಲಿಂಗದಿಂದ ಜ್ಞಾನಚಿತ್ತುದಯವಾಗಿ, ಆ ಜ್ಞಾನಚಿತ್ತುವೆ ಶರಣರೂಪಾಗಿ, ಆ ನಿಃಕಲಲಿಂಗಕ್ಕಾಶ್ರಯವಾಗಿ, ಚಿದಂಗಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿಃಕಲಜ್ಞಾನಚಿತ್ತುವೆ ಬಲಿದು ಚಿಚ್ಛಕ್ತಿಯಾದಲ್ಲಿ, ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ, ಆ ಶಾಂತ್ಯತೀತೋತ್ತರೆಯೆಂಬ ಕಲೆಯಿಂದ ನಾನುದಯವಾಗಿ, ಆ ಮಹಾಲಿಂಗಕ್ಕಾಶ್ರಯವಾಗಿ, ಐಕ್ಯನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು? ಆ ಚಿಚ್ಛಕ್ತಿಯಿಂದ ಪರಶಕ್ತಿ ಉದಯವಾಗಿ, ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ, ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಪ್ರಸಾದಲಿಂಗಕ್ಕಾಶ್ರಯವಾಗಿ, ಶರಣರೂಪಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರುಬಲ್ಲರು ಹೇಳು? ಆ ಪರಶಕ್ತಿಯಿಂದ ಆದಿಶಕ್ತಿ ಉದಯವಾಗಿ, ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧ ಸುಜ್ಞಾನವೆಂಬ ಜಂಗಮಲಿಂಗವಾದಲ್ಲಿ ಆ ಶಾಂತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಜಂಗಮಲಿಂಗಕ್ಕಾಶ್ರಯವಾಗಿ, ಪ್ರಾಣಲಿಂಗಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಉದಯವಾಗಿ, ಆ ಇಚ್ಛಾಶಕ್ತಿಯ ಸಂಗದಿಂದ ನೀನು ದಿವ್ಯ ಶಿವಲಿಂಗಾಕಾರವಾದಲ್ಲಿ ಆ ವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಶಿವಲಿಂಗಕ್ಕಾಶ್ರಯವಾಗಿ, ಪರಮ ಪ್ರಸಾದಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಇಚ್ಛಾಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾಗಿ ಆ ಸುಜ್ಞಾನಶಕ್ತಿಯ ಸಂಗದಿಂದ ನೀನು ಗುರುಲಿಂಗವಾದಲ್ಲಿ ಆ ಪ್ರತಿಷೆ*ಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಗುರುಲಿಂಗಕ್ಕಾಶ್ರಯವಾಗಿ, ಮಹೇಶ್ವರನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಸುಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಉದಯವಾಗಿ, ಆ ಕ್ರಿಯಾಶಕ್ತಿಯ ಸಂಗದಿಂದ ನೀನು ಆಚಾರಲಿಂಗವಾದಲ್ಲಿ ಆ ನಿವೃತ್ತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಆಚಾರಲಿಂಗಕ್ಕಾಶ್ರಯವಾಗಿ, ಸದ್ಭಕ್ತನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ನೀ ನಿನ್ನ ಸ್ವಲೀಲೆಯಿಂದ ನಾನಾರೂಪವಾದಲ್ಲಿ ನಿನ್ನ ಬೆಂಬಳಿವಿಡಿದು ನಾನು ನಾನಾರೂಪಗುತ್ತಿರ್ದೆನಯ್ಯಾ. ನೀನಾವಾವ ರೂಪಾದೆ ನಾನು ಆ ಆ ರೂಪಾಗುತ್ತಿರ್ದೆನಯ್ಯಾ. ಇದು ಕಾರಣ, ಶರಣ ಲಿಂಗವೆರಡಕ್ಕೂ ಭಿನ್ನವಿಲ್ಲವೆಂಬುದನು ಸ್ಥಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನುಕಾರಣವೆಂದೊಡೆ; ಶ್ರುತಜ್ಞಾನದಿಂದ ಸಂಕಲ್ಪಭ್ರಾಂತಿ ತೊಲಗದಾಗಿ, ಈ ಷಡುಸ್ಥಲಮಾರ್ಗವನು ದ್ವೆ ೈತಾದ್ವೆ ೈತದೊಳಗೆ ಕೂಡಲಿಕ್ಕಿ ನುಡಿಯಲಾಗದು. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ನಿತ್ಯನಿರಂಜನ ಪರತತ್ವವು ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ ಆ ಪರುಷದ ಗೊಡವೆ ಏತಕಯ್ಯ? ಅಗ್ನಿ ಸೋಂಕಿಯೂ ಕಾಷ*ದ ಗುಣವಳಿಯದಿದ್ದರೆ ಆ ಅಗ್ನಿಯ ಗೊಡವೆ ಏತಕಯ್ಯ? ಗರುಡನಿದ್ದೂ ಸರ್ಪದ ಭಯ ಹಿಂಗದಿದ್ದರೆ ಆ ಗರುಡನ ಗೊಡವೆ ಏತಕಯ್ಯ? ವಜ್ರಾಂಗಿಯ ತೊಟ್ಟಿರ್ದೂ ಬಾಣದ ಭಯ ಹಿಂಗದಿದ್ದರೆ ಆ ವಜ್ರಾಂಗಿಯ ಗೊಡವೆ ಏತಕಯ್ಯ? ಆನೆಯನೇರಿಯೂ ಶ್ವಾನನ ಭಯಹಿಂಗದಿದ್ದರೆ ಆ ಆನೆಯ ಗೊಡವೆ ಏತಕಯ್ಯ? ಜ್ಯೋತಿಯಿದ್ದೂ ಕತ್ತಲೆ ಹರೆಯದಿದ್ದರೆ ಆ ಜ್ಯೋತಿಯ ಗೊಡವೆ ಏತಕಯ್ಯ? ಅಂಗದ ಮೇಲೆ ಚಿದ್ಘನಲಿಂಗವ ಧರಿಸಿದ್ದು ತನುಮನದ ಅವಗುಣ ಹಿಂಗದಿದ್ದರೆ ಆ ಲಿಂಗದ ಗೊಡವೆ ಏತಕಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನೀವು ಸೋಂಕಿಯೂ ಭವ ಹಿಂಗದಿದ್ದರೆ ನಿಮಗೆ ಕುಂದಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚಾಕ್ಷರವೇ ಪಂಚಮುಖವಾಗಿ ಎನ್ನ ಪಂಚೇಂದ್ರಿಯಂಗಳಾಗಿಪ್ಪುವು ನೋಡಾ. ಪ್ರಣವವೆ ಪ್ರಾಣಮೂರ್ತಿಯಾಗಿರ್ದೆನಯ್ಯ. ಇದು ಕಾರಣ, ಪರತತ್ವ ಜ್ಞಾನಮಯವಾಗಿ ``ಓಂ ನಮಃಶಿವಾಯ' ಎಂಬ ಶಿವಷಡಕ್ಷರಮಂತ್ರವನೆ ಸ್ಮರಿಸಿ, ಭವಸಾಗರವ ದಾಂಟಿ ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಶುವನೇರಿದ ಕೋಣ ಶಿಶುವೇಧೆಗಾರ ನೋಡಾ. ಪಶುವಿನ ಒಡೆಯ ಬಂದು ಕೋಣನನೆಬ್ಬಟ್ಟಲು ಶಿಶುವಿನ ವೇದನೆ ಮಾಯಿತ್ತು ನೋಡಾ. ಶಿಶುವೆದ್ದು ತನ್ನ ತಾಯನಪ್ಪಲು ತಾಯಿ ತಂದೆಯನೊಡಗೂಡಿ ನಿಂದ ನಿಲುವು ತಾನೊಂದೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪತಿಭಕ್ತೆಯಾದರೆ, ತನ್ನ ಪತಿಗೆ ಸರ್ವೋಪಚಾರಂಗಳ ಮಾಡಿ ಸಮಸ್ತ ಪದಾರ್ಥವನಾತಂಗೆ ನೀಡಿ ಆತನುಂಡು ಮಿಕ್ಕುದನುಂಬುದೇ ಪತಿವ್ರತಾಭಾವವೆಂಬ ಲೋಕದ ದೃಷ್ಟಾಂತದಂತೆ ಶರಣಸತಿ ಲಿಂಗಪತಿಯೆಂಬುದನು ಗುರೂಪದೇಶದಿಂದರಿದು ಆ ಗುರುವಚನಪ್ರಮಾಣಂಗಳಿಂದವೆ ಸಮಸ್ತ ಪದಾರ್ಥವ ತನ್ನ ಕರಸ್ಥಲದಲ್ಲಿರ್ಪ ಇಷ್ಟಲಿಂಗಕ್ಕೆ ಕೊಟ್ಟು ಕೊಂಬುದೆ ಆಚಾರ. ಇದು ಕಾರಣ, ಇಷ್ಟಲಿಂಗಕ್ಕೆ ಕೊಡದೆ ಅಂತರಂಗದಲ್ಲಿ ಪ್ರಾಣಲಿಂಗವುಂಟೆಂದು ಮನಕ್ಕೆ ಬಂದಂತೆ ತಿಂಬ ಶ್ವಾನಜ್ಞಾನಿಗಳಿಗೆ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ. ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು ನಿಃಕಲತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ, ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ, ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ ಸದಾಶಿವತತ್ವ, ಈಶ್ವರತತ್ವ, ಮಹೇಶ್ವರತತ್ವ ಈ ಮೂರು ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು, ಭಕ್ತರ ಪೂಜೆಯ ಕೈಕೊಂಡು, ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು, ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ, ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು. ಅದಕ್ಕೆ ಕರ ಚರಣಾದ್ಯವಯವಂಗಳಿಲ್ಲ. ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಸ್ವರೂಪನುಳ್ಳದು. ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದು. ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭೀಕರಿಸಿಕೊಂಡು, ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ ಪರಂಜ್ಯೋತಿರ್ಲಿಂಗವು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ. ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ. ಆ ಭಾಂಡವಯೆನ್ನ ಮಂಡೆಯ ಮೇಲೆ ಹೊತ್ತಿಪ್ಪೆನಯ್ಯ. ಮೂಲಜ್ಞಾನಾಗ್ನಿಯೆದ್ದು ಮೇಲಣ ಕಮಲವ ತಾಗಲು ಕಮಲದೊಳಗಣ ಕೊಡ ಕೊಡದೊಳಗಣ ಉದಕ ಉಕ್ಕಿ ಶರೀರದ ಮೇಲೊಗಲು ಪಿಂಡ ಕರಗಿ ಅಖಂಡಮಯನಾದೆನು. ಅಮೃತ ಬಿಂದುವ ಸೇವಿಸಿ ನಿತ್ಯಾನಿತ್ಯವ ಗೆದ್ದು ನಿರ್ಮಲ ನಿರಾವರಣನಾದೆನು. ಸೀಮೆಯ ಮೀರಿ ನಿಸ್ಸೀಮನಾದೆನು. ಪರಮ ನಿರಂಜನನನೊಡಗೂಡಿ ಮಾಯಾರಂಜನೆಯಳಿದು ನಿರಂಜನನಾಗಿದ್ದೆನು ಕಾಣಾ. ಸಮಸ್ತ ವಿಶ್ವಪ್ರಪಂಚಿಗೆ ಹೊರಗಾಗಿ ನಿಃಪ್ರಪಂಚ ನಿರ್ಲೇಪನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ ಪ್ರಾಣಲಿಂಗಿಯ ಅಂಗವು ಹೇಂಗಿಹುದಯ್ಯ ಎಂದರೆ: ಲಿಂಗ ನೆನಹೆ ಹಿಂಚಾಗಿ ಲಿಂಗ ನೆನಹೆ ಮುಂಚಾಗಿಹುದಯ್ಯ. ಅಂಗವಿಷಯಂಗಳೆ ಹಿಂಚಾಗಿ ಲಿಂಗವಿಷಯಂಗಳೆ ಮುಂಚಾಗಿಪ್ಪುದಯ್ಯ. ಆವಾಗಲು ಲಿಂಗಸಹಿತವಾಗಿಯೆ ಇಂದ್ರಿಯಂಗಳ ಭೋಗವ ಭೋಗಿಸುತಿಪ್ಪುದಯ್ಯ. ಭೋಗಿಸುವ ಕ್ರಮವೆಂತುಟಯ್ಯ ಎಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರವೆಂಬ ಮುಖದ್ವಾರಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆಂಬ ಲಿಂಗಸ್ಥಲಂಗಳ ಮೂರ್ತಿಗೊಳಿಸಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಈ ಪದಾರ್ಥಂಗಳ ಲಿಂಗಮುಖಕ್ಕೆ ನಿವೇದಿಸಿ ಆ ಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತಿಪ್ಪಾತನೇ ಪ್ರಾಣಲಿಂಗಿ ಲಿಂಗಪ್ರಾಣಿಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನದ ಕಂಡೆನಯ್ಯ. ಅದು ಅನಂತಕೋಟಿ ಸೋಮಸೂರ್ಯರ ಬೆಳಗು ನೋಡ. ಅತಿಶಯದ ಬೆಳಗಿನ ಬೆಳಗಿನೊಳು ಆನಂದಸುಖದೊಳಗೋಲಾಡುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಂಚಭೂತಂಗಳುತ್ಪತ್ತಿ ಇಲ್ಲದಂದು, ಅಂಡಜವಳಯ ರಚಿಸದಂದು, ಚತುರ್ದಶಭುವನಂಗಳಿಲ್ಲದಂದು, ಪಂಚಾಶತಕೋಟಿ ವಿಸ್ತೀರ್ಣದ ಅನಂತಕೋಟಿ ಬ್ರಹ್ಮಾಂಡಾದಿ ಲೋಕಾದಿಲೋಕಂಗಳೇನುಯೇನೂಯಿಲ್ಲದಂದು, ನಾನು ನೀನೆಂಬ ವಾಕು ಹುಟ್ಟದಂದು, ಅನಿರ್ವಾಚ್ಯ ಮಹಾಶೂನ್ಯನಾಗಿರ್ದೆಯಲ್ಲಾ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...