ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಮುಖದಿಂದ ಪರಮಲಿಂಗವು ತನ್ನ ಕರವ ಸೇರಿದ ಬಳಿಕ ಆ ಲಿಂಗದಲ್ಲಿ ಸ್ನೇಹ ಮೋಹವ ಬಲಿದು, ಲಿಂಗಪ್ರೇಮಿಯಾಗಿ, ಲಿಂಗಭಾವದಲ್ಲಿ ತನ್ನ ಭಾವವ ಬಲಿದ ಬಳಿಕ ಅನ್ಯವಿಷಯವ್ಯಾಪ್ತಿಯ ವ್ಯವಹಾರದ ಭ್ರಾಂತಿಯಿಲ್ಲದಿರಬೇಕು ನೋಡಾ. ಇದೇ ಏಕಚತ್ತಮನೋಭಾವಿಯ ಗುಣ; ಇದೇ ಲಿಂಗಗ್ರಾಹಕನ ನಿರುತ. ಲಿಂಗವ ಮುಟ್ಟಿ ಮತ್ತೇನನೂ ಮುಟ್ಟದ ನಿಃಕಳಂಕನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ ಭೂಮಂಡಲದಲ್ಲಿ ಉದಯವಾದುದ ಕಂಡೆನಯ್ಯ. ಭೂಮಂಡಲದಲುದಯವಾದ ಶಶಿಕಳೆ, ತ್ರೆ ೈಜಗವ ನುಂಗಿತ್ತು ನೋಡ. ನಾರಿಯರ ತಲೆಯ ಮೆಟ್ಟಿ, ಮೇರುವೆಯ ಹೊಕ್ಕಿತ್ತು ನೋಡಾ. ಮೇರುಗಿರಿಯ ಪರ್ವತದಲ್ಲಿಪ್ಪಾತನನೆಯ್ದೆ ನುಂಗಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ ಪರಿಣಾಮವಲ್ಲದೆ, ಬೇರೊಂದೆಡೆಮಾಡಿ ಉಣ್ಣೆಂದರೆ ಉಣ್ಣಬಲ್ಲುದೇ ಅಯ್ಯ? ಪ್ರಾಣದೊಳಗೆ ಪ್ರಾಣವಾಗಿಪ್ಪ ಲಿಂಗಕ್ಕೆ, ಆ ಶರಣನುಂಡಲ್ಲಿಯೆ ತೃಪ್ತಿಯಲ್ಲದೆ, ಬೇರೆ ಊಡಿಸಿದರೆ ಉಣಬಲ್ಲುದೇ ಅಯ್ಯ? ಸಂಯೋಗ ವಿಯೋಂಗಗಳಲ್ಲಿ, ತಟ್ಟುವ ಮುಟ್ಟುವ, ಅಣುಬಿಂದು ಸುಖಾರ್ಥವನು, ಅರಿವವನು, ಅರ್ಪಿಸುವವನು, ಭೋಗಿಸುವವನು, ನೀನೆಯಲ್ಲದೆ, ನಾ(ನ)ಲ್ಲ ನೋಡಾ. ಲಿಂಗದೊಳಗಿರ್ದು, ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದದೊಳಗೆ, ಒಡಗೂಡಿ ಮಹಾಪ್ರಸಾದಿಯಾಗಿ, ಮಹಕ್ಕೆ ಮಹವಾಗಿ, ಪರಕ್ಕೆ ಪರವಾಗಿ, ಸಾವಧಾನ ಪ್ರಸಾದಿಯಾಗಿರ್ದೇನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಪ್ರಸಾದಿಯಾದ ಬಳಿಕ ವಾತ ಪಿತ್ತ ಶ್ಲೇಷ್ಮವೆಂಬ ತ್ರಿದೋಷವಿಲ್ಲದಿರಬೇಕು. ಲಿಂಗಪ್ರಸಾದಿಯಾದ ಬಳಿಕ ಶೀತೋಷ್ಣಾದಿಗಳ ಭಯವಿಲ್ಲದಿರಬೇಕು. ಜಂಗಮಪ್ರಸಾದಿಯಾದ ಬಳಿಕ ಆದ್ಥಿ ವ್ಯಾದ್ಥಿಯಿಲ್ಲದಿರಬೇಕು. ಮಹಾಪ್ರಸಾದಿಯಾದ ಬಳಿಕ ಮರಣವಿಲ್ಲದಿರಬೇಕು. ತಾಪತ್ರಯ ತನುವ ಪೀಡಿಸುವನ್ನಕ್ಕರ ಪ್ರಸಾದಿ ಪ್ರಸಾದಿಯೆಂದೇನೋ ಜಡರುಗಳಿರ? ಕೆಂಡವ ಇರುಹೆ ಮುತ್ತಬಲ್ಲುದೆ? ನೊಣ ಹಾದರೆ ಮದಸೊಕ್ಕಿದಾನೆಯ ಬರಿ ಮುರಿಯಬಲ್ಲುದೆ? ಪ್ರಸಾದಿಯ ಪ್ರಳಯಬಾಧೆಗಳು ಬಾದ್ಥಿಸಬಲ್ಲವೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವಿನಿಂದ ಉಪದೇಶವ ಪಡೆದು, ಗುರುಪುತ್ರನೆನಿಸಿಕೊಂಡ ಬಳಿಕ ಪೂರ್ವದ ತಾಯಿತಂದೆಯೆಂದು, ಬಂಧುಗಳೆಂದು, ಮಲಸಂಬಂಧವ ನೆನೆಯಲಾಗದು ಕಾಣಿರೊ. ಇನ್ನಿವ ನೆನೆದಿರಾದರೆ ಶಿವದ್ರೋಹ ತಪ್ಪದಯ್ಯ. ಇನ್ನು ನಿಮಗೆ ತಾಯಿ ತಂದೆಗಳ ಹೇಳಿಹೆ ಕೇಳಿರೆ. ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಗಳು. ಗುರುವಿನಿಂದ ಪರವಿನ್ನಾರೂ ಇಲ್ಲವೆಂದು ನಂಬಬಲ್ಲರೆ ಶಿಷ್ಯನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುಣತ್ರಯಂಗಳನಳಿದ ನಿರ್ಗುಣನ ಮೇಲೆ ನಿರ್ವಯಲು ಬಂದೆರಗಿತ್ತು ನೋಡಾ. ನಿರ್ವಯಲು ಬಂದೆರಗಿದ ರಭಸಕ್ಕೆ ವಿಶ್ವಪ್ರಪಂಚು ಎದ್ದೋಡಿದವು. ಕರಣಂಗಳೆಂಬ ಕಳ್ಳರು ಕಾಲುಗೆಟ್ಟರು ನೋಡಾ. ತನುತ್ರಯಂಗಳೆಂಬ ತ್ರಿಪುರದ ಕೀಲು ಹರಿಯಿತ್ತು. ಕಾಮ ಕಾಲರ ಊಳಿಗದ ಉಪಟಳ ಎದ್ದೋಡಿತ್ತು ನೋಡಾ. ಆತ್ಮತ್ರಯಂಗಳ ಅಹಂಕಾರದ ಬೇರು ಸಂಹಾರವಾಗಿ ಪ್ರಕೃತಿತ್ರಯಂಗಳ ಪ್ರಪಂಚು ಕೆಟ್ಟು ಜೀವ ಪರಮರೆಂಬ ಭಾವ ಸತ್ತಿತ್ತು. ಜೀವ ಪರಮರೆಂಬ ಭಾವ ಸತ್ತಿತ್ತಾಗಿ ನಿರ್ಗುಣ ಲಿಂಗೈಕ್ಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ. ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ. ಜಂಗಮಮುಖದಿಂದ ಕೊಂಬುದು ಪ್ರಸಿದ್ಧ ಪ್ರಸಾದ. ಗುರುಪ್ರಸಾದದಿಂದ ಎನ್ನ ತನು ಶುದ್ಧವಾಯಿತ್ತು. ಲಿಂಗಪ್ರಸಾದದಿಂದ ಎನ್ನ ಮನ ಶುದ್ಧವಾಯಿತ್ತು. ಜಂಗಮಪ್ರಸಾದದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ನಿಮ್ಮ ಪ್ರಸಾದದಿಂದ ಶುದ್ಧವಾಗದೆ ತನ್ನಿಂದ ತಾನೆ ಶುದ್ಧನಾದೆನೆಂಬ ವಾಗದ್ವೆ ೈತಿಯ ತೋರದಿರ. ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಲಿಂಗ ಪ್ರಸಾದವ ತಾ ಗ್ರಹಿಸುವದೇ ಆಚಾರ. ಹೀಂಗಲ್ಲದೆ, ಜಂಗಮ ಪ್ರಸಾದವ ಅಂಗಕ್ಕೆ ಕೊಡಬಹುದಲ್ಲದೆ ಲಿಂಗಕ್ಕೆ ಕೊಡಬಾರದೆಂಬ ಅನಾಚಾರಿಗೆ ನಾಯಕನರಕ ತಪ್ಪದು ಕಾಣಾ, ನೀ ಸಾಕ್ಷಿಯಾಗಿ ಎಲೆ ಶಿವನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು ಗುರುದೇವನೇ ಪರತತ್ವವು; ಆ ಪರಶಿವ ತಾನೆ ಗುರುರೂಪಾಗಿ ವರ್ತಿಸಿದನು, ಶಿಷ್ಯದೀಕ್ಷಾಕಾರಣ. ಆ ಶ್ರೀಗುರು, ಶಿಷ್ಯನ ಮಸ್ತಕದಲ್ಲಿ ತನ್ನ ಹಸ್ತಕಮಲವನಿರಿಸಿ, ಈ ಪ್ರಕಾರವಪ್ಪ ಲಿಂಗಕಳೆಯ ಪ್ರತಿಷೆ*ಯಂ ಮಾಡಿದನಾಗಿ, ಆ ಗುರುವಿನ ಹಸ್ತದಿಂದ ಆ ಕಳೆ ಹುಟ್ಟಿ, ಅದೇ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು; ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು. ಭಾವಭರಿತವಾಗಿ ಭಾವಲಿಂಗವಾಯಿತ್ತು. ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗವು ತಾನೆ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಆರುತೆರನಾಯಿತ್ತು. ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ, ಮಹಾಲಿಂಗ ಈ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೆಂದು ಕ್ರಿಯಾಲಿಂಗವೆಂದು ಒಂದೇ ಪರಿಯಾಯವಾಗಿ ಕ್ರಿಯಾಲಿಂಗವೆಂದು ಇಷ್ಟಲಿಂಗವೆಂದು ಒಂದೇ ಪರಿಯಾಯವಾಗಿ ಇಂತಿವೆಲ್ಲವನೊಳಕೊಂಡು ನಿನ್ನ ಕರಸ್ಥಲಕ್ಕೆ ಬಂದಿತ್ತು ವಸ್ತು. ಈ ಕರಸ್ಥಲದ ಮಹಾಘನದ ನಿಲವನು ಹೀಗೆಂದು ಅರಿವುದೆಂದನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು, ಜಂಗಮ ಪ್ರಸಾದಕ್ಕೆ ಹೇಸುರರು, ಭಕ್ತಪ್ರಸಾದಕ್ಕೆ ಹೇಸುವರು. ಹೊಲತಿ ಮಾದಿಗಿತ್ತಿ ಬಲ್ಲವಳಾದರೆ, ಹಲವು ಪರಿಯಲ್ಲಿ ಅವಳೆಂಜಲ ತಿನುತಿಪ್ಪರು ನೋಡಾ ಜಗ. ಹದಿನೆಂಟು ಜಾತಿಯ ಎಂಜಲ ಹೇಹವಿಲ್ಲದೆ ತಿಂಬ ಭವಜಾತಿಗಳಿಗೆ ಪ್ರಸಾದ ದೊರಕೊಂಬುದೆ? ದೊರಕೊಳ್ಳದು. ಆದೇನುಕಾರಣವೆಂದಡೆ: ಭವಭವದಲ್ಲಿ ಯೋನಿಚಕ್ರದಲ್ಲಿ ತಿರುಗುತ್ತಿಪ್ಪರಾಗಿ. ಈ ಅಶುದ್ಧಜೀವಿಗಳಿಗೆ ಶುದ್ಧವಹ ಶಿವಪ್ರಸಾದದಲ್ಲಿ ಸಂಬಂಧ ಸಮನಿಸದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಂಡಿಂಗೆ ಹೆಣ್ಣಲ್ಲದೆ ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ ಈ ಅರೆಮರುಳ ಶಿವನ ನಾನೇನೆಂಬೆನಯ್ಯ? ಅಪಮಾನವ ಅನ್ಯರಿಗೆ ಕೊಡುವ ದೇವನ ಮರುಳತನವ ನೋಡಾ. ಅದೇನು ಕಾರಣವೆಂದಡೆ: `ಪತಿರ್ಲಿಂಗಸ್ಸತೀ ಚಾಹಮಿತಿಯುಕ್ತಸ್ಸದಾ ತಥಾ ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಂ||' ಎಂದುದಾಗಿ ಮುಕ್ಕಣ್ಣಂಗೆ ನಾ ಹೆಣ್ಣಾದ ಕಾರಣ ಎನ್ನ ಕರಣೋಪಕರಣಗಳೆಲ್ಲವು ಲಿಂಗೋಪಕರಣಂಗಳಾಗಿ ನಿಮ್ಮ ಚರಣವೆ ಹರಣವಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವನು ಮಹಾದೇವನನು ಒಂದೇಯೆಂದು ಭಾವಿಸಲು ಬೇಕು ನೋಡಾ. ಎರಡೆಂಬ ಪ್ರತಿಭಾವ ತೋರದಡೆ, ಅದು ಅಜ್ಞಾನ ನೋಡಾ. ಇದು ಕಾರಣ ಅವನಾನೊರ್ವನು ಎರಡೆಂದು ಭಾವಿದನಾದಡೆ, ಅನೇಕಕಾಲ ನರಕದ ಕುಣಿಯಲ್ಲಿಪ್ಪುದು ತಪ್ಪದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಾಜಿನ ಮನೆಯ ಮಾಡಿಕೊಂಡು ವಿರಾಜಿಸುವ ಗೀಜಿಗನು ಓಜನ ಕೈಯಲ್ಲಿ ಸಿಕ್ಕಿ ಗಾಜು ಗೋಜಾಗುತ್ತಿದೆ. ತನ್ನೋಜೆಯ ಮರೆಯಿತ್ತಲ್ಲಯ್ಯ. ಗಾಜಿನ ಮನೆಯ ಮುರಿದು, ಓಜನ ಕೊಂದು ಗಾಜು ಗೋಜು ಬಿಟ್ಟು ತನ್ನೋಜೆಯನರಿದಲ್ಲದೆ ಒಳ್ಳಿತ್ತಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರು ಲಿಂಗ ಜಂಗಮದ ಭಕ್ತರೆಂದು ಗುಣಕಥನವ ನುಡಿದುಕೊಂಡು ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ. ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು ಭೂತ. ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ; ಹೊನ್ನು ನಿಮ್ಮದೆಂಬಿರಿ. ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ. ಆ ಭೂತ ನಿಮ್ಮಹಿಡಿದು, ಹಿಸಿಕಿ ಕೊಂದು ಕೂಗಿ, ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ ಗಾರುಮಾಡುತಿಪ್ಪವು ಕಾಣಿಭೋ. ಅ[ವ] ನೀವು ಹಿಡಿದು ಕೀರ್ತಿಸುತಿರ್ದು ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವ ಮುಟ್ಟಿ ಬಂದಲ್ಲಿ ಪ್ರಸಾದ. ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಲಿಂಗವ ಮುಟ್ಟಿ ಬಂದಲ್ಲಿ ಪ್ರಸಾದ, ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಜಂಗಮವ ಮುಟ್ಟಿಬಂದಲ್ಲಿ ಪ್ರಸಾದ, ತನ್ನ ಬಾಯಿ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಗುರುವಿದ್ದಲ್ಲಿ ಅವಗುಣವುಂಟೆ? ಲಿಂಗವಿದ್ದಲ್ಲಿ ಒಳ್ಳೆಯ ಸ್ಥಲ ಅಲ್ಲದ ಸ್ಥಲವುಂಟೆ? ಜಂಗಮವಿದ್ದಲ್ಲಿ ಜಾತಿ ವಿಜಾತಿಯುಂಟೆ? ಪ್ರಸಾದವಿದ್ದಲ್ಲಿ ಎಂಜಲುಂಟೆ? ಇಂತಪ್ಪ ಪ್ರಪಂಚಜೀವಿಗಳನೆಂತು ಪ್ರಸಾದಿಗಳೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರು ಅಳಿದನು ಉಳಿದನು ಎಂದೆಂಬರಿ ಗುರು ಅಳಿದರೆ ಜಗ ಉಳಿಯಬಲ್ಲುದೆ? `ಸ್ಥಾವರಂ ಜಂಗಮಾಧಾರಂ ನಿರ್ಮಲಂ ಸ್ಥಿರಮೇವ ಚ| ಜಗದ್ವಂದಿತಪಾದಾಯ ತಸ್ಮೆ ೈಶ್ರೀ ಗುರುವೇ ನಮಃ||' ಎಂದುದಾಗಿ, ಗುರು ಅಳಿವನೂ ಅಲ್ಲ; ಉಳಿವನೂ ಅಲ್ಲ. ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು ಕುತ್ತಗೊಳಿಸುತ್ತಿದೆಯಲ್ಲ. ಈ ವಿಕಾರದಲ್ಲಿ ಮುಳುಗಿದವನ ಶಿಷ್ಯನೆಂದೆಂಬೆನೆ? ಎನ್ನೆನಯ್ಯ. ಗುರು ಸತ್ತನೆಂದು ಬಸುರ ಹೊಯಿಕೊಂಡು ಬಾಯಿಬಡಿಕೊಡು ಅಳುತ್ತಿಪ್ಪ ದುಃಖಜೀವಿಗಳಿಗೆ ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ; ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ. ಈ ತ್ರಿವಿಧವೂ ಇಲ್ಲವಾಗಿ, ಪಾದೋದಕ ಪ್ರಸಾದವೂ ಇಲ್ಲವಯ್ಯ. ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು ಎಂದೆಂದಿಗೂ ಇಲ್ಲವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವಿನಿಂದ ಉಪದೇಶವ ಹಡದ ಶಿಷ್ಯಂಗೆ ಭಾವವಾವುದಯ್ಯಯೆಂದಡೆ; ಸದ್ಗುರು ಸಂದರೆ ಲಿಂಗದಲ್ಲಿ ಐಕ್ಯವಾದರೆಂದು ಭಾವಿಸುವುದಯ್ಯ. ಲೋಕದವರಂತೆ ಸತ್ತರು ಕೆಟ್ಟರುಯೆಂದು ಬರಿಯ ದುರ್ನುಡಿಯ ನುಡಿದರೆ, ಅಘೋರ ನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಂಡಗಿಂದ ಹೆಂಡತಿ ಮೊದಲೇ ಹುಟ್ಟಿದರು ಆ ಗಂಡಗಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ. ಗುರುವಿಗಿಂದ ಶಿಷ್ಯ ಅರುಹುಳ್ಳವನಾದರು, ಆ ಗುರುವಿಂಗೆ ಭೃತ್ಯನಲ್ಲದೆ ಕರ್ತನಲ್ಲವಯ್ಯ. ಕುದುರೆಯ ಹಿಡಿಯ ಹೇಳಿದರೆ ರಾವುತಿಕೆಯ ಮಾಡಿದರೆ ಒಪ್ಪುವರೇ? ಆಳಾಗಿದ್ದು ಆರಸಾಗಿರ್ದೆನೆಂದರೆ ಒಪ್ಪುವರೇ? ಮಗನೇನು ತಂದೆಯಾಗಬಲ್ಲನೇ? ಇದುಕಾರಣ, ಶಿಷ್ಯಂಗೆ ಭಯಭಕ್ತಿ ಕಿಂಕುರ್ವಾಣವೆ ಇರಬೇಕು. ಈ ಗುಣವುಳ್ಳರೆ ಆ ಶಿಷ್ಯನೆ ಗುರುವಪ್ಪುದು ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಂಗಾಸ್ಥಾನ ಕೋಟಾನುಕೋಟಿಗಿಂದ ವಿಭೂತಿಯಸ್ನಾನವಧಿಕ ನೋಡಾ. ಮಂತ್ರಸ್ನಾನ ಕೋಟಾನುಕೋಟಿಗಿಂದ ವಿಭೂತಿಯಸ್ನಾನವಧಿಕ ನೋಡಾ. ವಿಭೂತಿರೇಣುಮಾತ್ರದಿಂದ ರುದ್ರನಪ್ಪುದು ತಪ್ಪುದು ನೋಡಾ. ಸರ್ವಾಂಗದಲ್ಲಿ ಶ್ರೀ ವಿಭೂತಿಯ ಉದ್ಧೂಳನವ ಮಾಡಿದಾತನ- ನೇನೆಂದುಪಮಿಸುವೆನಯ್ಯ ಆ ಮಹಾತ್ಮನ? ಆತನು ಜಗತ್ ಪಾವನನು ನೋಡಾ! ಇಂತಪ್ಪ ಪವಿತ್ರಕಾಯಂಗೆ ನಮೋನಮೋಯೆಂಬೆನು ಕಾಣ, ಆತನು ಪರಮಾತ್ಮಸ್ವರೂಪನಾದ ಕಾರಣ. ಆತನು ಪಂಚಬ್ರಹ್ಮಸ್ವರೂಪನಾದ ಕಾರಣ, ಆ ಮಹೇಶ್ವರಂಗೆ ಶರಣೆಂದು ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ. ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ. ಜಂಗಮಮುಖದಿಂದ ಕೊಂಬುದು ಪ್ರಸಿದ್ಧಪ್ರಸಾದ. ಜ್ಞಾನಮುಖದಿಂದ ಕೊಂಬುದು ಮಹಾಪ್ರಸಾದ. ಈ ನಾಲ್ಕು ತೆರದಲ್ಲಿ ಕೊಂಬುವುದು ಪ್ರಸಾದವಲ್ಲದೆ ರಣದ ಬೀರರ ಹಾಂಗೆ ಬಾಚಿಸಿಕೊಂಡು ಕೊಂಬಷ್ಟ ಕೊಂಡು, ಬಿಡುವಷ್ಟ ಬಿಟ್ಟು ಸೂರೆಗೂಳಾಗಿ ಚೆಲ್ಲಿಯಾಡುವುದು ಇದಾವ ಪ್ರಸಾದ ಹೇಳ? ಅದೆಂತೆಂದೊಡೆ: ಅಣುಮಾತ್ರ ಪ್ರಸಾದಾನ್ನಂ ತ್ಯಕ್ತ್ವಾ ಭುಕ್ತಾನ್ನ ಕಿಲ್ಬಿಷಂ| ಸ ಪಾಪೀ ನರಕಂ ಯಾತಿ ತದ್ಗ ೃಹಂ ನರಕಾಲಯಂ|| ಎಂದುದಾಗಿ ಬಹು ಜನಂಗಳು ಕಾರಿದ ಕೂಳ ಶ್ವಾನ ಭುಂಜಿಸಿ ತನ್ನೊಡಲ ಹೊರೆದಂತಾಯಿತ್ತು ಕಾಣಾ ವಿಶ್ವಾಸವಿಲ್ಲದ ಪ್ರಸಾದ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವನರಿಯದ ಭಕ್ತ, ಲಿಂಗವನರಿಯದ ಭಕ್ತ. ಜಂಗಮನವರಿಯದ ಭಕ್ತ, ಪ್ರಸಾದವನರಿಯದ ಭಕ್ತ. ಪಾದೋದಕವನರಿಯದ ಭಕ್ತ, ತನ್ನನರಿಯದ ಭಕ್ತ. ಇದಿರನರಿಯದ ಭಕ್ತ. ತಾನು ತಾನಾದ ಅವಿರಳನು ಅದ್ವಯನು ನೋಡಾ. ಪರಮಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಾಳಿ ಬೀಸುವನ್ನಕ್ಕರ ಮರನುಲಿಯದೆ ಮಾಣದಯ್ಯ. ಕಾಯುವುಳ್ಳನ್ನಕ್ಕರ ವಿಕಾರ ಸಾಯದು ನೋಡ. ಭಾವವುಳ್ಳನ್ನಕ್ಕರ ಭ್ರಮೆ ಅಡಗದಯ್ಯ. ಮನವುಳ್ಳನ್ನಕ್ಕರ ಮಾಯೆ ಮಾಣದಯ್ಯ. ಮಾಯವುಳ್ಳನ್ನಕ್ಕರ ಸಾವು ಮಾಣ್ಬುದೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡ. ಬೆಟ್ಟದುದ್ದ ಮಾತೆಲ್ಲ ಏತಕಯ್ಯಯೆಂದರೆ- ಗೇಣುದ್ದ ಒಡಲ ಹೂಣುವದಕ್ಕಾಗಿ ಕಾಣಾ. ವಾಚಾಳತ್ವದಿಂದ ಉದರವ ಹೊರೆವವರೆಲ್ಲಾ ಗುರುವೆ? ಇಂದ್ರಿಯಂಗಳಿಗೊಂದೊಂದು ಮಾತಕಲಿತು ಸದಾಶಿವನ ಸಂಧಿಸಿ ಸರ್ವರಿಗೆ ತೋರಿಹೆನೆಂಬರು, ತಾವೇಕೆ ಕಾಣರೋ? ತಾವು ಕಾಣದೆ, ತಮ್ಮಲ್ಲಿ ವಸ್ತು ವಿವೇಕವಿಲ್ಲದೆ ಅನ್ಯರಿಗೆ ಹೇಳುವ ಬೋಧೆ, ಅದು ಅವಿಚಾರ ಕಾಣ. ಗುರುತತ್ವದ ಬಲ್ಲ ಗುರು ಶುದ್ಧ ಚಿದ್ರೂಪನು. ಚಿನ್ಮಯನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಿರಿಯ ಮೇಲಣ ಕೋಡಗ, ಹಿರಿಯ ಮಾರಿಯ ನುಂಗಿತ್ತು ನೋಡಾ. ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ, ಎಪ್ಪತ್ತೆ ೈದು ಗ್ರಾಮವನೆಯಿದೆ ನುಂಗಿತ್ತು ನೋಡಾ. ದಶಗಮನಂಗಳ ಕೂಡಿ ವಿಶ್ವತೋಪಥದಲ್ಲಿ ನಡೆವುತಿಪ್ಪುದು ನೋಡಾ. ಒಂದು ಪಥವ ತಾನೆಂದೂ ಅರಿಯದು ನೋಡಾ. ತಾ ಬಂದಂದಿಂದ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು