ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರವೆಯ ತಮವ ಕಳೆಯಯ್ಯ. ಅರುಹಿನ ಜ್ಯೋತಿಯ ಬೆಳಗಯ್ಯ. ಅರುಹಿನ ಜ್ಯೋತಿಯ ಬೆಳಗಿ, ನಿಮ್ಮ ಕುರುಹ ಕಂಡು ಕೂಡುವ ತುರ್ಯಾವಸ್ಥೆಯ ಸುಖವನೆ ಕೊಡು ಕಂಡ ಮಹಾಲಿಂಗ ತಂದೆ. ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು. ಬುದ್ಧಿಯಿದ್ದಲ್ಲಿಯೇ ನಿಮ್ಮ ವಿಚಾರಿಸಬೇಕಯ್ಯ. ಚಿತ್ತವಿದ್ದಲ್ಲಿಯೇ ನಿಮ್ಮ ನಿಶ್ಚಯಿಸಬೇಕು. ಅಹಂಕಾರವಿದ್ದಲ್ಲಿಯೇ ನಿಮ್ಮ ಮಮಕರಿಸಬೇಕಯ್ಯ. ಕಾಯವಿದ್ದಲ್ಲಿಯೇ ಸಾಯದ ಸಂಚವನರಿದು ಎಚ್ಚತ್ತಿರಬೇಕಯ್ಯ. ಜೀವಹಾರಿಯ ಕೆಡೆದು ಭೂಗತವಾಗಿ, ವಾಯುಪ್ರಾಣಿಯಾಗಿ ಹೋಹಾಗ, ಆಗ ಮುಕ್ತಿಯ ಬಯಸಿದರುಂಟೇ? ಚಿತ್ತ ಬುದ್ಧಿ ಅಹಂಕಾರ ಮನ ಜಾÕನ ಭಾವಂಗಳ ಮೀರಿದ, ನಿರ್ಭಾವ ಲಿಂಗೈಕ್ಯನಾದ ನಿರಾಶ್ರಯನಯ್ಯ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಡಿದ ಮಾಟವನರಿಯದ ಭಕ್ತ. ಕೂಡಿದ ಕೂಟವನರಿಯದ ಭಕ್ತ. ಮಾಟ ಕೂಟವೆಂಬ ಕೋಟಲೆಯನುಳಿದ ನಿಸ್ಸಂಗತ್ವ ನಿರಾಭಾರಿ ನಿಸ್ಸೀಮ ನಿರ್ದೇಹಿ ನಿಜದಲ್ಲಿ ಅಡಗಿದ ನಿತ್ಯ ಮುಕ್ತನಯ್ಯಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ, ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರುಪ್ರಕಾರ. ಸ್ವರಾಕ್ಷರವೆಲ್ಲ ನಾದಸಂಬಂಧ. ವಿಕಲಾಕ್ಷರವೆಲ್ಲ ಬಿಂದುಸಂಬಂಧ. ವ್ಯಾಪಕಾಕ್ಷರವೆಲ್ಲ ಕಳಾಸಂಬಂಧ. ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ. ಈ ನಾದ ಬಿಂದು ಕಳೆಗಳ ಗಬ್ರ್ಥೀಕರಿಸಿಕೊಂಡಿರ್ಪುದು ಚಿತ್ತು. ಆ ಚಿತ್ ಪ್ರಣಮಸ್ವರೂಪವೆ, ಅದ್ವೆ ೈತಾನಂದದಿಂದ ಸಂಪೂರ್ಣವನುಳ್ಳ ಆದಿಮಹಾಲಿಂಗವು, ಅನುಪಮಲಿಂಗವು, ಅನಾಮಯಲಿಂಗವು, ಅದ್ವಯಲಿಂಗವು, ಪರಮಲಿಂಗವು, ಪರಾಪರಲಿಂಗವು, ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೊಲನ ಕಂಡ ನಾಯಂತೆ ಇಂದ್ರಿಯವಿಷಯಕ್ಕೆ ಮುಂದುವರಿಯದಿರಾ. ಅಂಗನೆಯರ ಸಮ್ಮೇಳದಿಂ ಭಂಗಿತನಾಗದಿರಾ. ಲಿಂಗವನಪ್ಪಿ ಸುಖಿಯಾಗಿ ಎಲೆ ಮನವೇ. ಅಂಗದಿಚ್ಛೆಗೆ ಆಯಸಂಬಡದಿರಾ. ಲಿಂಗ ಸಂಗಿಗಳು ನೋಡಿ ನಗುವರೆಲೆ[ಲೆಲೆ] ಮನವೇ. ಇಂದ್ರಿಯಭೋಗಂಗಳೆಂಬವು ಕನಸಿನ ಸಿರಿಯಂತೆ ತೋರಿ ಅಡಗುವವೋ. ಇವನೇಕೆ ನಚ್ಚುವೆ ಮಚ್ಚುವೆ ಹುಚ್ಚು ಮನವೇ? ಹರಹರಾ ಶಿವ ಶಿವಾ ಎನ್ನೆಯೋ ಎಲೆಲೆ ಮನವೇ. ನಿನ್ನ ನಾ ಬೇಡಕೊಂಬೆನಯ್ಯೋ ಎಲೆಲೆ ಮನವೇ. ಸಿಂಹನ ಕಂಡ ಕರಿಯಂತೆ ಕೆಡೆಬಡೆದೋಡದರಿಯ್ಯೋ ಪಾಪಿ ಮನವೇ. ಲಿಂಗ ಪಾದವ ಸಾರಿ, ಶಿವಭಕ್ತನಾಗಿ ಮುಕ್ತಿಸಮ್ಮೇಳನಾಗಯ್ಯ. ಕರ್ತೃ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಡಗೂಡಿ, ನಿತ್ಯನಾಗಬಲ್ಲರೆಲೆಲೆ ಮನವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುಂದಳ ಮುಖಸಾಲೆಯೊಳಗೆ ಉದ್ದಂಡಮೂರ್ತಿಯ ಕಂಡೆನಯ್ಯ. ಲಂಡರ ಪುಂಡರ ಭಂಡರ ದಂಡಿಸುತ್ತಿದಾನೆ ನೋಡಾ, ಮುಂದಣ ಮುಖಸಾಲೆಯ ಮುರಿದು ಉದ್ದಂಡಮೂರ್ತಿ ಉಳಿದ ಪ್ರಚಂಡತೆಯನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೆಟ್ಟಿಲಿಲ್ಲದ ಭೂಮಿಯಲ್ಲಿ ಹುಟ್ಟಿಲಿಲ್ಲದ ಹೆಮ್ಮರ ಹುಟ್ಟಿತ್ತು ನೋಡಾ. ಮೆಟ್ಟಿ ಹತ್ತೆಹೆನೆಂದರೆ ಕೊಂಬಿಲ್ಲ; ಮುಟ್ಟಿ ಹಿಡಿದಿಹೆನೆಂದರೆ ಮೂರ್ತಿಯಲ್ಲ. ಅದರಲ್ಲಿ ಕಟ್ಟಣೆಗೆಯ್ದದ ಹಣ್ಣು ರಸತುಂಬಿ, ತೊಟ್ಟು ಬಿಡದು ನೋಡಾ. ತೊಟ್ಟ ಮುಟ್ಟದೆ ಕಟ್ಟಣೆಗೆಯ್ದದ ಹಣ್ಣು ಮುಟ್ಟಿ ಸವಿಯಬಲ್ಲಾತನ ಹುಟ್ಟರತಾತನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುಪ್ಪುರದರಸಿಂಗೆ ಮುಖವೈದು, ಬಾಯಿ ಹದಿನಾರು, ಹಲ್ಲು ಇನ್ನೂರ ಹದಿನಾರು ನೋಡಾ. ಆರೂಢನಂಗದಲ್ಲಿ ಅರ್ಭುತದ ಕಿಚ್ಚು ಹುಟ್ಟಲು ಮೂರೂರು ಬೆಂದು, ಮುಖವೈದು ಕೆಟ್ಟು, ಬಾಯಿ ಹದಿನಾರು ಮುಚ್ಚಿ, ಇನ್ನೂರಹದಿನಾರು ಹಲ್ಲು ಮುರಿದವು ನೋಡಾ. ಮುಪ್ಪರದರಸ ನುಂಗಿದ್ದ ಕಿಚ್ಚು ನಿಷ್ಪತ್ತಿಯಾಗಲು ಲಿಂಗಾಂಗ ಸಂಯೋಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ. ಜಲವೊತ್ತಿದರೆ ಬಚ್ಚಲೊಳಗೆ ಬಿಡಬೇಕಯ್ಯ. ಇಂದ್ರಿಯವೊತ್ತಿದರೆ ಯೋನಿಯೆಂಬ ಬಚ್ಚಲೊಳಗೆ ಬಿಡಬೇಕಯ್ಯ. ಸ್ವಾನನೊಂದು ಚರ್ಮವ ಕಚ್ಚಿ ತಂದು, ತಿಪ್ಪೆಯ ಕೆರದು ಹೂಳಿ, ಮತ್ತೊಂದು ನಾಯಿ ಬಂದು ಕಚ್ಚೀತೆಂದು ಕಾಯ್ದುಕೊಂಡಿಪ್ಪಂತೆ ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ ಮನೆಯ ಮರೆಯಲ್ಲಿರಿಸಿಕೊಂಡು, ಮತ್ತೊಂದು ಬಂದು ಕಚ್ಚೀತ್ತೆಂದು ಕುಕ್ಕನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯಿನ್ನೆಲ್ಲಿಯದೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೂರುಮಂಡಲ ತಿರುಗುವಲ್ಲಿ ಆರೂರವರು ಅಳುತ್ತಿರ್ಪರು ನೋಡಾ. ಬೇರೊಂದೂರವರು ಬಂದು, ಮೂರುಮಂಡಲವನೊಂದುಮಾಡಿ ಆರೂರವರ ಆಳುವ ಮಾಣಿಸಿ ಬೇರೊಂದೂರ ಹೊಕ್ಕು ನೋಡಲು ಈ ಊರೊಳಗೆ ಸತ್ತವನಿವನಾರೋಯೆಂದು ನೋಡಿಯೆತ್ತಹೋಗಲು ಎಲ್ಲರೂ ಸತ್ತುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಹದಾಕಾಶ ಘಟ ಭೇದದಿಂದ ಘಟಾಕಾಶ ಮಹದಾಕಾಶವಾಗಿ ತೋರಿದರೆ ಆಕಾಶವೊಂದಲ್ಲದೆರಡುಂಟೇ ಮರುಳೆ? ಪರಶಿವ ತಾನೆ ತನ್ನ ಶಕ್ತಿಭೇದದಿಂದ ಶರಣ ಲಿಂಗವೆಂದಡೆ ಶರಣ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಈ ಶರಣಮತವು ಪ್ರಕೃತಿಯಿಂದಾದ ದೈ ್ವತಾದ್ವೆ ೈತ ಮತವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೃತಜೀವಿಯೆಂಬ ಹೆಂಗೂಸಿನ ಶಿರದಲ್ಲಿ ಅಮೃತದ ಸೋನೆ ಸುರಿವುತ್ತಿದೆ ನೋಡ. ಹಾಲುಮಳೆ ಕರೆದು ಆಕೆಯ ಮೇಲೆ ಮೇರೆದಪ್ಪಿ ಹರಿಯಲು ಆ ಬಾಲೆ ಅಳಿದು ಆ ಲೋಕದ ಪ್ರಾಣಿಗಳು ಸತ್ತು ಸಚರಾಚರಂಗಳ ಮೀರಿ ಸಚ್ಚಿದಾನಂದ ಶಿವೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾತಿನಲ್ಲಿ ಮಹತ್ವವ ನುಡಿದು ನೀತಿಯಲ್ಲಿ ಅಧಮರಾದ ಮಾನವರು ಈಶ್ವರೋವಾಚವ ನುಡಿದುಕೊಂಡು ನಡೆದರೆ ಬೆಟ್ಟಕ್ಕ ನಾಯಿ ಬಗುಳಿದಂತೆ. ಕಷ್ಟರ ನುಡಿ ಕಾಮಾರಿಯ ಮುಟ್ಟದು ಕಾಣಾ. ನಿಮ್ಮ ಮುಟ್ಟದ ಮನಕ್ಕೆ ಬಂದಂತೆ ನಡೆವವರ, ಮನಕ್ಕೆ ಬಂದಂತೆ ನುಡಿವವರ ಮಚ್ಚೆನು ಕಾಣಾ. ಅಲ್ಲಿ ನೀವಿಲ್ಲದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನೋಮಧ್ಯದಲ್ಲಿ ಒಂದು ಶಶಿ ಸಂಧಾನದ ಕಳೆ ಸಂದ್ಥಿಸಿ ಅರುಣೋದಯವಾದಂತಿದೆ ಇದೇನಯ್ಯ? ಅದು ಎನ್ನ ಭಾಗ್ಯದಿಂದ ಮತಿಪ್ರಕಾಶನವಾಯಿತ್ತಯ್ಯ. ಆ ಪ್ರಸನ್ನ ಪ್ರಸಾದವನೊಳಕೊಂಡು, ಉತ್ತಮೋತ್ತಮವಾಗಿ ನಿಮಗೆ ಸಲುವಳಿಯಾದುದನು ಆರು ಬಲ್ಲರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಳೆಹುಯ್ದರಾಕಾಶ ನೆನೆವುದೇ?. ಬಿರುಗಾಳಿ ಬೀಸಿದರಾಕಾಶ ನೋವುದೇ?. ಕಿತ್ತಲಗಿನಿಂದಿರದರೆ ಆಕಾಶ ಹರಿವುದೇ?. ಬಚ್ಚಬರಿಯ ಬಯಲು ಕಟ್ಟು ಕುಟ್ಟಿಗೊಳಗಾಗಬಲ್ಲುದೇ?. ನಿಶ್ಚಿಂತ ನಿರಾಳನಾದ ನಿಜೈಕ್ಯನ, ತಥ್ಯಮಿಥ್ಯದಿಂದ ನುಡಿವ ತುಶ್ಚರ ನುಡಿ ತಟ್ಟಬಲ್ಲುದೇ ವಸ್ತುವ ವಾಕುಶಾಸ್ತ್ರ ಖಂಡಿಸಬಲ್ಲುದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೂರುಲೋಕದ ಮೋಹಿನಿ ಆರುಲೋಕದ ಅಂಗನೆಯರ ಸಂಗವ ಮಾಡಿ, ಮೂರುಲೋಕದ ಮೋಹವ ಮರೆದು ತಾ ಸತ್ತಳು ನೋಡಾ. ಮೂರುಲೋಕದ ಮೋಹಿನಿ ಸತ್ತುದ ಕಂಡು, ಆರುಲೋಕದ ಅಂಗನೆಯರು, ನಾವೀ ಲೋಕದಲ್ಲಿರಲಾಗದೆಂದು ಮೀರಿದ ಲೋಕಕ್ಕೆ ಹೋಗಿ, ಆರೂಢನ ನೋಡುತ್ತ ನೋಡುತ್ತ ಆರೂರವರೂ ಸತ್ತರು. ಇದು ಮೀರಿದ ಲಿಂಗೈಕ್ಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಳಿಗೆಯ ಮನೆಯ ಕಾಳಿಕೆಯೊಳಗೆ ಹೂಳಿದ್ದ ವಸ್ತು ಇದೇನಯ್ಯಾ?. ಮಾಳಿಗೆ ಬಯಲಾಗಿ ಕಾಳಿಕೆ ಅಳಿದಲ್ಲದೆ; ಹೂಳಿದ್ದ ವಸ್ತುವ ಕಾಣಲಾರಳವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುತ್ತಿನ ದಿವಾಣದೊಳಗೆ ತತ್ವವೆಣ್ಣುಗಳೆಂಬ ಮುತ್ತೈದೆಯರು ಮುತ್ತು ಮಾಣಿಕ ನವರತ್ನದ ತೊಡಿಗೆಯ ತೊಟ್ಟು ಉತ್ತುಂಗರಾಶಿಯೆಂಬ ಅಮೃತಕಿರಣವ ಪ್ರಜ್ವಲಿಸುತಿದಾರೆ ನೋಡಾ. ಆ ಕಿರಣಂಗಳ ಸೋಂಕಿದವರೆಲ್ಲ ಅಮರಗಣಂಗಳಾದುದ ಕಂಡು ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಂಜರ ದೃಷ್ಟಿಯೊಳಗೆ ಚಂದ್ರಮನುದಯ ನೋಡಾ. ಚಂದ್ರಮಂಡಲನೊಡೆದು ರವಿ ಮೂಡಲು ಮಂಜರ ಸತ್ತಿತ್ತು; ದೃಷ್ಟಿ ನಷ್ಟವಾಯಿತ್ತು. ಚಿಚ್ಚಂದ್ರ ಸೂರ್ಯರೊಂದಾಗಿ ಚಿದಾತ್ಮ ಲಿಂಗವಾದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಲದೊಡನೆ ಕೈದಂಡೆಯನಿಕ್ಕಿದಡೆ, ಮಾನಸಿಕೆ ಕೆಡದೆ ಮಾಣ್ಬುದೆ? ನಾಯ ಸರಸ ಸೀರೆಯ ಕೇಡು, ಮಾಯಾಸಂಗ ಹರಣದ ಕೇಡು. ಎಲೆ ಮಹಾಮಹೇಶ್ವರ ಶಿವನೇ ನಿನ್ನ ಸಂಗವಲ್ಲದೆ ಈ ದುಸ್ಸಂಗವೆಲ್ಲ ದುರ್ಗತಿಗೆ ಬೀಜ ಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾತೆಯಿಲ್ಲದ ಅಜಾತನು, ತಂದೆಯಿಲ್ಲದ ಇಂದುಧರನು, ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು. ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು. ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ ಮಹಾಮಹಿಮನು ನೋಡಾ, ಭಕ್ತನು. ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ ಜಗಭರಿತನು, ಅದ್ವಯನು ನೋಡಾ ಭಕ್ತನು. ಇಂತಪ್ಪ ನಿರುಪಾಧಿಕ ಭಕ್ತನ, ನಿರ್ಗುಣ ಚರಿತ್ರವನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾನಸ ವಾಚಕ ಉಪಾಂಶಿಕವೆಂದು ಪ್ರಣವ ಪಂಚಾಕ್ಷರಿಯ ಜಪ ಮೂರು ತೆರನಾಗಿಪ್ಪುದು. ಮನಸಿನಲ್ಲಿಯೆ ಪ್ರಣವಮಂತ್ರವ ಸ್ಮರಿಸುವುದು ಮಾನಸ. ವಾಕ್ಯದಿಂದ `ಶಿವಾಯ ಹರಾಯ ಭವಾಯ ಮೃಡಾಯ ಮೃತ್ಯುಂಜಯಾಯ ಸೋಮಶೇಖರ ಪ್ರಭವೇ ವಿಭವೇ ಶಿವಶಿವಾ ಶರಣು ಶರಣೆ'ಂಬುದೇ ವಾಚಕ. ಕ್ರಿಯಾಕಾಲದಲ್ಲಿ ಇತರವಾಗಿ ಒಬ್ಬರು ಕೇಳದ ಹಾಗೆ ತನ್ನ ಕಿವಿ ಕೇಳುವ ಹಾಗೆ ಶಿವ ಮಂತ್ರದಲ್ಲಿ ಸುಯಿಧಾನಿಯಾಗಿ ಪುನಃಶ್ಚರಣೆಯಾಗಿ ತ್ರಿಸಂಧ್ಯಾಕಾಲದಲ್ಲಿ ಬಿಡದೆ ಉಚ್ಚರಿಸುವುದೀಗ ಉಪಾಂಶಿಕ. ಈ ಮೂರು ಪ್ರಕಾರದಲ್ಲಿ ಶಿವಮಂತ್ರವ ಜಪಿಸಬೇಕು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಲದ ಕುಳಿವೊಂದು ಮುಖ; ಜಲದ ಕುಳಿವೊಂದು ಮುಖ; ರಕ್ತದ ಕುಳಿವೊಂದು ಮುಖ; ಕೀವಿನ ಕುಳಿವೊಂದು ಮುಖ; ಕ್ರಿಮಿಕೀಟಜಂತುಗಳು ತುಂಬಿಪ್ಪ ಕುಳಿವೊಂದು ಮುಖ; ವಾತ ಪಿತ್ಥ ಶ್ಲೇಷ್ಮ ಸರ್ವಾಂಗದಲ್ಲಿ ತುಂಬಿ ಸರ್ವತೋಮುಖವಾಗಿಪ್ಪುದು ನೋಡ. ಕಿವಿಯಲ್ಲಿ ಗುಗ್ಗೆ, ಕಣ್ಣಿನಲ್ಲಿ ಜಾರು, ಮೂಗಿನಲ್ಲಿ ಸುರಿವ ಸಿಂಬಳು, ಹಲ್ಲಿನಲ್ಲಿ ಕಿನಿಕೆ, ಉರದಲ್ಲಿ ಮಾಂಸದ ಗ್ರಂಥಿ, ಒಳಗೆ ಕರುಳ ಜಾಳಿಗೆ, ಅಮೇದ್ಯದ ಹುತ್ತ, ಹೊರಗೆ ಚರ್ಮದ ಹೊದಕೆ, ಈ ಹೆಣ್ಣು ರೂಪಿನ ಬಣ್ಣದ ಕಾಯದ ಕಂಡು ಕಣ್ಣುಗೆಟ್ಟು ಮನಮುಟ್ಟಿ ಮರುಳಾದಿರಲ್ಲ. ಮುಕ್ಕಣ್ಣ, ನಿನ್ನನರಿಯದ ಬರಿಯ ಬಣ್ಣದ ಹಿರಿಯರು ಭ್ರಮೆಗೊಂಬುದ ನೋಡಿ ನಾನು ಹೇಸಿ ಕಡೆಗೆ ತೊಲಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಡಕೆಯ ತುಂಬಿ ಪಾವಡೆಯ ಕಟ್ಟುವರಲ್ಲದೆ ಸರ್ವಾಂಗವನು ಸದಾಚಾರವೆಂಬ ಪಾವಡದಲ್ಲಿ ಕಟ್ಟುವರನಾರನೂ ಕಾಣೆನಯ್ಯ. ಬಾಯ ತುಂಬಿ ಪಾವಡೆಯ ಬಿಗಿಬಿಗಿದು ಕಟ್ಟುವರಲ್ಲದೆ ಮನದ ಬಾಯ ಅರುಹೆಂಬ ಪಾವಡೆಯಲ್ಲಿ ಕಟ್ಟುವರನಾರನು ಕಾಣೆನಯ್ಯ. ಮುಖ ತುಂಬಿ ಪಾವಡೆಯ ಕಟ್ಟುವರಲ್ಲದೆ ಮೂಗು ಹೋದವರಂತೆ ಭಾವ ತುಂಬಿ ನಿರ್ವಾಣವೆಂಬ ಪಾವಡೆಯ ಕಟ್ಟುವರನಾರನೂ ಕಾಣೆನಯ್ಯ. ಅಂಗ ಆಚಾರದಲ್ಲಿ ಸಾವಧಾನವಾಗದೆ, ಮನ ಅರುಹಿನಲ್ಲಿ ಸಾವಧಾನವಾಗದೆ, ಭಾವ ನಿರ್ವಾಣದಲ್ಲಿ ಸಾವಧಾನವಾಗದೆ, ಬರಿದೆ ಶೀಲವಂತರು ಶೀಲವಂತರೆಂದರೇನಯ್ಯ. ತನು ಮನ ಧನ ಅವಗುಣವೆಂಬ ಭವಿಯ ಕಳೆಯದೆ ಹೊರಗೆ ವ್ರತಿಗಳೆಂದರೆ ಆರು ಮಚ್ಚುವರಯ್ಯ? ಹುಚ್ಚರಿರಾ ಸುಮ್ಮನಿರಿ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಇವರ ಮೆಚ್ಚನು ಕಾಣಿರೋ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಂಡೆ ಬೋಳಾಗಿ, ಮೈ ಬತ್ತಲೆಯಾಗಿಪ್ಪವರ ಕಂಡರೆ ನಿರ್ವಾಣಿಗಳೆಂಬೆನೆ? ಎನ್ನೆನಯ್ಯ. ಅಖಂಡಿತವಾಗಿ ಮನ ಬೋಳಾಗಿ ಭಾವ ಬತ್ತಲೆಯಾಗಿರಬಲ್ಲರೆ ಅದು ನಿರ್ವಾಣವೆಂಬೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...