ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮವೇನು ಕಾಮಿಯೇ? ಕ್ರೋದ್ಥಿಯೇ? ಲೋಬ್ಥಿಯೇ? ಅಲ್ಲ ಕಾಣಿರಣ್ಣ. ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ ಕಾಣಿರಣ್ಣ. ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ? ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣ. ನಿಃಕಾಮಿ, ನಿಃಕ್ರೋದ್ಥಿ, ನಿರ್ಲೋಬ್ಥಿ, ನಿರ್ಮೋಹಿ, ನಿರ್ಮದ, ನಿರ್ಮತ್ಸರನಯ್ಯ. ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೇಪಕನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಯೋತಿಯ ತಮವೆಡೆಗೊಡಂತೆ ಚಂದ್ರಮನ ರಾಹುಎಡೆಗೊಂಡಂತೆ ನಿಧಾನವ ಸರ್ಪನೆಡೆಗೊಂಡಂತೆ ಅಂಬುದ್ಥಿಯ ಅನಲನೆಡೆಗೊಂಡಂತೆ ಮನವ ಮಾಯವಡೆಗೊಂಡು ನಿಮ್ಮ ನೆನಹ ನೆಲೆಗೊಳಲೀಯದೆ ಮರಣಕ್ಕೊಳಗುಮಾಡುತ್ತಿಪ್ಪುದಯ್ಯ. ಈ ತಮವ ಪರಿಹರಿಸಿ ಎನ್ನನುಳುಹಿಕೊಳ್ಳಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನಗಮ್ಯಂ ದೃಢಪ್ರಾಜ್ಞಂ ದೇವದೇವಂ ತ್ರಿಲೋಚನಂ ಮಹಾದೇವಂ ಮಹಾತ್ಮಾನಂ ಮಹಾಜ್ಞಾನ ಪರಾತ್‍ಪರಂ ಮಹಾಪಾಪಹರಂ ದೇವಂ ಮದ್ದೇವ ದೇವದೇವಂ ಹರ ಹರಾ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಲವೆ ಅಂಗವಾದ ಮಾಹೇಶ್ವರನಲ್ಲಿ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಭಕ್ತನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಮಾಹೇಶ್ವರಂಗೆ ಗುರುಲಿಂಗ ಸಂಬಂಧವಾಗಿ ಆ ಗುರುಲಿಂಗದಲ್ಲಿಯೆ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಗುರುಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿಯೆ ಬೆರಸಿ ಬೇರಿಲ್ಲದರಿಬಲ್ಲರೆ ಮಾಹೇಶ್ವರನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮವೇನು ಸಂಗಿಯೇ? ಭೂಭಾರಿಯೇ? ಸೀಮನೇ? ಉಪಾಧಿಕನೇ? ದೇಹಿಯೇ? ಮಲಿನನೇ? ಅನಿತ್ಯನೇ? ಅಲ್ಲ ಕಾಣಿರಯ್ಯ. ನಿಸ್ಸಂಗಿ; ನಿರಾಭಾರಿ; ನಿಸ್ಸೀಮ; ನಿರುಪಾಧಿಕ; ನಿರ್ದೇಹಿಯಯ್ಯ. ನಿರ್ಮಲ; ನಿತ್ಯ; ನಿರುಪಮ; ನಿರ್ಗುಣ; ನಿರಾಧಾರ; ನಿರಾಲಂಬ; ಸರ್ವಾಧಾರ ಸದಾನಂದಿಯೆ ಜಂಗಮದೇವನಯ್ಯ. ಆ ಜಂಗಮೆ ತಾನಾಗದೆ ಜಂಗಮ ಜಂಗಮವೆದು ನುಡಿದುಕೊಂಡು ನಡೆದರೆ ನಾಚದವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ? ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ? ಜಂಗಮಕ್ಕೆ ತಳಿಗೂಳ ತಳಿದು ತಾ ಗಂಗಳ ತುಂಬಿ ಒಟ್ಟಿಸಿಕೊಂಡು ಕೊಂಬನೆ ಪ್ರಸಾದಿ? ಪ್ರಸಾದಿಯಂತೆ ಪ್ರಪಂಚುಂಟೆ? ಕಕ್ಕುಲತೆಯಮಾಡಿ ಕೊಂಡನಾದರೆ ನಾಯಮಾಂಸ ತಿಂದ ಸಮಾನ ಕಾಣಿರೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜೀವ ಪವನನ ಬೆರಸಿದ ಪ್ರಾಣನ ನಿಲುವು ಹೊಗೆ ಸುತ್ತಿದ ಉರಿಯಂತಿದೆ ನೋಡಾ. ಹೊಗೆಯ ಕಳೆದು ಚಿದಾಗ್ನಿಯ ಬಲಗೊಳಬಲ್ಲರೆ ಜಗದೊಡೆಯ ತಾನು ತಾನಲ್ಲದೆ ಬೇರಿಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜೀವನ ಬುದ್ಧಿ ಪರಮನ ಬುದ್ಧಿಯಿರಬೇಕೆಂದೆಂಬರು, ಇದು ಶಿವಶರಣರ ಗುಣವೆ?, ಲೋಕದ ಅಜ್ಞಾನಿಗಳ ಗುಣವಲ್ಲದೆ?. ಎರಡು ಚಿತ್ತವುಳ್ಳವ ಭಕ್ತನೆ? ಎರಡು ಬುದ್ಧಿವುಳ್ಳವ ಮಹೇಶ್ವರನೆ? ಎರಡು ಅಹಂಕಾರವುಳ್ಳವ ಪ್ರಸಾದಿಯೆ? ಎರಡು ಮನವುಳ್ಳವ ಪ್ರಾಣಲಿಂಗಿಯೆ? ಎರಡರಿವುಳ್ಳವ ಶರಣನೆ? ಎರಡು ಭಾವವುಳ್ಳವ ಲಿಂಗೈಕ್ಯನೆ? ಎರಡೆರಡೆಂಬ ಜೀವಭಾವವನಳಿದು ಶಿವಭಾವಸಂಪನ್ನನಾದ ಏಕೋಭಾವಿ ನಿಮ್ಮ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮದ ಗುಣವನು, ಜಂಗಮದ ಭೇದವನು ಜಂಗಮದ ರೂಪವನು ಹೇಳಿಹೆ ಕೇಳಿರಣ್ಣ. ಜಂಗಮವೆಂದರೆ ಪರಮಜ್ಞಾನ ಸ್ವರೂಪನು. ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ] ಉಪಜೀವನಕನಲ್ಲ ಕಾಣಿರಣ್ಣ. ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ. ಸತ್ತು ಚಿತ್ತಾನಂದಭರಿತನು. ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೆ, ಜಂಗಮದೇವನೆಂದರಿಯಲು ಯೋಗ್ಯ ಕಾಣಿಭೋ. ಆ ಘನ ಚೈತನ್ಯವೆಂಬ ಜಂಗಮವ ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ? ಲಿಂಗವಿದ್ದಂಗದಲ್ಲಿ ಅಜ್ಞಾನವುಂಟೆ? ಅಜ್ಞಾನವಿಲ್ಲವಾಗಿ ಅಂಗವಿಕಾರವಿಲ್ಲ. ಅಂಗವಿಕಾರವಿಲ್ಲವಾಗಿ ಹೆಂಗಳಿಗೆ ಸೋಲರು, ಹೊಂಗಳಿಗೆಣಿಸರು ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನಜ್ಯೋತಿಯ ಉದಯ, ಭಾನು ಕೋಟಿಸೂರ್ಯರ ಬೆಳಗು ನೋಡಾ. ತನುತ್ರಯ, ಜೀವತ್ರಯ, ಅವಸ್ಥಾತ್ರಯಾದಿಯಾದ ಎಲ್ಲ ತೋರಿಕೆಯನೊಳಗೊಂಡು ಜ್ಯೋತಿ ಕರ್ಪುರವ[ನು] ನೆರೆದಂತಿದೆ ನೋಡಾ. ಷಡಾಧಾರಂಗಳಲ್ಲಿ ತೊಳಗಿ ಬೆಳಗಿ ಬ್ರಹ್ಮರಂಧ್ರದಲ್ಲಿ ವಿಶ್ರಾಂತಿಯನೆಯ್ದಿದ ಅಖಂಡ ಜ್ಞಾನಜ್ಯೋತಿ ನೋಡಾ. ಆ ಮಹಾಪ್ರಕಾಶದ ಬೆಳಗಿನೊಳಗೆ ಮಹವ ಕಂಡು ಮಹಕೆ ಮಹ, ಪರಕೆ ಪರವಾಗಿ, ಎನ್ನಿಂದನ್ಯವಾಗಿ ಮತ್ತೊಂದು ಪರವಿಲ್ಲದೆ, ನಾನೇ ಪರವಸ್ತುವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮ ಜಂಗಮವೆಂದರೇನೋ ಲಜ್ಜಾಭಂಡರಿರ? ಜಂಗಮವಂತೆ ಕಳಂಕಿಯೇ? ಅಪೇಕ್ಷಿಯೇ? ಅಶಕ್ತನೇ? ಪಾಶಜೀವಿಗಳ್ಲನ್ವೆಂತು ಜಂಗಮವೆಂಬೆನಯ್ಯ? ಜಂಗಮವೇನು ದೋಷಿಯೇ? ದುರ್ಗುಣಿಯೇ? ಅಸತ್ಯನೇ? ಅನಾಚಾರಿಯೇ? ಅಲ್ಲ ಕಾಣಿರಯ್ಯ. ಹೇಳ್ಲಿಹೆನ್ವು ಕೇಳಿ ನಿಃಕಳಂಕ, ನಿರಪೇಕ್ಷ, ನಿರಾಶಕ, ನಿರ್ದೋಷಿ, ನಿಃಪುರುಷ; ಸತ್ಯ, ದಯೆ, ಕ್ಷಮೆ, ದಮೆ, ಶಾಂತಿ, ಸೈರಣೆ, ಸಮಾಧಾನ ಸಂತೋಷ ಪರಿಣಾಮಿ. ನುಡಿ ತತ್ವ; ನಡೆ ಪಾವನ; ಸುಳುಹು ವಸಂತಗಾಳಿ. ಜಗದಾರಾಧ್ಯ, ಸ್ವಯ ಸ್ವತಂತ್ರ ಚರ ಪರಿಣಾಮಿ ಪರಿಪೂರ್ಣ ಪ್ರಕಾಶ. ಸರ್ವತತ್ವಾಶ್ರಯ. ಶೂನ್ಯ ನಿಶ್ಯೂನ್ಯ ನಿರಾಳನೇ ಜಂಗಮದೇವ ಕಾಣಿರೋ, ಕೇಳಿ[ರಯ್ವಾ], ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಘನವ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜೇನುತುಪ್ಪದಲ್ಲಿ ಬಿದ್ದು ಸಾವ ನೊಣನಂತೆ, ಕೀಳುಮಾಂಸದ ಸವಿಗೆ, ಗಂಟಲಗಾಣದಲ್ಲಿ ಸಿಕ್ಕಿ ಸಾವ ಮೀನಿನಂತೆ, ಹೀನವಿಷಯಕ್ಕೆ ನಚ್ಚಿ ಮಚ್ಚದಿರಾ ಎಲೆಲೆ ಹುಚ್ಚ ಮನವೇ. ಅಲ್ಪಸುಖಕ್ಕೆ ಮಚ್ಚಿ, ಅನಂತ ಭವಭಾರಕ್ಕೊಳಗಾಗಿ ದುರ್ಗತಿಗಿಳಿಯದಿರಯ್ಯ ಬೆಂದ ಮನವೇ. ಹರಹರಾ ಶಿವಶಿವಾಯೆಂಬುವದ ಮರೆಯದಿರು; ಮರೆದೊರಗದಿರು. ನಾಯ ಸಾವ ಸಾವೆ ಕಂಡಾ ಎಲೆಲೆಲೆ ಮನವೇ. ಈ ಮರುಳುತನವ ಬಿಟ್ಟು, ಎನ್ನೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿಗೆ ಶರಣು ಶರಣೆನ್ನಕಲಿಯಾ ಸುಖಿಯಾಗಬಲ್ಲರೆಲೆ[ಲೆಲೆ] ಮನವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು