ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಿಯಂಗಳುಳ್ಳನ್ನಕ್ಕರ ಪ್ರಾಣಂಗೆ ಬಂಧನ ಮಾಬುದೆ ಭವದುಃಖಿಗಳಿರೆ? ಇಂದ್ರಿಯಂಗಳನೆಲ್ಲವ ಲಿಂಗಸಂಧಾನವ ಮಾಡಬಲ್ಲರೆ ಪ್ರಾಣನ ಬಂಧನ ಬಿಟ್ಟು ಓಡುವುದು ನೋಡಾ. ಪ್ರಾಣಲಿಂಗವಾಗಿಯಲ್ಲದೆ ಪ್ರಳಯವ ಗೆಲಬಾರದು. ಪ್ರಳಯ ಪ್ರಳಯದ ಹಳೆಯರಾಗಿಪ್ಪವರ ಪ್ರಾಣಲಿಂಗಸಂಬಂದ್ಥಿಗಳೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗದ ಪೂಜೆಯಾವುದು, ಪ್ರಾಣಲಿಂಗದ ಪೂಜೆಯಾವುದು, ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು, ಅದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಇವು ಮೂರು ಲಿಂಗದ ಅರ್ಚನೆ. ಮೂರು ಲಿಂಗದ ಉಪಚಾರ. ಶಿವಾರ್ಥಿಗಳಾದ ವೀರಶೈವರುಗಳು ಮಾಡುವ ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇದು ಕಾರಣ, ದೇವಗುರು ನಿರೂಪಿಸಿದ ಷಡಕ್ಷರಮಂತ್ರವನಗಲ್ದು ಹುಟ್ಟಿ ಸಾವ, ಕೆಡುವ ಮಂತ್ರತಂತ್ರಯಂತ್ರಾದಿಗಳ ಕಲಿತು ಬದುಕಿಹೆನೆಂಬ ಕಾಳ್ವಿಚಾರವ ಬಿಡು ಗಡಾ ಮನುಜರಿರ. ``ಓಂ ನಮಃ ಶಿವಾಯ ಇತಿ ಮಂತ್ರಸ್ಸರ್ವ ಮಂತ್ರ್ರಾ ಸ್ಥಾಪಯೇತ್' ಎಂಬ ಬಿರಿದು ಕಾಣಿರೋ. ಎಲ್ಲ ಮಂತ್ರಕ್ಕೂ ಶಿವಮಂತ್ರವೇ ಗುರುವೆಂದರಿಯದೆ, ಅನ್ಯನಾಮವಿಡಿದು ಬಳಲುವ ಅನಾಚಾರಿಗಳ ಕಂಡಡೆ ಎನ್ನ ಮನ ನಚ್ಚದು ಮಚ್ಚದಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ, ಬಹಿರಂಗದಲ್ಲಿ ಅಂಗದ ಮೇಲೆ ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ. ಎಷ್ಟು ಅರುಹಾದರೂ ಅಂಗದಮೇಲೆ ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ; ಅದು ನಮ್ಮ ಪುರಾತನರ ಮತವಲ್ಲ. ಸಾಕ್ಷಾತ್ ಪರಮೇಶ್ವರನಾದರೂ ಆಗಲಿ, ಅಂಗದಮೇಲೆ ಲಿಂಗಧಾರಣವಿಲ್ಲದಿದ್ದರೆ, ಅವನ ಮುಖವ ನೋಡಲಾಗದು ಕಾಣ. ಅದೇನು ಕಾರಣವೆಂದರೆ: ಅದು ಶಿವಾಚಾರದ ಪಥವಲ್ಲದ ಕಾರಣ. ಗುರುಕರುಣದಿಂದ ಪಡೆದ ಲಿಂಗವ ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇದು ಕಾರಣ, ಸರ್ವಾಂಗೋದ್ಧೂಳನವೆ ಅದ್ಥಿಕ ನೋಡಾ. ಆತನ ರೋಮರೋಮಂಗಳೆಲ್ಲವು ಲಿಂಗಮಯ ನೋಡಾ. ಆತನು ಪವಿತ್ರಕಾಯನು ನೋಡಾ. ಆತನು ಸ್ವಯಂಜ್ಯೋತಿಸ್ವರೂಪನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ. ಆ ಪರಶಿವಸ್ವರೂಪಂಗೆ ನಮೋನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗದ ಮುಖವಾವುದು? ಪ್ರಾಣಲಿಂಗದ ಮುಖವಾವುದು? ಭಾವಲಿಂಗದ ಮುಖವಾವುದು ಎಂದರೆ ಹೇಳಿಹೆ ಕೇಳಿರಣ್ಣ: ಇಷ್ಟಲಿಂಗದ ಮುಖವೈದು: ಪ್ರಾಣ ವಾಯುಗಳ ಮುಖವನೆಯ್ದಿ ಪ್ರಾಣಲಿಂಗವೆನಿಸಿಕೊಂಡಿತ್ತು. ಭಾವವನೆಯ್ದಿ ಭಾವಲಿಂಗವೆನಿಸಿಕೊಂಡಿತ್ತು. ಒಂದೇ ಲಿಂಗ ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವ ರೂಪಕವಾಗಿಪ್ಪುದು. ಜೀವತ್ರಯಂಗಳಲ್ಲಿ ಮಂತ್ರ ಜ್ಞಾನ ಧ್ಯಾನ ರೂಪಕವಾಗಿಪ್ಪುದು. ಅವಸ್ಥಾನತ್ರಯಂಗಳಲ್ಲಿ ಸತ್ಕಿ ್ರಯಾಚರಣೆ ತದ್ವಾಸನೆ ತಲ್ಲೀಯ್ಯವಾಗಿಪ್ಪುದು. ಮಲತ್ರಯಂಗಳಲ್ಲಿ ಸ್ವಯ ಚರ ಪರ ರೂಪಕವಾಗಿಪ್ಪುದು. ಈಷಣತ್ರಯಂಗಳಲ್ಲಿ ಲಿಂಗ ಪ್ರೇಮರತಿಗೆ ಸಕಲಸಾಧನಂಗಳಾಗಿ ಮಾಯಾಭ್ರಾಂತಿಯನು ನಿಭ್ರಾಂತಿಯೆನಿಸಿ ಶುದ್ಧ ಪ್ರಭಾ ಪರಿಪೂರ್ಣ ಲಿಂಗ ತಾನೆ ಪ್ರಸನ್ನ ಪ್ರಸಾದ ರೂಪಕನಾಗಿರುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಚ್ಛಾಶಕ್ತಿ ತನ್ನ ಗರ್ಭದಲ್ಲಿ ಈರೇಳುಲೋಕವ ಹೆತ್ತಳು ನೋಡಾ. ಆ ಲೋಕಾಧಿಲೋಕಂಗಳೊಳಗೆ ತಾನೇಕಾಕಿಯಾಗಿ ಆ ಲೋಕದ ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗದೆ ನಿತ್ಯಳಾಗಿಪ್ಪಳು ನೋಡಾ. ಆ ಇಚ್ಛಾಶಕ್ತಿ ನಿಶ್ಚಿಂತನ ನೆರೆದು ನಿರಾಳವಾದುದು ತಾನೆಂದು ಕಂಡಾತನ[ನು] ಸರ್ವಜ್ಞ ಶರಣೆನೆಂಬೆನು. ಆತನ ಅಲ್ಲಮಪ್ರಭುವೆಂಬೆನು. ಆ ಪರಮ ನಿರಂಜನಪ್ರಭುವಿಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಂತೀ ಹಿಂದೆ ಹೇಳಿದ ವಸ್ತುವ ಬೇರಿಟ್ಟು ತಿಳಿಯಲಿಲ್ಲ. ನಿನ್ನಲ್ಲಿ ಉಂಟು ತಿಳಿದು ನೋಡಯ್ಯ ಮಗನೆ. ನಿನ್ನ ಪಿಂಡದ ಹೊರಗೆ ಭರಿತವಾಗಿ. ತಲೆದೋರದೆ, ಕಾಣಿಸಿಕೊಳ್ಳದೆ ಪಿಂಡಸ್ಥನಾಗಿ ಚಿದ್ರೂಪನದಾನೆ. ಈ ಪಿಂಡಸ್ಥಲದ ಭೇದವ ತಿಳಿಯೆಂದನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇವು ಮೂರೂ ನಿತ್ಯವಾದಡೆ, ಮಾಯೆಯೂ ಆತ್ಮನು ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗುತ್ತಿಪ್ಪವು ನೋಡಾ. ಶಿವನೆ ಉತ್ಪತ್ತಿ ಸ್ಥಿತಿ ಪ್ರಳಯರಹಿತನಾಗಿ ನಿತ್ಯನಾಗಿಪ್ಪನು ನೋಡಾ. ಇದು ಕಾರಣ, ಅನಿತ್ಯವಾದ ಪಶುಪಾಶಂಗಳ ನಿತ್ಯವೆಂಬುದು ಅದು ಅಜ್ಞಾನ ನೋಡಾ. ಶಿವಜ್ಞಾನೋದಯದಿಂದ ತಿಳಿದುನೋಡಿದರೆ, ಶಿವತತ್ವವೊಂದೇ ನಿತ್ಯವು; ಉಳಿದವೆಲ್ಲವು ಅನಿತ್ಯ ಕಾಣ. ಹೀಂಗೆಂದು ಕಂಡ ಕಾಣಿಕೆ ನೀನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗವ ತೋರಿ ನಾವು ನಿಷೆ*ವಾನರು, ನಾವು ಲಿಂಗಾಂಗಿಗಳೆಂದು ಹೊಟ್ಟೆಯ ತುಂಬಿಕೊಳಬಹುದಲ್ಲದೆ ಸರ್ವಾಂಗವನೂ ಲಿಂಗನಿಷೆ*ಯಲ್ಲಿ ಘಟ್ಟಿಗೊಳಿಸಬಾರದು ಕಾಣಿರಣ್ಣ. ಹೊಟ್ಟೆಯಾರ್ಥವುಳ್ಳವಂಗೆ ನಿಷೆ*ಯೆಲ್ಲಿಯದೊ? ನಿಷೆ* ಹೀನರಿಗೆ ನೀವು ಕನಸಿನೊಳಗೂ ಇಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಬ್ಬರಿಗೊಬ್ಬ ಮಗ ಹುಟ್ಟಿ ಅವನೊಬ್ಬನಿಗೈವರು ಹೆಂಡಿರು ನೋಡಾ. ಸವತಿ ಮಚ್ಚರವ ಬಿಟ್ಟು ತಮ್ಮ ತಮ್ಮ ಭಾವದಲ್ಲಿ ನೆರೆವರು ನೋಡಾ. ಆಯ್ವರ ಕೂಟದಲ್ಲಿ ಮೈಮರೆದಿದ್ದುದ ಕಂಡು ಮೇಲೊಬ್ಬ ಸತಿ ಬಂದು ನೆರೆಯಲು ಐವರ ಮನವಾರ್ತೆ ಕೆಟ್ಟು ಆಕೆಯ ಸಂಗದಿಂದ ಸೈವೆರಗಾಗಿ ಸರ್ವ ನಿರ್ವಾಣಿಯಾದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇದು ಕಾರಣ, ಎನ್ನ ಮಾನಸ ನಿಮ್ಮುವನೆ ನೆನೆವುತಿಪ್ಪುದು. ಎನ್ನ ವಾಚಕ ನಿಮ್ಮುವನೆ ಕೀರ್ತಿಸುತಿಪ್ಪುದು. ಎನ್ನ ಕಾಯಕ ಷಟ್‍ಕರ್ಮಂಗಳನೆಲ್ಲ ಮರೆದು ಶಿವಲಿಂಗಕೃತ್ಯವನೆ ಮಾಡುತಿಪ್ಪುದು ನೋಡಾ. ಈ ಭಾಷೆ ಮನ ಮನತಾರ್ಕಣೆಯಾಗಿ ಹುಸಿಯಲ್ಲ. ತನಗಿಲ್ಲದುದನುಂಟುಮಾಡಿಕೊಂಡು ಹುಸಿವನೇ ಶಿವಶರಣ? ಅದಲ್ಲ ಬಿಡು. ಎನ್ನ ಜಾಗರ ಸ್ವಪ್ನ ಸುಷುಪ್ತಿಯೊಳು ಶಿವ ಶಿವಾ ಶಿವ ಶಿವಾಯೆಂದು ಭವಭಾರವ ನೀಗಿ ನಾನು ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಹಲೋಕದಲ್ಲಿ ಲಿಂಗವ ಪೂಜಿಸಿ ಪರಲೋಕದ ಪದವಿಯ ಬಯಸುವನಲ್ಲ ನೋಡಾ. ಇಹಪರವನೊಳಕೊಂಡ ಪರಿಪೂರ್ಣಲಿಂಗವು ತನ್ನ ಸರ್ವಾಂಗದಲ್ಲಿ ಸನ್ನಿಹಿತವಾಗಿರಲು ಆ ಲಿಂಗದಲ್ಲಿ ತನ್ನಂಗವ ಬೆರಸಿ ಆ ಶುದ್ಧ ಪರಮಾತ್ಮಲಿಂಗವೇ ಗೂಡಾಗಿಪ್ಪ ಲಿಂಗನಿಷ*ನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಂತು ಕ್ರೀಯಿಲ್ಲದೆ ಜ್ಞಾನ ಪ್ರಯೋಜನವಿಲ್ಲ; ಜ್ಞಾನವಿಲ್ಲದೆ ಕ್ರೀ ಪ್ರಯೋಜನವಿಲ್ಲವಯ್ಯ ಅದು ಹೇಂಗೆಂದರೆ: ದೇಹವಿಲ್ಲದೆ ಪ್ರಾಣಕ್ಕೆ ಆಶ್ರಯವುಂಟೆ ಅಯ್ಯ? ಪ್ರಾಣವಿಲ್ಲದೆ ಕಾಯಕ್ಕೆ ಚೈತನ್ಯವುಂಟೆ ಅಯ್ಯ? ಕ್ರೀಯಿಲ್ಲದೆ ಜ್ಞಾನಕ್ಕೆ ಆಶ್ರಯವಿಲ್ಲ. ಜ್ಞಾನವಿಲ್ಲದೆ ಕ್ರೀಗೆ ಆಶ್ರಯವಿಲ್ಲ. ಕ್ರಿಯಾಜ್ಞಾನಪ್ರಕಾಶವಿಲ್ಲದೆ ಲಿಂಗಕ್ಕಾಶ್ರಯವಿಲ್ಲ. ಇದು ಕಾರಣ, ಜ್ಞಾನ ಸತ್ಕಿ ್ರಯೋಪಚಾರವಿರಬೇಕೆಂದಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ: ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ವಾಯುವೇ ಅಂಗವಾದ ಪ್ರಾಣಲಿಂಗಿಯು ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ ಮಹಾಲಿಂಗಕ್ಕೆ ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಈ ಅರ್ಪಿತ ಅವಧಾನದ ಭೇದವನರಿದು ಭೋಗಿಸುವ ಭೋಗವಲ್ಲವು ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ; ಅನಪಿರ್ತವೇ ಕರ್ಮದ ತವರುಮನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗ ಪ್ರಾಣಲಿಂಗವೆನುತಿಪ್ಪರು. ಇಷ್ಟಲಿಂಗ ಪ್ರಾಣಲಿಂಗದ ಸುದ್ಧಿಯನಾರುಬಲ್ಲರಯ್ಯ? ಇಷ್ಟಲಿಂಗವನರಿದರೆ ಅನಿಷ್ಟ ಪರಿಹರವಾಗಿರಬೇಕು ನೋಡಾ. ಪ್ರಾಣಲಿಂಗವನರಿದರೆ ಪ್ರಪಂಚು ನಾಸ್ತಿಯಾಗಿರಬೇಕು ನೋಡಾ. ಇಷ್ಟವು ಪ್ರಾಣವು ಒಂದೆಯೆಂದರಿದು ಒಡವೆರಸಿದ ಬಳಿಕ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿವಿಧಾವಸ್ಥೆಯಲ್ಲಿ ಲಿಂಗವಲ್ಲದೆ ಮತ್ತೇನು ತೋರಲಾಗದು ನೋಡಾ. ಆ ಮಹಾತ್ಮನು ಸರ್ವಾಂಗಪ್ರಾಣಲಿಂಗಮೂರ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗಕ್ಕೆ ಕೊಡದೆ, ಪ್ರಾಣಲಿಂಗಾರ್ಪಿತವ ಮಾಡುವ ಪ್ರಪಂಚಿಗಳಿರ, ಅಂಗದ ಮೇಲಿದ್ದುದು ಲಿಂಗವಲ್ಲವೆ? ಪ್ರಾಣವೆ ಲಿಂಗವಾದರೆ, ಆ ಇಷ್ಟಲಿಂಗವೇತಕ್ಕೆ? ತೆಗೆದೇಕೆ ಬಿಡಿರಿ? ಆ ಲಿಂಗವನೆ ಬಿಡಬಾರದಂತೆ ಆ ಲಿಂಗಾರ್ಪಿತವಿಲ್ಲದೆ ಉಣಬಹುದೆ? ತಥಾಪಿ ಉಂಡಿರಿಯಾದರೆ, ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ. ಶಿವಾರ್ಪಣವಿಲ್ಲದೆ ಬಾಯಿಗೆ ಬಂದಂತೆ ತಿಂಬ ಅನಾಮಿಕರ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಂದ್ರಿಯಂಗಳಿಗೊಂದೊಂದು ಮಾತ ಕಲಿತು ಬಹಳವ ಬಲ್ಲೆವು, ಬ್ರಹ್ಮಜ್ಞಾನಿಗಳೆಂದು ನುಡಿದುಕೊಂಡು ನಡೆಯಬಲ್ಲರಲ್ಲದೆ, ಸಾವನರಿದಿಹೆನೆಂದರೆ ದೇವತಾದಿಗಳಿಗಳವಲ್ಲ ಕಾಣಿರಣ್ಣ. ದೇವರಮೂರ್ತಿಯ ಭಾವದಲ್ಲಿ ಕಂಡಲ್ಲದೆ ಭವದುಃಖ ಹಿಂಗವು ನೋಡ. ಭವದುಃಖ ಹಿಂಗಿಸದೆ ಶಿವಾನುಭವವೇಕೆ ಹೇಳಿರೇ? ಹುಸಿಯನೇ ಹೊಸೆದು, ಪಸೆಯನೇ ಕೊಚ್ಚಿ ಪಶುಪತಿಯ ಅನುಭಾವಿಗಳೆಂದು ಪ್ರಳಯಕ್ಕೊಳಗಾಗಿ ಹೋದರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಿವಕ್ಕೆ ಅರ್ಪಿತಮುಖಂಗಳ ಹೇಳಿಹೆನು: ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಈ ಐದು ಲಿಂಗವೂ ಆಚಾರಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ- ಈ ಐದು ಲಿಂಗವು ಗುರುಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ- ಈ ಐದು ಲಿಂಗವು ಶಿವಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ- ಈ ಐದು ಲಿಂಗವು ಜಂಗಮಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ- ಈ ಐದು ಲಿಂಗವು ಪ್ರಸಾದಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ- ಈ ಐದು ಲಿಂಗವು ಮಹಾಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಹೀಂಗೆ ಅಂಗಮುಖಂಗಳಲ್ಲಿಯೂ ಲಿಂಗವೇ ಮುಖವಾಗಿಪ್ಪ ಭೇದವನರಿಯಲುಬೇಕಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಪ್ಪತ್ತೆ ೈದುಧರೆಯೊಳಗೆ ಮುಪ್ಪುರವಿಪ್ಪುದ ಕಂಡೆನಯ್ಯ. ಮುಪ್ಪುರದೊಳಗೆ ಸಪ್ತಸಾಗರ ಸುತ್ತಿ ಹರಿದು ಸರ್ವರ ತಲೆಯನೆತ್ತಲೀಸದು ನೋಡ. ಸಪ್ತಸಾಗರವನೊಂದು ಕಪ್ಪೆ ಕುಡಿದು ಸಪ್ತಸಾಗರವರತು ಕಪ್ಪೆ ಸತ್ತು, ಇಪ್ಪತ್ತೆ ೈದು ಧರೆಯಳಿದು ಮುಪ್ಪುರ ಬೆಂದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗಾರ್ಪಣವಾವುದು, ಪ್ರಾಣಲಿಂಗಾರ್ಪಣವಾವುದು, ಭಾವಲಿಂಗಾರ್ಪಣವಾವುದುಯೆಂದರೆ ಹೇಳಿಯೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಶರೀರವೆ ಸಮರ್ಪಣ. ಪ್ರಾಣಲಿಂಗಕ್ಕೆ ಮನವೆ ಸಮರ್ಪಣ. ಭಾವಲಿಂಗಕ್ಕೆ ತೃಪ್ತಿಯೆ ಸಮರ್ಪಣ. ಶರೀರವೆಂದರೆ ರೂಪು, ಮನವೆಂದರೆ ರುಚಿ, ತೃಪ್ತಿಯೆಂದರೆ ಸಂತೋಷ. ಈ ತೆರನನರಿದು ಲಿಂಗಕ್ಕೆ ಸಮರ್ಪಿಸಿ ಪ್ರಸಾದವ ಭೋಗಿಸಬಲ್ಲಾತನೇ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು