ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ. ಚೆನ್ನಬಸವಣ್ಣನ ಪ್ರಸಾದದಿಂದ ಷಟ್‍ಸ್ಥಲಜ್ಞಾನಸಂಪನ್ನನಾದೆನಯ್ಯ. ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ ಎನ್ನ ಸ್ವರೂಪವೆಂದರಿದು ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ. ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ. ಮಹಾದೇವಿಯಕ್ಕಗಳ ಪ್ರಸಾದದಿಂದ ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ ನಿರ್ವಾಣಪದದಲ್ಲಿ ನಿಂದೆನಯ್ಯ. ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ ಹಡೆದೆನಯ್ಯ. ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ ವೀರಮಾಹೇಶ್ವರನಾದೆನು ನೋಡಾ. ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ ಪರಮಪ್ರಸಾದದಿಂದ ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ ಕರಣೇಂದ್ರಿಯಂಗಳ ಕಳೆದುಳಿದು ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ. ನಿಮ್ಮ ಶರಣರ ಪ್ರಸಾದದಿಂದ ನಾನು ಪ್ರಸಾದಿಯಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮವೆನಲು ಪರಬ್ರಹ್ಮವೆನಲು ಪರಮನೆನಲು ಪರಮೇಶ್ವರನೆನಲು ಪರಮಾತ್ಮನೆನಲು ಪರತತ್ವವೆನಲು ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು. ಪರಶಿವನೆಂದರೆ ಪರಮಾತ್ಮ. ಪರಮಾತ್ಮನೆಂದರೆ ಮಹಾಲಿಂಗ. ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು. ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು. ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು. ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು. ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು. ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು. ಒಂದನೊಂದ ಕೂಡಿಹವು. ಇಂತೀ ಷಟ್‍ಸ್ಥಲವೂ ಏಕವೆಂದರಿವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಹು ಜನಂಗಳು ಹೇತ ಹೇಲ ಹಂದಿ ತಿಂದು ತನ್ನ ಒಡಲ ಹೊರೆವುದಯ್ಯ. ತಾ ಹೇತ ಹೇಲ ಮರಳಿ ಮುಟ್ಟದು ನೋಡಾ. ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ ಆ ಭವಿಯ, ನಂಟರು ಹೆತ್ತವರು ಬಂಧುಗಳೆಂದು ಬೆರಸಿದರೆ ಆ ಹಂದಿಗಿಂದಲೂ ಕರ ಕಷ್ಟ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ ಮೈಯೆಲ್ಲಾ ಮುಳ್ಳು, ಮುಖವೀರೈದು ನೋಡಾ. ಬಣ್ಣಜ ಮಡಕೆಯನೊಡೆದು ಹೆಣ್ಣನ ಮೈಯ ಮುಳ್ಳನೆಲ್ಲಾ ಮುರಿದು ಮುಖವೀರೈದ ಕೆಡಿಸಿದನು ನಿರ್ಮಲ ನಿರಾವರಣ ಶರಣನು. ಆ ಶರಣಂಗೆ ನಮೋ ನಮೋಯೆಂಬೆನು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಿಂದುಮಾಯಿಕವಿಲ್ಲದಂದು ಮೂವತ್ತಾರುತತ್ವಂಗಳುತ್ಪತ್ತಿಯಾಗದಂದು, ತತ್ ಪದ ತ್ವಂ ಪದ ಅಸಿ ಪದವೆಂಬ ಪದತ್ರಯಂಗಳಿಲ್ಲದಂದು, ತತ್ ಪದವೆ ಲಿಂಗ, ತ್ವಂ ಪದವೆ ಅಂಗ, ಅಸಿ ಪದವೆ ಲಿಂಗಾಂಗಸಂಯೋಗ. ಈ ಅಂಗ ಲಿಂಗ ಸಂಬಂಧವೆಂದು, ಈ ತತ್ವಮಸ್ಯಾದಿ ವಾಕ್ಯಾರ್ಥವಿಲ್ಲದಂದು, ಅಲ್ಲಿಂದತ್ತತ್ತ ನೀನು ಪರಾತ್ಪರನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮರಂಧ್ರದಲ್ಲಿ ಅನಾದಿಗಣೇಶ್ವರನೆನಿಸಿ, ಸರ್ವತೋಮುಖ[ವಾ]ಗಿಪ್ಪಿರಯ್ಯ. ಲಲಾಟದಲ್ಲಿ ಆದಿಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕರ್ಣದಲ್ಲಿ ಆತ್ಮಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕರ್ಣದಲ್ಲಿ ಆಧ್ಯಾತ್ಮಗಣೇಶ್ವರನೆನಿಸಿಪ್ಪಿರಯ್ಯ. ಬಲದ ನಯನದಲ್ಲಿ ನಿರ್ಮಾಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ನಯನದಲ್ಲಿ ನಿರ್ಮಲನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಸಿಕದಲ್ಲಿ ನಿರ್ಭಯನೆಂಬ ಗಣೇಶ್ವರನೆನೆಸಿಪ್ಪಿರಯ್ಯ. ಜಿಹ್ವೆಯಲ್ಲಿ ನಿರ್ಭಾವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬೆನ್ನಿನಲ್ಲಿ ಪಂಚವದನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಂಠದಲ್ಲಿ ಜ್ಞಾನಾನಂದನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಭುಜದಲ್ಲಿ ಅಕ್ಷಯನೆಂಬ ಗಣೇಶ್ವರನೆಸಿಪ್ಪಿರಯ್ಯ. ಎಡದ ಭುಜದಲ್ಲಿ ವ್ಯೋಮಸಿದ್ಧನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೋಳಿನಲ್ಲಿ ಸದಾಶಿವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೋಳಿನಲ್ಲಿ ಶೂಲಪಾಣಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮುಂಗೈಯಲ್ಲಿ ಭಾಳಲೋಚನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮುಂಗೈಯಲ್ಲಿ ಪಶುಪತಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಬರಿಯಲ್ಲಿ ಭವಹರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಬರಿಯಲ್ಲಿ ಮೃಡನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಹೃದಯದಲ್ಲಿ ಓಂಕಾರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಭಿಯಲ್ಲಿ ಶಂಕರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಟಿಯಲ್ಲಿ ಮೃತ್ಯುಂಜಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಗುಹ್ಯದಲ್ಲಿ ಕಾಮಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಗುಧಸ್ಥಾನದಲ್ಲಿ ಕಾಲಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೊಡೆಯಲ್ಲಿ ಪ್ರಮಥನಾಥನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೊಡೆಯಲ್ಲಿ ಮಹಾಮಹೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮಣಿಪಾದದಲ್ಲಿ ಪಟ್ಟವರ್ಧನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮಣಿಪಾದದಲ್ಲಿ ಚಂದ್ರಶೇಖರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕಣಪಾದದಲ್ಲಿ ಅಖಂಡಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕಣಪಾದದಲ್ಲಿ ವ್ಯೋಮಕೇಶನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಹರಡಿನಲ್ಲಿ ಜನನ ವಿರಹಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಹರಡಿನಲ್ಲಿ ವಿಶ್ವೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮೇಗಾಲಲ್ಲಿ ಮೇಘವಾಹನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮೇಗಾಲಲ್ಲಿ ಈಶಾನ್ಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಉಂಗುಷ*ದಲ್ಲಿ ಮಣಿಭೂಷಣನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಉಂಗುಷ*ದಲ್ಲಿ ವಿರೂಪಕ್ಷನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಆರೆಪಾದದಲ್ಲಿ ಊಧ್ರ್ವಮುಖನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಅರೆಪಾದದಲ್ಲಿ ಸಚರಾಚರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಆಧಾರಸ್ಥಾನದಲ್ಲಿ ಆಚಾರಲಿಂಗವೆನಿಸಿಪ್ಪಿರಯ್ಯ. ಸ್ವಾಧಿಷಾ*ನದಲ್ಲಿ ಗುರುಲಿಂಗವೆನಿಸಿಪ್ಪಿರಯ್ಯ. ಮಣಿಪೂರಕದಲ್ಲಿ ಶಿವಲಿಂಗವೆನಿಸಿಪ್ಪಿರಯ್ಯ. ಅನಾಹತದಲ್ಲಿ ಜಂಗಮಲಿಂಗವೆನಿಸಿಪ್ಪಿರಯ್ಯ. ವಿಶುದ್ಧಿಯಲ್ಲಿ ಪ್ರಸಾದಲಿಂಗವೆನಿಸಿಪ್ಪರಯ್ಯ. ಆಜ್ಞಾಯಲ್ಲಿ ಮಹಾಲಿಂಗವೆನಿಸಿಪ್ಪಿರಯ್ಯ. ಇಂತಿವೆಲ್ಲಾ ನಾಮಂಗಳನೊಳಕೊಂಡು, `ಓಂ ನಮಃ ಶಿವಾಯ ಇತಿಮಂತ್ರಂ ಸರ್ವಮಂತ್ರಾನ್ ಸ್ಥಾಪಯೇತ್. ಮಂತ್ರಮೂರ್ತಿ ಮಹಾರುದ್ರಂ, ಓಂ ಇತಿ ಜ್ಯೋತಿರೂಪಕಂ' ಎನಿಸಿಕೊಂಡು ಬಾಹ್ಯಾಭ್ಯಂತರದೊಳು ಪರಿಪೂರ್ಣವಾಗಿ ಪ್ರಕಾಶಿಸುತ್ತಿಪ್ಪಿರಿಯಾಗಿ ಸರ್ವಾಂಗವು ಲಿಂಗಮಯವೆಂದರಿದು ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸುತಿಪ್ಪೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ ಪಂಚಾಧಿದೇವತೆಗಳಿಲ್ಲದಂದು, ಈ ಪಂಚೈವರ ಲಯ ಗಮನಂಗಳಿಗೆ ಕಾರಣವಾದ ಶಿವಶಕ್ತಿಗಳಿಲ್ಲದಂದು, ಈ ಶಿವ ಶಕ್ತಿಗಳಿಗೆ ಕಾರಣವಾದ ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣವೆಂಬ ನಿಃಕಲತತ್ವವಿಲ್ಲದಂದು, ನೀನು ಶೂನ್ಯನಾಗಿರ್ದೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಯಲ ಮೂರ್ತಿ ಮಾಡಿ, ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು. ಬಯಲಮೂರ್ತಿಯ ಅಮೂರ್ತಿಯ ಮಾಡಿ, ಎನ್ನ ಪ್ರಾಣದೊಳಗಿರಿಸಿದನಯ್ಯ ಶ್ರೀಗುರು. ಬಯಲು ಬಯಲನೆ ಬೆರಸಿ ಬಯಲೆಂದೆನಿಸಿ ಎನ್ನ ಭಾವದೊಳಗಿರಿಸಿದನಯ್ಯ ಶ್ರೀಗುರು. ಇದು ಕಾರಣ, ಎನ್ನ ಕರಸ್ಥಲ ಮನಸ್ಥಲ ಭಾವಸ್ಥಲದಲ್ಲಿ ನಿಮ್ಮಧರಿಸಿ ನಾನು ಅಂಗಲಿಂಗ ಸಂಬಂಧಿಯಾದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಿಂದಿನ ಕೊಡನ ಹೊತ್ತಾಡುವ ಅಂಗನೆಯ ಒಂದಾಗಿ ಹುಟ್ಟಿದರೈವರು ಸ್ತ್ರೀಯರು. ಚಂದ ಚಂದದ ಮನೆಯ ರಚಿಸಿ ಅಲ್ಲಿ ಸರ್ವರ ಒಂದುಗೂಡುವುದ ಕಂಡೆನಯ್ಯಾ. ಬಿಂದಿನ ಕೊಡ ತುಳುಕಿ ಚಂದ್ರಾಮೃತವೊಗಲು ಚಂದಚಂದದ ಮನೆಯಳಿದು ಒಂದಾಗಿ ಹುಟ್ಟಿದವರೈವರು ಒಬ್ಬನ ನೆರೆದು ನಿಬ್ಬೆರಗಾದುದ ಕಂಡು ನಾನು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ ನಿಭ್ರಾಂತನ ನೆಮ್ಮಿ ತೋರಿದ ಲೀಲಾಸೂತ್ರ ಮಾತ್ರದಿಂದ ನೀನು ಹಲವಾದುದ ನಾನು ಕಂಡೆನಯ್ಯ. ಲೀಲಾಸೂತ್ರ ಮಾತ್ರದ ಕಾಲ ಕಾಲ ಕೀಲನು ಕಳೆದು ಮುನ್ನಿನ ನಿಭ್ರಾಂತನ ನೆರೆದು ನಿತ್ಯ ನಿರಂಜನ ಶಿವಯೋಗಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬೂದಿಯಲ್ಲಿ ಹೊರಳುವ ಕತ್ತೆಯಂತೆ, ಎಲುವ ಕಡಿವ ಶ್ವಾನನಂತೆ, ಹಾತೆಯ ತಿಂಬ ಹಲ್ಲಿಯಂತೆ, ಕಿಚ್ಚ ಹಾಯುವವಳಂತೆ ಒಚ್ಚಿ ಹೊತ್ತಿನ ಭೋಗಕ್ಕೆ ಮಚ್ಚಿ ಹುಚ್ಚಾದಿರಿಯಲ್ಲ ಮೃತ್ಯುಂಜಯನನಪ್ಪದೆ ಮೃತ್ಯುವಿನ ಬಾಯತುತ್ತಾದವರ ಕಂಡು ನಗುತ್ತಿದ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮರಂಧ್ರವೆಂ[ಬುದು]ಉತ್ತರೋತ್ತರ ಕೇತಾರವಯ್ಯ. ಭ್ರೂಮಧ್ಯವೆಂಬ ಶ್ರೀಶೈಲ; ಹೃದಯ ಕಮಲಕರ್ಣಿಕಾವಾಸವೆನಿಸುವ ಕಾಶಿ ಕಾಣಿಭೋ. ಬ್ರಹ್ಮರಂಧ್ರದಲ್ಲಿ ಗುರುಸ್ವಾಯತ; ಭ್ರೂಮಧ್ಯದಲ್ಲಿ ಲಿಂಗಸ್ವಾಯತ; ಹೃದಯಕಮಲಕರ್ಣಿಕಾವಾಸದಲ್ಲಿ ಪರಮ ಜಂಗಮಲಿಂಗಸ್ವಾಯತ. ಈ ಲಿಂಗಗಳು ಇದ್ದಲ್ಲಿಯೇ ಸಮಸ್ತ ಲಿಂಗಂಗಳಿರ್ಪವು. ಅಲ್ಲಿಯೇ ಸಮಸ್ತ ತೀರ್ಥಯಾತ್ರೆಗಳಿಪ್ಪವು. ಸಮಸ್ತ ಕ್ಷೇತ್ರಂಗಳು ಅಲ್ಲಿಯೇ ಇಪ್ಪವು. ಗತಿಪಥ ಮುಕ್ತಿಯೂ ಅಲ್ಲಿಯೇ ಇಪ್ಪವು. ಹೀಂಗೆ ತನ್ನ ಒಳಹೊರಗೆ ಭರಿತವಾಗಿಪ್ಪ ಲಿಂಗವ ತಾ ಕುರುಹನರಿಯದೆ, ಅನ್ಯಲಿಂಗದಲ್ಲಿ ವರವ ಹಡದೆನೆಂಬ ಕುನ್ನಿಗಳನೊಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮ ವಿಷ್ಣುಪದವೆಂಬುವು ಒಂದು ತೃಣ ನೋಡಾ, ನಿಮ್ಮ ಮಾಹೇಶ್ವರಂಗೆ. ಇಂದ್ರಾದಿ ದಿಕ್ಪಾಲಕರ ಭೋಗ ಒಂದು ತೃಣ ನೋಡಾ, ನಿಮ್ಮ ಮಾಹೇಶ್ವರಂಗೆ, ತ್ರಿಭುವನಸಂಪದ ಒಂದು ಕಿಂಚಿತ್ತು ನೋಡಾ, ನಿಮ್ಮ ಮಾಹೇಶ್ವರಂಗೆ, ದೀಕ್ಷೆಯೆಂಬುವುದಿಲ್ಲ ನೋಡಾ, ದಿವ್ಯಜ್ಞಾನಿ ತಾನಾಗಿ. ಶಿಕ್ಷೆಯೆಂಬುವುದಿಲ್ಲ ನೋಡಾ, ವಿಷಯಂಗಳು ತನ್ನ ವಶಗತವಾದವಾಗಿ. ಮೋಕ್ಷವೆಂಬುವುದಿಲ್ಲ ನೋಡಾ, ನಿತ್ಯ ಮುಕ್ತ ತಾನಾಗಿ. ಮಾಯಾ ಮೋಹ ರಹಿತ ನಿಮ್ಮ ನೆನಹೆ ಪ್ರಾಣವಾಗಿ ನಾನು ಮಾಹೇಶ್ವರನಾದುದ ಏನ ಹೇಳುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ. ವಿಷ್ಣುಪದವ ಪಡೆದೆನೆಂಬುದು ತೃಷ್ಣೆ ಕಾಣಿರೋ. ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ ಮರುಳು ಮಾನವರಿರಾ. ದೇವಾತಾದಿಭೋಗಂಗಳ ಪಡೆದಿಹೆನೆಂದು ಪರಿಣಾಮಿಸುವ ಗಾವಿಲರನೇನೆಂಬೆನಯ್ಯ? ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ. ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ. ಅದೇನು ಕಾರಣವೆಂದರೆ: ಇವೆಲ್ಲವೂ ಅನಿತ್ಯಪದವಾದ ಕಾರಣ. ಇವೆಲ್ಲ ಪದಂಗಳಿಗೂ ಮೇಲಾದ ಮಹಾಲಿಂಗ ಪದವೇ ನಿತ್ಯತ್ವಪದ. ಆ ಮಹಾಲಿಂಗ ಪದದೊಳಗೆ ಸಂಯೋಗವಾದ ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ ಒಂದು ವಸ್ತುವ ಬಲ್ಲನೇ ಅನನ್ಯ ಶರಣನು? ಇದು ಕಾರಣ, ತನುವ ಬಳಲಿಸಿ ತಪವಮಾಡಿ ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ ಹಂದಿ ತಪವಮಾಡಿ ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ. ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಿಂದುಶೂನ್ಯವಾದ ಲಿಂಗವೇ ಅಂಗವಾಗಿ, ಕಾಯಶೂನ್ಯನಯ್ಯ ಭಕ್ತನು. ನಾದಶೂನ್ಯವಾದ ಜಂಗಮವೆ ಪ್ರಾಣವಾಗಿ, ಪ್ರಾಣಶೂನ್ಯನಯ್ಯ ಅನಾದಿಭಕ್ತನು. ತನ್ನಂಗಸ್ವರೂಪವಪ್ಪ ಲಿಂಗಕ್ಕೆ ತನ್ನ ಪ್ರಾಣಸ್ವರೂಪವಪ್ಪ ಪರಮ ಚೈತನ್ಯಜಂಗಮದ ಪ್ರಸನ್ನ ಪ್ರಸಾದವೇ ಆ ಲಿಂಗಕ್ಕೆ ಪ್ರಾಣಕಳೆ ನೋಡಾ. ಆ ಲಿಂಗದ ಪ್ರಾಣಕಳೆಯ ಆ ಜಂಗಮಕ್ಕೆ ಪದಾರ್ಥವ ಮಾಡಿ ಸಮರ್ಪಿಸಿ, ಆ ಘನ ಚೈತನ್ಯವೆಂಬ ಪರಮ ಜಂಗಮಲಿಂಗದ ಪರಿಣಾಮ ಪ್ರಸಾದಿಯಯ್ಯ ಭಕ್ತನು. ಲಿಂಗ ಜಂಗಮ ಪ್ರಸಾದ ಭಕ್ತ ಇಂತೀ ಚತುರ್ವಿಧವು ಒಂದಾಗಿ ನಿಂದ ನಿಲವು ನೀನೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು