ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನಂತರಂಗದೊಳಗಣ ಆತ್ಮಲಿಂಗ, ಅನಂತ ಜ್ಯೋತಿಯಂತಿಪ್ಪುದು ನೋಡಾ. ಬಹಿರಂಗದಲ್ಲಿ ನವರತ್ನದಂತಿಪ್ಪುದಯ್ಯ. ತಿಂಗಳ ಸೂಡಿದಭವನು ಭವಭಂಗಿತರಿಗಾರಿಗೂ ಗೋಚರಿಸನು ಕಾಣ. ಲಿಂಗನಿಷ್ಠಾಂಗಿಗಳಿಗೆ ಮಂಗಳಮಯನಾಗಿ ತೋರ್ಪನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ತನುವಿಕಾರದ ಭಯ, ಎನ್ನ ಮನವಿಕಾರದ ಭಯ, ತನುಮನವನಂಡಲೆವ ಧನವಿಕಾರದ ಭಯ ನೋಡಾ. ಹಗಲು ಹಸಿವಿನ ಚಿಂತೆ, ಇರುಳು ವಿಷಯದ ಚಿಂತೆ; ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ ಸದಾ ಶಿವನ ಧ್ಯಾನತತ್ಪರನಾಗಿ ಶಿವತತ್ವವಿಚಾರದೊಳಗೆ ಇರಲೊಲ್ಲೆನು ನೋಡಾ. ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ ಸ್ವಾನನ ವಿದ್ಥಿಯಂತಾಯಿತ್ತಯ್ಯ. ಅಮೃತಮಯ ಲಿಂಗಸಂಗವನೊಲ್ಲದೆ ಸಂಸಾರಸಂಗಕ್ಕೆ ಮಯ್ಯಾನುವ ಮರುಳುಮನವೆ ನಿನ್ನ ನಾನೇನೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು, ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ, ಭವಹರ, ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು, ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ! ಎಲ್ಲರು ಅಲ್ಲ ಎಂಬುದು ಪ್ರಮಾಣವಲ್ಲ ಕಾಣಿಭೋ. ಅದೇನು ಕಾರಣವೆಂದರೆ: ಶಿವಶರಣರ ಹೃದಯದಂತಸ್ಥವನರಿಯರಾಗಿ, ಎನ್ನ ಅಹುದೆಂಬುದನು, ಅಲ್ಲ ಎಂಬುದನು ಮನ್ಮನೋಮೂರ್ತಿ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ನೀನೆ ಬಲ್ಲೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗದು ಶಿವಲಿಂಗಮೂರ್ತಿಯ ಮಾಡಿ ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು. ಆ ಲಿಂಗವು ಸರ್ವಾವಸ್ಥೆಯಲ್ಲಿಯು ಅಂಗವ ಬಿಟ್ಟು ಅಗಲಲಾಗದುಯೆಂದು ನಿರೂಪಿಸಿದನಯ್ಯ ಶ್ರೀಗುರು. ಇದು ಕಾರಣ, ಅಂಗವ ಬಿಟ್ಟು ಲಿಂಗ ನಿಮಿಷಾರ್ಧವಗಲಿದಡೆ, ನಾಯಕನರಕ ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ. ಎನಗೆ ಜೀವವುಂಟೆಂಬರು ಎನಗೆ ಜೀವ ಮುನ್ನವೆ ಇಲ್ಲವಯ್ಯ. ಎನಗೆ ಭಾವವುಂಟೆಂಬರು ಎನಗೆ ಭಾವ ಮುನ್ನವೆ ಇಲ್ಲವಯ್ಯ. ಅದೇನು ಕಾರಣವೆಂದಡೆ: ಎನ್ನ ಕಾಯ ಜೀವ ಪ್ರಾಣನಾಯಕ ಪರಮೇಶ್ವರ ನೀನಾದ ಕಾರಣ. ಎನಗಿನ್ನಾವ ಭಯವೂ ಇಲ್ಲ ನೋಡಾ. ನಾನು ನಿರ್ಭಯನಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲದ ಕಾರಣ, ಅಡಿಯಿಲ್ಲದ ಮುಡಿಯಿಲ್ಲದ ಒಡಲಿಲ್ಲದ, ಹಿಡಿಯಲಿಲ್ಲದ, ಬಿಡಲಿಲ್ಲದ, ನೋಡಲಿಲ್ಲದ, ನುಡಿಸಲಿಲ್ಲದ, ಕೂಡಲಿಲ್ಲದ ಅಪ್ರತಿಮ ನೀನಾಗಿ, ಅರುಹಿಲ್ಲದ, ಮರಹಿಲ್ಲದ, ಮಹಾಮಹಿಮ ನೀನಾದಕಾರಣ, ನಿನ್ನ, ನಿರವಯಲಿಂಗವೆಂದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಕಾಯ ಕಾಮಾರಿಯಲ್ಲಿ ಸಾವಧಾನವಾಯಿತ್ತಾಗಿ ಕಾಯವೆನಗಿಲ್ಲ ನೋಡಾ. ಎನ್ನ ಮನ ಮಾಹೇಶ್ವರನಲ್ಲಿ ಸಾವಧಾನವಾಯಿತ್ತಾಗಿ ಮಾಯಾ ಪ್ರಪಂಚು ಹೆರೆದೆಗೆದೋಡಿತ್ತು ನೋಡಾ ಎನ್ನ ಪ್ರಾಣ ಪರಮೇಶ್ವರನಲ್ಲಿ ಸಾವಧಾನವಾಯಿತ್ತಾಗಿ ಪ್ರಾಣಾದಿ ವಾಯುಗಳ ಪ್ರಪಂಚಿನ ಗಮನಾಗಮನ ನಾಸ್ತಿಯಾಯಿತ್ತು ನೋಡಾ. ಎನ್ನ ಭಾವ ಭವಹರನಲ್ಲಿ ಸಾವಧಾನವಾಯಿತ್ತಾಗಿ ಭಾವಭಾವಭ್ರಮೆಗಳು ಅಳಿದು ಹೋದುವು ನೋಡಾ. ಭಾವ ನಿಭಾರ್ವವಾಗಿ ಬ್ರಹ್ಮವ ಮುಟ್ಟಿತ್ತಾಗಿ ನಿನ್ನಯ ಪ್ರಸಾದ ಎನ್ನನೊಳಕೊಂಡಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು ನಿಮ್ಮ ನೆನಯಲೊಲ್ಲದು ನೋಡ. ಎನ್ನ ಕಾಯ ನಿಮ್ಮ ಮುಟ್ಟದೆ ಸಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ. ಎನ್ನ ಪ್ರಾಣ ನಿಮ್ಮ ಮುಟ್ಟದೆ ಪ್ರಪಂಚೆನೊಳಗೇ ಮುಳುಗುತ್ತಿಪ್ಪುದು ನೋಡ. ಎನ್ನ ಭಾವ ನಿಮ್ಮ ಭಾವಿಸಿ ಭ್ರಮೆಯಳಿಯದೆ, ಸಂಸಾರ ಭಾವನೆ ಸಂಬಂಧವಾಗಿ ಮುಂದುಗಾಣದೆ, ಮೋಕ್ಷಹೀನನಾಗಿರ್ದೆನಯ್ಯ. ಸುರಚಾಪದಂತೆ ತೋರಿ ಅಡಗುವ ಅನಿತ್ಯ ತನುವನು ನಿತ್ಯವೆಂದು, ನಿರುತವೆಂದು ವೃಥಾ ಹೋಯಿತ್ತು ಎನ್ನ ವಿವೇಕ. ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ. ಎನ್ನ ಅವಿವೇಕವ ಕಳೆದು, ಶಿವತತ್ವವಿವೇಕವನಿತ್ತು ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು. ಎನ್ನ ಪೂರಕವೇ [`ಓಂ ಓಂ ಓಂ']ಯೆಂಬ ಪ್ರಣವ ಸ್ವರೂಪವಾಗಿಪ್ಪುದು ನೋಡಾ. ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ' ಯೆನುತಿಪ್ಪುದು ನೋಡಾ. ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ. ``ಮಂತ್ರಮಧ್ಯೇ ಭವೇಲ್ಲಿಂಗಂ| ಲಿಂಗಮಧ್ಯೇ ಭವೇನ್ಮಂತ್ರಃ ಮಂತ್ರಲಿಂಗದ್ವಯೋರೈಕ್ಯಂ| ಇಷ್ಟಲಿಂಗಂ ತು ಶಾಂಕರಿ||' ಎಂದುದಾಗಿ, ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ ಎನ್ನ ಕರಸ್ಥಲದಲ್ಲಿ ಕರತಾಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ. ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವಬಲಿದು ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು ಶಿವಶಿವಾ ಹರಹರಾಯೆನುತಿರ್ದೆನಯ್ಯ. ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ. ಪಂಚಭೂತದ ಪ್ರಕೃತಿಕಾಯವ ಕಳೆದು ಪ್ರಸಾದಾಕಾಯವ ಮಾಡಿದಿರಿಯಯ್ಯ. ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ. ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ. ಅಂಗವಿಷಯಭ್ರಮೆಯ ಕಳೆದು ಲಿಂಗವಿಷಯಭ್ರಾಂತನ ಮಾಡಿದಿರಿಯಯ್ಯ. ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ. ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ ಮಾಡಿದಿರಿಯಯ್ಯ. ಕುಲಸೂತಕ ಛಲಸೂತಕ ತನುಸೂತಕ ಮನಸೂತಕ ನೆನಹುಸೂತಕ ಭಾವಸೂತಕವೆಂಬ ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ ತೊಡರಿದೆ ನೋಡ. ಎರಡನೊಂದೆಂದು ತಿಳಿಯಲು ನೆರಡು ಮಾಯಿತ್ತು; ಕರಡಿ ಬಿಟ್ಟೋಡಿತ್ತು ನೋಡಾ. ಕಾಣಬಹುದು ಶೂನ್ಯ ನಿರಾಳ ತಾನು ತಾನೆಂಬುದ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು, ಬಲದ ಕೈಯಲ್ಲಿ ಮುದ್ದೆಯ ಮಾಡಿ, `ಉಣ್ಣು ಉಣ್ಣೆಂ'ದು ಊಡಿಸಿದರೆ ಒಲ್ಲದು ಕಾಣಿರಯ್ಯ. ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ. ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು, ದೇವರನೇಕೆ ದೂರುವಿರಯ್ಯ? ದೇವರು ಹೀಂಗೆ ಒಲ್ಲದು. ಉಂಬ ಕ್ರಮವ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ ಸವಿದು ಪರಿಣಾಮಿಸುವುದಲ್ಲ. ಸವಿದು ಪರಿಣಾಮಿಸುವುದೆಲ್ಲಿಯೆಂದರೆ; ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ ಷಡುರಸ್ನಾನದ ರುಚಿಯ ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ ಸವಿದು ಪರಿಣಾಮಿಸುವದಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ. ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧರೂಪಿನ ಭೋಗಂಗಳ ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ ಷಡ್ವಿಧ ಸ್ಪರ್ಶನದ ಭೋಗಂಗಳ ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ. ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ ಪರಿಣಾಮಿಸುವದು ಲಿಂಗ ತಾನೆ ನೋಡಾ. ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ, ಪರಿಣಾಮಿಸುವಾತನು ಲಿಂಗದೇವನೆಂದರಿದು, ಸರ್ವೇಂದ್ರಿಯಮುಖದಲ್ಲಿ ಬಂದ ಸರ್ವತೋಮುಖಪದಾರ್ಥವ, ಸರ್ವತೋಮುಖಲಿಂಗಕ್ಕೆ ಅರ್ಪಿಸಿ, ಸರ್ವಾಂಗವೆಲ್ಲವು ಬಾಯಾಗಿ, ಸರ್ವತೋಮುಖಪ್ರಸಾದವ ಕೊಂಡು, ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ರೂಹೆ ನಿನ್ನ ರೂಹಯ್ಯಾ; ನಿನ್ನ ರೂಹೆ ಎನ್ನ ರೂಹಯ್ಯ. ಎನ್ನ ಜೀವನವೆ ನಿನ್ನ ಜೀವನವಯ್ಯ; ನಿನ್ನ ಜೀವನವೆ ಎನ್ನ ಜೀವನವಯ್ಯ. ಎನ್ನ ಸುಖವೆ ನಿನ್ನ ಸುಖವಯ್ಯ. ನಿನ್ನ ಸುಖವೆ ಎನ್ನ ಸುಖವಯ್ಯ. ನಿನಗೆ ಎನಗೆ ಸಂದು ಸಂಶಯವಿಲ್ಲವಯ್ಯ. ಸಂದುಂಟೆಯ ನುಡಿವುದೆಲ್ಲವು ಬಂಧನದ ನುಡಿ ಕಾಣಿರೋ. ಆದಿಯಲು ಸಂದಿಲ್ಲ. ಅನಾದಿಯಲು ಸಂದಿಲ್ಲ. ಎಂದೆಂದೂ ಸಂದಿಲ್ಲ ಶರಣ ಲಿಂಗಕ್ಕೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಮ್ಮೆಯನೇರಿದ ಎತ್ತು ಸಮ್ಮಗಾರ ನೋಡ. ಎತ್ತಿನ ಒಡೆಯ ಬಂದು ಎಮ್ಮೆಯ ಕೊಲ್ಲಲು ಸಮ್ಮಗಾರನು ಸತ್ತು ನಿಮ್ಮ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಲೆಗಳೆದ ವೃಕ್ಷದಂತೆ ಉಲುಹಡರ್ಗಿದೆನಯ್ಯ. ತೆರೆಯಳಿದ ಅಂಬುಧಿಯಂತೆ ಪರಮ ಶಿವಸಾಗರದೊಳಗೆ ಮುಳುಗಿ ಪರಮ ಚಿದ್ಗಂಭೀರನಾಗಿರ್ದೆನಯ್ಯ. ಘಟವನಳಿದಾಕಾಶದಂತೆ ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯ. ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ ಅನುಪಮ ಅಪ್ರಮಾಣ ಅನಾಮಯನು ನೋಡಾ ಶಿವೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು