ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ. ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ. ಇದೇ ಸಂಸಾರವೆಂಬುದನರಿಯದೆ ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು ವಿರಕ್ತನಾದೆನೆಂಬ ಅಜಾÕನಿಯ ಪರಿಯ ನೋಡಾ. ಇದು ವಿರಕ್ತಿಯೇ? ಅಲ್ಲ. ದೇಹೇಂದ್ರಿಯ ಮನಃಪ್ರಾಣಾದಿಗಳ ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು. ಆತಂಗೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯಲಿಂಗಾರ್ಪಿತವಾಯಿತ್ತಾಗಿ ಕರ್ಮ ನಿರ್ಮೂಲ್ಯವಾಗಿ ನಿರ್ಮಲಾಂಗಿಯಾದೆನು ನೋಡಾ. ಜೀವ ಲಿಂಗಾರ್ಪಿತವಾಯಿತ್ತಾಗಿ ಜೀವ ಪರಮರೆಂಬ ಉಭಯವಳಿದು ಚಿತ್ಪರಮಲಿಂಗವಾದೆನು ನೋಡಾ. ಪ್ರಾಣಲಿಂಗಾರ್ಪಿತವಾಯಿತ್ತಾಗಿ ಇಹಪರವನರಿಯೆನು ನೋಡಾ. ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ ಶರಣ ಲಿಂಗವೆಂಬ ಕುರುಹಿಲ್ಲ ನೋಡಾ. ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ ಅಪ್ರತಿಮ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೊರಡು ಕೊನರಾಗಬಲ್ಲುದೇ? ಬರಡು ಹಯನಾಗಬಲ್ಲುದೇ ಅಯ್ಯಾ? ಕುರುಡಗೆ ಕನ್ನಡಿಯ ತೋರಿದಡೆ ನೋಡಬಲ್ಲನೆ? ಮೂಗಗೆ ರಾಗವ ಹೇಳಿದರೆ ಹಾಡಬಲ್ಲನೆ ಅಯ್ಯ? ಹೇಗ ಬುದ್ಧಿಯ ಬಲ್ಲನೇ ಅಯ್ಯ? ಲೋಗರಿಗೆ ಉಪದೇಶವ ಹೇಳಿದರೆ ಶಿವಸತ್ಪಥದ ಹಾದಿಯ ಬಲ್ಲರೇ ಅಯ್ಯ?. ಇದು ಕಾರಣ, ಶಿವ ಸತ್ಪಥದ ಆಗೆಂಬುದು ಶಿವಜ್ಞಾನಸಂಪನ್ನಂಗಲ್ಲದೆ ಸಾಧ್ಯವಲ್ಲ ಕಾಣ. ಅಸಾಧ್ಯವಸ್ತುವಿನೊಳಗಣ ಐಕ್ಯ ಅವಿವೇಕಗಳಿಗೆ ಅಳವಡುವುದೇ ನಮ್ಮವರಿಗಲ್ಲದೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೈ[ಯ]ಮರೆದು ಕಾದುವ ಕಾಳಗವದೇನೋ? ಮೈಮರೆದು ಮಾಡುವ ಮಾಟವದೇನೋ? ಬಾಯಿ ಮರೆದು ಉಂಬ ಊಟವದೇನೋ? ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ ಜನ್ಮದ ಮೃತ್ಯು ನೋಡಾ. ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ. ಸಂಕಲ್ಪ ವಿಕಲ್ಪವಿಲ್ಲದೆ ಮನ ಲಿಂಗಸಾಹಿತ್ಯವಾದರೆ ಅರ್ಪಿತ; ಅದು ಪ್ರಸಾದ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ?. ಒಡೆದ ಮಡಕೆಗೆ ಒತ್ತುಮಣ್ಣಕೊಟ್ಟರೆ ನಿಲಬಲ್ಲುದೇ ಅಯ್ಯ?. ಮುತ್ತೊಡೆದರೆ ಹತ್ತಬಲ್ಲುದೇ?. ಸುರಚಾಪ ನಿರ್ಧರವಾಗಬಲ್ಲುದೇ ಅಯ್ಯ?. ಚಿತ್ತವೊಡೆದರೆ ಭಕ್ತಿ ನೆಲೆಗೊಳ್ಳದು. ಭಕ್ತಿ ಬೀಸರವಾದರೆ, ಮುಕ್ತಿಯೆಂಬುದು ಎಂದಿಗೂ ಇಲ್ಲ ಕಾಣಾ. ಇದು ಕಾರಣ, ಚಿತ್ತ ಲಿಂಗವನಪ್ಪಿ ಒಡೆಯದೆ, ಭಕ್ತಿ ಬೀಸರವೊಗದೆ, ನಿಮ್ಮ ಕೂಡಿ, ನಿತ್ಯ ನಿರ್ಮುಕ್ತನಾದೆನು ಕಾಣಾ. ಎಲ್ಲರ ಪರಿಯಲ್ಲ, ಎನ್ನ ಪರಿ ಬೇರೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕನಸಿನಲ್ಲಿ ಬಂದು ನೆರೆವ ಸ್ತ್ರೀಯರು ಮನಸಿನ ಮಾಯ ಕಾಣಿಭೋ. ಮನಸ್ಸಿನಲ್ಲಿ ಮಹವ ನಿಲಿಸಲು ಕನಸ್ಸಿನಲ್ಲಿ ಬಂದು ನೆರೆವ ಸ್ತ್ರೀಯರು ಮನಸ್ಸಿನಲ್ಲಿಲ್ಲ ನೋಡಾ. ಮನವನಳಿದಾತನೆ ಮಹಾದೇವನು ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ. ಮಾಯೆಯಿಲ್ಲದ ಭಕ್ತ, ಮರಹಿಲ್ಲದ ಭಕ್ತ, ಅರುಹಿಲ್ಲದ ಭಕ್ತ. ಒಳಗಿಲ್ಲದ ಭಕ್ತ, ಹೊರಗಿಲ್ಲದ ಭಕ್ತ. ತಾನಿಲ್ಲದ ಭಕ್ತ, ಇದಿರಿಲ್ಲದ ಭಕ್ತ. ತಾನಿದಿರೆಂಬುವುದೇನುಯೇನೂಯಿಲ್ಲದ ಪರಮನಲ್ಲಿ ಬೆರಸಿ ಬೇರಿಲ್ಲದ ಪರಮಭಕ್ತನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕನಕಗಿರಿನಿವಾಸಂ ಕಾಮನಾಶಂ ಕಮಲವೈರಿಭೂಷಂ ವಿನುತನಾಮಧೇಯಂ ಅನುಪಮಾವತಾರಸಾರಂ ಪರಮ ವೀರಶೈವಭಕ್ತಿಭಾವಂ ಜನಿತಪುಣ್ಯಕಾಯಂ ಭವರೋಗವೈದ್ಯಂ ಭವಹರಂ ಹರ ಹರಾ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ ದೇವನಿಲ್ಲದ ದೇಗುಲದಂತೆ, ಪತಿಯಿಲ್ಲದ ಸತಿಯ ಶೃಂಗಾರದಂತೆ, ಗುರುವಾಜ್ಞೆಯಿಲ್ಲದೆ ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ ಶಿವನ ಮುಟ್ಟದು ನೋಡಾ. ಶ್ರೀಗುರುವಿನ ವಾಕ್ಯದಿಂದಹುದೆಂದುದನು ಅಲ್ಲ ಎಂದು ಉದಾಸಿನದಿಂದ ಮಾಡಿದ ಭಕ್ತಿ ಅದು ಕರ್ಮಕ್ಕೆ ಗುರಿ ನೋಡಾ. ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ ಸದ್ಯೋನ್ಮುಕ್ತಿಗೆ ಕಾರಣ ನೋಡಾ. ಏಕೋಭಾವದ ನಿಷ್ಠೆ ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ. ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ ಕರ್ಮಂಗಳ ಒತ್ತಿ ಒರಸುವುದು ನೋಡಾ. ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೋಡಗನ ಅಣಲ ಸಂಚದಲ್ಲಿ ಎರಡು ದಾಡೆ ಹುಟ್ಟಿದವು ನೋಡಾ. ಆ ದಾಡೆಯ ಸಂಚಲದಲ್ಲಿ ಮೂರುಲೋಕವೆಲ್ಲ ಆಳುತ್ತ ಮುಳುಗುತ್ತಿದೆ ನೋಡಾ. ತ್ರೆ ೈಜಗದ ಮಸ್ತಕವನೊಡದು ನೀವು ಮೂಡಲು ಈರೇಳು ಲೋಕವೆಲ್ಲ ಬೆಳಗಾಯಿತ್ತು ನೋಡಾ. ಈರೇಳು ಲೋಕವನೊಳಕೊಂಡ ಬೆಳಗು ತಾನೆಂದರಿಯಲು ಕೋಡಗನಣಲಸಂಚದ ದಾಡೆ ಮುರಿಯಿತ್ತು; ಮೂರು ಲೋಕದ ವೇದನೆ ಮಾದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರಿಯ ಶಿರದಲ್ಲಿ ಬರಿಕೈ ಹುಟ್ಟಿ ಶರೀರವ ನುಂಗಿ ಉರಿಯನುಣ್ಣುತ್ತಿದೆ ನೋಡಾ. ಉರಿಯ ನಾಲಿಗೆಯಲ್ಲಿ ಮನೋನ್ಮನಿ ಹುಟ್ಟಿ ಕರಿಯ ಶಿರವ ಮೆಟ್ಟಿ ನಿಂದಳು ನೋಡಾ. ಉರಿಯ ನಾಲಿಗೆ ನಂದಿ, ಕರಿಯ ಬರಿಕೈ ಮುರಿದು, ನಿರ್ವಯಲ ಬೆರಸಿದಳು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ಮೇಲೆ ಲಿಂಗವಧರಿಸಿ ದೇವಪೂಜೆಯ ಮಾಡಿ ಕಾಯವಳಿದು ದೇವತಾಭೋಗವನೆಯಿದಿಹೆನೆಂಬ ಗಾವಿಲರ ಎನಗೊಮ್ಮೆ ತೋರದಿರಯ್ಯ. ಕಾಯವನು ಜೀವವನು ಲಿಂಗದಲ್ಲಿರಿಸಬಲ್ಲರೆ ಮಹಾದೇವನೆಂದು ಬೇರುಂಟೇ? ಆ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯ ಬತ್ತಲೆಯಿದ್ದರೇನೋ ಮಾಯವಳಿಯದನ್ನಕ್ಕರ? ಮಂಡೆ ಬೋಳಾದರೇನೋ ಸಂಸಾರ ವಿಷಯವ ಛೇದಿಸದನ್ನಕ್ಕರ? ಇದೇತರ ನಿರ್ವಾಣ? ಸುಡು. ನಿರಾಲಂಬಿಗಳಾದ ನಿಜ ಶರಣರು ಮಚ್ಚರು ಕಾಣಾ. ಹೊರ ವೇಷದ ಹೂಸಕ[ರ], ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಲದ ಗಂಡ, ಕರ್ಮದ ಗಂಡ. ವಿಧಿಯ ಗಂಡ, ವಿಧಾತನ ಗಂಡ. ಇಹದ ಗಂಡ, ಪರದ ಗಂಡ. ಇಹಪರವ ಮೀರಿದ ಪರಾಪರನು ನೋಡಾ, ಮಾಹೇಶ್ವರನು. ಅಂಗದ ಮೇಲೆ ಲಿಂಗವ ಧರಿಸಿ, ಲಿಂಗಾಂಗವನೊಂದು ಮಾಡಿ, ನಿತ್ಯನೇ ತಾನೆಂದರಿಯದೆ, ಸಾವಿಗಂಜುವ ಸಂದೇಹಿಯ ಗಂಡ. ನಿಸ್ಸಂದೇಹಿ, ನಿರ್ಲೇಪಕನಯ್ಯ, ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ರೂಪನು ಕಂಗಳು ನುಂಗಿತ್ತು. ಪ್ರಾಣದ ರೂಪನು ನೆನಹು ನುಂಗಿತ್ತು. ಭಾವದ ರೂಪನು ಅರುಹು ನುಂಗಿತ್ತು. ಇವೆಲ್ಲರ ರೂಪನು ನಿರೂಪು ನುಂಗಿತ್ತು, ಆ ನಿರೂಪು ಸ್ವರೂಪೀಕರಿಸಿ ನಾ ನುಂಗಿದೆನು. ಆ ನಿರೂಪು ಸ್ವರೂಪವೆರಡೂ ಬಯಲು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕತ್ತೆಗೇಕಯ್ಯ ಕಡಿವಾಣ, ತೊತ್ತಿಗೆ ತೋಳಬಂದಿಯೇಕಯ್ಯ? ಶ್ವಾನಗೇಕೆ ಆನೆಯ ಜೋಹವಯ್ಯ? ಹಂದೆಗೇಕೆ ಚಂದ್ರಾಯುಧವಯ್ಯ? ಶಿವನಿಷೆ*ಯಿಲ್ಲದವಂಗೆ ವಿಭೂತಿ ರುದ್ರಾಕ್ಷಿ ಶಿವಮಂತ್ರ ಶಿವಲಿಂಗವೆಂಬ ಶಿವಚೋಹವೇತಕಯ್ಯ ಇವರಿಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿ ತೇಜದಿಂದುರವಣಿಪಂ ಕಂಜಪದಯುಗದೊಳು ಹೊಳೆವುತ್ತಿಹ ನಂಜುಗೊರಳಭವ ಭವಕುಕ್ಷಿಯೊಳೀರೇಳುಭುವನವಂ ಮಿಗೆ ತಾಳ್ದ ರಾಕ್ಷಸಹರ ರಕ್ಷಿಸೆನ್ನುವಂ ಹರ ಹರಾ ಶಿವ ಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರ್ಮಿ ಬಲ್ಲನೆ ಭಕ್ತಿಯ ಮರ್ಮವ, ಚರ್ಮವ ತಿಂಬ ಸೊಣಗಬಲ್ಲುದೆ ಪಾಯಸದ ಸವಿಯ? ಉಚ್ಚಿಯ ಬಚ್ಚಲ ಮಚ್ಚಿ ಕಚ್ಚಿ ಕಡಿದಾಡುವ ಮರುಳುಮಾನವರು ನಿಶ್ಚಿಂತ ನಿರಾಳನಿಗೊಲಿದು ಒಚ್ಚತ ಹೋಗಿ ಅಪ್ಪಿ ಅಗಲದಿಪ್ಪ ಅನುಪಮಸುಖನಿವರೆತ್ತ ಬಲ್ಲರು? ಸಂಸಾರವೆಂಬ ಸೊಕ್ಕು ತಲೆಗೇರಿ ಮುಂದುಗಾಣದೆ ಅಕಟಕಟಾ ಕೆಟ್ಟಿತ್ತು ನೋಡ ತ್ರೆ ೈಜಗವೆಲ್ಲ. ಸ್ವರ್ಗ ಮತ್ರ್ಯ ಪಾತಾಳಕ್ಕೆ ಪಶುಪತಿ ಏಕೋದೇವನೆಂದು ಅರಿದು ಸಂಸಾರಪ್ರಪಂಚ ಮರೆಯಾ ಮರುಳೇ. ಪರಮಸುಖದೊಳಗಿರ್ದು ಅಲ್ಪಸುಖಕ್ಕೆ ಆಸೆಮಾಡುವ ಅಜ್ಞಾನಿಗಳನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ?
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಂಗಳ ಕಳೆಯಲ್ಲಿ ಚೆಂಗಣಿಗಿಲ ಕಂಡೆ. ಚೆಂಗಣಿಗಿಲ ಕಮಲವ ಕುಯಿದು ಶಿವಲಿಂಗಪೂಜೆಯ ಮಾಡಬಲ್ಲ ಶರಣಂಗೆ ಸಂಸಾರ ಸಂಗವ ಹೊದ್ದಿಗೆಯೆಂದೇನು ಹೇಳಾ ಪ್ರಾಣಲಿಂಗ ಸಂಗಿಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರ್ಕಸನ ಕಂಗಳೊಳಗೆ ರಾಕ್ಷಸರ ಪಡೆಯಿಪ್ಪುದ ಕಂಡೆನಯ್ಯ. ರಾಕ್ಷಸರ ಪಡೆಯೊಳಗೆ ಮುಕ್ಕಣ್ಣನುದಯವಾಗಲು ಕರ್ಕಸನ ಕಂಗಳು ಕೆಟ್ಟು ರಾಕ್ಷಸರ ಪಡೆ ಮುರಿದೋಡಿತ್ತು ನೋಡಾ! ಮುಕ್ಕಣ್ಣ ಶಿವನೊಲವ ನಾನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯಪ್ರಸಾದವ ಎನ್ನ ಕರಸ್ಥಲದಲ್ಲಿ ಕಂಡೆ. ಅದು ಎನ್ನ ಕಂಗಳ ನುಂಗಿ ಸರ್ವಾಂಗವು ತಾನಾಗಿ ನಿಂದು ಪ್ರಜ್ವಲಿಸುತ್ತಿತ್ತು ನೋಡಾ. ಪ್ರಾಣ ಪ್ರಸಾದವ ಎನ್ನ ಮನಸ್ಥಲದಲ್ಲಿ ಕಂಡೆ. ಅದು ಎನ್ನ ಮನವ ನುಂಗಿತ್ತು ನೋಡಾ. ಅನುಭಾವ ಪ್ರಸಾದವ ಎನ್ನಾತ್ಮನ ಕೈಯಲ್ಲಿ ಕಂಡೆ. ಅದು ಎನ್ನಾತ್ಮನ ನುಂಗಿತ್ತು ನೋಡಾ. ಕಾಯಪ್ರಸಾದ ಪ್ರಾಣಪ್ರಸಾದ ಅನುಭಾವಪ್ರಸಾದವೆಂಬ ಈ ತ್ರಿವಿಧಪ್ರಸಾದವು ಒಂದಾಗಿ, ಎನ್ನ ಬ್ರಹ್ಮರಂಧದಲ್ಲಡಗಿ ನಿರ್ಭಾವ ಪ್ರಸಾದವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಣ್ಣಿಲ್ಲದಾತ ಕಾಣಬಲ್ಲನೆ ಅಯ್ಯ? ಕಿವಿಯಿಲ್ಲದಾತ ಕೇಳಬಲ್ಲನೇನಯ್ಯ? ಮೂಗಿಲ್ಲದ ಮೂಕಾರ್ತಿ ವಾಸಿಸಬಲ್ಲನೆ ಅಯ್ಯ? ನಾಲಿಗೆಯಿಲ್ಲದವ ರುಚಿಸಬಲ್ಲನೆ ನೋಡಯ್ಯ? ಕೈಯಿಲ್ಲದ ಮೋಟ ಹಿಡಿಯಬಲ್ಲನೆ? ಕಾಲಿಲ್ಲದ ಹೆಳವ ನಡೆಯಬಲ್ಲನೆ ಅಯ್ಯ? ಹಂದೆ ಶೌರ್ಯದ ಕುರುಹ ಬಲ್ಲನೆ? ನಪುಂಸಕ ವ್ಯವಹರಿಸಬಲ್ಲನೆ ಅಯ್ಯ? ತಮ್ಮ ತಾವರಿಯದ ಅಜ್ಞಾನಿಗಳು, ಗುರು ಗುರುವೆಂದು ಅನ್ಯರಿಗೆ ಉಪದೇಶವ ಕೊಟ್ಟು ಅರುಹಿನ ಆಚರಣೆಯ ಹೇಳಿ ಸತ್ಪಥದ ಆಚರಣೆಯ ಹೇಳಿ ತಮ್ಮ ಹಾದಿಯ ತಾವರಿಯರು; ತಾವಿನ್ನಾರಿಗೆ ಹಾದಿಯ ತೋರಿಹರಯ್ಯ? ಆ ಭೂಭಾರಿಗಳು ಗುರು ಗುರುವೆಂಬುದಕ್ಕೆ ನಾಚರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಲಿಂಗಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಜಂಗಮಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಮಂತ್ರಕ್ಕೆ ಕೇಡಕಟ್ಟಿ, ಆಹ್ವಾನಿಸಿದಲ್ಲಿ ಇದ್ದಿತ್ತು, ವಿಸರ್ಜಿಸಿದಲ್ಲಿ ಮಂತ್ರ ಭಿನ್ನವಾಯಿತ್ತೆಂದು, ಸಂದೇಹದಲ್ಲಿ ಮುಳುಗಿ ಮೂಡುತ್ತಿಪ್ಪರಯ್ಯ. ತನು ಮನ ಭಾವದಲ್ಲಿ ವಜ್ರಲೇಪದಂತೆ ಲೇಪಿಸಿಕೊಂಡು ಒಳಹೊರಗೆ ಓಂನಮಶ್ಯಿವಾಯಯೆನುತ ಸದಾ ಸನ್ನಿಹಿತನಾಗಿಪ್ಪುದನರಿಯದೆ, ಕೆಟ್ಟಿತ್ತು ಇದ್ದಿತ್ತು ಎನ್ನಲೇಕೆ? ಕೆಡುವಾಗ ಹಾಲಂಬಿಲವೇ? ಬಳಸುವಾಗ ಹಾಲೋಗರವೇ? ಅದು ಕೆಡುವುದು ಅಲ್ಲ; ಅಳಿವುದೂ ಅಲ್ಲ. ನಿಮ್ಮ ಸಂಕಲ್ಪ ವಿಕಲ್ಪವೆಂಬ ಸಂದೇಹವೇ ಕೆಡಿಸುತ್ತ ಅಳಿಸುತ್ತ ನಿಮ್ಮ ಕಾಡುತ್ತಿಪ್ಪವು ಕಾಣಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕುಂಡಲಿಯ ಒಲೆಯ ಭಾಂಡದಲ್ಲಿ ಮಂಡಿಸಿಪ್ಪ ತುಂಡುಮುಂಡುಕಾರ್ತಿ ಜಗವನೆಲ್ಲಾ ಬಂಡುಮಾಡುತ್ತಿದಾಳೆ ನೋಡಾ. ಕುಂಡಲಿಯ ಒಲೆಯಲ್ಲಿ ಕೆಂಡವ ಚಾಚಲು ಭಾಂಡವೊಡೆದು ತಂಡು ಮುಂಡುಕಾರ್ತಿಯ ತಾಮಸ ಬೆಂದು ಕುಂಡಲಿಯ ಸರ್ಪನೆದ್ದು ಮಂಡೆವಾಲನುಂಡು ಮಡಿದುದ ಕಂಡೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...