ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ, ಕೋಟಲೆಗೊಳದಿರ ಮರುಳು ಮಾನವ. ನಿಟಿಲತಟದಲ್ಲಿ ಮಠವ ಮಾಡಿಕೊಂಡು ನಿಶ್ಚಿಂತ ನಿರಾಳನಾಗಿರ. ಹುಸಿಯ ಮಾಯಾತಮಂಧಕೆ ದಿಟಪುಟದಿವಾಕರ ಎನ್ನೊಡೆಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೊ. ಲಿಂಗವ ಧರಿಸಿಪ್ಪ ಅಂಗವೆ ಲಿಂಗದಂಗ ತಾನೆ ನೋಡಾ. ಲಿಂಗಪ್ರಸಾದವ ಕೊಂಬ ಪ್ರಾಣಲಿಂಗ ತಾನೆ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಕರ್ಮವ ಕಲ್ಪಿಸಿ ನುಡಿವ ಅಬದ್ಧರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲೋಕದ ನಚ್ಚು ಮಚ್ಚೆಂಬ ಕಿಚ್ಚೆದ್ದು ಸುಡುತಿದೆ ನೋಡ. ನಿಶ್ಚಿಂತ ನಿರಾಳವೆಂಬ ನೀರನೆರೆಯಲು, ಆ ಕಿಚ್ಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದೇಹಿ ಶಿವಾತ್ಮಕನು ಲಿಂಗದಾಚಾರದಲ್ಲಿಯೇ ನಡೆವನಯ್ಯ. ಲೋಕವರ್ತಕನಲ್ಲ. ಲೋಕಚಾತುರಿಕೆ, ಲೋಕವ್ಯವಹರಣೆಯನನುಕರಿಸಿ ನಡೆವವನಲ್ಲ. ಶಿವಜ್ಞಾನ ಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು ಸರ್ವಾಂಗವೂ ಲಿಂಗರೂಪಾಗಿ ಸಮರ್ಪಿಸಿಕೊಂಡು ಲಿಂಗದೊಡನೆ ಭುಂಜಿಸುತ್ತಿಪ್ಪನಯ್ಯ. ಶಿವಸ್ಮರಣೆಯಿಂದ ಸ್ವೀಕರಿಸುತ್ತಿಪ್ಪುದೇ ಸಹಭೋಜನವೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು ಒಂದೇ ವಸ್ತು ನೋಡ. ಚಿನ್ನಾದ ಸ್ವರೂಪವೇ ಜಂಗಮ. ಚಿದ್ಬಿಂದು ಸ್ವರೂಪವೇ ಲಿಂಗ. ಈ ನಾದ ಬಿಂದುವಿಂಗೆ ಆಧಾರವಾದ ಚಿತ್ಕಲಾ ಸ್ವರೂಪವೇ ಚಿನ್ಮಯ ಭಕ್ತನು ನೋಡ. ಶಿವಂಗೂ ಭಕ್ತಂಗೂ ಭಿನ್ನಮುಂಟೆ? ಆ ಭಕ್ತಿಗೂ ಭಕ್ತಂಗೂ ಭೇದವುಂಟೆ? ಇಲ್ಲವಾಗಿ- ದೇವ ಬೇರೆ ಭಕ್ತ ಬೇರೆ ಎಂಬ ಕರ್ಮಕಾಂಡಿಗಳ ಮತವಂತಿರಲಿ. ನಿಮ್ಮ ಶರಣರಿಗೆ ನಿಮಗೆ ಭಿನ್ನವಿಲ್ಲವೆಂದೆನು ಕಾಣ. ಶರಣನೇ ಸಾಕ್ಷಾತ್ ಶಿವ ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಸ್ಥಲದಲ್ಲಿ ಲಿಂಗಕಳೆ ಹೇಗಾಯಿತಯ್ಯ? ಆವುದಾನೊಂದು ಕಳೆಯ ಸ್ಥಾಪಿಸುವ ಭೇದವಾವುದಯ್ಯ? ಇದನರಿಯೆನು; ಕರುಣಿಸಯ್ಯ ತಂದೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದಿಂದ ಶರಣರುದಯಯವಾಗದಿರ್ದಡೆ, ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ ಏಳುನೂರುಯೆಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ, ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ. ಲಿಂಗದಿಂದ ಶರಣರುದಯವಾಗದಿರ್ದಡೆ, ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ, ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ. ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ. ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ ನೋಡಾ. ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು ಪ್ರಮಾಣೆ? ಅಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲೋಕಮೆಚ್ಚೆ ನಡೆವರಯ್ಯ, ಲೋಕಮೆಚ್ಚೆ ನುಡಿವರಯ್ಯ. ಲೋಕಮೆಚ್ಚೆ ನಡೆಯೆ ಹೋಯಿತ್ತೆನ್ನ ಶಿವಾಚಾರ. ಲೋಕಮೆಚ್ಚೆ ನುಡಿಯೆ ಹೋಯಿತ್ತೆನ್ನ ಶಿವಜ್ಞಾನ. ಲೌಕಿಕವರ್ತನ ನಾಯಕನರಕವೆಂದಿತ್ತು ಗುರುವಚನ. ಇದು ಕಾರಣ ಲಿಂಗ ಮೆಚ್ಚೆ ನಡವೆ; ಲಿಂಗ ಮೆಚ್ಚೆ ನುಡಿವೆ ಲಿಂಗ ಲಿಂಗವೆಂಬ ಲಿಂಗಭ್ರಾಂತನಾಗಿ ವರ್ತಿಸುವೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ. ಹಟಯೋಗಿಗಳ ಅಟಮಟಗಾರರೆಂದೆಂಬೆ. ಅಷ್ಟಾಂಗಯೋಗಿಗಳ ಕಷ್ಟ ಕರ್ಮಿಗಳೆಂದೆಂಬೆ. ಪವನಯೋಗಿಗಳ ಪ್ರಪಂಚಿಗಳೆಂದೆಂಬೆ. ಲಯಯೋಗಿಗಳ ನಾಯಿಗಿಂದ ಕಡೆ ಎಂಬೆ. ಅದೇನು ಕಾರಣವೆಂದರೆ; ಲಯಯೋಗವೆಂಬುವದು ನಾನಾ ದರುಶನದಲ್ಲಿ ವರ್ತಿಸುವುದಾಗಿ ಆದ ಶಿವಯೋಗಿಗಳು ಒಲ್ಲರು. ಮಂತ್ರಯೋಗವೆಂಬುವದು ಸರ್ವಸಂದೇಹಕ್ಕಿಕ್ಕಿ ಕೊಲುತಿಪ್ಪುದು. ಅದೇನು ಕಾರಣವೆಂದಡೆ: ಮಂತ್ರವೇ ಲಿಂಗ, ಲಿಂಗವೇ ಮಂತ್ರವೆಂದರಿದು ಲಿಂಗನೆನಹ ಸಂಬಂಧಿಸಿಕೊಳ್ಳಲರಿಯದೆ ಲಿಂಗ ವಿರಹಿತವಾಗಿ ಮಾಡುತಿಪ್ಪರಾಗಿ. ಅದು ಅಂಗ ಲಿಂಗ ಸಂಬಂಧಿಗಳು ಮಚ್ಚರು ನೋಡ. ಅದೇನು ಕಾರಣವೆಂದರೆ: ಕೆಲವು ಶೈವರುಗಳು ಮಾಡುವರಾಗಿ ರಾಜಯೋಗವೆಂಬುವದು ಗಾಜು ಗೋಜು ನೋಡ. ಅದನು ಲಿಂಗವಿರಹಿತವಾಗಿ ಜ್ಞಾತೃ ಜ್ಞಾನ, ಜ್ಞೇಯ ಒಂದಾದಲ್ಲಿಯೆ ಯೋಗವೆನುತಿಪ್ಪರಾಗಿ. ಇವು ಒಂದೂ ಲಿಂಗಾಗಯೋಗದ ಹಜ್ಜೆಯಲ್ಲ ನೋಡ. ಅದು ಕಾರಣ, ಲಿಂಗನಿಷ*ರು ಮಚ್ಚರು. ಅದೇನು ಕಾರಣವೆಂದಡೆ: ಲಿಂಗವ ತೆಗೆದಡೆ ಲಿಂಗದೊಡನೆ ಪ್ರಾಣ ಹೋಗದಾಗಿ, ಅದೆಲ್ಲಿಯ ಯೋಗವಯ್ಯ ಭ್ರಾಂತು ಯೋಗ. ಇದು ಕಾರಣ, ನಿಮ್ಮ ಶರಣರು ಲಿಂಗಪ್ರಾಣಿಗಳು; ಪ್ರಾಣಲಿಂಗಸಂಬಂಧಿಗಳು; ಪ್ರಸಾದಮುಕ್ತರು ಈ ಮೂರು ಪ್ರಕಾರದಲ್ಲಿ ಕೂಡುತ್ತಿಪ್ಪರು ಶಿವಯೋಗಿಗಳು. ಇದು ಕಾರಣ ನಿಮ್ಮ ಶರಣರು ಸ್ವಾನುಭಾವಜ್ಞಾನ ಶುದ್ಧಶಿವಯೋಗದಲ್ಲಿ ಸ್ವರೂಪಜ್ಞಾನಿಗಳು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಕ್ಕೆ ತನ್ನ ತನುವೇ ಭಾಜನವಾಗಿ, ಆ ತನುವಿಂಗೆ ಲಿಂಗವೇ ಭಾಜನವಾಗಿ, ತನುವೆಂಬ ಭಾಜನವಳಿದು ಲಿಂಗವೇ ಭಾಜನವಾಗಿರಬಲ್ಲರೆ ಅದು ಲಿಂಗಭಾಜನವೆಂಬೆ. ಮನಕ್ಕೆ ಲಿಂಗವೇ ಭಾಜನವಾಗಿ, ಲಿಂಗಕ್ಕೆ ಮನವೇ ಭಾಜನವಾಗಿ ಮನವೆಂಬ ಭಾಜನವಳಿದು, ಮನವೇ ಲಿಂಗಭಾಜನರಾಗಿರಬಲ್ಲರೆ, ಮನಲಿಂಗಭಾಜನವೆಂಬೆ. ಪ್ರಾಣಕ್ಕೆ ಲಿಂಗವೇ ಭಾಜನವಾಗಿ, ಲಿಂಗಕ್ಕೆ ಪ್ರಾಣವೇ ಭಾಜನವಾಗಿ ಪ್ರಾಣವೆಂಬ ಭಾಜನವಳಿದು, ಪ್ರಾಣವೇ ಲಿಂಗವಾಗಿರಬಲ್ಲರೆ, ಪ್ರಾಣಲಿಂಗಭಾಜನವೆಂಬೆ. ತನುಭಾಜನ ಮನಭಾಜನ ಪ್ರಾಣಭಾಜನ ಇಂತೀ ತ್ರಿವಿಧವು ಚಿದ್ಭಾಂಡೆಯಲ್ಲಿ ಅಡಗಿ ಚಿದ್ಪ್ರಹ್ಮವೇ ತಾನಾಗಿರಬಲ್ಲರೆ, ಸಹವರ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ? ನಿಃಶಬ್ದಮಯವಾದ ಕಾರಣ. ಜಂಗಮಕ್ಕೆ ಬಿಂದುವಿಲ್ಲ. ಅದೇನು ಕಾರಣ? ಅದು ಶಬ್ದಮಂತ್ರೋಪದೇಶವನುಳ್ಳುದಾದ ಕಾರಣ. ಅದುಕಾರಣ, ನಾದ ಸ್ವರೂಪವೇ ಜಂಗಮ; ಬಿಂದುಸ್ವರೂಪವೇ ಲಿಂಗ. ಇದುಕಾರಣ, ಲಿಂಗವೇ ಜಂಗಮದ ಲಿಂಗ; ಆ ಜಂಗಮವೇ ಲಿಂಗದ ಪ್ರಾಣ. ಆ ನಾದ ಬಿಂದು ಸ್ವರೂಪ ಲಿಂಗವಪ್ಪ ಜಂಗಮಕ್ಕೆ ಆಧಾರವಪ್ಪ ಚಿತ್ಕಲಾ ಸ್ವರೂಪನೇ ಭಕ್ತನು. ಈ ನಾದ ಬಿಂದು ಕಳೆಗಳ ಕೂಡಿಕೊಂಡಿಪ್ಪ ಶಿವತತ್ವವು, ತಾನೇ ಲಿಂಗ ಜಂಗಮ ಭಕ್ತನೆಂದು ಮೂರುತೆರನಾದನು ನೋಡಾ. ಈ ಮೂರು ಒಂದೆಯೆಂದು ಅರಿದೆನು ನೋಡಾ. ಎನ್ನ ಶರಣತ್ವದ ಆದಿಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠ ಕಾಣಿರೋ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೋ. ಲಿಂಗವ ಧರಿಸಿಪ್ಪಂಗವೆ ಲಿಂಗದಂಗವಾಗಿ ಲಿಂಗಕ್ಕೂ ಅಂಗಕ್ಕೂ ಭಿನ್ನವಿಲ್ಲ ಕಾಣಿರೋ. ಲಿಂಗಪ್ರಸಾದವ ಕೊಂಬ ಪ್ರಾಣ ಲಿಂಗ ತಾ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಲಿಂಗಸಹಭೋಜನವ ಮಾಡಬೇಕೆಂಬುದೆ ಸದಾಚಾರ. ಹೀಂಗಲ್ಲದೆ ಅಂಗಕ್ಕು ಲಿಂಗಕ್ಕು ಭೇದ ಭಾವವ ಕಲ್ಪಿಸಿಕೊಂಡು ಲಿಂಗಸ ಭೋಜನವ ಮಾಡಬಾರದೆಂಬ ಸಂದೇಹ ಸೂತಕ ಪ್ರಾಣಿಗಳಿಗೆ ಅಂಗದಲ್ಲಿ ಲಿಂಗವಿಲ್ಲ, ಮನದಲ್ಲಿ ಮಂತ್ರವಿಲ್ಲ; ಪ್ರಾಣದಲ್ಲಿ ಪ್ರಸಾದವಿಲ್ಲ. ಪ್ರಸಾದವಿಲ್ಲದವರಿಗೆ ಮುಕ್ತಿಯೆಂಬುದೆಂದೂ ಇಲ್ಲ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲೋಹವ ಅಗ್ನಿ ವೇಧಿಸಿಕೊಂಡಿಪ್ಪಂತೆ, ಕಲ್ಲಿನಲ್ಲಿ ಕಳೆ ತುಂಬಿಪ್ಪಂತೆ, ಸರ್ವಾಂಗವನು ಲಿಂಗಕಳೆ ತುಂಬಿ ಸರ್ವತೋಮುಖವಾಗಿ, ಮಿಸುನಿಯ ಚಿನ್ನದ ಬೆಳಗಿನಂತೆ ಪಸರಿಸುತ್ತಿಪ್ಪ, ಹೊಚ್ಚ ಹೊಸ ಬ್ರಹ್ಮವನೊಡಗೂಡಿದ ಪ್ರಾಣಲಿಂಗೈಕ್ಯವನೇನ ಉಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಲಾಟದಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷೆಯ ಮಾಲೆ ಮುಖದಲ್ಲಿ ಶಿವಮಂತ್ರ, ಅಂಗದ ಮೇಲೆ ಶಿವಲಿಂಗ ಧಾರಣವುಳ್ಳ ಶಿವಭಕ್ತನೆ ಸಾಕ್ಷಾತ್ ಶಿವ ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲೋಕಾಧಿ ಲೋಕಂಗಳೇನುಯೇನೂ ಇಲ್ಲದಂದು `ಏಕಮೇವಾದ್ವಿತೀಯಂ ಪರಬ್ರಹ್ಮ' ತಾನೊಂದೆ ನೋಡಾ. ಅದು ತನ್ನನು ನೆನೆಯದೆ, ಇದಿರನು ನೆನೆಯದೆ ನೆನಹು ನಿಷ್ಪತ್ತಿಯಾಗಿದ್ದಿತು ನೋಡ. ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ ಸಾವಯವಾಗಿ ಚಿತ್ತೆನಿಸಿಕೊಂಡಿತ್ತು. ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ ಎಂಬ ಐದಂಗವನಂಗೀಕರಿಸಿ, ನಿಃಕಲ ಶಿವತತ್ವವೆನಿಸಿತ್ತು ನೋಡ. ಆ ನಿಃಕಲ ಶಿವತತ್ವ ತಾನೊಂದೆ, ತನ್ನ ಶಕ್ತಿಯ ಚಲನೆಮಾತ್ರದಿಂದ ಒಂದೆರಡಾಯಿತ್ತು ನೋಡ. ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ. ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು, ವರ್ತಿಸುತ್ತಿಹುದು ನೋಡ. ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು. ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು, ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು. ಶಕ್ತಿಯೆ ನಿವೃತ್ತಿಯೆನಿಸಿತ್ತು. ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ. ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು. ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು. ಅದು ಹೇಂಗೆಂದಡೆ; ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಮೂರು ತೆರನಾಯಿತ್ತು. ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು ಎರಡು ತೆರನಾಯಿತ್ತು. ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು ಎರಡು ತೆರನಾಯಿತ್ತು. ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವನು ಆರು ತೆರನಾದನು. ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ, ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ, ಶಾಂತಿಯೆಂಬ ಕಲಾಪರಿಯಾಯವನುಳ್ಳ ಆದಿಶಕ್ತಿ, ವಿದ್ಯಾಕಲಾಪರಿಯಾಯವನುಳ್ಳ ಇಚ್ಛಾಶಕ್ತಿ, ಪ್ರತಿಷಾ*ಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ. ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ, ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ, ಷಟ್‍ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು. ಇದು ಲಿಂಗಷಟ್‍ಸ್ಥಲ. ಇನ್ನು ಒಂದು ಅಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ: ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು ಪ್ರಕಾರವಾಯಿತ್ತು. ಈ ತ್ರಯಾಂಗ ಒಂದೊಂದು ಎರಡೆರಡಾಗಿ, ಆರು ತೆರನಾಯಿತ್ತು. ಅದು ಹೇಂಗೆಂದೆಡೆ: ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು. ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು ಎರಡು ತೆರನಾಯಿತ್ತು. ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು. ಸಮರಸಭಕ್ತಿ, ಆನಂದಭಕ್ತಿ, ಅನುಭಾವಭಕ್ತಿ, ಅವಧಾನಭಕ್ತಿ, ನೈಷ್ಟಿಕಾಭಕ್ತಿ, ಸದ್ಭಕ್ತಿ ಎಂದು ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ, ಷಟ್‍ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು. ಇದು ಅಂಗಷಟ್‍ಸ್ಥಲ. ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ- ಆ ನಿವೃತ್ತಿಯ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು. ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ. ಅಂಗವೆಂದಡೆ ಶರಣ:ಲಿಂಗವೆಂದಡೆ ಶಿವ. ಆ ಶರಣಂಗೆ ಆ ಲಿಂಗವು ಆವಾಗಲೂ ಪ್ರಾಣವು ಆ ಲಿಂಗಕ್ಕೆ ಆ ಶರಣನಾವಾಗಲೂ ಅಂಗವು. ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗಲ್ಲದೆ, ಭಿನ್ನವಿಲ್ಲ. ಇದು ಕಾರಣ, ಅನಾದಿಯಿಂದವು ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ, ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ, ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನು ಕಾರಣವೆಂದಡೆ; ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ. ಈ ಷಟ್‍ಸ್ಥಲಮಾರ್ಗವು ದ್ವೆ ೈತಾದ್ವೆ ೈತದ ಪರಿವರ್ತನೆಯಲ್ಲ. ಅದೇನು ಕಾರಣವೆಂದಡೆ; ಇದು ಶಿವಾದ್ವೆ ೈತಮಾರ್ಗವಾದ ಕಾರಣ. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ಬೊಮ್ಮ, ಪರಬೊಮ್ಮನೆಂದು ಬೇರುಂಟೆ ತಾನಲ್ಲದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಕ್ಕೂ ಪ್ರಾಣಕ್ಕೂ ಭೇದವಿಲ್ಲೆಂದರಿದು ಲಿಂಗಾರ್ಚನೆಯ ಮಾಡಿ ಈ ಪ್ರಕಾರದಲ್ಲಿ ಆಚರಿಸಲಾಗಿ ಷಟ್‍ಪ್ರಕಾರವಪ್ಪ ಲಿಂಗವು ಕ್ರಮ ತಪ್ಪದೆ ಸಾಧ್ಯವಪ್ಪುವು. ಸಂಕಲ್ಪ ವಿಕಲ್ಪವಿಲ್ಲದೆ ಹೀಂಗೆಂದರಿಯಲು ಆ ಪ್ರಾಣನು ಲಿಂಗಪ್ರಭೆಯೊಳಗೋಲಾಡುತ್ತಿಪ್ಪುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವೇ ಪತಿಯಾಗಿ ತಾನೆ ಸತಿಯಾಗಿ ಅನ್ಯವನರಿಯದೆ ಪಂಚೇಂದ್ರಿಯರಹಿತನಾಗಿ ತೆರಹಿಲ್ಲದರುಹು ತಾನಾಗಿ ನೆರೆ ಅರುಹಿನೊಳು ನಿಬ್ಬೆರಗಾಗಿ ಹೃದಯ ಕಮಲ ಮಧ್ಯದಲ್ಲಿ ಪರಮೇಶ್ವರನೊಳಗಣ ಸಮರಸ ಸ್ನೇಹವೆರಸಿ ಅಗಲದಿಪ್ಪುದೀಗ ಶರಣಸ್ಥಲವಿದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು