ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂದ್ಥಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರಿಗೆ ಹೋಹ ದಾರಿಯಲ್ಲಿ ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ. ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ. ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ, ಊರನೆಲ್ಲ ನುಂಗಿತ್ತು. ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರೊಳಗೆ ಉದಕತುಂಬಿ ಬಾಗಿಲೆಲ್ಲ ಕೆಸರಾದವು ನೋಡಾ. ಮನೆಯೊಳಗೆ ಕಸ ಹೆಚ್ಚಿ, ಶಶಿಯ ನೆಳಲೀಯದು ನೋಡಿರೆ. ಊರೊಳಗಣ ಉದಕವ ಹೊರಡಿಸಿ, ಬಾಗಿಲೊಳಗಣ ಕೆಸರ ಸುಟ್ಟು, ಮನೆಯೊಳಗಣ ಕಸವ ತೆಗೆದು, ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರಿಗೆ ಹೋಗುವ ದಾರಿಯೊಳಗೊಬ್ಬ ಉಲುಗಿರಿ ಮನೆಯ ಮಾಡಿಕೊಂಡು, ದಾರಿಗೊಂಡು ಹೋಗುವ ಅಯ್ಯಗಳ ಬಾರಿಭೋ ಬಾರಿಭೋ ಎನುತ್ತೆ ೈದಾಳೆ ನೋಡಾ. ನಾರಿಯ ವಿಲಾಸವ ನೋಡಿ ದಾರಿಯ ತಪ್ಪಿದರು ನೋಡಾ ಅಯ್ಯಗಳು. ನಾರಿಯ ಕೊಂದಲ್ಲದೆ ದಾರಿಯ ಕಾಣಬಾರದು. ನಾರಿಯ ಕೊಂದು ದಾರಿಹಿಡಿದು ನಡದು ಊರ ಹೊಕ್ಕಲ್ಲದೆ ಉಪಟಳವಡಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರ ಹೊಲನ ಮೇದ ಬಸವ, ಕಾಡುಗಟ್ಟೆಯ ನೀರ ಕುಡಿದು ಕಡೆಯಲ್ಲಿದ್ದ ಪಶುವಿನ ಮಡಿಲ ಮೂಸಿ, ಉಚ್ಚಿಯ ಕುಡಿದು ಹಲ್ಲುಗಿರಿದು ಕ್ರೀಡಿಸುವಂತೆ ಹಸಿವಿನಿಚ್ಚೆಗೆ ನಾಡ ಅಶನವ ತಿಂದು, ವ್ಯಸನದಿಚ್ಛೆಗೆ ಯೋನಿಕಟ್ಟೆಯನರಿಸಿಕೊಂಡು ಹೋಗಿ, ಅಶುದ್ಧದಲ್ಲಿ ಬಿದ್ದು ಹೊರಳುವ ಹಂದಿಯಂತೆ, ಮಾಯಾಮೋಹದ ವಿರಹದೊಳಗೆ ಅಳುತ್ತ ಮುಳುಗುತ್ತ ಇಪ್ಪವರು ದೇವನನೆತ್ತ ಬಲ್ಲರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರೊಳಗೆ ಅನೇಕ ಜ್ಯೋತಿಯ ಕಂಡೆ. ಬಾಗಿಲೊಳಗೆ ನವರತ್ನವ ಕಂಡೆ. ಮೇಲಣ ಮಾಣಿಕಕ್ಕೆ ಬೆಲೆಯಿಡಲಾರಳವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ, ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ. ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು. ಅದು ಮಾರಾರಿ ತಾನೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊಟದ ದೆಸೆಯಿಂದ ಹೆಚ್ಚಿ ಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು, ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ. ಈ ಲೋಕದ ಮಾನವರು ಸುಖಿಗಳಾದರೆ ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ? ಮಾಯಾ ಮೋಹವೆಂಬ ಮೊಲನಾಗರು ಹಿಡಿದು ಬಿಡದು ನೋಡಾ. ಸುಖಿ ಸುಖಿಗಳೆಂಬ ಈ ಲೋಕದ ಕಾಕುವಿಚಾರವನೇನೆಂಬೆನಯ್ಯ?. ಭಕ್ತಿಯೇ ರೂಪು, ನಿತ್ಯವೇ ಲಾವಣ್ಯ, ಮುಕ್ತ್ಯಂಗನೆಯ ಕೂಡಿ ಸುಖಿಸುವುದೇ ಸುಖ. ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ. ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರ ಮಧ್ಯದಲ್ಲಿ ಹುಟ್ಟಿದ ಕಿಚ್ಚು, ಮೇರುವೆಯ ಸುಟ್ಟಿತ್ತು ನೋಡಾ. ಕೇರಿಕೇರಿಯಲ್ಲಿ ಬೀದಿವರಿದು, ಅರಣ್ಯವನಾವರ್ತಿಸಿತ್ತು ನೋಡಾ. ಅರಣ್ಯದೊಳಗಿರ್ದ ಅಂಗನೆಯ ಮುಡಿ ಬೆಂದು, ಊರ ಹತ್ತಿರ ಕಿಚ್ಚು ಉಮಾಪತಿಯನಪ್ಪಲು ನಾರಿಪುರುಷರಳಿದು ಮಾರಾರಿಯೊಬ್ಬನೆ ಅದನು ನೋಡಿರೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರೊಳಗೆ ಆರುಮಂಟಪವ ಕಂಡೆನು. ಐವತ್ತೆರಡು ಎಸಳಿಂದ ರಚಿಸುತ್ತಿಪ್ಪುದಯ್ಯ. ಎಸಳೆಸಳು ತಪ್ಪದೆ ಅಕ್ಷರ ಲಿಪಿಯನೇ ಕಂಡು ಅಕ್ಷರ ಲಿಪಿಯ ಹೆಸರ ಕಲ್ಪಿತ ಲಿಪಿಯನೇ ತೊಡೆದು ನಿರ್ವಿಕಲ್ಪ ನಿತ್ಯಾತ್ಮಕನಾದೆನಯ್ಯ. ಆರು ಮಂಟಪವನಳಿದು ಮೂರು ಕೋಣೆಯ ಕೆಡಿಸಿ ಸಾವಿರೆಸಳ ಮಂಟಪವ ಹೊಗಲಾಗಿ ಸಾವು ತಪ್ಪುವುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು