ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ವಾಕ್ಕನೂ ಮೀರಿ, ಮನಸ್ಸನೂ ಮೀರಿ, ಅಕ್ಷರಂಗಳನೂ ಮೀರಿ, ಜ್ಞಾನವನೂ ಮೀರಿ ತೋರುವ ನಿರುಪಮವಸ್ತುವೆಂಬುತಿದ್ದಿರಿ: ಅದು ರೂಪಾಗಿ, ಎನ್ನ ಕರಸ್ಥಲಕ್ಕೆ ಇಷ್ಟ, ಮನಸ್ಥಲಕ್ಕೆ ಪ್ರಾಣವಾಗಿ, ಭಾವದಲ್ಲಿ ಭರಿತವಾಗಿ, ತೀವಿ ಪರಿಪೂರ್ಣವಾಗಿ, ಎಡೆಗಡೆಯಿಲ್ಲದೆಯಿಪ್ಪ ಭೇದವ ಕರುಣಿಸಿದಿರಿಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಗುಣವುಂಟೇ ಲಿಂಗವನೊಳಕೊಂಡ ನಿರಂಗ ಸಂಗಿಗೆ? ಆತ್ಮಗುಣವುಂಟೇ ಪರಮಾತ್ಮಲಿಂಗ ಸಂಬಂಧಿಗೆ? ಅಹಂಭಾವವುಂಟೇ ತಾನೆಂಬ ಭಾವವಳಿದು ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ? ಸಂದೇಹಾವರಣ ಎಂದೂ ಇಲ್ಲ ನೋಡಾ. ತಾನೆಂದೆಂದೂ ಇಂದುಧರನಂಗದಲ್ಲಿ ಉದಯವಾಗಿ ಬಂದನಾಗಿ, ಹುಟ್ಟಿದ ಬಟ್ಟೆಯ ಮೆಟ್ಟಿ ನಡೆದು ಹುಟ್ಟಿದಲ್ಲಿಯೆ ಹೊಂದುವಾತನೆ ಮಾಹೇಶ್ವರನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು ಭೇದವಮಾಡಿ ನುಡಿವವರೆಲ್ಲ ಭವಬಾಧೆಯಲ್ಲಿ ಮುಳುಗಿ, ಭವಪಾಶಂಗಳು ಹರಿಯದೆಯಿಪ್ಪ ಪಶುಭಾವದ ಪರಿಯ ನೋಡ. ಇದು ಕಾರಣ, ಆದಿಯಲ್ಲಿಯ ಮುಕ್ತರು, ಅನಾದಿಯಲ್ಲಿಯು ಮುಕ್ತರು, ಎಂದೆಂದೂ ಮುಕ್ತರಯ್ಯ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಹಂ ಬ್ರಹ್ಮವೆಂದೆಂಬ ಜ್ಞಾನಹೀನನಾದ ವಾಗದ್ವೆ ೈತಿಯಲ್ಲ. ಅಹಂ ಭಿನ್ನವೆಂದೆಂಬ ದ್ವೆ ೈತ ಪಶುಮತವಲ್ಲ. ಸ್ವರ್ಗ ಮತ್ರ್ಯ ಪಾತಾಳದೊಳಗೆ ಶರಣ ಲಿಂಗ ಮತ ಬೇರೆ. ಈ ಶರಣ ಲಿಂಗದ ನಿಲುಕಡೆಯನು ಪರಶಿವಜ್ಞಾನಿಗಳು ಬಲ್ಲರಲ್ಲದೆ ಪ್ರಪಂಚ ಜೀವಿಗಳೆಂದೂ ಅರಿಯರು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ, ಹೊಟ್ಟೆಗೆ ಕಾಣದ ಅರಪಿನಂತೆ. ಇಷ್ಟಲಿಂಗಕ್ಕೆ ಕೊಟ್ಟೆನೆಂದು ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಹೊಟ್ಟೆಯ ತುಂಬಿಕೊಂಬ ಭ್ರಷ್ಟರಿಗೆ ಪ್ರಸಾದವೆಲ್ಲಿಯದೊ? ತಟ್ಟುವ ಮುಟ್ಟುವ ಮರ್ಮವನರಿದು ಕಾಯದ ಕರಣದ ಕೈಯಲ್ಲಿ ಇಷ್ಟಲಿಂಗದ ಮುಖವನರಿದು ಕೊಟ್ಟು ಕೊಳಬಲ್ಲರೆ ಪ್ರಸಾದಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಡವಿಯ ಹುಲ್ಲ ಮೇದ ಪಶು ಮಡುವಿನಗ್ಛವಣಿಯ ಕುಡಿದು ನಡುಬೀದಿಯಲ್ಲಿ ಬರುತ್ತಿರಲು, ಕಡೆಯಲಿರ್ದ ಹುಲಿ ಬಂದು ಹಿಡಿಯಲು, `ನಿನ್ನೊಡವೆಯನೇನ ಬಳಸಿಕೊಂಡೆನೋ' ಎಂದು ತನ್ನೊಡೆಯನ ಕರೆಯಲು, ಹಿಡಿದ ಹುಲಿ ಬಿಟ್ಟೋಡಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅವುದಾನೊಂದು ಪದಾರ್ಥವ ಲಿಂಗಾರ್ಪಿತವ ಮಾಡಿದ ಬಳಿಕ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಾಯಿತ್ತು ನೋಡಾ. ಆ ಪ್ರಸಾದವ ಮುಟ್ಟುವ ಹಸ್ತವು ಪ್ರಸಾದ ಹಸ್ತ. ಆ ಪ್ರಸಾದವ ಕೊಂಬ ಜಿಹ್ವೆಯು ಪ್ರಸಾದ ಜಿಹ್ವೆ. ಆ ಪ್ರಸಾದಕ್ಕೆ ಭಾಜನವಾಗಿಪ್ಪ ಸರ್ವಾಂಗವು ಪ್ರಸಾದ ಕಾಯ ನೋಡ. ಪ್ರಸಾದವೆಂದರೆ ಪರಶಿವಸ್ವರೂಪು ತಾನೆ ನೋಡಾ. ಈ ಪರಮ ಪ್ರಸಾದಗ್ರಾಹಕನಾದ ಪ್ರಸಾದಿಯ ಬಾಹ್ಯಾಭ್ಯಂತರವೆಲ್ಲ ಪ್ರಸಾದಮಯ ನೋಡಾ. ಪ್ರಸಾದ ಸದ್ಭಾವದಲ್ಲಿ ಎಂಜಲೆಂಬ ಸಂಶಯ ಸುಳಿಯಲಾಗದು. ಎಂಜಲೆಂಬ ಸಂಶಯ ಸುಳಿದರೆ ಅದು ಅಜ್ಞಾನ ನೋಡಾ. ಅವಂಗೆ ಪ್ರಮಥ ಪ್ರಸಾದವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ, ಶಿವಲಿಂಗದುದಯವ ಕಂಗಳಿಲ್ಲದೆ ಕಂಡು, ಅಂಗವಿಲ್ಲದೆ ಸಂಗವ ಮಾಡಿ, ನಿಸ್ಸಂಗಿಯಾಗಿ ಸರ್ವಸಂಗಕ್ಕೆ ಹೊರಗಾಗಿ, ನಿರ್ವಯಲ ಬೆರಸಲು `ಮಂಗಳ ಮಂಗಳ'ವೆನುತ್ತಿಪ್ಪ ಮಹಾಗಣಂಗಳ ಸಂಗದಲ್ಲಿ ಮೈಮರೆದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂತರಂಗದಲ್ಲಿ ಜ್ಞಾನ, ಬಹಿರಂಗದಲ್ಲಿ ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವವೆನಿಸಿಕೊಂಬುದಯ್ಯ. ಅದು ಹೇಗೆಂದಡೆ: ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದಲ್ಲಿ ಉದಕವಿಪ್ಪುದು. ಅಗ್ನಿಯ ಜ್ವಾಲೆಯ ಸಾಮಥ್ರ್ಯದಿಂದ ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ ಜ್ಞಾನ ಸತ್ಕಿ ್ರಯೋಪಚಾರವ ಮಾಡಲಾಗಿ ಪ್ರಾಣವೆ ಲಿಂಗಸ್ವರೂಪವಪ್ಪುದು ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು ಭಂಗವ ಮಾರುತಿಪ್ಪಳು ನೋಡಾ. ಆಕೆಗೆ ಹರಿಗೆಯ ಪಂಗನೆಂಬವ ಗಂಡನಾಗಿಪ್ಪನು ನೋಡಾ. ಅಂಗಡಿಯ ಬೀದಿಯ ಮುಚ್ಚಿ, ಕೊಂಗಿತಿಯ ಕೋಡ ಮುರಿದು, ಹರಿಗೆಯ ಪಂಗನ ಕೊಂದಲ್ಲದೆ, ಲಿಂಗವ ಕಾಣಬಾರದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಲಿಂಗ ಸಂಬಂಧದ ನಿಲುಕಡೆಯನರಿಯದೆ ಅಘೋರತಪವ ಮಾಡಿದರೇನು? ಗಾಳಿಯಾಹಾರವ ಕೊಂಡರೇನು? ತರಗೆಲೆಯ ಮೆದ್ದರೇನು? ಗಿರಿಗಹ್ವರದೊಳಗಿದ್ದರೇನು? ಅಂಗಲಿಂಗಸಂಬಂಧಿಗಳಾಗಬಲ್ಲರೆ. ಅಂಗಲಿಂಗಸಂಗಂದಿಂದಲ್ಲದೆ, ಅಂತರಂಗದಲ್ಲಿ ಅರುಹು ತಲೆದೋರದು. ಅಂತರಂಗದಲ್ಲಿ ಅರುಹು ತಲೆದೋರಿದಲ್ಲದೆ, ಆತ್ಮಲಿಂಗದ ಆದ್ಯಂತವನರಿಯಬಾರದು. ಆತ್ಮಲಿಂಗದ ಆದ್ಯಂತವನರಿಯದೆ ಅಘೋರತಪವಮಾಡಿದರೆ ಅದೇತಕ್ಕೂ ಪ್ರಯೋಜನವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರುಹು ತಲೆದೋರಿತೆಂದು, ಗುರುಹಿರಿಯರ ಜರಿಯಲಾಗದಯ್ಯ. ಗುರುವನು ಜರಿಯೆ; ಹಿರಿಯರನು ಜರಿಯೆ; ಅದೇನು ಕಾರಣವೆಂದಡೆ; ಗುರುವೇ ಸದ್ರೂಪು, ಲಿಂಗವೇ ಚಿದ್ರೂಪು, ಜಂಗಮವೇ ಆನಂದಸ್ವರೂಪು. ಇವು ಮೂರು ಬರಿಯ ಅರುಹು ಸ್ವರೂಪು. ಅವ ಜರಿಯಲುಂಟೆ?. ನಡುವಣ ಪ್ರಕೃತಿಯ ಜರಿವುತ್ತಿಪ್ಪೆನಯ್ಯ. ಆ ಪ್ರಕೃತಿಯ ಜರಿದರೆ ಗುರುಹಿರಿಯರಿಗೆ ನಿಮಗೇಕೆ ದುಮ್ಮಾನವಯ್ಯ?. ಪ್ರಕೃತಿಯೇನು ನಿಮ್ಮ ಸೊಮ್ಮೆ ಹೇಳಿರಯ್ಯ. ಜೀವನೋಪಾಯಕ್ಕೆ ಪರಮಾರ್ಥವನಲ್ಲಾಯೆಂಬ ಪ್ರಪಂಚಿಗಳ ಮೆಚ್ಚನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂತರವಿಲ್ಲದಂದು, ಬಾಹ್ಯವಿಲ್ಲದಂದು, ಅಡಿ, ಮುಡಿ, ಒಡಲು, ಮತ್ತೊಂದೆಡೆಯೇನೂಯಿಲ್ಲದಂದು, ದೆಶ, ದಿಕ್ಕುಗಳು ವಿಶ್ವಪ್ರಪಂಚುಯೇನೂಯಿಲ್ಲದಂದು, ಸ್ಥಾವರ ಜಂಗಮಾತ್ಮಕಂಗಳಿಗೆ ಆಧಾರಕರ್ತೃವೆಂಬ ನಾಮಂಗಳೇನೂಯಿಲ್ಲದಂದು, ಸರ್ವಶೂನ್ಯನಿರಾಲಂಬವಾಗಿರ್ದೆಯಲ್ಲಾ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ ಕಂಗಳ ಕೊನೆಯ ಬಿಡುಮುಳ್ಳು ತಾಕಲು, ಭಂಗಿತರಾದರು ಹರಿ ಬ್ರಹ್ಮರೆಲ್ಲರು. ಅಂಗದ ಕೊನೆಯ ಮೊನೆಯ ಬಿಡುಮುಳ್ಳ ಮುರಿಯಲು, ಮಂಗಳಮಯ ಮಹಾಲಿಂಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿವಿನ ಕುರುಹನರಿಯದೆ ತನುವ ಕರಗಿಸಿ ಮನವ ಬಳಲಿಸಿದರೆ ಏನು ಪ್ರಯೋಜನವೋ? ಇಂದ್ರಿಯವ ನಿಗ್ರಹ ಮಾಡಿ ವಿಷಯಂಗಳ ಬಂಧಿಸಿ ಆತ್ಮಂಗೆ ಬಂಧನವ ಮಾಡಿದರೆ ಆತ್ಮದ್ರೋಹ ಕಾಣಿಭೋ. ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ. ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು. ಮನದ ಮಲಿನ ಹಿಂಗದನ್ನಕ್ಕರ ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು. ಆ ನಿರ್ಮಲಮಹಾಜ್ಞಾನಚಿತ್‍ಸ್ವರೂಪವೇ ಬಸವಣ್ಣ ನೋಡ. ಆ ಬಸವಣ್ಣನಿಂದ ನಾದ ಬಿಂದು ಕಳೆ. ಆ ನಾದ ಬಿಂದು ಕಳೆ ಸಮರಸವಾಗಿ ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ನೋಡ. ಇದು ಕಾರಣ, ಅನಾದಿಶರಣ ಆದಿಲಿಂಗವೆಂದೆ, ಬಸವಣ್ಣನಿಂದ ಲಿಂಗವಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಕ್ಕೆ ಆಚಾರವೆ ಆಶ್ರಯ. ಆಚಾರಕ್ಕೆ ಪ್ರಾಣವೆ ಆಶ್ರಯ. ಪ್ರಾಣಕ್ಕೆ ಜ್ಞಾನವೆ ಆಶ್ರಯ. ಜ್ಞಾನಕ್ಕೆ ಲಿಂಗವೆ ಆಶ್ರಯ. ಲಿಂಗಕ್ಕೆ ಜಂಗಮವೆ ಆಶ್ರಯ. ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಗ್ನಿಯ ಸಂಪುಟದ ದೆಸೆಯಿಂದ ಘಟದೊಳಗಿದ್ದ ಉದಕವು ಹೇಂಗೆ ಬತ್ತಿ ಬಯಲಪ್ಪುದಯ್ಯ ಆ ಪ್ರಕಾರದಲ್ಲಿ ಜ್ಞಾನ ಸತ್ಕಿ ್ರಯಾಸಮರಸವಾದಲ್ಲಿ ಪ್ರಾಣವೆ ಲಿಂಗವಾಯಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ. ಅಂಗದೊಳಗೆ ಪ್ರಾಣವಿಪ್ಪುದಯ್ಯ. ತನುವಿನ ಮೇಲಿಪ್ಪ ಲಿಂಗವ ಮನದಲ್ಲಿ ಸ್ವಾಯತಮಾಡಿ ನೆರೆಯಲರಿಯದೆ ಧನ ಕಾಮಿನಿಯರ ಭ್ರಾಂತಿನಲ್ಲಿ ಜಿನುಗುವ ಮನುಜರಿಗೆ ಪ್ರಾಣಲಿಂಗವೆಂದೇನೋ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನ್ಯತ ಅನಾಚಾರ ಅನ್ಯಹಿಂಸೆ ಪರಧನ ಪರಸ್ತ್ರೀ ಪರನಿಂದ್ಯವ ಬಿಟ್ಟು, ಲಿಂಗನಿಷೆ*ಯಿಂದ ಶುದ್ಧಾತ್ಮಕನಾಗಿರಬಲ್ಲರೆ, ಮಾಹೇಶ್ವರಸ್ಥಲವಿದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿ ಭವಿಗಳಾಗಿ ಅವಾಂತರ ಭಕ್ತರಾದೆವೆಂಬವರೆಲ್ಲ ಹುಟ್ಟಿದ ಯೋನಿಯಲ್ಲಿ ಹುಟ್ಟಿ, ಮೆಟ್ಟದ ಭೂಮಿಯ ಮೆಟ್ಟಿ, ಉಣ್ಣದ ಆಹಾರವನುಂಡು, ಕಾಣದ ಕರ್ಮಂಗಳ ಕಂಡು, ಭವ ಭವದಲ್ಲಿ ಭಂಗಬಡುತಿಪ್ಪುದು ತಪ್ಪದು ನೋಡ. ಇದು ಕಾರಣ, ಆದಿಯಲ್ಲಿಯೂ ಭಕ್ತರು, ಅನಾದಿಯಲ್ಲಿಯೂ ಭಕ್ತರು. ಎಂದೆಂದೂ ಭಕ್ತಿಸಮರಸರಾಗಿ ಭೇದವಾದಿಗಳಲ್ಲ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಲಿಂಗ, ಲಿಂಗ ಅಂಗವೆಂದೆಂಬಿರಿ; ಅಂಗ ಸೂತಕವ ಹೇಳುವಿರಿ. ಪ್ರಾಣವೆ ಪ್ರಸಾದ, ಪ್ರಸಾದವೆ ಪ್ರಾಣವೆಂದೆಂಬಿರಿ; ಪ್ರಕೃತಿ ಭಾವವ ಕಲ್ಪಿಸಿಕೊಂಬಿರಿ; ಇದು ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವವೆ? ಅಲ್ಲ ಕಾಣಿರೋ. ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವ ಭರಿತವಾದರೆ, ಲಿಂಗವ ಮುಟ್ಟಿ ಅರ್ಪಿಸಲ್ಲಮ್ಮೆವೆಂಬುದು ಅಜ್ಞಾನ ನೋಡ. ಈ ಅಜ್ಞಾನಿಗಳ ಅಂಗದಲ್ಲಿ ಲಿಂಗವುಂಟೇ? ಮನದಲ್ಲಿ ಮಂತ್ರವುಂಟೇ? ಪ್ರಾಣದಲ್ಲಿ ಪ್ರಸಾದವುಂಟೇ? ಈ ಅಶುದ್ಧ ಜೀವಿಗಳಿಗೆ ಶುದ್ಧವಹ ಶಿವಪ್ರಸಾದ ಸಂಬಂಧ ಎಂದೂ ಇಲ್ಲ ಕಾಣ. ಲಿಂಗ ಸೋಂಕಿದ ಅಂಗದಲ್ಲಿ ಶುದ್ಧಾಶುದ್ಧ ಉಂಟೇ? ಇಲ್ಲ; ಈ ಅನಂಗಸಂಗಿಗಳ ಮುಖ ತೋರದಿರಾಯೆನಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಾಕಾಮ್ಯ ಈಶತ್ವ ವಶತ್ವವೆಂಬ ಅಷ್ಟಮಹದ್ವೆ ೈಶ್ಚರ್ಯವ ತೃಣೀಕರಿಸಿಕೊಂಡಿಪ್ಪನು ನೋಡಾ ಶರಣನು. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ಕಾಯಸಿದ್ಧಿ, ರಸಸಿದ್ಧಿ, ವಾಚಾಸಿದ್ಧಿ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನ, ಪರಕಾಯಪ್ರವೇಶ, ಖೇಚರಗಮನ. ಅಗ್ನಿಸ್ತಂಭ, ಜಲಸ್ತಂಭ, ಮಾರಣ, ಮೋಹನ, ಉಚ್ಛಾಟನ ಇಂತಿವು ಮೊದಲಾದ ನಾನಾಕುಟಿಲಸಿದ್ಧಿಯ ಪ್ರಪಂಚ ಹೊದ್ದನು ನೋಡಾ ಶರಣನು. ಗುಣತ್ರಯಂಗಳನಳಿದ ನಿರ್ಗುಣನು ನಿತ್ಯನು ನಿರಾಮಯನು ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜ ಹರಿ ಸುರ ಮನು ಮುನಿಗಳ ಮರುಳುಮಾಡಿ ಕಾಡಿತ್ತೀ ಮಾಯೆ. ಪತಿವ್ರತೆಯೆಂಬುವರ ಪರಿಯಟಣಗೊಳಿಸಿತ್ತೀ ಮಾಯೆ. ಯತಿಗಳೆಂಬವರ ಎದೆಯೆದೆಯನೊದೆದಿತ್ತೀ ಮಾಯೆ. ಸಚರಾಚರಂಗಳನೆಲ್ಲವ ಜನನ ಮರಣಗಳೆಂಬ ಅಣಲೊಳಗಿಕ್ಕಿ ಆಗಿದಗಿದು ಉಗಿಯಿತ್ತು ನೋಡ ಮಾಯೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮ ಶರಣರಲ್ಲದವರ ಕೊಂದು ಕೂಗಿಸಿತ್ತು ನೋಡ ಈ ಮಾಯೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...